• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಲಾಕ್ ಡೌನ್ ಗೆ ಸಿಟ್ಟು ಮಾಡುವ ಮುನ್ನ ಈ ಜನರ ಬಗ್ಗೆ ತಿಳಿಯಿರಿ...

By ಶ್ರೀಹರ್ಷ ದ್ವಾರಕನಾಥ್
|

ಎಲ್ಲರಿಗೂ ನಮಸ್ಕಾರ. ವಿಶ್ವದ ಮುಕ್ಕಾಲು ಪಾಲು ದೇಶಗಳಲ್ಲಿ ಕೊರೊನಾದೇ ಆತಂಕ. ಆದರೆ ಇಲ್ಲಿ ಈ ತನಕ ಒಂದು ಕೊರೊನಾ ಪ್ರಕರಣ ಕೂಡ ಇಲ್ಲ. ಭಾರತದಲ್ಲಿ ಇದೇನು ಅಂತ ಇಲ್ಲಿ ಕೂತಿರುವ ನನಗೆ ಪ್ರತಿ ಕ್ಷಣ ಅನಿಸುತ್ತಲೇ ಇರುತ್ತದೆ. ಇಲ್ಲಿ ಅಂದರೆ ಕೊಮೊರೋ ದ್ವೀಪದಲ್ಲಿ. ಆಫ್ರಿಕಾ ಖಂಡದ ಸ್ವತಂತ್ರ ದ್ವೀಪ ಇದು. ಒಂದು ಕಾಲದಲ್ಲಿ ಫ್ರಾನ್ಸ್ ಇಲ್ಲಿ ಆಡಳಿತ ನಡೆಸುತ್ತಿತ್ತು. ಕೊಮೊರೋಗೆ ಮಡಗಾಸ್ಕರ್ ಹತ್ತಿರ.

ಇಲ್ಲೊಂದು ರೆಸ್ಟೋರೆಂಟ್ ನಲ್ಲಿ ಒಂದೊಳ್ಳೆ ಹುದ್ದೆಯಲ್ಲಿ ಕೆಲಸ ಇದೆ. ಸಂಜೆ ನಾಲ್ಕು ಗಂಟೆ ಹೊತ್ತಿಗೆ ನನ್ನ ಕೆಲಸವೆಲ್ಲ ಮುಗಿದೇ ಹೋಗುತ್ತದೆ. ವಾರಕ್ಕೆ ಎರಡು ದಿನ ರಜಾ. ಇಲ್ಲಿ ಸುತ್ತಾಡಲು ಹೋಗಬೇಕು ಅಂದರೆ, ಹತ್ತಿರದಲ್ಲೇ ಇರುವ ಜೀವಂತ ವಾಲ್ಕೆನೋ (ಅಗ್ನಿ ಪರ್ವತ) ನೋಡಿಬರಬೇಕು ಅಷ್ಟೇ. ಉಳಿದಂತೆ ಸಮುದ್ರ, ತೆಂಗಿನ ಮರಗಳು, ಸಂಜೆ ಆರು ಗಂಟೆ ಹೊತ್ತಿಗೆ ಮಧ್ಯರಾತ್ರಿ ಎಂಬಂತೆ ಖಾಲಿ ಖಾಲಿ ರಸ್ತೆಗಳು, ಎಷ್ಟೋ ಸಲ ನಮ್ಮ ರೆಸ್ಟೋರೆಂಟ್ ಬಾಗಿಲ ತನಕ ಬರುವ ಆಮೆಗಳು... ಇದು ಇಲ್ಲಿನ ಜೀವನ.

ನಾನು ಇಲ್ಲಿಗೆ ಬಂದ ಹೊಸತರಲ್ಲಿ ಎಲ್ಲವೂ ಅಚ್ಚರಿ. ಅಲ್ಲೊಂದು ಇಲ್ಲೊಂದು ಎಂಬಂತೆ ಸಿಸಿ ಟಿವಿ ಕ್ಯಾಮೆರಾಗಳು ಬ್ಯಾಂಕ್ ನಲ್ಲಿ ಇವೆ ಎಂಬುದು ಬಿಟ್ಟರೆ ಬೇರೆಲ್ಲೂ ಕಾಣಲು ಸಿಗಲ್ಲ. ಇಲ್ಲಿನ ಎಷ್ಟೋ ಮನೆಗಳಲ್ಲಿ ಒಂದು ಫ್ಯಾನ್ ಕೂಡ ಇಲ್ಲ. ಇಸ್ಲಾಂ ಧರ್ಮದವರೇ ಇಲ್ಲಿ ಹೆಚ್ಚು. ಪ್ರತಿ ಶುಕ್ರವಾರ ವಿಪರೀತ ಕಟ್ಟುನಿಟ್ಟಿನ ಆಚರಣೆ ಮಾಡುತ್ತಾರೆ. ಹಸಿ ಕೋಳಿಯನ್ನು ಬಿಸಿ ನೀರಿಗೆ ಹಾಕಿ, ಉಪ್ಪು ಹಾಕಿಕೊಂಡು ತಿಂದರೆ ಇವರು ಸಂತೃಪ್ತರು. ತಿಂಗಳ ಖರ್ಚಿಗೆ 75ರಿಂದ 150 ಯುರೋ ಇದ್ದರೆ ಒಂದು ಕುಟುಂಬಕ್ಕೆ ಸಾಕು.

 ಮಲೇರಿಯಾ ಬಂದರೆ ಕ್ಯಾನ್ಸರ್ ಬಂದಷ್ಟು ಗಾಬರಿಯಾಗ್ತಾರೆ

ಮಲೇರಿಯಾ ಬಂದರೆ ಕ್ಯಾನ್ಸರ್ ಬಂದಷ್ಟು ಗಾಬರಿಯಾಗ್ತಾರೆ

ನಾನು ಕೆಲಸ ಮಾಡುವ ರೆಸ್ಟೋರೆಂಟ್ ಗೆ ಬರುವವರಲ್ಲಿ ಫ್ರಾನ್ಸ್ ನವರು ಹೆಚ್ಚು. ಅವರಿಗೆ ಯಾವುದೇ ಊಟ, ತಿಂಡಿ ಜತೆಗೆ ಫ್ರೆಂಚ್ ಫ್ರೈಸ್ (ಫಿಂಗರ್ ಚಿಪ್ಸ್) ಕಡ್ಡಾಯವಾಗಿ ಇರಬೇಕು. ಇನ್ನು ಕೊಮೊರೋದಲ್ಲಿ ಇರುವ ಮನೆಗಳಲ್ಲಿ ಕುಟುಂಬಕ್ಕೆ ಒಬ್ಬರಂತೆ ಫ್ರಾನ್ಸ್ ನಲ್ಲಿ ಸಣ್ಣ- ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಅವರು ಕಳುಹಿಸುವ ಹಣವೇ ಇವರ ಜೀವನ ನಡೆಸಬೇಕು. ಈ ದ್ವೀಪದಲ್ಲಿ ಅಪರಾಧ ಅನ್ನೋದು ಕಡಿಮೆ ಅಥವಾ ಇಲ್ಲವೇ ಇಲ್ಲ. ಇನ್ನು ಹೆಣ್ಣುಮಕ್ಕಳು ಸಹ ಬಹಳ ಮುಗ್ಧರು; ಇಲ್ಲಿನ ಗಂಡಸರಂತೆಯೇ. ಹೆಣ್ಣುಮಕ್ಕಳನ್ನು ನಂಬಿಸಿ, ವಂಚಿಸುತ್ತಾರೆ, ದೈಹಿಕವಾಗಿ ಬಳಸಿಕೊಳ್ಳುತ್ತಾರೆ ಎಂಬ ಹೊರ ಜಗತ್ತಿನ ದುಷ್ಟತನಗಳ ಬಗ್ಗೆ ಇವರಿಗೆ ಪರಿಚಯ ಸಹ ಇಲ್ಲ. ಅಕಸ್ಮಾತ್ ಯಾರಿಗಾದರೂ ಮಲೇರಿಯಾ ಬಂದರೆ ಕ್ಯಾನ್ಸರ್ ಬಂದಷ್ಟೇ ಗಾಬರಿಯಾಗುತ್ತಾರೆ. ಅಷ್ಟು ಆರೋಗ್ಯವಂತ ಜನ ಇವರು.

 ನೈಟ್ ಲೈಫ್, ಎಂಟರ್ ಟೇನ್ ಮೆಂಟ್ ಇಲ್ಲ

ನೈಟ್ ಲೈಫ್, ಎಂಟರ್ ಟೇನ್ ಮೆಂಟ್ ಇಲ್ಲ

ಇಲ್ಲಿ ಯುರೋ ಕರೆನ್ಸಿ ಆರಾಮಾಗಿ ನಡೆಯುತ್ತದೆ. ಹಿಂದುಳಿದ ಪ್ರದೇಶ ಅನ್ನೋದು ಹೌದು. ಎಲ್ಲವೂ ದುಬಾರಿಯೇ. ಆದರೆ ಸಿನಿಮಾ ಹಾಲ್ ಇಲ್ಲ, ಯಾವುದೇ ಮನರಂಜನೆ ಇಲ್ಲ, ಪಬ್ ಮತ್ತೊಂದು ಇಲ್ಲ... ಇತ್ಯಾದಿ ಯಾವ ಕಂಪ್ಲೇಂಟ್ ಕೂಡ ಇವರಿಗಿಲ್ಲ. ಒಂದೊಳ್ಳೆ ಬ್ರ್ಯಾಂಡೆಡ್ ಬಟ್ಟೆ ತೆಗೆದುಕೊಳ್ಳುವುದು ಸಹ ಕಷ್ಟ ಕಷ್ಟ. ಮುಂಚೆಯೇ ಹೇಳಿದ ಹಾಗೆ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಇವರ ವ್ಯಾಪಾರ- ವ್ಯವಹಾರ ಎಲ್ಲ ಬಂದ್. ಆ ಮೇಲೆ ಪ್ರಾಣ ಹೋಗುತ್ತಿದೆ ಅಂದರೂ ಸಿಂಗಲ್ ಬನ್ ಸಿಗೋದಿಲ್ಲ. ತರಕಾರಿ- ಹಣ್ಣುಗಳು ಸಹ ಇವರಿಗೆ ಹೊರಗಿನಿಂದ ಬರಬೇಕು. ಆದರೆ ಇಲ್ಲಿರುವವರೆಲ್ಲ ಖುಷಿಯಾಗಿದ್ದಾರೆ. ಎಲ್ಲರೂ ಆರೋಗ್ಯವಂತರು. ತಮಗೆ ಅದು ಸಿಕ್ಕಿಲ್ಲ, ಇದು ಸಿಕ್ಕಿಲ್ಲ, ನೈಟ್ ಲೈಫ್ ಇಲ್ಲ ಎಂಬ ಯಾವ ಕೊರಗು ಸಹ ಇಲ್ಲ.

 ಭಾರತದ ಗಣರಾಜ್ಯೋತ್ಸವ

ಭಾರತದ ಗಣರಾಜ್ಯೋತ್ಸವ

ಕೆಲ ತಿಂಗಳ ಹಿಂದೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಲ್ಲಿಗೆ ಬಂದಿದ್ದರು. ಅವರ ಕಾರ್ಯಕ್ರಮದಲ್ಲಿ ಜನರು ಅಂತ ಇದ್ದಿದ್ದು ನಮ್ಮ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುವ ಬೆರಳೆಣಿಕೆಯಷ್ಟು ಭಾರತೀಯರು ಮಾತ್ರ. ಅವರು ಏರ್ ಇಂಡಿಯಾದ ವಿಮಾನದಲ್ಲಿ ಅಕ್ಕಿ, ಬೇಳೆ, ಅಡುಗೆಯವರ ಸಹಿತ ಬಂದಿದ್ದರು. "ಅಯ್ಯೋ, ಕೊಮರೋ ಅಂದರೆ ಏನೋ ಅಂದುಕೊಂಡು ಬಂದ್ನಲ್ಲಪ್ಪ" ಅಂತ ತಮ್ಮ ಭಾಷಣದಲ್ಲೇ ಬೇಜಾರು ಮಾಡಿಕೊಂಡರು. ನಮಗಂತೂ ಒಳ್ಳೇ ಎಂಟರ್ ಟೇನ್ ಮೆಂಟ್. ಭಾರತದ ಗಣರಾಜ್ಯೋತ್ಸವವನ್ನು ಕೊಮೊರೋದ ರೆಸಾರ್ಟ್ ವೊಂದರಲ್ಲಿ ಆಚರಿಸಿ, ಇಲ್ಲಿನ ಭಾರತೀಯರನ್ನು ಆಹ್ವಾನಿಸಲಾಗಿತ್ತು.

 ನಮಗೆ ಇವರು ಮಾದರಿಯಾಗಬೇಕು

ನಮಗೆ ಇವರು ಮಾದರಿಯಾಗಬೇಕು

ಅಂದ ಹಾಗೆ ಕೊರೊನಾದಿಂದ ಭಾರತದಲ್ಲಿ ಇಪ್ಪತ್ತೊಂದು ದಿನ ಲಾಕ್ ಡೌನ್ ಅನ್ನೋ ಸುದ್ದಿ ಓದಿದೆ. ಆಗಿನಿಂದ ಅಲ್ಲಿ ಎಲ್ಲರೂ ಹೇಗೆ ಬೆಂಬಲ ತೋರಿಸುತ್ತಿರಬಹುದು ಎಂಬ ಕುತೂಹಲದಿಂದ ಕೆಲವು ವಿಡಿಯೋಗಳನ್ನು ನೋಡಿದೆ. ಒಂದು ಮಾತು ಹೇಳಬೇಕು ಅನ್ನಿಸ್ತು: ಜೀವನ ಸುದೀರ್ಘವಾದದ್ದು. ಅದನ್ನು ದಿನಗಳಿಗೆ, ಗಂಟೆಗಳಿಗೆ ಇಳಿಸಿ ಲೆಕ್ಕ ಹಾಕಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ನಮ್ಮ ಆತುರದಿಂದ ವರ್ಷಾನುಗಟ್ಟಲೆ ಸಮಯವನ್ನು ದಿನಗಳಿಗೆ, ಗಂಟೆಗಳಿಗೆ ಇಳಿಸುವುದು ಬೇಡ. ಈ ವಿಶ್ವದಲ್ಲಿ ಕೊಮೊರೋದಂಥ ಎಷ್ಟೋ ಸ್ಥಳಗಳು, ಜನರಿದ್ದಾರೆ. ಅಂಥವರು ನಮಗೆ ಈ ಸನ್ನಿವೇಶದಲ್ಲಿ ಮಾದರಿಯಾಗಬೇಕು.

English summary
Why corona lock down support by us? Here is the experience shared by NRI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more