• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳಿತಪ್ಪಿತು ಅಮೆರಿಕಾ ಮಕ್ಕಳ ಓದು, ಲೆಕ್ಕ; ಇದು ಕೋವಿಡ್ ಎಫೆಕ್ಟಾ?

|
Google Oneindia Kannada News

ಕೋವಿಡ್ ರೋಗ ಇಡೀ ವಿಶ್ವವನ್ನೇ ಎರಡು ವರ್ಷ ತಲ್ಲಣಗೊಳಿಸಿದ್ದು ಇತಿಹಾಸದಲ್ಲಿ ಮರೆಯಲಾಗದ ವಿದ್ಯಮಾನ. ಬಹುತೇಕ ಎಲ್ಲಾ ದೇಶಗಳೂ ಬಾಧೆಗೊಳಗಾದವು. ಜನಜೀವನ ಅಕ್ಷರಶಃ ಅಸ್ತವ್ಯಸ್ತವಾಗಿತ್ತು. ಬಹುಶಃ ವಿಶ್ವದ ಬಹುಭಾಗದ ಜನರು ಒಂದಿಲ್ಲೊಂದು ರೀತಿಯಲ್ಲಿ ಕೋವಿಡ್‌ನ ಪರಿಣಾಮಗಳನ್ನು ಎದುರಿಸಿದ್ದಾರೆ. ಮಕ್ಕಳ ಪಾಡಂತೂ ಹೇಳತೀರದು.

ಭಾರತದಲ್ಲಿ ಕೋವಿಡ್ ಬಂದ ಬಳಿಕ ಹೆಚ್ಚೂಕಡಿಮೆ ಎರಡು ವರ್ಷ ಶಾಲೆಗಳು ಮುಚ್ಚಿದ್ದವು. ಆನ್‌ಲೈನ್ ತರಗತಿ ಮಾತ್ರವೇ ವಿದ್ಯಾರ್ಥಿಗಳಿಗಿದ್ದ ಆಯ್ಕೆ. ಶಾಲೆಗಳು ತೆರೆಯದಿದ್ದರೆ ಅಥವಾ ಶಾಲೆಯಲ್ಲಿ ಮಕ್ಕಳು ಪಾಠ ಕೇಳದಿದ್ದರೆ ಮಕ್ಕಳ ಬೆಳವಣಿಗೆಗೆ ಕಷ್ಟವಾಗುತ್ತದೆ ಎಂದು ಹಲವು ಶಿಕ್ಷಣ ತಜ್ಞರು ಆಗಾಗ್ಗೆ ಎಚ್ಚರಿಸುತ್ತಿದ್ದುದನ್ನು ನೀವು ಕೇಳಿರಬಹುದು.

ಇದು ಭಾರತದ ಸ್ಥಿತಿ ಮಾತ್ರವಲ್ಲ, ಅಮೆರಿಕದಂಥ ಅಮೆರಿಕದಲ್ಲೂ ಇದೇ ಸಮಸ್ಯೆ. ಕೋವಿಡ್‌ನಿಂದ ಭಾರತಕ್ಕಿಂತ ಅಮೆರಿಕವೇ ಹೆಚ್ಚು ಬಾಧಿತವಾಗಿದ್ದು. ಅಲ್ಲಿಯೂ ಶಾಲೆಗಳು ಬಹುತೇಕ ಎರಡು ವರ್ಷ ಮುಚ್ಚಿದ್ದವು. ಈ ಶೈಕ್ಷಣಿಕ ವರ್ಷ ಅಲ್ಲಿ ಪೂರ್ಣಪ್ರಮಾಣದಲ್ಲಿ ಬಾಗಿಲು ತೆರೆದಿವೆ. ಆನ್‌ಲೈನ್ ಶಿಕ್ಷಣ ಮಕ್ಕಳನ್ನು ಅದೆಷ್ಟು ಹೈರಾಣಗೊಳಿಸಿದೆ ಎಂಬ ವಾಸ್ತವ ಸಂಗತಿ ಇದೀಗ ಅಲ್ಲಿ ಬೆಳಕಿಗೆ ಬರತೊಡಗಿದೆ.

ಅಮೆರಿಕದಲ್ಲಿ ನಡೆಸಲಾದ ರಾಷ್ಟ್ರೀಯ ಶಿಕ್ಷಣ ಪ್ರಗತಿ ಮಾಪನ (ಎನ್‌ಎಇಪಿ) ಅಥವಾ ರಾಷ್ಟ್ರದ ರಿಪೋರ್ಟ್ ಕಾರ್ಡ್ ಪರೀಕ್ಷೆಯಲ್ಲಿ ಅಚ್ಚರಿಯ ಮತ್ತು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಕೋವಿಡ್ ಬರುವುದಕ್ಕೆ ಮುಂಚೆ ಇದ್ದುದಕ್ಕಿಂತಲೂ ಈಗ ಮಕ್ಕಳ ಓದಿನ ಮಟ್ಟ ಕುಸಿದಿರುವುದು ಕಂಡು ಬಂದಿದೆ. ಗಣಿತ ಮತ್ತು ಓದಿನ (ಭಾಷೆ) ಪರೀಕ್ಷೆಗಳಲ್ಲಿ ಮಕ್ಕಳು ಕಡಿಮೆ ಅಂಕ ಗಳಿಸಿದ್ದಾರೆ. 30 ವರ್ಷಗಳ ಹಿಂದಿನ ಮಟ್ಟಕ್ಕೆ ಮಕ್ಕಳ ಓದು ಕುಸಿದಿದೆ ಎನ್ನಲಾಗಿದೆ.

ಪರೀಕ್ಷೆ ಏನು?
ಎನ್‌ಎಇಪಿ ಪರೀಕ್ಷೆಯನ್ನು ಅಮೆರಿಕದಲ್ಲಿ ಪ್ರತೀ ವರ್ಷ ನಡೆಸಲಾಗುತ್ತದೆ. ಇದು ಸ್ಯಾಂಪಲ್ ಪರೀಕ್ಷೆ. ಅಂದರೆ ಸಮೀಕ್ಷೆಗಳಿಗೆ ಕೆಲವರನ್ನಷ್ಟೇ ಆರಿಸಲಾಗುತ್ತದೆ. ಅಮೆರಿಕದ ವಿವಿಧ ಕಡೆಯ 410 ಶಾಲೆಗಳಿಂದ 4ನೇ ತರಗತಿಯ ಅಥವಾ ೯ ವರ್ಷ ವಯಸ್ಸಿನ 14,800 ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ಬರೆಸಲಾಗಿದೆ. ಒಟ್ಟು ಮೂರು ಪರೀಕ್ಷೆಗಳಿದ್ದು, ಪ್ರತಿಯೊಂದು ಪರೀಕ್ಷೆಯಲ್ಲೂ 15 ನಿಮಿಷ ಕಾಲಾವಕಾಶ ಕೊಡಲಾಗಿತ್ತು. ಬಹುತೇಕ ಪ್ರಶ್ನೆಗಳು ಮಲ್ಟಿಚಾಯ್ಸ್ ಮಾದರಿ ಇದ್ದವು. ಉತ್ತರ ಬರೆಯಲು ಮಕ್ಕಳಿಗೆ ಸಾಕಷ್ಟು ಸಮಯಾವಕಾಶವೂ ಇತ್ತು.

2020ರಲ್ಲೂ ಈ ಪರೀಕ್ಷೆ ಮಾಡಲಾಗಿತ್ತು. ಈಗ 2022ರಲ್ಲೂ ಪರೀಕ್ಷೆ ಮಾಡಲಾಗಿದೆ. ಕೋವಿಡ್ ಬರುವ ಮುಂಚೆ ಮಕ್ಕಳ ಸಾಧನೆ ಹೇಗಿತ್ತು, ಕೋವಿಡ್ ನಂತರ ಹೇಗಿದೆ ಎಂಬುದನ್ನು ತುಲನೆ ಮಾಡಲು ಸಾಧ್ಯವಾಗಿದೆ.

Covid Effect: US Students Score Bad in Maths and Reading, Plunges to Decades Lowest

ಗಣಿತದ ಲೆಕ್ಕ ಬಿತ್ತು
ಪರೀಕ್ಷೆ ಬರೆದ ಮಕ್ಕಳು ಗಣಿತದಲ್ಲಿ ಸರಾಸರಿಯಾಗಿ 234 ಅಂಕಗಳನ್ನು ಗಳಿಸಿದ್ದಾರೆ. ಇದು 2020ಕ್ಕೆ ಹೋಲಿಸಿದರೆ 7 ಅಂಕಗಳು ಕಡಿಮೆ ಆಗಿವೆ. 1೯೯೯ರ ನಂತರ ಇದೇ ಮೊದಲ ಬಾರಿಗೆ ಈ ಗಣಿತ ಪರೀಕ್ಷೆಯಲ್ಲಿ ಮಕ್ಕಳು ಇಷ್ಟು ಕಡಿಮೆ ಅಂಕ ಗಳಿಸಿರುವುದು.

ಬಹುತೇಕ ಎಲ್ಲಾ ಸಮುದಾಯದ ಮಕ್ಕಳೂ ಗಣಿತದಲ್ಲಿ ಹಿಂದುಳಿದಿದ್ದಾರೆ. ಆದರೆ, ಅತಿ ಹೆಚ್ಚು ಹಿನ್ನಡೆ ಹೊಂದಿದ್ದು ಅಮೆರಿಕದ ಕಪ್ಪು ವರ್ಣೀಯ ಸಮುದಾಯದ ಮಕ್ಕಳು. ಕಪ್ಪು ವರ್ಣೀಯ ಮಕ್ಕಳು ಸರಾಸರಿಯಾಗಿ ಗಣಿತದಲ್ಲಿ 212 ಅಂಕ ಗಳಿಸಿದ್ದಾರೆ. ಆದರೆ, ಭಾರತೀಯರು ಸೇರಿ ಏಷ್ಯನ್ ಸಮುದಾಯದ ಜನರು ಗಣಿತದಲ್ಲಿ ಬಹಳ ಮುಂದು. ಇವರು ಸರಾಸರಿಯಾಗಿ 25೯ ಅಂಕಗಳನ್ನು ಗಳಿಸಿದ್ದಾರೆ. ಆದರೆ, 2020ಕ್ಕೆ ಹೋಲಿಸಿದರೆ ಬಹತೇಕ ಎಲ್ಲಾ ಸಮುದಾಯದ ಮಕ್ಕಳೂ ಗಳಿಸಿರುವ ಅಂಕದಲ್ಲಿ ಕಡಿಮೆ ಆಗಿದೆ.

ಓದಿನಲ್ಲಿ ಹಿಂದೆ
ಇನ್ನು, ಭಾಷೆಯ ಓದಿನ ಪರೀಕ್ಷೆಯಲ್ಲಿ ಈ ವರ್ಷ ಮಕ್ಕಳು ಸರಾಸರಿಯಾಗಿ 215 ಅಂಕಗಳನ್ನು ಗಳಿಸಿದ್ದಾರೆ. 2020ಕ್ಕೆ ಹೋಲಿಸಿದರೆ 5 ಅಂಕಗಳಷ್ಟು ಕುಸಿತವಾಗಿದೆ. ಇದು 2004ರಲ್ಲಿದ್ದ ಮಟ್ಟದಷ್ಟಿದೆ. ಇಲ್ಲಿಯೂ ಕೂಡ ಕಪ್ಪು ಸಮುದಾಯದ ಮಕ್ಕಳೇ ಹೆಚ್ಚು ಹಿಂದುಳಿದಿರುವುದು. 2020ರಲ್ಲಿ 205 ಅಂಕ ಗಳಿಸಿದ್ದ ಇವರು ಈಗ 1೯೯ ಅಂಕ ಮಾತ್ರ ಗಳಿಸಿದ್ದಾರೆ. ಏಷ್ಯನ್ ಸಮುದಾಯದ ಮಕ್ಕಳ ರೀಡಿಂಗ್ ಸ್ಕೋರು 241ರಿಂದ 240ಕ್ಕೆ ಇಳಿದಿದೆ. ಅಂದರೆ ಕುಸಿತ ಕೇವಲ ಒಂದು ಅಂಕ ಮಾತ್ರ. ಬಿಳಿಯ ಜನಾಂಗದ ಮಕ್ಕಳು 5 ಅಂಕ ಕಡಿಮೆ ಗಳಿಸಿದ್ದಾರೆ.

ಶಾಲಾ ತರಗತಿಗಿಂತ ಮಿಗಿಲಿಲ್ಲ
ಮಕ್ಕಳು ಶಾಲೆಗೆ ಹೋಗಿ ಶಿಕ್ಷಕರ ಸಮ್ಮುಖಲ್ಲಿ ಕಲಿಯುವ ಪಾಠ ಯಾವಾಗಲೂ ಉತ್ತಮ. ಮಗುವಿನ ಸರ್ವತೋಮುಖ ಬೆಳವಣಿಗೆಗೆ ಶಾಲಾ ವಾತಾವರಣ ಮುಖ್ಯ ಎಂಬುದು ಶಿಕ್ಷಣ ತಜ್ಞರ ಅನಿಸಿಕೆ. ಅಮೆರಿಕದ ಶಿಕ್ಷಣ ತಜ್ಞರೂ ಅದನ್ನೇ ಪ್ರತಿಪಾದಿಸಿದ್ದಾರೆ.

ಓದಿನಲ್ಲಿ ಸಾಮಾನ್ಯವಾಗಿ ಹಿಂದುಳಿದಿರುವ ಮಕ್ಕಳಿಗೆ ಕೋವಿಡ್ ಪರಿಸ್ಥಿತಿ ಹೆಚ್ಚು ಸಂಕಷ್ಟ ಕೊಟ್ಟಿರುವುದು ಎನ್‌ಎಇಪಿ ಪರೀಕ್ಷೆಯ ಫಲಿತಾಂಶ ಹೇಳುತ್ತದೆ. ಹೆಚ್ಚು ಅಂಕ ತೆಗೆದುಕೊಳ್ಳುತ್ತಿದ್ದ ಮಕ್ಕಳ ಅಂಕ ಗಳಿಕೆಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿಲ್ಲ. ಇವರಿಗೆಲ್ಲಾ ಆನ್‌ಲೈನ್‌ನಲ್ಲಿ ಪಾಠ ಕೇಳಲು ಸಕಲ ವ್ಯವಸ್ಥೆಯೂ ಇತ್ತು ಎಂಬುದು ಒಂದು ಕಾರಣ. ಕಡಿಮೆ ಅಂಕ ಗಳಿಸುತ್ತಿದ್ದ ಮಕ್ಕಳಲ್ಲಿ ಹೆಚ್ಚಿನವರು ಆರ್ಥಿಕವಾಗಿ ಹಿಂದುಳಿದವರಾಗಿದ್ದವರು ಎಂಬುದು ಇನ್ನೊಂದು ಗಮನಿಸಬೇಕಾದ ಅಂಶ.

ಅದೇನೇ ಆದರೂ ಈ ಪರೀಕ್ಷೆಯಿಂದ ಗೊತ್ತಾಗುವ ಒಂದು ಪ್ರಮುಖ ಅಂಶ ಎಂದರೆ ಮಕ್ಕಳು ಶಾಲೆಗೆ ಹೋಗಿ ಪಾಠ ಕಲಿಯುವುದೇ ಉತ್ತಮ. ಆನ್‌ಲೈನ್ ಶಿಕ್ಷಣ ಎಂಬುದು ನಿರೀಕ್ಷಿತ ಫಲ ಕೊಡುವುದಿಲ್ಲ ಎಂಬ ವಿಚಾರ ದೃಢಪಟ್ಟಿದೆ. ಅಮೆರಿಕವಷ್ಟೇ ಅಲ್ಲ, ಭಾರತದಲ್ಲೂ ಇದೇ ಕಥೆ ಅಲ್ಲವಾ?

(ಒನ್ಇಂಡಿಯಾ ಸುದ್ದಿ)

English summary
Fourth grade students of USA has scored badly in Maths and Reading tests done by NAEP. Experts say this is the effect of Covid situation on students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X