• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Lawn Bowls- ಭಾರತ ಚಿನ್ನ ಗೆದ್ದ ಲಾನ್ ಬೌಲ್ಸ್ ಆಟ ಆಡುವುದು ಹೇಗೆ?

|
Google Oneindia Kannada News

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಐದು ದಿನದಲ್ಲಿ ಐದು ಚಿನ್ನದ ಪದಕಗಳನ್ನು ಸೂರೆ ಮಾಡಿದೆ. ಅದರಲ್ಲಿ ಲಾನ್ ಬೌಲ್ಸ್ ಆಟದಲ್ಲಿ ಬಂದ ಚಿನ್ನ ಎಲ್ಲರ ಗಮನ ಸೆಳೆದಿದೆ.

ಭಾರತದ ಮಹಿಳಾ ತಂಡ ಲಾನ್ ಬೌಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿ ಹೊಸ ಇತಿಹಾಸ ಸೃಷ್ಟಿಸಿದೆ. ಕಾಮನ್‌ವೆಲ್ತ್ ಇರಲಿ, ಚಿನ್ನ ಇರಲಿ, ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಭಾರತ ಲಾನ್ ಬೌಲ್ಸ್‌ನಲ್ಲಿ ಪದಕ ಗೆದ್ದಿರುವುದು ಇದೇ ಮೊದಲು. ನಿನ್ನೆ ಸೋಮವಾರ ಭಾರತದ ಮಹಿಳೆಯರು ಫೈನಲ್ ತಲುಪಿದಾಗ ಭಾವೋದ್ವೇಗವನ್ನು ನೋಡಿದಾಗಲೇ ಈ ಲಾನ್ ಬೌಲ್ಸ್‌ನಲ್ಲಿ ಭಾರತ ಎಂಥ ಮಹತ್ವದ ಮೈಲಿಗಲ್ಲು ಮುಟ್ಟಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಿತ್ತು.

ಇಂದು ಮಂಗಳವಾರ ನಡೆದ ಮಹಿಳಾ ತಂಡದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ ಭಾರತೀಯರು ರೋಚಕ ಗೆಲುವು ಸಾಧಿಸಿದರು. ಫೋರ್ಸ್ ಫಾರ್ಮ್ಯಾಟ್‌ನಲ್ಲಿದ್ದ ಈ ಸ್ಪರ್ಧೆಯಲ್ಲಿ ಭಾರತ ತಂಡದಲ್ಲಿ ಲವ್ಲಿ ಚೌಬೇ, ಪಿಂಕಿ, ನಯನ್‌ಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕೆ ಇದ್ದರು.

15 ಸುತ್ತುಗಳ ಈ ಸ್ಪರ್ಧೆಯಲ್ಲಿ ಭಾರತೀಯ ಮಹಿಳೆಯರು ಕೊನೆಯ ನಾಲ್ಕು ಸುತ್ತುಗಳಲ್ಲಿ ಅತ್ಯುತ್ತಮ ಆಟವಾಡಿ ಗೆದ್ದರು. ಇಲ್ಲಿ ಒಂದೊಂದು ಸುತ್ತಿಗೂ ಎಂಡ್ ಎಂದು ಕರೆಯಲಾಗುತ್ತದೆ. ಅಂದರೆ 15 ಎಂಡ್‌ಗಳ ಸ್ಪರ್ಧೆ ಇದು.

ಅಷ್ಟಕ್ಕೂ ಲಾನ್ ಬೌಲ್ಸ್ ಆಟ ಹೇಗೆ? ಇದನ್ನು ಆಡುವುದು ಹೇಗೆ? ಎಂಬಿತ್ಯಾದಿ ವಿವರ ಇಲ್ಲಿದೆ.

ಲಾನ್ ಬೌಲ್ಸ್ ಏನು?

ಲಾನ್ ಬೌಲ್ಸ್ ಏನು?

ಲಾನ್ ಎಂದರೆ ಹುಲ್ಲುಹಾಸು. ಬೌಲ್ಸ್ ಎಂದರೆ ಬೌಲಿಂಗ್. ಇದು ಕ್ರಿಕೆಟ್ ಬೌಲಿಂಗ್ ಅಲ್ಲ. ನಿರ್ದಿಷ್ಟ ಆಕಾರದ ಮತ್ತು ತೂಕದ ಚೆಂಡನ್ನು ಗುರಿಯ ಸಮೀಪ ಹಾಕುವುದು ಲಾನ್ ಬೌಲ್ಸ್ ಆಟದ ಮೂಲಾಂಶ. ಈ ಆಟವನ್ನು ಬಯಲಿನ ಹುಲ್ಲುಗಾವಲಿನಲ್ಲಿ ಆಡಬಹುದು, ಅಥವಾ ಕೃತಕ ಹುಲ್ಲುಹಾಸಿನಲ್ಲೂ ಆಡಬಹುದು, ಅಥವಾ ಸಿಂಥೆಟಿಕ್ ಟ್ರ್ಯಾಕ್‌ನಲ್ಲೂ ಆಡಬಹುದು. ಒಳಾಂಗಣ ಕ್ರೀಡಾಂಗಣದಲ್ಲೂ ಲಾನ್ ಬೌಲ್ಸ್ ಆಡಲು ಅಡ್ಡಿ ಇಲ್ಲ. ಇದಕ್ಕೆ ಸುಮಾರು 50 ಮೀಟರ್‌ನಷ್ಟು ಅಂಗಣ ಇದ್ದರೆ ಸಾಕು. ಅಂಗಣದ ಮಧ್ಯಭಾಗದಲ್ಲಿ ರಿಂಕ್ ಅನ್ನು ಹಾಕಲಾಗುತ್ತದೆ. ಇದು ಪಿಚ್ ರೀತಿಯಲ್ಲಿ ಕೆಲ ಮೀಟರ್‌ಗಳಷ್ಟು ಉದ್ದ ಇರಬಹುದು. ಅಂಗಣದ ಒಂದು ತುಂದಿಯಲ್ಲಿ ಮ್ಯಾಟ್ ಹಾಕಲಾಗುತ್ತದೆ. ಮ್ಯಾಟ್‌ನಿಂದ ರಿಂಕ್ 20 ಮೀಟರ್‌ಗೂ ಹೆಚ್ಚು ದೂರ ಇರಬೇಕು.

ಚೆಂಡು ಸ್ವರೂಪ ಹೇಗಿರಬೇಕು?

ಚೆಂಡು ಸ್ವರೂಪ ಹೇಗಿರಬೇಕು?

ಲಾನ್ ಬೌಲ್ಸ್ ಅಟದಲ್ಲಿ ಎರಡು ರೀತಿಯ ಚೆಂಡುಗಳನ್ನು ಬಳಸಲಾಗುತ್ತದೆ. ಜ್ಯಾಕ್ ಅಥವಾ ಕಿಟ್ಟಿ ಎಂದು ಕರೆಯಲಾಗುವ ಚೆಂಡು ಸಣ್ಣದಿರುತ್ತದೆ. ನಮ್ಮ ಟೆನಿಸ್ ಬಾಲ್ ರೀತಿ ದುಂಡನೆಯ ಆಕಾರದಲ್ಲೇ ಇರುತ್ತದೆ. ಇನ್ನೊಂದು ಚೆಂಡನ್ನು ಲಾನ್ ಬೌಲ್ಸ್ ಬಾಲ್ ಅಥವಾ ಬಯೇಸ್ಡ್ ಬಾಲ್ ಎಂದು ಕರೆಯುತ್ತಾರೆ. ಈ ಲಾನ್ ಬೌಲ್ಸ್ ಬಾಲ್ ಸುಮಾರು ಒಂದೂವರೆ ಕಿಲೋ ತೂಕದ್ದಿರುತ್ತದೆ. ಅದು ಸಂಪೂರ್ಣ ದುಂಡಗಿರುವುದಿಲ್ಲ. ಚೆಂಡಿನ ಒಂದು ಬದಿಗಿಂತ ಮತ್ತೊಂದು ಬದಿ ತುಸು ತೂಕದ್ದಿರುತ್ತೆ. ಇದರಿಂದ ಆಟಗಾರ ಚೆಂಡನ್ನು ತನಗೆ ಬೇಕಾದ ದಿಕ್ಕಿಗೆ ನೂಕಲು ಸಾಧ್ಯವಾಗುತ್ತದೆ.

ಬಯೇಸ್ಡ್ ಎಂಬುದು ಇಂಗ್ಲೀಷ್ ಪದ. ಪಕ್ಷಪಾತಿ ಎಂದು ಅರ್ಥ. ಅಂದರೆ ಒಂದು ಭಾಗದಲ್ಲಿ ಹೆಚ್ಚು ತೂಕ ಇರುವುದರಿಂದ ಅದನ್ನು ಹಾಗೆ ಸಂಬೋಧಿಸುತ್ತಾರೆ ಅಷ್ಟೇ. ಬಯೇಸ್ಡ್ ಬಾಲ್ ಎನ್ನುವುದಕ್ಕಿಂತ ಲಾನ್ ಬೌಲ್ಸ್ ಬಾಲ್ ಎನ್ನುವುದೇ ಸೂಕ್ತ.

ಅಂಗಣ ಹೇಗಿರಬೇಕು

ಅಂಗಣ ಹೇಗಿರಬೇಕು

ಇಲ್ಲಿ ಲಾನ್ ಬೌಲ್ಸ್ ಆಟದಲ್ಲಿ ಅಂಗಣ ಹೀಗೇ ಇರಬೇಕು ಎಂಬಂತಿಲ್ಲ. ಅಂಗಣವನ್ನು ಹೇಗೆ ಬೇಕಾದರೂ ವ್ಯವಸ್ಥೆ ಮಾಡಬಹುದು. ಸಂಪೂರ್ಣ ಸಮತಟ್ಟು ಅಂಗಣ ಇರಬಹುದು. ಅಥವಾ ಗಾಲ್ಫ್ ಮೈದಾನದ ರೀತಿ ಅಂಕುಡೊಂಕು ಬೇಕಾದರೂ ಮಾಡಬಹುದು.

ಅಂಗಣದ ಸ್ವರೂಪಕ್ಕೆ ತಕ್ಕಂತೆ ಆಟಗಾರ ಲಾನ್ ಬೌಲ್ಸ್ ಚೆಂಡನ್ನು ನಿರ್ದಿಷ್ಟ ಕೋನದಲ್ಲಿ ಎಸೆಯುವ ಚಾತುರ್ಯ ತೋರಬೇಕಾಗುತ್ತದೆ.

ಲಾನ್ ಬೌಲ್ಸ್ ಆಡುವುದು ಹೇಗೆ?

ಲಾನ್ ಬೌಲ್ಸ್ ಆಡುವುದು ಹೇಗೆ?

ಮೊದಲಿಗೆ ಎರಡು ಸ್ಪರ್ಧಿಗಳು ಅಥವಾ ತಂಡಗಳ ಮಧ್ಯೆ ಟಾಸ್ ಆಗುತ್ತದೆ. ಟಾಸ್ ಗೆದ್ದವರು ಮ್ಯಾಟ್ ಪಡೆಯುತ್ತಾರೆ. ಚಿಕ್ಕ ಬಾಲ್ ಆದ ಜ್ಯಾಕ್ ಬಾಲ್ ಅನ್ನು ಅವರು ಅಂಗಣದ ಮಧ್ಯಭಾಗದತ್ತ ಉರುಳಿಸಿ ಬಿಡಬೇಕು. ಇದು ಕನಿಷ್ಠ 23 ಮೀಟರ್ ದೂರದವರೆಗಾದರೂ ಸಾಗಬೇಕು. ಈ ಚೆಂಡು ಎಲ್ಲಿ ನಿಲ್ಲುತ್ತದೋ ಅದೇ ನೇರಕ್ಕೆ ರಿಂಕ್‌ಗೆ ಆ ಚೆಂಡನ್ನು ಸರಿಸಲಾಗುತ್ತದೆ. ರಿಂಕ್ ಮೇಲಿರುವ ಈ ಜ್ಯಾಕ್ ಬಾಲ್ ಈಗ ಆಟದ ಗುರಿ.

ಟಾಸ್ ಗೆದ್ದ ಆಟಗಾರನೇ ಮೊದಲು ಆಟ ಆರಂಭಿಸುತ್ತಾರೆ. ಲಾನ್ ಬೌಲ್ಸ್ ಚೆಂಡನ್ನು ಜ್ಯಾಕ್ ಬಾಲ್‌ನತ್ತ ಉರುಳಿಸಿಬಿಡಬೇಕು. ನಂತರ ಪ್ರತಿಸ್ಪರ್ಧಿಯ ಪಾಳಿ. ಇಲ್ಲಿ ಯಾರ ಚೆಂಡು ಜ್ಯಾಕ್ ಬಾಲ್‌ಗೆ ಅತಿ ಸಮೀಪ ಹೋಗುತ್ತದೋ ಅವರಿಗೆ ಅಂಕ. ತಂಡ ಆಡುತ್ತಿದ್ದಾರೆ ಯಾವ ತಂಡದವರ ಬಾಲ್‌ಗಳು ಅತಿ ಸಮೀಪ ಇರುತ್ತದೋ ಅಷ್ಟು ಅಂಕ ಪ್ರಾಪ್ತಿಯಾಗುತ್ತದೆ.

ಇಲ್ಲಿ ಆಟಗಾರನಿಗೆ ಕೆಲವಾರು ಆಯ್ಕೆಗಳಿವೆ. ಪ್ರತಿಸ್ಪರ್ಧಿಯ ಚೆಂಡು ಜ್ಯಾಕ್ ಬಾಲ್ ಬಳಿ ಇದ್ದು ತನಗೆ ಅದನ್ನು ತಲುಪಲು ಜಾಗ ಇಲ್ಲದೇ ಇದ್ದಲ್ಲಿ ಆಟಗಾರ ಬೇಕಾದರೆ ಲಾನ್ ಬೌಲ್ಸ್ ಬಾಲ್ ಉರುಳಿಸಿ ಜ್ಯಾಕ್ ಬಾಲ್ ಅನ್ನು ಆ ಜಾಗದಿಂದ ಕದಲಿಸಬಹುದು.

(ಒನ್ಇಂಡಿಯಾ ಸುದ್ದಿ)

English summary
Indian Women's team won Gold in Lawn Bowls Game at Commonwealth Games 2022 in Birmingham. Here is the details of how to play this game.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X