ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ್ಮಹತ್ಯೆಗೆ ಯತ್ನಿಸುವ ಆಸೆಗಳನ್ನು ಪದೇ ಪದೇ ಬದುಕಿಸಿ

By Sushma Chatra
|
Google Oneindia Kannada News

ಮನುಷ್ಯನ ಆಸೆಗಳಿಗೆ ಮಿತಿಯಿಲ್ಲ. ನಿರಾಶಾವಾದಿಯಾಗಿರುವ ಮನುಷ್ಯ ಖಂಡಿತ ಮನುಷ್ಯನೇ ಅಲ್ಲ. ಹಾಗಂತ ನೀವಂದುಕೊಂಡಿದ್ದೆಲ್ಲ ನೆರವೇರಿ ಬಿಟ್ಟರೆ ಅದು ಜೀವನ ಅನ್ನಿಸಿಕೊಳ್ಳುವುದೇ ಇಲ್ಲ. ಪ್ರಪಂಚದ ಯಾವುದೇ ವ್ಯಕ್ತಿಯನ್ನು ನೀವು ಸರ್ವಸುಖಿಯೋ ಎಂದು ಕೇಳಿದರೆ ಖಂಡಿತ ಇಲ್ಲ ಎಂಬ ಉತ್ತರವೇ ಬರುತ್ತದೆ ಮತ್ತು ಏನಾದರೊಂದು ಗೋಳು ಹೇಳುವುದು ಮಾಮೂಲಾಗಿರುತ್ತದೆ. ಈ ಗೋಳು ಪ್ರಾರಂಭವಾಗುವುದೇಕೆ ಗೊತ್ತೆ? ಹಲವು ಕಾರಣಗಳಿರುತ್ತದೆ. ಅದರಲ್ಲಿ ಪ್ರಮುಖವಾಗಿರುವ ಕಾರಣವೊಂದಿದೆ, ಅದುವೇ ಆಸೆಗಳು ಆತ್ಮಹತ್ಯೆ ಮಾಡಿಕೊಳ್ಳುವುದು!

 ಆಸೆಗಳು ಮುಂದಿನ ನಡೆಯ ಶಿಕ್ಷಕ

ಆಸೆಗಳು ಮುಂದಿನ ನಡೆಯ ಶಿಕ್ಷಕ

ನಾನು ಒಂದು ಮನೆ ಕಟ್ಟಬೇಕು, ಸೈಟ್ ಖರೀದಿಸಬೇಕು, ಕೆಲಸಕ್ಕೆ ಹೋಗಬೇಕು, ಅಷ್ಟು ಸಂಬಳ ಬರಬೇಕು, ಕೈ ತುಂಬಾ ದುಡ್ಡಿರಬೇಕು, ಮಗಳ ಮದುವೆ ಧೂಮ್ ಧಾಮ್ ಎಂದು ಮಾಡಬೇಕು, ಚಿನ್ನ ಖರೀದಿಸಬೇಕು, ವಿದ್ಯಾರ್ಥಿಗಳಿಗಾದರೆ ಇಂತಿಷ್ಟು ಮಾರ್ಕ್ಸ್ ಬರಬೇಕು, ಕೆಲವರಿಗೆ ಪಾಸ್ ಆಗೋ ಆಸೆ... ಇತ್ಯಾದಿ ಇತ್ಯಾದಿ... ಪಟ್ಟಿ ಮಾಡುತ್ತಾ ಸಾಗಿದರೆ ಈ ಆಸೆಗಳಿಗೆ ನೋ ಲಿಮಿಟೇಷನ್. ನೀವು ನಿಮ್ಮ ಆಸೆಯನ್ನು ಯಾವಾಗ ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಿಲ್ಲವೋ ಆಗ ಆಸೆಗಳು ಜೀವ ಕಳೆದುಕೊಳ್ಳಲು ನಿರ್ಧರಿಸುತ್ತವೆ ಅರ್ಥಾತ್ ಸ್ವಯಂ ಸಾಯಲು ಪ್ರಾರಂಭಿಸುತ್ತವೆ. ಆಸೆಗಳ ಸಾಯುವಿಕೆಯೇ ನಿಮ್ಮ ಮಾನಸಿಕ ನೆಮ್ಮದಿಯನ್ನು ಹದಗೆಡಿಸುತ್ತದೆ. ಹಾಗಂತ ನಿರಾಶಾವಾದಿಯಾಗಿರುವುದಕ್ಕೆ ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಆಸೆಗಳು ಇರಲೇಬೇಕು. ಆಸೆಗಳಿಲ್ಲದೇ ಇದ್ದರೆ ಗುರಿ ಇರುವುದಿಲ್ಲ. ಗುರಿ ಇಲ್ಲದ ಜೀವನ ಗೋರಿ ಕಡೆಗೆ ಅಂತ ಗಾದೆಯೇ ಇಲ್ಲವೇ?

ಗುರಿ ತಲುಪುವುದು ಕಷ್ಟವಾಗುವಿಕೆಯಿದೆಯಲ್ಲ ಅದು ನಮ್ಮ ಮುಂದಿನ ನಡೆ ಹೇಗಿರಬೇಕು ಎಂದು ತಿಳಿಸುವ ಶಿಕ್ಷಕನಂತೆ. ಆ ಶಿಕ್ಷಕನ ಶಿಕ್ಷಣವನ್ನು ನಾವು ಸರಿಯಾಗಿ ಪಡೆಯದೇ ಹೋದರೆ ಆಸೆಗಳ ಜೀವ ಉಳಿಸುವಿಕೆಯೂ ಕಷ್ಟವಾಗಿ ಬಿಡುತ್ತದೆ. ಹೀಗಾಗಬಾರದು ಎಂದರೆ ನಿಮ್ಮ ಗುರಿಯೆಡೆಗಿನ ನಡೆಯಲ್ಲಿ ಬರುವ ಕಷ್ಟಗಳನ್ನು ನಾಜೂಕಾಗಿ ಎದುರಿಸುವ ಸಾಮರ್ಥ್ಯವು ನಿಮ್ಮಲ್ಲಿ ಬೆಳೆಯಬೇಕು. ಗುರಿ ಸ್ಪಷ್ಟವಾಗಿರಬೇಕು. ಹೆಚ್ಚಿನ ಸಂದರ್ಭದಲ್ಲಿ ವಿಚಾರದ ಬಗೆಗಿನ ಸ್ಪಷ್ಟತೆಯೇ ನಿಮ್ಮ ಆಸೆಗಳ ಜೀವಂತಿಕೆಗೆ ಕಾರಣವಾಗುತ್ತದೆ.

ಹೆಂಡತಿ ಆಸೆ ಈಡೇರಿಸಲು ನಿವೃತ್ತಿಯಾದ ದಿನ ಹೆಲಿಕಾಪ್ಟರ್ ಬುಕ್ ಮಾಡಿದ ಶಿಕ್ಷಕಹೆಂಡತಿ ಆಸೆ ಈಡೇರಿಸಲು ನಿವೃತ್ತಿಯಾದ ದಿನ ಹೆಲಿಕಾಪ್ಟರ್ ಬುಕ್ ಮಾಡಿದ ಶಿಕ್ಷಕ

 ಆಸೆಯ ಅಡ್ಡಗೋಲುಗಳು

ಆಸೆಯ ಅಡ್ಡಗೋಲುಗಳು

ಯಾವಾಗ ನೀವು ನಿಮ್ಮ ಆಸೆಗಳ ಬಗ್ಗೆ ಗೊಂದಲ ಸೃಷ್ಟಿ ಮಾಡಿಕೊಳ್ಳುತ್ತೀರೋ ಆಗ ಆಸೆಗಳು ಅಲ್ಲೋಲ ಕಲ್ಲೋಲವಾಗುತ್ತವೆ. ಅವುಗಳು ಗೊಂದಲದ ಗೂಡಿನ ಉಸಿರುಗಟ್ಟುವ ವಾತಾವರಣಕ್ಕೆ ಬಲಿಯಾಗಲು ಸಿದ್ಧವಾಗುತ್ತಲೇ ಸಾಗುತ್ತವೆ.

ನಿಮ್ಮ ಆಸೆ ಸಾಯುವುದಕ್ಕೆ 99 ಶೇಕಡಾ ನೀವೇ ಕಾರಣರಾಗಿರುತ್ತೀರಿ ಮತ್ತು ಕೇವಲ 1% ಇತರರು ಕಾರಣವಾಗಿರುತ್ತಾರೆ ಎಂಬುದು ನಿಮ್ಮ ಮನಸ್ಸಿನಲ್ಲಿರಬೇಕು. ಅವಮಾನ, ಅಗೌರವ, ಅಪಕೀರ್ತಿ, ನಿಮ್ಮ ಕೈಯಲ್ಲಿ ಸಾಧ್ಯವಿಲ್ಲ ಎಂಬ ಭಾವನೆ, ಭಯ ಇವು ಆಸೆಯ ಅಡ್ಡಗೋಲುಗಳು. ಆದರೆ ಆಸೆಯ ಜೀವಂತಿಕೆ ಬೇಕಾಗಿರುವುದು ನಿಮ್ಮ ಆತ್ಮವಿಶ್ವಾಸ, ಸ್ವಗೌರವ, ಸ್ವಾಭಿಮಾನ. ನಿಮ್ಮಿಂದ ಅಸಾಧ್ಯ ಎಂಬುದನ್ನು ಮೊದಲು ಮನಸ್ಸಿನಿಂದ ದೂರ ಮಾಡುವುದಕ್ಕೆ ಏನು ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಾ ಸಾಗಿದರೆ ಖಂಡಿತ ಆಸೆ ಸಾಯುವುದಿಲ್ಲ, ಬದುಕುತ್ತದೆ.

 ಧೃತರಾಷ್ಟ್ರನಂತೆ ಆಸೆಯನ್ನು ಬದುಕಿಸಿ

ಧೃತರಾಷ್ಟ್ರನಂತೆ ಆಸೆಯನ್ನು ಬದುಕಿಸಿ

ಆಸೆಯನ್ನು ಧೃತರಾಷ್ಟ್ರನಂತೆ ಜೀವಂತವಾಗಿಟ್ಟುಕೊಳ್ಳಬೇಕು. ಹೌದು, ಮಹಾಭಾರತದಲ್ಲಿ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತ ಧೃತರಾಷ್ಟ್ರನಿಗೆ ಭೀಮಸೇನ ಅದೆಷ್ಟು ಚುಚ್ಚುಮಾತುಗಳನ್ನಾಡುತ್ತಾನೆ. ನಮ್ಮ ಕಣ್ಣಿಗೆ ಮಹಾಭಾರತದಲ್ಲಿ ಯಾವಾಗಲೂ ಕೌರವರು ವಿಲನ್ ಮತ್ತು ಪಾಂಡವರು ಹೀರೋಗಳು. ಆದರೂ ಕೆಲವು ವಿಲನ್ ಗಳಿಂದಲೂ ಕಲಿಯುವಂಥದ್ದು ಇದೆ. ಕೌರವ ಕುಲವೇ ಅಂತ್ಯವಾಗಿದೆ ಎಂಬ ವಿಚಾರ ತಿಳಿದ ಮೇಲೂ ತಾನು ಬದುಕಬೇಕು, ಮತ್ತೇನನ್ನೋ ಸಾಧಿಸಬೇಕು ಎಂದು ಜೀವನದ ಆಸೆಯನ್ನು ಬಿಡದೆ ಅಡಗಿ ಕುಳಿತ ಧೃತರಾಷ್ಟ್ರ ಬದುಕನ್ನು ಅಂತ್ಯಗೊಳಿಸಿಕೊಳ್ಳುವ ನಿರ್ಧಾರ ಮಾಡುವುದೇ ಇಲ್ಲ. ಬದಲಾಗಿ ಬದುಕಬೇಕು ಎಂಬ ಆಸೆಯನ್ನು ಭೀಮನ ಚುಚ್ಚು ಮಾತುಗಳನ್ನು ಕೇಳಿಸಿಕೊಳ್ಳುತ್ತಲೇ ಅದೆಷ್ಟೋ ವರ್ಷಗಳ ಕಾಲ ಜೀವಂತವಾಗಿಸುತ್ತಾ ಸಾಗುತ್ತಾನಲ್ಲ! ಇದಲ್ಲವೇ ಆಸೆಯನ್ನು ಜೀವಂತವಾಗಿಸುವ ಪರಿ. ಭೀಮನಂತೆ ಚುಚ್ಚು ಮಾತುಗಳನ್ನಾಡುವವರು ನಿಮ್ಮ ಸುತ್ತಲೂ ಇರುತ್ತಾರೆ. ಅವರು ನಿಮ್ಮ ಆಸೆಯನ್ನು ಸಾಯಿಸಲು ಪ್ರಯತ್ನಿಸುವಾಗ ನಿಮಗೆ ಗೊತ್ತಿಲ್ಲದೆ ಆಸೆ ಕಮರುತ್ತಿರುತ್ತದೆ. ಆದರೆ ನೀವು ನಿಮ್ಮೊಳಗಿನ ಅಂತಃಶಕ್ತಿಯಿಂದ ಆಸೆಯನ್ನು ಪುನಃ ಬದುಕಿಸಿ ನಿಮ್ಮ ಆಸೆಯೆಡೆಗೆ ಪ್ರಯತ್ನ ನಡೆಸಿ.

ಉದ್ಯೋಗ ಕಳೆದುಕೊಂಡು ಒತ್ತಡಲ್ಲಿದ್ದ ಟೆಕಿ ಕುಟುಂಬದ ನಾಲ್ವರು ಸಾವುಉದ್ಯೋಗ ಕಳೆದುಕೊಂಡು ಒತ್ತಡಲ್ಲಿದ್ದ ಟೆಕಿ ಕುಟುಂಬದ ನಾಲ್ವರು ಸಾವು

 ಆಸೆಯೇ ದುಃಖಕ್ಕೆ ಮೂಲವಂತೆ!

ಆಸೆಯೇ ದುಃಖಕ್ಕೆ ಮೂಲವಂತೆ!

ಕೆಲವು ಆಸೆಗಳು ಸಾಯುವುದಕ್ಕೆ ಕಾರಣವೇ ಭಯ. ಹೀಗಂದುಕೊಂಡದ್ದು ಆಗದೇ ಇದ್ದರೆ ಎಂಬ ಭಯವೇ ನಿಮ್ಮ ಆಸೆಯನ್ನು ಅರ್ಧ ಸಾಯಿಸುತ್ತದೆ. ಹಾಗಾಗಿ ನಿಮ್ಮ ಆಸೆಯನ್ನು ಆದಷ್ಟು ಧನಾತ್ಮಕವಾಗಿ ವಿಷುವಲೈಸ್ ಮಾಡಿಕೊಳ್ಳಿ. ಧನಾತ್ಮಕ ಚಿಂತನೆಗಳು ಆಸೆಯನ್ನು ಮತ್ತಷ್ಟು ಬೆಳೆಸುತ್ತವೆ. ಆಸೆಗಳಿಗೆ ಧೈರ್ಯ ಬೇಕು. ನಿಮ್ಮೊಳಗಿನ ಸಾಮರ್ಥ್ಯವನ್ನು ಪದೇ ಪದೇ ಪ್ರಶ್ನೆ ಮಾಡಿಕೊಳ್ಳಬೇಕು. ಇಷ್ಟೇನಾ ನಿನ್ನ ಸಾಮರ್ಥ್ಯ, ಇನ್ನೂ ಇದೆಯಲ್ಲವೇ? ಯಾಕೆ ಮಾಡುತ್ತಿಲ್ಲ! ತೊಂದರೆ ಏನು?ಆ ತೊಂದರೆಗೆ ಪರಿಹಾರ ಏನು? ಹೀಗೆ ಆಸೆಯ ಸುತ್ತಲಿನ ಪ್ರಶ್ನೆಗಳಿಗೆ ಭಯ ಅನ್ನೋ ಪೊರೆ ಸೋಕದಂತೆ ನೋಡಿಕೊಂಡು ಧನಾತ್ಮಕವಾಗಿ ಚಿಂತನೆ ಮಾಡಿ. ಆಗ ಆಸೆಗಳಿಗೆ ಬದುಕಬೇಕು ಅನ್ನಿಸುತ್ತದೆ. ನಿಮ್ಮ ಬಗೆಗಿನ ನಿಮ್ಮ ಸ್ವಯಂ ಕಾಳಜಿ ಆಸೆಯನ್ನು ಹೆಚ್ಚಿಸುತ್ತದೆ.

ಆಸೆಯಿಂದ ದುಃಖವಾಗುವುದಿಲ್ಲ. ಆಸೆ ಸತ್ತಾಗ ದುಃಖವಾಗುತ್ತದೆ. ಹಾಗಂತ ಆಸೆ ಪಡಬೇಡಿ ಎಂಬುದರಲ್ಲಿ ಅರ್ಥವೇ ಇಲ್ಲ. ಆಸೆ ಇರಲೇಬೇಕು. ಆಸೆ ಬದುಕಲೇಬೇಕು. ಆಗಲೇ ಜೀವನಕ್ಕೊಂದು ಅರ್ಥವಿರುವುದು. ಅತಿಯಾದ್ರೆ ಅಮೃತವೂ ವಿಷ ನಿಜ. ಹಾಗಾಗಿ ದುರಾಸೆ ಇರಬಾರದು. ಆಸೆ ಖಂಡಿತ ಇರಬೇಕು. ದುಃಖವಾಗಬಹುದು ಎಂದು ಆಸೆಯನ್ನು ತ್ಯಜಿಸಿ ಅವುಗಳನ್ನು ಸಾಯಿಸುತ್ತಲೇ ಸಾಗಿದರೆ ಮನುಷ್ಯನಾಗಿ ಹುಟ್ಟಿರುವುದಕ್ಕೆ ಅರ್ಥವೇ ಇಲ್ಲವಲ್ಲವೇ? ಆಸೆಯು ದುಃಖಕ್ಕೆ ಕಾರಣವಾಗದಂತೆ ನೋಡಿಕೊಳ್ಳಬೇಕೆಂದರೆ ಆಸೆಯನ್ನು ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಂಡು ಅವುಗಳ ಜೀವಂತಿಕೆಗೆ ನಿಮ್ಮ ಹೆಜ್ಜೆ ಇರಬೇಕು.

English summary
There is no limit to man's desires. Being a pessimist is certainly not a life. But it is not worth living if we get everything we desire. And also we should not let desires to committ suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X