• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯೋತ್ಸವ ಪ್ರಶಸ್ತಿ-2020: ನೈಜ ಸಾಧಕರಿಗೆ ಮಣೆ, ಲಾಬಿಗೆ ಕೊನೆ

By ಕಾರ್ತಿಕ್ ಯು.ಎಚ್. ವಿಶ್ಲೇಷಕ
|
Google Oneindia Kannada News

ಸರ್ಕಾರ ನೀಡುವ ಪ್ರಶಸ್ತಿಗಳೆಂದರೆ ರಾಜಕಾರಣ, ಲಾಬಿ, ಶಿಫಾರಸು, ಸ್ವಜನಪಕ್ಷಪಾತ ಎಂಬಿತ್ಯಾದಿ ಚಟುವಟಿಕೆಗಳು ತೆರೆಯ ಹಿಂಭಾಗ ಕೆಲಸ ಮಾಡುತ್ತವೆ ಎಂಬ ದೂರು ಸದಾ ಇದ್ದೇ ಇದೆ. ಆದರೆ 2020 ನೇ ಸಾಲಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿ ನೀಡುತ್ತಿರುವ ರಾಜ್ಯೋತ್ಸವ ಪ್ರಶಸ್ತಿಯು ಈ ಎಲ್ಲ ಹಿಂಬಾಗಿಲ ಕಾರ್ಯಗಳಿಗೆ ಎಳ್ಳುನೀರು ಬಿಡುವಂತೆ ಮಾಡಿದೆ.

65 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಜ್ಯದ ವಿವಿಧ ಕ್ಷೇತ್ರಗಳ ಒಟ್ಟು 65 ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಧಕರು ಆಯಾ ಕ್ಷೇತ್ರದಲ್ಲಿ ತೋರಿದ ಶ್ರಮ, ನಿಸ್ವಾರ್ಥ ಸೇವೆಯೇ ಈ ವರ್ಷದ ಪ್ರಶಸ್ತಿಗೆ ಮಾನದಂಡ. ಈ ಮಾನದಂಡಗಳ ಮೂಲಕ, ಇದುವರೆಗೆ ಎಲೆಮರೆಕಾಯಿಗಳಂತೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ ತಂದು ಜನರಿಗೆ ಪರಿಚಯಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ.

65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ: ಪುರಸ್ಕೃತರ ಪಟ್ಟಿ65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ: ಪುರಸ್ಕೃತರ ಪಟ್ಟಿ

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪದ್ಮ ಪ್ರಶಸ್ತಿಗಳು ಸಮಾಜದ ಕಟ್ಟಕಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದವರಿಗೆ ದೊರೆಯಲು ಆರಂಭವಾಯಿತು. ಹೆಚ್ಚಿನ ಆಯ್ಕೆಗಳಲ್ಲಿ ಲಾಬಿಗಳಿಗೇ ಹಾಕುತ್ತಿದ್ದ ಮಣೆಯನ್ನು ನಂತರ ನೈಜ ಸೇವಕರಿಗೆ ಹಾಕುವ ಪರಿಪಾಠ ಆರಂಭವಾಯಿತು. ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಕೂಡ ಇದೇ ಹಾದಿಯಲ್ಲಿ ಸಾಗಿದ್ದು, ಲಾಬಿ, ಶಿಫಾರಸುಗಳಿಗೆ ಮಂಗಳ ಹಾಡಿದೆ.

ಹೊಸ ಸಂದೇಶ ರವಾನೆ

ಹೊಸ ಸಂದೇಶ ರವಾನೆ

2020 ನೇ ಸಾಲಿನಲ್ಲಿ ಮಾಡಿರುವ ಆಯ್ಕೆಗಳಿಂದಾಗಿ ರಾಜ್ಯೋತ್ಸವ ಪ್ರಶಸ್ತಿ ಲಾಬಿಗಾಗಿ ಇರುವುದಲ್ಲ ಎಂಬುದು ಸ್ಪಷ್ಟವಾಗಿದೆ. ಇದರಿಂದಾಗಿ ರಾಜ್ಯೋತ್ಸವ ಪ್ರಶಸ್ತಿ ಕನ್ನಡ ನಾಡಿಗಾಗಿ ದುಡಿಯುವವರಿಗೆ ಸೀಮಿತ ಎಂಬ ಹೊಸ ಸಂದೇಶ ರವಾನೆಯಾಗಿದೆ. ಜತೆಗೆ ಹೊಸದೊಂದು ಸಂಪ್ರದಾಯ ರೂಪಿಸಿದಂತಾಗಿದೆ.

ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಪಟ್ಟಿ ಪ್ರಕಟವಾದಾಗ ಕನ್ನಡಿಗರು ಕುತೂಹಲದಿಂದ ನೋಡಿದರೂ, ಅಲ್ಲಿ ಸ್ವಜನಪಕ್ಷಪಾತ, ಲಾಬಿಗಳು ಕೆಲಸ ಮಾಡಿವೆ ಎಂದು ಮೂಗು ಮುರಿಯುತ್ತಿದ್ದರು. ಆದರೆ ಈ ಬಾರಿ ಸಾರ್ವಜನಿಕರು ಆಸಕ್ತಿಯಿಂದ ಪ್ರಶಸ್ತಿ ಪಟ್ಟಿ ಗಮನಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯ ಬಗ್ಗೆ ಈ ಬಾರಿ ಎಲ್ಲೂ ಅಪಸ್ವರ ಎದ್ದಿಲ್ಲ. ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಮಾಡಿರುವ ಆಯ್ಕೆ ಎಂಬುದಕ್ಕೆ ಇದೇ ಒಂದು ಉದಾಹರಣೆ. ಜಿಲ್ಲಾವಾರು, ಪ್ರದೇಶವಾರು ಆದ್ಯತೆ ಜತೆಗೆ ಎಲ್ಲ ಕ್ಷೇತ್ರಗಳನ್ನೂ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಇನ್ನೂ ಆಸಕ್ತಿದಾಯಕ ವಿಚಾರವೆಂದರೆ, ಪ್ರಶಸ್ತಿಗೆ ಆಯ್ಕೆಯಾದ ಅನೇಕರು ಅರ್ಜಿಯನ್ನೇ ಸಲ್ಲಿಸಿಲ್ಲ. ಅನೇಕ ಸಾಧಕರ ಪರವಾಗಿ ಅವರ ಅಭಿಮಾನಿಗಳು, ಶಿಷ್ಯವೃಂದ ಅರ್ಜಿ ಸಲ್ಲಿಸಿದ್ದಾರೆ.

ಕೆಲ ಸಾಧಕರ ಪರಿಚಯ

ಕೆಲ ಸಾಧಕರ ಪರಿಚಯ

* ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ರೈತ ಮಹಿಳೆ ಎಸ್.ವಿ.ಸುಮಂಗಲಮ್ಮ, ಟ್ರ್ಯಾಕ್ಟರ್ ಲೈಸೆನ್ಸ್ ಪಡೆದ ಮೊದಲ ಮಹಿಳೆ. ಖುದ್ದು ಟ್ರ್ಯಾಕ್ಟರ್ ಚಲಾಯಿಸಿ ಕೃಷಿ ಮಾಡುವ ಇವರು, ದಿನದ ಬಹುತೇಕ ಸಮಯವನ್ನು ತೋಟದಲ್ಲೇ ಕಳೆಯುತ್ತಾರೆ. ತೆಂಗು ಕೃಷಿ, ಹೈನುಗಾರಿಕೆ, ಸಗಣಿಯಿಂದ ಬಯೋಗ್ಯಾಸ್ ತಯಾರಿ, ನೀರಾ ತಯಾರಿ ಸೇರಿದಂತೆ ಕೃಷಿಯಲ್ಲೇ ಹಲವಾರು ಚಟುವಟಿಕೆಗಳನ್ನು ಮಾಡುವ ಮೂಲಕ ಸಮಗ್ರ ಕೃಷಿಯ ಮಹತ್ವ ಸಾರಿದ್ದಾರೆ.

* ಮೈಸೂರಿನ ನಾಡಹಬ್ಬ ದಸರಾದಲ್ಲಿ ಜಂಬೂಸವಾರಿಯಲ್ಲಿ ಇರಿಸುವ ಶ್ರೀ ಚಾಮುಂಡೇಶ್ವರಿಯ ಮೂರ್ತಿಯ ಶಿಲ್ಪಿ ಎನ್.ಎಸ್.ಜನಾರ್ದನಮೂರ್ತಿ. ಇವರು ಶಿಲ್ಪಕಲೆ ಬೋಧಕರಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ. 1989 ರಲ್ಲಿ ಹ್ಯಾಲೋ ಕಾಸ್ಟಿಂಗ್ ತಂತ್ರಜ್ಞಾನ ಬಳಸಿ ನಿರ್ಮಿಸಿದ ಮೂರ್ತಿಯನ್ನು 1990 ರಿಂದ ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತಿದೆ. ಜನಾರ್ದನ ಅವರ ತಂದೆ ಶ್ರೀನಿವಾಸಾಚಾರ್ ಅರಮನೆಯ ಶಿಲ್ಪ ಕಲಾವಿದರಾಗಿದ್ದರು.

ಚಿತ್ರದಲ್ಲಿ: ರೈತ ಮಹಿಳೆ ಎಸ್.ವಿ.ಸುಮಂಗಲಮ್ಮ

ಚಿತ್ರದುರ್ಗದ ಸುಮಂಗಲಮ್ಮನವರಿಗೆ ಕೃಷಿ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿಚಿತ್ರದುರ್ಗದ ಸುಮಂಗಲಮ್ಮನವರಿಗೆ ಕೃಷಿ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ

ಸಾಮಾಜಿಕ ನ್ಯಾಯ ಕಾಯ್ದುಕೊಳ್ಳಲಾಗಿದೆ

ಸಾಮಾಜಿಕ ನ್ಯಾಯ ಕಾಯ್ದುಕೊಳ್ಳಲಾಗಿದೆ

* ಬೆಳಗಾವಿ ಜಿಲ್ಲೆಯ ಕೆಂಪವ್ವ ಯಲ್ಲಪ್ಪ ಹರಿಜನ ಅವರು 40 ವರ್ಷಗಳಿಂದ ಬಯಲಾಟ ಕಲಾವಿದರಾಗಿ ಕಲೆಯನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಸಣ್ಣಾಟ ಕಲೆಯ ಸಂಗ್ಯಾ-ಬಾಳ್ಯಾ, ರಾಧಾನಾಟ ಸಣ್ಣಾಟಗಳಲ್ಲಿ ಚಿಮನಾ ಪಾತ್ರದಲ್ಲಿ ನಟನೆ ಮಾಡಿ ಹೆಸರು ಗಳಿಸಿದ್ದಾರೆ. ಹಾಡುಗಾರಿಕೆ ಹಾಗೂ ಕುಣಿತದಲ್ಲೂ ಇವರದು ಎತ್ತಿದ ಕೈ. ಹೊರರಾಜ್ಯಗಳಲ್ಲೂ 1 ಸಾವಿರಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದ್ದಾರೆ.

* ಬೆಳಗಾವಿ ಜಿಲ್ಲೆಯ ಟಿಳಕವಾಡಿಯ ಅನಂತ ತೇರದಾಳ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದಲ್ಲಿ ಜನಪ್ರಿಯರಾದವರು. ಪಂಡಿತ್ ಭೀಮಸೇನ ಜೋಷಿ ಅವರ ಶಿಷ್ಯರಾಗಿ ಸಂಗೀತ ಕಲಿತು, 70 ವರ್ಷಗಳಿಂದ ಕಲಾ ಸೇವೆ ಮಾಡುತ್ತಿದ್ದಾರೆ. ಅಂಡಮಾನ್, ನಿಕೋಬಾರ್ ಸೇರಿದಂತೆ ಹೊರಭಾಗಗಳಲ್ಲೂ ಕಛೇರಿ ನಡೆಸಿಕೊಟ್ಟು ಹೆಸರು ಗಳಿಸಿದ್ದಾರೆ.

* ಕೊಪ್ಪಳ ಜಿಲ್ಲೆಯ ಮೋರನಾಳ ಗ್ರಾಮದ ಶಿಳ್ಳೆಕ್ಯಾತ ಸಮುದಾಯದ ಕೇಶಪ್ಪ ಶಿಳ್ಳೆಕ್ಯಾತರ ತೊಗಲುಗೊಂಬೆಯಾಟದ ಕಲಾವಿದರು. ಇವರ ಕುಟುಂಬ ನೂರಾರು ವರ್ಷಗಳಿಂದ ಈ ಕಲೆಯನ್ನು ಉಳಿಸಿಕೊಂಡು ಬಂದಿದೆ. ಹೊರರಾಜ್ಯ, ಹೊರದೇಶಗಳಲ್ಲೂ ಪ್ರದರ್ಶನ ನೀಡಿದ್ದಾರೆ.

ಚಿತ್ರದಲ್ಲಿ: ಕೇಶಪ್ಪ ಶಿಳ್ಳೆಕ್ಯಾತರ

ಅರ್ಜಿ ಬಿಡಿ, ಜನರಿಗೆ ಆಯ್ಕೆ ಕೊಡಿ

ಅರ್ಜಿ ಬಿಡಿ, ಜನರಿಗೆ ಆಯ್ಕೆ ಕೊಡಿ

ಪ್ರಧಾನಿ ನರೇಂದ್ರ ಮೋದಿ ಪದ್ಮ ಪ್ರಶಸ್ತಿಗಳನ್ನು 'ಜನರ ಪ್ರಶಸ್ತಿ'ಯಾಗಿ ಪರಿವರ್ತಿಸಿದ್ದಾರೆ. ಈ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಜನರೇ ಆಯ್ಕೆದಾರರಾಗುವ ಮೂಲಕ ಪಾರದರ್ಶಕ ವ್ಯವಸ್ಥೆ ತರಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಯಲ್ಲಿ ಈ ಬಾರಿ ಪಾರದರ್ಶಕತೆ ತಂದಿದ್ದಾರೆ. ಆದರೆ ಇದು ನಿರಂತರವಾಗಿ ಮುಂದುವರಿಯಬೇಕಿದೆ. ಇದಕ್ಕಾಗಿ ಪದ್ಮ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯಂತೆ, ರಾಜ್ಯದಲ್ಲೂ ಜನರೇ ಆಯ್ಕೆ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ.

ಸಮಾಜದಲ್ಲಿ ತೆರೆಮರೆ ಸಾಧಕರ ಬಗ್ಗೆ ತಿಳಿಯಲು, ಜನರಿಂದ ಮಾಡುವ ಆಯ್ಕೆಯೇ ಸೂಕ್ತ ವಿಧಾನ. ತೆರೆಮರೆಯಲ್ಲಿರುವ ಸಾಧಕರು ತಾವಾಗಿಯೇ ಅರ್ಜಿ ಹಾಕಲು ಮುಂದೆ ಬರುವುದಿಲ್ಲ. ಅಂತಹ ಸಾಧಕರಿಗೆ ಅರ್ಜಿ ಸಲ್ಲಿಸಿ ಎಂದು ಕೇಳುವುದು ಕೂಡ ವ್ಯಂಗ್ಯವಾಗುತ್ತದೆ. ಆದ್ದರಿಂದ ಪ್ರತಿ ವರ್ಷ ಜನರು ಸಾಧಕರ ಪರ ಅರ್ಜಿ ಸಲ್ಲಿಸುವ ವಿಧಾನದ ಆಯ್ಕೆ ಪ್ರಕ್ರಿಯೆ ನಡೆಯಬೇಕು. ಇದಕ್ಕಾಗಿ ಆಯ್ಕೆ ಪ್ರಕ್ರಿಯೆಯಲ್ಲೇ ನಿಯಮ ರೂಪಿಸುವುದು ಉಚಿತ. ಹೀಗೆ ಮಾಡಿದರೆ, ಮುಂದೆಂದೂ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಯಲ್ಲಿ ಲೋಪ ಜರುಗದು. ಇದು ಪ್ರಶಸ್ತಿಯ ಗೌರವ ಹೆಚ್ಚಿಸುವುದು ಖಚಿತ.

ರಾಜ್ಯೋತ್ಸವ ಪ್ರಶಸ್ತಿ; ಪ್ರೊ. ನ ವೆಂಕೋಬರಾವ್ ಪರಿಚಯರಾಜ್ಯೋತ್ಸವ ಪ್ರಶಸ್ತಿ; ಪ್ರೊ. ನ ವೆಂಕೋಬರಾವ್ ಪರಿಚಯ

ಸೂಚನೆ: ಇದು ಲೇಖಕರ ಅಭಿಪ್ರಾಯವಾಗಿರುತ್ತದೆ, ಇದು ಒನ್ಇಂಡಿಯಾ ಸಂಸ್ಥೆ ಅಭಿಪ್ರಾಯವಲ್ಲ ಹಾಗೂ ಲೇಖಕರ ಆಶಯವನ್ನು ಸಾರ್ವಜನಿಕರ ಮುಂದಿಡಲಾಗಿದೆ.

English summary
Rajyotsava Award 2020 awards announced to 65 achievers from various field. Analyst Karthik U. H says this is the first time there were no report of lobbying and real achievers felicitated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X