• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೆನಪಿದೆಯಾ ಮೊದಲ ಲವ್ ಲೆಟರ್ ಬರೆದ ಸಿಹಿ ಸಿಹಿ ಘಳಿಗೆ?!

By ಅಭಿಮುಖಿ
|

'ಒಂದು ಮಳೆಬಿಲ್ಲು.. ಒಂದು ಮಳೆ ಮೋಡ... ಹೇಗೋ ಜೊತೆಯಾಗಿ... ತುಂಬಾ ಸೊಗಸಾಗಿ...' ಒಮ್ಮೊಮ್ಮೆ ರೊಮ್ಯಾಂಟಿಕ್ ಲಹರಿಯಲ್ಲಿದ್ದಾಗ ಹೀಗೆ ಯಾವುದಾದರೊಂದು ಹಾಡನ್ನ ನಾಲಿಗೆ ತನ್ನಷ್ಟಕ್ಕೇ ಗುನುಗಿಕೊಳ್ಳುತ್ತೆ!

ಬಾಲ್ಕನಿಯಲ್ಲಿ ನಿಂತು ಸುರಿವ ಮಳೆ ನೋಡುತ್ತ ನಿಂತವನಿಗೆ ಮಳೆಬಿಲ್ಲಾಗಿ ರಂಗೇರಿಸಿದ್ದು ಅವಳ ನೆನಪು. ಹೀಗೆ ಮಳೆ ಬಂದಾಗಲೆಲ್ಲ ಅವಳು ನೆನಪಾಗ್ತಾಳೆ. ಹಾಫ್ ಗರ್ಲ್ ಫ್ರೆಂಡ್ ಮೂವಿಲೀ ಶ್ರದ್ಧಾ ಕಪೂರ್ ಮಳೆ ಕಂಡಾಗಲೆಲ್ಲ ಹೋಗಿ ಮೈಯೊಡ್ಡುತ್ತಾಳಲ್ಲ, ಹಾಗೇ ಇವಳೂ.

ಸೃಷ್ಟಿಕರ್ತ ಮಳೆಯನ್ನು ತನಗಾಗಿಯೇ ಸೃಷ್ಟಿ ಮಾಡಿದ್ದಾನೇನೋ ಅನ್ನೋ ಹಾಗೆ ಮಳೆಯೊಳಗೆ ಅವಳೂ ಬೆರೆತುಬಿಡ್ತಾಳೆ. ಅವಳು ಮಳೆ ಹುಡುಗಿ!

ಪ್ರೀತಿಯ ದವನ ಪರಿಮಳದ ಶಕುಂತಲೆ ನಿನ್ನ ಕಾಗದ ಓದಿದ ಗುಂಗಿನಲಿ...

ಈ ಬದುಕಲ್ಲಿ ಸಣ್ಣ ಪುಟ್ಟ ವಿಷಯಗಳೇ ಎಷ್ಟೆಲ್ಲ ಕ್ಲಿಷ್ಟಕರ ಅನ್ನಿಸಿದ್ದು ಈ ಮಳೆ ಹುಡುಗಿಗೆ ಒಂದು ಲವ್ ಲೆಟರ್ ಬರೀಬೇಕು ಅಂತ ಕೂತಾಗ. ಮನಸ್ಸಲ್ಲಿ ಕದ್ದು ಮುಚ್ಚಿ ಹುಟ್ಟುತ್ತೆ ಪ್ರೀತಿ. ಅದ್ನ ಅಭಿವ್ಯಕ್ತಿ ಮಾಡೋದಿದ್ಯಲ್ಲ ದೊಡ್ಡ ಸವಾಲು! ಮನಸ್ಸಲ್ಲಿ ಕಚಗುಳಿ ಎಬ್ಬಿಸಿರೋ ಒಬ್ಬ ಸುಂದರ ಹುಡುಗಿ ಬಗ್ಗೆ ನಾಲ್ಕಕ್ಷರ ಬರೆಯಲಾಗದಷ್ಟು ಅನ್ ರೊಮ್ಯಾಂಟಿಕ್ಕಾ ನಾನು..?!

ಮೊದಲ ಬಾರಿಗೆ ನನ್ಮೇಲೇ ನಂಗೆ ಬೇಸರ! ಪ್ರಿಯೆ, ನನ್ನ ಹೃದಯದ ಒಡತಿ, ಜಾನೂ, ಡಿಯರ್... ಎಂಬೆಲ್ಲ ಸಂಬೋಧನೆಯಿಂದ ಆರಂಭವಾದ ನಾಲ್ಕಾರು ಪತ್ರಗಳು ಈಗಾಗಲೇ ಕಸದ ಬುಟ್ಟಿಯಲ್ಲಿ ಮುದ್ದೆಯಾಗಿ ಬೆಚ್ಚಗೆ ಕೂತಿದ್ದವು! ಆಫೀಸ್ನಲ್ಲಿ ರಜಾ ಅರ್ಜಿಗೆ ಫಾರ್ಮೇಟ್ ಇರೋ ಥರಾ ಈ ಲವ್ ಲೆಟರ್ ಗೂ ಫಾರ್ಮೆಟ್ ಇರ್ಬೇಕಪ್ಪ, ನನ್ನಂಥ ಎಲ್ ಬೋರ್ಡ್ ಗಳಿಗೆ ಇಂಥವೆಲ್ಲ ಹೆಲ್ಪ್ ಆಗತ್ತೆ... ಅಂದ್ಕೊಂಡು ಒಬ್ಬನೇ ನಕ್ಕೆ!

'ಮೊದಲ ನೋಟ... ಲವ್ ಎಟ್ ಫಸ್ಟ್ ಸೈಟ್, ಮೋಡ ಕಟ್ಟಿರೋ ಆಕಾಶ ನೋಡಿದ್ರೆ ಅಲ್ಲೊಂದು ಡ್ಯುಯೆಟ್ ಸಾಂಗು.... ಊಹ್ಹುಂ.. ಈ ಥರ ಫಿಲ್ಮಿ ಲವ್ ಸ್ಟೋರಿ ಅಲ್ವೇ ಅಲ್ಲ ನಂದು! 'ಮೊದಲ ಬಾರಿ ನಿನ್ನ ಕಂಡಾಗ...ಗುಲಾಬಿ ಅರಳಿದ ಹಾಗಾಯ್ತು' ಅಂತೆಲ್ಲ ಹಾರ್ಟಿಗೆ ಟಚ್(!) ಆಗೋ ಥರ ಬರ್ಯೋದೆಲ್ಲ ನಂಗೆ ಹೇಳಿ ಮಾಡಿಸಿದ್ದಲ್ಲ. ಹೋಗ್ಲಿ ಯಾರನ್ನಾದ್ರೂ ಸಜೆಶನ್ ಕೇಳೋಣ ಅಂದ್ರೆ ನಂಗ್ಯಾರಿದ್ದಾರೆ ಅಂಥ ಚಡ್ಡಿ ದೋಸ್ತು?! ಆವತ್ತು ರಾತ್ರಿ ಮನೆಗೆ ಬಂದು 'how to write love letter to a beautiful girl' ಅಂತೆಲ್ಲ ಗೂಗಲ್ ಮಾಡಿ, ಕೊನೆಗೆ ನನ್ ಸ್ಥಿತಿ ಕಂಡು ನಂಗೇ 'ಅಯ್ಯೋ ಪಾಪ'...ಅನ್ನಿಸಿ..!

ಬದುಕನ್ನು ಹುಣ್ಣಿಮೆಯಾಗಿಸಿದ ಆ ಕೆಂಪು ಗುಲಾಬಿ ಮತ್ತು ಪ್ರೇಮಿಗಳ ದಿನ!

ಇಷ್ಟು ಹೊತ್ತಿಗೆ 'ಪ್ರೇಮಪತ್ರ ಬರೆಯೋದೇನು ಮಹಾ' ಎಂಬ ನನ್ನ ಸೊಕ್ಕು ಇಳಿದಿತ್ತು! ನಾಲ್ಕಕ್ಷರ ಬರೆಯೋದೂ ಒಂದು ಸಾಹಸ ಅನ್ನೋ ನಿರ್ಧಾರಕ್ಕೆ ಬಂದಿದ್ದೆ.

'ನಿನಗೊಂದು ಪ್ರೇಮಪತ್ರ ಬರೆಯೋಣ ಅಂದ್ಕೊಂಡೆ. ಆದ್ರೆ ಅದ್ಯಾಕೋ ನನ್ನ ಶಬ್ದಬಂಡಾರದಲ್ಲಿರುವ ಯಾವ ಪದಗಳೂ ನನ್ನ ಮನಸ್ಸಿನ ಭಾವವನ್ನು ಅಭಿವ್ಯಕ್ತಿ ಪಡಿಸುವಷ್ಟು ಶ್ರೀಮಂತವಾಗಿಲ್ಲ ಅನ್ನಿಸ್ತು. ಅದಕ್ಕೇ ಸುಮ್ಮನಾದೆ...' ಎಂದಷ್ಟೇ ಬರೆದು, ನಿನ್ನವ... ಎಂದು ಪತ್ರ ಮುಗಿಸಿದ್ದೆ!

ಅದನ್ನೇ ಅವಳಿಗೆ ಕೊಟ್ಟೆ. 'ನಿನ್ನ ಪತ್ರಕ್ಕೆ ಉತ್ತರಿಸೋಣ ಅಂದ್ಕೊಂಡೆ. ಆದ್ರೆ... ನನ್ನ ಶಬ್ದಬಂಡಾರದಲ್ಲಿರುವ ಯಾವ ಪದಗಳೂ ನನ್ನ ಮನಸ್ಸಿನ ಭಾವವನ್ನು ಅಭಿವ್ಯಕ್ತಿ ಪಡಿಸುವಷ್ಟು ಶ್ರೀಮಂತವಾಗಿಲ್ಲ ಅನ್ನಿಸ್ತು. ಅದಕ್ಕೇ ಸುಮ್ಮನಾದೆ...' ಎಂಬ ಒಕ್ಕಣಿಕೆಯ ಪತ್ರವನ್ನು ಆಕೆ ಹಿಂದಿರುಗಿಸಿಕೊಟ್ಟಳು! ನಗಬೇಕೋ ಅಳಬೇಕೋ ತಿಳಿಯದ ಪಾಡು ನಂದು!

ನಿಮ್ಮ ನೆನಪೇ ಹಿಂಡುವುದು ಹಗಲಿನಲಿ, ಇರುಳಿನಲಿ ಕಾಡುವುದು ನಿಮ್ಮ ಕನಸು

ಹೀಗೇ ಆರಂಭವಾದ ಸ್ನೇಹ, ಆತ್ಮೀಯತೆ..! ಇಬ್ಬರ ಬದುಕನ್ನೂ ಬೆಸೆದ ಬಂಧ! ಆ ಮಳೆ ಹುಡುಗಿ, ಈಗ ನನ್ನ ಮನದೊಡತಿ! ಈಗಲೂ ಕೇಳುತ್ತಾಳೆ 'ನನಗೊಂದು ಪ್ರೇಮಪತ್ರ ಬರಿ' ಅಂತ. ಆಗೆಲ್ಲ ಮತ್ತೆ ಗೀಚುತ್ತೇನೆ... ಪದಗಳು ಮುಷ್ಕರ ಹೂಡಿ ಕೂರುತ್ತವೆ, 'ನೀನು ಪದಗಳನ್ನು ಮೀರಿದವಳು ಕಣೆ' ಅನ್ನುತ್ತೇನೆ, ಅವಳು ನಾಚುತ್ತಾಳೆ.

ಅವಳಿಗೊಂದು ಪ್ರೇಮಪತ್ರ ಬರೆಯಲೇಬೇಕೆಂಬ ಆಸೆ ಆಸೆಯಾಗಿಯೇ ಉಳಿದಿದೆ. ಬರೆದ ನಾಲ್ಕಕ್ಷರಗಳೆಲ್ಲ ಉಳಿಯುತ್ತವೆ ಕಸದ ಬುಟ್ಟಿಯ ಗರ್ಭದಲ್ಲಿ ಭದ್ರವಾಗಿ..! ನೈಜ ಪ್ರೇಮ ಅಕ್ಷರ, ಭಾಷೆಯ ಅಭಿವ್ಯಕ್ತಿಯನ್ನು ಮೀರಿದ್ದಂತೆ.. ಸತ್ಯವೇನೋ ಅಂದುಕೊಳ್ಳುತ್ತೇನೆ... ಅಷ್ಟರಲ್ಲೇ ಮಳೆ ಸುರಿಯುತ್ತದೆ, ಮಳೆ ಹುಡುಗಿಯ ತೆಕ್ಕೆಯಲ್ಲಿ ಜಗವ ಮರೆಯುತ್ತೇನೆ..!

English summary
Feature: A love letter is a romantic way to express feelings of love in written form. But writing love letter is not any easy thing. Do you remember your first love letter? Here is a feature on it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X