ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Periyar Birthday- ಕನ್ನಡಿಗನಿಂದ ಹುಟ್ಟಿದ ದ್ರಾವಿಡ ಚಳವಳಿ; ಹಿಂದೂ ಧರ್ಮ, ದೇವರು ತಿರಸ್ಕರಿಸಿದ ಇವಿಆರ್ ಬದುಕಿನತ್ತ ಒಂದು ನೋಟ

|
Google Oneindia Kannada News

ದ್ರಾವಿಡ ಚಳವಳಿಯ ಪಿತಾಮಹ ಎಂದು ಕರೆಯಲಾಗುವ ಪೆರಿಯಾರ್, ಅಕಾ ಇ.ವಿ. ರಾಮಸ್ವಾಮಿ ಜನ್ಮದಿನ ಸೆಪ್ಟೆಂಬರ್ 17, ಶನಿವಾರ ಇದೆ. ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರದ್ದೂ ಜನ್ಮದಿನ. ಒಂದೇ ದಿನದಂದು ಎರಡು ವೈರುದ್ಧ್ಯ ವ್ಯಕ್ತಿತ್ವಗಳ ಜನ್ಮದಿನ ಇರುವುದು ವಿಶೇಷ.

ಈರೋಡ್ ವೆಂಕಟಪ್ಪ ರಾಮಸ್ವಾಮಿ ಹುಟ್ಟಿದ್ದು ತಮಿಳುನಾಡಿನ ಈರೋಡಿನಲ್ಲಿ 1879ರ ಸೆಪ್ಟೆಂಬರ್ 17ರಂದು. ಇವರು ಕನ್ನಡಿಗರು. ಕನ್ನಡ ಬಲಿಜ ಕುಟುಂಬದಲ್ಲಿ ಜನಿಸಿದವರು. ಮುಂದೆ ಇವರು ಪೆರಿಯಾರ್ ಆಗಿ ತಮಿಳುನಾಡಿನ ದ್ರಾವಿಡ ಹೋರಾಟಗಳಿಗೆ ಮುನ್ನುಡಿ ಬರೆಯುತ್ತಾರೆ. ಈಗಲೂ ಕೂಡ ಮಾರ್ಕ್ಸಿಸಂ, ಮಾವೋಯಿಸಂ, ಅಂಬೇಡ್ಕರಿಸಂನಂತೆ ಪೆರಿಯಾರಿಸಂ ಕೂಡ ಅಸ್ತಿತ್ವದಲ್ಲಿದೆ.

ಪೆರಿಯಾರ್ ಎಂದರೆ ತಮಿಳಿನಲ್ಲಿ ಹಿರಿಕರು ಎಂದರ್ಥ. ಇವಿ ರಾಮಸ್ವಾಮಿ ಹಿಂದೂ ಧರ್ಮ ಮತ್ತು ದೇವರುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಲ್ಲದೇ, ಪ್ರತ್ಯೇಕ ದ್ರಾವಿಡ ನಾಡು ರಚನೆಯನ್ನು ಪ್ರತಿಪಾದಿಸಿದ್ದರು. ಬ್ರಾಹ್ಮಣ್ಯದ ಶೋಷಣೆಯನ್ನು ಕಟುವಾಗಿ ಟೀಕಿಸುತ್ತಿದ್ದ ಅವರು ಹಿಂದೂ ಧರ್ಮವನ್ನು ಬ್ರಾಹ್ಮಣ ಧರ್ಮ ಎಂದೇ ಪರಿಗಣಿಸಿ ಅದನ್ನು ತಿರಸ್ಕರಿಸಿದ್ದರು.

ಧರ್ಮ ಮತ್ತು ದೇವರ ಅಸ್ತಿತ್ವವನ್ನು ತಿರಸ್ಕರಿಸಿದ್ದ ಪೆರಿಯಾರ್, ಒಂದು ದೇವಸ್ಥಾನದ ಧರ್ಮಾಧಿಕಾರಿಯಾಗಿ ಕೆಲಸ ಮಾಡಿದ್ದು ಅಚ್ಚರಿ ತರುತ್ತದೆ. 94 ವರ್ಷ ಬದುಕಿ 1973ರಲ್ಲಿ ಮೃತಪಟ್ಟ ಪೆರಿಯಾರ್ ಒಬ್ಬ ಮಹಾನ್ ಚಿಂತಕ, ಕ್ರಾಂತಿಕಾರಿಯಾಗಿ, ಶೋಷಿತ ಜನರ ಧ್ವನಿಯಾಗಿ, ದ್ರಾವಿಡ ಹೋರಾಟಗಳಿಗೆ ಸ್ಫೂರ್ತಿಯಾಗಿ ಉಳಿದುಕೊಂಡಿದ್ದಾರೆ.

 ಹಿಂದೂ ಧರ್ಮ ತಿರಸ್ಕರಿಸಲು ಕಾರಣವಾದ ಘಟನೆ

ಹಿಂದೂ ಧರ್ಮ ತಿರಸ್ಕರಿಸಲು ಕಾರಣವಾದ ಘಟನೆ

ಇವಿ ರಾಮಸ್ವಾಮಿ ಹಿಂದೂ ಧರ್ಮವನ್ನು ತಿರಸ್ಕರಿಸಲು, ದೇವರೆಂದರೆ ಉರಿದುಬೀಳಲು ಕಾರಣವಾದ ಘಟನೆಯನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. 1904ರಲ್ಲಿ ಪೆರಿಯಾರ್ ಕಾಶಿ ವಿಶ್ವನಾಥನ ದರ್ಶನಕ್ಕೆ ಯಾತ್ರೆ ಹೋಗುತ್ತಾರೆ. ಆಗ ಅವರಿಗೆ 25 ವರ್ಷ ವಯಸ್ಸಿರಬಹುದು. ಹಿಂದೂಗಳ ಅತ್ಯಂತ ಪವಿತ್ರ ಯಾತ್ರಾ ಸ್ಥಳ ಎನಿಸಿದ ಕಾಶಿಯ ವಿಶ್ವನಾಥನ ಸನ್ನಿಧಿಯಲ್ಲಿ ನಡೆಯುತ್ತಿದ್ದ ಅನ್ಯಾಯ ಇವಿ ರಾಮಸ್ವಾಮಿಯನ್ನು ಬಡಿದೆಬ್ಬಿಸಿತ್ತು. ಕಾಶಿಯಲ್ಲಿ ಬ್ರಾಹ್ಮಣರಿಗೊಂದು ಕ್ರಮ, ಅಬ್ರಾಹ್ಮಣರಿಗೊಂದು ಕ್ರಮ ಇತ್ತು. ಕಾಶಿಯ ಧರ್ಮಛತ್ರದಲ್ಲಿ ಉಚಿತ ಅನ್ನಸೇವೆ ಇತ್ತಾದರೂ ಅಲ್ಲಿ ಬ್ರಾಹ್ಮಣರಿಗೆ ಮಾತ್ರ ಊಟ ಹಾಕಲಾಗುತ್ತಿತ್ತು.

ಹಸಿವಿನಿಂದ ಕಂಗೆಟ್ಟಿದ್ದ ರಾಮಸ್ವಾಮಿಗೆ ಅಲ್ಲಿ ಊಟ ಸಿಗದಾಯಿತು. ಬ್ರಾಹ್ಮಣನಂತೆ ಜನಿವಾರ ತೊಟ್ಟು ಹೋದರೂ ಪ್ರಯೋಜನ ಆಗಲಿಲ್ಲ. ಆಗ ಬ್ರಾಹ್ಮಣರು ಮುಖದಲ್ಲಿ ಮೀಸೆ ಬಿಡುವಂತಿರಲಿಲ್ಲ. ರಾಮಸ್ವಾಮಿ ಮೀಸೆ ಬಿಟ್ಟಿದ್ದರಿಂದ ಛತ್ರದ ಭದ್ರತಾ ಸಿಬ್ಬಂದಿ ತಡೆದು ರಸ್ತೆಗೆ ನೂಕಿಬಿಡುತ್ತಾರೆ.

ಕೈಯಲ್ಲಿ ಹಣ ಇಲ್ಲ, ಹಸಿವು ತಡೆಯಲು ಆಗುತ್ತಿಲ್ಲ. ಇವಿ ರಾಮಸ್ವಾಮಿ ರಸ್ತೆಯಲ್ಲಿ ಬಿದ್ದಿದ್ದ ಎಂಜಲೆಲೆಯಲ್ಲಿ ಉಳಿದಿದ್ದ ಆಹಾರ ತಿನ್ನುವ ಪರಿಸ್ಥಿತಿ ಬಂದಿತು. ರಾಮಸ್ವಾಮಿಗೆ ಇನ್ನಷ್ಟು ನೋವು ಕೊಟ್ಟಿದ್ದು, ತನಗೆ ಅನ್ನ ನಿರಾಕರಿಸಿದ ಧರ್ಮಛತ್ರವನ್ನು ಅಬ್ರಾಹ್ಮಣರೊಬ್ಬರು ಕಟ್ಟಿದ್ದು ಎಂಬ ವಿಚಾರ ತಿಳಿದಾಗ.

ಇವಿ ರಾಮಸ್ವಾಮಿಗೆ ಕಾಶಿ ಬಗ್ಗೆ ಆವರೆಗೂ ಇದ್ದ ಭಕ್ತಿಭಾವ ಎಲ್ಲಾ ಮರೆಯಾಗಿ ತಿರಸ್ಕಾರ ಹುಟ್ಟಿಕೊಂಡಿತು. ಆಸ್ತಿಕರಾಗಿದ್ದ ರಾಮಸ್ವಾಮಿ ಅಕ್ಷರಶಃ ನಾಸ್ತಿಕನಾಗಿ ಬದಲಾಗಿಹೋದರು. ಬ್ರಾಹ್ಮಣ ವಿರೋಧಿಯಾಗಿ ಬದಲಾದರು.

 ವೈಕೋಮ್ ಸತ್ಯಾಗ್ರಹ

ವೈಕೋಮ್ ಸತ್ಯಾಗ್ರಹ

ಸ್ವಾತಂತ್ರ್ಯಪೂರ್ವದಲ್ಲಿ ಜಾತಿ ಶೋಷಣೆ ವಿಪರೀತ ಇತ್ತು. ಶೂದ್ರರಿಗೆ, ಅದರಲ್ಲೂ ದಲಿತರಿಗೆ ದೇವಸ್ಥಾನದೊಳಗೆ ಪ್ರವೇಶ ಇರಲಿಲ್ಲ. ದೇವಸ್ಥಾನದೊಳಗೆ ಇರಲಿ ದೇವಸ್ಥಾನದ ಬೀದಿಗೂ ದಲಿತರು ಕಾಲಿಡುವಂತಿರಲಿಲ್ಲ.

ಆಗ ದಲಿತರಿಗೆ ದೇವಸ್ಥಾನ ಪ್ರವೇಶ ದೊರಕಿಸಿಕೊಡುವ ಹೋರಾಟ ಶುರುವಾಯಿತು. ಟಿಕೆ ಮಾಧವನ್, ಕೇಲಪ್ಪನ್, ವೇಲಾಯುಧ ಮೆನನ್, ಕರೂರ್ ನೀಲಕಂಠನ್ ನಂಬೂದಿರಿಪಾದ್, ಕೃಷ್ಣಸ್ವಾಮಿ ಅಯ್ಯರ್ ಮೊದಲಾದವರು ಹೋರಾಟದ ಮುಂಚೂಣಿಯಲ್ಲಿದ್ದರು.

ಆಗ ಕೇರಳದ ವೈಕೋಮ್ ಪಟ್ಟಣದಲ್ಲಿ ಜಾತಿಯ ವಿಷಬೀಜ ಬಹಳ ಪ್ರಬಲವಾಗಿತ್ತು. ಹೀಗಾಗಿ, ಇಲ್ಲಿಯೇ ಅಸ್ಪೃಶ್ಯತೆ ವಿರುದ್ಧ ಸತ್ಯಾಗ್ರಹ ನಡೆಸುವುದೆಂದು ತೀರ್ಮಾನಿಸಲಾಯಿತು. ಇವಿ ರಾಮಸ್ವಾಮಿ ಕೂಡ ಈ ಹೋರಾಟಕ್ಕೆ ಕೈಜೋಡಿಸಿದರು.

ಮುಂದೆ ಈ ವೈಕೋಂ ಚಳವಳಿ ರಾಷ್ಟ್ರಮಟ್ಟದಲ್ಲಿ ಬೆಳೆಯಿತು. ದೇಶದೆಲ್ಲೆಡೆಯಿಂದ ಬೆಂಬಲ ಹರಿದುಬಂದಿತು. ಪಂಜಾಬ್‌ನ ಅಕಾಲಿಯವರು ಸತ್ಯಾಗ್ರಹಿಗಳಿಗೆ ಅಡುಗೆ ಮಾಡಿ ಊಟ ಕೊಡುವ ವ್ಯವಸ್ಥೆ ಮಾಡಿದರು. ಮುಸ್ಲಿಂ, ಕ್ರೈಸ್ತರೂ ಈ ಹೋರಾಟಕ್ಕೆ ಬೆಂಬಲ ಕೊಟ್ಟರು.

ಇವಿ ರಾಮಸ್ವಾಮಿ ಆಗ ಕಾಂಗ್ರೆಸ್ ಪಕ್ಷದಲ್ಲಿದ್ದರು. 1922ರಲ್ಲಿ ಕಾಂಗ್ರೆಸ್ ಸೇರಿದ್ದ ಅವರು ಮದ್ರಾಸ್ ಪ್ರೆಸಿಡೆನ್ಸಿ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದರು. ಆದರೆ, ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ತರಲು ಇವರು ಮಾಡಿದ ಪ್ರಯತ್ನಕ್ಕೆ ಕಾಂಗ್ರೆಸ್‌ನೊಳಗೆಯೇ ಅಡ್ಡಿಯಾಯತು. ಪರಿಣಾಮವಾಗಿ ಅವರು 1925ರಲ್ಲಿ ಕಾಂಗ್ರೆಸ್ ತೊರೆದರು.

 ಹಿಂದಿ ಹೇರಿಕೆಗೆ ವಿರೋಧ

ಹಿಂದಿ ಹೇರಿಕೆಗೆ ವಿರೋಧ

1937ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಗೆ ಸಿ ರಾಜಗೋಪಾಲಚಾರಿ ಸಿಎಂ ಆದಾಗ ಶಾಲಾ ಪಠ್ಯಕ್ರಮದಲ್ಲಿ ಹಿಂದಿ ಕಲಿಕೆ ಕಡ್ಡಾಯ ಮಾಡಲಾಯಿತು. ಅದಕ್ಕೆ ತೀವ್ರ ವಿರೋಧಗಳು ಹುಟ್ಟಿಕೊಂಡವು. ಬ್ರಾಹ್ಮಣ್ಯದ ವಿರುದ್ಧವೇ ಸೈದ್ಧಾಂತಿಕವಾಗಿ ಹುಟ್ಟಿಕೊಂಡಿದ್ದ ಜಸ್ಟೀಸ್ ಪಾರ್ಟಿ 1938ರಲ್ಲಿ ತಮಿಳುನಾಡಿನಾದ್ಯಂತ ಸರಣಿ ಪ್ರತಿಭಟನೆಗಳನ್ನು ಆಯೋಜಿಸಿತು. ಇವಿ ರಾಮಸ್ವಾಮಿ ಈ ಹೋರಾಟಗಳಿಗೆ ಕೈಜೋಡಿಸಿದರು.

ಈ ವೇಳೆ, ಪೆರಿಯಾರ್ (ಇವಿ ರಾಮಸ್ವಾಮಿ) "ತಮಿಳರಿಗೆ ತಮಿಳುನಾಡು" ಘೋಷವಾಕ್ಯ ಬಳಕೆಗೆ ತಂದರು. ಹಿಂದಿ ಹೇರಿಗೆ ಮೂಲಕ ದ್ರಾವಿಡ ಸಂಸ್ಕೃತಿಯ ಮೇಲೆ ಆರ್ಯನ್ನರು ಪ್ರಹಾರ ನಡೆಸುತ್ತಿದ್ದಾರೆ. ಅಲ್ಲದೇ ಹಿಂದಿ ಹೇರಿಕೆಯಿಂದ ಉತ್ತರ ಭಾರತೀಯ ಹಿಂದಿ ಭಾಷಿಕರ ಎದುರು ತಮಿಳರು ದುರ್ಬಲರಾಗಿಹೋಗುತ್ತಾರೆ. ಹಿಂದಿಯಿಂದ ತಮಿಳರ ಪ್ರಗತಿ ಕುಂಠಿತವಾಗುತ್ತದೆ. ತಮಿಳರು ಆವರೆಗೂ ಸಾಧಿಸಿದ್ದ ಪ್ರಗತಿ ಅಪ್ರಯೋಜಕವಾಗುತ್ತದೆ ಎಂಬುದು ಪೆರಿಯಾರ್ ಚಿಂತನೆಯಾಗಿತ್ತು.

 ದ್ರಾವಿಡ ಹೋರಾಟ

ದ್ರಾವಿಡ ಹೋರಾಟ

ಬ್ರಾಹ್ಮಣರ ಪ್ರಾಬಲ್ಯವನ್ನು ವಿರೋಧಿಸಲು 1916ರಲ್ಲಿ ಜನ್ಮತಳೆದ ಜಸ್ಟಿಸ್ ಪಾರ್ಟಿ 20 ವರ್ಷಗಳ ಬಳಿಕ ಹೆಚ್ಚಿನ ಬೆಂಬಲ ಇಲ್ಲದೇ ದುರ್ಬಲಗೊಂಡಿತು. 1939ರಲ್ಲಿ ಇವಿ ರಾಮಸ್ವಾಮಿ ಜಸ್ಟಿಸ್ ಪಾರ್ಟಿಯ ನಾಯಕತ್ವ ವಹಿಸಿದರು.

1944ರಲ್ಲಿ ಪೆರಿಯಾರ್ ಅವರು ಜಸ್ಟಿಸ್ ಪಾರ್ಟಿಯ ಹೆಸರನ್ನು ದ್ರಾವಿಡರ್ ಕಳಗಂ ಎಂದು ಬದಲಾಯಿಸಿರುವುದಾಗಿ ಘೋಷಿಸಿದರು. ಈ ಹೆಸರು ಬದಲಾವಣೆಯನ್ನು ಒಪ್ಪದ ಒಂದು ಗುಂಪು ಮೂಲ ಜಸ್ಟಿಸ್ ಪಾರ್ಟಿಯನ್ನು ಉಳಿಸಿಕೊಂಡಿತು. ರಾಮಸ್ವಾಮಿ ನೇತೃತ್ವದಲ್ಲಿ ದ್ರಾವಿಡರ್ ಕಳಗಂ ಸಂಘಟನೆ ಮುಂದುವರಿಯಿತು.

1949ರಲ್ಲಿ ಪೆರಿಯಾರ್ ಆಪ್ತರಾಗಿದ್ದ ಸಿಎನ್ ಅಣ್ಣಾದುರೈ ವೈಚಾರಿಕ ಭೇದದಿಂದ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ಕಟ್ಟಿದರು. ಇವರಿಬ್ಬರಲ್ಲಿದ್ದ ಪ್ರಮುಖ ವೈಚಾರಿಕ ಭೇದ ಎಂದರೆ, ಪೆರಿಯಾರ್ ಸ್ವತಂತ್ರ ದ್ರಾವಿಡ ನಾಡು ಬೇಕೆಂದು ಬಯಸಿದ್ದರೆ, ಅಣ್ಣಾ ದುರೈ ದ್ರಾವಿಡ ನಾಡಿಗೆ ಹೆಚ್ಚಿನ ಅಧಿಕಾರ ಸಿಗಬೇಕೆಂಬ ವಾದ ಹೊಂದಿದ್ದವರು. ದ್ರಾವಿಡರ್ ಕಳಗಂನಿಂದ ಡಿಎಂಕೆ ಸಿಡಿದು ಬಂದರೂ ಮೂಲ ಸಂಘಟನೆಯ ತತ್ವಗಳನ್ನೇ ಡಿಎಂಕೆ ಪ್ರಚುರಪಡಿಸಿತ್ತು. ದ್ರಾವಿಡ ಹೋರಾಟದ ಪರಂಪರೆ ಮುಂದುವರಿಯಿತು.

 ಪೆರಿಯಾರ್ ವಿಚಾರಗಳು

ಪೆರಿಯಾರ್ ವಿಚಾರಗಳು

ಇವಿ ರಾಮಸ್ವಾಮಿ ಅಪ್ಪಟ ಬ್ರಾಹ್ಮಣ್ಯ ವಿರೋಧಿಯಾಗಿದ್ದರು. ಆಗ ಕಮ್ಯೂನಿಸ್ಟ್ ಕ್ರಾಂತಿ ಆಗಿದ್ದ ರಷ್ಯಾಗೆ ಹೋಗಿ ಬಂದ ಬಳಿಕ ರಾಮಸ್ವಾಮಿ ವಿಚಾರಧಾರೆಗೆ ಇನ್ನಷ್ಟು ಮೊನಚು ಸಿಕ್ಕಿತು.

ಕಾಂಗ್ರೆಸ್ ಪಕ್ಷದಲ್ಲಿ ಬ್ರಾಹ್ಮಣರ ಪ್ರಾಬಲ್ಯ ಇದೆ. ಗಾಂಧಿಜಿ ಕೂಡ ಬ್ರಾಹ್ಮಣ್ಯ ಮನಸ್ಥಿತಿಯವರು ಎಂಬುದು ಪೆರಿಯಾರ್ ನಿಲುವಾಗಿತ್ತು. ಅದಕ್ಕೆ ಅವರು ಕಾಂಗ್ರೆಸ್ ಅನ್ನು ವಿರೋಧಿಸಿ, ಅದರಿಂದ ಹೊರಬಿದ್ದಿದ್ದರು.

ನಮ್ಮ ಸಮಾಜದ ಎಲ್ಲಾ ಅನಿಷ್ಟಗಳಿಗೂ ಹಿಂದೂ ಧರ್ಮವೇ ಮೂಲ ಎಂಬುದು ಪೆರಿಯಾರ್ ವಾದ. ದ್ರಾವಿಡರು ಭಾರತದ ಮೂಲ ನಿವಾಸಿಗಳು, ಹೊರಗಿನಿಂದ ಬಂದ ಆರ್ಯನ್ನರು ದ್ರಾವಿಡರ ಮೇಲೆ ದಬ್ಬಾಳಿಕೆ ಮಾಡಿದರು. ವೇದ, ಉಪನಿಷತ್, ಆಗಮ, ಪುರಾಣ ಇತ್ಯಾದಿ ಮೂಲಕ ದ್ರಾವಿಡರನ್ನು ಹೀನವಾಗಿ ಬಿಂಬಿಸುವ ಪ್ರಯತ್ನವಾಗಿದೆ. ಆದ್ದರಿಂದ ಹಿಂದೂ ಧರ್ಮವನ್ನು ತೊಲಗಿಸಬೇಕೆಂದು ಪೆರಿಯಾರ್ ಬಯಸಿದ್ದರು.

 ಬೇರೆ ಧರ್ಮಗಳ ಬಗ್ಗೆ

ಬೇರೆ ಧರ್ಮಗಳ ಬಗ್ಗೆ

ಪೆರಿಯಾರ್ ದೇವರ ಅಸ್ತಿತ್ವವನ್ನು ನಿರಾಕರಿಸಿದ್ದವರು. ಹಿಂದೂ ಧರ್ಮ, ಮನುಧರ್ಮ ಮತ್ತು ಕಾಂಗ್ರೆಸ್ ನಾಶವಾಗಬೇಕೆಂಬ ಅನಿಸಿಕೆ ಅವರದ್ದು. ಅವರ ಪ್ರಕಾರ ದ್ರಾವಿಡ ಜನರು ಹಿಂದೂ ಧರ್ಮದ ಅಂಟನ್ನು ಬಿಟ್ಟು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಬೇಕು. ಯಾಕೆಂದರೆ ಇಸ್ಲಾಂ ಧರ್ಮದಲ್ಲಿ ಶಕ್ತಿ ಇದೆ. ಶೂದ್ರರಿಗೆ ಆ ಶಕ್ತಿ ಸಿಕ್ಕಂತಾಗುತ್ತದೆ. ಹಿಂದೂ ಧರ್ಮದ ವಿರುದ್ಧ ಹೋರಾಡುವ ಶಕ್ತಿ ಸಿಕ್ಕಂತಾಗುತ್ತದೆ ಎಂದು ಅವರು ಪ್ರತಿಪಾದಿಸುತ್ತಿದ್ದರು. ನಾವು ಮುಸ್ಲಿಮರೋ ಅಥವಾ ಆದಿ ದ್ವಾವಿಡರೋ ಆಗದೇ ಹೋದರೆ ನಮಗೆ ಗೌರವ, ನ್ಯಾಯ ಮತ್ತು ಪ್ರಗತಿ ಸಿಗುವುದಿಲ್ಲ ಎಂದು ಹೇಳುತ್ತಿದ್ದರು.

ಕ್ರೈಸ್ತ ಧರ್ಮದ ಬಗ್ಗೆಯೂ ಪೆರಿಯಾರ್‌ಗೆ ಒಳ್ಳೆಯ ಅಭಿಪ್ರಾಯ ಇತ್ತು. ದೇವರ ವಿಚಾರದಲ್ಲಿ ಹಳೆಯ ಕಾಲದ ಅಮಾನುಷರಿಗಿಂತ ಕ್ರೈಸ್ತರು ಮತ್ತು ಮುಸ್ಲಿಮರು ಎಷ್ಟೋ ಉತ್ತಮ ಎನ್ನುತ್ತಿದ್ದರು. ಅಮಾನುಷರೆಂದರೆ ಇಲ್ಲಿ ಆರ್ಯನ್ನರು.

ಇನ್ನು ಬೌದ್ಧ ಧರ್ಮದ ಬಗ್ಗೆ ಪೆರಿಯಾರ್‌ಗೆ ವಿಶೇಷ ಆಸಕ್ತಿ ಇತ್ತು. ತಮ್ಮ ವಿಚಾರಧಾರೆಗಳು ಬೌದ್ಧ ಧರ್ಮಕ್ಕೆ ಸಾಮ್ಯತೆ ಇದೆ ಎಂದು ಅವರು ಹೇಳುತ್ತಿದ್ದರು. ಭಾರತದಲ್ಲಿ ಪ್ರಬಲರಾಗಿದ್ದ ಬೌದ್ಧರನ್ನು ಬ್ರಾಹ್ಮಣರು ತುಳಿದು ದೇಶದಿಂದ ಹೊರಹೋಗುವಂತೆ ಮಾಡಿದರು. ಬೌದ್ಧ ಕಟ್ಟಡಗಳನ್ನು ಮಂದಿರಗಳನ್ನಾಗಿ ಮಾಡಿದರು. ಬೌದ್ಧ ಗ್ರಂಥಗಳನ್ನು ಸುಟ್ಟುಹಾಕಿದರು ಎಂಬುದು ಇವಿ ರಾಮಸ್ವಾಮಿ ಅವರ ನಿಲುವಾಗಿತ್ತು.

(ಒನ್ಇಂಡಿಯಾ ಸುದ್ದಿ)

English summary
Periyar Birthday September 17th. EV Ramaswamy is known as father of dravidian movement in South India, especially in Tamil Nadu. He was born in Erode, in a Kannadigas family. He rejected Hinduism and hated brahminism. He fought for self respect of Dravidians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X