ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಸಂತ್ರಸ್ತರಿಗಾಗಿ ತೆರಳಿದ್ದ ಲಾರಿ ಚಾಲಕ ಗಂಗರಾಜು ಅನುಭವ

|
Google Oneindia Kannada News

"ಕೇರಳಕ್ಕೆ ಹೋಗಿ ಬಾ ಅಂತ ನಮ್ಮ ಯಜಮಾನರು ಹೇಳಿದಾಗ ಮೊದಲಿಗೆ ನಾನು ಒಪ್ಪಿಕೊಳ್ಳಲಿಲ್ಲ. ಆದರೆ ಬಹಳ ಬೇಜಾರಿನಿಂದ ಅವರು ಹೇಳಿದ ಮಾತಿಗೆ ಕರಗಿಹೋದೆ. ಆ ಮೇಲೆ ಅಲ್ಲಿಗೆ ಹೋಗಿಬಂದೆ. ಅದೊಂದು ಅನುಭವ ನಾನು ಬದುಕಿರುವವರೆಗೆ ನೆನಪಿಟ್ಟುಕೊಂಡಿರ್ತೀನಿ" ಎಂದರು ಲಾರಿ ಚಾಲಕ ಗಂಗರಾಜು.

ಶ್ರೀರಾಮ ಟ್ರಾನ್ಸ್ ಪೋರ್ಟ್ ನ ಮಾಲೀಕರಾದ ಕೆ.ಕೆ.ಅಗರ್ ವಾಲ್ (ರವಿಕುಮಾರ್) ಹಾಗೂ ಉಸ್ತುವಾರಿ ದೊಡ್ಡಬಳ್ಳಾಪುರದ ವಿಜಯ್ ಕುಮಾರ್ ಇವರಿಬ್ಬರ ಮಾತಿಗೆ ತಾವು ಕಟ್ಟುಬಿದ್ದು, ಕೇರಳ ನೆರೆ ಸಂತ್ರಸ್ತರಿಗಾಗಿ ಕನ್ನಡದ ಟೀವಿ ಮಾಧ್ಯಮವೊಂದು ಕಳಿಸಿದ ಪದಾರ್ಥಗಳನ್ನು ಕಲ್ ಪೇಟೆಯ ತನಕ ತಲುಪಿಸಿ ಬಂದ ತಮ್ಮ ಅನುಭವಗಳನ್ನು ಗಂಗರಾಜು ಒನ್ಇಂಡಿಯಾ ಕನ್ನಡ ಜತೆಗೆ ಹಂಚಿಕೊಂಡರು.

ಕೇರಳದಲ್ಲಿ ಮನೆಗೆ ವಾಪಸ್ ಬಂದವರನ್ನು ಸ್ವಾಗತಿಸಲು ಮೊಸಳೆ, ಹಾವುಗಳುಕೇರಳದಲ್ಲಿ ಮನೆಗೆ ವಾಪಸ್ ಬಂದವರನ್ನು ಸ್ವಾಗತಿಸಲು ಮೊಸಳೆ, ಹಾವುಗಳು

"ನಮ್ಮದು ಹತ್ತು ಚಕ್ರದ ಲಾರಿ. ದೊಡ್ಡಬಳ್ಳಾಪುರದಿಂದ ಯಶವಂತಪುರದ ಟೀವಿ ಆಫೀಸಿಗೆ ಹೋಗಿ, ಅಲ್ಲಿಂದ ಸಂತ್ರಸ್ತರಿಗೆ ಕೊಡಬೇಕಾದ ವಸ್ತುಗಳನ್ನೆಲ್ಲ ಲೋಡ್ ಮಾಡಿಕೊಂಡು, ರಾತ್ರಿ ಹನ್ನೆರಡು ಗಂಟೆಗೆ ಅಲ್ಲಿಂದ ಹೊರಟೆವು. ನಂಜನಗೂಡು-ಗುಂಡ್ಲುಪೇಟೆ-ಕಲ್ಲಿಕೋಟೆ ರಸ್ತೆ ಮೂಲಕ ಮುನ್ನೂರಾ ಐವತ್ತು ಕಿ.ಮೀ. ದೂರದ ಕಲ್ ಪೇಟೆ ತಲುಪಿದಾಗ ಮಧ್ಯಾಹ್ನ ಆಗಿತ್ತು. ಅಲ್ಲಿಂದ ಮುಂದಕ್ಕೆ ಹೋಗುವುದಕ್ಕೆ ಆಗಲ್ಲ ಅನ್ನೋದನ್ನು ಸ್ಪಷ್ಟವಾಗಿ ಹೇಳಿಬಿಟ್ಟರು" ಎಂದರು ಗಂಗರಾಜು.

ಇಲ್ಲಿಂದ ಮುಂದೆ ಅವರದೇ ಮಾತುಗಳಲ್ಲಿ ಓದಿ.

ಕೇರಳಕ್ಕೆ ಹೋಗಬೇಕು ಅಂದಾಕ್ಷಣ ಭಯವಾಯಿತು

ಕೇರಳಕ್ಕೆ ಹೋಗಬೇಕು ಅಂದಾಕ್ಷಣ ಭಯವಾಯಿತು

ನಮಗೆ ಸ್ವಲ್ಪ ಮಟ್ಟಿಗೆ ತಡವಾಗಿದ್ದು ಮೈಸೂರಿನಲ್ಲಿ ಅರಣ್ಯ ಇಲಾಖೆಯವರ ಅನುಮತಿ ಪಡೆಯುವ ಹೊತ್ತಿನಲ್ಲಿ. ಬಕ್ರೀದ್ ಇದ್ದಿದ್ದರಿಂದ ಸ್ವಲ ತಡವಾಯಿತು. ಆಮೇಲೆ ಅಲ್ಲಿಂದ ಕೇರಳಕ್ಕೆ ಹೋಗುವಾಗ ಏನೂ ತೊಂದರೆ ಆಗಲಿಲ್ಲ. ನನ್ನ ಜತೆಗೆ ರಾಜೇಶ್ ಅನ್ನೋ ಇನ್ನೊಬ್ಬ ಡ್ರೈವರ್ ಹಾಗೂ ಚಾನಲ್ ನಿಂದ ಮಂಜುನಾಥ್ ಬಂದಿದ್ದರು. ಹಾಗೆ ನೋಡಿದರೆ ಬಹಳ ಹೆದರಿದ್ದ ನನಗೆ ಧೈರ್ಯ ಹೇಳಿದವರೇ ಮಂಜುನಾಥ್. ಕೇರಳದಲ್ಲಿ ಮಳೆ ಬಂದು ಪರಿಸ್ಥಿತಿ ಹಾಗಿದೆ ಅಂತ ತಿಳಿದಿದ್ದ ನನಗೆ ಸುತಾರಾಂ ಹೋಗೋದು ಇಷ್ಟವಿರಲಿಲ್ಲ. ಮಾಮೂಲಿ ಕೆಲಸ ಬರುತ್ತದಲ್ಲಾ ಹಾಗೆ ಅಂದುಕೊಂಡಿದ್ದೆ. ಆದರೆ ಕೇರಳಕ್ಕೆ ಹೋಗಬೇಕು ಅಂದ ತಕ್ಷಣ ಬಹಳ ಗಾಬರಿ ಆಯಿತು. ಅನಿವಾರ್ಯವಾಗಿ ಹೊರಟು ನಿಂತೆ. ನಾವು ಸಂತ್ರಸ್ತರ ಪರಿಹಾರಕ್ಕೆ ಅಂತ ಪದಾರ್ಥಗಳನ್ನು ತೆಗೆದುಕೊಂಡು ಹೋಗ್ತಾ ಇದ್ದುದರಿಂದ ಯಾವುದೋ ಪರ್ಮಿಟ್ ತೆಗೆದುಕೊಳ್ಳಬೇಕಿರಲಿಲ್ಲ. ಒಂದು ಕಡೆ ಲಾರಿ ಚೆಕ್ ಮಾಡಿದ್ದರು ಅಷ್ಟೇ.

ರಸ್ತೆ ಪಕ್ಕಕ್ಕೆ ಲಾರಿ ಇಳಿದರೆ ಕಥೆ ಮುಗಿಯಿತು

ರಸ್ತೆ ಪಕ್ಕಕ್ಕೆ ಲಾರಿ ಇಳಿದರೆ ಕಥೆ ಮುಗಿಯಿತು

ಹೋಗುವ ದಾರಿ ಮಧ್ಯೆ ಒಂದು ಕಡೆ ಮಾತ್ರ ರಸ್ತೆ ಕುಸಿದಿದ್ದು ನೋಡಿದೆ. ಆದರೆ ರಸ್ತೆ ಪಕ್ಕದಲ್ಲಿ ಹರಿಯುತ್ತಿದ್ದ ಹಳ್ಳಗಳನ್ನು ನೋಡಿದರೆ ಹೇಳಬಹುದಿತ್ತು ಅಲ್ಲಿ ಯಾವ ಪ್ರಮಾಣದಲ್ಲಿ ಮಳೆ ಆಗಿರಬಹುದು ಅಂತ. ನಮ್ಮದು ಮೊದಲೇ ಹತ್ತು ಚಕ್ರದ ಲಾರಿ. ಅಕಸ್ಮಾತ್ ರಸ್ತೆ ಪಕ್ಕಕ್ಕೆ ಇಳಿದುಬಿಟ್ಟರೆ ಮುಗಿಯಿತು ಕಥೆ. ಆ ಗಾಬರಿಯಲ್ಲೇ ಲಾರಿ ಓಡಿಸಿದ್ದೀನಿ. ಅಂತೂ ಮಧ್ಯಾಹ್ನ ಸುಲ್ತಾನ್ ಬತ್ತೇರಿಗೆ ಹೋಗಿ ತಲುಪಿದೆವು. ಅಲ್ಲಿಂದ ಚಾನಲ್ ನ ಮಂಜುನಾಥ್ ಅವರು ಮತ್ತೊಬ್ಬರಿಗೆ ಫೋನ್ ಮಾಡಿದರು. ಕಲ್ ಪೇಟೆಗೆ ಬಂದು, ಎಲ್ಲ ವಸ್ತುಗಳನ್ನು ಇಳಿಸಿಕೊಡಿ. ಅಲ್ಲಿಂದ ಮುಂದೆ ದೊಡ್ಡ ವಾಹನಗಳು ಹೋಗಲ್ಲ. ಸಣ್ಣ-ಸಣ್ಣ ಗಾಡಿಗಳಲ್ಲೇ ಅವುಗಳನ್ನು ಸರಬರಾಜು ಮಾಡ್ತೀವಿ ಅಂತ ಆ ಕಡೆಯಿಂದ ಹೇಳಿದರು. ಸುಲ್ತಾನ್ ಬತ್ತೇರಿಯಿಂದ ಐವತ್ತು ಕಿಲೋಮೀಟರ್ ದೂರದ ಕಲ್ ಪೇಟೆಗೆ ಹೋದೆವು. ತಂದಿದ್ದ ಪ್ರತಿ ವಸ್ತುವಿನ ಲೆಕ್ಕ ಕೊಟ್ಟು, ಆ ಬಗ್ಗೆ ಬರೆದುಕೊಂಡರು ಮಂಜುನಾಥ್. ಆ ಮೇಲೆ ಅಲ್ಲಿಂದ ಹೊರಟೆವು.

ಎರಡು ಹೆಣ್ಣಾನೆ ಜತೆಗೆ ಮರಿಯಾನೆ ಎದುರಾಯಿತು

ಎರಡು ಹೆಣ್ಣಾನೆ ಜತೆಗೆ ಮರಿಯಾನೆ ಎದುರಾಯಿತು

ವಾಪಸ್ ಬರುವಾಗ ಕಲ್ ಪೇಟೆಯಲ್ಲೇ ಊಟ ಮಾಡಿದೆವು. ಹೊರಡುವಾಗ ಮಳೆ ಸುರಿಯುತ್ತಲೇ ಇತ್ತು. ಅಲ್ಲಿಗೆ ಹೋಗುವಾಗಲೂ ಮಳೆ ಬರುತ್ತಲೇ ಇತ್ತು. ಅರಣ್ಯ ಇಲಾಖೆಯವರ ಚೆಕ್ ಪೋಸ್ಟ್ ಗೆ ಬರುವ ಹೊತ್ತಿಗೆ ಮಳೆ ಜೋರಾಗಿತ್ತು. ಇನ್ನು ಆ ದಾರಿಯಲ್ಲಿ ಬರುವಾಗ ಮಧ್ಯದಲ್ಲಿ ಒಂದು ಕಡೆ ಎರಡು ಹೆಣ್ಣಾನೆ, ಒಂದು ಮರಿ ಆನೆ ಎದುರಾಯಿತು. ಒಂದು ಕ್ಷಣ ಎದೆ ಧಸಕ್ ಅಂದುಹೋಯಿತು. ಬರೀ ಆನೆಗಳಿದ್ದರೆ ಸಮಸ್ಯೆ ಅಲ್ಲ. ಅದರ ಜತೆಗೆ ಮರಿ ಇದ್ದರೆ ಹೆಚ್ಚು ಅಪಾಯಕಾರಿ. ರಸ್ತೆ ಮಧ್ಯಕ್ಕೆ ಬಂದು ಸುಮಾರು ಹೊತ್ತು ನಿಂತು ಬಿಟ್ಟವು. ಎರಡೂ ಬದಿಯಲ್ಲೂ ವಾಹನಗಳು ಸಾಲಾಗಿ ನಿಂತವು. ಅವು ಅಲ್ಲಿಂದ ಮುಂದಕ್ಕೆ ಹೋಗುವುದಕ್ಕೆ ಬಹಳ ಸಮಯ ಆಯಿತು. ಆ ಮೇಲೆ ಅಲ್ಲಿಂದ ಹೊರಟು ಬಂದೆವು. ಆದರೆ ಆ ಕ್ಷಣದಲ್ಲಿ ಮಾತ್ರ ಬಹಳ ಭಯ ಆಯಿತು. ಏಕೆಂದರೆ ಆನೆಗಳು ನಮಗೆ ಬಹಳ ಹತ್ತಿರದಲ್ಲೇ ಇವೆ. ಹಿಂದಾಗಲಿ, ಮುಂದಾಗಲಿ ಹೋಗುವುದಕ್ಕೆ ಆಗಲ್ಲ. ಜತೆಗೆ ಮರಿ ಬೇರೆ ಇದೆ. ಆ ದೇವರು ಕಾಪಾಡಿದ.

ನಮ್ಮ ಕೊಡಗಿನ ಜನರ ಸ್ಥಿತಿಯೇ ಅಲ್ಲಿನವರದೂ ಆಗಿದೆ

ನಮ್ಮ ಕೊಡಗಿನ ಜನರ ಸ್ಥಿತಿಯೇ ಅಲ್ಲಿನವರದೂ ಆಗಿದೆ

ನಮ್ಮ ಕೊಡಗಿನಲ್ಲಿ ಜನರ ಸ್ಥಿತಿ ಹೇಗಾಗಿದೆಯೋ ಕೇರಳದಲ್ಲೂ ಬಹುತೇಕ ಹಾಗೇ ಇದೆ. ಅಥವಾ ಅದಕ್ಕೂ ಭೀಕರವಾಗಿರಬೇಕು. ಏಕೆಂದರೆ, ನಾನು ಕಲ್ ಪೇಟೆಯವರೆಗೆ ಅಷ್ಟೇ ನೋಡಿದ್ದು. ಅಲ್ಲಿಂದ ಮುಂದೆ ಬಹಳ ಕಷ್ಟ ಇದೆಯಂತೆ. ಇನ್ನು ಶ್ರೀರಾಮ ಟ್ರಾನ್ಸ್ ಪೋರ್ಟ್ ನ ನಮ್ಮ ಮಾಲೀಕರು ಕೊಡಗಿಗೆ ಫ್ರೀಯಾಗಿ ಲಾರಿ ಕಳಿಸಿಕೊಟ್ಟಿದ್ದರು. ಕೇರಳಕ್ಕೆ ಕಳಿಸುವಾಗಲೂ ಡೀಸೆಲ್ ಬಿಟ್ಟು ಇನ್ಯಾವುದಕ್ಕೂ ಹಣ ಪಡೆದಿಲ್ಲ. ಇದೆಲ್ಲಕ್ಕಿಂತ ಒಂದು ಲಾರಿ ಏನಾದರೂ ಹೆಚ್ಚು ಕಡಿಮೆ ಆಗಿಬಿಟ್ಟರೆ ಎಂಥ ರಿಸ್ಕ್ ಅಲ್ಲವಾ? ಅವೆಲ್ಲ ಲೆಕ್ಕ ಹಾಕದೆ ಕಳಿಸಿಕೊಟ್ಟರು. ನನ್ನ ಮೇಲೆ ಭರವಸೆ ಇಟ್ಟು ಈ ಜವಾಬ್ದಾರಿ ಕೊಟ್ಟರು. ದೊಡ್ಡಬಳ್ಳಾಪುರದ ಹತ್ತಿರ ತಿಮ್ಮಸಂದ್ರ ನನ್ನೂರು. ನನಗೆ ಮೂರು ಜನ ಮಕ್ಕಳು, ಹೆಂಡತಿ ಹಾಗೂ ಜತೆಗೆ ತಾಯಿ ಇದ್ದಾರೆ. ಅವರದೆಲ್ಲ ಜವಾಬ್ದಾರಿ ಹೊತ್ತಿರುವ ನನಗೆ ಇದ್ದ ಭಯ ದೂರ ಮಾಡಿ, ಒಂದೊಳ್ಳೆ ಕೆಲಸ ಮಾಡಿಸಿದರು. ಇನ್ನು ಜನರೆಲ್ಲ ಮಾತನಾಡ್ತಾರಲ್ಲ, ಅದರಿಂದಲೇ ಭಯ ಜಾಸ್ತಿ ಆಗಿಬಿಡುತ್ತದೆ. ನನಗೆ ಆಗಿದ್ದೂ ಅದೇ. ಕಷ್ಟ ಮನುಷ್ಯರಿಗಲ್ಲದೆ ಮರಕ್ಕೆ ಬರುತ್ತಾ? ಒಬ್ಬ ಮನುಷ್ಯನಿಗೆ ಮತ್ತೊಬ್ಬ ಮನುಷ್ಯನೇ ಆಗಬೇಕು ಅನ್ನೋದು ನಾನು ಈಗ ಕಲಿತಿರುವ ಪಾಠ. ಅಲ್ಲಿಗೆ ಹೋಗಿಬಂದ ಮೇಲೆ, ಹೇಳದೆ- ಕೇಳದೆ ಹೋದೆ ಅಂತ ನನ್ನ ಹೆಂಡತಿ ಬೈದಳು. ಆದರೆ ಅಲ್ಲಿಗೆ ಹೋಗಬೇಕಾಗುತ್ತೆ ಅಂತ ನನಗೇ ಗೊತ್ತಿರಲಿಲ್ಲ (ನಗುತ್ತಾ ಹೇಳಿದರು ಗಂಗರಾಜು).

English summary
Gangaraju, driver from Doddaballapur, who works for Srirama transport, went to Sultan Batteri (Kerala) and carried various flood relief things in 10 wheel lorry. Here is an experience shared by him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X