• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವೇಗೌಡರು ಅಂದು ಪರಮೇಶ್ವರ್ ಬದಲು ಧರ್ಮಸಿಂಗ್‌ರನ್ನು ಸಿಎಂ ಮಾಡಿದ್ದೇಕೆ?

By ಆರ್‌ ಟಿ ವಿಠ್ಠಲಮೂರ್ತಿ
|

ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ನಡೆಸುವುದು ಅತ್ಯಂತ ಕಠಿಣ ಕೆಲಸ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ನೋವು ತೋಡಿಕೊಂಡಿದ್ದಾರೆ. ನಾನು ಮುಖ್ಯಮಂತ್ರಿಯಾದೆ ಎಂಬ ಕಾರಣಕ್ಕಾಗಿ ನೆಮ್ಮದಿಯಾಗಿದ್ದೇನೆ ಎಂದು ಬಾವಿಸಬೇಡಿ.ಈ ಸಮ್ಮಿಶ್ರ ಸರ್ಕಾರವನ್ನು ನಡೆಸುವ ವಿಷಯದಲ್ಲಿ ನಾನು ಪಡಬಾರದ ಪಡಿಪಾಟಲು ಪಡುತ್ತಿದ್ದೇನೆ ಎಂದವರು ಶನಿವಾರ ಪಕ್ಷದ ಕಾರ್ಯಕರ್ತರೆದುರು ಕಣ್ಣೀರು ಹಾಕಿದ್ದಾರೆ.

ಒಂದು ದೃಷ್ಟಿಯಲ್ಲಿ ಅದು ನಿಜವೂ ಹೌದು. ಯಾಕೆಂದರೆ ಕುಮಾರಸ್ವಾಮಿ ಅವರು ಈ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಅವರಂತಹ ಮನೋಭಾವದವರಲ್ಲ. ವಾಸ್ತವವಾಗಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಚಾಲ್ತಿಗೆ ತಂದಿರಬಹುದು. ಆದರೆ ಮೈತ್ರಿಕೂಟ ಸರ್ಕಾರಗಳ ಮಟ್ಟದಲ್ಲಿ ಈ ಸ್ಲೋಗನ್ ಅನ್ನು ಮೊದಲು ಜಾರಿಗೆ ತಂದವರು ಧರ್ಮಸಿಂಗ್.ಅವರಿಗೆ ಹೋಲಿಸಿದರೆ ಕುಮಾರಸ್ವಾಮಿ ಸಂಪೂರ್ಣ ತದ್ವಿರುದ್ದ. ಹೀಗಾಗಿ ದಿನದಿಂದ ದಿನಕ್ಕೆ ಕಾಂಗ್ರೆಸ್ ನಾಯಕರ ಜತೆ ಅವರ ಶತ್ರುತ್ವ ಬೆಳೆಯುತ್ತಿದೆ.

ಕರಿನಾಗರ ಕಾಣುವುದಕ್ಕೂ ಎಚ್ಡಿಕೆ ಮನೆ ಬಿಡದಿರುವುದಕ್ಕೂ ಎಲ್ಲಿಯ ಸಂಬಂಧ?

ಆದರೆ ಧರ್ಮಸಿಂಗ್ ಅವರ ಸುತ್ತ ಹಿತಶತ್ರುಗಳ ಪಡೆ ಇದ್ದರೂ ಅವರು ಅವತ್ತು ಮೈತ್ರಿ ಪಕ್ಷವಾಗಿದ್ದ ಜೆಡಿಎಸ್ ನ ಷರತ್ತು, ಬೇಡಿಕೆ, ಕೋರಿಕೆಗಳನ್ನು ಈಡೇರಿಸುವ ವಿಷಯದಲ್ಲಿ ಮುಕ್ತವಾಗಿದ್ದರು. ಹೀಗಾಗಿ ಅವರನ್ನು ಅಸ್ಥಿರಗೊಳಿಸುವ ಪ್ರಶ್ನೆಯೇ ಜೆಡಿಎಸ್ ಪಕ್ಷದ ನಾಯಕರಿಗಿರಲಿಲ್ಲ. ಆದರೆ ಧರ್ಮಸಿಂಗ್ ಸರ್ಕಾರವನ್ನು ಅಸ್ಥಿರಗೊಳಿಸುವ ವಿಷಯದಲ್ಲಿ ಅವತ್ತು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಹಾಗೂ ಮಂತ್ರಿಯಾಗದ ಕಾರಣಕ್ಕಾಗಿ ಡಿ.ಕೆ.ಶಿವಕುಮಾರ್ ವಿಪರೀತ ಉತ್ಸಾಹ ಇಟ್ಟುಕೊಂಡಿದ್ದರು.

ಯಾವಾಗ ಜೆಡಿಎಸ್ ನಲ್ಲಿನ ಭಿನ್ನಮತವನ್ನು ಕೈ ಪಾಳೆಯಕ್ಕೆ ಅನುಕೂಲವಾಗುವಂತೆ ಪರಿವರ್ತಿಸಿಕೊಳ್ಳಬೇಕು. ಇದಕ್ಕಾಗಿ ಅವತ್ತು ಉಪಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಅವರನ್ನು ತಮ್ಮ ಕಡೆ ಸೆಳೆದುಕೊಳ್ಳಬೇಕು ಎಂದವರು ಪ್ರಯತ್ನಿಸಿದರೋ?

ಆಗ ಧರ್ಮಸಿಂಗ್ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಪದಚ್ಯುತಗೊಳಿಸುವ ಅನಿವಾರ್ಯತೆ ಜೆಡಿಎಸ್ ಗೆ ಕಂಡು ಬಂತು. ಆ ಕೆಲಸದ ನೇತೃತ್ವವನ್ನು ಕುಮಾರಸ್ವಾಮಿ ವಹಿಸಿಕೊಂಡರು.

ದೇವೇಗೌಡರು ಯಾಕೆ ಹೀಗೆಲ್ಲ ಮಾಡುತ್ತಾರೆ? ಇಂದಿಗೂ ನಿಗೂಢ!

ಧರ್ಮಸಿಂಗ್ ಸರ್ಕಾರ ಬೀಳಿಸಲು ಕೈ ಪಾಳಯದಲ್ಲಿ ಮಸಲತ್ತು

ಧರ್ಮಸಿಂಗ್ ಸರ್ಕಾರ ಬೀಳಿಸಲು ಕೈ ಪಾಳಯದಲ್ಲಿ ಮಸಲತ್ತು

ಇವತ್ತು ಯಾರೇನೇ ಕತೆ ಹೇಳಲಿ. ಆದರೆ ಅವತ್ತು ಬಿಜೆಪಿ ಜತೆ ಕೈ ಜೋಡಿಸಿ ಮೈತ್ರಿಕೂಟ ಸರ್ಕಾರ ರಚಿಸದೆ ಹೋಗಿದ್ದರೆ ಜೆಡಿಎಸ್ ಹೀನಾಯ ಪರಿಸ್ಥಿತಿಗೆ ತಲುಪುತ್ತಿತ್ತು. ಆದರೆ ಧರ್ಮಸಿಂಗ್ ಅವರಿಗೆ ಜೆಡಿಎಸ್ ನಾಯಕರು ಅನ್ಯಾಯ ಮಾಡಿದರು. ಅವರಿಗೆ ನೀಡಿದ ಬೆಂಬಲವನ್ನು ವಾಪಸ್ ಪಡೆದು ಅವರು ಕೊರಗುವಂತೆ ಮಾಡಿದರು ಎಂದು ಕೆಲವರು ಆರೋಪ ಮಾಡುತ್ತಾರೆ.

ಆದರೆ ವಾಸ್ತವ ಸ್ಥಿತಿ ಅದಲ್ಲ. ತಮ್ಮ ಸರ್ಕಾರವನ್ನು ಉರುಳಿಸಲು ಕೈ ಪಾಳೆಯದ ನಾಯಕರೇ ನಡೆಸುತ್ತಿದ್ದ ತಂತ್ರಗಾರಿಕೆಯ ವಿವರ ಧರ್ಮಸಿಂಗ್ ಅವರಿಗೆ ಗೊತ್ತಿತ್ತು ಮತ್ತು ಕುಮಾರಸ್ವಾಮಿ ಅವರು ಬಿಜೆಪಿ ಜತೆ ಕೈ ಜೋಡಿಸಿ ಪರ್ಯಾಯ ಸರ್ಕಾರ ರಚಿಸಲಿ ಎಂಬ ವಿಷಯದಲ್ಲಿ ಅವರು ಒಪ್ಪಿಗೆಯನ್ನೂ ನೀಡಿದ್ದರು. ಇದೇ ವಸ್ತುಸ್ಥಿತಿ.

ಮೋದಿಯನ್ನು ಸದೆಬಡಿಯಲು ಹೆಗಡೆ ತಂತ್ರಕ್ಕೆ ಕಾಂಗ್ರೆಸ್ ಮೊರೆ!

ಎಸ್‌ಎಂ ಕೃಷ್ಣಗೆ ಮತ್ತೆ ಸಿಎಂ ಆಗುವ ಆಸೆ ಇತ್ತು

ಎಸ್‌ಎಂ ಕೃಷ್ಣಗೆ ಮತ್ತೆ ಸಿಎಂ ಆಗುವ ಆಸೆ ಇತ್ತು

ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ದೇವೇಗೌಡರನ್ನು ಭೇಟಿ ಮಾಡಿದ್ದ ಎಸ್.ಎಂ.ಕೃಷ್ಣ ತಮಗೆ ಮತ್ತೊಮ್ಮೆ ಸಿಎಂ ಆಗಲು ಅವಕಾಶ ನೀಡಬೇಕು ಎಂದು ಕೋರಿದ್ದರು. ಆದರೆ ದೇವೇಗೌಡರಿಗೆ ದಲಿತ ನಾಯಕ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತಂದು ಕೂರಿಸುವ ವಿಷಯದಲ್ಲಿ ಆಸಕ್ತಿಯಿತ್ತು. ಈ ಕುರಿತು ಅವರು ಪರಮೇಶ್ವರ್ ಅವರ ಜತೆಗೆ ಮಾತುಕತೆಯನ್ನೂ ನಡೆಸಿದ್ದರು.

ಆದರೆ ಅವರ ಈ ಲೆಕ್ಕಾಚಾರವನ್ನು ಬದಲಿಸಿದವರು ಮುಸ್ಲಿಂ ನಾಯಕ ಸಿ.ಎಂ.ಇಬ್ರಾಹಿಂ ಎಂಬುದು ತುಂಬ ಜನರಿಗೆ ಗೊತ್ತಿಲ್ಲ.ಅವತ್ತು ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪರಮೇಶ್ವರ್ ನೇತೃತ್ವದಲ್ಲಿ ರಚನೆಯಾಗಬೇಕು ಎಂಬುದು ಬಹುತೇಕ ನಿಕ್ಕಿಯಾದಾಗ ಸಿ.ಎಂ.ಇಬ್ರಾಹಿಂ ಅವರು ದೇವೇಗೌಡರನ್ನು ಭೇಟಿ ಮಾಡಿದರು.

ದಲಿತರನ್ನು ಸಿಎಂ ಮಾಡಿದರೆ ಕಷ್ಟವೂ ಎದುರಾಗುತ್ತದೆ

ದಲಿತರನ್ನು ಸಿಎಂ ಮಾಡಿದರೆ ಕಷ್ಟವೂ ಎದುರಾಗುತ್ತದೆ

ಈ ಸಂದರ್ಭದಲ್ಲಿ ಇಬ್ರಾಹಿಂ ಅವರು ಹೇಳಿದ್ದೆಂದರೆ, ದೇವೇಗೌಡರೇ. ನೀವು ದಲಿತ ನಾಯಕ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ತಂದು ಕೂರಿಸುತ್ತೀರಿ. ಆ ಮೂಲಕ ಕರ್ನಾಟಕ ಮೊಟ್ಟ ಮೊದಲ ದಲಿತ ಸಿಎಂ ಕಾಣುವಂತೆ ಮಾಡುತ್ತೀರಿ. ಆದರೆ ನಾಳೆ ಹೆಚ್ಚು ಕಡಿಮೆಯಾಗಿ ನೀವು ಕಾಂಗ್ರೆಸ್ ಪಕ್ಷಕ್ಕೆ ನೀಡುವ ಬೆಂಬಲವನ್ನು ವಾಪಾಸ್ ಪಡೆಯಬೇಕಾಗುತ್ತದೆ ಎಂದಿಟ್ಟುಕೊಳ್ಳಿ. ಆಗೇನಾಗುತ್ತದೆ? ಅಂತ. ಸಿ.ಎಂ.ಇಬ್ರಾಹಿಂ ಅವರಾಡಿದ ಮಾತುಗಳನ್ನು ಕೇಳಿ ದೇವೇಗೌಡರೂ ಅರೆಕ್ಷಣ ಕಕ್ಕಾಬಿಕ್ಕಿಯಾದರು. ಅಷ್ಟೇ ಅಲ್ಲ,ಇಬ್ರಾಹಿಂ,ನೀವೇನು ಹೇಳಬೇಕು ಅಂತ ಅಂದುಕೊಂಡಿದ್ದೀರೋ? ಅದನ್ನು ಹೇಳಿ ಎಂದರು. ಆ ಸಂದರ್ಭದಲ್ಲಿ ಸಿ.ಎಂ.ಇಬ್ರಾಹಿಂ ಹೇಳಿದ ಮಾತೆಂದರೆ, ಒಬ್ಬದಲಿತ ನಾಯಕನನ್ನು ಮುಖ್ಯಮಂತ್ರಿಯ ಜಾಗಕ್ಕೆ ತಂದು ಕೂರಿಸಿದರೆ ನಿಮಗೆ ಹೆಸರು ಬರುವುದು ನಿಜ. ಆದರೆ ಅವರಿಗೆ ನೀಡಿದ ಬೆಂಬಲವನ್ನು ವಾಪಸ್ ಪಡೆದರೆ ನಿಮ್ಮ ಜೀವಮಾನದುದ್ದಕ್ಕೂ ದಲಿತ ವಿರೋಧಿ ಎಂಬ ಹಣೆ ಪಟ್ಟಿಯನ್ನು ಹಚ್ಚಿಕೊಳ್ಳಬೇಕಾಗುತ್ತದ ಎಂಬುದು.

ಧರ್ಮಸಿಂಗ್ ಜಾತ್ಯಾತೀತ ನಾಯಕ

ಧರ್ಮಸಿಂಗ್ ಜಾತ್ಯಾತೀತ ನಾಯಕ

ಆಗ ಇದೇ ಕುಮಾರಸ್ವಾಮಿಯವರನ್ನು ಚರ್ಚೆಯ ಮಧ್ಯೆ ಕೂರಿಸಿಕೊಂಡ ದೇವೇಗೌಡರು, ಒಂದು ವೇಳೆ ಪರಮೇಶ್ವರ್ ಅವರನ್ನು ಸಿಎಂ ಮಾಡದಿದ್ದರೆ ನಾವು ಯಾರಿಗೆ ಬೆಂಬಲ ನೀಡುವುದು ಸೂಕ್ತ? ಅಂತ ಸಿ.ಎಂ.ಇಬ್ರಾಹಿಂ ಅವರನ್ನೇ ಪ್ರಶ್ನಿಸಿದರು. ಆಗ ಸಿ.ಎಂ.ಇಬ್ರಾಹಿಂ ಹೇಳಿದ ಹೆಸರು ಧರ್ಮಸಿಂಗ್ ಅವರದು. ಹೇಳಿ ಕೇಳಿ ಅವರು ರಜಪೂತ ಸಮುದಾಯಕ್ಕೆ ಸೇರಿದವರು. ಅವರಿಗೆ ನೀಡಿದ ಬೆಂಬಲವನ್ನು ನೀವು ನಾಳೆ ವಾಪಸ್ ಪಡೆಯಬೇಕಾಗಿ ಬಂದರೂ ಅದನ್ನು ಪ್ರತಿಭಟಿಸುವವರು ಯಾರೂ ಇರುವುದಿಲ್ಲ. ಹಾಗೆಯೇ ಧರ್ಮಸಿಂಗ್ ಅವರನ್ನು ಕೆಳಗಿಳಿಸಿದರು ಎಂಬ ಕಾರಣಕ್ಕಾಗಿ ಯಾವ ಹಣೆಪಟ್ಟಿಯನ್ನೂ ನೀವು ಶಾಶ್ವತವಾಗಿ ಹಚ್ಚಿಕೊಳ್ಳುವ ಸನ್ನಿವೇಶ ಉದ್ಭವವಾಗುವುದಿಲ್ಲ ಎಂದು ಅವರು ಹೇಳಿದ ಮೇಲೆ ಒಂದೇ ದಿನದಲ್ಲಿ ದೇವೇಗೌಡಡರ ನಿಲುವು ಬದಲಾಯಿತು. ಪರಮೇಶ್ವರ್ ಅವರ ಜಾಗಕ್ಕೆ ಧರ್ಮಸಿಂಗ್ ಅವರ ಹೆಸರು ಬಂತು. ಮುಂದೆ ಧರ್ಮಸಿಂಗ್ ಅವರಿಗೆ ಈ ವಿಷಯದಲ್ಲಿ ದೇವೇಗೌಡ ಹಾಗೂ ಸಿ.ಎಂ.ಇಬ್ರಾಹಿಂ ಅವರ ಬಗ್ಗೆ ತುಂಬ ಕೃತಜ್ಞತೆಯಿತ್ತು. ಹೀಗಾಗಿ ಅವರು ಮೈತ್ರಿಕೂಟ ಸರ್ಕಾರದ ಸೊಂಟವನ್ನು ದೇವೇಗೌಡರಿಗೆ ಅನುಕೂಲವಾಗುವಂತೆ ಬಗ್ಗಿಸಿದರು.

ಆ ಮೂಲಕ ತಮ್ಮ ಇಪ್ಪತ್ತು ತಿಂಗಳ ಆಡಳಿತವನ್ನು ಜೆಡಿಎಸ್ ಬಯಕೆಗೆ ಪೂರಕವಾಗಿ ನಡೆಸಿದರು.

ಕುಮಾರಸ್ವಾಮಿ ಧರ್ಮಸಿಂಗ್ ತರಹದ ನಾಯಕರಲ್ಲ

ಕುಮಾರಸ್ವಾಮಿ ಧರ್ಮಸಿಂಗ್ ತರಹದ ನಾಯಕರಲ್ಲ

ಆದರೆ ಇವತ್ತು ರಚನೆಯಾಗಿರುವ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರು ಧರ್ಮಸಿಂಗ್ ತರದ ನಾಯಕರಲ್ಲ. ಯಾಕೆಂದರೆ ತಾವು ಮುಖ್ಯಮಂತ್ರಿಯಾಗಲು ದೇವೇಗೌಡರು ಕಾರಣ ಎಂಬ ಕೃತಜ್ಞತೆ ಧರ್ಮಸಿಂಗ್ ಅವರಿಗಿತ್ತು. ಆದರೆ ಕುಮಾರಸ್ವಾಮಿ ಅವರಿಗೆ ತಾವು ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ನ ಅನಿವಾರ್ಯತೆ ಕಾರಣ ಎಂಬುದು ಗೊತ್ತಿದೆ.

ಹೀಗಾಗಿ ಅವರು ರಾಜ್ಯ ಕಾಂಗ್ರೆಸ್ ನಾಯಕರ ಬಯಕೆಯಂತೆ ಸರ್ಕಾರವನ್ನು ಮುನ್ನಡೆಸುತ್ತಿಲ್ಲ. ಬದಲಿಗೆ ತಮ್ಮ ಇಚ್ಚೆಯನ್ನು ಕೇಂದ್ರೀಕರಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಅಂದ ಹಾಗೆ ರಾಜ್ಯದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕು ಎಂಬ ಕೈ ಪಾಳೆಯದ ಬಯಕೆಗೆ ಹಲವು ಆಯಾಮಗಳಿವೆ. ಮುಂದಿನ ಲೋಕಸಭಾ ಚುನಾವಣೆಗೆ ಅಗತ್ಯವಾದ ಶಕ್ತಿಯನ್ನು ಕ್ರೋಢೀಕರಿಸಿಕೊಳ್ಳಬೇಕು ಎಂದಷ್ಟೇ ಅಲ್ಲ, ತೃತೀಯ ರಂಗದ ನಾಯಕರ ಮುಂದೆ ತನ್ನ ಟ್ರ್ಯಾಕ್ ರೆಕಾರ್ಡ್ ಅನ್ನು ಉತ್ತಮಗೊಳಿಸಿಕೊಳ್ಳಬೇಕು ಎಂಬ ಹಪಹಪಿ ಕೈ ಪಾಳೆಯದಲ್ಲಿದೆ.

ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್‌ ಮೇಲೆ ಪೂರ್ಣ ನಂಬಿಕೆ ಇಲ್ಲ

ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್‌ ಮೇಲೆ ಪೂರ್ಣ ನಂಬಿಕೆ ಇಲ್ಲ

2004 ರಿಂದ ಸತತ ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಸರ್ಕಾರ ದೇಶದ ವಿವಿಧ ರಾಜ್ಯಗಳಲ್ಲಿರುವ ಪ್ರಾದೇಶಿಕ ಶಕ್ತಿಗಳನ್ನು ತನ್ನಿಚ್ಚೆಗೆ ತಕ್ಕಂತೆ ಬಳಸಿಕೊಂಡಿತ್ತು. ಅದು ಕಮ್ಯೂನಿಸ್ಟರಿರಬಹುದು, ಸಮಾಜವಾದಿ ಪಕ್ಷವಿರಬಹುದು, ಜೆಡಿಎಸ್ಸೇ ಇರಬಹುದು. ಒಟ್ಟಿನಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದರೆ ಪ್ರಾದೇಶಿಕ ಶಕ್ತಿಗಳನ್ನು ನುಂಗಬೇಕು ಎಂಬ ಹವಣಿಕೆಯಲ್ಲೇ ಅದು ಕಾಲ ಕಳೆಯಿತು. ಇದೇ ಕಾರಣಕ್ಕಾಗಿ ಇವತ್ತು ದೇಶದ ವಿವಿಧ ರಾಜ್ಯಗಳಲ್ಲಿರುವ ಪ್ರಾದೇಶಿಕ ಶಕ್ತಿಗಳಿಗೆ ಕಾಂಗ್ರೆಸ್ ವಿಷಯದಲ್ಲಿ ಹೇಳಿಕೊಳ್ಳುವಂತಹ ನಂಬಿಕೆ ಇಲ್ಲ. ಹೀಗಾಗಿ ಅವು ಕಾಂಗ್ರೆಸ್ ನ ಟ್ರ್ಯಾಕ್ ರೆಕಾರ್ಡ್ ಅನ್ನು ಗಂಭೀರವಾಗಿ ಪರಿಶೀಲಿಸುತ್ತಲೇ ಇವೆ. ಅವುಗಳಿಗಿರುವ ಸಧ್ಯದ ಮಾಹಿತಿ ಎಂದರೆ ಮುಂದಿನ ಸಂಸತ್ ಚುನಾವಣೆಯ ನಂತರ ಮೋದಿ ನೇತೃತ್ವದ ಬಿಜೆಪಿಗೇ ಆಗಲಿ, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವೇ ಆಗಲಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವುದು ಕಷ್ಟ.

ತೃತೀಯ ರಂಗವೇ ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕ

ತೃತೀಯ ರಂಗವೇ ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕ

ಇಂತಹ ಸಂದರ್ಭದಲ್ಲಿ ತೃತೀಯ ರಂಗವೇ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಲಿದೆ. ಆ ವೇಳೆಗೆ ಯಾರು ತಮಗೆ ಹಿತವರು ಎಂಬ ನಿರ್ಧಾರವನ್ನು ಕೈಗೊಳ್ಳುವ ಸ್ವಾತಂತ್ರ್ಯವನ್ನು ತಾವಿಟ್ಟುಕೊಳ್ಳಬೇಕು ಎಂಬ ಬಯಕೆ ತೃತೀಯ ರಂಗದ ಬಹುತೇಕ ನಾಯಕರಿಗಿದೆ.

ಅಂದರೆ?ತೃತೀಯ ಶಕ್ತಿಗೆ ಪೂರಕವಾಗಿದ್ದರೆ ಕಾಂಗ್ರೆಸ್ ಜತೆ ಕೈ ಜೋಡಿಸುವುದು, ಇಲ್ಲವೇ ಮೋದಿ ಜತೆ ಕೈ ಜೋಡಿಸುವುದು. ಎಷ್ಟೇ ಆದರೂ ಭಾರತದಲ್ಲಿ ತೃತೀಯ ಶಕ್ತಿಯ ಉಗಮಕ್ಕೆ ಮೂಲ ಕಾರಣವಾಗಿದ್ದೇ ಕಾಂಗ್ರೆಸ್ ಪಕ್ಷ. ಹೀಗಾಗಿ ನಾಳೆ ಮೋದಿ ನೇತೃತ್ವದ ಬಿಜೆಪಿ ಜತೆ ಹೋಗಲು ಹಲ ಪ್ರಾದೇಶಿಕ ಶಕ್ತಿಗಳು ಸಜ್ಜಾಗುವುದು ಕಷ್ಟವೇನಲ್ಲ. ತೃತೀಯ ಶಕ್ತಿಗಳ ಈ ಮನ:ಸ್ಥಿತಿ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಆತಂಕದ ಬಾವವನ್ನುಮೂಡಿಸಿದೆ. ಹಾಗೆಯೇ ಪ್ರಾದೇಶಿಕ ಶಕ್ತಿಗಳ ವಿಷಯದಲ್ಲಿ ತನ್ನ ಟ್ರ್ಯಾಕ್ ರೆಕಾರ್ಡ್ ಅನ್ನು ಉತ್ತಮವಾಗಿಟ್ಟುಕೊಳ್ಳಬೇಕು ಎಂಬ ಅನಿವಾರ್ಯತೆ ಅದನ್ನು ಕಾಡುತ್ತಿದೆ.

ಇದೇ ಕಾರಣಕ್ಕಾಗಿ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ವಿರೋಧದ ನಡುವೆಯೇ ತಮಗಿಷ್ಟವಾದ ಬಜೆಟ್ ಅನ್ನು ಮಂಡಿಸಿದರು. ಅದೇ ರೀತಿ ಕಾಂಗ್ರೆಸ್ ಪಕ್ಷದಲ್ಲಿರುವ ಪ್ರಬಲ ನಾಯಕರನ್ನು ಅಶಕ್ತಗೊಳಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರ ಸಧ್ಯದ ನೋವೇನಿದೆ? ವಾಸ್ತವವಾಗಿ ಅದು ಕಾಂಗ್ರೆಸ್ ಪಕ್ಷದ ನೋವು. ಆದರೆ ಕೈ ಪಾಳೆಯಕ್ಕಿಂತ ಮುಂಚಿತವಾಗಿ ಕುಮಾರಸ್ವಾಮಿ ಅದನ್ನು ತೋಡಿಕೊಂಡಿರುವುದು ಕೂಡಾ ಅವರ ತಂತ್ರಗಾರಿಕೆಯ ಭಾಗವೇ ಹೊರತು ಮತ್ತೇನಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JDS President Deve Gowda wanted to make G Parameshwar as CM in 2004. But he made Dharam Singh as chief minister after talking to CM Ibrahim. Dharam Singh showed loyalty to jds but now Kumaraswamy not showing loyalty to Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more