ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಇತಿಹಾಸದಲ್ಲಿ ಯಾವ ಪ್ರಧಾನಿಗೂ ಪೂರ್ಣಾವಧಿ ಅಧಿಕಾರ ಪೂರೈಸಲು ಸಾಧ್ಯವಾಗಿಲ್ಲವೇಕೆ?

|
Google Oneindia Kannada News

ಇಸ್ಲಾಮಾಬಾದ್, ಏಪ್ರಿಲ್ 11: ಭಾರತದ ಎರಡು ನೆರೆ ದೇಶಗಳು ಸಮಸ್ಯೆಗಳ ಸರಮಾಲೆ ಎದುರಿಸುತ್ತಿವೆ. ಶ್ರೀಲಂಕಾ ದೇಶ ಆರ್ಥಿಕವಾಗಿ ತತ್ತರಿಸಿಹೋದರೆ, ಪಾಕಿಸ್ತಾನದಲ್ಲಿ ರಾಜಕೀಯ ವಿಪ್ಲವ ನಡೆದಿದೆ. ಪಾಕಿಸ್ತಾನದಲ್ಲಿ ರಾಜಕೀಯವಾಗಿ ವಿಕ್ಷಿಪ್ತವಾದ ಪರಿಸ್ಥಿತಿ ಅದಕ್ಕೆ ಶಾಪವಾಗಿ ಅಂಟಿಕೊಂಡಂತಿದೆ. ಪಾಕಿಸ್ತಾನದ 75 ವರ್ಷಗಳ ಇತಿಹಾಸದಲ್ಲಿ ಅದರ ಯಾವ ಪ್ರಧಾನ ಮಂತ್ರಿಗೂ ಐದು ವರ್ಷಗಳ ಪೂರ್ಣಾವಧಿ ಅಧಿಕಾರ ಅನುಭವಿಸಲು ಸಾಧ್ಯವಾಗಿಲ್ಲ. ಈಗ ಇಮ್ರಾನ್ ಖಾನ್ ಕೂಡ ಈ ಪಟ್ಟಿಗೆ ಸೇರಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ನಿನ್ನೆ ರಾತ್ರಿ ವಿಪಕ್ಷಗಳು ಮಂಡಿಸಿದ ಅವಿಶ್ವಾಸ ಮತದಲ್ಲಿ ಸೋಲನುಭವಿಸಿ, ಪದಚ್ಯುತಗೊಂಡಿದ್ದಾರೆ. ಪ್ರಧಾನಿ ಹುದ್ದೆ ಕಳೆದುಕೊಂಡಿದ್ದಾರೆ. 15 ದಿನಗಳ ಕಾಲ ಅವರು ನೂತನ ಪ್ರಧಾನಿ ಆಯ್ಕೆ ಆಗುವವರೆಗೂ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಹಜ ಅಧಿಕಾರ ಅವರಿಗೆ ಇರುವುದಿಲ್ಲ.

ಭಾರತ-ಪಾಕ್ ಮಧ್ಯೆ ವ್ಯತ್ಯಾಸ:
ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಏಕಕಾಲಕ್ಕೆ ಸ್ವಾತಂತ್ರ್ಯ ಪಡೆದವು. ಎರಡೂ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶಗಳೆನಿಸಿವೆ. ಭಾರತ ಜಾತ್ಯತೀತ ಮಾರ್ಗ ಹಿಡಿದರೆ ಪಾಕಿಸ್ತಾನ ಇಸ್ಲಾಮಿಕ್ ರಿಪಬ್ಲಿಕ್ ಆಗಿದೆ. ಎಪ್ಪತ್ತರ ದಶಕದಲ್ಲಿ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರಿದ ಘಟನೆ ಹೊರತುಪಡಿಸಿದರೆ ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆ ಬಹಳ ಗಟ್ಟಿಯಾಗಿ ನಿಂತಿದೆ. ಆದರೆ, ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದ್ದರೂ ಅದು ನೈಜವಾಗಿಲ್ಲ. ಅದರ ಅಧಿಕಾರವನ್ನು ಮಿಲಿಟರಿ ಪರೋಕ್ಷವಾಗಿ ನಿಯಂತ್ರಿಸುತ್ತದೆ. ಹೀಗಾಗಿ, ಸೇನೆಯ ತಾಳಕ್ಕೆ ತಕ್ಕಂತೆ ಅಲ್ಲಿಯ ಅಧಿಕಾರ ವ್ಯವಸ್ಥೆ ಕುಣಿಯುತ್ತದೆ.

1947ರಿಂದ ಇಲ್ಲಿಯವರೆಗೆ ಇಮ್ರಾನ್ ಖಾನ್ ಸೇರಿದಂತೆ ಯಾವ ಪಾಕ್ ಪ್ರಧಾನಿ ಕೂಡ ಐದು ವರ್ಷ ಪೂರ್ಣಾವಧಿ ಅಧಿಕಾರ ಪೂರ್ಣಗೊಳಿಸಲಾಗಿಲ್ಲ. ಇದಕ್ಕೆ ಇಂಥದ್ದೇ ಕಾರಣ ಎಂಬುದಿಲ್ಲ. ಕೆಲವರು ಕೊಲೆಯಾದರೆ, ಇನ್ನೂ ಕೆಲವರು ಕ್ಷಿಪ್ರ ರಾಜಕೀಯ ಕಾರ್ಯಾಚರಣೆಗೆ ಅಧಿಕಾರ ಕಳೆದುಕೊಂಡವರಿದ್ದಾರೆ.

 ಐದು ವರ್ಷ ಪೂರ್ಣಾವಧಿ ಅಧಿಕಾರ ಪೂರ್ಣಗೊಳಿಸಲಾಗಿಲ್ಲ

ಐದು ವರ್ಷ ಪೂರ್ಣಾವಧಿ ಅಧಿಕಾರ ಪೂರ್ಣಗೊಳಿಸಲಾಗಿಲ್ಲ

1) ಲಿಯಾಕತ್ ಅಲಿ ಖಾನ್ (1947-1950)
ಮೊಹಮ್ಮದ್ ಅಲಿ ಜಿನ್ನಾ ಅವರಂತೆ ಲಿಯಾಕತ್ ಅಲಿ ಖಾನ್ ಅವರು ಪಾಕಿಸ್ತಾನದ ಸಂಸ್ಥಾಪಕರಲ್ಲೊಬ್ಬರಾಗಿದ್ದಾರೆ. ಇವರು ಸ್ವತಂತ್ರ ಪಾಕಿಸ್ತಾನದ ಮೊದಲ ಪ್ರಧಾನಿ ಆಗಿದ್ದಾರೆ. ಅವರು ಪ್ರಧಾನಿ ಆಗಿದ್ದಾಗಲೇ ರಾವಲಪಿಂಡಿಯ ಸಾರ್ವಜನಿಕ ಸಭೆಯೊಂದರಲ್ಲಿ ಅವರನ್ನ ಗುಂಡಿಟ್ಟು ಹತ್ಯೆಗೈಯಲಾಯಿತು. 4 ವರ್ಷ 2 ತಿಂಗಳು ಅವರು ಪ್ರಧಾನಿ ಆಗಿದ್ದರು. ಇನ್ನೂ 10 ತಿಂಗಳು ಅವರ ಅಧಿಕಾರ ಬಾಕಿ ಇತ್ತು. ಆದರೂ ಕೂಡ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಅವಧಿ ಪಿಎಂ ಆದ ದಾಖಲೆ ಈಗಲೂ ಅವರ ಹೆಸರಿನಲ್ಲೇ ಇದೆ.

2) ಖವಾಜ ನಜೀಮುದ್ದೀನ್ (1951-53)
ಲಿಯಾಕತ್ ಖಾನ್ ನಂತರ ಪ್ರಧಾನಿ ಆದ ನಜೀಮುದ್ದೀನ್ ಅವರು ಗುಲಾಂ ಮುಹಮ್ಮದ್ ಮಲಿಕ್ ಅವರನ್ನ ಗವರ್ನರ್ ಜನರಲ್ ಆಗಿ ನೇಮಕ ಮಾಡಿದರು. ವಿಪರ್ಯಾಸವೆಂದರೆ ಗವರ್ನರ್ ಜನರಲ್ ಅವರು ತಮ್ಮ ವಿಶೇಷಾಧಿಕಾರ ಬಳಸಿ ನಜೀಮುದ್ದೀನ್ ಸರಕಾರವನ್ನೇ ವಿಸರ್ಜಿಸಿದರು.

 ಪಾಕಿಸ್ತಾನ ಪ್ರಧಾನಿಗಳ ಪೂರ್ಣಾವಧಿ ಆಗಿಲ್ಲವೇಕೆ

ಪಾಕಿಸ್ತಾನ ಪ್ರಧಾನಿಗಳ ಪೂರ್ಣಾವಧಿ ಆಗಿಲ್ಲವೇಕೆ

3) ಮೊಹಮ್ಮದ್ ಅಲಿ ಬೋಗ್ರಾ (1953-55)
ಗವರ್ನರ್ ಜನರಲ್ ಗುಲಾಂ ಮುಹ್ಮದ್ ಮಲಿಕ್ ಅವರು ನಜೀಮುದ್ದೀನ್ ಸರಕಾರವನ್ನು ಪತನಗೊಳಿಸಿದ ಬಳಿಕ ಮೊಹಮ್ಮದ್ ಅಲಿ ಬೋಗ್ರಾ ಅವರನ್ನ ಪ್ರಧಾನಿಯಾಗಿ ನೇಮಿಸಿ ಹೊಸ ಸರಕಾರ ತಂದರು. ಎರಡು ವರ್ಷ ಬಳಿಕ ಅಂದಿನ ಹಂಗಾಮಿ ಗವರ್ನರ್ ಜನರಲ್ ಇಸ್ಕಂದರ್ ಮಿರ್ಜಾ ಅವರು ಹಿಂದಿನ ಗವರ್ನರ್ ಜನರಲ್ ಗುಲಾಂ ಮುಹಮ್ಮದ್ ಮತ್ತು ಪ್ರಧಾನಿ ಬೋಗ್ರಾ ಅವರನ್ನ ಪದಚ್ಯುತಗೊಳಿಸಿದರು. ನಂತರ ಬೋಗ್ರಾ ಅವರನ್ನ ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿಯಾಗಿ ಕಳುಹಿಸಲಾಯಿತು.

4) ಮೊಹಮ್ಮದ್ ಅಲಿ ಚೌಧರಿ (1955-56):
ಮುಸ್ಲಿಮ್ ಲೀಗ್ ಪಕ್ಷದ ಚೌಧರಿ ಮೊಹಮ್ಮದ್ ಅಲಿ ಅವರ ಕಾಲಾವಧಿಯಲ್ಲಿ ಪಾಕಿಸ್ತಾನಕ್ಕೆ ಸಂವಿಧಾನದ ಸೇರ್ಪಡೆ ಆಗಿದ್ದು. ಆದರೆ, ಅವರ ಪಕ್ಷವೇ ಅವಿಶ್ವಾಸ ಮತ ನಿರ್ಣಯ ಹೊರಡಿಸಿದ್ದರಿಂದ ಮೊಹಮ್ಮದ್ ಅಲಿ ಅಧಿಕಾರ ಕಳೆದುಕೊಂಡರು. ಅವರು 13 ತಿಂಗಳು ಮಾತ್ರ ಅಧಿಕಾರ ಅನುಭವಿಸಲು ಸಾಧ್ಯವಾಯಿತು.

 ಕೇವಲ 55 ದಿನಗಳ ಕಾಲ ಮಾತ್ರ ಅಧಿಕಾರ

ಕೇವಲ 55 ದಿನಗಳ ಕಾಲ ಮಾತ್ರ ಅಧಿಕಾರ

5) ಹುಸೇನ್ ಶಾಹೀದ್ ಸುಹ್ರಾವಾರ್ಡಿ (1956-57):
ಹಿಂದಿನ ಪ್ರಧಾನಿ ಮೊಹಮ್ಮದ್ ಅಲಿಯಂತೆ ಸುಹ್ರಾವಾರ್ಡಿ ಅವರೂ ಕೇವಲ 13 ತಿಂಗಳು ಮಾತ್ರ ಆಡಳಿತ ನಡೆಸಲು ಸಾಧ್ಯವಾಯಿತು. ಇಲ್ಲಿಯೂ ಅವರ ಸ್ವಂತ ಪಕ್ಷದ ಬೆಂಬಲ ಕಳೆದುಕೊಂಡು ಅವರು ಅಧಿಕಾರದಿಂದ ಇಳಿಯಬೇಕಾಯಿತು. ಆಗಿನ ಅಧ್ಯಕ್ಷ ಇಸ್ಕಂದರ್ ಮಿರ್ಜಾ ಮತ್ತು ಸುಹ್ರಾವಾರ್ಡಿ ನಡುವಿನ ಸಂಬಂಧ ಹಳಸಿಹೋಗಿದ್ದು ಇದಕ್ಕೆ ಕಾರಣ.

6) ಇಬ್ರಾಹಿಂ ಇಸ್ಮಾಯಿಲ್ ಚುಂದ್ರಿಗರ್ (1957):
ಇವರು ಕೇವಲ 55 ದಿನಗಳ ಕಾಲ ಮಾತ್ರ ಅಧಿಕಾರದಲ್ಲಿ ಇದ್ದದ್ದು. ಸಂಸತ್‌ನಲ್ಲಿ ಬಹುಮತ ಸಾಬೀತುಪಡಿಸಲು ಅಸಾಧ್ಯವಾಗಿ ಅವರು ರಾಜೀನಾಮೆ ನೀಡಬೇಕಾಯಿತು.

 13 ವರ್ಷ ಕಾಲ ಪಾಕಿಸ್ತಾನದಲ್ಲಿ ಪ್ರಧಾನಿಯೇ ಇರಲಿಲ್ಲ

13 ವರ್ಷ ಕಾಲ ಪಾಕಿಸ್ತಾನದಲ್ಲಿ ಪ್ರಧಾನಿಯೇ ಇರಲಿಲ್ಲ

7) ಫಿರೋಜ್ ಖಾನ್ ನೂನ್ (1957-58):
ಪಾಕ್ ಅಧ್ಯಕ್ಷ ಇಸ್ಕಂದರ್ ಮಿರ್ಜಾ ಅವರು ಅಳೆದು ತೂಗಿ ಫಿರೋಜ್ ಖಾನ್ ನೂನ್ ಅವರನ್ನು ಪ್ರಧಾನಿ ಆಗಿ ಆಯ್ಕೆ ಮಾಡಿಕೊಂಡರು. ಆದರೆ, ಇವರ ಸ್ನೇಹ 10 ತಿಂಗಳೂ ಬಾಳಲಿಲ್ಲ. ಪ್ರಧಾನಿ ಫಿರೋಜ್ ಖಾನ್ ಅವರನ್ನು ವಜಾಗೊಳಿಸಿದ ಮಿರ್ಜಾ ಪಾಕಿಸ್ತಾನದಲ್ಲಿ ಮಾರ್ಷಲ್ ಲಾ ಅಥವಾ ತಾತ್ಕಾಲಿಕ ಮಿಲಿಟರಿ ಆಡಳಿತ ಘೋಷಿಸಿದರು. ಸೇನಾ ಮುಖ್ಯಸ್ಥ ಆಯುಬ್ ಖಾನ್ ಅವರನ್ನ ಮಿಲಿಟರಿ ಕಾನೂನು ಮುಖ್ಯ ಆಡಳಿತಗಾರನಾಗಿ ನೇಮಕ ಮಾಡಿ ಬಳಿಕ ಪ್ರಧಾನಿಯಾಗಿಯೂ ಮಾಡಿದರು. ಇದಾದ ಬಳಿಕ ಆಯುಬ್ ಖಾನ್ ಅವರು ಪ್ರಧಾನಮಂತ್ರಿ ಮತ್ತು ಅಧ್ಯಕ್ಷರ ಕಚೇರಿಗಳನ್ನ ವಿಲೀನಗೊಳಿಸಿ ಇಸ್ಕಂದರ್ ಮಿರ್ಜಾ ಅವರನ್ನೇ ಪದಚ್ಯುತಗೊಳಿಸಿ ಪಾಕಿಸ್ತಾನದ ಅಧ್ಯಕ್ಷರಾದರು. ಇವರು 1958ರಿಂದ 1968ರವರೆಗೆ 10 ವರ್ಷ ಅಧಿಕಾರದಲ್ಲಿ ಇದ್ದದ್ದು ಹೌದು. ಆದರೆ, ಪ್ರಧಾನಿಯಾಗಿಯಲ್ಲ, ಅಧ್ಯಕ್ಷರಾಗಿ. 1958ರಿಂದ 13 ವರ್ಷ ಕಾಲ ಪಾಕಿಸ್ತಾನದಲ್ಲಿ ಪ್ರಧಾನಿಯೇ ಇರಲಿಲ್ಲ.

 ಜುಲ್ಫಿಕರ್ ಅಲಿ ಭುಟ್ಟೋ ಸಲಹೆ ಮೇರೆಗೆ ಪಿಎಂ

ಜುಲ್ಫಿಕರ್ ಅಲಿ ಭುಟ್ಟೋ ಸಲಹೆ ಮೇರೆಗೆ ಪಿಎಂ

8) ನೂರುಲ್ ಅಮಿನ್ (1971):
ಆಯುಬ್ ಖಾನ್ ಅವರ ನಂತರ ಪಾಕಿಸ್ತಾನದ ಅಧ್ಯಕ್ಷರಾದ ಯಾಹ್ಯಾ ಖಾನ್ ಅವರು 1971, ಡಿಸೆಂಬರ್ 7ರಂದು ಜುಲ್ಫಿಕರ್ ಅಲಿ ಭುಟ್ಟೋ ಸಲಹೆ ಮೇರೆಗೆ ನುರುಲ್ ಅಮಿನ್ ಅವರನ್ನು ಪ್ರಧಾನಿ ಆಗಿ ನೇಮಕ ಮಾಡಿದರು. ಆದರೆ, ನೂರುಲ್ ಅವರು ಕೇವಲ 13 ದಿನ ಮಾತ್ರ ಪ್ರಧಾನಿ ಆಗಲು ಸಾಧ್ಯವಾಯಿತು.

9) ಜುಲ್ಫಿಕರ್ ಅಲಿ ಭುಟ್ಟೋ (1973-1977):
1971ರ ಬಾಂಗ್ಲಾದೇಶ ವಿಮೋಚನ ಯುದ್ಧದ ಬಳಿಕ ಯಾಹ್ಯಾ ಖಾನ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಜುಲ್ಫಿಕರ್ ಅವರು ಹೊಸ ಅಧ್ಯಕ್ಷರಾದರು 1973ರಲ್ಲಿ ಪಾಕಿಸ್ತಾನ ಹೊಸ ಸಂವಿಧಾನವನ್ನು ಅಳಡಿಸಿಕೊಂಡಿತು. ಅದೇ ವರ್ಷ ಆಗಸ್ಟ್ 14ರಂದು ಜುಲ್ಫಿಕರ್ ಅಲಿ ಭುಟ್ಟೋ ಪ್ರಧಾನಿ ಆದರು. ಬ್ಯಾಂಕ್‌ಗಳು ಮತ್ತು ವಿವಿಧ ಉದ್ದಿಮೆಗಳ ರಾಷ್ಟ್ರೀಕರಣ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನ ಕೈಗೊಂಡರು.

ಆದರೆ ಜುಲ್ಫಿಕರ್ ಅಲಿ ಭುಟ್ಟೋ ವಿರುದ್ಧ ಕೊನೆ ಪ್ರಕರಣವೊಂದು ಸುತ್ತಿಕೊಂಡಿತು. ಪರಿಣಾಮ 1977ರಲ್ಲಿ ಅವರು ಬಂಧಿತರಾದರು. ನ್ಯಾಯಾಲಯಗಳು ಅವರಿಗೆ ಮರಣದಂಡನೆ ಶಿಕ್ಷ ವಿಧಿಸಿದವು. 1979, ಏಪ್ರಿಲ್ 4ರಂದು ಅವರನ್ನ ಗಲ್ಲಿಗೇರಿಸಲಾಯಿತು. 4 ವರ್ಷ ಸಮೀಪ ಕಾಲದಷ್ಟು ಅವರು ಪ್ರಧಾನಿಯಾಗಿ ಆಡಳಿತ ನಡೆಸಿದ್ದರು.

 35ನೇ ವಯಸ್ಸಿನಲ್ಲಿ ಪ್ರಧಾನಿ

35ನೇ ವಯಸ್ಸಿನಲ್ಲಿ ಪ್ರಧಾನಿ

10): ಮುಹಮ್ಮದ್ ಖಾನ್ ಜುನೇಜೋ (1985-88):
1985ರಲ್ಲಿ ಮುಹಮ್ಮದ್ ಖಾನ್ ಜುನೇಜೋ ಅವರನ್ನು ಪ್ರಧಾನಿ ಆಗಿ ನೇಮಕ ಮಾಡಲಾಯಿತು. ಆದರೆ, 1988ರಲ್ಲಿ ಆಗಿನ ಅಧ್ಯಕ್ಷ ಜಿಯಾ ಉಲ್ ಹಕ್ ಅವರು ಪ್ರಧಾನಿಯನ್ನು ವಜಾಗೊಳಿಸಿದರು.

11) ಬೆನಜಿರ್ ಭುಟ್ಟೋ (1988-90):
1979ರಲ್ಲಿ ಗಲ್ಲಿಗೇರಿಸಲಾದ ಜುಲ್ಫಿಕರ್ ಅಲಿ ಭುಟ್ಟೋ ಅವರ ಮಗಳು ಬೆನಜೀರ್ ಭುಟ್ಟೋ 35ನೇ ವಯಸ್ಸಿನಲ್ಲಿ ಪ್ರಧಾನಿಯಾದರು. ಪ್ರಜಾತಂತ್ರೀಯವಾಗಿ ಪ್ರಧಾನಿಯಾದ ಪಾಕಿಸ್ತಾನದ ಮೊದಲ ಮಹಿಳಾ ಪ್ರಧಾನಿ ಅವರು. ಪಾಕಿಸ್ತಾನದ ಅತ್ಯಂತ ಕಿರಿಯ ಪ್ರಧಾನಿಯೂ ಅವರಾಗಿದ್ದಾರೆ. ಆದರೆ, ಎರಡೇ ವರ್ಷದಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಆಗಿನ ಅಧ್ಯಕ್ಷ ಗುಲಾಮ್ ಇಶಾಕ್ ಖಾನ್ ಅವರು ಭುಟ್ಟೋ ಅವರನ್ನ ಪದಚ್ಯುತಗೊಳಿಸಿದರು.

 ಭುಟ್ಟೋ ಬಳಿಕ ಪ್ರಧಾನಿಯಾದ ನವಾಜ್ ಷರೀಫ್

ಭುಟ್ಟೋ ಬಳಿಕ ಪ್ರಧಾನಿಯಾದ ನವಾಜ್ ಷರೀಫ್

12) ನವಾಜ್ ಷರೀಫ್ (1990-93):
ಭುಟ್ಟೋ ಬಳಿಕ ಪ್ರಧಾನಿಯಾದ ನವಾಜ್ ಷರೀಫ್ ಕೇವಲ 3 ವರ್ಷ ಮಾತ್ರ ಆಡಳಿತ ನಡೆಸಲು ಸಾಧ್ಯವಾಯಿತು. 1993, ಏಪ್ರಿಲ್ 18ರಂದು ಅಧ್ಯಕ್ಷ ಗುಲಾಮ್ ಇಶಾಕ್ ಖಾನ್ ಅವರು ಲೋಕಸಭೆಯನ್ನು ವಿಸರ್ಜಿಸಿದರು.

13) ಮೊಯೀನುದ್ದೀನ್ ಖುರೇಷಿ (1993):
ನವಾಜ್ ಷರೀಫ್ ಸರಕಾರ ಪತನದ ಬಳಿಕ ಮೊಹೀನುದ್ದೀನ್ ಖುರೇಷಿ ಅವರನ್ನ ಹಂಗಾಮಿ ಪಿಎಂ ಆಗಿ ನೇಮಿಸಲಾಯಿತು. ಮೂರು ತಿಂಗಳಲ್ಲಿ ಪಾಕಿಸ್ತಾನದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಿ ಅವರು ಪದಚ್ಯುತಗೊಳ್ಳಬೇಕಾಯಿತು.

 ಮೂರು ವರ್ಷ ಕಾಲ ಆಡಳಿತ

ಮೂರು ವರ್ಷ ಕಾಲ ಆಡಳಿತ

14) ಬೆನಜೀರ್ ಭುಟ್ಟೋ (1993-96):
ಇವರು ಎರಡನೇ ಬಾರಿ ಪ್ರಧಾನಿ ಆಗುವ ಸಂದರ್ಭ ಒದಗಿಬಂದಿತು. ಮೊದಲ ಅವಧಿಯಲ್ಲಿ 2 ವರ್ಷ ಅಧಿಕಾರ ಅನುಭವಿಸಿದರೆ, ಎರಡನೇ ಅವಧಿಯಲ್ಲಿ ಮೂರು ವರ್ಷ ಕಾಲ ಆಡಳಿತ ನಡೆಸಲು ಅವರು ಶಕ್ಯರಾದರು. ವಿಚಿತ್ರವೆಂದರೆ ಭ್ರಷ್ಟಾಚಾರ ಆರೋಪಗಳ ಕಾರಣವೊಡ್ಡಿ ಮತ್ತೊಮ್ಮೆ ಅಂದಿನ ಅಧ್ಯಕ್ಷರು ಭುಟ್ಟೋ ಅವರನ್ನು ವಜಾಗೊಳಿಸಿದರು.

15) ನವಾಜ್ ಷರೀಫ್ (1997-99):
ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ನವಾಜ್ ಷರೀಫ್ ಕೂಡ ಎರಡನೇ ಬಾರಿ ಪ್ರಧಾನಿ ಆದರು. ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿ ಪರ್ವೇಜ್ ಮುಷರಫ್ ಅವರನ್ನ ನೇಮಕ ಮಾಡಿದ್ದು ನವಾಜ್ ಷರೀಫ್ ಅವರೆಯೇ. ಆದರೆ, ಅಂತಿಮವಾಗಿ ಪರ್ವೇಜ್ ಮುಷರಫ್ ಅವರು ನವಾಜ್ ಷರೀಫ್ ಅವರನ್ನೇ ಉಚ್ಚಾಟಿಸಿ ಅಧ್ಯಕ್ಷರಾದರು. ಪ್ರಧಾನಿ ಹುದ್ದೆಯನ್ನೇ 2002ರವರೆಗೆ ಬಂದ್ ಮಾಡಿದರು.

 ಪರ್ವೇಜ್ ಮುಷರಫ್ ಆಪ್ತ

ಪರ್ವೇಜ್ ಮುಷರಫ್ ಆಪ್ತ

16) ಜಫರುಲ್ಲಾ ಖಾನ್ ಜಮಾಲಿ (2002-04):

ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ತಮ್ಮ ಆಪ್ತರೆನಿಸಿದ್ದ ಜಫಾರುಲ್ಲಾ ಖಾನ್ ಜಮಾಲಿ ಅವರನ್ನು ಪ್ರಧಾನಿ ಆಗಿ ನೇಮಕ ಮಾಡಿದರು. ಆದರೆ, ಇಬ್ಬರ ಸಂಬಂಧ ಹಳಸಿದ್ದರಿಂದ ಜಮಾಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು.

17) ಚೌಧರಿ ಶುಜಾತ್ ಹುಸೇನ್ (2004):
ಜಮಾಲಿ ನಿರ್ಗಮದ ಬಳಿಕ ಶುಜಾತ್ ಹುಸೇನ್ ಅವರು ಎರಡು ತಿಂಗಳ ಕಾಲ ಹಂಗಾಮಿ ಪ್ರಧಾನಿಯಾದರು.

18) ಶೌಕತ್ ಅಜೀಜ್ (2004-07):
ಹಣಕಾಸು ಸಚಿವರಾಗಿದ್ದ ಶೌಕತ್ ಅಜೀಜ್ ಅವರು ಮೂರು ವರ್ಷ ಕಾಲ ಪಾಕಿಸ್ತಾನದ ಪ್ರಧಾನಿ ಆಗಿ ಕಾರ್ಯನಿರ್ವಹಿಸಿದರು. ಇವರು ತಮ್ಮ ಸಂಸದ ಸ್ಥಾನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಪ್ರಧಾನಿ ಸ್ಥಾನದಿಂದ ಹಿಂದಕ್ಕೆ ಸರಿಯಬೇಕಾಯಿತು.

 ಅತಂತ್ರ ಲೋಕಸಭೆ ಇದ್ದಾಗ ಪಿಎಂ

ಅತಂತ್ರ ಲೋಕಸಭೆ ಇದ್ದಾಗ ಪಿಎಂ

19) ಯೂಸುಫ್ ರಾಜಾ ಜಿಲಾನಿ (2008-12):
ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರದೇ ಅತಂತ್ರ ಲೋಕಸಭೆ ನಿರ್ಮಾಣವಾಯಿತು. ಆಗ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಪಕ್ಷದ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ರಚನೆಯಾಗಿ ಯೂಸುಫ್ ರಾಜಾ ಜಿಲಾನಿ ಪ್ರಧಾನಿಯಾದರು. ನಾಲ್ಕು ವರ್ಷ ಆಡಳಿತ ನಡೆಸಿದ ಇವರ ಮೇಲೆ ಭ್ರಷ್ಟಾಚಾರ ಆರೋಪಗಳ ಕರಿನೆರಳು ಬಿದ್ದು, ಅಂತಿಮವಾಗಿ ಸುಪ್ರೀಂ ಕೋರ್ಟ್ ಜಿಲಾನಿ ಅವರನ್ನು ವಜಾಗೊಳಿಸಿರು.

20) ರಾಜಾ ಪರ್ವೆಜ್ ಅಷ್ರಫ್ (2012-13):
ಜಿಲಾನಿ ಬಳಿಕ ಅಷ್ರಫ್ ಪರ್ವೇಜ್ ಅವರನ್ನ ಪ್ರಧಾನಿಯಾಗಿ ಮಾಡಲಾಯಿತು. ಆದರೆ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಆರೋಪ ಕೇಳಿಬಂದು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಅಷ್ರಫ್ ಬಂಧನವಾಗಿ ಅವರ ಅಧಿಕಾರಾವಧಿ ಕೇವಲ 9 ತಿಂಗಳಿಗೆ ಮೊಟಕುಗೊಂಡಿತು.

 ಮೂರನೇ ಬಾರಿಗೆ ಪಾಕಿಸ್ತಾನದ ಪ್ರಧಾನಿ

ಮೂರನೇ ಬಾರಿಗೆ ಪಾಕಿಸ್ತಾನದ ಪ್ರಧಾನಿ

21) ನವಾಜ್ ಷರೀಫ್ (2013-2017):
ಸಾರ್ವತ್ರಿಕ ಚುನಾವಣೆಗಳನ್ನು ಬಹುಮತದಿಂದ ಗೆಲ್ಲುವ ಮೂಲಕ ನವಾಜ್ ಷರೀಫ್ ಮೂರನೇ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾದರು. ಆದರೆ, ಪನಾಮ ಪೇಪರ್ಸ್ ಹಗರಣದಲ್ಲಿ ನವಾಜ್ ಷರೀಫ್ ಅವರನ್ನ ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿತು. ಅಷ್ಟೇ ಅಲ್ಲ, ಅಜೀವ ಪರ್ಯಂತ ಅವರು ಸಾರ್ವಜನಿಕ ಹುದ್ದೆಗಳನ್ನ ಅಲಂಕರಿಸದಂತೆ ನಿರ್ಬಂಧ ಹೇರಿತು. ಅಕ್ರಮ ಆಸ್ತಿ ಪ್ರಕರಣದಲ್ಲಿ ಅವರು ದೋಷಿ ಎಂದು ಸಾಬೀತಾಗಿ 10 ವರ್ಷ ಸಜೆ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. ಸದ್ಯ ಅವರು ಜಾಮೀನಿನ ಮೇಲಿದ್ದು ಲಂಡನ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.

22) ಶಾಹಿದ್ ಖಾಕನ್ ಅಬ್ಬಾಸಿ (2017-18):
ನವಾಜ್ ಷರೀಫ್ ಪತನದ ಬಳಿಕ ಶಾಹಿದ್ ಅವರು ಪಾಕಿಸ್ತಾನದ ಹಂಗಾಮಿ ಪ್ರಧಾನಿ ಆಗಿ ಉಳಿದ ಅಧಿಕಾರಾವಧಿ ಪೂರ್ಣಗೊಳಿಸಿದರು. ಇದಾದ ಬಳಿಕ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಮೊದಲ ಬಾರಿಗೆ ಅಧಿಕಾರ ಬಂದು, ಅವರು ಪ್ರಧಾನಿ ಆದರು. ಆದರೆ, ಲೋಕಸಭೆಯಲ್ಲಿ ಅವರು ಬಹುಮತ ಕಳೆದುಕೊಂಡು ಈಗ ಅಧಿಕಾರ ತ್ಯಜಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)

Recommended Video

ಹೀಗೆ ಆದ್ರೆ ಚೆನ್ನೈ ತಂಡಕ್ಕೆ ಆಘಾತ ಖಂಡಿತ|Oneindia Kannada

English summary
No elected Prime Minister in Pakistan has successfully completed their 5-year tenure since 1947.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X