ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಮುಖ ಕನ್ನಡಿಗರಿವರು

|
Google Oneindia Kannada News

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿವೆ. 17, 18ನೇ ಶತಮಾನದಿಂದ ಭಾರತವನ್ನು ಇಂಚಿಂಚಾಗಿ ಆಕ್ರಮಿಸಿಕೊಳ್ಳಲು ಆರಂಭಿಸಿದ ಬ್ರಿಟಿಷರು ಆ ಶತಮಾನದ ಅಂತ್ಯದ ವೇಳೆಗೆ ಬಹುತೇಕ ಭಾರತವನ್ನು ವಶಕ್ಕೆ ತೆಗೆದುಕೊಂಡಿದ್ದರು. ಹೆಚ್ಚೂಕಡಿಮೆ ಇನ್ನೂರು ವರ್ಷಗಳ ಕಾಲ ಬ್ರಿಟಿಷರು ಭಾರತದಲ್ಲಿ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದರು.

ಬ್ರಿಟಿಷರ ವಿರುದ್ಧ ಹೋರಾಡಿದ ಭಾರತೀಯರ ಸಂಖ್ಯೆ ಕಡಿಮೆ ಏನಿಲ್ಲ. ಆಗ ಭಾರತದಲ್ಲಿ ಇದ್ದವೆಲ್ಲಾ ರಾಜ ಸಂಸ್ಥಾನಗಳೇ. ಪರಸ್ಪರ ಒಗ್ಗಟ್ಟು ಇಲ್ಲದ ಸಂಸ್ಥಾನಗಳನ್ನು ಬ್ರಿಟಿಷರ ಬಹಳ ಜಾಣ್ಮೆಯಿಂದ ಸುಲಭವಾಗಿ ವಶಪಡಿಸಿಕೊಂಡಿದ್ದು ಹೌದು. ಈ ವೇಳೆ ಅನೇಕ ಸಂಸ್ಥಾನಗಳು ಏಕಾಂಗಿಯಾಗಿ ಬ್ರಿಟಿಷರನ್ನು ಎದುರಿಸಬೇಕಾಗಿತ್ತು. ಹೀಗಾಗಿ, ಯುದ್ಧದಲ್ಲಿ ಬ್ರಿಟಿಷರ ಕೈ ಮೇಲಾಗುತ್ತಿತ್ತು.

ರಾಷ್ಟ್ರಧ್ವಜ ವಿನ್ಯಾಸಕ ಪಿಂಗಾಳಿ ವೆಂಕಯ್ಯ ಬಗ್ಗೆ ಹೆಚ್ಚು ಗೊತ್ತಿಲ್ಲದ ಸಂಗತಿಗಳುರಾಷ್ಟ್ರಧ್ವಜ ವಿನ್ಯಾಸಕ ಪಿಂಗಾಳಿ ವೆಂಕಯ್ಯ ಬಗ್ಗೆ ಹೆಚ್ಚು ಗೊತ್ತಿಲ್ಲದ ಸಂಗತಿಗಳು

ಕರ್ನಾಟಕದಲ್ಲಿ ಬ್ರಿಟಿಷರ ಆಡಳಿತಕ್ಕೆ ಬಹಳ ಪ್ರತಿರೋಧ ಎದುರಾಗಿತ್ತು. ಹೈದರ್ ಅಲಿಯಿಂದ ಹಿಡಿದು ಸಂಗೊಳ್ಳಿ ರಾಯಣ್ಣನವರೆಗೆ ಅನೇಕ ರಾಜರು, ಪಾಳ್ಯಗಾರರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ವೀರೋಚಿತ ಸೋಲುಂಡರು, ಬಲಿದಾನ ಗೈದರು.

ಇಂಥ ಪ್ರಮುಖ ನಾಲ್ಕು ಜನರನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಈಗಲೂ ಈ ಕಲಿಗಳು ಕನ್ನಡಿಗರ ಜನಮಾನಸದಲ್ಲಿ ಖಾಯಂ ಆಗಿ ಉಳಿದುಹೋಗಿದ್ದಾರೆ. ಆದಾಗ್ಯೂ ಅವರ ಬಗ್ಗೆ ಒಂದು ಸಣ್ಣ ಪರಿಚಯ ಇಲ್ಲಿದೆ.

ಕಿತ್ತೂರು ರಾಣಿ ಚೆನ್ನಮ್ಮ

ಕಿತ್ತೂರು ರಾಣಿ ಚೆನ್ನಮ್ಮ

ಇವರು 18 ಮತ್ತು 19ನೇ ಶತಮಾನದಲ್ಲಿ ಬದುಕಿದ್ದ ವೀರ ಕನ್ನಡತಿ. ಬೆಳಗಾವಿ ಕಾಕತಿಯಲ್ಲಿ 1778 ಅಕ್ಟೋಬರ್ 23ರಂದು ಹುಟ್ಟಿದ ಇವರು ಕಿತ್ತೂರು ಸಂಸ್ಥಾನದ ಅರಸಿಯಾಗಿದ್ದವರು. ರಾಜ ಮಲ್ಲಸರ್ಜಾರನ್ನು ವಿವಾಹವಾದ ಇವರು 1816ರಲ್ಲಿ ವೈಧವ್ಯ ಹೊಂದಿದರು. 1824ರಲ್ಲಿ ಮಗನನ್ನು ಕಳೆದುಕೊಂಡರು. ಆಗ ಬ್ರಿಟಿಷರ ಅಧೀನದಲ್ಲಿ ದೇಶಾದ್ಯಂತ ಅನೇಕ ರಾಜಸಂಸ್ಥಾನಗಳು ಕಾರ್ಯನಿರ್ವಹಿಸುತ್ತಿದ್ದವು. ವಾರಸುದಾರರಿಲ್ಲದ ಮತ್ತು ಸಮರ್ಪಕ ಆಡಳಿತ ಇಲ್ಲದ ಸಂಸ್ಥಾನಗಳನ್ನು ಬ್ರಿಟಿಷರು ನೇರ ವಶಕ್ಕೆ ತೆಗೆದುಕೊಳ್ಳುವ ಕಾನೂನು ರೂಪಿಸಲಾಗಿತ್ತು.

ಅದರಂತೆ ಕಿತ್ತೂರು ಸಂಸ್ಥಾನದಲ್ಲಿ ವಾರಸುದಾರರು ಇಲ್ಲದ ಕಾರಣ ಅದನ್ನು ಬ್ರಿಟನ್ ರಾಣಿ ಆಡಳಿತಕ್ಕೆ ತೆಗೆದುಕೊಳ್ಳಲು ಮುಂದಾಗಲಾಯಿತು. ಚೆನ್ನಮ್ಮ ದತ್ತು ಮಗನೊಬ್ಬನನ್ನು ಸ್ವೀಕರಿಸಿದರೂ ಅದನ್ನು ತಿರಸ್ಕರಿಸಲಾಯಿತು. ಅಂತಿಮವಾಗಿ ಚೆನ್ನಮ್ಮ ಕಿತ್ತೂರು ಸಂಸ್ಥಾನವನ್ನು ತಾನೇ ಉಳಿಸಿಕೊಳ್ಳಲು ನಿರ್ಧರಿಸಿ ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಮೊದಲ ಯುದ್ಧದಲ್ಲಿ ಬ್ರಿಟಿಷರನ್ನು ಸೋಲಿಸಿದರು. ಆದರೆ, ಎರಡನೇ ಬಾರಿ ಅವರ ಪ್ರಯತ್ನ ವಿಫಲವಾಯಿತು. ಬ್ರಿಟಿಷರ ಸೆರೆಯಾಳಾಗಿ 1829 ಫೆಬ್ರವರಿ 21ರಂದು ಸಾವನ್ನಪ್ಪಿದರು.

ಕರ್ನಾಟಕದ ವಿದುರಾಶ್ವತ್ಧದಲ್ಲಿ ಬ್ರಿಟಿಷರಿಂದ ನರಮೇಧ; ಘೋರ ಘಟನೆಯ ಒಂದು ನೆನಪುಕರ್ನಾಟಕದ ವಿದುರಾಶ್ವತ್ಧದಲ್ಲಿ ಬ್ರಿಟಿಷರಿಂದ ನರಮೇಧ; ಘೋರ ಘಟನೆಯ ಒಂದು ನೆನಪು

ಸಂಗೊಳ್ಳಿ ರಾಯಣ್ಣ

ಸಂಗೊಳ್ಳಿ ರಾಯಣ್ಣ

ಕಿತ್ತೂರು ರಾಣಿ ಚೆನ್ನಮ್ಮರ ಬಲಗೈ ಬಂಟರಾಗಿದ್ದವರು ಸಂಗೊಳ್ಳಿ ರಾಯಣ್ಣ. 1796 ಆಗಸ್ಟ್ 15ಕ್ಕೆ ಇವರ ಜನ್ಮ. ಇವರು ಹುಟ್ಟಿನ ಸರಿಯಾಗಿ 151ವರ್ಷಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. 1831 ಜನವರಿ 26ರಂದು ಇವರಿಗೆ ಬ್ರಿಟಿಷರು ಗಲ್ಲಿಗೇರಿಸಿದರು. ಇವರು ಹುಟ್ಟಿದ ದಿನ ಭಾರತದ ಸ್ವಾತಂತ್ರ್ಯೋತ್ಸವವಾಗಿದೆ. ಇವರನ್ನು ಗಲ್ಲಿಗೇರಿಸಿದ ದಿನ ಭಾರತದ ಗಣರಾಜ್ಯೋತ್ಸವ ಆಗುತ್ತದೆ. ಎಂಥ ವಿಶೇಷತೆ.

ಇದರ ಮಧ್ಯೆ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ಅದ್ಭುತ. ಗೆರಿಲ್ಲಾ ಯುದ್ಧ ತಂತ್ರಗಳ ಮೂಲಕ ಬ್ರಿಟಿಷರ ಮೇಲೆ ಅಲ್ಲಲ್ಲಿ ದಾಳಿ ಮಾಡಿದರು. ಜಮೀನ್ದಾರರ ಮೇಲೆ ತೆರಿಗೆ ವಿಧಿಸಿ ಜನಸಾಮಾನ್ಯರ ಮೂಲಕವೇ ಸೇನೆಯನ್ನು ಕಟ್ಟಿದರು. ಯುದ್ಧದಲ್ಲಿ ರಾಯಣ್ಣನನ್ನು ಸೋಲಿಸಲು ಆಗದ ಬ್ರಿಟಿಷರು ಕುತಂತ್ರದಿಂದ ಸೆರೆಹಿಡಿದರು. ನಂದಗಡದಲ್ಲಿ ರಾಯಣ್ಣನನ್ನು ಗಳ್ಲಿಗೇರಿಸಲಾಯಿತು.

ಟಿಪು ಸುಲ್ತಾನ್

ಟಿಪು ಸುಲ್ತಾನ್

ಇವರು 18ನೇ ಶತಮಾನದಲ್ಲಿ ಮೈಸೂರು ಸಂಸ್ಥಾನ ಆಳಿದ ಅರಸ. ಹೈದರ್ ಅಲಿಯ ಮೊದಲ ಮಗನಾದ ಟಿಪು ಸುಲ್ತಾನ್ ಯುದ್ಧ ಮತ್ತು ಆಡಳಿತದಲ್ಲಿ ನಿಷ್ಣಾತರಾಗಿದ್ದವರು. ಬ್ರಿಟಿಷರನ್ನು ಸೋಲಿಸಲು ಫ್ರೆಂಚರೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಯುದ್ಧದಲ್ಲಿ ಇವರದ್ದು ಆಗಿನ ಕಾಲಕ್ಕೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳಾಗಿದ್ದವು. ಇವರ ರಾಕೆಟ್ ದಾಳಿಗಳಿಗೆ ಬ್ರಿಟಿಷರ ಬಳಿ ಉತ್ತರವೇ ಇರಲಿಲ್ಲ.

ಫ್ರೆಂಚರಿಂದ ಯುದ್ಧದಲ್ಲಿ ಪಳಗಿದ ಸೈನಿಕರನ್ನು ಕಟ್ಟಿದ್ದ ಟಿಪು ಸುಲ್ತಾನ್ ಬ್ರಿಟಿಷರ ವಿರುದ್ಧ ಪ್ರಬಲ ಪ್ರತಿರೋಧ ಒಡ್ಡಿದ್ದರು. ಮೂರನೇ ಮೈಸೂರು ಕದನದಲ್ಲಿ ಟಿಪುಗೆ ನಿರ್ಣಾಯಕ ಸೋಲಾಯಿತು. ಫ್ರೆಂಚ್ ನಾಯಕ ನೆಪೋಲಿಯನ್ ಬೋನಾಪರ್ಟಿ ಭಾರತದಲ್ಲಿ ಟಿಪುಗೆ ಸೈನಿಕ ಸಹಾಯ ಒದಗಿಸಲು ಪ್ರಯತ್ನ ಪಟ್ಟರಾದರೂ ಅದು ಸಾಧ್ಯವಾಗಲಿಲ್ಲ. ಒಂದು ವೇಳೆ ನೆಪೋಲಿಯನ್ ಸಹಾಯ ಸಿಕ್ಕಿದ್ದರೆ ಬ್ರಿಟಿಷರನ್ನು 19ನೇ ಶತಮಾನದ ಆರಂಭದಲ್ಲೇ ಭಾರತದಿಂದ ಓಡಿಸಬಹುದಿತ್ತು.

ನಾಲ್ಕನೇ ಮೈಸೂರು ಕದನದಲ್ಲಿ ಟಿಪ್ಪು ಸುಲ್ತಾನ್‌ರನ್ನು ಬ್ರಿಟಿಷರು ಸೋಲಿಸಿ ಸಾಯಿಸುತ್ತಾರೆ. ಅದೇನೇ ಆದರೂ ಟಿಪ್ಪು ಸುಲ್ತಾನ್‌ನ ಆಡಳಿತ ಚಾತುರ್ಯ, ಯುದ್ಧ ಕೌಶಲ್ಯ, ಆಧುನಿಕ ಶಸ್ತ್ರಾಸ್ತ್ರ, ಧೈರ್ಯ ಸಾಹಸ ಇತ್ಯಾದಿಗಳು ಗಮನಾರ್ಹ ಎನಿಸುತ್ತವೆ. ಅಂತೆಯೇ ಟಿಪುಗೆ ಮೈಸೂರು ಹುಲಿ ಎಂಬ ಬಿರುದು ನೀಡಿ ಗೌರವಿಸಲಾಗುತ್ತದೆ.

ಹೈದರ್ ಅಲಿ

ಹೈದರ್ ಅಲಿ

'ಮೈಸೂರು ಹುಲಿ' ಟಿಪ್ಪು ಸುಲ್ತಾನ್ ತಂದೆ ಹೈದರ್ ಅಲಿ 18ನೇ ಶತಮಾನದಲ್ಲಿ ಮೈಸೂರು ಸಂಸ್ಥಾನವನ್ನು ಆಳುತ್ತಿದ್ದವರು. ಆಗ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಇಡೀ ದೇಶದಲ್ಲಿ ವ್ಯಾಪಿಸುತ್ತಿದ್ದ ಕಾಲ. ಆಂಗ್ಲ-ಮೈಸೂರು ನಡುವಿನ ಎರಡು ಯುದ್ಧಗಳಲ್ಲಿ ಬ್ರಿಟಿಷರಿಗೆ ಹೈದರ್ ಅಲಿ ಪ್ರತಿರೋಧ ಒಡ್ಡುವಲ್ಲಿ ಯಶಸ್ವಿಯಾದರು. ಹೈದರಾಲಿಯ ರಾಕೆಟ್‌ಗಳಿಗೆ ಬ್ರಿಟಿಷರು ಬೆಚ್ಚಿಬಿದ್ದಿದ್ದರು.

ಯುದ್ಧದ ಹೊರತಾಗಿ ಹೈದರ್ ಅಲಿ ಮೈಸೂರು ಸಂಸ್ಥಾನದ ಆಡಳಿತ ನಿರ್ವಹಣೆಯಲ್ಲೂ ಸಮರ್ಥರೆನಿಸಿದ್ದರು. ಅವರ ಅವಧಿಯಲ್ಲಿ ಮೈಸೂರಿನ ಆರ್ಥಿಕತೆ ಉತ್ತಮ ಇತ್ತು ಎನ್ನುತ್ತಾರೆ ಇತಿಹಾಸಜ್ಞರು. 1782 ಡಿಸೆಂಬರ್ 7ರಂದು ಚಿತ್ತೂರಿನಲ್ಲಿ ಇವರ ಅಂತ್ಯವಾಯಿತು.

(ಒನ್ಇಂಡಿಯಾ ಸುದ್ದಿ)

English summary
Karnataka has seen many kings and chieftains bravely fight against British in 18th and 19th centuries. This is the time to remember them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X