ವಿಶ್ವದ ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ವಕೀಲೆ ಕರುಣಾ ನಂದಿ ಮತ್ತು ಅದಾನಿ
ನ್ಯೂಯಾರ್ಕ್, ಮೇ 23: ಈ ವರ್ಷದ ವಿಶ್ವದ ಅತ್ಯಂತ ಪ್ರಭಾವಿಗಳೆನಿಸಿರುವ ಅಗ್ರ 100 ಮಂದಿಯ ಪಟ್ಟಿಯನ್ನು ಟೈಮ್ ನಿಯತಕಾಲಿಕೆ ಬಿಡುಗಡೆ ಮಾಡಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರನ್ನೂ ಒಳಗೊಂಡಿರುವ ಈ ಮಹತ್ವದ ಪಟ್ಟಿಯಲ್ಲಿ ಭಾರತದ ಕೋಟ್ಯಧಿಪತಿ ಉದ್ಯಮಿ ಗೌತಮ್ ಅದಾನಿ ಮತ್ತು ನ್ಯಾಯವಾದಿ ಕರುಣಾ ನಂದಿ ಅವರಿದ್ಧಾರೆ.
ಟೈಮ್ ಪ್ರಭಾವಿ ಜನರ ಪಟ್ಟಿಯಲ್ಲಿ ಜೊತೆಯಾದ ಪುಟಿನ್, ಝೆಲೆನ್ಸ್ಕಿ
ಟೈಮ್ ಪತ್ರಿಕೆ ಪ್ರತೀ ವರ್ಷವೂ ಇಂಥ ಪಟ್ಟಿಗಳನ್ನು ಪ್ರಕಟಿಸುತ್ತದೆ. ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ರಷ್ಯಾ, ಉಕ್ರೇನ್ ಅಧ್ಯಕ್ಷರುಗಳಲ್ಲದೇ ಅಮೆರಿಕ ಅಧ್ಯಕ್ಷ ಜೋ ಬೈಡನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಐರೋಗ್ಯ ಆಯೋಗದ ಅಧ್ಯಕ್ಷ ಉರ್ಸುಲ ವೋನ್ ಡರ್ ಲೇಯೆನ್, ಟೆನಿಸ್ ಆಟಗಾರ ರಫೇಲ್ ನಡಾಲ್, ಆ್ಯಪಲ್ ಕಂಪನಿ ಸಿಇಒ ಟಿಮ್ ಕುಕ್, ಮಾಧ್ಯಮ ಉದ್ಯಮಿ ಓಪ್ರಾ ವಿನ್‌ಫ್ರೇ ಮೊದಲಾದ ದಿಗ್ಗಜರು ಇದ್ದಾರೆ.
ಅದಾನಿ ಬಗ್ಗೆ ಟೈಮ್ ಹೇಳೋದೇನು?
ಅಡುಗೆ ಎಣ್ಣೆ ಇತ್ಯಾದಿ ವ್ಯವಹಾರದಿಂದ ಹಿಡಿದು ಈಗ ವಿಶ್ವದ ಅತಿ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾಗಿ ಹೋಗಿರುವ ಗೌತಮ್ ಅದಾನಿ ಬಗ್ಗೆ ಟೈಮ್ ಪತ್ರಿಕೆ ಬರೆದಿರುವ ಪ್ರೊಫೈಲ್ ಹೀಗಿದೆ: "ಒಂದೊಮ್ಮೆ ಪ್ರಾದೇಶಿಕ ವ್ವವಹಾರ ಹೊಂದಿದ್ದ ಅದಾನಿ ಈಗ ಈಗ ಏರ್‌ಪೋರ್ಟ್, ಬಂದರು ಇತ್ಯಾದಿ ಕ್ಷೇತ್ರಗಳವರೆಗೆ ವ್ಯಾಪಿಸಿ ತನ್ನ ವ್ಯವಹಾರ ಸಾಮ್ರಾಜ್ಯ ವಿಸ್ತರಿಸಿದ್ದಾರೆ. ಸಾರ್ವಜನಿಕರ ಕಣ್ಣಿಗೆ ಹೆಚ್ಚು ಕಾಣಿಸದ ಅವರು ಸದ್ದಿಲ್ಲದೇ ಸಾಮ್ರಾಜ್ಯ ಕಟ್ಟುತ್ತಿದ್ದಾರೆ" ಎಂದು ಬರೆಯಲಾಗಿದೆ.

ಕರುಣಾ ನಂದಿ ಯಾರು?
"ಕರುಣಾ ನಂದಿ ಕೇವಲ ವಕೀಲೆ ಮಾತ್ರವಲ್ಲ ಸಾರ್ವಜನಿಕ ಕಾರ್ಯಕರ್ತೆಯಾಗಿದ್ದು, ನ್ಯಾಯಾಲಯದ ಒಳಗೆ ಮತ್ತು ಹೊರಗೆ ಬದಲಾವಣೆ ತರಲು ಧ್ವನಿಯಾಗಿದ್ದಾರೆ. ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಾರೆ. ಅತ್ಯಾಚಾರ ನಿಗ್ರಹ ಕಾನೂನುಗಳಲ್ಲಿ ಸುಧಾರಣೆ ತರಲು ಮತ್ತು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಕೋರ್ಟ್‌ನಲ್ಲಿ ಕೈಗೆತ್ತಿಕೊಳ್ಳುತ್ತಾರೆ" ಎಂದು ಆಕೆಯ ಪರಿಚಯ ಮಾಡಲಾಗಿದೆ.
(ಒನ್ಇಂಡಿಯಾ ಸುದ್ದಿ)