• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೋಲಿನಿಂದಷ್ಟೇ ಗೆಲುವಿನ ಪಾಠ ಕಲಿಯೋದಕ್ಕೆ ಸಾಧ್ಯ!

|

ನಮಗೆ ಬೇರೆಯವರನ್ನು ಸೋಲಿಸಿ ಗೊತ್ತಿರಬಹುದು ಅಥವಾ ಬೇರೆಯವರ ಮುಂದೆ ಸೋತ ಅನುಭವವೂ ಇರಬಹುದು. ಆದರೆ ಸೋಲು-ಗೆಲುವು ಎನ್ನುವುದು ಈಗ ಕೇವಲ ಕ್ರೀಡೆಯಲ್ಲಷ್ಟೇ ಉಳಿದಿಲ್ಲ ಅದು ಬದುಕಿಗೂ ಅನ್ವಯಿಸುತ್ತದೆ.

ಹಿಂದಿನ ಕಾಲದಲ್ಲಿ ಹೊಟ್ಟೆಬಟ್ಟೆಗಿದ್ದರೆ ಸಾಕು. ಅಷ್ಟಕ್ಕೆ ಸಂಪಾದನೆ ಮಾಡಿಕೊಂಡು ನೆಮ್ಮದಿಯಾಗಿರುತ್ತಿದ್ದರು. ಬೇರೆಯವರನ್ನು ನೋಡಿ ಹಲಬುವ ಬದಲು ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಈಗ ಹಾಗಿಲ್ಲ ಕಾಲ ಬದಲಾಗಿದೆ.

ಇಷ್ಟಕ್ಕೂ ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಾರೆ ಗೊತ್ತಾ?

ಎಲ್ಲ ಕ್ಷೇತ್ರದಲ್ಲೂ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಸದಾ ಗೆಲುವಿನತ್ತಲೇ ಗುರಿಯಿಟ್ಟುಕೊಂಡು ಮುನ್ನಡೆಯುವುದು ಅನಿವಾರ್ಯವಾಗಿದೆ. ಗೆಲುವಿಗಾಗಿ ತಂತ್ರ, ಕುತಂತ್ರ, ಅನ್ಯಾಯ, ಭ್ರಷ್ಟಾಚಾರ ಹೀಗೆ ನಮ್ಮಿಂದ ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನು ಮಾಡುತ್ತಾ ಸಾಗುತ್ತಿದ್ದೇವೆ.

ಇದರಿಂದ ಹೇರಳ ಹಣವನ್ನು ಸಂಪಾದಿಸಿ ಕೂಡಿಡುತ್ತಿದ್ದರೂ ಅದರಿಂದ ದೈಹಿಕ ಮತ್ತು ಮಾನಸಿಕ ಎರಡು ಆರೋಗ್ಯವೂ ಇಲ್ಲದಾಗಿದೆ. ನಾವು ಏನೇ ಮಾಡಿದರೂ ನಮಗೊಬ್ಬ ಪ್ರತಿಸ್ಪರ್ಧಿ ಎಲ್ಲಿ ಹುಟ್ಟಿಬಿಡುತ್ತಾನೋ? ಎಂಬ ಭಯ ನಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ.

Astrology Tips: ಮಾನಸಿಕ ಒತ್ತಡ ನಿವಾರಣೆಗೆ ಯಾವ ರಾಶಿಯವರು ಏನು ಮಾಡಬೇಕು?

ತೋರ್ಪಡಿಕೆಯ ಬದುಕು; ಇಷ್ಟಕ್ಕೂ ನಾವು ಅನ್ಯ ಮಾರ್ಗವನ್ನು ಹಿಡಿದು ಸಂಪಾದಿಸಿದ್ದರೂ ಮಾನಸಿಕ ನೆಮ್ಮದಿ ಸಿಕ್ಕಿದೆಯಾ?. ಆರೋಗ್ಯವಾಗಿದ್ದೇವೆಯೇ?. ನೆಮ್ಮದಿಯ ನಿದ್ದೆ ಬಂದಿದೆಯಾ? ಹೀಗೆ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಹೆಚ್ಚಿನವುಗಳಿಗೆ ಇಲ್ಲ ಎಂಬ ಉತ್ತರವೇ ಬರುತ್ತದೆ.

ಈಗಿನ ತೋರಿಕೆಯ ಬದುಕಿನಲ್ಲಿ ನಾಲ್ಕು ಜನರ ಮುಂದೆ ತಮ್ಮ ಐಶ್ವರ್ಯ, ಸಂಪತ್ತು, ಐಷಾರಾಮಿ ಜೀವನವನ್ನು ತೋರ್ಪಡಿಸಬೇಕು. ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಒಂದೇ ಒಂದು ಕಾರಣಕ್ಕೆ ಅಥವಾ ಅಕ್ರಮವಾಗಿ ಮಾಡಿದ ಸಂಪಾದನೆಯಲ್ಲಿ ಒಂದಷ್ಟನ್ನು ಸಮಾಜಕ್ಕೆ ದಾನ ಮಾಡಿ ಅಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳುವ ಕಾರ್ಯವನ್ನು ಮಾಡುವ ಹಲವರು ತಮ್ಮೊಂದಿಗಿದ್ದಾರೆ. ಅವರು ಮಾಡುತ್ತಿರುವುದು ನಿಜಕ್ಕೂ ಸ್ವಾರ್ಥ ರಹಿತ ಸಮಾಜ ಸೇವೆನಾ? ಖಂಡಿತಾ ಅಲ್ಲ. ಅದು ತಮ್ಮ ಬೇಳೆ ಬೇಯಿಸಿಕೊಳ್ಳುವ ಮತ್ತು ತಮ್ಮ ಗೆಲುವಿಗಾಗಿ ಮಾಡಿಕೊಳ್ಳುತ್ತಿರುವ ಭದ್ರತೆ ಅಷ್ಟೆ.

ನಮ್ಮನ್ನು ನಾವು ಗೆಲ್ಲುವುದು; ಮನುಷ್ಯ ಜೀವನದಲ್ಲಿ ಸೋಲು ಗೆಲುವು ಸಹಜ. ಗೆಲುವಿಗೆ ಹಿಗ್ಗದೆ ಸೋಲಿಗೆ ಕುಗ್ಗದೆ ಎರಡನ್ನೂ ಸಮನಾಗಿ ಸ್ವೀಕರಿಸುವ ಮನಸ್ಥಿತಿ ತಮ್ಮದಾಗಿರಬೇಕು. ಸದಾ ಗೆಲುವೇ ನಮ್ಮದಾಗಿರುತ್ತೆ ಎಂಬ ಭ್ರಮೆಯಿಂದ ಹೊರಬರಬೇಕು.

ಏಕೆಂದರೆ ತಲೆಗೆ ಹಾಕಿದ ನೀರು ಕಾಲಿಗೆ ಬರುತ್ತೆ ವಿನಃ ಕಾಲಿಗೆ ಹಾಕಿದ ನೀರು ತಲೆಗೆ ಬರುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ಜೀವನ ನಡೆಸುವುದು ಅಗತ್ಯವಿದೆ. ಒಬ್ಬ ಗೆದ್ದಿದ್ದಾನೆ ಎಂದಾದರೆ ಮತ್ತೊಬ್ಬ ಸೋತಿದ್ದಾನೆ ಎಂದರ್ಥ. ಆಧ್ಯಾತ್ಮದಲ್ಲಿ ಚಿಂತಕರು ಹೇಳುತ್ತಾರೆ. ನಾವು ಬೇರೆಯವರನ್ನು ಗೆಲ್ಲುವುದರಲ್ಲಿ ಯಾವ ಶೂರತ್ವವೂ ಇಲ್ಲ. ನಾವು ನಮ್ಮನ್ನು ಗೆಲ್ಲುವುದರಲ್ಲಿ ನಿಜವಾದ ಶೂರತ್ವ ಅಡಗಿದೆ.

ಇದು ಅಚ್ಚರಿಯಾಗಿ ಕಾಣಬಹುದು. ಇದೇ ವಿಚಾರವನ್ನು ಭಗವಾನ್ ಬುದ್ಧ ಒಂದು ಕಡೆ ಹೇಳುತ್ತಾರೆ. ಒಬ್ಬ ರಣರಂಗದಲ್ಲಿ ಸಾವಿರಾರು ಯೋಧರನ್ನು ಸೋಲಿಸಿ ಗೆಲುವು ಪಡೆದಿರಬಹುದು. ಆದರೆ ಇದಕ್ಕಿಂತಲೂ ನಿತ್ಯದ ಬದುಕಿನ ಜಂಜಾಟದಲ್ಲಿ ತನ್ನನ್ನು ತಾನು ಗೆಲುವುದು ನಿಜವಾದ ಗೆಲುವು ಎಂದು.

ಬಹಳಷ್ಟು ಮಂದಿ ಬೇರೆಯವರ ವಿರುದ್ಧ ಹೋರಾಡಿ ಗೆದ್ದಿದ್ದರೂ ತಮ್ಮನ್ನು ಗೆಲ್ಲಲಾಗದೆ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಮುಂದಾಗುವುದನ್ನು ನಾವು ಆಗಾಗ್ಗೆ ಕಾಣುತ್ತಿರುತ್ತೇವೆ. ಹಾಗಾಗಿ ಮನುಷ್ಯನ ಬದುಕು ಮೇಲ್ನೋಟಕ್ಕೆ ಏನೂ ಅಲ್ಲ. ಆದರೆ ಇಲ್ಲಿ ಎಲ್ಲವೂ ಇದೆ ಎಂಬುವುದನ್ನು ಮಾತ್ರ ಯಾರೂ ಮರೆಯಬಾರದು.

ಗೆಲುವಿನ ನಿರೀಕ್ಷೆಯಲ್ಲಿರಬೇಕು; ಸೋತವನೂ ಮಾತ್ರ ಗೆಲುವನ್ನು ಅರ್ಥ ಮಾಡಿಕೊಳ್ಳಬಲ್ಲ. ಅಷ್ಟೇ ಅಲ್ಲ ಅದನ್ನು ಕಾಪಾಡಿಕೊಳ್ಳಬಲ್ಲ. ಆದರೆ ಗೆದ್ದವನು ಸೋತರೆ ಕಂಗಾಲಾಗಿ ಬಿಡುತ್ತಾನೆ. ಇಲ್ಲಿಗೆ ಬದುಕೇ ಮುಗಿದು ಹೋಯಿತು ಎಂದುಕೊಳ್ಳುತ್ತಾನೆ. ಹಾಗಾಗಿ ಗೆಲುವಿನ ಹಿಂದೆಯೇ ಸೋಲಿನ ನೆರಳಿದೆ ಎಂಬ ಎಚ್ಚರಿಕೆಯನ್ನು, ಸೋತವನು ನಾಳೆ ನಮಗೂ ಗೆಲುವಿದೆ ಎಂಬ ಭರವಸೆಯ ಬೆಳಕಲ್ಲಿ ಬದುಕಬೇಕು.

ಸೋಲು ಗೆಲುವು ಎರಡನ್ನು ಸಮಾನವಾಗಿ ಎದುರಿಸಲು ಮಾನಸಿಕವಾಗಿ ತಯಾರಿ ಮಾಡಿಕೊಳ್ಳಬೇಕು. ಗೆಲುವು ಒಂದೇ ಆದರೂ ಅದನ್ನು ಅನುಭವಿಸುವ ಮನಸ್ಥಿತಿ ಮಾತ್ರ ವಿಭಿನ್ನವಾಗಿರುತ್ತದೆ. ಜೂಜಿನಲ್ಲಿ ಗೆದ್ದವನಿಗೂ, ಕಷ್ಟಪಟ್ಟು ಆಟವಾಡಿ ಗೆದ್ದ ಕ್ರೀಡಾಪಟುವಿಗೂ ಗೆಲುವು ಒಂದೇ ಆದರೂ ಮನಸ್ಥಿತಿ ಬೇರೆಯಾಗಿರುತ್ತದೆ. ಇಬ್ಬರಿಗೂ ಗೆಲುವು ಹಣದ ರೂಪದಲ್ಲೇ ಬಂದಿದ್ದರೂ ಒಂದರಲ್ಲಿ ಸಿಕ್ಕ ತೃಪ್ತಿ, ಸಾರ್ಥಕ್ಯ ಮತ್ತೊಂದರಲ್ಲಿ ಇಲ್ಲ.

ಮೇಲ್ಮೋಟಕ್ಕೆ ಸ್ನೇಹ ಬಾಂಧವ್ಯ ಇದ್ದರೂ ನಮ್ಮೊಳಗೆ ಗೆಲುವಿನ ಹೋರಾಟ ಇದ್ದೇ ಇರುತ್ತದೆ. ಅವನಿಗಿಂತ ಮೇಲ್ದರ್ಜೆಗೆ ಹೋಗಬೇಕು. ಅವನ ಮುಂದೆ ಗೆಲುವು ನನ್ನದೇ ಆಗಿರಬೇಕು ಎಂದು ಸದಾ ಯೋಚಿಸುತ್ತಿರುತ್ತಾನೆ. ಅಷ್ಟೇ ಅಲ್ಲ ಅದಕ್ಕೆ ಬೇಕಾದ ಮಾರ್ಗಗಳನ್ನು ಹುಡುಕುತ್ತಿರುತ್ತೇವೆ.

ಗೆಲುವುಗಳು ಒಂದು ಹಂತದಲ್ಲಿ ನಮ್ಮದೇ ಆಗಿರಬಹುದು. ಗೆಲುವಿನ ಅಮಲಿನಲ್ಲಿ ಸೋತವರನ್ನು ಅಣಕಿಸುವುದು ಮಾತ್ರ ಮಹಾ ಪಾಪದ ಕೆಲಸ. ಕೆಲವೊಮ್ಮೆ ಗೆದ್ದವನು ಗೆಲುವಿನ ಖುಷಿಯಲ್ಲಿ ಮೈಮರೆತು ತಟಸ್ಥನಾಗಿಬಿಡಬಹುದು. ಆದರೆ ಸೋತವನು ಚಲನಶೀಲನಾಗಿರುತ್ತಾನೆ. ಆತ ಗೆಲುವಿಗಾಗಿ ಶ್ರಮಪಡುತ್ತಿರುತ್ತಾನೆ. ಅವನಲ್ಲಿ ಒಂದೇ ಒಂದು ಗುರಿ ಅದು ಗೆಲುವು. ಆ ಗೆಲುವಿಗಾಗಿ ಅವನು ಅವಿರತ ಶ್ರಮಿಸುತ್ತಿರುತ್ತಾನೆ. ಹಾಗಾಗಿ ಮುಂದೆ ಗೆದ್ದರೂ ಆ ಗೆಲುವನ್ನು ಜತನದಿಂದ ಕಾಯ್ದುಕೊಳ್ಳುತ್ತಾನೆ. ಏಕೆಂದರೆ ಸೋಲು ಅವನಿಗೆ ಗೆಲುವಿನ ಪಾಠ ಕಲಿಸಿರುತ್ತದೆ ಎನ್ನುವುದಂತು ಸತ್ಯ.

English summary
In this competition world we take failure as a challenge. Failure is not end it leads to success. By failure we must understand, learn and take our step to grow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X