ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Flashback 2019: ಕರ್ನಾಟಕದಲ್ಲಿ ನಡೆದ ಪ್ರಮುಖ ಘಟನೆಗಳು

|
Google Oneindia Kannada News

21ನೇ ಶತಮಾನದ ಮೊದಲ ದಶಕದ ಕೊನೆಯ ವರ್ಷ ಕನ್ನಡಿಗರ ಪಾಲಿಗೆ ಸಿಹಿಗಿಂತ ಕಹಿ ಹಾಗೂ ಗೊಂದಲಗಳನ್ನು ಸೃಷ್ಟಿಸಿದ್ದೇ ಹೆಚ್ಚು. ವರ್ಷಂಪೂರ್ತಿ ರಾಜಕೀಯ ಮೇಲಾಟ ಹಾಗೂ ಪ್ರವಾಹವೇ ಹೆಚ್ಚು ಸದ್ದು ಮಾಡಿತು. ಸರ್ಕಾರ ರಚನೆ ಕಸರತ್ತು, ರಾಜಕೀಯ ಪಕ್ಷಗಳ ಕಿತ್ತಾಟ, ಚುನಾವಣೆ ಹಾಗೂ ಮಹಾ ಪ್ರವಾಹವು ಪದೇಪದೆ ಸುದ್ದಿ ಮಾಡಿತು. ವರ್ಷಾಂತ್ಯದವರೆಗೂ ಇದೇ ವಿಚಾರ ಚರ್ಚೆಯಲ್ಲಿದೆ. ಆದರೆ ವರ್ಷದ ಕೊನೆಗೆ ಮಂಗಳೂರಿನ ಗೋಲಿಬಾರ್ ಹಾಗೂ ಪೌರತ್ವದ ಕಿಚ್ಚು ಕರ್ನಾಟಕ ರಾಜಕೀಯಕ್ಕೆ ಹೊಸದಾಗಿ ಬಿಸಿ ಮುಟ್ಟಿಸಿದೆ.

ಮೈತ್ರಿ ಸರ್ಕಾರದ ಅಂತ್ಯದ ದಿನಗಳು: ಎಚ್.ಡಿ.ಕುಮಾರಸ್ವಾಮಿ ಹಾಗೂ ಡಾ.ಜಿ.ಪರಮೇಶ್ವರ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕಿತ್ತಾಟ ಜೋರಾಗಿದ್ದೇ 2019ರ ಆರಂಭದಲ್ಲಿ. ಲೋಕಸಭೆ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ದೋಸ್ತಿ ಸರ್ಕಾರದ ಹುಳುಕುಗಳು ಆರಂಭವಾದವು. ವರ್ಷದ ಆರಂಭದಿಂದಲೇ ಟಿಕೆಟ್ ಹಂಚಿಕೆ ಹಾಗೂ ಲೋಕಸಭೆ ಚುನಾವಣೆಗೆ ಮೈತ್ರಿಯ ಮಾತುಕತೆಗಳು ಆರಂಭವಾದವು. ಬಹಿರಂಗವಾಗಿ ಉಭಯ ಪಕ್ಷದ ನಾಯಕರು ಲೋಕಸಭೆಯಲ್ಲಿ ಸ್ವೀಪ್ ಮಾಡುತ್ತೇವೆ ಎಂದು ಹೇಳಿಕೊಂಡರು ಸೋಲು ಕಟ್ಟಿಟ್ಟ ಬುತ್ತಿ, ಮೈತ್ರಿ ಬೇಡವೆಂದು ಪ್ರತಿಯೊಬ್ಬರೂ ಮಾತನಾಡುತ್ತಿದ್ದರು. ಮೈತ್ರಿ ಇಷ್ಟವಿಲ್ಲದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬಿಜೆಪಿ ಜತೆ ಕೈಜೋಡಿಸಿದರು. ಈ ಅನಧಿಕೃತ ಮೈತ್ರಿಯೇ ಸರ್ಕಾರ ಉರುಳು ಕಾರಣವಾಯಿತು.

Flashback 2019; ದೇಶವನ್ನು ಬೆಚ್ಚಿ ಬೀಳಿಸಿದ ಘಟನೆಗಳುFlashback 2019; ದೇಶವನ್ನು ಬೆಚ್ಚಿ ಬೀಳಿಸಿದ ಘಟನೆಗಳು

ಲೋಕಸಭೆ ಚುನಾವಣೆ: ಲೋಕಸಭೆ ಚುನಾವಣೆಯಲ್ಲಿ 20-8 ಮೈತ್ರಿ ಸೂತ್ರದೊಂದಿಗೆ ಬಲಿಷ್ಠ ಬಿಜೆಪಿಯನ್ನು ಕಾಂಗ್ರೆಸ್-ಜೆಡಿಎಸ್ ಎದುರಿಸಿತು. ಆದರೆ ಫಲಿತಾಂಶ ಬಂದಾಗ ಬಿಜೆಪಿಯು ಬರೋಬ್ಬರಿ 25 ಸೀಟುಗಳನ್ನು ಬಾಚಿಕೊಂಡಿತು. ಎಚ್.ಡಿ.ದೇವೇಗೌಡ, ನಿಖಿಲ್ ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ ಸೇರಿ ಘಟಾನುಘಟಿ ನಾಯಕರೆಲ್ಲ ಸೋತು ಸುಣ್ಣವಾದರು. ಬಿಜೆಪಿಯು ರಾಷ್ಟ್ರ ಮಟ್ಟದಲ್ಲಿ ಸಂಸದರ 300 ಸಂಖ್ಯೆ ದಾಟಲು ರಾಜ್ಯದ ಪಾತ್ರ ಪ್ರಮುಖವಾಯಿತು. ನಿರೀಕ್ಷೆಯನ್ನೂ ಮೀರಿ ಬಿಜೆಪಿ ಸೀಟುಗಳನ್ನು ಗೆದ್ದಿತು. ಈ ಆಘಾತಕಾರಿ ಸೋಲನ್ನು ಜೀರ್ಣಿಸಿಕೊಳ್ಳಲಾಗದೇ ದೋಸ್ತಿ ಸರ್ಕಾರದಲ್ಲಿ ಕಿತ್ತಾಟ ಆರಂಭವಾಯಿತು. ಸೋಲಿಗೆ ಕಾರಣರಾರು ಎಂದು ಗೂಬೆ ಕೂರಿಸುವ ಪ್ರಯತ್ನವೇ ಸರ್ಕಾರ ಬೀಳಲು ವೇದಿಕೆಯಾಗತೊಡಗಿತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯ ಕನಸು ಕಾಣಲು ಬಿಜೆಪಿ ನಾಯಕರಿಗೆ ಅವಕಾಶ ಸೃಷ್ಟಿಸಿಕೊಟ್ಟಿತು.

Flashback 2019: Events That Shook The State

ಹೊಸ ಸರ್ಕಾರ ರಚನೆ ಕಸರತ್ತು: ಲೋಕಸಭೆ ಚುನಾವಣೆ ಭರ್ಜರಿ ಗೆಲುವಿನಿಂದ ಬೀಗಿದ ಬಿ.ಎಸ್.ಯಡಿಯೂರಪ್ಪ, ಹೊಸ ಸರ್ಕಾರ ರಚನೆಗೆ ಕಸರತ್ತು ಆರಂಭಿಸಿದರು. ಜೂನ್ ಮೊದಲ ವಾರದಿಂದಲೇ ಆಪರೇಷನ್ ಕಮಲಕ್ಕೆ ಕೈ ಹಾಕಿದ ಯಡಿಯೂರಪ್ಪ ಪ್ರತಿಪಕ್ಷಗಳ 20ಕ್ಕೂ ಅಧಿಕ ಶಾಸಕರ ಬೆಂಬಲವಿದೆ ಎಂದು ಹೇಳಿಕೊಳ್ಳಲು ಆರಂಭಿಸಿದರು. ಇದಕ್ಕೆ ಪೂರಕವೆನ್ನುವಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಡ ತಾರಕಕ್ಕೇರಿತು. ಇವೆಲ್ಲ ನಾಟಕಗಳ ಮಧ್ಯೆ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಶಾಸಕರ ತಂಡ ಮುಂಬೈ ಪ್ರವಾಸ ಹೋಯಿತು. ಕೊನೆಗೂ 17 ಅತೃಪ್ತ ಶಾಸಕರು ದೋಸ್ತಿ ಸರ್ಕಾರ ಬೀಳಿಸಿ, ಹೊಸ ಸರ್ಕಾರ ರಚಿಸಲು ವೇದಿಕೆ ಸೃಷ್ಟಿಯಾಯಿತು.

ನಾಲ್ಕನೇ ಅವಧಿಗೆ ಯಡಿಯೂರಪ್ಪ ಸಿಎಂ: ಬಹುಮತ ಸಾಬೀತು ಮಾಡಲು ವಿಫಲರಾದ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಿದರು. ಯಡಿಯೂರಪ್ಪ ಅವರು 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 17 ಭಿನ್ನಮತೀಯ ಶಾಸಕರ ಬೆಂಬಲ ಪಡೆದು ಸರ್ಕಾರ ರಚಿಸಿದ ಯಡಿಯೂರಪ್ಪ, ಸಂಪುಟ ವಿಸ್ತರಣೆಗೆ ಸುಮಾರು 1 ತಿಂಗಳುಗಳ ಕಾಲ ಹೆಣಗಾಡಿದರು. ಆಶ್ಚರ್ಯಕರ ಬೆಳವಣಿಗೆಯಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ಕರ್ನಾಟಕ ಪಡೆಯಿತು. ಇದರ ಜತೆಗೆ ರಾಜ್ಯ ಬಿಜೆಪಿಗೂ ನಳೀನ್ ಕುಮಾರ್ ಕಟೀಲ್ ಅಧ್ಯಕ್ಷರಾದರು. ಇವೆರಡು ಬೆಳವಣಿಗೆಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಟ್ಟಿಹಾಕುವ ಪ್ರಯತ್ನವೆಂದೇ ವ್ಯಾಖ್ಯಾನಿಸಲಾಯಿತು.

Flashback 2019: ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪುಗಳುFlashback 2019: ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪುಗಳು

ಶಾಸಕರ ಅನರ್ಹತೆ ಹಾಗೂ ಉಪಚುನಾವಣೆ: ದೋಸ್ತಿ ಸರ್ಕಾರದ ಪರವಾಗಿ ಮತ ಚಲಾಯಿಸದ 17 ಭಿನ್ನಮತೀಯ ಶಾಸಕರನ್ನು ಅನರ್ಹಗೊಳಿಸಿ ಮಾಜಿ ಸ್ಪೀಕರ್ ರಮೇಶ್ಕುಮಾರ್ ಆದೇಶ ಹೊರಡಿಸಿದರು. ರಾಜೀನಾಮೆ ಅಂಗೀಕಾರದ ಕನಸಲ್ಲಿದ್ದ ಶಾಸಕರಿಗೆ ಅನರ್ಹತೆಯ ಶಿಕ್ಷೆ ನೀಡಲಾಯಿತು. ಆದರೆ ಸುಮಾರು 3 ತಿಂಗಳುಗಳ ಕಾಲ ಸುಪ್ರೀಂ ಕೋರ್ಟ್ ಹೋರಾಟದ ಬಳಿಕ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಪಡೆದ ಅನರ್ಹ ಶಾಸಕರು, ಚುನಾವಣೆಗೆ ಸ್ಪರ್ಧಿಸಿದರು. ಮಸ್ಕಿ ಹಾಗೂ ರಾಜರಾಜೇಶ್ವರಿ ನಗರ ಹೊರತುಪಡಿಸಿ ಉಳಿದ 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 12 ಕ್ಷೇತ್ರಗಳನ್ನು ಬಿಜೆಪಿ ಪಡೆದು ಸರ್ಕಾರ ಸುಭದ್ರವಾಯಿತು. ಸರ್ಕಾರ ಬೀಳಿಸುವ ಕಾಂಗ್ರೆಸ್-ಜೆಡಿಎಸ್ ತಂತ್ರಗಾರಿಕೆ ಫಲ ಕಾಣಲಿಲ್ಲ. ಆದರೆ ಗೆದ್ದು ಮಂತ್ರಿಯಾಗುವ ಮಾಜಿ ಅನರ್ಹ ಶಾಸಕರ ಕನಸು ಇನ್ನೂ ನನಸಾಗಿಲ್ಲ. ಸೋತ ಇನ್ನಿಬ್ಬರು ಅನರ್ಹ ಶಾಸಕರ ರಾಜಕೀಯ ಭವಿಷ್ಯ ಕತ್ತಲಾಗಿದೆ.

ಮಹಾ ಪ್ರವಾಹ: ರಾಜಕೀಯ ಪ್ರಹಸನಗಳ ಮಧ್ಯೆಯೇ ಕರ್ನಾಟಕಕ್ಕೆ ಹಿಂದೆಂದೂ ಕಂಡರಿಯದ ಮಹಾ ಪ್ರವಾಹ ಅಪ್ಫಳಿಸಿತು. ಭೀಕರ ಮಳೆ ಹಾಗೂ ಪ್ರವಾಹದಿಂದ 13ಕ್ಕೂ ಅಧಿಕ ಜಿಲ್ಲೆಯ ಜನರು ತತ್ತರಿಸಿ ಹೋದರು. ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳು ಅಕ್ಷರಶಃ ನೀರಿನಲ್ಲಿ ಮುಳುಗಿಹೋದವು. ಕೃಷಿ ಭೂಮಿಗಳ ಜತೆ ಇಲ್ಲಿಯ ಜನರ ಜೀವನ ಕೂಡ ನೀರಿನಲ್ಲಿ ಮುಳುಗಿಹೋಯಿತು. ಆಡಳಿತಾರೂಢ ಬಿಜೆಪಿ ಸರ್ಕಾರ ಕೂಡ ಸರ್ಕಾರ ರಚನೆಯ ಕಸರತ್ತಲ್ಲಿ ಮುಳುಗಿದ್ದರೆ, ಪ್ರವಾಹದ ಗೋಳು ಕೇಳುವರಿಲ್ಲದಂತಾಗಿತ್ತು. ಇನ್ನೊಂದೆಡೆ ಕೇಂದ್ರ ಸರ್ಕಾರ ಕೂಡ ಸೂಕ್ತ ಪರಿಹಾರ ನೀಡಲೇ ಇಲ್ಲ. ಒಂದು ಹಂತದಲ್ಲಿ ಪರಿಹಾರ ಮೊತ್ತ ನೀಡಿ ಕೇಂದ್ರ ಸರ್ಕಾರ ಕೈ ತೊಳೆದುಕೊಂಡಿದೆ ಎನ್ನುವ ಆರೋಪವಿದೆ.

ಪೌರತ್ವದ ಗೊಂದಲ: ವರ್ಷಾಂತ್ಯಕ್ಕೆ ರಾಜ್ಯದಲ್ಲಿ ಪೌರತ್ವದ ಗೊಂದಲ ಆರಂಭವಾಗಿದೆ. ಕೆಲ ವರ್ಷಗಳಿಂದ ಕಾಣಿಸಿಕೊಳ್ಳದ ಕೋಮು ಸೂಕ್ಷ್ಮ ವಿಚಾರಗಳು ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡಿವೆ. ಗೋಲಿಬಾರಿಗೆ ಮಂಗಳೂರಿನಲ್ಲಿ ಇಬ್ಬರು ಬಲಿಯಾಗಿದ್ದಾರೆ. ಈ ಹಿಂದೆಯೂ ಯಡಿಯೂರಪ್ಪ ಮುಖ್ಯಮಂತ್ರಿಯಾದ ಆರಂಭದಲ್ಲೇ ಗೋಲಿಬಾರ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
2019 is the most confused and bitter year for the Karnataka. Here some Events That Shook The State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X