ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಳಿಗೋಪುರ ಕಟ್ಟುವುದು, ಹಗಲು ಕನಸು ಕಾಣುವುದು ಬಿಡಿ...

|
Google Oneindia Kannada News

ಜಾಗತೀಕರಣ, ಔದ್ಯೋಗೀಕರಣ ಪರಿಸರ ಹಾಗೂ ನಮ್ಮ ಬದುಕಿನ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಿದೆ. ಹೀಗಾಗಿ ನಾವು ಇಂದು ದೈಹಿಕ ಶ್ರಮಕ್ಕಿಂತ ಹೆಚ್ಚಾಗಿ ಮಾನಸಿಕ ಶ್ರಮಪಡುತ್ತಿದ್ದೇವೆ. ವಿಜ್ಞಾನ ಮುಂದುವರೆದಿರುವುದರಿಂದ ಮೊದಲಿನಷ್ಟು ದೈಹಿಕ ಶ್ರಮಪಡಬೇಕಾದ ಅಗತ್ಯವಿಲ್ಲವಾದರೂ ಅದಕ್ಕಿಂತ ಎರಡರಷ್ಟು ಮಾನಸಿಕ ಶ್ರಮಪಡುತ್ತಿದ್ದೇವೆ.

ಅಷ್ಟೇ ಅಲ್ಲ, ಸದಾ ಅನಗತ್ಯ ಕಲ್ಪನೆಗಳನ್ನು ಕೂಡ ಎಳೆದುಕೊಳ್ಳುತ್ತಾ ಸಾಗುತ್ತಿರುತ್ತೇವೆ. ನಮಗೆ ಇವತ್ತಿನ ಬದುಕಿಗಿಂತ ನಾಳೆಯ ಬದುಕಿನ ಬಗ್ಗೆಯೇ ಕಾಳಜಿ. ಹೀಗಾಗಿ ಆ ನಾಳೆಗಾಗಿ ಇವತ್ತೇ ಹೆಚ್ಚಿನ ಶ್ರಮವಹಿಸಿ ದುಡಿಯುತ್ತೇವೆ. ಅಷ್ಟೇ ಅಲ್ಲ, ನಾಳೆಗಾಗಿ ಏನೆಲ್ಲಾ ಮಾಡಬೇಕೆಂಬುದರ ಬಗ್ಗೆ ಇಲ್ಲ ಸಲ್ಲದ ಅನಗತ್ಯ ಕಲ್ಪನೆಗಳನ್ನು ಹುಟ್ಟಿ ಹಾಕಿಕೊಳ್ಳುತ್ತೇವೆ.

ಒತ್ತಡದ ಬದುಕಿನಲ್ಲಿ ಮನಸ್ಸನ್ನು ಆರೋಗ್ಯವಾಗಿಡುವುದು ಹೇಗೆ?ಒತ್ತಡದ ಬದುಕಿನಲ್ಲಿ ಮನಸ್ಸನ್ನು ಆರೋಗ್ಯವಾಗಿಡುವುದು ಹೇಗೆ?

ಇದರಿಂದಾಗಿ ನಾವು ಮಾನಸಿಕ ತೊಂದರೆಗಳನ್ನೂ ಅನುಭವಿಸುತ್ತಿದ್ದೇವೆ. ಮನುಷ್ಯನಿಗೆ ಕಲ್ಪನೆ ಬೇಕು. ಆದರೆ ಕಲ್ಪನೆಯೇ ಬದುಕಾಗಬಾರದು. ಹೀಗಾದರೆ ನಾವು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ನಿಜ ಹೇಳಬೇಕೆಂದರೆ ಕಲ್ಪನಾಶಕ್ತಿ ಇದೆಯಲ್ಲ ಅದು ಮನುಷ್ಯನಿಗೆ ದೇವರು ನೀಡಿದ ವರ ಎಂದರೂ ತಪ್ಪಾಗಲಾರದು.

Dreams are more powerful than facts

ಆದರೆ ನಾವು ಅದನ್ನು ಸದ್ವಿನಿಯೋಗ ಮಾಡದೆ, ಗಾಳಿಗೋಪುರ ಕಟ್ಟುವುದರಲ್ಲಿ, ಹಗಲು ಕನಸು ಕಾಣುವುದರಲ್ಲಿ, ಅರ್ಥವಿಲ್ಲದ, ಉಪಯೋಗಕ್ಕೆ ಬಾರದ ವಿಚಾರಗಳನ್ನು ಕಲ್ಪಿಸಿಕೊಳ್ಳುವುದರಲ್ಲಿ ಹೆಚ್ಚಿನ ಆಸಕ್ತಿ. ನಿಜ ಹೇಳಬೇಕೆಂದರೆ ಇವು ಕಾಲ್ಪನಿಕ. ಅಷ್ಟೆ ಮಾತ್ರವಲ್ಲ ನಿರಾಧಾರವೂ ಹೌದು.

ಆದರೆ ಅವು ತರುವ ನಿರಾಶೆ ವಾಸ್ತವವಾದವುಗಳು... ಭಯಗಳು ನಿರಾಧಾರವಾದರೂ ಅವು ಉಂಟು ಮಾಡುವ ತಲ್ಲಣ ನಮ್ಮ ಬದುಕಿಗೆ ಮಾರಕವಾಗಿ ಬಿಡುತ್ತದೆ. ಹಾಗೆಂದು ಕಲ್ಪಿಸಿಕೊಳ್ಳುವುದು ತಪ್ಪೇ? ಎಂಬ ಪ್ರಶ್ನೆ ಉದ್ಭವಿಸಬಹುದು.

ಬಯಕೆಯಿಲ್ಲದ ಮನುಷ್ಯ ಮನುಷ್ಯನೇ ಅಲ್ಲ, ಅದಕ್ಕೆ ಅಂತ್ಯವೂ ಇಲ್ಲ...ಬಯಕೆಯಿಲ್ಲದ ಮನುಷ್ಯ ಮನುಷ್ಯನೇ ಅಲ್ಲ, ಅದಕ್ಕೆ ಅಂತ್ಯವೂ ಇಲ್ಲ...

ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಸರಿಯಾಗಿ ಬಳಸುವುದಾದರೆ ನಮಗೆ ಕಲ್ಪನೆಗಿಂತ ಆಪ್ತವಾದದ್ದು ಬೇರೆ ಯಾವುದೂ ಇಲ್ಲ. ಆದರೆ ನಾವು ಅದನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳದೆ ನಿರಾಶರಾಗುತ್ತೇವೆ.

ನಿಜ ಹೇಳಬೇಕೆಂದರೆ ನಮ್ಮ ಬದುಕಿನ ಅಮೂಲ್ಯವಾದ ಭಾಗ ಕೂಡ ಕಲ್ಪನೆಯ ಲೋಕದಲ್ಲಿ ಕಳೆದು ಹೋಗಿರುತ್ತದೆ. ಆದರೆ ಅದು ನಮ್ಮ ಅರಿವಿಗೆ ಬಂದಿರುವುದಿಲ್ಲ. ಒಂದು ಮುಖ್ಯವಾಗಿ ನೆನಪಿಡಬೇಕಾದ ಅಂಶ ಏನೆಂದರೆ, ಅನಗತ್ಯ ಕಲ್ಪನಾ ಲೋಕದಲ್ಲಿ ವಿಹರಿಸುವ ಚಟವನ್ನು ತ್ಯಜಿಸುವುದು ಒಳ್ಳೆಯದು.

ಇಲ್ಲದೆ ಹೋದರೆ ನಮ್ಮನ್ನು ನಮ್ಮ ಮನಸ್ಸನ್ನು ನಿಯಂತ್ರಣಕ್ಕೆ ತರುವುದು ಕಷ್ಟವಾಗುತ್ತದೆ. ಇದನ್ನು ಸಾಧಿಸುವುದು ಹೇಗೆ ಎಂಬುವುದಕ್ಕೆ ದೃಷ್ಟಾಂತ ಕಥೆಯೊಂದು ಹೀಗಿದೆ....

ಉಪಾಸನೆಯಂತೆ, ಪೂಜೆಯಂತೆ ಕೆಲಸ ಮಾಡಿದಾಗ ಮಾತ್ರ ಒಳ್ಳೆಯ ಫಲಉಪಾಸನೆಯಂತೆ, ಪೂಜೆಯಂತೆ ಕೆಲಸ ಮಾಡಿದಾಗ ಮಾತ್ರ ಒಳ್ಳೆಯ ಫಲ

ಒಂದಷ್ಟು ಕುಡಿದು ಮತ್ತೇರಿದ ಸಭ್ಯ ವ್ಯಕ್ತಿಯೊಬ್ಬ ನಿಧಾನವಾಗಿ ಬೀದಿಯಲ್ಲಿ ನಡೆದು ಹೋಗುತ್ತಿದ್ದನು. ಅವನ ಕೈಯ್ಯಲ್ಲಿ ಒಂದು ಪೆಟ್ಟಿಗೆಯಿತ್ತು. ಆ ಪೆಟ್ಟಿಗೆಯ ಮುಚ್ಚಳದ ಭಾಗದಲ್ಲಿ ಹಾಗೂ ಅಕ್ಕಪಕ್ಕದಲ್ಲಿ ಸಾಲಾದ ರಂಧ್ರಗಳಿದ್ದವು. ನೋಡಿದರೆ ಆತ ಆ ಪೆಟ್ಟಿಗೆಯೊಳಗೆ ಏನೋ ಒಂದು ಜೀವಂತವಾದ ಪ್ರಾಣಿಯೊಂದನ್ನು ಇರಿಸಿಕೊಂಡಂತೆ ಕಾಣುತ್ತಿತ್ತು.

ದಾರಿಯಲ್ಲಿ ಪರಿಚಿತನೊಬ್ಬ ತಡೆದು ಮಾತನಾಡಿಸಿ 'ಏನಿದು ನಿನ್ನ ಪೆಟ್ಟಿಗೆಯೊಳಗೆ' ಎಂದು ಕೇಳಿದನು. ಅದಕ್ಕೆ 'ಇದರೊಳಗೊಂದು ಮುಂಗುಸಿಯಿದೆ' ಎಂದನು. 'ಅದು ಸರಿ ಆ ಪೆಟ್ಟಿಗೆಯೊಳಗೆ ಏಕಿಟ್ಟಿರುವೆ' ಎಂದು ಮತ್ತೆ ಪ್ರಶ್ನಿಸಿದನು ಪರಿಚಿತ.

ಈಗ ನೋಡು ನಾನು ನಿಜವಾಗಿಯೂ ಕುಡಿದಿಲ್ಲ. ಆದರೆ ಇಷ್ಟರಲ್ಲಿಯೇ ಕುಡಿಯುತ್ತೇನೆ. ಹಾಗೆ ನಾನು ಕುಡಿದಾಗ ನನ್ನ ಸುತ್ತ ಹಾವುಗಳು ಕಾಣಿಸಿಕೊಳ್ಳುತ್ತವೆ. ಆಗ ನನಗೆ ಭಯವಾಗುತ್ತದೆ. ಆ ಹಾವುಗಳಿಂದ ರಕ್ಷಿಸಿಕೊಳ್ಳಲು ಈ ಪೆಟ್ಟಿಗೆಯೊಳಗೆ ಮುಂಗುಸಿಯನ್ನಿರಿಸಿಕೊಂಡಿದ್ದೇನೆ' ಎಂದನು.

ಅದಕ್ಕೆ ಪರಿಚಿತ 'ಅಯ್ಯೋ ದೇವರೆ, ನಿನಗೆ ಕಾಣುತ್ತದೆ ಎಂದೆಯಲ್ಲ, ಅದೆಲ್ಲವೂ ಕಲ್ಪನೆಯ ಹಾವುಗಳು' ಎಂದನು. 'ನನ್ನ ಪೆಟ್ಟಿಗೆಯೊಳಗೆ ಇರುವುದು ಸಹ ಕಲ್ಪನೆಯ ಮುಂಗುಸಿಯೇ' ಎಂದನು ಈತ. ನಿಜವಾಗಿ ಹೇಳಬೇಕೆಂದರೆ ಆ ಪೆಟ್ಟಿಗೆ ಖಾಲಿಯಾಗಿಯೇ ಇತ್ತು.

ಈ ಕಥೆಯ ಸಾರಾಂಶವೇನೆಂದರೆ, ನಾವು ಒಂದು ಕಲ್ಪನೆಯನ್ನು ನಿಷ್ಪಲಗೊಳಿಸಲು ಮತ್ತೊಂದು ಕಲ್ಪನೆಯನ್ನು ಅಪೇಕ್ಷಿಸುತ್ತೇವೆ. ತಪ್ಪಾದ ಕಲ್ಪನೆಯನ್ನು ತೊಡೆದು ಹಾಕಲು ಸರಿಯಾದ ಕಲ್ಪನೆ ಬೇಕು ಎಂಬುವುದಾಗಿ ಸ್ವಾಮಿ ವಿವೇಕಾನಂದರು ಹೇಳುತ್ತಾರೆ.

ಯಾರದ್ದೋ ಬಗ್ಗೆ, ಯಾವುದೋ ವಿಚಾರದಲ್ಲಿ ಸ್ಪಷ್ಟವಾಗಿ ಅರಿಯದೆ, ತಾವೇ ತಮಗಿಷ್ಟ ಬಂದಂತೆ ಕಲ್ಪಿಸಿಕೊಳ್ಳುವುದಿದೆಯಲ್ಲ ಅದು ಮಹಾಅಪರಾಧ. ಇದಕ್ಕೆ ಭಾರೀ ಬೆಲೆ ತೆರಬೇಕಾದ ಸಮಯ ಬಂದರೂ ಬರಬಹುದು. ಆದುದರಿಂದ ನಮ್ಮ ಕಲ್ಪನೆ ಸದಾ ಒಳ್ಳೆಯ ವಿಚಾರಕ್ಕೆ ಸಂಬಂಧಪಟ್ಟದ್ದಾಗಿರಬೇಕು.

ಕಲ್ಪನೆ ಎಂಬುದು ಬುದ್ದಿಯಾಚೆಗೆ ಹಾಗೂ ಎಲ್ಲೆಲ್ಲೂ ಕರೆದೊಯ್ಯುವ ಒಂದೇ ಒಂದು ಬೆಳಕು. ಭಗವಂತನನ್ನು ಕುರಿತ ಚಿಂತನೆಯೇ ಅತ್ಯಂತ ಪರಿಶುದ್ಧವಾದ ಕಲ್ಪನೆ. ಭಗವದ್ ವಿಷಯಗಳಲ್ಲಿ ನಾವು ಮಗ್ನರಾದಷ್ಟು ನಮ್ಮ ಮನಸ್ಸಿನ ತಲ್ಲಣಗಳು ಕಡಿಮೆಯಾಗುತ್ತವೆ ಎಂಬುದು ಮಾತ್ರ ಸತ್ಯ.

English summary
Here's a story about imagination.The story is said about imagination, fear and mind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X