• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಲಸಿಕೆ ಅಪ್ಡೇಟ್: ಬೆಲೆ, ನೋಂದಣಿ ಸಂಪೂರ್ಣ FAQs

|

ದೇಶದೆಲ್ಲೆಡೆ ಕೊವಿಡ್ 19 ಅಬ್ಬರ ಜೋರಾಗಿದ್ದು, ಕೇಂದ್ರ ಸರ್ಕಾರ ಕೂಡಾ ತನ್ನ ನಿರ್ಣಾಯಕ ಹೋರಾಟ ನಡೆಸಿದೆ. ಜನವರಿ 16ರಿಂದ ಭಾರತದಲ್ಲಿ ಲಸಿಕಾ ಅಭಿಯಾನವನ್ನು ಆರಂಭಿಸಲಾಗಿದ್ದು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.

ಮೇ 1ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭಗೊಳ್ಳಲಿದ್ದು, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. CoWin ವೆಬ್ ಸೈಟ್ ಹಾಗೂ ಆರೋಗ್ಯ ಸೇತು ಅಪ್ಲಿಕೇಷನ್ ಮೂಲಕ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆಗಾಗಿ ತಮ್ಮ ಹೆಸರು ನೋಂದಾಯಿಸಬಹುದು.

ಕೊರೊನಾ ಸೋಂಕಿನಿಂದ ಮರಣ ಪ್ರಮಾಣವೂ ಏರಿಕೆಯಾಗುತ್ತಿದ್ದು, ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲಾಗಿದೆ.

ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್‌ ನಂತರ ರಷ್ಯಾದ ಸ್ಫುಟ್ನಿಕ್ ವಿ ಮೂರನೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಕೊರೊನಾ ಎರಡನೇ ಅಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಲಸಿಕೆಗಳಿಗೂ ಬೇಡಿಕೆ ಹೆಚ್ಚಾಗಿದೆ. ಇದೀಗ ಮೇ ತಿಂಗಳ ಕೊನೆಗೆ ಭಾರತದಲ್ಲಿ ಸ್ಫುಟ್ನಿಕ್ ವಿ ಲಸಿಕೆಗಳು ಲಭ್ಯವಾಗಲಿವೆ.

ಲಸಿಕೆ ಮೂರನೇ ಹಂತದಲ್ಲಿ ಯಾರೆಲ್ಲ ಸೇರ್ಪಡೆಯಾಗಿದ್ದಾರೆ?

ದೇಶದೆಲ್ಲೆಡೆ ಮೇ 1ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭಗೊಳ್ಳಲಿದ್ದು, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಮೇ 1 ರಿಂದ ಲಸಿಕೆ ಅಭಿಯಾನದಲ್ಲಿ ಏನು ಬದಲಾವಣೆ?
ಮೇ 1ರಿಂದ ರಾಜ್ಯ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳು ನೇರವಾಗಿ ಉತ್ಪಾದನಾ ಸಂಸ್ಥೆಗಳಿಂದ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಉತ್ಪಾದಕರು ಬೆಲೆ ನಿಗದಿ ಮಾಡಬಹುದಾಗಿದೆ.

ಕೋವಿಡ್ 19 ಲಸಿಕೆ ಎಲ್ಲರಿಗೂ ಉಚಿತವಾಗಿ ಸಿಗುವುದೇ?
ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ 19 ಲಸಿಕೆ ಉಚಿತವಾಗಿ ನೀಡಲಾಯಿತು. ಖಾಸಗಿ ಆಸ್ಪತ್ರೆಗಳಲ್ಲಿ 250 ರು ಬೆಲೆ ನಿಗದಿಪಡಿಸಲಾಗಿತ್ತು. ಈಗಲೂ ಇದೇ ನಿಯಮ ಮುಂದುವರೆಯಲಿದೆ.

ಆದರೆ, ಮೇ 1ರಿಂದ ಆರಂಭವಾಗುವ ಲಸಿಕೆ ಅಭಿಯಾನದಲ್ಲಿ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುವುದು ಎಂದು ಉತ್ತರಪ್ರದೇಶ, ಮಧ್ಯಪ್ರದೇಶ, ಚತ್ತೀಸ್ ಗಢ, ಕೇರಳ, ಸಿಕ್ಕಿಂ, ಬಿಹಾರ ರಾಜ್ಯಗಳು ಘೋಷಿಸಿವೆ.

ಕೋವಿಶೀಲ್ಡ್ ಬೆಲೆ ಎಷ್ಟು?
ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಲಸಿಕೆ ಪ್ರತಿ ಡೋಸ್ ಬೆಲೆ 400 ರು ಎಂದು ನಿಗದಿಯಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಪ್ರತಿ ಡೋಸ್ ಬೆಲೆ 600ರು ಎಂದು ನಿಗದಿಯಾಗಿದೆ.

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯಲ್ಲಿ ಯಾವುದು ಉತ್ತಮ?
ಭಾರತದ ಬಳಕೆಯಲ್ಲಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ನಡುವೆ ಯಾವುದೇ ಹೋಲಿಕೆ ಮಾಡಲಾಗಿಲ್ಲ. ಎರಡು ಲಸಿಕೆ ಕೂಡಾ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸೋಂಕಿನಿಂದ ದೇಹಕ್ಕೆ ಹೆಚ್ಚಿನ ತೊಂದರೆಯಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿದೆ. ವಯೋವೃದ್ಧರು ಹಾಗೂ ರೋಗದ ಗುಣಲಕ್ಷಣ ಹೊಂದಿದವರು ಸೋಂಕಿನಿಂದ ಮೃತಪಡುವುದನ್ನು ತಡೆಯಬಲ್ಲುದು.

ಕೊವಿಡ್ ಲಸಿಕೆ ನೋಂದಣಿ ಯಾವಾಗ ಮಾಡಿಕೊಳ್ಳಬಹುದು?
ಏಪ್ರಿಲ್ 28ರಂದು CoWin ವೆಬ್ ಸೈಟ್ ಹಾಗೂ ಆರೋಗ್ಯ ಸೇತು ಅಪ್ಲಿಕೇಷನ್ ಮೂಲಕ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆಗಾಗಿ ತಮ್ಮ ಹೆಸರು ನೋಂದಾಯಿಸಬಹುದು.

ನಾನು ಸ್ವಯಂ ನೋಂದಣಿ ಹೇಗೆ ಮಾಡಬಹುದು?
ಲಸಿಕೆ ಪಡೆಯಲು ಇಚ್ಛಿಸುವವರು CoWin ವೆಬ್ ಸೈಟ್ ಮೂಲಕ ಎಲ್ಲಿ ಯಾವಾಗ ಬೇಕಾದರೂ ಖುದ್ದು ನೋಂದಣಿ ಮಾಡಿಕೊಳ್ಳಬಹುದು. ನಿಮ್ಮ ಲಸಿಕೆ ಪಡೆಯುವ ಸಮಯವನ್ನು ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಳ್ಳಲು ಲಿಂಕ್ : https://www.cowin.gov.in/home

ಲಸಿಕೆಯನ್ನು ಎಲ್ಲಿ ಹಾಕಿಸಿಕೊಳ್ಳಬಹುದು?
ಲಸಿಕೆ ನೀಡಲು ನೋಂದಾಯಿತ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದುಕೊಳ್ಳಬಹುದು. ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು.

ಎರಡನೇ ಲಸಿಕೆ ಪಡೆಯುವುದು ಯಾವಾಗ? ಮತ್ತೆ ನೋಂದಣಿ ಮಾಡಿಕೊಳ್ಳಬೇಕೆ?
ಇಲ್ಲ, ಒಮ್ಮೆ ಮೊದಲ ಲಸಿಕೆ ಪಡೆದ ಬಳಿಕ ಎರಡನೇ ಲಸಿಕೆ ಪಡೆಯುವ ಬಗ್ಗೆ ತಿಳಿಸಲಾಗುತ್ತದೆ. ಸದ್ಯಕ್ಕೆ ಕೊವ್ಯಾಕ್ಸಿನ್ ಲಸಿಕೆ ಪಡೆದ 28 ರಿಂದ 42 ದಿನಗಳೊಳಗೆ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕು. ಕೊವಿಶೀಲ್ಡ್ ಲಸಿಕೆ ಪಡೆದ 28 ರಿಂದ 56 ದಿನಗಳ ಒಳಗೆ ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ನಿಯಮವಿದೆ.

ನೋಂದಣಿ ಮಾಡಿಸಿಕೊಳ್ಳದೇ ಕೊವಿಡ್ 19 ಲಸಿಕೆ ಪಡೆದುಕೊಳ್ಳಬಹುದೆ?
ಇಲ್ಲ, ಕೊವಿಡ್ 19 ಲಸಿಕೆ ಪಡೆಯಲು ಆರೋಗ್ಯ ಇಲಾಖೆ ನೀಡಿರುವ ಅಧಿಕೃತ ವೆಬ್ ತಾಣಗಳಲ್ಲಿ ನೋಂದಣಿ ಅಗತ್ಯ. ಆನ್‌ಲೈನ್ ನೋಂದಣಿ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು SMS ಬರುತ್ತದೆ. ಅದರಲ್ಲಿ ಲಸಿಕೆ ನೀಡುವ ದಿನಾಂಕ, ಸ್ಥಳ ಮತ್ತು ಸಮಯವನ್ನು ತಿಳಿಸಲಾಗುತ್ತದೆ.

ಒಂದು ವೇಳೆ ನೇರವಾಗಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದರೂ ಲಸಿಕೆ ಪಡೆಯುವ ಮುನ್ನ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ.

ಲಸಿಕೆಗೆ ಹೆಸರು ನೋಂದಣಿ ಮಾಡಿಸಲು ಯಾವ ದಾಖಲೆಗಳು ಅಗತ್ಯ

ಭಾವಚಿತ್ರ ಹೊಂದಿರುವ ಕೆಳಗಿನ ಯಾವುದೇ ಗುರುತಿನ ಚೀಟಿಯನ್ನು ನೋಂದಣಿ ಸಮಯದಲ್ಲಿ ನೀಡಬಹುದು:
• ಆಧಾರ್ ಕಾರ್ಡ್
• ಪ್ಯಾನ್ ಕಾರ್ಡ್
• ಮತದಾರರ ಗುರುಚಿನ ಚೀಟಿ
• ಚಾಲನಾ ಪರವಾನಿಗೆ
• ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಿದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
• ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ (ಎಂಜಿಎನ್‌ಆರ್‌ಇಜಿಎ) ನೀಡಿದ ಉದ್ಯೋಗ ಪ್ರಮಾಣಪತ್ರ
• ಎನ್‌ಪಿಆರ್ ಅಡಿಯಲ್ಲಿ ಆರ್‌ಜಿಐ ನೀಡಿದ ಸ್ಮಾರ್ಟ್ ಕಾರ್ಡ್ • ಸಂಸದರು/ ಶಾಸಕರು / ಅಧಿಕೃತವಾಗಿ ನೀಡಿದ ಗುರುತಿನ ಚೀಟಿ
• ಬ್ಯಾಂಕ್ / ಅಂಚೆ ಕಚೇರಿಯಿಂದ ನೀಡಿದ ಪಾಸ್‌ಬುಕ್‌
• ಪಾಸ್‌ಪೋರ್ಟ್
• ಪಿಂಚಣಿ ದಾಖಲೆ
• ಭಾವಚಿತ್ರ ಹೊಂದಿರುವ ಸೇವಾ ಗುರುತಿನ ಚೀಟಿ
• ಕೇಂದ್ರ / ರಾಜ್ಯ ಸರ್ಕಾರ / ಪಿಎಸ್ಯುಗಳು / ಸಾರ್ವಜನಿಕ ಕಂಪನಿಗಳು ನೌಕರರಿಗೆ ನೀಡಿರುವ ಭಾವಚಿತ್ರವುಳ್ಳ ಉದ್ಯೋಗದ ಗುರುತಿನ ಚೀಟಿ.
* ಅಸ್ವಸ್ಥರಾಗಿದ್ದರೆ, ವೈದ್ಯರ ಪ್ರಮಾಣ ಪತ್ರವನ್ನು ಲಸಿಕೆ ಪಡೆಯುವ ಸಂದರ್ಭದಲ್ಲಿ ತೋರಿಸಬೇಕಾಗುತ್ತದೆ.

ನೋಂದಣಿ ಸಂದರ್ಭದಲ್ಲಿ ಭಾವಚಿತ್ರ ಹೊಂದಿರುವ ಗುರುತಿನ ಚೀಟಿ ಮತ್ತೆ ಅಗತ್ಯವೇ?
ನೋಂದಣಿ ಸಂದರ್ಭದಲ್ಲಿ ನಮೂದಿಸಿದ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಲಸಿಕೆ ಪಡೆಯುವ ಸಂದರ್ಭದಲ್ಲಿ ತೋರಿಸಬೇಕಾಗುತ್ತದೆ.

ನೋಂದಣಿ ವಿವರ ಹೇಗೆ ಪಡೆಯಬಹುದು/
ಲಸಿಕೆ ಪಡೆಯಲು ಆನ್ ಲೈನ್ ನೋಂದಣಿ ಮಾಡಿಸಿಕೊಂಡವರಿಗೆ ಲಸಿಕೆ ಪಡೆಯುವ ಮುನ್ನ ನೋಂದಾಯಿತ ಮೊಬೈಲ್ ಫೋನಿಗೆ SMS ಬರುತ್ತದೆ. ಅದರಲ್ಲಿ ಲಸಿಕೆ ನೀಡುವ ದಿನಾಂಕ, ಸ್ಥಳ ಮತ್ತು ಸಮಯವನ್ನು ತಿಳಿಸಲಾಗುತ್ತದೆ.

ಲಸಿಕೆ ಪಡೆದ ಬಳಿಕ ಹೆಚ್ಚಿನ ಮಾಹಿತಿ ಸಿಗುವುದೇ?
ಹೌದು, ಕೋವಿಡ್ 19 ಲಸಿಕೆ ಪಡೆದ ಬಳಿಕವೂ ಫಲಾನುಭವಿಗಳಿಗೆ ನೋಂದಾಯಿತ ಮೊಬೈಲ್ ಫೋನ್ ಗಳಿಗೆ ಪ್ರತಿ ಅಪ್ಡೇಟ್ ಬಗ್ಗೆ ಎಸ್ಎಂಎಸ್ ಸಿಗಲಿದೆ. ಮುಂದಿನ ಡೋಸ್ ಯಾವಾಗ, ಕ್ಯೂಆರ್ ಕೋಡ್ ಆಧಾರಿತ ಪ್ರಮಾಣಪತ್ರ ಕೂಡಾ ಎಸ್ಎಂಎಸ್ ಮೂಲಕ ಕಳಿಸಲಾಗುತ್ತದೆ.

ಎರಡು ಡೋಸ್ ನಡುವಿನ ಅಂತರ ಎಷ್ಟಿರಲಿದೆ?
ಕೊವಿಶೀಲ್ಡ್ ಲಸಿಕೆ ಪಡೆದ 4ರಿಂದ 6 ವಾರ ದಿಂದ 4 ರಿಂದ 8 ವಾರಗಳ ಒಳಗೆ ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು. ಇದೇ ರೀತಿ ಕೋವ್ಯಾಕ್ಸಿನ್ ಮೊದಲ ಲಸಿಕೆ ಪಡೆದ 4 ರಿಂದ 6 ವಾರಗಗೊಳಗೆ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕು.

ಯಾವ ಲಸಿಕೆ ಪಡೆಯಬೇಕು ಎಂಬುದು ಆಯ್ಕೆ ಮಾಡಬಹುದೆ?
ಲಭ್ಯತೆ ಆಧಾರದ ಮೇಲೆ ಭಾರತದೆಲ್ಲೆಡೆ ಲಸಿಕೆಯನ್ನು ವಿತರಿಸಲಾಗುತ್ತಿದೆ. ಲಸಿಕೆ ಫಲಾನುಭವಿಗಳ ಸಂಖ್ಯೆ ಹೆಚ್ಚಿರುವುದರಿಂದ ಸದ್ಯಕ್ಕೆ ಲಸಿಕೆ ಆಯ್ಕೆಯ ಅವಕಾಶ ನೀಡಿಲ್ಲ.

ಲಸಿಕೆಗಳು ಫಾರ್ಮಸಿ/ ಔಷಧಿ ಅಂಗಡಿಯಲ್ಲಿ ಲಭ್ಯವಿದೆಯೆ?
ಸದ್ಯಕ್ಕೆ ಇಲ್ಲ, ಆರೋಗ್ಯ ಇಲಾಖೆಯ ಅಧಿಕೃತ ಮಾನ್ಯತೆ ಪಡೆದ ಕೇಂದ್ರಗಳಲ್ಲಿ ಮಾತ್ರ ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿರುವುದಿಲ್ಲ.

ಖಾಸಗಿ ಕೇಂದ್ರಗಳಲ್ಲಿ ನೋಂದಣಿ, ಸಂದರ್ಶನಕ್ಕಾಗಿ ನೋಂದಣಿ ಅಗತ್ಯವೇ?
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಅಥವಾ ಲಸಿಕಾ ಕೇಂದ್ರ ಎರಡರಲ್ಲೂ ನೋಂದಣಿ ಹಾಗೂ ಪೂರ್ವ ನಿಗದಿ ಸಂದರ್ಶನ ಕಾಯ್ದಿರಿಸುವುದು ಅಗತ್ಯ.

ಸದ್ಯ ಚಾಲ್ತಿಯಲ್ಲಿರುವ ಲಸಿಕಾ ಅಭಿಯಾನ ಏನಾಗುವುದು?
ಕೇಂದ್ರ ಸರ್ಕಾರದಿಂದ ಸದ್ಯ ಚಾಲ್ತಿಯಲಿರುವ ಲಸಿಕಾ ಅಭಿಯಾನ ಮುಂದುವರೆಯಲಿದೆ. ಆರೋಗ್ಯ ಕಾರ್ಯಕರ್ತರಿಗೆ, 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ 19 ಲಸಿಕೆ ಉಚಿತವಾಗಿ ನೀಡಲಾಗುತ್ತದೆ.

ಕೋವಿಡ್ 19 ಚಿಕಿತ್ಸೆಯಲ್ಲಿ ರೆಮ್‌ಡೆಸಿವಿರ್ ಪರಿಣಾಮಕಾರಿಯೇ?
ರೆಮ್‌ಡೆಸಿವಿರ್ ಚುಚ್ಚುಮದ್ದು ಮ್ಯಾಜಿಕ್ ಮದ್ದಲ್ಲ, ಮರಣ ಪ್ರಮಾಣ ಇದರಿಂದ ತಗ್ಗುವುದಿಲ್ಲ, ಇದು ಪೂರಕ ಔಷಧಿ ಅಷ್ಟೇ.

ಲಸಿಕೆ ಪಡೆಯುವುದು ಕಡ್ಡಾಯವೇ?
ಕೊವಿಡ್ 19 ಲಸಿಕೆಯನ್ನು ಸ್ವಯಂಪ್ರೇರಿತರಾಗಿ ಪಡೆದುಕೊಳ್ಳಬಹುದು. ಆದರೆ, ತಜ್ಞರ ಸಲಹೆಯಂತೆ ಸೋಂಕು ಹರಡದಂತೆ ತಡೆಯಲು, ಸೋಂಕಿನಿಂದ ಹೆಚ್ಚಿನ ತೊಂದರೆಯಾಗದಂತೆ ದೇಹವನ್ನು ರಕ್ಷಿಸಲು ಲಸಿಕೆ ಅತ್ಯಗತ್ಯ. ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು, ಸಹದ್ಯೋಗಿಗಳಿಗೆ ಸೋಂಕು ಹರಡದಂತೆ ತಡೆಯಬಹುದು.

ಲಸಿಕೆ ಸುರಕ್ಷಿತವಾಗಿದೆಯೆ? ಕಡಿಮೆ ಅವಧಿಯಲ್ಲಿ ಲಸಿಕೆ ಸುರಕ್ಷತೆ ಪರೀಕ್ಷೆ ನಂಬಲರ್ಹವೇ?
ಸದ್ಯ ಬಳಕೆಯಲ್ಲಿರುವ ಲಸಿಕೆಗಳು ನಿಯಂತ್ರಕ ಸಂಸ್ಥೆಗಳು ನೀಡಿದ ಮಾನ್ಯತೆಯಂತೆ ಸುರಕ್ಷತೆ ಹಾಗೂ ಕಾರ್ಯಕ್ಷಮತೆ ಪರೀಕ್ಷೆಗೆ ಒಳಪಟ್ಟಿವೆ.

ಲಸಿಕೆ ಪಡೆದ ಬಳಿಕೆ ಏನು ಬದಲಾವಣೆಯಾಗಲಿದೆ?
ಜ್ವರ, ಮೈಕೈ ನೋವು, ಸುಸ್ತು, ತೋಳಲ್ಲಿ ನೋವು ಕಾಣಿಸಿಕೊಳ್ಳಲಿದೆ. ನೋವು ನಿವಾರಕ ಪ್ಯಾರಸಿಟಮೋಲ್, ಡೋಲೋ ಮುಂತಾದ ಮಾತ್ರೆಗಳನ್ನು ವೈದ್ಯರ ಸಲಹೆ ಮೇಲೆ 2-3 ದಿನಗಳ ಕಾಲ ಪಡೆದುಕೊಳ್ಳಬೇಕಾಗುತ್ತದೆ.

ಗರ್ಭಿಣಿ, ಬಾಣಂತಿಯರು ಲಸಿಕೆ ಪಡೆಯಬಹುದೆ?
ಸದ್ಯಕ್ಕೆ ಲಸಿಕೆ ಮಾರ್ಗಸೂಚಿಯಂತೆ ಗರ್ಭಿಣಿ ಹಾಗೂ ಬಾಣಂತಿಯರಿಗೆ ಲಸಿಕೆ ನೀಡಲು ಸಲಹೆ ನೀಡಿಲ್ಲ.

ಹೃದಯಬೇನೆ ಇರುವವರು ಲಸಿಕೆ ಪಡೆಯಬಹುದೆ?
ಹೌದು.

ಲಸಿಕೆಯ ಸೈಡ್ ಎಫೆಕ್ಟ್ ಏನು?
ಒಟ್ಟಾರೆ, ಎರಡು ಕೊರೊನಾ ಲಸಿಕೆ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ. 20 ಲಕ್ಷ ಲಸಿಕೆಗಳನ್ನು ನೀಡಲಾಗಿದ್ದು, ಹೆಚ್ಚಿನ ಪ್ರಮಾಣದ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ.

ಲಸಿಕೆ ನಂತರ ಏನು ನಿರೀಕ್ಷಿಸಬಹುದು?
ಲಸಿಕೆ ಪಡೆದ ನಂತರ ಕೊವಿಡ್ 19 ಮಾರ್ಗಸೂಚಿ ನಿಯಮಗಳಾದ ಮಾಸ್ಕ್ ಧರಿಸುವುದು/ಇನ್ನಿತರ ಸುರಕ್ಷತೆ ಅನುಸರಿಸಬೇಕೆ?

ಹೌದು, ಕೊವಿಡ್ 19 ಲಸಿಕೆ ಪಡೆದ ಬಳಿಕವೂ ಮಾರ್ಗಸೂಚಿ ನಿಯಮಗಳಾದ ಮಾಸ್ಕ್ ಧರಿಸುವುದು/ಇನ್ನಿತರ ಸುರಕ್ಷತೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಮಾಸ್ಕ್ ಧರಿಸುವುದು, ದೈಹಿಕ ಅಂತರ, ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಮುಂತಾದವನ್ನು ಪಾಲಿಸಬೇಕಾಗುತ್ತದೆ.

ಲಸಿಕೆ ನಂತರ ಎಷ್ಟು ಅವಧಿ ತನಕ ಸುರಕ್ಷತೆ ಒದಗಿಸಬಲ್ಲದು?

ಲಸಿಕೆ ಪಡೆದ ವ್ಯಕ್ತಿಯ ರೋಗನಿರೋಧಕ ಶಕ್ತಿಯ ಮೇಲೆ ಲಸಿಕೆಯ ಆಯುಷ್ಯ ನಿರ್ಧರಿಸುವುದು ಇನ್ನೂ ದೃಢಪಟ್ಟಿಲ್ಲ. ಆದ್ದರಿಂದ, ಮಾಸ್ಕ್ ಧರಿಸುವುದು, ಕೈ ತೊಳೆಯುವುದು, ದೈಹಿಕ ದೂರ ಮತ್ತು ಇತರ ಕೋವಿಡ್ 19 ಸೂಕ್ತ ನಡವಳಿಕೆಗಳನ್ನು ಮುಂದುವರೆಸಬೇಕು ಎಂದು ಸೂಚಿಸಲಾಗಿದೆ.

SARS-CoV 2ನ ಹೊಸ ತಳಿಗಳು / ರೂಪಾಂತರಿತ ವೈರಸ್‌ನಿಂದ ನನ್ನನ್ನು ಲಸಿಕೆ ರಕ್ಷಿಸುತ್ತದೆಯೇ?
ಸೈಕ್ ಪ್ರೋಟಿನ್ ಸೇರಿದಂತೆ ಪ್ರತಿಕಾಯಗಳನ್ನು ಹೆಚ್ಚು ಉತ್ಪಾದಿಸುವ ಮೂಲಕ ರಕ್ಷಣೆ ಒದಗಿಸಲಾಗುತ್ತದೆ. ಹೀಗಾಗಿ, ಬಳಕೆಯಲ್ಲಿರುವ ಲಸಿಕೆಗಳು ಸೂಕ್ತ, ಸಮಂಜಸ ರಕ್ಷಣೆ ಒದಗಿಸಲು ಶಕ್ತವಾಗಿವೆ. ಲಭ್ಯ ಅಂಕಿ ಅಂಶದ ಪ್ರಕಾರ ರೂಪಾಂತರ ವೈರಾಣುಗಳು ಲಸಿಕೆ ಪ್ರಭಾವವನ್ನು ತಗ್ಗಿಸಬಹುದು ಎಂಬುದಕ್ಕೆ ಆಧಾರವಿಲ್ಲ.

ಎಷ್ಟು ದಿನಗಳಲ್ಲಿ ಲಸಿಕೆ ತನ್ನ ರೋಗನಿರೋಧಕ ಪ್ರತಿಕ್ರಿಯೆ ಮತ್ತು ರಕ್ಷಣೆಯನ್ನು ಸೃಷ್ಟಿಸುತ್ತದೆ?

ಸಂಪೂರ್ಣ ಲಸಿಕೆ ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ ನಂತರ ಸಾಕಷ್ಟು ರೋಗನಿರೋಧಕ ಪ್ರತಿಕ್ರಿಯೆಯು 2-3 ವಾರಗಳನ್ನು ತೆಗೆದುಕೊಳ್ಳುತ್ತದೆ, ಅಂದರೆ, COVISHIELD® ಮತ್ತು COVAXIN® ನ ಎರಡನೇ ಡೋಸ್ ನಂತರ ಎನ್ನಬಹುದು.

ಕೋವಿಡ್ 19 ಲಸಿಕೆ ಪಡೆದ ನಂತರ ನೀವು ಆಲ್ಕೋಹಾಲ್ ಸೇವಿಸಬಾರದೆ?

ತಜ್ಞರ ಪ್ರಕಾರ,ಆಲ್ಕೋಹಾಲ್ ಸೇವನೆಯಿಂದ ಲಸಿಕೆಯ ಪರಿಣಾಮಕಾರಿತ್ವ ದುರ್ಬಲಗೊಳ್ಳುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ಲಸಿಕೆ ಪಡೆದ ನಂತರ ಯಾವ ಮುನ್ನೆಚ್ಚರಿಕೆಗಳನ್ನು ನಾನು ತೆಗೆದುಕೊಳ್ಳಬೇಕು?

ಎರಡೂ ಲಸಿಕೆಗಳು ಸುರಕ್ಷಿತವಾಗಿದೆ, ಆದರೆ ಯಾವುದೇ ಅಸ್ವಸ್ಥತೆ ಅಥವಾ ದೂರುಗಳಿದ್ದಲ್ಲಿ, ಫಲಾನುಭವಿಯನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ಸೂಚಿಸಲಾಗಿದೆ ಮತ್ತು / ಅಥವಾ ಲಸಿಕೆ ಹಾಕಿದ ನಂತರ ಸ್ವೀಕರಿಸಿದ ಕೋ-ವಿನ್ ಎಸ್‌ಎಂಎಸ್‌ನಲ್ಲಿ ಅವರ ಫೋನ್ ಸಂಖ್ಯೆಯನ್ನು ನೀಡಿದ ಆರೋಗ್ಯ ಕಾರ್ಯಕರ್ತರಿಗೆ ಕರೆ ಮಾಡಿ.

ಎರಡನೇ ಡೋಸ್ ಸಮಯದಲ್ಲಿ ಅದೇ ಲಸಿಕೆ ಪಡೆಯುವುದು ಮುಖ್ಯವೇ?

ಲಭ್ಯವಿರುವ ಲಸಿಕೆಗಳು ಪರಸ್ಪರ ಬದಲಾಯಿಸಲಾಗದ ಕಾರಣ, ಮೊದಲು ಪಡೆದ ಲಸಿಕೆಯ ಎರಡನೆಯ ಪ್ರಮಾಣವನ್ನು ಸ್ವೀಕರಿಸುವುದು ಮುಖ್ಯ. ಪ್ರತಿಯೊಬ್ಬರೂ ಒಂದೇ ಲಸಿಕೆಯನ್ನು ಎರಡು ಬಾರಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕೋ-ವಿನ್ ಪೋರ್ಟಲ್ ಸಹ ಸಹಾಯ ಮಾಡಲಿದೆ.

ಈ ಲಸಿಕೆ ಹಿಂಡಿನ(herd) ಪ್ರತಿರಕ್ಷೆಯನ್ನು ಒದಗಿಸುತ್ತದೆಯೇ?

ಸಮುದಾಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಲಸಿಕೆ ಪಡೆದಾಗ, ಹಿಂಡಿನ ಪ್ರತಿರಕ್ಷೆಯ ಮೂಲಕ ಪರೋಕ್ಷವಾಗಿ ಪ್ರತಿರೋಧಕ ರಕ್ಷಣೆ ಬೆಳೆಯುತ್ತದೆ. ಹಿಂಡಿನ ಪ್ರತಿರಕ್ಷೆಯನ್ನು ಸಾಧಿಸಲು ರೋಗನಿರೋಧಕ ಶಕ್ತಿಯನ್ನು ಹೊಂದಿರಬೇಕಾದ ಜನರ ಶೇಕಡಾವಾರು ಪ್ರಮಾಣವು ಪ್ರತಿ ರೋಗಕ್ಕೂ ಬದಲಾಗುತ್ತದೆ. ಉದಾಹರಣೆಗೆ, ದಡಾರ(measles)ಕ್ಕೆ 95% ನಷ್ಟಿದೆ, ಆದಾಗ್ಯೂ ಹಿಂಡಿನ ಪ್ರತಿರಕ್ಷೆಯನ್ನು ಪ್ರಚೋದಿಸಲು COVID-19 ವಿರುದ್ಧ ಲಸಿಕೆ ಹಾಕಬೇಕಾದ ಜನಸಂಖ್ಯೆಯ ಪ್ರಮಾಣವು ನಿಖರವಾಗಿ ಇನ್ನೂ ತಿಳಿದಿಲ್ಲ.

English summary
Corona Vaccine Update: The government has allowed vaccination for those above 18 years of age from May 1, Vaccine Price, how to register, what are the side-effects; All your FAQs are here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
loader
X