ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಕನ್ನಡ: ಅಪ್ಪಟ ಕೃಷಿಕನ ಮಗಳು ಈಗ ಪಿಎಸ್ಐ; ಮುಸ್ಲಿಂ ಯುವತಿಯ ಅದ್ಭುತ ಸಾಧನೆ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 22: ಪೊಲೀಸ್ ಕೆಲಸ ಬಹುಪಾಲು ಯುವ ಜನರ ಕನಸು. ಮೈಮೇಲೆ ಖಾಕಿ ಸಮವಸ್ತ್ರ ಧರಿಸಿ ಸೂಪರ್ ಕಾಪ್ ಆಗಬೇಕೆನ್ನುವುದು ಅದೇಷ್ಟೋ ವಿದ್ಯಾವಂತರ ಆಸೆಯಾಗಿರುತ್ತದೆ. ಆದರೆ ಖಾಕಿ ಎಲ್ಲರಿಗೂ ಹೊಂದಲ್ಲ ಅನ್ನುವುದಕ್ಕೆ ವರ್ಷಂಪ್ರತಿ ಪೊಲೀಸ್ ನೇಮಕಾತಿಯಿಂದ ರಿಜೆಕ್ಟ್ ಆದವರ ಪಟ್ಟಿಯೇ ತೋರಿಸುತ್ತದೆ.

ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗ್ರಾಮೀಣ ಪ್ರದೇಶದ ಅಪ್ಪಟ ಕೃಷಿಕನ ಮಗಳು ತನ್ನಾಸೆಯನ್ನು ಪೂರೈಸಿಕೊಂಡಿದ್ದಾಳೆ. ಧೃಡ ಸಂಕಲ್ಪ, ಹೆತ್ತವರ ಪ್ರೋತ್ಸಾಹದಿಂದ ರಾಜ್ಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪ್ರಕ್ರಿಯೆಯಲ್ಲಿ 39ನೇ ರ್ಯಾಂಕ್ ಪಡೆದು ಆಯ್ಕೆಯಾಗಿದ್ದಾಳೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಸಮೀಪದ ಮುಸ್ಲಿಂ ಯುವತಿ ಬದ್ರುನಿಸಾ, ಈಗ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಡಬ ತಾಲೂಕಿನ ಕುಂತೂರು ಸಮೀಪದ ಕೊಚಕಟ್ಟೆ ನಿವಾಸಿ ಅಪ್ಪಟ ಕೃಷಿಕ ಇಸ್ಮಾಯಿಲ್ ಕೊಯ್ಯಾರ್ ಮತ್ತು ಝುಬೈದಾ ದಂಪತಿಯ ಕೊನೆಯ ಪುತ್ರಿಯಾಗಿರುವ ಬದ್ರುನಿಸಾ, ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ಪರೀಕ್ಷೆಯಲ್ಲಿ 39ನೇ ಶ್ರೇಯಾಂಕ ಪಡೆದು ಪೊಲೀಸ್ ಇಲಾಖೆ ಸೇರಿದ್ದಾರೆ.

Mangaluru: Dakshina Kannada District Farmers Daughter Passes PSI Exam

ಕೃಷಿಕರಾದ ಇಸ್ಮಾಯಿಲ್ ಕೊಯ್ಯೂರ್ ಮತ್ತು ಝುಬೈದಾ ದಂಪತಿಯ ನಾಲ್ವರು ಪುತ್ರಿಯರ ಪೈಕಿ ಕೊನೆಯ ಪುತ್ರಿ ಬದ್ರುನಿಸಾ. ಇದೀಗ ಪ್ರೊಬೇಷನರಿ ಪಿಎಸ್ಐ ಆಗಿ ಆಯ್ಕೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಕಲಿತು ಪಿಎಸ್ಐ ಪರೀಕ್ಷೆಯಲ್ಲಿ ಉನ್ನತ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬದ್ರುನಿಸಾ ಪ್ರಾಥಮಿಕ ಶಿಕ್ಷಣವನ್ನು ಕುಂತೂರಿನ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದರೆ, ಪ್ರೌಢ ಶಿಕ್ಷಣವನ್ನು ಸಂತ ಜಾರ್ಜ್ ಪ್ರೌಢ ಶಾಲೆ ಕುಂತೂರು ಪದವಿನಲ್ಲಿ ಪೂರೈಸಿದ್ದಾರೆ. ಪಿಯು ಶಿಕ್ಷಣವನ್ನು ರಾಮಕುಂಜದ ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮತ್ತು ಯುನಿವರ್ಸಿಟಿ ಆಫ್ ಅಗ್ರಿಕಲ್ಚರ್ ಸೈನ್ಸ್ ಆಫ್ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಬೆಂಗಳೂರಿನಲ್ಲಿ ಬಿ.ಎಸ್ಸಿ ಕೃಷಿ ಪದವಿ ಮಾಡಿದ್ದಾರೆ.

ಇನ್ನು ತನ್ನ ವಿಶೇಷ ಸಾಧನೆಯ ಬಗ್ಗೆ ಮಾತನಾಡಿದ ಬದ್ರುನಿಸಾ, "ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಬೇಕೆಂದು ಚಿಕ್ಕಂದಿನಿಂದಲೂ ಆಸೆ ಇತ್ತು. ಆದರೆ ಇದಕ್ಕೆ ಮನೆಯಲ್ಲಿ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುವುದರ ಬಗ್ಗೆ ಸ್ವಲ್ಪ ಭಯ ಇತ್ತು. ಆದರೆ ಮನೆಯವರು ಸಂಪೂರ್ಣ ಸಹಕಾರ ನೀಡಿದರು. ಇದರಿಂದ ಈ ಸಾಧನೆ ಮಾಡುವುದಕ್ಕೆ ಸಾಧ್ಯ ಆಯ್ತು," ಎಂದು ಖುಷಿ ಹಂಚಿಕೊಂಡಿದ್ದಾರೆ.

"ಅಪ್ಪ ಕೃಷಿಕರಾಗಿದ್ದು, ದಿನದ ಅತೀ ಹೆಚ್ಚು ಹೊತ್ತು ಕೃಷಿಯಲ್ಲೇ ಮಗ್ನರಾಗುತ್ತಾರೆ. ಅಮ್ಮ ಮನೆ ಕೆಲಸಗಳನ್ನು ಮಾಡುತ್ತಾರೆ. ಮೂವರು ಅಕ್ಕಂದಿರೂ ನನ್ನೆಲ್ಲಾ ಕಾರ್ಯಕ್ಕೂ ಸಹಾಯ ಮಾಡಿದ್ದಾರೆ. ಹಾಗೂ ನಾನು ಕಲಿತ ಶಾಲೆಯ ಗುರುಗಳು ಪೂರ್ಣ ಬೆಂಬಲ ನೀಡಿ ಹರಸಿದ್ದರಿಂದ ಇದೆಲ್ಲಾ ಸಾಧ್ಯವಾಗಿದೆ," ಅಂತಾ ಬದ್ರುನಿಸಾ ಹೇಳಿದ್ದಾರೆ.

"ಪೊಲೀಸ್ ಕೆಲಸ ಕಠಿಣವಾಗಿದ್ದು, ಮಹಿಳೆಯರಿಗೆ ಆ ಕೆಲಸ ಸಾಧ್ಯ ಆಗಲ್ಲ ಅಂತಾ ತುಂಬಾ ಜನ ಹೇಳಿದ್ದಾರೆ. ಆದರೆ ಯಾವುದೇ ಕೆಲಸಗಳು ಯಾರಿಗೂ ಸೀಮಿತ ಎಂಬುವುದಾಗಿ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಯುವತಿಯರು ಮುಂದೆ ಬರುತ್ತಿದ್ದಾರೆ. ಕಠಿಣ ಪರಿಶ್ರಮ, ಛಲ, ಮನೆಯವರ ಬೆಂಬಲ ಮತ್ತು ದೇವರ ಅನುಗ್ರಹ ಇದ್ದರೆ ಎಲ್ಲವೂ ಸುಲಭ," ಎಂದು ಬದ್ರುನಿಸಾ ತಿಳಿಸಿದ್ದಾರೆ.

ಒಟ್ಟಿನಲ್ಲಿ ಗ್ರಾಮೀಣ ಭಾಗದ ಮುಸ್ಲಿಂ ಕುಟುಂಬದ ಮಗಳು ಪೊಲೀಸ್ ಇಲಾಖೆಗೆ ಆಯ್ಕೆಯಾಗಿರುವುದು ಗ್ರಾಮದಲ್ಲಿ ಸಂತಸದ ವಾತಾವರಣವನ್ನು ತಂದಿದೆ. ಬದ್ರುನಿಸಾರನ್ನೇ ಮಾದರಿಯನ್ನಾಗಿಸಿ ಯುವತಿಯರು ಎಲ್ಲಾ ಕ್ಷೇತ್ರಗಳಲ್ಲಿ ಮಿಂಚಲಿ ಅನ್ನುವುದು ಗ್ರಾಮಸ್ಥರ ಆಶಯವಾಗಿದೆ.

English summary
Dakshina Kannada district Kadaba taluk Farmer's daughter has been selected to the police sub inspector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X