ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುತೂಹಲ ಕೆರಳಿಸುತ್ತದೆ ಮೈಸೂರಿನ ಈ "ಮದ್ದಿನ ಮನೆ"

|
Google Oneindia Kannada News

ಮೈಸೂರು, ಅಕ್ಟೋಬರ್ 13: ಅರಮನೆ ನಗರಿ, ಸಾಂಸ್ಕೃತಿಕ ನಗರಿ, ಪಾರಂಪರಿಕ ನಗರಿ... ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಮೈಸೂರು ನಗರದಲ್ಲಿ ಹಾಗೇ ಸುಮ್ಮನೆ ಹೆಜ್ಜೆ ಹಾಕುತ್ತಾ ಹೋದರೆ ಅರಮನೆ, ಪ್ರತಿಮೆಗಳು, ಉದ್ಯಾನಗಳು, ಪಾರಂಪರಿಕ ಕಟ್ಟಡಗಳು ಸೇರಿದಂತೆ ಹಲವು ವಿಶೇಷತೆಗಳು ನಮ್ಮನ್ನು ಸೆಳೆಯುತ್ತವೆ.

ಅಷ್ಟೇ ಅಲ್ಲ ಇವುಗಳೆಲ್ಲವೂ ತಮ್ಮದೇ ಆದ ಇತಿಹಾಸದ ಮಹತ್ವ ಹೊಂದಿರುವ ಕಥೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಇಂತಹ ವೈಶಿಷ್ಟ್ಯಗಳ ನಡುವೆ ಅರಮನೆ ಸಮೀಪದಲ್ಲಿ, ಮೈಸೂರು ನಂಜನಗೂಡು ರಸ್ತೆಯಲ್ಲಿರುವ 'ಗನ್ ‌ಹೌಸ್' ಕೂಡ ಒಂದಾಗಿದೆ. ಬನ್ನಿ, ಅದರ ವಿಶೇಷತೆಗಳ ಬಗ್ಗೆ ತಿಳಿಯೋಣ...

 ರಾಜರ ಕಾಲದಲ್ಲಿ ಯುದ್ಧ ಸಾಮಗ್ರಿ ಶೇಖರಣೆ

ರಾಜರ ಕಾಲದಲ್ಲಿ ಯುದ್ಧ ಸಾಮಗ್ರಿ ಶೇಖರಣೆ

1910ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಈ ಸುಂದರ ಕಟ್ಟಡವನ್ನು ನಿರ್ಮಿಸಿದರು. ನೋಡಲು ಆಕರ್ಷಣೀಯವಾಗಿರುವ ಈ ಕಟ್ಟಡವು ಮೈಸೂರಿನ ಪಾರಂಪರಿಕತೆಯನ್ನು ಸಾರಿಹೇಳುತ್ತದೆ. ಅವತ್ತಿನ ಕಾಲದಲ್ಲಿ ಮಹಾರಾಜರು ಯುದ್ಧ ಸಾಮಗ್ರಿ, ಮದ್ದುಗುಂಡುಗಳನ್ನು ಶೇಖರಿಸಿಡಲು ಈ ಕಟ್ಟಡವನ್ನು ಬಳಸುತ್ತಿದ್ದರಂತೆ. ಹಾಗಾಗಿ ಇದನ್ನು ಮದ್ದಿನಮನೆ (ಗನ್ ‌ಹೌಸ್) ಎಂದೇ ಕರೆಯಲಾಗುತ್ತಿದೆ.

ಕುಸ್ತಿಪಟುಗಳಿಗೆಂದೇ ಇತ್ತು ಮೈಸೂರಿನ ಜಟ್ಟಿ ಆಸ್ಪತ್ರೆಗಳುಕುಸ್ತಿಪಟುಗಳಿಗೆಂದೇ ಇತ್ತು ಮೈಸೂರಿನ ಜಟ್ಟಿ ಆಸ್ಪತ್ರೆಗಳು

 ಹೇಗಿತ್ತೋ ಹಾಗೆಯೇ ಇರುವ ಕಟ್ಟಡ

ಹೇಗಿತ್ತೋ ಹಾಗೆಯೇ ಇರುವ ಕಟ್ಟಡ

ನಗರದ ಪ್ರಮುಖ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ 'ಗನ್ ಹೌಸ್' ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿದ್ದು, ರಾಜವಂಶಸ್ಥರ ಖಾಸಗಿ ಆಸ್ತಿಯಾಗಿದೆ. ಪಾರಂಪರಿಕ ಕಟ್ಟಡಗಳು ಖಾಸಗಿ ಒಡೆತನದಲ್ಲಿದ್ದರೂ ಅವನ್ನು ಪರಭಾರೆ ಮಾಡುವುದಾಗಲಿ ಅಥವಾ ಅದರ ಮೂಲ ವಿನ್ಯಾಸಕ್ಕೆ ಧಕ್ಕೆ ತರುವಂತಹ ಕಾರ್ಯದ ಮೇಲೆ ಶಾಶ್ವತ ನಿರ್ಬಂಧವಿದೆ. ಹೀಗಾಗಿ ಇದು ಈಗಲೂ ಹೇಗಿತ್ತೋ ಹಾಗೆಯೇ ಉಳಿದುಕೊಂಡಿದೆ.

 ಎರಡು ಐತಿಹಾಸಿಕ ಬಾವಿಗಳು ಪತ್ತೆ

ಎರಡು ಐತಿಹಾಸಿಕ ಬಾವಿಗಳು ಪತ್ತೆ

ಈ ಹಿಂದೆ ಈ ಕಟ್ಟಡದಲ್ಲಿ ಹೋಟೆಲ್ ನಡೆಯುತ್ತಿತ್ತಾದರೂ ಈಗ ಖಾಲಿಯಿದೆ. ಇದರಿಂದ ಈ ಸುಂದರ ಕಟ್ಟಡ ಇವತ್ತು ಪಾಳು ಬಿದ್ದ ಕಟ್ಟಡದಂತೆ ಕಂಡು ಬರುತ್ತದೆ. ಐದಾರು ವರ್ಷಗಳ ಹಿಂದೆ ಕಾಮಗಾರಿ ನಡೆಸುವಾಗ ಇಲ್ಲಿ ಆಳವಾದ ಬಾವಿಗಳು ದೊರೆತಿರುವುದು ವಿಶೇಷವಾಗಿದೆ. ಅಷ್ಟೇ ಅಲ್ಲ ಇದರ ಮಹತ್ವಕ್ಕೂ ಸಾಕ್ಷಿಯಾಗಿದೆ.

ಈ ಬಾವಿಗಳು ಮಹಾರಾಜರ ಕಾಲದಲ್ಲಿ ನಿರ್ಮಿಸಿರಬಹುದೆಂದು ಹೇಳಲಾಗುತ್ತಿತ್ತು. ಹೊರಗಿನಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಅರಮನೆ ಸಮೀಪವೇ ಈ ಕಟ್ಟಡವಿರುವುದರಿಂದ ಹೆಚ್ಚಿನವರು ಅದರತ್ತ ಕುತೂಹಲದ ನೋಟ ಬೀರುತ್ತಾರೆ.

 ಮಹಾರಾಜರ ಕಾಲದಲ್ಲಿ ನಿರ್ಮಾಣ

ಮಹಾರಾಜರ ಕಾಲದಲ್ಲಿ ನಿರ್ಮಾಣ

ಮೈಸೂರಿನಲ್ಲಿ ಇತಿಹಾಸವನ್ನು ಸಾರುವ ಹಲವಾರು ಕಟ್ಟಡಗಳಿವೆ. ಅವುಗಳೆಲ್ಲವೂ ತನ್ನದೇ ಆದ ಇತಿಹಾಸವನ್ನು ಹೇಳುತ್ತಿರುತ್ತವೆ. ಹೀಗಿರುವಾಗ ಗನ್ ಹೌಸ್ ಕಟ್ಟಡವನ್ನು ಅಭಿವೃದ್ಧಿಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ತೆರೆದಿಡಬಹುದು. ಇದೀಗ ಈ ಕಟ್ಟಡದ ಸುತ್ತಲೂ ಕಾಂಪೌಂಡ್ ನಿರ್ಮಿಸಿದ್ದರೂ ಅನೈತಿಕ ಚಟುವಟಿಕೆ ನಡೆಸುವವರಿಗೆ, ಕಸ ಸುರಿದು ಅನೈರ್ಮಲ್ಯವನ್ನುಂಟು ಮಾಡುವವರಿಗೆ ಕೊರತೆಯಿಲ್ಲ.

ದೇಶ ವಿದೇಶದಿಂದ ಬರುವ ಪ್ರವಾಸಿಗರು ಅರಮನೆಯನ್ನು ವೀಕ್ಷಿಸಿದ ನಂತರ ಹೊರ ಬಂದ ಬಳಿಕ ಎದುರಿಗೆ ಕಾಣುವ ಸುಂದರ ಮತ್ತು ಆಕರ್ಷಣೀಯ ವಾಗಿರುವ ಪಾರಂಪರಿಕತೆಯನ್ನು ಎತ್ತಿ ತೋರಿಸುವಂತಿರುವ ಈ ಕಟ್ಟಡದತ್ತ ಕುತೂಹಲದ ನೋಟ ಬೀರುತ್ತಾರೆ. ಆದರೆ ಪಾಳು ಬಂಗಲೆಯಂತೆ ಜನರಿಲ್ಲದ, ಶುಚಿತ್ವವೂ ಇಲ್ಲದ ಈ ಕಟ್ಟಡವನ್ನು ನೋಡಿ ಸಪ್ಪೆ ಮೋರೆ ಮಾಡಿಕೊಂಡು ಹಿಂತಿರುಗುತ್ತಾರೆ.

 ಅಭಿವೃದ್ಧಿಯಾದರೆ ಪ್ರವಾಸಿಗರನ್ನು ಸೆಳೆಯಬಹುದು

ಅಭಿವೃದ್ಧಿಯಾದರೆ ಪ್ರವಾಸಿಗರನ್ನು ಸೆಳೆಯಬಹುದು

ಕೆಲ ವರ್ಷಗಳ ಹಿಂದೆ ದಸರಾ ಸಂದರ್ಭ ಈ ಕಟ್ಟಡದ ಆವರಣದಲ್ಲಿ ಖಾಸಗಿಯಾಗಿ ಆಹಾರ ಮೇಳ ನಡೆದಿದ್ದು ಬಿಟ್ಟರೆ, ಈ ಕಟ್ಟಡದ ಸುತ್ತ ಸದಾ ಮೌನವೇ ಆವರಿಸಿರುತ್ತದೆ. ಇನ್ನು ಎರಡು ವರ್ಷಗಳ ಹಿಂದೆ ಗನ್ ಹೌಸ್, ಬಿಲ್ಡಿಂಗ್ ಅನ್ನು ಇಂಪೀರಿಯಲ್ ಹೋಟೆಲ್ ಆಗಿ ಪುನರ್ ಸ್ಥಾಪನೆಗೆ ಚಾಲನೆ ನೀಡಲಾಗುತ್ತಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದರು. ಅಲ್ಲದೆ, ಈ ಗನ್ ಹೌಸ್ ಅನ್ನು ಪ್ರತಿಷ್ಠಿತ ಹೋಟೆಲ್ ಉದ್ಯಮಕ್ಕೆ ತೊಡಗಿಸಬೇಕೆಂಬುದು ಶ್ರೀಕಂಠದತ್ತ ಒಡೆಯರ್ ಅವರ ಕನಸಾಗಿತ್ತು ಎಂದಿದ್ದರು. ಆದರೆ ಅದು ಇದುವರೆಗೆ ಕೈಗೂಡಿಲ್ಲ. ಇನ್ನಾದರೂ ಈ ಕಟ್ಟಡಕ್ಕೆ ಮೆರಗು ನೀಡುವ ಕೆಲಸವನ್ನು ಮಾಡಿದರೆ ಪ್ರವಾಸಿಗರನ್ನು ಇತ್ತ ಸೆಳೆಯಲು ಸಾಧ್ಯವಾಗಬಹುದೇನೋ?

English summary
Gun house which was built in 1910 by Nalwadi Krishnaraja Wadeyar period is one of the attractions of mysuru. Here is full detail about this building
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X