• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಧಿಕಾರಕ್ಕೆ ಅತೃಪ್ತರ ಚೆಲ್ಲಾಟ, ಮತ ಹಾಕಿದ 'ಉತ್ತರದ ಮಂದಿ'ಗೆ ಪ್ರಾಣ ಸಂಕಟ!

|

ಬೆಂಗಳೂರು, ನವೆಂಬರ್.06: ದೋಸ್ತಿ ಸರ್ಕಾರದ ವಿರುದ್ಧ ಬಂಡಾಯ ಬಾವುಟ ಹಾರಿಸಿದ ಶಾಸಕರನ್ನು ಕಾಂಗ್ರೆಸ್- ಜೆಡಿಎಸ್ ಮನೆಗೆ ಕಳುಹಿಸಿದೆ. 17 ಮಂದಿ ಶಾಸಕರನ್ನ ಅನರ್ಹಗೊಳಿಸಿ ಆದೇಶಿಸಿದ್ದು ಆಗಿದೆ. ಅಧಿಕಾರದ ಗದ್ದುಗೆ ಭದ್ರಪಡಿಸಿಕೊಳ್ಳಲು ಎಲ್ಲ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಇತ್ತ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ನ್ಯಾಯ, ನೀತಿ, ಧರ್ಮದ ಬಗ್ಗೆ ಉದ್ದುದ್ದ ಭಾಷಣಗಳನ್ನ ಬಿಗಿಯುತ್ತಿದ್ದಾರೆ. ಒಟ್ಟಾರೆ ಅವರ ನಡೆ, ಪಕ್ಷ ತೊರೆದ ಅತೃಪ್ತ ಶಾಸಕರ ಮೇಲಿರುವ ಕಾಳಜಿ ಮತ ಹಾಕಿದ ಮತದಾರರ ಮೇಲೆ ಇಲ್ಲ ಎಂಬಂತಿದೆ.

ರಾಜೀನಾಮೆ ಹಿಂದೆ ಇದ್ದದ್ದು ಯಾರು?; ಅನರ್ಹ ಶಾಸಕನ ಸ್ಫೋಟಕ ಹೇಳಿಕೆ

ಮುಖ್ಯಮಂತ್ರಿ ಬಿಎಸ್ ವೈ ಮೇಲೆ ಇಂಥದೊಂದು ಅನುಮಾನ ಹುಟ್ಟಿಕೊಳ್ಳಲು ಕಾರಣವಾಗಿದ್ದೇ ಇತ್ತೀಚಿನ ಬೆಳವಣಿಗೆ. ಬಿಜೆಪಿ ಪಕ್ಷದಲ್ಲಿರುವವರೆ ಕಾಂಗ್ರೆಸ್ ನಿಂದ ಹೊರ ಬಿದ್ದ 17 ಮಂದಿ ಶಾಸಕರನ್ನ ಬಿಜೆಪಿಗೆ ಸೇರಿಸಿಕೊಳ್ಳಲು ಹಿಂದೂ ಮುಂದೂ ನೋಡುತ್ತಿದ್ದಾರೆ. ಅಂಥದ್ರಲ್ಲಿ ಎಲ್ಲ ಅನರ್ಹ ಶಾಸಕರಿಗೆ ಸಚಿವರ ಸ್ಥಾನ ನೀಡಲು ಮುಖ್ಯಮಂತ್ರಿಗಳು ಪ್ಲಾನ್ ಮಾಡಿಕೊಂಡಂತೆ ಕಾಣ್ತಿದೆ.

ಇದು ಕೇಸರಿ ಪಡೆಯಲ್ಲಿ ಬೂದಿ ಮುಚ್ಚಿದ ಕೆಂಡದಂತಾ ವಾತಾವರಣ ಸೃಷ್ಟಿ ಮಾಡಿದೆ. ಗದ್ದುಗೆ ದಕ್ಕಿದ ಖುಷಿಯಲ್ಲೇ ಬಿಎಸ್ ವೈ ಋಣ ತೀರಿಸಲು ಸ್ಕೆಚ್ ಹಾಕಿಕೊಂಡಿದ್ದಾರೆ. ಅನರ್ಹ ಶಾಸಕರಿಂದಾಗಿಯೇ ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರ ದಕ್ಕಿದೆ. ಹೀಗಿರುವಾಗ ಬಿಜೆಪಿಗರು ಅನರ್ಹ ಶಾಸಕರಿಗೆ ಋಣಿಯಾಗಿರಬೇಕು. 17 ಶಾಸಕರ ವಿರುದ್ಧ ಹೇಳಿಕೆಗಳನ್ನ ನೀಡಬಾರದು ಎಂದು ಪದೇ ಪದೆ ಹೇಳುತ್ತಿದ್ದಾರೆ. ಅಧಿಕಾರದ ಲಾಲಸೆಗೆ ನಾಯಕರು ಬಿದ್ದಿದ್ರೆ, ಇತ್ತ ಮತ ಹಾಕಿದ ಮಂದಿ ಹಣೆ ಹಣೆ ಹೊಡೆದುಕೊಳ್ಳುವಂತಾ ಸ್ಥಿತಿ ನಿರ್ಮಾಣವಾಗಿದೆ.

ಅತಿವೃಷ್ಠಿಗೂ ಇಲ್ಲ, ಅನಾವೃಷ್ಠಿಗೂ ಇಲ್ಲ, ಮತದಾರರು ಇವರಿಗೆ ನೆನಪೇ ಇಲ್ಲ!

ಅತಿವೃಷ್ಠಿಗೂ ಇಲ್ಲ, ಅನಾವೃಷ್ಠಿಗೂ ಇಲ್ಲ, ಮತದಾರರು ಇವರಿಗೆ ನೆನಪೇ ಇಲ್ಲ!

ಮಹಾರಾಷ್ಟ್ರದಲ್ಲಿ ಸುರಿದ ಮಳೆ, ರಾಜ್ಯದಲ್ಲಿ ವರುಣನ ಅಬ್ಬರಕ್ಕೆ ಉತ್ತರ ಕರ್ನಾಟಕದ ಮಂದಿ ಬದುಕು ಅಕ್ಷರಶಃ ಬೀದಿಗೆ ಬಂದು ನಿಂತಿದೆ. ಮುಂದೇನು ಎಂದು ಸಂತ್ರಸ್ತರು ನೀರಿಲ್ಲದೇ, ಸೂರಿಲ್ಲದೇ, ಪರಿತಪಿಸುತ್ತಿದ್ದಾರೆ. ಅನರ್ಹ ಶಾಸಕರು ಮಾತ್ರ ಮತಬಾಂಧವರನ್ನ ಮರೆತು ಹಾಯಾಗಿ ಕೋರ್ಟ್, ಕಚೇರಿ, ಟಿಕೆಟ್, ಎಲೆಕ್ಷನ್ ಅಂತಾ ಸುತ್ತಾಡುತ್ತಿದ್ದಾರೆ. ಇಂಥದರ ಮಧ್ಯೆ ಉತ್ತರ ಕರ್ನಾಟಕದಲ್ಲಿ ಅನರ್ಹ ಶಾಸಕರ ಕ್ಷೇತ್ರದಲ್ಲಿ ಪರಿಸ್ಥಿತಿ ಹೇಗಿದೆ ಅನ್ನೋದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ..

ಕ್ಷೇತ್ರದಿಂದ ಶಾಸಕ ರಮೇಶ್ ಜಾರಕಿಹೊಳಿ 'ಗೋ'ಕಾಕ್!

ಕ್ಷೇತ್ರದಿಂದ ಶಾಸಕ ರಮೇಶ್ ಜಾರಕಿಹೊಳಿ 'ಗೋ'ಕಾಕ್!

ಇದು ಬೆಳಗಾವಿ ಜಿಲ್ಲೆ ಗೋಕಾಕ್ ವಿಧಾನಸಭಾ ಕ್ಷೇತ್ರದ ಕಥೆ. ದೋಸ್ತಿ ಸರ್ಕಾರಕ್ಕೆ ಮೊದಲು ಕಂಟಕಪ್ರಾಯವಾಗಿ ಕಾಡಿದ್ದೇ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ. ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಮಧ್ಯಪ್ರವೇಶ, ಲಕ್ಷ್ಮಿ ಹೆಬ್ಬಾಳ್ಕರ್ ಪರ ಕಾಂಗ್ರೆಸ್ ಹಿರಿಯರು ಬ್ಯಾಟಿಂಗ್ ನಡೆಸಿದ್ದು, ಬೆಳಗಾವಿ ಸಹೋದರರ ಕಣ್ಣು ಕೆಂಪಾಗಿಸಿತು. ಅಲ್ಲಿಂದ ಮುಂದೆ ಸತೀಶ್ ಜಾರಕಿಹೊಳಿ ಪರ ಧ್ವನಿ ಎತ್ತಿದ ರಮೇಶ್ ಜಾರಕಿಹೊಳಿ ಮಂತ್ರಿ ಸ್ಥಾನ ಕಳೆದುಕೊಂಡರು. ಅದೇ ಸ್ಥಾನವನ್ನು ಕಾಂಗ್ರೆಸ್ ಹೈಕಮಾಂಡ್, ಸತೀಶ್ ಗೆ ನೀಡಿತು. ಅಲ್ಲಿಗೆ ಸತೀಶ್ ಜಾರಕಿಹೊಳಿ ಸೈಲೆಂಟ್ ಆದರೆ, ರಮೇಶ್ ಕೆರಳಿ ಕೆಂಡವಾದರು. ಅಲ್ಲಿಂದ ಶುರುವಾಗಿದ್ದೇ ಬಂಡಾಯದ ಆಟ. ದೋಸ್ತಿ ವಿರುದ್ಧ ಸೆಡ್ಡು ಹೊಡೆದ ರಮೇಶ್ ಜಾರಕಿಹೊಳಿ, ಸರ್ಕಾರಕ್ಕೇನೋ ಶಾಸ್ತಿ ಮಾಡಿದ್ರು. ಇದರ ಮಧ್ಯೆ ಮತ ಹಾಕಿದ ಮತದಾರರನ್ನೇ ಮರೆತು ಬಿಟ್ರು. ಎಂದಿದ್ದರೂ ಗೋಕಾಕ್ ಕ್ಷೇತ್ರದ ಮಂದಿ ತಮ್ಮನ್ನ ಕೈ ಬಿಡೋದಿಲ್ಲ ಅನ್ನೋ ಬಲವಾದ ನಂಬಿಕೆ ಬೆಳಗಾವಿ ಸಾಹುಕಾರ್ ರದ್ದು. ಆದ್ರೆ, ಅತಿವೃಷ್ಟಿಗೆ ಇಡೀ ಬೆಳಗಾವಿಗೆ ಬೆಳಗಾವಿಯೇ ಹೈರಾಣಾಗಿತ್ತು. ಮತಬಾಂಧವರ ಬದುಕು ಬೀದಿಗೆ ಬಂದು ನಿಂತಿದ್ರೂ ಅನರ್ಹಗೊಂಡ ಶಾಸಕ ರಮೇಶ್ ಜಾರಕಿಹೊಳಿಗೆ ಇದ್ಯಾವುದೂ ಲೆಕ್ಕಕ್ಕೇ ಬರಲಿಲ್ಲ. ಮುಂದೆ ಚುನಾವಣೆಗೆ ನಿಂತ್ರೆ ಇದೇ ರಮೇಶ್ ಜಾರಕಿಹೊಳಿ ಮತದಾರರ ಲೆಕ್ಕಕ್ಕೆ ಸಿಗ್ತಾರೋ ಇ್ವೋ ಅನ್ನೋದೇ ಯಕ್ಷಪ್ರಶ್ನೆ.

ಆಪರೇಷನ್ ಕಮಲ ಆಡಿಯೋ; 17 ಶಾಸಕರ ತೀರ್ಪು ವಿಳಂಬ

ಅಥಣಿಯಲ್ಲಿ ಮಹೇಶ್ ಕುಮಟಳ್ಳಿ ಆಡಿದ್ದೇ ಆಟ!?

ಅಥಣಿಯಲ್ಲಿ ಮಹೇಶ್ ಕುಮಟಳ್ಳಿ ಆಡಿದ್ದೇ ಆಟ!?

ಮಹಾರಾಷ್ಟ್ರದ ಜಲರಾಕ್ಷಸನ ರೌದ್ರನರ್ತನಕ್ಕೆ ತತ್ತರಿಸಿದ್ದು ಬೆಳಗಾವಿಯ ಕೆಲಭಾಗಗಳಷ್ಟೇ ಅಲ್ಲ. ಬೆಳಗಾವಿಯ ಅಥಣಿ ಕ್ಷೇತ್ರವೂ ಕೂಡಾ ಇದರಿಂದ ಹೊರತಾಗಿಲ್ಲ. ಆದರೆ ಅನರ್ಹಗೊಂಡ ಶಾಸಕ ಮಹೇಶ್ ಕುಮಟಳ್ಳಿಯವರಿಗೆ ಇದ್ಯಾವುದೂ ಲೆಕ್ಕಕ್ಕೇ ಇಲ್ಲ. ದೋಸ್ತಿ ಸರ್ಕಾರಕ್ಕೆ ಕಂಟಕಪ್ರಾಯವಾಗಿ ಕಾಡಿದ ನಾಯಕರ ಪೈಕಿ ಕುಮಟಳ್ಳಿ ಕೂಡಾ ಒಬ್ಬರು. ಬಿಜೆಪಿಯ ಲಕ್ಷ್ಮಣ್ ಸವದಿಗೆ ಸೆಡ್ಡು ಹೊಡೆದು ಗೆದ್ದು ಬಂದ ಮಹೇಶ್ ಕುಮಟಳ್ಳಿ, ಕ್ಷೇತ್ರಕ್ಕಾಗಿ ಮಾಡಿದ ಕೆಲಸಗಳು ಮಾತ್ರ ಅಷ್ಟಕಷ್ಟೇ. ಬದಲಾವಣೆ ಬಯಸಿದ ಕ್ಷೇತ್ರದ ಜನರಿಗೆ ಮಹೇಶ್ ಕುಮಟಳ್ಳಿಯವರ ಕೊಡುಗೆ ಮಾತ್ರ ಶೂನ್ಯ. ಸದಾ ಕಾಂಗ್ರೆಸ್, ಜೆಡಿಎಸ್ ನಾಯಕರು ಹಾಗೂ ದೋಸ್ತಿ ಸರ್ಕಾರವನ್ನ ಟೀಕಿಸೋದ್ರಲ್ಲೇ ಈ ಶಾಸಕರು ಟೈಮ್ ವೇಸ್ಟ್ ಮಾಡಿದರು. ಇನ್ನೇನು ಸಚಿವ ಸ್ಥಾನ ಕೈಗೆ ಬಂತು ಅನ್ನುವುದರಲ್ಲೇ ಕೈಗೆ ಕೈ ಕೊಟ್ಟು ಕೇಸರಿ ಬಾವುಟ ಹಾರಿಸೋಕೆ ಅಣಿಯಾದರು. ಇದರ ಸೂಕ್ಷ್ಮತೆ ಅರಿತ ಕಾಂಗ್ರೆಸ್, ಮಹೇಶ್ ಕುಮಟಳ್ಳಿಯವರಿಗೆ ಮನೆ ಕಡೆ ದಾರಿ ತೋರಿಸಿತು. ಅನರ್ಹಗೊಂಡ ಶಾಸಕರು ಕ್ಷೇತ್ರದಲ್ಲಾದ್ರೂ ಸುತ್ತುತ್ತಿದ್ದಾರೆ ಅಂದ್ರೆ ಅದೂ ಇಲ್ಲ. ಇವರನ್ನ ನಂಬಿ ಮತ ನೀಡಿದ ಮತದಾರರು ಇದೀಗ ಪಶ್ಚಾತ್ತಾಪ ಪಡುವಂತಾ ಸ್ಥಿತಿಯನ್ನ ಸ್ವತಃ ಶಾಸಕರೇ ಸೃಷ್ಟಿಸಿದ್ದಾರೆ.

ಶ್ರೀಮಂತ್ ಗೌಡರನ್ನ ನಂಬಿದ ಕಾಗವಾಡ ಮತದಾರರೇ ಬಡವರು!

ಶ್ರೀಮಂತ್ ಗೌಡರನ್ನ ನಂಬಿದ ಕಾಗವಾಡ ಮತದಾರರೇ ಬಡವರು!

ಕಾಗವಾಡದ ಶಾಸಕ ಶ್ರೀಮಂತ್ ಗೌಡ ಪಾಟೀಲ್ ಕೂಡಾ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದವರು. ಸರ್ಕಾರದಿಂದ ಕೆಲಸ ಮಾಡಿಸದಿದ್ರೂ, ಸ್ವಕ್ಷೇತ್ರದಲ್ಲಿ ಕಾಣಿಸಿಕೊಳ್ಳದಿದ್ದರೂ ಇವರ ಪಾಪ್ಯುಲಾರಿಟಿ ಕಿಂಚಿತ್ತೂ ಕಡಿಮೆ ಆಗೋದಿಲ್ಲ. ಏಕೆಂದರೆ, ಶ್ರೀಮಂತ್ ಗೌಡ ಮಾಲೀಕತ್ವದ ಶುಗರ್ ಫ್ಯಾಕ್ಟರಿ ಇಂದಿಗೂ ಕ್ಷೇತ್ರದ ಅದೆಷ್ಟೋ ಬಡವರ ಪಾಲಿಗೆ ಆಶಾಕಿರಣವಾಗಿದೆ. ಇಷ್ಟನ್ನು ಹೊರತುಪಡಿಸಿ, ಪಾಟೀಲ್ ಕ್ಷೇತ್ರದಲ್ಲಿ ಇರದಿದ್ದರೂ, ಇವರ ಸಹೋದರ ಮತದಾರರ ಅಳಲು ಆಲಿಸುತ್ತಾರೆ. ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ.

ಬಿಎಸ್‌ವೈ ಆಡಿಯೋ ಸಾಕ್ಷಿ: ಅನರ್ಹ ಶಾಸಕರಿಗೆ ತೀವ್ರ ಸಂಕಷ್ಟ

ರಾಣೆಬೆನ್ನೂರನ್ನೇ ಮರೆತ ಶಂಕರ್!?

ರಾಣೆಬೆನ್ನೂರನ್ನೇ ಮರೆತ ಶಂಕರ್!?

ಬಿಜೆಪಿಯೂ ಬೇಡ, ಕಾಂಗ್ರೆಸ್ ಬೇಡ, ಇವರೆಲ್ಲ ನಮ್ಮನ್ನ ಉದ್ಧಾರ ಮಾಡಿದ್ದು ಅಷ್ಟರಲ್ಲೇ ಇದೆ ಅಂತಾ ನಿರ್ಧರಿಸಿದ ರಾಣೆಬೆನ್ನೂರಿನ ಮತದಾರರ ಪಕ್ಷೇತರ ಅಭ್ಯರ್ಥಿಗೆ ಮುದ್ರೆ ಒತ್ತಿದರು. ಆದರೆ, ರಾಜ್ಯದಲ್ಲಿ ಯಾವ ಪಕ್ಷಕ್ಕೂ ಪೂರ್ಣ ಬಹುಮತ ಸಿಗದಿದ್ದಾಗ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ಸಚಿವ ಸ್ಥಾನದ ರೇಸ್ ನಲ್ಲಿ ಪಕ್ಷೇತರ ಶಾಸಕ ಆರ್.ಶಂಕರ್ ಹೆಸರು ಕೇಳಿ ಬಂತು. ಅಂದುಕೊಂಡಂತೆ ಮಂತ್ರಿಗಿರಿಯೂ ಸಿಕ್ಕಿತು. ಆದರೆ, ಅದ್ಯಾರಿಗೋ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದರು ಅಂತಾರಲ್ವಾ, ಶಾಸಕ ಆರ್.ಶಂಕರ್ ಗೆ ಈ ಮಾತು ಹೇಳಿ ಮಾಡಿಸಿದಂತೆ ಆಯಿತು. ಪೌರಾಡಳಿತ ಸಚಿವ ಸ್ಥಾನ ಕೊಟ್ಟರೂ ಸುಮ್ಮನಾಗದ ಆರ್.ಶಂಕರ್, ಕಾಂಗ್ರೆಸ್ ಟು ಬಿಜೆಪಿ, ಬಿಜೆಪಿ ಟು ಕಾಂಗ್ರೆಸ್, ಹೀಗೆ ಗೊಂದಲದಲ್ಲೇ ದಿನ ಕಳೆದರು. ಅಂತಿಮವಾಗಿ ದೋಸ್ತಿ ಸರ್ಕಾರಕ್ಕೆ ಕೈ ಕೊಟ್ಟು ಬಿಜೆಪಿ ಕೈ ಹಿಡಿದರು. ಅಷ್ಟರಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ, ಶಂಕರ್ ಸ್ಪರ್ಧಿಸಿದ್ದ ಕೆಪಿಜೆಪಿ ಪಾರ್ಟಿಯನ್ನ ಕಾಂಗ್ರಸ್ ನೊಂದಿಗೆ ವಿಲೀನಗೊಳಿಸಿದ್ದರು. ಅಲ್ಲಿಗೆ ಮಾತು ತಪ್ಪಿದ ಶಾಸಕರನ್ನ ಅನರ್ಹಗೊಳಿಸಿ ಕಾಂಗ್ರೆಸ್ ತನ್ನ ಆಟ ಶುರು ಮಾಡಿತು. ಇದರ ಮಧ್ಯೆ ಪಕ್ಷೇತರ ಶಾಸಕರನ್ನು ನಂಬಿದ ರಾಣೆಬೆನ್ನೂರು ಮತದಾರರು ಪರಿತಪಿಸುವಂತಾಯಿತು.

ಹಿರೇಕೆರೂರಿಗೆ 250 ಕೋಟಿ ಯೋಜನೆ ತಂದ 'ಕೌರವ'!

ಹಿರೇಕೆರೂರಿಗೆ 250 ಕೋಟಿ ಯೋಜನೆ ತಂದ 'ಕೌರವ'!

ಹಾವೇರಿ ಜಿಲ್ಲೆ ಮತ್ತೊಂದು ಕ್ಷೇತ್ರವೇ ಹಿರೇಕೆರೂರು. ಮತ್ತೊಬ್ಬ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಸ್ಪರ್ಧಿಸಿದ ಕ್ಷೇತ್ರದಲ್ಲಿ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ಈ ಕ್ಷೇತ್ರದಲ್ಲಿ ಶಾಸಕರೇನೋ ಇದ್ದಾರೆ. ಆದರೆ ಜನರ ಕೈಗೆ ಸಿಗುವುದು ಅಷ್ಟಕಷ್ಟೇ. ಆಗಾಗ ಬಿಜೆಪಿಗೆ ಹಾರುತ್ತೇನೆ ಅಂತಾ ದೋಸ್ತಿ ಸರ್ಕಾರವನ್ನ ಬೆದರಿಸುತ್ತಲೇ ಕ್ಷೇತ್ರಕ್ಕೆ ಆಗಬೇಕಾದ ಕೆಲಸವನ್ನ ಬಿ.ಸಿ.ಪಾಟೀಲ್ ಅತಿ ನಾಜೂಕಾಗಿ ಮಾಡಿಸಿಕೊಂಡಿದ್ದಾರೆ. ಈ ಹಿಂದೆ ತಮಗೆ ಬೆಂಬಲ ನೀಡುವಂತೆ ಬಿಜೆಪಿಯಿಂದ ಆಫರ್ ಬಂದಿದೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದರು. ಅಂದು ಕೇಸರಿ ನಾಯಕರೊಬ್ಬರ ಜೊತೆ ಮಾತನಾಡಿದ್ದರು ಎನ್ನಲಾದ ಆಡಿಯೋ ಕೂಡಾ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆಡಿಯೋ ವಿಚಾರವನ್ನ ಸಿಬಿಐ ತನಿಖೆಗೆ ವಹಿಸುವ ಹಂತಕ್ಕೂ ಅದು ಹೋಗಿತ್ತು. ಅದಾದ ಬಳಿಕ ತಮ್ಮ ಕ್ಷೇತ್ರಕ್ಕೆ 225 ಕೋಟಿ ಅನುದಾನವನ್ನ ಮಂಜೂರು ಮಾಡಿಸಿಕೊಂಡಿದ್ದರು.

- ಸರ್ವಜ್ಞ ಏತ ನೀರಾವರಿ ಯೋಜನೆ: 80ಕ್ಕೂ ಹೆಚ್ಚು ಕೆರೆ ತುಂಬಿಸುವ ಯೋಜನೆಗೆ 185 ಕೋಟಿ,

- ನಾಲ್ಕು ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣಕ್ಕೆ 17 ಕೋಟಿ

- ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿದ ರಟ್ಟಿಹಳ್ಳಿ ಗ್ರಾಮ ಪಂಚಾಯತಿ

- ಎಸ್ಸಿ, ಎಸ್ಟಿ, ಕಾಲನಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು 5 ಕೋಟಿ

ಮಸ್ಕಿಯಲ್ಲಿ 'ಪ್ರತಾಪ' ತೋರಿದ ಪಾಟೀಲ್!

ಮಸ್ಕಿಯಲ್ಲಿ 'ಪ್ರತಾಪ' ತೋರಿದ ಪಾಟೀಲ್!

ರಾಯಚೂರಿನ ಮಸ್ಕಿಯಲ್ಲೂ ಕೂಡಾ ಪರಿಸ್ಥಿತಿ ವಿಭಿನ್ನವಾಗಿಲ್ಲ. ಮಳೆ ಹೊಡೆತಕ್ಕೆ ಜನರು ಪರದಾಡುತ್ತಿದ್ದರೂ ಅನರ್ಹಗೊಂಡಿರುವ ಶಾಸಕ ಪ್ರತಾಪ್ ಗೌಡ ಪಾಟೀಲರಿಗೆ ಅದ್ಯಾವುದರ ದಾದ್ ಇಲ್ಲ. ಸದಾ ಬೆಂಗಳೂರಿನಲ್ಲೇ ಝಾಂಡಾ ಹೂಡುವ ಶಾಸಕರಿಗೆ ಸ್ವಕ್ಷೇತ್ರದ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲವಂತೆ. ಇನ್ನು, 17 ಕ್ಷೇತ್ರಗಳ ಪೈಕಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಬ್ರೇಕ್ ಹಾಕಿತ್ತು. ಇದು ಪ್ರತಾಪ್ ಗೌಡ ಪಾಟೀಲರಿಗೆ ಮತ್ತಷ್ಟು ಖುಷಿ ಕೊಟ್ಟಿದೆ. ಆದರೆ, ಡಿಸೆಂಬರ್ ವೇಳೆಗೆ 15 ಕ್ಷೇತ್ರಗಳ ಜೊತೆಗೆ ಮಸ್ಕಿಯಲ್ಲೂ ಮತದಾನ ನಡೆಸುವಂತೆ ಸುಪ್ರೀಂಕೋರ್ಟ್ ಹೇಳಿದರೂ ಅಚ್ಚರಿ ಪಡಬೇಕಿಲ್ಲ. ಹೀಗಿದ್ದರೂ ಕೂಡಾ ಅನರ್ಹಗೊಂಡಿರುವ ಶಾಸಕರಿಗೆ ಇದ್ಯಾವುದರ ಭಯವಿಲ್ಲ.

ವಿಜಯನಗರಕ್ಕಾಗಿ ಪಟ್ಟು ಹಿಡಿದ ಹೊಸಪೇಟೆ ಶಾಸಕರಿಗಿಲ್ಲ 'ಆನಂದ'!?

ವಿಜಯನಗರಕ್ಕಾಗಿ ಪಟ್ಟು ಹಿಡಿದ ಹೊಸಪೇಟೆ ಶಾಸಕರಿಗಿಲ್ಲ 'ಆನಂದ'!?

ದೋಸ್ತಿ ಸರ್ಕಾರಕ್ಕೆ ಗುಡ್ ಬೈ ಹೇಳಿದ್ದೇ ಹೇಳಿದ್ದು. ಅಂದಿನಿಂದ ಇಂದಿನವರೆಗೂ ಅನರ್ಹ ಶಾಸಕ ಆನಂದ್ ಸಿಂಗ್ ರದ್ದು ಒಂದೇ ರಾಗ. ವಿಜಯ ನಗರವನ್ನ ಜಿಲ್ಲೆಯಾಗಿ ಘೋಷಿಸಬೇಕು. ದೋಸ್ತಿ ಸರ್ಕಾರ ಜಿಂದಾಲ್ ಕಂಪನಿಗೆ ಭೂಮಿ ಬಿಟ್ಟುಕೊಡುವ ವಿಚಾರವನ್ನೇ ಅಸ್ತ್ರವಾಗಿ ಮಾಡಿಕೊಂಡರು. ಜಿಂದಾಲ್ ಭೂಮಿ ವಿಚಾರಕ್ಕೆ ಮುನಿಸಿಕೊಂಡ ಆನಂದ್ ಸಿಂಗ್, ಕಾಂಗ್ರೆಸ್ ಗೆ ರಾಜೀನಾಮೆ ಸಲ್ಲಿಸಿದರು. ಸರ್ಕಾರಕ್ಕೆ ನೀಡಿದ ಬೆಂಬಲವನ್ನೂ ವಾಪಸ್ ಪಡೆದರು. ಅಸಲಿಗೆ ರಾಜೀನಾಮೆ ಆಟವನ್ನ ಶುರು ಮಾಡಿದ್ದೇ ಇವರು. ಇಂದು ಸ್ವಕ್ಷೇತ್ರದ ಮೇಲೆಯೇ ಆನಂದ್ ಸಿಂಗ್ ಗೆ ಕಾಳಜಿಯಿಲ್ಲ. ಆಗಾಗ ಸರ್ಕಾರಕ್ಕೆ ಆವಾಜ್ ಹಾಕುವ ಆನಂದ್ ಸಿಂಗ್, ಇತ್ತೀಚಿಗೆ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಘೋಷಿಸುವಂತೆ ಸರ್ಕಾರಕ್ಕೆ ಡಿಮ್ಯಾಂಡ್ ಮಾಡಿದರು. ಇದಕ್ಕೆ ಶ್ರೀರಾಮುಲು ವಿರೋಧಿಸಿದ್ದು, ಇಬ್ಬರು ನಾಯಕರ ನಡುವೆ ಶೀತಲ ಸಮರ ನಡೆಯುತ್ತಿದೆ. ಇದೇ ವಿಚಾರಕ್ಕೆ ಆರೋಗ್ಯ ಸಚಿವ ಶ್ರೀರಾಮುಲುರನ್ನು ಬಿಎಸ್ ವೈ ಸಂತೈಸುವ ಕೆಲಸಕ್ಕೆ ಮುಂದಾಗಿದ್ದರು. ಆದರೆ, ಉಳಿದಂತೆ ಬಳ್ಳಾರಿಯ ಹಲವು ನಾಯಕರು ಬಳ್ಳಾರಿ ವಿಭಾಗಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ. ಕ್ಷೇತ್ರದ ಮತದಾರರ ಮನ ಗೆಲ್ಲೋದಕ್ಕೆ ಆನಂದ್ ಸಿಂಗ್ ಜಿಲ್ಲೆಯ ಮಂತ್ರ ಜಪಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಸರ್ಕಾರ ಇದಕ್ಕೆ ಹೇಗೆ ಸ್ಪಂದಿಸುತ್ತೆ ಅನ್ನೋದು ಸಾಕಷ್ಟು ಕುತೂಹಲ ಕೆರಳಿಸಿದೆ.

ಏಲ್ಲೂ ಹೋಗಿಲ್ಲ ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್!

ಏಲ್ಲೂ ಹೋಗಿಲ್ಲ ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್!

ಊರಿಗೆ ಊರೇ ಹೊತ್ತಿ ಉರಿಯುತ್ತಿದ್ದರೆ, ಅವನ್ಯಾರೋ ಪಿಟೀಲು ಬಾರಿಸುತ್ತಿದ್ದ ಅಂತಾರಲ್ವಾ. ಹಾಗೆ ನೆರೆಗೆ ಜನರ ಬದುಕು ಬೀದಿಗೆ ಬಂದಿದ್ದರೆ, ಅನರ್ಹಗೊಂಡ ಶಾಸಕರು ಮಾತ್ರ ಎಸ್ಕೇಪ್ ಆಗಿ ಬಿಟ್ಟಿದ್ದರು. ಯಲ್ಲಾಪುರ ಕ್ಷೇತ್ರದಲ್ಲಿ ಬ್ಯಾಟರಿ ಹಾಕಿ ಹುಡುಕಿದ್ರೂ ಶಾಸಕರು ಪತ್ತೆ ಆಗಲೇ ಇಲ್ಲ. ಇದರಿಂದ ಕೆರಳಿದ ಸ್ಥಳೀಯರು ತಮ್ಮ ಶಾಸಕರನ್ನ ಹುಡುಕಿ ಕೊಡುವಂತೆ ಪ್ರತಿಭಟನೆ ದಾರಿ ಹಿಡಿದರು. ವಿನೂತನ ಪ್ರತಿಭಟನೆಗೆ ಮಣಿದ ಎಂಎಲ್ಎ ಸಾಹೇಬ್ರು ಕೊನೆಗೆ ತಾವು ಕಾಣೆಯಾಗಿಲ್ಲ ಅಂತಾ ಸ್ಪಷ್ಟನೆಯನ್ನೂ ಕೊಟ್ಟರು. ಇಷ್ಟೆಲ್ಲ ನಡೆದರೂ ಕೂಡಾ ಕ್ಷೇತ್ರದ ಜನರ ಪಾಲಿಗೆ ಶಾಸಕರು ಇದ್ದೂ ಇಲ್ಲದಂತೆ ಸರಿ. ಯಾಕಂದ್ರೆ, ಈವರೆಗೆ ಕ್ಷೇತ್ರದಲ್ಲಿ ಒಂದೇ ಒಂದು ಸರ್ಕಾರಿ ಯೋಜನೆಗಳು ಯಶಸ್ವಿಯಾಗಿ ಜಾರಿಗೆ ಬಂದ ಉದಾಹರಣೆಗಳಿಲ್ಲ. ಮಳೆ ಹೊಡೆತಕ್ಕೆ ಉತ್ತರ ಕನ್ನಡಿಗರ ಬದುಕೇ ಕೊಚ್ಚಿ ಹೋಗಿದ್ರೂ ಶಾಸಕರಿಗೆ ದಾದ್ ನಹೀ, ಪಿರ್ಯಾದ್ ನಹಿ.

ಸರ್ಕಾರ ಉಳಿಯಬೇಕಿದ್ರೆ ಅನರ್ಹರಿಗೆ ಮಣೆ ಹಾಕಲೇಬೇಕು!

ಸರ್ಕಾರ ಉಳಿಯಬೇಕಿದ್ರೆ ಅನರ್ಹರಿಗೆ ಮಣೆ ಹಾಕಲೇಬೇಕು!

ಇದು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ಸದ್ಯದ ಪರಿಸ್ಥಿತಿ ಹೀಗಿದೆ. ಅನರ್ಹ ಶಾಸಕರನ್ನೇ ಸರ್ಕಾರದಲ್ಲಿ ಉಳಿಸಿಕೊಳ್ಳಬೇಕು. ಇಲ್ಲವೇ, ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳಬೇಕು. ಹೀಗಿದ್ದಲ್ಲಿ ಮಾತ್ರ ಸರ್ಕಾರ ಸೇಫ್ ಆಗಲು ಸಾಧ್ಯ. ಒಂದು ವೇಳೆ ಬಿಜೆಪಿ ಉಪ ಚುನಾವಣೆಯಲ್ಲಿ ಫೇಲ್ ಆದ್ರೆ, ಮತ್ತೊಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಮುಖಭಂಗ ಆಗೋದು ಖಾಯಂ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಅಂತಾರಲ್ವಾ. ಸದ್ಯಕ್ಕೆ ಈ ಅನರ್ಹಗೊಂಡ ಶಾಸಕರ ಕ್ಷೇತ್ರಗಳಲ್ಲಿನ ಮತದಾರರ ಪರಿಸ್ಥಿತಿಯೂ ಥೇಟ್ ಹಾಗೇ ಆಗಿದೆ. ಇದಕ್ಕೆ ಶಾಸಕರು ಅದ್ಯಾವ ರೀತಿ ಪರಿಹಾರ ನೀಡುತ್ತಾರೋ ಅಥವಾ ಮತದಾರರೇ ಪರ್ಯಾಯ ನಾಯಕರನ್ನ ಹುಡುಕಿಕೊಳ್ಳುತ್ತಾರೋ ಅನ್ನೋದು ಉಪ ಚುನಾವಣೆಯಲ್ಲಿ ತಿಳಿದು ಬರಬೇಕಿದೆ.

English summary
Ground Situation of Constituencies of Disqualified MLA's of Karnataka. CM B.S. Yediyurappa Government Sacrifice Seats For Disqualified MLA's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X