ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಯೊಬ್ಬ ಮನುಷ್ಯ ಕೂಡಾ ಒಂದು ಬೀಗವಿದ್ದಂತೆ : ರಾಮಕೃಷ್ಣ ಹೆಗಡೆ

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

ಇಂದು (ಆಗಸ್ಟ್ 29) ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ 93ನೇ ಜನ್ಮದಿನ. ಅದರ ನೆನಪಿಗಾಗಿ ಹಿರಿಯ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ಈ ಬರಹ. ದಶಕಗಳ ಹಿಂದೆ ರಾಮಕೃಷ್ಣ ಹೆಗಡೆ ಅವರನ್ನು ಭೇಟಿ ಮಾಡಿದಾಗ, ಹೆಗಡೆ ಅವರು ಅಂದಿನ ರಾಜಕೀಯ ಸನ್ನಿವೇಶವನ್ನು ಉದ್ದೇಶಿಸಿ ಆಡಿದ ಅರ್ಥಪೂರ್ಣವಾದ ಮಾತುಗಳನ್ನು ಓದುಗರ ಮುಂದಿಟ್ಟಿದ್ದಾರೆ ವಿಠ್ಠಲಮೂರ್ತಿ.

ನಿಮ್ಮ ಬಳಿ ದೊಡ್ಡದೊಂದು ಕೀ ಬಂಚೇ ಇದೆ. ಆದರೆ ಒಂದು ಬೀಗವನ್ನೂ ಓಪನ್ ಮಾಡಲಾರಿರಿ.ಎಲ್ರೀ ದಿನೇಶ್. ನಿಮ್ಮ ಸಾಹೇಬರು ಸಿಗುತ್ತಲೇ ಇಲ್ಲ? ಓಪನ್ ಆಗದ ಬೀಗದಂತಾಗಿ ಹೋಗಿದ್ದಾರೆ. ಈ ಬೀಗ ಬಿಡಿಸುವುದು ಹೇಗೆ ಅನ್ನುವುದೇ ಅರ್ಥವಾಗುತ್ತಿಲ್ಲವಲ್ರೀ? ಅಂತ ಕಾಂಗ್ರೆಸ್ ನಾಯಕ ಪರಮೇಶ್ವರ್ (ಈಗ ಉಪಮುಖ್ಯಮಂತ್ರಿ) ಅವರ ಆಪ್ತ ದಿನೇಶ್ ಗೂಳಿಗೌಡರಿಗೆ ಮೊನ್ನೆ ತಮಾಷೆ ಮಾಡಿದೆ.

ರಾಮಕೃಷ್ಣ ಹೆಗಡೆ ಬದುಕಿದ್ದಿದ್ದರೆ ಇವತ್ತಿಗೆ 92 ವರ್ಷವಾಗುತ್ತಿತ್ತು!ರಾಮಕೃಷ್ಣ ಹೆಗಡೆ ಬದುಕಿದ್ದಿದ್ದರೆ ಇವತ್ತಿಗೆ 92 ವರ್ಷವಾಗುತ್ತಿತ್ತು!

ಅಂದ ಹಾಗೆ ಪರಮೇಶ್ವರ್ ಅವರು ನನಗೆ ಇಪ್ಪತ್ತೆಂಟು ವರ್ಷಗಳಿಂದ ಪರಿಚಿತರು. ನಾನು ಬೆಂಗಳೂರಿನಲ್ಲಿ ಪತ್ರಿಕೋದ್ಯಮಕ್ಕೆ ನುಗ್ಗಿದ ಸಂದರ್ಭದಲ್ಲೇ ಮೊಟ್ಟ ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಬಂದ ಜನನಾಯಕ ಅವರು. ಇವತ್ತಿಗೂ ತಮ್ಮ ಸಾರ್ವಜನಿಕ ನಡವಳಿಕೆಗೆ ಹೆಸರು ವಾಸಿಯಾಗಿರುವ ಕರ್ನಾಟಕದ ಕೆಲವೇ ನಾಯಕರಲ್ಲಿ ಪರಮೇಶ್ವರ್ ಒಬ್ಬರು. ಹಾಗೆಯೇ ದಿ ಬೆಸ್ಟ್ ಲಿಸನರ್ ಕೂಡಾ. ಎದುರಿಗಿದ್ದವರು ಹೇಳುವುದನ್ನು ಕೇಳುವುದಕ್ಕೆ ಹೆಚ್ಚು ಟೈಮು ಕೊಡುವ, ಸ್ಪಂದಿಸುವ ಪರಮೇಶ್ವರ್ ನಿಜಕ್ಕೂ ದೊಡ್ಡ ಮನಸ್ಸಿನವರು.

Every man is like lock - Ramakrishna Hegde

ನನಗೆ ಸದಾಶಿವನಗರದಲ್ಲಿರುವ ಅವರ ಮನೆಯ ಲಾನ್ (ಹುಲ್ಲುಹಾಸಿನ ನೆಲ) ಅಂದರೆ ತುಂಬ ಇಷ್ಟ. ಲಾನ್ ಪಕ್ಕದಲ್ಲಿರುವ ಗಾಜಿನ ಕೊಠಡಿಯಲ್ಲಿ ಕುಳಿತು ಪರಮೇಶ್ವರ್ ಅವರೊಂದಿಗೆ ಟೀ ಕುಡಿಯುವುದು ಇವತ್ತಿಗೂ ನನಗೆ ಆಹಾ ಎನ್ನುವಷ್ಟು ಪ್ರಿಯ. ಹೀಗಾಗಿ ಸಾಧ್ಯವಿದ್ದಾಗಲೆಲ್ಲ ಅಲ್ಲಿಗೆ ಹೋಗುತ್ತೇನೆ. ಒಂದು ದಿವ್ಯವಾದ ಮೌನ ಇಡೀ ವಾತಾವರಣವನ್ನು ಆವರಿಸಿರುತ್ತದೆ. ಸ್ವತ: ಪರಮೇಶ್ವರ್ ಅವರು ಮಾತನಾಡುತ್ತಿದ್ದರೂ ಆ ದಿವ್ಯ ಮೌನಕ್ಕೆ ಭಂಗ ಬರುವುದಿಲ್ಲ. ಮಾತು ಹೊರಹೊಮ್ಮುವ ಸಂದರ್ಭದಲ್ಲೂ ಅಂತಹದೊಂದು ದಿವ್ಯ ಮೌನಕ್ಕೆ ಧಕ್ಕೆಯಾಗುವುದಿಲ್ಲ ಅನ್ನಿಸುವುದು ಇಲ್ಲೇ.

ಕೆಟ್ಟತನ ಹಾಗೂ ಒಳ್ಳೆಯತನದ ನಡುವೆ ವಿವೇಕ ಎಂಬ ಶ್ರೀಕೃಷ್ಣ!ಕೆಟ್ಟತನ ಹಾಗೂ ಒಳ್ಳೆಯತನದ ನಡುವೆ ವಿವೇಕ ಎಂಬ ಶ್ರೀಕೃಷ್ಣ!

Recommended Video

ರಾಮಕೃಷ್ಣ ಹೆಗ್ಡೆಯವರ 92ನೇ ಜನ್ಮದಿನ ಆಗಸ್ಟ್ 29ರಂದು | ಇವರ ಬದುಕಿನ ಒಂದು ಹಿನ್ನೋಟ ಇಲ್ಲಿದೆ | Oneindia Kannada

ಇರಲಿ, ದಿನೇಶ್ ಅವರಿಗೆ ತಮಾಷೆ ಮಾಡಿದ ಬಗ್ಗೆ ನಿಮಗೆ ಹೇಳಿದೆ. ಹೀಗೆ ತಮಾಷೆ ಮಾಡುತ್ತಿದ್ದಂತೆಯೇ ನೆನಪಾದವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ. ಯಾಕೆಂದರೆ ನಾನು ಪತ್ರಿಕೋದ್ಯಮಕ್ಕೆ ಬಂದ ಹೊಸತರಲ್ಲಿ ಇದೇ ರೀತಿ ಜಯಮಹಲ್ ವಿಲಾಸ್ ನಲ್ಲಿರುವ ಅವರ ಬಂಗಲೆ "ಕೃತ್ತಿಕಾ"ದಲ್ಲಿದ್ದ ಲಾನ್ ಗೆ ನಾನು ಮಾರು ಹೋಗಿದ್ದೆ. ಒಂದು ದಿನ ಅವರ ಆಪ್ತ ಸಹಾಯಕ ನಾಗರಾಜ್ ಅವರೊಂದಿಗೆ ಟೈಮು ಫಿಕ್ಸು ಮಾಡಿಕೊಂಡು ಸಂದರ್ಶನಕ್ಕೆಂದು ಹೋಗಿದ್ದೇನೆ. ಇನ್ನೇನು ಒಳಗೆ ಹೋಗಿ ಕಾಲಿಡಬೇಕು. ಶುರುವಾಯಿತಲ್ಲ ಮಳೆ? ನಾಗರಾಜ್ ತಕ್ಷಣವೇ ಬಾಗಿಲು ಹಾಕಿಬಿಟ್ಟರು. ಬಾಗಿಲು ಹಾಕಿದರೇನು? ಮನೆಗೆ ಎಂಟ್ರಿ ಕೊಡುತ್ತಿದ್ದಂತೆಯೇ ಕಂಡಿತು ನಡುಮಧ್ಯ ಭಾಗದಲ್ಲಿದ್ದ ಲಾನ್ ನಲ್ಲಿ ಮಳೆಯ ಮನಮೋಹಕ ನರ್ತನ. ವಾವ್, ಎಷ್ಟು ಹಿತವಾದ ಅನುಭವ ಎನ್ನುತ್ತೀರಿ? ಪೂರ್ವ, ಪಶ್ವಿಮ ದಿಕ್ಕುಗಳೆನ್ನದೆ ಒಂದೇ ಸಮನೆ ರಾಚುತ್ತಿದ್ದ ಮಳೆಯನ್ನು ಅಲ್ಲಿದ್ದ ಖುರ್ಚಿಯ ಮೇಲೆ ಕುಳಿತು ನೋಡುತ್ತಾ, ನೋಡುತ್ತಾ ಹಾಗೇ ಮೈ ಮರೆತಿದ್ದೇನೆ.

ಹಿಂದಿನಿಂದ ಕೇಳಿತು ಆ ಅದ್ಭುತ ಧ್ವನಿ. ಅರೇ ವಿಠ್ಠಲಮೂರ್ತಿ ಬಂದು ತುಂಬ ಹೊತ್ತಾಯಿತಾ? ಸಾರಿ, ಸಾರಿ ಫಾರ್ ದಿ ಲೇಟ್ ಅಂತ. ತಿರುಗಿ ನೋಡಿದರೆ ನಗುತ್ತಾ ನಿಂತಿದ್ದರು ರಾಮಕೃಷ್ಣ ಹೆಗಡೆ.
ಅವರ ಮಾತು ಕೇಳಿದ್ದೇ ತಡ, ನಾನು ರಪಕ್ಕಂತ ಎದ್ದು ನಿಂತೆ. ಅವರು ಹೆಗಲ ಮೇಲೆ ಕೈ ಹಾಕಿ ಮಹಡಿಯ ಮೇಲೆ ಕರೆದುಕೊಂಡು ಹೋದರು. ಇನ್ನೇನು ಮಹಡಿಯ ಮೇಲಿನ ರೂಮಿನಲ್ಲಿ ಕೂರಬೇಕು? ಅಷ್ಟರಲ್ಲಿ ಒಂದು ಫೋನು ಬಂತು. ಕೈಗೆತ್ತಿಕೊಂಡ ಹೆಗಡೆ, ಹಲೋ ಚಿತ್ರಾ, ಇವತ್ತು ಸಿಗುತ್ತೇನೆ ಅಂತ ನಿಮಗೆ ಹೇಳಿದ್ದೆ. ಈಗ ನನ್ನ ಜರ್ನಲಿಸ್ಟ್ ಫ್ರೆಂಡ್ ಬಂದಿದ್ದಾರೆ, ಮಾತನಾಡುತ್ತಿದ್ದೇನೆ. ಆನಂತರ ಬನ್ನಿ. ಐ ವಿಲ್ ವೇಯ್ಟ್ ಯೂ ಅಂದರು.

ಅಂದ ಹಾಗೆ ಹೆಗಡೆಯ ಜತೆ ಮಾತನಾಡಿದವರು ಅವತ್ತಿನ ಕಾಲಕ್ಕೆ ಖ್ಯಾತ ಪತ್ರಕರ್ತರಾಗಿದ್ದ ಚಿತ್ರಾ ಸುಬ್ರಮಣ್ಯಂ. ನಿಮಗೆ ರಾಜೀವ್ ಗಾಂಧಿಯವರ ಸರ್ಕಾರ ಉರುಳುವಂತೆ ಮಾಡಿದ ಬೋಫೋರ್ಸ್ ಹಗರಣದ ಬಗ್ಗೆ ಗೊತ್ತಿರುತ್ತದೆ. ಆ ಬೋಫೋರ್ಸ್ ಹಗರಣವನ್ನು ಬಯಲು ಮಾಡಿದವರು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಇದೇ ಚಿತ್ರಾ ಸುಬ್ರಮಣ್ಯಂ. ಇದಾದ ಸ್ವಲ್ಪ ಹೊತ್ತಿನಲ್ಲಿ ಹೆಗಡೆ ಅವರ ಜತೆಗಿನ ರಾಜಕೀಯ ಸಂದರ್ಶನ ಮುಗಿಯಿತು.

ಇದಾದ ನಂತರ ಶುರುವಾಯಿತು ಆಫ್ ದಿ ರೆಕಾರ್ಡ್ ಮಾತುಕತೆ. ಆ ಹೊತ್ತಿಗಾಗಲೇ ಹೆಗಡೆ ಹಾಗೂ ದೇವೇಗೌಡರ ನಡುವಣ ಕಚ್ಚಾಟ ಕರ್ನಾಟಕದ ಮಟ್ಟಿಗೆ ವಿಖ್ಯಾತ. ಹಾಗಂತಲೇ ಕೇಳಿದೆ. ಸಾರ್, ನಿಮ್ಮ ಹಾಗೂ ದೇವೇಗೌಡರ ನಡುವಣ ಕಚ್ಚಾಟದಿಂದ ಜನತಾದಳ ಅಧಿಕಾರ ಕಳೆದುಕೊಂಡಿತು. ಯಾಕೆ ಸಾರ್ ಈ ಕಚ್ಚಾಟ? ಅಂತ. ಹೆಗಡೆ ಮೌನವಾದರು. ಸಾರ್, ನಿಮ್ಮ ಹಾಗೂ ದೇವೇಗೌಡರ ನಡುವೆ ಲೀಡರ್ ಷಿಪ್ಪಿಗಾಗಿ ಈ ಕದನ ನಡೆಯುತ್ತಿದೆ ಅಲ್ಲವಾ? ಇದಾದರೂ ಎಷ್ಟು ದಿನ ನಡೆಯಬಹುದು? ಅಂತ ನಾನು ಮತ್ತೆ ಕೆದಕಿ ಕೇಳಿದೆ.

ಹೆಗಡೆ ಬೇರೆಯೇ ಲೋಕಕ್ಕೆ ಜಾರಿದರು. ವಿಠ್ಠಲಮೂರ್ತಿ, ನಾನು ಅರ್ಥ ಮಾಡಿಕೊಂಡಂತೆ ಇದು ಯಾವತ್ತಿಗೂ ಸರಿಯಾಗುವ ಸಂಬಂಧವಲ್ಲ. (ಮುಂದೆ ಒಂದಾದರೂ ಮತ್ತೆ ಆ ಸ್ನೇಹ ಮುರಿದು ಹೋಯಿತು) ಶುರು ಶುರುವಿನಲ್ಲಿ ಇಬ್ಬರ ನಡುವೆಯೂ ಪ್ರತಿಷ್ಠೆ ಕೆಲಸ ಮಾಡಿದ್ದು ನಿಜ. ಆದರೆ ನಾನಾಗಲೇ ಮುಖ್ಯಮಂತ್ರಿಯಾಗಿದ್ದೇನೆ. ಯೋಜನಾ ಆಯೋಗದ ಉಪಾಧ್ಯಕ್ಷನಾಗಿದ್ದೇನೆ. ಆದರೆ ಇನ್ನು ಮುಂದೆ ಎಲ್ಲವನ್ನೂ ಮರೆತು ಒಟ್ಟಿಗೆ ಹೋಗೋಣ ಅಂತ ನಾನು ಬಯಸಿದರೂ ಒಟ್ಟಿಗೆ ಹೋಗಲು ಅವರು ಬಯಸುವುದಿಲ್ಲ ಎಂದರು. ಅವರ ಮಾತು ಕೇಳಿ ನಾನು ನಾಲಿಗೆಯನ್ನು ತುಟಿಯ ಎಡಭಾಗದಿಂದ ಬಲಭಾಗಕ್ಕೊಮ್ಮೆ ಸವರಿಕೊಂಡು, ಯಾಕೆ ಸಾರ್? ಎಂದೆ. ಯಥಾ ಪ್ರಕಾರ ಹೆಗಡೆ ತುಂಬ ಹೊತ್ತು ಮೌನವಾಗಿದ್ದರು. ನಾಯಕರೆನ್ನಿಸಿಕೊಂಡವರು ಹೀಗೆ ಮೌನವಾದಾಗ ನಾವು ಅವಸರಕ್ಕೆ ಬೀಳಬಾರದು. ಸುಮ್ಮನಿದ್ದು ಬಿಡಬೇಕು. ಯಾಕೆಂದರೆ ಇಟ್ ಈಸ್ ಥಿಂಕಿಂಗ್ ಟೈಮ್. ಅವರ ಯೋಚನೆಯ ಆಧಾರದ ಮೇಲೆ ಬರುವ ಮಾತೇ ನಮಗೆ ಮುಖ್ಯವಾಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ನಾನು ಮೌನವಾದೆ.

ಆಗ ಹೆಗಡೆ ತಣ್ಣಗೆ ಹೇಳುತ್ತಾ ಹೋದರು. ವಿಠ್ಠಲಮೂರ್ತಿ, ನಾನು, ದೇವೇಗೌಡರು ಅಂತಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಒಂದು ಬೀಗವಿದ್ದಂತೆ. ಅದು ಗೋಲ್ಡ್ ಪ್ಲೇಟೆಡ್ ಆಗಿರಬಹುದು. ಸಿಲ್ಟರ್ ಪ್ಲೇಟೆಡ್ ಆಗಿರಬಹುದು. ಸ್ಟೀಲ್ ಪ್ಲೇಟೆಡ್ ಆಗಿರಬಹುದು. ಐರನ್ ಪ್ಲೇಟೆಡ್ ಆಗಿರಬಹುದು. ಇನ್ಯಾವುದೇ ಪ್ಲೇಟಿಂಗ್ನ ಬೀಗ ಇರಬಹುದು. ನಾನು, ದೇವೇಗೌಡ ಕೂಡಾ ಅಂತಹ ಬೀಗಗಳ ಪೈಕಿ ಇಬ್ಬರು. ನಾವಿಬ್ಬರೇ ಅಂತಲ್ಲ. ಪ್ರತಿಯೊಬ್ಬ ಮನುಷ್ಯ ಕೂಡಾ ಬೀಗವಿದ್ದಂತೆ. ದುರದೃಷ್ಟ ಎಂದರೆ ಕ್ಲೋಸ್ ಆಗೇ ಇರಿ. ಶತ್ರುಗಳೇ ಆಗಿರಿ. ಈ ಈ ಬೀಗದ (ವ್ಯಕ್ತಿ) ಮಾತ್ರ ಯಾವತ್ತೂ ಓಪನ್ ಆಗುವುದೇ ಇಲ್ಲ.

ಅವರಾಡುತ್ತಿದ್ದ ಮಾತು ಕೇಳಿ ನಾನು ತಣ್ಣಗಾಗಿ ಹೋದೆ. ಅಲ್ಲಿಯ ತನಕ ಯಾರ ಬಗೆಗಾದರೂ ಮಾತು ಬಂದರೆ, ಅಯ್ಯೋ, ಅವರ ಬಗ್ಗೆ ನನಗೆ ಗೊತ್ತಿಲ್ಲವಾ? ಅವರ ಒರಿಜಿನಲ್ ಬಣ್ಣವೇನು? ಜಾತಕ ಏನು? ಚರಿತ್ರೆ ಏನು? ಅಂತ ನನಗೆ ಗೊತ್ತು. ಅವರ ಬದುಕಿನ ಒಂದೊಂದು ವಿವರಗಳೂ ನನಗೆ ಬಾಯಿ ಪಾಠವಾಗಿವೆ ಎಂಬಂತೆ ಮಾತನಾಡುತ್ತಿದ್ದೆ. ಪತ್ರಿಕೋದ್ಯಮಕ್ಕೆ ಬಂದ ಕೆಲ ವರ್ಷಗಳಲ್ಲಿ ಇಂತಹ ಭಾವನೆ ಸಹಜವಾಗಿಯೇ ಮೂಡಿಬಿಡುತ್ತದೆ. ಇದಕ್ಕೆ ಕಾರಣ, ಒಬ್ಬ ನಾಯಕರ ಬಗ್ಗೆ ಮತ್ತೊಬ್ಬ ನಾಯಕರು ಕೊಡುವ ವಿವರ ಹಾಗಿರುತ್ತದೆ. ಆದರೆ ಹೆಗಡೆ ಬೇರೆ ಬೇರೆ ಪರಿಭಾಷೆಯಲ್ಲಿ ಮಾತನಾಡುವುದರಲ್ಲಿ ಗ್ರೇಟ್ ಮಾಸ್ಟರ್. ಹೀಗಾಗಿ ನಾನು, ಸಾರ್ , ಪ್ರತಿಯೊಬ್ಬ ಮನುಷ್ಯನೂ ಒಂದು ಬೀಗ ಎಂಬುದು ನನಗರ್ಥವಾಗುತ್ತಿಲ್ಲ.

ಬಿಡಿಸಿ ಹೇಳಿ ಸಾರ್ ಪ್ಲೀಸ್ ಎಂದೆ.
ಹೆಗಡೆ ಒಂದು ವಿಷಾದದ ನಗೆ ತುಳುಕಿಸಿ, ವಿಠ್ಠಲಮೂರ್ತಿ, ಪ್ರತಿಯೊಬ್ಬ ಮನುಷ್ಯ ಕೂಡಾ ಒಂದು ಬೀಗವಿದ್ದಂತೆ. ಇಂಟರೆಸ್ಟಿಂಗ್ ವಿಷಯವೆಂದರೆ, ಈ ಬೀಗವನ್ನು ಓಪನ್ ಮಾಡುವ ಕೀಗಳು ಸಿಗುವುದೇ ಇಲ್ಲ. ಬೇಕಿದ್ದರೆ ನೋಡಿ. ನಿಮ್ಮ ಬಳಿಯೇ ಕೀ ಬಂಚ್ ಇದೆ. ಅದರಲ್ಲಿ ಹಲವಾರು ಕೀಗಳಿವೆ. ಅಂದರೆ ಹಲವರ ಬಗ್ಗೆ ನಿಮಗೆ ಗೊತ್ತಿದೆ, ಬೇಕೆಂದಾಗ ಅವರ ಬದುಕಿನ ಬೀಗವನ್ನು ಬಿಚ್ಚಬಲ್ಲೆ ಎಂಬ ವಿಶ್ವಾಸ ನಿಮ್ಮಲ್ಲಿದೆ. ಆದರೆ ನಿಜವಾಗಿಯೂ ನೀವು ಯಾವೊಂದು ಬೀಗವನ್ನೂ ಓಪನ್ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನಿಮ್ಮ ಬಳಿ ಇರುವ ಕೀಯಿಂದ ಯಾವುದೇ ಬೀಗದ ಕಿಂಡಿಗೂ ನೀವು ಕೀ ಹಾಕಿ ತಿರುಗಿಸಬಹುದು. ಆದರೆ ಹೀಗೆ ತಿರುಗಿಸಲು ಮಾತ್ರ ನಿಮಗೆ ಸಾಧ್ಯ. ಓಪನ್ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನಾನೂ ಒಂದು ಬೀಗವಾಗಿ ಹೇಳುತ್ತೇನೆ. ಅದು ಯಾವ ರೀತಿ ಲಾಕ್ ಆಗಿದೆ? ಅಂತ ನನಗೇ ಗೊತ್ತಿಲ್ಲ. ಅದನ್ನು ಓಪನ್ ಮಾಡುವ ಕೀ ಕೂಡಾ ನನ್ನ ಬಳಿ ಇಲ್ಲ. ಅಂದ ಮೇಲೆ ನೀವು ಹೇಗೆ ನನ್ನ ಬದುಕಿನ ಬೀಗವನ್ನು ಓಪನ್ ಮಾಡಲು ಸಾಧ್ಯ? ನಾನು ಅಂತಲ್ಲ. ಯಾವ ಬೀಗವನ್ನೂ(ವ್ಯಕ್ತಿ) ಓಪನ್ ಮಾಡಲು ನಿಮ್ಮಲ್ಲಿ ಕೀ ಗಳಿಲ್ಲ. ಹೆಚ್ಚೆಂದರೆ ನಾನು ಹೇಳಿದಂತೆ ನಿಮ್ಮ ಬಳಿ ಇರುವ ಕೀ ಗೊಂಚಲಿನ ಕೆಲ ಕೀಗಳ ಮೂಲಕ ನಿರ್ದಿಷ್ಟ ಬೀಗದ(ವ್ಯಕ್ತಿ)ಕಿಂಡಿಯಲ್ಲಿ ಎಡಕ್ಕೆ, ಬಲಕ್ಕೆ ಅಂತ ತಿರುಗಿಸಬಹುದು ಅಷ್ಟೇ ಎಂದರು.
ಅಂದರೆ ಯಾವ ವ್ಯಕ್ತಿಯ ಬಗ್ಗೆಯೂ ನಾವು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಅಂತಲ್ಲವೇ ಸಾರ್ ನಿಮ್ಮ ಮಾತಿನ ಅರ್ಥ? ಎಂದೆ.

ಅರೇ, ಯೋಚಿಸಿ ನೋಡಿ ವಿಠ್ಠಲಮೂರ್ತಿ. ಬೀಗದ ಜತೆ ಕೀ ಕೂಡಾ ರೆಡಿಯಿದ್ದರೆ ಮಾತ್ರ ಅದನ್ನು ಓಪನ್ ಮಾಡಲು ಸಾಧ್ಯ. ಆದರೆ ಯಾವ ಬೀಗದ (ವ್ಯಕ್ತಿ) ಜತೆಗೂ ಕೀ ಸೃಷ್ಟಿಯಾಗಿರುವುದಿಲ್ಲ. ನೇಚರ್ ಕೈಲಿ ಮಾತ್ರ ಅಂತಹದೊಂದು ಕೀ ಇರಬಹುದು. ಹೀಗಾಗಿ ಯಾವ ಟೈಮಿನಲ್ಲಿ ಅದನ್ನು ಓಪನ್ ಮಾಡಬೇಕು ಎಂಬುದನ್ನು ಅದು ಮಾತ್ರ ನಿರ್ಧರಿಸುತ್ತದೆ ಎಂದರು ಹೆಗಡೆ. ಹೀಗೆ ನಮ್ಮ ಬಗ್ಗೆ ನಾವೇ ಪರಿಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ. ಆದರೂ ಸನ್ನಿವೇಶಕ್ಕೆ ಅನುಗುಣವಾಗಿ, ನನ್ನ ಬದುಕು ತೆರೆದಿಟ್ಟ ಪುಸ್ತಕ ಇದ್ದಂತೆ. ಅದರೆಲ್ಲ ವಿವರ ನನ್ನ ಆತ್ಮೀಯರಿಗೆ ಗೊತ್ತು ಎನ್ನುತ್ತೇವೆ.

ಆದರೆ ಪ್ರಾಮಾಣಿಕವಾಗಿ ನೋಡಿಕೊಂಡರೆ ನಮ್ಮ ಬಗ್ಗೆ ನಮಗೇ ಪರಿಪೂರ್ಣವಾಗಿ ಗೊತ್ತಿರುವುದಿಲ್ಲ. ಅಂದ ಮೇಲೆ ಇನ್ನೊಂದು ಬೀಗ(ವ್ಯಕ್ತಿ)ವನ್ನು ನಿರಾಯಾಸವಾಗಿ ತೆಗೆಯುವುದು ಹೇಗೆ?

ಹೀಗೆ ತೆಗೆಯಲು ಸಾಧ್ಯವಾಗದೆ ಇದ್ದರೂ ಇನ್ನೊಂದು ಬದುಕಿನ ಬಗ್ಗೆ ನಾವು ಅಥೆಂಟಿಕ್ ಆಗಿ ಹೇಳುವುದು ಹೇಗೆ? ಹೀಗಾಗಿ ನಿಮಗೆ ಒಂದು ಮಾತು ಹೇಳುತ್ತೇನೆ. ಯಾವ ಪ್ಲೇಟೆಡ್ ಬೀಗವೇ ಇರಲಿ. ಕಾಲ ಕಾಲಕ್ಕೆ ತಕ್ಕಂತೆ ಬಣ್ಣ ಕಳೆದುಕೊಂಡು ಮಾಸುತ್ತದೆ. ಸಾಧ್ಯವಾದರೆ ಅದನ್ನು ತಿಕ್ಕಿ, ತೊಳೆದು ಫಳ ಫಳ ಹೊಳೆಯುವಂತೆ ಮಾಡಿ. ಒಬ್ಬರ ತಕ್ಷಣದ ನಡವಳಿಕೆಯ ಕುರಿತು ಟೀಕಿಸುವುದು ಸಾಮಾನ್ಯ. ಆದರೆ ನಿಮ್ಮಿಂದಾದಾಗ ಆ ಬೀಗವನ್ನು (ವ್ಯಕ್ತಿ) ತಿಕ್ಕಿ ಫಳಫಳ ಹೊಳೆಯುವಂತೆ ಮಾಡಿ. ನೀವು ಅಂತಲ್ಲ. ನಾನು ಕೂಡಾ ಅದನ್ನೇ ಮಾಡಬೇಕು. ಯಾಕೆಂದರೆ ವ್ಯವಸ್ಥೆಯ ಮೇಲೆ ಮುಂದಿನ ಪೀಳಿಗೆಗೆ ನಂಬಿಕೆ ಇರಬೇಕಲ್ಲವಾ ವಿಠ್ಠಲಮೂರ್ತಿ? ಅಂದರು ಹೆಗಡೆ. ಆ ಮಾತುಗಳನ್ನು ಅರಗಿಸಿಕೊಳ್ಳಲು ಯತ್ನಿಸುತ್ತಾ ನಾನು ಮೆಟ್ಟಿಲಿಳಿಯುತ್ತಿದ್ದಾಗ ಕೆಳಗೆ ನಗುತ್ತಾ ನಿಂತಿದ್ದ ಚಿತ್ರಾ ಸುಬ್ರಮಣ್ಯಂ ಕಾಣಿಸಿದರು.

English summary
August 29 is birthday of Ramakrishna Hegde, former Chief Minister of Karnataka. Political analyst R T Vittal Murthy recalls Hegde's off the record talk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X