• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದಲ್ಲಿ ಬರಲು ಶುರುವಾಯ್ತು ಜಗತ್ತಿನ ಸಕಲ ಜ್ಞಾನ-ಮನರಂಜನೆ

By ಕಿರಣ್ ಕೊಡ್ಲಾಡಿ, ಬೆಂಗಳೂರು
|

ಕಳೆದ ಕೆಲವರುಷಗಳಿಂದ ಪದೆ ಪದೆ ಸುದ್ದಿಗೆ ಗುರಿಯಾಗುತ್ತಿದ್ದ ಡಬ್ಬಿಂಗ್ ಎಂಬ ಭೂತ, ಡಬ್ಬಿಂಗ್ ಎಂಬ ತೋಳದ ಕಥೆಗೆ ಜನರು ಮತ್ತು ಮಾರುಕಟ್ಟೆ ಏಕಕಾಲಕ್ಕೆ ಉತ್ತರಕೊಟ್ಟಂತೆ ಕಾಣುವುದು ದಿನೇ ದಿನೇ ಸ್ಪಷ್ಟವಾಗುತ್ತಿದೆ.

ಅಘೋಷಿತ ಡಬ್ಬಿಂಗ್ ನಿಷೇಧದ ಕಾಲದಿಂದ ಮುಂದೆ ಬಂದು ಕಳೆದ ಮೂರು ವರ್ಷಗಳಲ್ಲಿ ಡಬ್ಬಿಂಗ್ ಚಿತ್ರಗಳ ಬಿಡುಗಡೆ, ಮೂಲ ಚಿತ್ರಗಳ ಜೊತೆ ಏಕಕಾಲಕ್ಕೆ ಡಬ್ಬಿಂಗ್ ಆದ ಚಿತ್ರಗಳ ಬಿಡುಗಡೆ, ಕನ್ನಡದಲ್ಲಿ ತನ್ನದೇ ಆದ ಕ್ರೀಡೆಯ ಚಾನೆಲ್, ಕನ್ನಡೀಕರಣಗೊಂಡ ಕಾರ್ಟೂನುಗಳನ್ನು ನೋಡಿದ್ದೆವು.

ಡಬ್ಬಿಂಗ್ ಬೇಕಾ? ಬೇಡ್ವಾ? ಮುಗಿಯದ ರಗಳೆಗೆ ಪರಿಹಾರ ಇಲ್ಲಿದೆ

ಇದೀಗ ಜಗತ್ತಿನಾದ್ಯಂತ ಸಾಹಸಮಯ, ಸೋಜಿಗ, ಕುತೂಹಲಕಾರಿ ಕಾರ್ಯಕ್ರಮಗಳಿಗೆ ಹೆಸರುವಾಸಿಯಾದ ಡಿಸ್ಕವರಿ ಚಾನೆಲ್ ಕಾಣುವ ದಿನಗಳು ನಿಚ್ಚಳವಾಗಿವೆ. ಇದೊಂದು ಎಲ್ಲವನ್ನೂ ಕನ್ನಡ ಭಾಷೆಯಲ್ಲಿ ನೋಡಬೇಕೆಂಬ ಮನಸ್ಸುಗಳಿಗೆ ಸಕ್ಕರೆಯ ಸುದ್ದಿಯಲ್ಲದೆ ಮತ್ತಿನ್ನೇನು?

ಒಂದು ನುಡಿ ನಿಂತ ನೀರಾಗದೇ, ಕಾಲಕಾಲಕ್ಕೆ ಜ್ಞಾನ ವಿಜ್ಞಾನ, ಮನರಂಜನೆಯ ಹೊಸ ಅಲೆಗೆ ತನ್ನನ್ನು ಒಡ್ಡಿಕೊಂಡು ಕ್ರಮಿಸಿದರೆ ಮಾತ್ರ ಪೀಳಿಗೆಯಿಂದ ಪೀಳೆಗೆಯ ಜೊತೆಗೆ ಸಾಗಲು ಸಾಧ್ಯ ಎಂಬುವುದು ಪ್ರಪಂಚದ ಎಲ್ಲಾ ಭಾಷಾತಜ್ಞರ ಅಭಿಪ್ರಾಯ.

ಮಾಲ್ಗುಡಿ ಡೇಸ್ ಕನ್ನಡದಲ್ಲಿ ಡಬ್ ಆಗ್ಬೇಕು ಏಕೆ? ಏನಿದು ಅಭಿಯಾನ?

ಭಾರತದ ತಮಿಳು, ತೆಲುಗು, ಹಿಂದಿ ಭಾಷೆಗಳು ಪ್ರಪಂಚದ ಎಲ್ಲಾ ರೀತಿಯ ಮಾಹಿತಿ ಸರಕಿನ ಭಾಷಾಂತರಕ್ಕೆ ತಡೆಗೋಡೆಯೊಡ್ಡದೆ ಆ ಭಾಷೆಗಳನ್ನು ಮಾತ್ರ ಬಲ್ಲ ಜನರಿಗೆ ಎಲ್ಲಾ ತೆರನಾದ ಕಾರ್ಯಕ್ರಮಗಳನ್ನು ನೋಡುವ ಅವಕಾಶ ದಕ್ಕಿಸಿಕೊಂಡಿದ್ದರೂ ಕನ್ನಡ ಮಾತ್ರ ತನ್ನ ಚಿತ್ರರಂಗದ ರಕ್ಷಣೆಗಾಗಿ ಎಂಬ ಕಾರಣಕ್ಕೆ ಸುಮಾರು ಆರು ದಶಕಗಳಷ್ಟು ಕಾಲ ಕನ್ನಡಿಗರು ಕನ್ನಡದ ಚಿತ್ರಗಳನ್ನು ಬಿಟ್ಟು ಬೇರೆ ಭಾಷೆಯಲ್ಲಿರುವ ಇತರ ಉತ್ತಮ, ಸದಭಿರುಚಿಯ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ನೋಡಲಾಗದ ವಾತಾವರಣ ಸೃಷ್ಟಿಯಾಗಿತ್ತು.

ಹತ್ತು ವರುಷಗಳಿಂದ ಕನ್ನಡ ಮನಸುಗಳ ಹೋರಾಟ

ಹತ್ತು ವರುಷಗಳಿಂದ ಕನ್ನಡ ಮನಸುಗಳ ಹೋರಾಟ

ಆದರೆ, ಕಳೆದ ಹತ್ತು ವರುಷಗಳಿಂದ ಬನವಾಸಿ ಬಳಗ, ಕನ್ನಡ ಗ್ರಾಹಕ ಕೂಟ ಹಾಗೂ ಇನ್ನಿತರ ಕನ್ನಡಪರ ಮನಸ್ಸುಗಳ ಅವಿರತವಾದ ಕಾನೂನು ಹೋರಾಟ, ಚಿತ್ರರಂಗದ ಮೇಲೆ ಒತ್ತಡ, ಸಮೂಹ ಮಾಧ್ಯಮಗಳ ಮುಖೇನ ಜನರಿಗೆ ಅರಿವು ಮೂಡಿಸುವ ಕೆಲಸ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಾಗುವ ನಿರಂತರ ವೇಗ,ವಿಸ್ತಾರದ ಫಲಶ್ರುತಿಯಿಂದ Better late than never ಎಂಬಂತೆ ಕನ್ನಡ ನುಡಿಯ ಪ್ರತಿಯೊಂದು ರಿಜಿಸ್ಟ್ರರ್ ಗಳಲ್ಲಿ ಹೊಸ ವಿಶಯವನ್ನು ಹೊಸ ಜ್ನಾನವನ್ನು ಕನ್ನಡೀಕರಿಸಿಗೊಳಿಸುವ ಕೆಲಸ ಮುಖ್ಯವಾಹಿನಿಗೆ ಬಂದು ಭರದಿಂದ ಸಾಗಿರುವುದು ಭಾಷೆಯ ಉಳಿವು-ಬೆಳವಿನ ವಿಚಾರದಲ್ಲಿ ಒಂದು ಒಳ್ಳೆಯ ಬೆಳವಣಿಗೆ ಎಂದೇ ಹೇಳಬೇಕು.

ಡಬ್ಬಿಂಗ್ ತಡೆಯಲು ಯತ್ನಿಸುವವರು ಶಿಕ್ಷಾರ್ಹರು : ಸುಪ್ರೀಂಕೋರ್ಟ್

ಮೂರು ವರ್ಷಗಳಲ್ಲಿ ಡಬ್ ಆದವು ಚಿತ್ರಗಳು

ಮೂರು ವರ್ಷಗಳಲ್ಲಿ ಡಬ್ ಆದವು ಚಿತ್ರಗಳು

ಅದೊಂದು ಕಾಲವಿತ್ತು, ಅಪ್ಪಟ ಜನಹಿತ ಕಾರ್ಯಕ್ರಮವಾದ ಸತ್ಯಮೇವ ಜಯತೆ ಯನ್ನು ಕನ್ನಡಿಗರು ಟಿವಿಯಲ್ಲಿ ಮಾತ್ರವಲ್ಲ ಯೂಟ್ಯೂಬ್ ನಲ್ಲೂ ಕೂಡ ನೋಡುದನ್ನು ತಪ್ಪಿಸಿ ಕನ್ನಡಿಗರನ್ನು ಬಾವಿಯೊಳಗಿನ ಕಪ್ಪೆಗಳಾಗಿ ಮಾಡಿ, ನಾವು ಕೊಟ್ಟಿದ್ದನ್ನು ಮಾತ್ರ ನೀವು ನೋಡಬೇಕು ಎಂಬ ಪಾಳೇಗಾರಿಕೆಯ ಕಾಲ. ಆದರೆ ಅನ್ಯಾಯದಿಂದ ಕಟ್ಟಿದ ಅಣೆಕಟ್ಟನ್ನು ಎಷ್ಟು ದಿನ ತಡೆಹಿಡಿಯಲು ಸಾಧ್ಯ? ಹೊಸ ನೀರು ಸೇರಿಕೊಂಡ ಹಾಗೆ ರಭಸವೂ ಹೆಚ್ಚು, ಅಣೆಕಟ್ಟಿನ ಮೇಲೆ ಒತ್ತಡವೂ ಹೆಚ್ಚು, ಒಂದು ದಿನ ಛಿದ್ರವಾಗಲೇ ಬೇಕಿತ್ತು.

ಕಳೆದ ಮೂರು ವರ್ಷಗಳಲ್ಲಿ ತಮಿಳಿನಿಂದ ಸತ್ಯದೇವ್ IPS , ಧೀರ, ಕಮಾಂಡೊ, ಜಗಮಲ್ಲ, ಇಂಗ್ಲೀಷ್ ನಿಂದ ಫಾಸ್ಟ್ ಅಂಡ್ ಫ್ಯೂರಿಯಸ್ ಹಾಗೂ ಈ ವರ್ಷ ಏಕಕಾಲಕ್ಕೆ ಮೂಲ ಚಿತ್ರದೊಂದಿಗೆ ಕನ್ನಡೀಕರಣಗೊಂಡ ಮಲಯಾಳಂ ಚಿತ್ರ- ಕಿರಿಕ್ ಲವ್ ಸ್ಟೋರಿ, ತಮಿಳಿನಿಂದ ಕಾಂಚನಾ ಬಂದು ಇದೀಗ ಮುಂದಿನ ತಿಂಗಳು ತೆಲುಗಿನಿಂದ ಡಿಯರ್ ಕಾಮ್ರೇಡ್ ಬಿಡುಗಡೆಯಾಗಲು ಅಣಿಯಾಗಿರುವುದು ದಶಕಗಳಷ್ಟು ಕಾಲ ಹೇಳಿದ ಬೆದರುಗೊಂಬೆ ಸುಳ್ಳುಕಥೆಯ ಸತ್ಯಾಸತ್ಯತೆ ಬಟ್ಟಬಯಲಾಗಿರುವುದು ನಾಡಿಗೆ ಮಾತ್ರವಲ್ಲ, ಪ್ರಪಂಚದ ಮೂಲೆ ಮೂಲೆಗೂ ತಲುಪಿರುವುದು ಎದ್ದು ತೋರುತ್ತಿದೆ.

ಟಿವಿ ಮಾಧ್ಯಮ ಹಾಗೂ ಓಟಿಟಿ ಮಾಧ್ಯಮ

ಟಿವಿ ಮಾಧ್ಯಮ ಹಾಗೂ ಓಟಿಟಿ ಮಾಧ್ಯಮ

ಇನ್ನೊಂದು ಸಕಾರಾತ್ಮಕ ಬೆಳವಣಿಗೆಯೆಂದರೆ, ಚಿತ್ರರಂಗದಲ್ಲಿ ಶುರುಗೊಂಡ ಹೊಸಗಾಳಿ ಟಿವಿ ಮಾಧ್ಯಮ ಹಾಗೂ ಓಟಿಟಿ ಮಾಧ್ಯಮದಲ್ಲೂ ಬಹುಬೇಗ ವ್ಯಾಪಿಸುತ್ತಿರುವುದು ಕಂಡುಬರುತ್ತಿದೆ. ಕಳೆದ ವರ್ಷ ಸೋನಿಕ್ ಮತ್ತು ನಿಕ್ ಚಾನೆಲ್ ಗಳು ಡಬ್ಬಿಂಗ್ ಕಾರ್ಯಕ್ರಮಗಳನ್ನು ಶುರು ಮಾಡಿ ಕನ್ನಡೀಕರಣಕ್ಕೆ ನಾಂದಿಹಾಡಿದರೆ ವರ್ಷದ ಅಂತ್ಯಕ್ಕೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ಪ್ರಾರಂಭವಾಗಿ ಇನ್ನೆಲ್ಲವೂ ಸರಾಗವೆಂಬ ಸಂದೇಶ ಕಳುಹಿಸಿತು.

ಅದೇ ಸಮಯಕ್ಕೆ ಜೀ ಚಾನೆಲ್ ತನ್ನ ಆಪ್ ನಲ್ಲಿ ಹಿಂದಿಯ ಪ್ರಸಿದ್ದ ಚಿತ್ರಗಳಾದ ತಾಲ್, ಇಕ್ಬಾಲ್ ಅಂತಹ ಚಿತ್ರಗಳನ್ನು ಡಬ್ ಮಾಡಿ ಹಾಕಿ, ಮುಂದೆ ವೆಬ್ ಸರಣಿಗಳಲ್ಲಿ ಕನ್ನಡದ ಅವತರಣಿಕೆ ಬರುವಂತೆ ಮಾಡಿತು. ಇದನ್ನು ಕಂಡ ಹಾಟ್ ಸ್ಟಾರ್ ಹಾಗೂ ಅಮೆಜಾನ್ ಪ್ರೈಮ್ ಗಳು ಕೂಡ ಹಿಂದೆ ಬೀಳಲಿಲ್ಲ. ಅವರು ಕೂಡ ಕನ್ನಡದಲ್ಲಿ ಡಬ್ಬಿಂಗ್ ಕೊಡಲು ಶುರುಮಾಡಿರುವುದು ಮಾರುಕಟ್ಟೆಯಲ್ಲಿನ ಬೇಡಿಕೆಯ ಒಂದು ನೈಜ ಚಿತ್ರಣವೆಂದೇ ಹೇಳಬಹುದು.

#DiscoveryInKannada ಕ್ಕೆ ಸಿಕ್ಕ ಬೆಂಬಲ

#DiscoveryInKannada ಕ್ಕೆ ಸಿಕ್ಕ ಬೆಂಬಲ

ಹೋರಾಟದ ಭಾಗವಾಗಿ, ಕಳೆದ ನಾಲ್ಕಾರು ವರ್ಶಗಳಿಂದ ಡಬ್ಬಿಂಗ್ ಪರ ಮನಸ್ಸುಗಳು ಡಿಸ್ಕವರಿ, ಆನಿಮಲ್ ಪ್ಲಾನೆಟ್, ನಾಶನಲ್ ಜಿಯೊಗ್ರಫಿಕ್ ಅಂತಹ ಚಾನೆಲ್ ಗಳಿಗೆ ಪತ್ರ, ಸಾಮಾಜಿಕ ಜಾಲತಾಣದ ಮೂಲಕ ಬೇಡಿಕೆ ಇಟ್ಟು, ಹಾಗೂ ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿ ಕನ್ನಡಿಗರು ಇಂತಹ ಕಾರ್ಯಕ್ರಮಗಳಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಸದಾ ಕಾರ್ಯಪ್ರವೃತ್ತರಾಗಿರುವುದು ತಿಳಿದ ವಿಚಾರ.

2018ರ ಜನವರಿಯಲ್ಲಿ ನಡೆಸಿದ ಟ್ವಿಟ್ಟರ್ ಅಭಿಯಾನ -#DiscoveryInKannada ಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲದಿಂದ ಈ ಎಲ್ಲಾ ಚಾನೆಲ್ ಗಳು ಬಂದೇ ಬರುತ್ತವೆ ಎಂಬುದು ಖಾತ್ರಿಯಾಗಿದ್ದರೂ ಯಾವಾಗ ಎಂಬ ಜಿಜ್ಞಾಸೆ ಎಲ್ಲರಿಗೂ ಕಾಡುತ್ತಿತ್ತು. ಇತ್ತೀಚೆಗೆ ಟೈಮ್ಸ್ ನ ವರದಿಗಾರರೊಬ್ಬರು ಡಿಸ್ಕವರಿ ಕನ್ನಡ ಚಾನೆಲ್ ಸದ್ಯದಲ್ಲೇ ಎಂಬ ವಿಚಾರ ಹಂಚಿಕೊಂಡಾಗ ಕನ್ನಡದ ಯುವಮನಸ್ಸುಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.

ಇವತ್ತು ಡಿಸ್ಕವರಿಯ ದಕ್ಷಿಣ ಏಶಿಯಾದ ಡೈರೆಕ್ಟರ್ ಅವರು ಟ್ವಿಟ್ಟರ್ ನಲ್ಲಿ ಆಗಸ್ಟ್ ನಲ್ಲಿ ಡಿಸ್ಕವರಿ ಚಾನೆಲ್ ಜೊತೆ ವರ್ಷಾಂತ್ಯದೊಳಗೆ ಡಿಸ್ಕವರಿ ಕಿಡ್ಸ್ ಕೂಡ ಕನ್ನಡದಲ್ಲಿ ಬರುತ್ತದೆ ಎಂದು ಖಚಿತ ಪಡಿಸಿರುವುದು ಕನ್ನಡ ಮಾತ್ರ ಬಲ್ಲವರಿಗೆ, ಕನ್ನಡದಲ್ಲೇ ನೋಡಲಿಚ್ಚಿಸುವವರಿಗೆ, ಕನ್ನಡದಲ್ಲಿ ಎಲ್ಲವೂ ಸಿಗಬೇಕೆಂದು ಭಗೀರಥ ಪ್ರಯತ್ನ ಪಟ್ಟವರಿಗೆ ಖುಶಿಯ ಜೊತೆಗೆ ಇನ್ನಷ್ಟು ಕನಸು ಕಾಣಲು ಇಂಬು ಕೊಟ್ಟಿರುವುದಂತು ನಿಜ.

English summary
Discovery Channel is an American pay television network and flagship channel owned by Discovery, Inc is adding more regional language feed in India. Discovery channel will be made available with Kannada audio feed by August, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X