ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿಗೆ ಬಂದರೆ ಈ ಸ್ಥಳಗಳಿಗೂ ಹೋಗುವುದನ್ನು ಮರೆಯಬೇಡಿ

|
Google Oneindia Kannada News

ಈ ಬಾರಿ ದಸರಾ ಸಂಭ್ರಮಕ್ಕೆ ಕೊರೊನಾ ತಣ್ಣೀರು ಎರಚಿದೆ. ಹೀಗಾಗಿ ಪ್ರವಾಸಿಗರ ಸ್ವರ್ಗವಾಗಿದ್ದ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದೆ. ಹಾಗೆಂದು ಪ್ರವಾಸಿಗರು ಇಲ್ಲಿಗೆ ಬರುತ್ತಿಲ್ಲ ಎಂದಲ್ಲ. ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಸಂಪೂರ್ಣ ಇಳಿಕೆಯಾಗಿರುವುದಂತೂ ಸತ್ಯ.

ಸಾಮಾನ್ಯವಾಗಿ ಅಕ್ಟೋಬರ್ ನಂತರವೇ ಹೆಚ್ಚಿನ ಪ್ರವಾಸಿಗರು ಮೈಸೂರಿಗೆ ಬರುತ್ತಿದ್ದರು. ಈ ಬಾರಿಯೂ ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾದರೆ ಅಚ್ಚರಿಪಡಬೇಕಾಗಿಲ್ಲ. ಮೈಸೂರಿಗೆ ಆಗಮಿಸಿ ನಗರದಲ್ಲಿ ವಾಸ್ತವ್ಯ ಹೂಡಿ ಮೈಸೂರು ನಗರ ಮಾತ್ರವಲ್ಲದೆ, ಸುತ್ತಮುತ್ತಲು ಹಲವು ಪ್ರವಾಸಿ ತಾಣಗಳಿದ್ದು ಅವುಗಳನ್ನು ನೋಡಿ ಬರುವ ಪ್ರಯತ್ನ ಮಾಡಬಹುದಾಗಿದೆ. ಆ ಪ್ರವಾಸಿ ತಾಣಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ...

ರಂಗನತಿಟ್ಟು ಪಕ್ಷಿಧಾಮಕ್ಕೆ ಸಿಗಲಿದೆಯೇ ಅಂತರಾಷ್ಟ್ರೀಯ ಮಾನ್ಯತೆ? ರಂಗನತಿಟ್ಟು ಪಕ್ಷಿಧಾಮಕ್ಕೆ ಸಿಗಲಿದೆಯೇ ಅಂತರಾಷ್ಟ್ರೀಯ ಮಾನ್ಯತೆ?

ಮೈಸೂರು ಅರಮನೆ
ಮೈಸೂರು ನಗರದ ಹೃದಯ ಭಾಗದಲ್ಲಿರುವ ಅರಮನೆಯು ವಿಶ್ವದಲ್ಲೇ ಹೆಸರುವಾಸಿ. ನೋಡಲು ಆಕರ್ಷಕವಾಗಿರುವ ಈ ಅರಮನೆಯು ಮಹಾರಾಜರ ಖಾಸಗಿ ವಸ್ತುಸಂಗ್ರಹಾಲಯ, ದರ್ಬಾರ್ ಹಾಲ್, ಚಿನ್ನದ ಸಿಂಹಾಸನ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಅರಮನೆ ರಾತ್ರಿ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದರೆ ಅದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತದೆ. ಅರಮನೆ ಸುತ್ತಲೂ ಕೋಡಿ ಭೈರವೇಶ್ವರ, ಕೋಡಿ ಸೋಮೇಶ್ವರ, ಕೋಟೆ ಆಂಜನೇಯ ಸ್ವಾಮಿ, ಆತ್ಮವಿಲಾಸ ಗಣಪತಿ, ಗಾಯತ್ರಿ, ಲಕ್ಷ್ಮಿರಮಣ ಸ್ವಾಮಿ, ಶ್ವೇತ ವರಾಹಸ್ವಾಮಿ ಹಾಗೂ ತ್ರ್ಯಂಬಕೇಶ್ವರ ದೇವಸ್ಥಾನಗಳಿವೆ.

Famous Tourists Places Around Mysuru District

ಚಾಮುಂಡಿ ಬೆಟ್ಟ
ನಗರದಿಂದ 12 ಕಿ.ಮೀ.ದೂರದಲ್ಲಿದೆ. ಬೆಟ್ಟದಲ್ಲಿ ಮುಂಡೇಶ್ವರಿಯ ದೇಗುಲವಿದ್ದು, ಏಳು ಅಂತಸ್ತಿನ ಗೋಪುರ ಹೊಂದಿದೆ. ಇಲ್ಲಿ ಬೆಳಿಗ್ಗೆ, ಸಂಜೆ ಮತ್ತು ರಾತ್ರಿ ಪೂಜೆ ನೆರವೇರುತ್ತದೆ. ಇಲ್ಲಿರುವ ಹನ್ನೆರಡು ಅಡಿ ಎತ್ತರದ ಮಹಿಷಾಸುರನ ವಿಗ್ರಹ ಗಮನಸೆಳೆಯುತ್ತದೆ. ಚಾಮುಂಡೇಶ್ವರಿ ದೇವಾಲಯದ ಬಳಿ ಮಹಾಬಲೇಶ್ವರ ದೇಗುಲವೂ ಇದೆ. ಚಾಮುಂಡಿಬೆಟ್ಟವನ್ನು ಹಿಂದೆ ಮಹಾಬಲ ತೀರ್ಥ ಎಂದು ಕೂಡ ಕರೆಯಲಾಗುತ್ತಿತ್ತು ಎಂದು ಹೇಳಲಾಗಿದೆ. ಇನ್ನು ಚಾಮುಂಡಿಬೆಟ್ಟದ ಬಳಿ 16 ಅಡಿ ಎತ್ತರ ಹಾಗೂ 25 ಅಡಿ ಅಗಲದ ಏಕಶಿಲಾ ನಂದಿ ವಿಗ್ರಹ ಆಕರ್ಷಕವಾಗಿದೆ.

ಜ್ವಾಲಾಮುಖಿ ತ್ರಿಪುರ ಸುಂದರಿ
ಮೈಸೂರಿನಿಂದ ಸುಮಾರು 7 ಕಿ.ಮೀ.ದೂರದಲ್ಲಿ ಬಂಡಿಪಾಳ್ಯ ಮಾರ್ಗದ ಉತ್ತನಹಳ್ಳಿ ಗ್ರಾಮದಲ್ಲಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿಯ ದೇವಾಲಯವಿದೆ. ಚಾಮುಂಡೇಶ್ವರಿ ದೇವಿಯ ಸಹೋದರಿಯಾಗಿರುವ ಈಕೆ ಮಹಿಷಾಸುರನ ಸಂಹಾರ ಮಾಡುವಾಗ ಸಹಕರಿಸಿದ್ದಳು ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖವಿದೆ.

 ಮೈಸೂರಿನಲ್ಲಿರುವ ಈ ಎಲ್ಲಾ ತಾಣಗಳು ಪ್ರೇಮಿಗಳಿಗೆ ಅಚ್ಚುಮೆಚ್ಚು ಮೈಸೂರಿನಲ್ಲಿರುವ ಈ ಎಲ್ಲಾ ತಾಣಗಳು ಪ್ರೇಮಿಗಳಿಗೆ ಅಚ್ಚುಮೆಚ್ಚು

ಸಂತ ಫಿಲೋಮಿನಾ ಚರ್ಚ್
ಮೈಸೂರಿನ ಅಶೋಕ ರಸ್ತೆಯಲ್ಲಿರುವ ಸಂತ ಫಿಲೋಮಿನಾ ಚರ್ಚ್ ಶತಮಾನಗಳ ಇತಿಹಾಸ ಹೊಂದಿದ್ದು, ದಕ್ಷಿಣ ಭಾರತದಲ್ಲೇ ಅತೀ ಎತ್ತರದ (165) ಚರ್ಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ವೈಶಿಷ್ಟ್ಯಪೂರ್ಣ ಕಲಾಕೃತಿ ಹೊಂದಿದೆ.

Famous Tourists Places Around Mysuru District

ಮೃಗಾಲಯ
ಚಾಮರಾಜೇಂದ್ರ ಮೃಗಾಲಯವು ಮೈಸೂರು ಅರಸರು ನೀಡಿದ ಕೊಡುಗೆಯಾಗಿದ್ದು, ಇಲ್ಲಿ ವಿವಿಧ ಪ್ರಬೇಧಗಳ ನೂರಾರು ಪ್ರಾಣಿ ಪಕ್ಷಿಗಳಿವೆ. ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಕಾರಂಜಿಕೆರೆ
ಪ್ರೇಮಿಗಳ ಕೆರೆ ಎಂದೇ ಹೆಸರುವಾಸಿಯಾಗಿರುವ ಈ ತಾಣ ನಿಸರ್ಗ ರಮಣೀಯವಾಗಿದೆ. ಇಲ್ಲಿ ದೋಣಿ ವಿಹಾರ ಮಾಡಲು, ಉದ್ಯಾನದಲ್ಲಿ ವಿಹರಿಸಲು ಅನುಕೂಲವಾಗಿದೆ. ಇಲ್ಲಿರುವ ಚಿಟ್ಟೆ ಪಾರ್ಕ್ ಪ್ರಮುಖ ಆಕರ್ಷಣೆಯಾಗಿದೆ. ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ಆಟಿಕೆಗಳನ್ನು ಕೂಡ ಇಲ್ಲಿಡಲಾಗಿದೆ.

ರೈಲ್ವೆ ವಸ್ತುಸಂಗ್ರಹಾಲಯ
ಈ ರೈಲ್ವೆ ವಸ್ತುಸಂಗ್ರಹಾಲಯವು ನಮ್ಮ ರೈಲ್ವೆ ಇಲಾಖೆ ನಡೆದು ಬಂದ ಹಾದಿಯನ್ನು ಬಿಂಬಿಸುತ್ತದೆ. ಮೊದಲಿದ್ದ ಹಳೆಯ ಉಗಿ ಬಂಡಿಗಳು, ಬೋಗಿಗಳು, ಉಪಕರಣಗಳು, ಮಹಾರಾಜ, ಮಹಾರಾಣಿ ಬಳಸುತ್ತಿದ್ದ ರೈಲ್ವೆ ಬೋಗಿಗಳು ಮತ್ತು ಛಾಯಾಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಜೊತೆಗೆ ಇಲ್ಲಿರುವ ಪುಟಾಣಿ ರೈಲಿನಲ್ಲಿ ಕುಳಿತು ಪ್ರಯಾಣ ಮಾಡಬಹುದಾಗಿದೆ.

ಜಾನಪದ ವಸ್ತು ಸಂಗ್ರಹಾಲಯ
ಮಾನಸ ಗಂಗೋತ್ರಿಯ ಜಯಲಕ್ಷ್ಮಿ ವಿಲಾಸದಲ್ಲಿರುವ ಜಾನಪದ ವಸ್ತುಸಂಗ್ರಹಾಲಯವು ಬೃಹತ್ ಸಂಗ್ರಹಾಲಯವಾಗಿದೆ. ಇಲ್ಲಿ ಜಾನಪದಕ್ಕೆ ಸಂಬಂಧಿಸಿದಂತೆ ಬುಡಕಟ್ಟು ಜನರ ಸಾಂಪ್ರದಾಯಿಕ ವಸ್ತುಗಳು, ದೀಪಗಳು, ಬೊಂಬೆಗಳು, ಕೆತ್ತನೆಗಳು, ಆಭರಣಗಳು, ಕಲಾಕೃತಿಗಳು, ಕೃಷಿ ಉಪಕರಣಗಳು, ಶಾಸನಗಳು ಸೇರಿದಂತೆ ಸುಮಾರು 6500ಕ್ಕೂ ಹೆಚ್ಚು ಜಾನಪದ ವಸ್ತುಗಳು ಇಲ್ಲಿರುವುದನ್ನು ನಾವು ಕಾಣಬಹುದಾಗಿದೆ.

Famous Tourists Places Around Mysuru District

ಮೇಣದ ವಸ್ತುಸಂಗ್ರಹಾಲಯ
ಮೈಸೂರಿನ ಕರುಬಾರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಮೆಲೋಡಿ ವರ್ಲ್ಡ್ ಮೇಣದ ಸಂಗ್ರಹಾಲಯವು ಅಪರೂಪದ ವಸ್ತು ಸಂಗ್ರಹಾಲಯವಾಗಿದೆ. ಇಲ್ಲಿ ಸುಮಾರು 100ಕ್ಕೂ ಹೆಚ್ಚು ಮಹನೀಯರ ಮೇಣದ ಆಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಸಚ್ಚಿದಾನಂದ ಆಶ್ರಮ
ಮೈಸೂರಿಗೆ ಸಮೀಪ ನಂಜನಗೂಡು ರಸ್ತೆಯಲ್ಲಿರುವ ಸಚ್ಚಿದಾನಂದ ಗಣಪತಿ ಆಶ್ರಮವು ಕೇವಲ ಆಶ್ರಮವಾಗಿರದೆ ಇದು ಆಸ್ತಿಕ, ನಾಸ್ತಿಕರೆಲ್ಲರನ್ನೂ ಸೆಳೆಯುವ ತಾಣವಾಗಿದೆ. ಇಲ್ಲಿ ದತ್ತಾತ್ರೇಯ ಮತ್ತು ವೆಂಕಟರಮಣ ಸ್ವಾಮಿ ದೇವಾಲಯ, ನಾದಮಂಟಪ, ಪ್ರಾರ್ಥನಾ ಮಂದಿರ, ಬೋನ್ಸಾಯಿ ಗಾರ್ಡನ್, ವಸ್ತುಸಂಗ್ರಹಾಲಯ, ಏಕಶಿಲೆಯಿಂದ ಕೆತ್ತಲಾದ ಬೃಹತ್ ಆಂಜನೇಯನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

ಗೊಮ್ಮಟಗಿರಿ
ಮೈಸೂರಿನಿಂದ ಇಲವಾಲ ಮಾರ್ಗದಲ್ಲಿ ಸುಮಾರು 22 ಕಿ.ಮೀ. ದೂರದಲ್ಲಿರುವ ಗೊಮ್ಮಟಗಿರಿ ಪವಿತ್ರತಾಣವಾಗಿದ್ದು, ಇಲ್ಲಿ ಬೃಹತ್ ಬಂಡೆಯ ಮೇಲೆ ಸುಮಾರು 18 ಅಡಿ ಎತ್ತರದ ಬಾಹುಬಲಿಯ ವಿಗ್ರಹವನ್ನು ನಿರ್ಮಿಸಲಾಗಿದೆ. ಗೊಮ್ಮಟಗಿರಿಯ ಬಾಹುಬಲಿಯ ಪಾದ ತಲುಪಲು ಬಂಡೆಯನ್ನು ಕೊರೆದು 80 ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಸುಮಾರು 24 ತೀರ್ಥಂಕರರ ಪಾದ ಚರಣಗಳನ್ನು ಕಾಣಬಹುದಾಗಿದೆ.

Famous Tourists Places Around Mysuru District

ಅರ್ಕನಾಥೇಶ್ವರ ದೇವಸ್ಥಾನ
ಮೈಸೂರಿನಿಂದ ಸುಮಾರು 44 ಕಿ.ಮೀ. ದೂರದಲ್ಲಿ ಕೆ.ಆರ್.ನಗರ ತಾಲೂಕಿನಲ್ಲಿರುವ ಎಡತೊರೆಯ ಅರ್ಕನಾಥೇಶ್ವರ ದೇವಾಲಯವು ಕಾವೇರಿ ನದಿ ದಡದಲ್ಲಿದೆ. ಕಾವೇರಿ ನದಿಯು ಎಡಕ್ಕೆ ತಿರುಗಿ ಹರಿಯುವುದರಿಂದ ಎಡತೊರೆ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಇಲ್ಲಿನ ದೇವಾಲಯವು ಪ್ರಶಾಂತ ವಾತಾವರಣದಲ್ಲಿದ್ದು ಭಕ್ತರನ್ನು ತನ್ನತ್ತ ಸೆಳೆಯುತ್ತದೆ.

ಚುಂಚನಕಟ್ಟೆ
ಈ ತಾಣವು ಮೈಸೂರಿನಿಂದ 54 ಕಿ.ಮೀ.ದೂರದಲ್ಲಿದೆ. ಕೆ.ಆರ್.ನಗರ ತಾಲೂಕಿನಲ್ಲಿರುವ ಚುಂಚನಕಟ್ಟೆಯು ನಿಸರ್ಗರಮಣೀಯ ಸ್ಥಳವಾಗಿದ್ದು, ಇಲ್ಲಿ ಕಾವೇರಿಯು 7ತನ್ನ ವಯ್ಯಾರ ಪ್ರದರ್ಶಿಸುತ್ತಾ ಸುಮಾರು 400 ಅಡಿ ಅಗಲವಾಗಿ 60 ಅಡಿ ಎತ್ತರದಿಂದ ಧುಮುಕುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ಕಪ್ಪಡಿ
ಕಾವೇರಿ ನದಿ ತೀರದಲ್ಲಿರುವ ಪವಿತ್ರ ಸ್ಥಳ ಕಪ್ಪಡಿಯಾಗಿದ್ದು, ಮೈಸೂರಿನಿಂದ ಕೆ.ಆರ್.ನಗರ- ಚುಂಚನಕಟ್ಟೆ ಮಾರ್ಗವಾಗಿ ಸುಮಾರು 62 ಕಿ.ಮೀ ದೂರದಲ್ಲಿದೆ. ಇಲ್ಲಿ ಮಂಟೇಶ್ವರ ಸ್ವಾಮಿಗಳ ದ್ವೈತ ಶಿಷ್ಯರಲ್ಲೊಬ್ಬರಾದ ರಾಚಪ್ಪಾಜಿಯವರ ಹಾಗೂ ಸೋದರಿ ಚನ್ನಮ್ಮನವರ ಗದ್ದುಗೆಯಿದೆ.

Famous Tourists Places Around Mysuru District

ಬೆಟ್ಟದಪುರ
ಮೈಸೂರಿನಿಂದ 80 ಕಿ.ಮೀ. ದೂರದಲ್ಲಿರುವ ಬೆಟ್ಟದಪುರ ಹಲವು ವೈಶಿಷ್ಟ್ಯಗಳನ್ನು ಹೊಂದಿದ ಪಟ್ಟಣವಾಗಿದ್ದು, ಇಲ್ಲಿನ ಬೆಟ್ಟದ (2800 ಅಡಿ ಎತ್ತರ) ಮೇಲೆ ಇರುವ ಶಿಡ್ಲು ಮಲ್ಲಿಕಾರ್ಜುನ ದೇವಸ್ಥಾನ ಪ್ರಮುಖವಾಗಿದೆ.

ಸ್ವರ್ಣ ದೇಗುಲ ಬೈಲುಕುಪ್ಪೆ
ಮೈಸೂರಿನಿಂದ 83 ಕಿ.ಮೀ. ದೂರದ ಬೈಲುಕುಪ್ಪೆಯ ಟಿಬೆಟ್ ಕ್ಯಾಂಪ್‌ನಲ್ಲಿರುವ ಗೋಲ್ಡನ್ ಟೆಂಪಲ್ ನಿಜಕ್ಕೂ ಅದ್ಭುತವಾಗಿದೆ. ಇಲ್ಲಿ ಇನ್ನಷ್ಟು ವೀಕ್ಷಿಸಲಾರ್ಹ ತಾಣಗಳಿದ್ದು ವೀಕ್ಷಕರ ಗಮನಸೆಳೆಯುತ್ತವೆ.

ಗದ್ದುಗೆ
ಮೈಸೂರಿಗೆ 36 ಕಿ.ಮೀ. ದೂರದಲ್ಲಿರುವ ಗದ್ದುಗೆಗೆ ಬೋಗಾದಿ ಕರಿಮುದ್ದನಹಳ್ಳಿ ಮೂಲಕ ತೆರಳಬೇಕು. ಲಕ್ಷ್ಮಣತೀರ್ಥ ನದಿಯ ದಡದಲ್ಲಿರುವ ಕೆಂಡಗಣ್ಣೇಶ್ವರಸ್ವಾಮಿ ಗದ್ದುಗೆ ಆಕರ್ಷಣೆಯಲ್ಲೊಂದಾಗಿದೆ. ಇಲ್ಲಿ ದಿನನಿತ್ಯ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆಯಾದರೂ, ಕಾರ್ತಿಕ ಮಾಸದ ಕಡೆಯ ವಾರದಲ್ಲಿ ವಿಶೇಷ ಪೂಜೆಗಳು ಜರಗುತ್ತವೆ.

ಕಾರಾಪುರ
ಸಫಾರಿಗೆ ಹೇಳಿ ಮಾಡಿಸಿದಂತಿರುವ ಕಾರಾಪುರ ಮೈಸೂರಿಗೆ 75 ಕಿ.ಮೀ. ದೂರದಲ್ಲಿದ್ದು, ಎಚ್.ಡಿ.ಕೋಟೆ ತಾಲೂಕಿಗೆ ಸೇರಿದೆ. ಕಪಿಲಾ ಮತ್ತು ಕಬಿನಿ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡು ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನವಿದ್ದು ನಿಸರ್ಗರಮಣೀಯತೆಯನ್ನು ಮೈಗೂಡಿಸಿಕೊಂಡು ಆಕರ್ಷಿಸುತ್ತದೆ. ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಸೇರಿದಂತೆ ಖಾಸಗಿ ರೆಸಾರ್ಟ್‌ಗಳು ಇಲ್ಲಿದ್ದು ವಸತಿಗೆ ಯಾವುದೇ ತೊಂದರೆಯಿಲ್ಲ. ಸಫಾರಿ ವ್ಯವಸ್ಥೆಯಿದೆ.

ಕಬಿನಿ ಜಲಾಶಯ
ಕಬಿನಿ ಜಲಾಶಯವು ಮೈಸೂರಿನಿಂದ 58 ಕಿ.ಮೀ. ದೂರದಲ್ಲಿ ಬೀಚನಹಳ್ಳಿಯಲ್ಲಿದೆ. ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಅಣೆಕಟ್ಟೆಯು ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿಗೆ ಸುಮಾರು ಎಂಟು ಕಿ.ಮೀ. ದೂರದ ಜಲಾಶಯದ ಹಿನ್ನೀರಿನಲ್ಲಿ ಭೀಮನಕೊಲ್ಲಿಯಲ್ಲಿ ಮಲೆಮಹದೇಶ್ವರ ಸ್ವಾಮಿಯ ತೋರು ಗದ್ದಿಗೆಯಿದೆ.

ನುಗು ಜಲಾಶಯ
ಸುಮಾರು 67 ಕಿ.ಮೀ. ದೂರದಲ್ಲಿರುವ ನುಗು ಜಲಾಶಯವು ಬೀರ‍ವಾಳು ಗ್ರಾಮದಲ್ಲಿದೆ. ಈ ಜಲಾಶಯದ ಹಿನ್ನೀರಿನ ಅಭಯಾರಣ್ಯವು ನಿಸರ್ಗರಮಣೀಯತೆಯನ್ನು ಹೊಂದಿದ್ದು, ವನ್ಯಜೀವಿಗಳನ್ನು ಇಲ್ಲಿ ಕಾಣಬಹುದಾಗಿದೆ.

English summary
Dont forget to visit these famous tourist places when visiting mysuru district. Here is a list of places...,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X