ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Summer Health Tips: ಬೇಸಿಗೆಯಲ್ಲಿ ನೀರಿನಿಂದಲೂ ರೋಗಗಳು ಕಾಡಬಹುದು!

|
Google Oneindia Kannada News

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡುವುದು ಸಹಜ. ಪಟ್ಟಣ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುತ್ತದೆ. ಹೀಗಾಗಿ ಅನಿವಾರ್ಯವಾಗಿ ಹೊಳೆ, ಕೆರೆಗಳಿಂದ ನೀರನ್ನು ತಂದು ಬಳಸಬೇಕಾಗುತ್ತದೆ. ಕೆಲವೊಮ್ಮೆ ಈ ನೀರು ಕಲುಷಿತಗೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ.

ಬೇಸಿಗೆಯ ದಿನಗಳಲ್ಲಿ ನೀರನ್ನು ಬಳಸುವಾಗ ಹೆಚ್ಚಿನ ಜಾಗ್ರತೆ ವಹಿಸುವುದು ಬಹುಮುಖ್ಯವಾಗಿರುತ್ತದೆ. ಕೆಲವೊಮ್ಮೆ ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರವಾಗಿ ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿಕೊಡಬಹುದು. ಇನ್ನು ಕೆಲವೆಡೆ ಕೊಳಚೆ, ತ್ಯಾಜ್ಯ ನೀರು ನದಿಗೆ ಸೇರುತ್ತಿದ್ದು ಅದನ್ನು ಶುದ್ಧೀಕರಿಸದೆ ಕುಡಿಯುವುದರಿಂದ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ.

Summer Health Tips: ಬೇಸಿಗೆಯಲ್ಲಿ ಉತ್ತಮ ಆರೋಗ್ಯದ ಬಗ್ಗೆ ಮುಂಜಾಗ್ರತಾ ಕ್ರಮಗಳೇನು?Summer Health Tips: ಬೇಸಿಗೆಯಲ್ಲಿ ಉತ್ತಮ ಆರೋಗ್ಯದ ಬಗ್ಗೆ ಮುಂಜಾಗ್ರತಾ ಕ್ರಮಗಳೇನು?

 ಹತ್ತಾರು ರೋಗಗಳು ಹರಡಬಹುದು

ಹತ್ತಾರು ರೋಗಗಳು ಹರಡಬಹುದು

ಕೆಲವು ಕಡೆಗಳಲ್ಲಿ ಶುಚಿತ್ವದ ಕೊರತೆಯಿಂದಾಗಿ ಸಾರ್ವಜನಿಕ ನೀರಿನ ಟ್ಯಾಂಕ್, ಬೋರ್‌ವೆಲ್, ಬಾವಿಗಳ ಬಳಿ ಕೊಳಚೆ ನೀರುಗಳು ನಿಲ್ಲುತ್ತಿದ್ದು, ಇಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾ ಮತ್ತು ಸೊಳ್ಳೆಗಳು ಕಾಯಿಲೆಗಳನ್ನು ಹರಡುತ್ತವೆ. ಕೆರೆ, ಬಾವಿ, ನದಿಗಳಿಂದ ತಂದ ನೀರನ್ನು ಚೆನ್ನಾಗಿ ಕುದಿಸಿ ಉಪಯೋಗಿಸದೆ ಕೆಲವರು ನೇರವಾಗಿ ಕುಡಿಯುತ್ತಿರುವುದರಿಂದಲೂ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಕಲುಷಿತ ನೀರಿನಿಂದಾಗಿ ಕಾಲರಾ, ಕರಳುಬೇನೆ (ವಾಂತಿ ಬೇಧಿ), ಟೈಫಾಯ್ಡ್ (ವಿಷಮ ಶೀತಜ್ವರ), ಹೆಪಟೈಟಿಸ್, ಪೋಲಿಯೋ, ಆಮಶಂಕೆ, ಇಲಿಜ್ವರ, ಜಂತುಹುಳು ಸೋಂಕು, ಪ್ಲೋರೋಸಿಸ್, ನಾರುಹುಣ್ಣು ಮೊದಲಾದ ರೋಗಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

 ಕುಡಿಯುವ ನೀರಿನ ಮೂಲಗಳಿಗೆ ಕಲುಷಿತ ನೀರು ಸೇರ್ಪಡೆ

ಕುಡಿಯುವ ನೀರಿನ ಮೂಲಗಳಿಗೆ ಕಲುಷಿತ ನೀರು ಸೇರ್ಪಡೆ

ಹೆಚ್ಚಿನ ಕಾಯಿಲೆಗಳು ಸೋಂಕುಗಳಾಗಿದ್ದು, ಅವು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದಾಗಿ ಪ್ರತಿಯೊಬ್ಬರು ತಮ್ಮ ಮನೆ ಮತ್ತು ಸುತ್ತಮುತ್ತ ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವವನ್ನು ಕಾಪಾಡುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ನೀರಿನ ಮೂಲಗಳಾದ ಬಾವಿ, ಕೊಳವೆಬಾವಿ ಮತ್ತು ಟ್ಯಾಂಕರ್ ಸುತ್ತಮುತ್ತ ಬಳಸಿದ ನೀರು ನಿಲ್ಲುವುದರಿಂದ, ಕೆರೆ ಬಳಿ ಮಲ ವಿಸರ್ಜನೆ ಮಾಡುವುದು, ದನಕರುಗಳನ್ನು ತೊಳೆಯುವುದು, ಬಟ್ಟೆ ಪಾತ್ರೆ ತೊಳೆದ ನೀರು ಕುಡಿಯುವ ನೀರಿನ ಮೂಲಗಳಿಗೆ ಸೇರ್ಪಡೆಯಾಗುವುದು, ನೀರಿನ ಸಂಗ್ರಹಣೆ, ನೀರಿನ ಟ್ಯಾಂಕ್‌ನಿಂದ ಸರಬರಾಜಾಗುವ ಪೈಪುಗಳಲ್ಲಿ ಸೋರಿಕೆ ಮತ್ತು ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸದಿರುವುದರಿಂದ, ನೀರು ಪೂರೈಕೆ ನಲ್ಲಿಗಳು ತಗ್ಗಿನಲ್ಲಿದ್ದಾಗ ಅದರಲ್ಲಿ ನೀರು ನಿಂತು ಕಲುಷಿತಗೊಂಡು ನೀರು ಪೂರೈಕೆ ಪೈಪುಗಳಲ್ಲಿ ಪುನಃ ಸೇರುವುದರಿಂದ ಹಾಗೂ ಮನೆಯಲ್ಲಿ ಸಂಗ್ರಹಿಸಿದ ನೀರು ಕಲುಷಿತಗೊಳ್ಳುವುದರಿಂದಲೂ ನಮಗರಿಯದಂತೆ ಸೋಂಕುಗಳು ಹರಡಿಕೊಳ್ಳಬಹುದು.

 ಸಾಂಕ್ರಾಮಿಕ ರೋಗಗಳತ್ತ ಎಚ್ಚರವಿರಲಿ

ಸಾಂಕ್ರಾಮಿಕ ರೋಗಗಳತ್ತ ಎಚ್ಚರವಿರಲಿ

ಸಾಂಕ್ರಾಮಿಕ ಕಾಯಿಲೆ ಯಾರೋ ಒಬ್ಬರಿಗೆ ಬಂದು ಹೋಗುವಂತಹದಲ್ಲ ಆದ್ದರಿಂದ ಪ್ರತಿಯೊಬ್ಬರೂ ಇದರ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಗ್ರಾಮದಲ್ಲಿ ಅಥವಾ ಬಡಾವಣೆಗಳಲ್ಲಿ ಒಬ್ಬರಿಗೆ ಯಾವುದಾದರೂ ರೋಗ ಕಾಣಿಸಿಕೊಂಡರೆ ಅದು ಇತರರಿಗೂ ಹರಡುವ ಸಾಧ್ಯತೆಯಿರುವುದರಿಂದ ಎಲ್ಲರೂ ಇದರತ್ತ ಗಮನಹರಿಸಿ ಕಾಯಿಲೆ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.

ತಮ್ಮ ಮನೆ ಮತ್ತು ಬೀದಿಯಲ್ಲಿ ಶುಚಿತ್ವಕ್ಕೆ ಮೊದಲು ಆದ್ಯತೆ ನೀಡಬೇಕಾಗಿದೆ. ಕುಡಿಯುವ ನೀರಿನ ಸ್ಥಳಗಳಲ್ಲಿ ತ್ಯಾಜ್ಯ, ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದನ್ನು ತಡೆಗಟ್ಟಬೇಕು, ಕುಡಿಯುವ ನೀರಿನ ಸ್ಥಳಗಳಲ್ಲಿ ದನ-ಕರು, ಬಟ್ಟೆ ಪಾತ್ರೆ ತೊಳೆಯುವುದನ್ನು ತಡೆಗಟ್ಟಬೇಕು. ಒಂದು ವೇಳೆ ತೊಳೆದರೂ ಅದರ ತ್ಯಾಜ್ಯ ನೀರು ಕುಡಿಯುವ ನೀರಿನೊಂದಿಗೆ ಸೇರ್ಪಡೆಗೊಳ್ಳದಂತೆ ನೋಡಿಕೊಳ್ಳಬೇಕು.

 ನೀರಿನ ಟ್ಯಾಂಕ್‌ಗಳನ್ನು ಶುಚಿಗೊಳಿಸಬೇಕು

ನೀರಿನ ಟ್ಯಾಂಕ್‌ಗಳನ್ನು ಶುಚಿಗೊಳಿಸಬೇಕು

ನೀರಿನ ಪೈಪುಗಳು ಸೋರಿಕೆಯಿದ್ದಲ್ಲಿ ಕೂಡಲೇ ದುರಸ್ತಿಪಡಿಸಬೇಕು. ಮನೆಯಲ್ಲಿರುವ ಮತ್ತು ಬೀದಿಗಳ ಟ್ಯಾಂಕ್‌ಗಳನ್ನು ನಿಯಮಿತವಾಗಿ ಪ್ರತಿ ಹತ್ತು ದಿನಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಸಾರ್ವಜನಿಕವಾಗಿ ಸರಬರಾಜು ಮಾಡುವ ನೀರನ್ನು ಕ್ಲೋರಿನ್‌ನಿಂದ ಶುದ್ಧಗೊಳಿಸಬೇಕು. ನೀರು ಪೂರೈಕೆ ಮಾಡುವ ನಲ್ಲಿಗಳು ಎತ್ತರದ ಸ್ಥಳದಲ್ಲಿ ಇರುವಂತೆ ಹಾಗೂ ಮುಚ್ಚಳವಿರುವ ನಲ್ಲಿಗಳನ್ನು ಉಪಯೋಗಿಸುವಂತೆ ಕ್ರಮ ಕೈಗೊಳ್ಳಬೇಕು, ಇನ್ನು ಮನೆಯಲ್ಲಿ ಸಂಗ್ರಹಿಸಿದ ನೀರು ಮಕ್ಕಳ ಕೈಗೆ ಮತ್ತು ಸಾಕು ಪ್ರಾಣಿಗಳಿಗೆ ಎಟುಕದಂತೆ ಎತ್ತರದಲ್ಲಿರಿಸುವುದು, ನೀರು ತೆಗೆದುಕೊಳ್ಳಲು ಹಿಡಿಕೆ ಇರುವ ಬಟ್ಟಲನ್ನು ಉಪಯೋಗಿಸುವುದು ಒಳ್ಳೆಯದು.

ಇನ್ನು ಸ್ಥಳೀಯ ಗ್ರಾ.ಪಂ, ಪ.ಪಂ, ನಗರಸಭೆ, ಪಾಲಿಕೆಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಕುಡಿಯುವ ನೀರಿನ ಮೂಲಗಳನ್ನು ನಿಯಮಿತವಾಗಿ ಕ್ಲೋರಿನೇಷನ್ ಮಾಡಿಸಿ, ಶುದ್ಧವಾದ ನೀರನ್ನು ಪೂರೈಸುವುದು. ಕಾಲಕಾಲಕ್ಕೆ (ಹತ್ತು ದಿನಗಳಿಗೊಮ್ಮೆ) ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವುದು. ಪಂಚಾಯತ್ ಅನುದಾನದಲ್ಲಿ ಕನಿಷ್ಠ 25 ಕೆ.ಜಿ. ಬ್ಲೀಚಿಂಗ್ ಪುಡಿ ದಾಸ್ತಾನು ಯಾವಾಗಲೂ ಇಟ್ಟುಕೊಳ್ಳುವುದು. ನೀರಿನ ಪೂರೈಕೆ ಪೈಪು ಸೋರಿಕೆಯಿದ್ದಲ್ಲಿ ಪಂಚಾಯಿತಿ ವತಿಯಿಂದ ದುರಸ್ತಿಗೊಳಿಸುವುದು. ಬೋರ್‌ವೆಲ್ ಸುತ್ತಮುತ್ತಲಿನ 100 ಮೀಟರ್ ಆಸುಪಾಸಿನಲ್ಲಿ ತಿಪ್ಪೆಗುಂಡಿ, ಗೊಬ್ಬರದ ಗುಂಡಿ ಇದ್ದಲ್ಲಿ ಸ್ಥಳಾಂತರಿಸುವುದು, ಚರಂಡಿಯ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

 ಕುದಿಸಿ ಆರಿಸಿದ ನೀರನ್ನು ಬಳಸಿ

ಕುದಿಸಿ ಆರಿಸಿದ ನೀರನ್ನು ಬಳಸಿ

ಕುಡಿಯುವ ನೀರಿನ ಮಾದರಿಗಳನ್ನು ಶುದ್ಧೀಕರಿಸಿದ ಗಾಜಿನ ಬಾಟಲಿಗಳಲ್ಲಿ ಸಂಗ್ರಹಿಸಿ ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸುವುದು, ಅಶುದ್ಧ ಎಂದು ಕಂಡು ಬಂದ ನೀರಿನ ಮೂಲಗಳಿಗೆ ಕ್ಲೋರಿನೇಷನ್ ಮಾಡಿಸಿ 15 ದಿನಗಳ ನಂತರ ಪುನಃ ಪರೀಕ್ಷೆಗೆ ಒಳಪಡಿಸುವುದು ಅಗತ್ಯವಾಗಿ ಮಾಡಬೇಕಾಗಿದೆ.

ಬೇಸಿಗೆಯ ಈ ದಿನಗಳಲ್ಲಿ ಪ್ರತಿಯೊಬ್ಬರೂ ಆರೋಗ್ಯದ ದೃಷ್ಟಿಯಿಂದ ತಾವು ಬಳಸುವ ನೀರಿನತ್ತ ಹೆಚ್ಚಿನ ಜಾಗ್ರತೆ ವಹಿಸಬೇಕು. ಫಿಲ್ಟರ್ ನೀರು, ಕುದಿಸಿ ಆರಿಸಿದ ನೀರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೀಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ನೀರಿನಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳಿಂದ ತಪ್ಪಿಸಿಕೊಂಡು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.

English summary
The use of contaminated water during the summer can increase the risk of infectious diseases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X