ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಖಚಿತ: ಇವರಲ್ಲಿ ಯಾರಿಗೆ ಸಿಗುತ್ತದೆ ಹೊಣೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷಗಿರಿಯಲ್ಲಿ ಬದಲಾವಣೆ ಮಾಡಲು ಹೈಕಮಾಂಡ್ ಸಿದ್ಧತೆ ನಡೆಸಿದೆ. ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ ಹಾಗೂ ವಿವಿಧ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳಲ್ಲಿ ನಿರೀಕ್ಷೆಯನ್ನೂ ಮೀರಿ ಕಾಂಗ್ರೆಸ್ ಸಾಧನೆ ತೋರಿದೆ. ಬಹುಮತ ಪಡೆದು ಸರ್ಕಾರ ರಚಿಸುವಷ್ಟು ಸೀಟುಗಳನ್ನು ಗೆಲ್ಲದಿದ್ದರೂ ಸಮೀಕ್ಷೆಗಳು ಹುಸಿಯಾಗುವಂತೆ ಪ್ರದರ್ಶನ ತೋರಿಸಿದೆ. ಇದು ಕಾಂಗ್ರೆಸ್‌ಗೆ ಹುಮ್ಮಸ್ಸು ನೀಡಿದೆ.

ರಾಜ್ಯದಲ್ಲಿ ಮುಂದೆ ಬರಲಿರುವ ಉಪ ಚುನಾವಣೆಗೂ ಮುನ್ನ ಅಥವಾ ಅದರ ಬಳಿಕ ಕೆಪಿಸಿಸಿಯ ಆಡಳಿತದಲ್ಲಿ ಸಮಗ್ರ ಬದಲಾವಣೆ ತಂದು ರಾಜ್ಯದಲ್ಲಿ ಪಕ್ಷವನ್ನು ಬಲಗೊಳಿಸುವ ಕಾರ್ಯಕ್ಕೆ ಚುರುಕುಮುಟ್ಟಿಸುವುದು ಹೈಕಮಾಂಡ್ ಉದ್ದೇಶ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ ತರುವ ಸಂಬಂಧ ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯದ ನಾಯಕರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ದಿನೇಶ್ ಗುಂಡೂರಾವ್ ಅವರನ್ನು ಕೆಳಕ್ಕಿಳಿಸಿ ಹೆಚ್ಚು ವರ್ಚಸ್ವಿ ನಾಯಕರನ್ನು ಆ ಸ್ಥಾನದಲ್ಲಿ ಕೂರಿಸಲು ಹೈಕಮಾಂಡ್ ತೀರ್ಮಾನಿಸಿದೆ.

ದಿನೇಶ್ ಗುಂಡೂರಾವ್ ಅಧ್ಯಕ್ಷರಾದಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸತ್ತು ಹೋಯ್ತು: ಕೆ. ಸುಧಾಕರ್ದಿನೇಶ್ ಗುಂಡೂರಾವ್ ಅಧ್ಯಕ್ಷರಾದಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸತ್ತು ಹೋಯ್ತು: ಕೆ. ಸುಧಾಕರ್

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್‌ನಲ್ಲಿ ಚಟುವಟಿಕೆಗಳು ಗರಿಗೆದರುತ್ತಿವೆ. ಪಕ್ಷದ ಕೇಂದ್ರ ನಾಯಕತ್ವವು ರಾಜ್ಯದ ಜವಾಬ್ದಾರಿಯನ್ನು ಅವರಿಗೆ ವಹಿಸಲು ತುದಿಗಾಲಲ್ಲಿ ನಿಂತಿದೆ. ಇದರ ಜತೆಗೆ ಇನ್ನೂ ಕೆಲವು ನಾಯಕರ ಹೆಸರು ಚಾಲ್ತಿಯಲ್ಲಿದ್ದು, ಅವರೆಲ್ಲರೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ನಡುವೆಯೇ ಒಬ್ಬರಿಗೆ ಆದ್ಯತೆ ನೀಡಲು ಹೈಕಮಾಂಡ್ ಉದ್ದೇಶಿಸಿದೆ.

ಡಿಕೆ ಶಿವಕುಮಾರ್‌ ಬಗ್ಗೆ ಒಲವು

ಡಿಕೆ ಶಿವಕುಮಾರ್‌ ಬಗ್ಗೆ ಒಲವು

ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಲಿದ್ದಾರೆ ಎಂಬ ಮಾತುಗಳು ಈ ಹಿಂದೆಯೇ ಕೇಳಿಬಂದಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಡೆದ ಬೆಳವಣಿಗೆಗಳು ಕೆಪಿಸಿಸಿ ಅಧ್ಯಕ್ಷ ಬದಲಾವಣೆಯ ಸಂಗತಿಯನ್ನು ಹಿನ್ನೆಲೆಗೆ ಸರಿಸಿದ್ದವು. ಈಗ ಡಿಕೆ ಶಿವಕುಮಾರ್ ಬಿಡುಗಡೆಯಾಗುತ್ತಿದ್ದಂತೆಯೇ ಮತ್ತೆ ಈ ವಿಚಾರ ಚರ್ಚೆಗೆ ಬಂದಿದೆ. ಈಗಾಗಲೇ ಡಿಕೆ ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಸೋನಿಯಾ ಚರ್ಚಿಸಿದ್ದಾರೆ. ಆದರೆ ಡಿಕೆ ಶಿವಕುಮಾರ್ ಈ ಹುದ್ದೆಯನ್ನು ವಹಿಸಿಕೊಳ್ಳಲು ಸಿದ್ಧರಿಲ್ಲ ಎಂದೂ ಹೇಳಲಾಗುತ್ತಿದೆ. ಕೆಪಿಸಿಸಿ ಸಾಂಸ್ಥಿಕ ಚಟುವಟಿಕೆಯ ಚೌಕಟ್ಟಿನಾಚೆ ಹೆಚ್ಚು ಪ್ರಭಾವಶಾಲಿಯಾಗಿರುವ ಡಿಕೆ ಶಿವಕುಮಾರ್, ಬಾಹ್ಯವಾಗಿಯೇ ಸಾಮರ್ಥ್ಯ ಪ್ರದರ್ಶನ ಮಾಡಲು ಬಯಸಿದ್ದಾರೆ ಎನ್ನಲಾಗಿದೆ.

ಉತ್ತರ ಕರ್ನಾಟಕದ ಲಿಂಗಾಯತ ನಾಯಕ

ಉತ್ತರ ಕರ್ನಾಟಕದ ಲಿಂಗಾಯತ ನಾಯಕ

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಎಂಬಿ ಪಾಟೀಲ್, ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಿಂದ ಮುಂಚೂಣಿಗೆ ಬಂದವರು. ಮುಖ್ಯವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಕಾಂಗ್ರೆಸ್ ನಾಯಕರು, ಅದರಲ್ಲಿಯೂ ಹಿರಿಯ ಸಚಿವರು ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದಾಗ ಎಂಬಿ ಪಾಟೀಲ್ ಸುಮಾರು 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದರು. ಬಿಜೆಪಿ ಪ್ರಾಬಲ್ಯ ಸಾಧಿಸಿರುವ ಉತ್ತರ ಕರ್ನಾಟಕದ ಭಾಗದಲ್ಲಿ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿ ಬೆಳೆಯುವ ಎಂಬಿ ಪಾಟೀಲ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಕೂಡ ಕಾಂಗ್ರೆಸ್‌ನಲ್ಲಿದೆ.

ಮುಗಿಲುಮುಟ್ಟಿದ ಕಾಂಗ್ರೆಸ್ ಅಂತಃಕಲಹ: ಮುನಿಯಪ್ಪ ಆಕ್ರೋಶದ ಬೆಂಕಿಗೆ ಗುಂಡೂರಾವ್ ತುಪ್ಪಮುಗಿಲುಮುಟ್ಟಿದ ಕಾಂಗ್ರೆಸ್ ಅಂತಃಕಲಹ: ಮುನಿಯಪ್ಪ ಆಕ್ರೋಶದ ಬೆಂಕಿಗೆ ಗುಂಡೂರಾವ್ ತುಪ್ಪ

ಪ್ರಖರ ಮಾತುಗಾರ ಕೃಷ್ಣ ಬೈರೇಗೌಡ

ಪ್ರಖರ ಮಾತುಗಾರ ಕೃಷ್ಣ ಬೈರೇಗೌಡ

ಸಂಯುಕ್ತ ಜನತಾದಳದಿಂದ ಕಾಂಗ್ರೆಸ್‌ ಸೇರ್ಪಡೆಯಾದ ಕೃಷ್ಣ ಬೈರೇಗೌಡ ಈಗ ಪಕ್ಷದ ನಿಷ್ಠಾವಂತ ನಾಯಕರಲ್ಲಿ ಒಬ್ಬರು. ತೀಕ್ಷ್ಣ ಮಾತುಗಾರರಾಗಿರುವ ಕೃಷ್ಣ ಬೈರೇಗೌಡ, ಕಾನೂನು ಹಾಗೂ ರಾಜಕೀಯ ಜ್ಞಾನವನ್ನು ಆಳವಾಗಿ ಅರಿತವರು. ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಮುನ್ನ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕೃಷ್ಣ ಬೈರೇಗೌಡ ಪ್ರಸ್ತಾಪಿಸಿದ್ದ ಸಂವಿಧಾನ ಹಾಗೂ ರಾಜಕೀಯದ ವಿಚಾರಗಳು ಚರ್ಚೆಯ ತೀವ್ರತೆಯನ್ನು ಹೆಚ್ಚಿಸಿದ್ದವು. ಪಕ್ಷದ ನಾಯಕತ್ವವನ್ನು ಯುವಕರಿಗೆ ವಹಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾದರೆ ಕೃಷ್ಣ ಬೈರೇಗೌಡ ಅವರಿಗೆ ಮೊದಲ ಆದ್ಯತೆ ಸಿಗಲಿದೆ. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಅವರಿಗಿದೆ.

ಈಶ್ವರ ಖಂಡ್ರೆಗೆ ಸಾರಥ್ಯ?

ಈಶ್ವರ ಖಂಡ್ರೆಗೆ ಸಾರಥ್ಯ?

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಈಶ್ವರ ಖಂಡ್ರೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಚೈತನ್ಯ ನೀಡಬಲ್ಲರು ಎಂಬ ನಂಬಿಕೆ ಪಕ್ಷದ್ದು. ಲಿಂಗಾಯತ ಮುಖಂಡರಾಗಿರುವುದು ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುವ ಅವಕಾಶ ಹೆಚ್ಚಿರುವುದಕ್ಕೆ ಮತ್ತೊಂದು ಕಾರಣ. ತಂದೆ ಭೀಮಣ್ಣ ಖಂಡ್ರೆ ಕೂಡ ಕಾಂಗ್ರೆಸ್‌ ಮುಖಂಡರಾಗಿದ್ದರು. ಸಮ್ಮಿಶ್ರ ಸರ್ಕಾರ ರಚನೆ ಹಾಗೂ ಅದನ್ನು ಉಳಿಸಿಕೊಳ್ಳುವ ಪ್ರಯತ್ನಗಳಲ್ಲಿ ಖಂಡ್ರೆ ಪ್ರಮುಖವಾಗಿ ಕಾಣಿಸಿಕೊಂಡಿದ್ದರು. ಪಕ್ಷಕ್ಕೆ ನಿಷ್ಠರಾಗಿರುವ ಕುಟುಂಬ ಎಂಬ ಕಾರಣಕ್ಕೆ ಅವರಿಗೆ ಮನ್ನಣೆ ದೊರಕುವ ಸಾಧ್ಯತೆ ಇದೆ.

ತಮಾಷೆಯ ಮಾತಲ್ಲ: ಸೋನಿಯಾ ಗಾಂಧಿಗೆ ಇದು ಅಕ್ಷರಶಃ ಕಬ್ಬಿಣದ ಕಡಲೆತಮಾಷೆಯ ಮಾತಲ್ಲ: ಸೋನಿಯಾ ಗಾಂಧಿಗೆ ಇದು ಅಕ್ಷರಶಃ ಕಬ್ಬಿಣದ ಕಡಲೆ

ಎಚ್ ಸಿ ಮಹದೇವಪ್ಪಗೆ ಮನ್ನಣೆ

ಎಚ್ ಸಿ ಮಹದೇವಪ್ಪಗೆ ಮನ್ನಣೆ

ದಲಿತ ನಾಯಕರಾಗಿರುವ ಮಾಜಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರನ್ನು ಕೂಡ ಕೆಪಿಸಿಸಿ ಜವಾಬ್ದಾರಿ ಹೊರುವ ಪ್ರಮುಖ ಹುದ್ದೆಗೆ ಪರಿಗಣಿಸಲಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್ ಸಿ ಮಹದೇವಪ್ಪ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅವರು ಚುನಾವಣಾ ರಾಜಕೀಯದಿಂದ ಹಿನ್ನೆಲೆಗೆ ಸರಿದು ತಮ್ಮ ಮಗನನ್ನು ರಾಜಕೀಯಕ್ಕೆ ತರುವ ಪ್ರಯತ್ನದಲ್ಲಿದ್ದಾರೆ. ಅವರ ಈ ನಿರ್ಧಾರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ತರುವ ಉದ್ದೇಶಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಅವರು ದಲಿತ ನಾಯಕರಾಗಿರುವುದು ಕೂಡ ಸಮುದಾಯದ ಮತಗಳನ್ನು ಸೆಳೆಯಲು ಅನುಕೂಲವಾಗಲಿದೆ ಎಂಬ ಚರ್ಚೆ ನಡೆಯುತ್ತಿದೆ.

English summary
Congress high command has decided to replace KPCC president Dinesh Gundu Rao before or after the by elections. Five names including DK Shivakumar is in the list for predentship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X