ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ರಾಜ್ಯ ನಾಯಕರ ಅಸಮಾಧಾನ!

|
Google Oneindia Kannada News

Recommended Video

ಕಾಂಗ್ರೆಸ್ ನಾಯಕರ ಅಸಮಾಧಾನ ಮೈತ್ರಿ ಸರ್ಕಾರದ ಸೋಲಿಗೆ ಕಾರಣ | Oneindia Kannada

ಲೋಕಸಭೆಗೆ ಚುನಾವಣೆ ನಡೆದಿದ್ದರೂ ಅದರ ಪರಿಣಾಮ ಕೆಲವು ರಾಜ್ಯಗಳಲ್ಲಿ ಅಲ್ಲಿನ ಸರಕಾರಗಳ ಮೇಲೆ ಬೀರಿದೆ ಎನ್ನುವುದನ್ನು ಇವತ್ತಿನ ಪರಿಸ್ಥಿತಿಗೆ ಅನುಗುಣವಾಗಿ ಒಪ್ಪಿಕೊಳ್ಳಲೇ ಬೇಕಾಗಿದೆ. ಈ ಪೈಕಿ ಕರ್ನಾಟಕದ ರಾಜಕೀಯ ಸ್ಥಿತಿ ಯಾವ ಮಟ್ಟಕ್ಕೆ ಬಂದು ನಿಲ್ಲಬಹುದು ಎಂಬುದು ಮಾತ್ರ ಊಹೆಗೆ ನಿಲುಕದಂತಾಗಿದೆ.

ಹಾಗೆ ನೋಡಿದರೆ ರಾಜ್ಯ ಸರಕಾರ ಆಡಳಿತದ ಚುಕ್ಕಾಣಿ ಹಿಡಿದು ಒಂದು ವರ್ಷವನ್ನು ಪೂರೈಸಿದೆ. ಈ ಒಂದು ವರ್ಷದ ಅವಧಿಯಲ್ಲಿ ಬೇಕಾದಷ್ಟು ರಾಜಕೀಯ ಬೆಳವಣಿಗೆಗಳು ನಡೆದಿವೆ. ಅತೃಪ್ತ ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಇನ್ನೇನು ಸರಕಾರ ಬಿದ್ದೇ ಹೋಯಿತು ಎನ್ನುವಾಗಲೇ ಮತ್ತೆ ಮೈತ್ರಿ ಸರಕಾರ ಎದ್ದು ನಿಂತಿದೆ.

ಇಂತಹ ಬೆಳವಣಿಗೆಗಳು ಹತ್ತಾರು ನಡೆದಿವೆ. ಆದರೆ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರದ ಬೆಳವಣಿಗೆ ಮಾತ್ರ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಆಡಳಿತ ನಡೆಸುತ್ತಿರುವ ದೋಸ್ತಿ ಸರಕಾರ ಮತ್ತು ವಿಪಕ್ಷವಾಗಿರುವ ಬಿಜೆಪಿಯಲ್ಲಿ ಮೇಲಿಂದ ಮೇಲೆ ಬೆಳವಣಿಗೆ ಆಗುತ್ತಲೇ ಇದ್ದು, ಈಗಿನ ಸ್ಥಿತಿಯಲ್ಲಿ ಅತೃಪ್ತ ಶಾಸಕರು ಇನ್ನು ಕಾಂಗ್ರೆಸ್‌ನಲ್ಲಿದ್ದರೆ ಉಳಿಗಾಲವಿಲ್ಲ. ಸೂಕ್ತ ಸಮಯದಲ್ಲಿಯೇ ಬಿಜೆಪಿಯತ್ತ ಮುಖ ಮಾಡಿದರೆ ರಾಜಕೀಯ ಭವಿಷ್ಯವನ್ನು ಗಟ್ಟಿ ಮಾಡಿಕೊಳ್ಳಬಹುದೆಂಬ ತೀರ್ಮಾನಕ್ಕೆ ಬಂದಿದ್ದಾರೆ ಏನೋ ಎಂಬಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಕುತೂಹಲ ಮೂಡಿಸಿದ ಎಸ್‌.ಎಂ.ಕೃಷ್ಣ, ರಮೇಶ್ ಜಾರಕಿಹೊಳಿ ಭೇಟಿಕುತೂಹಲ ಮೂಡಿಸಿದ ಎಸ್‌.ಎಂ.ಕೃಷ್ಣ, ರಮೇಶ್ ಜಾರಕಿಹೊಳಿ ಭೇಟಿ

ರಾಷ್ಟ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸುನಾಮಿ ಮುಂದೆ ಆ ಪಕ್ಷವನ್ನು ವಿರೋಧಿಸುತ್ತಾ ಬಂದಿದ್ದ ವಿರೋಧ ಪಕ್ಷಗಳೆಲ್ಲವೂ ಮಕಾಡೆ ಮಲಗಿರುವಾಗ ಕಾಂಗ್ರೆಸ್‌ ನಲ್ಲಿದ್ದು ಮಾಡುವುದೇನು ಎಂಬ ಚಿಂತೆಯಲ್ಲಿ ಹಲವು ಶಾಸಕರಿದ್ದಾರೆ.

ತಳ ಮಟ್ಟದ ಕಾರ್ಯಕರ್ತರು, ನಾಯಕರು ಒಪ್ಪಲು ಸಾಧ್ಯವಿಲ್ಲ

ತಳ ಮಟ್ಟದ ಕಾರ್ಯಕರ್ತರು, ನಾಯಕರು ಒಪ್ಪಲು ಸಾಧ್ಯವಿಲ್ಲ

ಇಂತಹ ಸಂಕಷ್ಟ ಕಾಲದಲ್ಲಿ ಜತೆಗಿದ್ದು, ಮೈತ್ರಿ ಸರಕಾರವನ್ನು ಉಳಿಸಿಕೊಳ್ಳುತ್ತಿದ್ದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಸದ್ಯ ವಿದೇಶದಲ್ಲಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಮರಳಿದರೂ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಅತೃಪ್ತ ಶಾಸಕರಿಲ್ಲ ಎನ್ನುವುದಂತೂ ಸತ್ಯ. ಇವತ್ತಿನ ಕಾಂಗ್ರೆಸ್‌ನ ಈ ಹೀನಾಯ ಸ್ಥಿತಿಗೆ ಕಾರಣಕರ್ತರು ಯಾರು ಎಂಬ ಪ್ರಶ್ನೆಗಳಿಗೆ ಕಾಂಗ್ರೆಸ್‌ ನಲ್ಲಿ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಮೇಲ್ಮಟ್ಟದ ತನಕದ ನಾಯಕರು ಜೆಡಿಎಸ್ ನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಅತ್ತ ಜೆಡಿಎಸ್ ನವರು ಕೂಡ ಕಾಂಗ್ರೆಸ್‌ನಿಂದಲೇ ನಮಗೆ ಹಿನ್ನಡೆಯಾಯಿತು ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಎರಡೂ ಪಕ್ಷಗಳು ಸಾಂಪ್ರದಾಯಿಕ ವಿರೋಧಿಗಳು. ಹೀಗಾಗಿ ಇವರಿಬ್ಬರು ಮೇಲ್ಮಟ್ಟದಲ್ಲಿ ಅಧಿಕಾರದ ಆಸೆಗಾಗಿ ಕೂಡಾವಳಿ ಮಾಡಿಕೊಂಡರೆ ಅದನ್ನು ತಳಮಟ್ಟದಲ್ಲಿರುವ ಕಾರ್ಯಕರ್ತರು, ನಾಯಕರು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬುದು ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಒಂದು ವೇಳೆ ಹಠಕ್ಕೆ ಬಿದ್ದು ಹತ್ತಾರು ತಂತ್ರಗಳನ್ನು ಮಾಡಿ, ಸರಕಾರವನ್ನು ಉಳಿಸಿಕೊಂಡರೂ ರಾಜ್ಯದ ಅಭಿವೃದ್ಧಿ ಮಾತ್ರ ಶೂನ್ಯವಾಗಲಿದೆ.

ಎರಡೂ ಪಕ್ಷಗಳು ಬೆಲೆ ತೆರಬೇಕಾಗಬಹುದು

ಎರಡೂ ಪಕ್ಷಗಳು ಬೆಲೆ ತೆರಬೇಕಾಗಬಹುದು

ಇದು ರಾಜ್ಯದ ಜನತೆ ಮೇಲೆ ಪರಿಣಾಮ ಬೀರಿ, ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳು ಭಾರೀ ಬೆಲೆ ತೆರಬೇಕಾಗಿ ಬರಬಹುದು ಎಂಬ ಸೂಕ್ಷ್ಮತೆಯೂ ಬಹಳಷ್ಟು ನಾಯಕರಿಗೆ ಗೊತ್ತಾಗಿದೆ. ಹೀಗಾಗಿಯೇ ಮೈತ್ರಿ ಸರಕಾರದಿಂದ ಕಳಚಿಕೊಂಡು ಹೊರಬರಲು ತುದಿಗಾಲಿನಲ್ಲಿ ನಿಂತಿದ್ದಾರೆ ಎನ್ನಲಾಗುತ್ತಿದೆ. ಇಡೀ ಕರ್ನಾಟಕದಲ್ಲಿ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ನ ಮಾನ ಉಳಿಸಿದ್ದರೆ ಅದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ಮಾತ್ರ. ಇದೇ ಕ್ಷೇತ್ರದ ಕಾಂಗ್ರೆಸ್ ಹಿರಿಯ ಮುಖಂಡರೂ ಆದ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರು ರಾಜ್ಯ ಕಾಂಗ್ರೆಸ್‌ನ ನಾಯಕರ ಕುರಿತಂತೆ ಆಡಿರುವ ಮಾತುಗಳು ತಳ ಮಟ್ಟದ ನಾಯಕರಲ್ಲಿ ಎಷ್ಟೊಂದು ಅಸಮಾಧಾನವಿದೆ ಮತ್ತು ಅವರು ದೋಸ್ತಿ ಸರಕಾರದ ವಿರುದ್ಧವಾಗಿದ್ದಾರೆ ಎನ್ನುವುದನ್ನು ಸಾರಿ ಹೇಳುತ್ತಿದೆ.

ಜೆಡಿಎಸ್ ಗೆ ಆರ್ಥಿಕ, ರಾಜಕೀಯ ಶಕ್ತಿ ತುಂಬುತ್ತಿದ್ದಾರೆ

ಜೆಡಿಎಸ್ ಗೆ ಆರ್ಥಿಕ, ರಾಜಕೀಯ ಶಕ್ತಿ ತುಂಬುತ್ತಿದ್ದಾರೆ

ಕಾಂಗ್ರೆಸ್ ಹಿರಿಯ ಮುಖಂಡ ಸಿ.ಎಂ.ಲಿಂಗಪ್ಪನವರು ಹೇಳಿರುವ ಪ್ರಕಾರ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡ ಪರಿಣಾಮವಾಗಿ ಹೀನಾಯ ಸ್ಥಿತಿಗೆ ತಲುಪಿದೆಯಂತೆ. ಮೈತ್ರಿ ಸರಕಾರದ ಮೇಲಿನ ಅತೃಪ್ತಿ, ಅಸಮಾಧಾನವನ್ನು ಲೋಕಸಭಾ ಚುನಾವಣಾ ಫಲಿತಾಂಶದ ಮೂಲಕ ಜನರು ಹೊರಹಾಕಿದ್ದು, ಸೂಕ್ತ ಉತ್ತರ ನೀಡಿದ್ದಾರೆ. ಮುಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆಯಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ರಾಜ್ಯ ನಾಯಕರು ಅರ್ಥ ಮಾಡಿಕೊಂಡು ಸೂಕ್ತ ನಿರ್ಧಾರ ಪ್ರಕಟಿಸಬೇಕು ಎಂಬ ಸಲಹೆಯನ್ನು ಇದೇ ಸಂದರ್ಭ ಅವರು ನೀಡಿದ್ದಾರೆ. ರಾಜ್ಯದ ಕಾಂಗ್ರೆಸ್ ನಾಯಕರು ಬಹಳ ಬುದ್ಧಿವಂತರಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಆಗುತ್ತಿರುವ ನಷ್ಟವನ್ನು ತಿಳಿಯದೆ ಪರೋಕ್ಷವಾಗಿ ಜೆಡಿಎಸ್ ಗೆ ಆರ್ಥಿಕವಾಗಿ, ರಾಜಕೀಯವಾಗಿ ಶಕ್ತಿ ತುಂಬುತ್ತಿದ್ದಾರೆ. ಇದೇ ರೀತಿ ನಾಯಕರ ವರ್ತನೆ ಮುಂದುವರೆದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಾಮಾವಶೇಷ ಆಗುವುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ.

ಕಳಪೆ ಫಲಿತಾಂಶಕ್ಕೆ ಜನವಿರೋಧಿ ಮೈತ್ರಿ ಕಾರಣ

ಕಳಪೆ ಫಲಿತಾಂಶಕ್ಕೆ ಜನವಿರೋಧಿ ಮೈತ್ರಿ ಕಾರಣ

ಪಕ್ಷದ ಅಸ್ತಿತ್ವ ಉಳಿವಿಗಾಗಿ ಜನರ ಜೊತೆ ಬೆರೆತು ಕಷ್ಟ- ಕಾರ್ಪಣ್ಯಗಳಲ್ಲಿ ಭಾಗಿಯಾಗಬೇಕು, ವಿರೋಧ ಪಕ್ಷದಲ್ಲಿ ಕುಳಿತು ಪಕ್ಷದ ಸಂಘಟನೆಯನ್ನು ಚುರುಕುಗೊಳಿಸುವ ಕೆಲಸ ಮೊದಲು ಮಾಡಬೇಕು ಎನ್ನುವ ಮೂಲಕ ಜೆಡಿಎಸ್ ಮೈತ್ರಿಯಿಂದ ಹೊರಬನ್ನಿ ಎಂಬ ಸಂದೇಶವನ್ನು ಪರೋಕ್ಷವಾಗಿ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಾಗಿನಿಂದ ನಾನು ವಿರೋಧಿಸುತ್ತಾ ಬಂದಿದ್ದೇನೆ. ಆದರೆ ಯಾವ ನಾಯಕರಿಗೂ ಅರ್ಥವಾಗುತ್ತಿಲ್ಲ. ಆ ದುರದೃಷ್ಠದ ಫಲವಾಗಿ ಈಗ ಕಾಂಗ್ರೆಸ್ ಪಕ್ಷ ಶೋಚನೀಯ ಸ್ಥಿತಿಗೆ ಬಂದಿದೆ, ಸ್ವಾತಂತ್ರ್ಯಾ ನಂತರದಲ್ಲಿ ನಡೆದ ಯಾವ ಚುನಾವಣೆಯಲ್ಲೂ ಈ ರೀತಿಯ ಕಳಪೆ ಫಲಿತಾಂಶ ಬಂದಿರಲಿಲ್ಲ. ಇದಕ್ಕೆ ಜನವಿರೋಧಿ ಮೈತ್ರಿಯೇ ಕಾರಣ. ವಿಧಾನ ಪರಿಷತ್ ಸದಸ್ಯನಾಗಿ ಪ್ರತಿನಿಧಿಸುತ್ತಿರುವ ನಾನು ಮೈತ್ರಿಕೂಟದ ವಿರುದ್ಧ ಬೇಸತ್ತು ರಾಜೀನಾಮೆ ನೀಡುವ ಹಂತಕ್ಕೂ ಯೋಚನೆ ಮಾಡಿದ್ದೆ. ಆದರೆ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿದ್ದು, ಪಕ್ಷ ಮತ್ತು ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯುಂಟಾದರೆ ಸಹಿಸುವ ಪ್ರಶ್ನೆಯೇ ಇಲ್ಲ. ಸ್ಥಳೀಯನಾಗಿರುವ ನನ್ನನ್ನು ನಿರ್ಲಕ್ಷಿಸಿ ಆಕಾಶದಲ್ಲಿ ಹಾರಾಡುವವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿಕೊಂಡ ಫಲವಾಗಿ ಇಂದು ರಾಮನಗರದ ಕ್ಷೇತ್ರದ ಜನತೆ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ.

ಮಂಡ್ಯದ ಸೋಲು- ಸರಕಾರದ ಸೋಲು

ಮಂಡ್ಯದ ಸೋಲು- ಸರಕಾರದ ಸೋಲು

ಮುಂದುವರೆದು ಮಾತನಾಡಿರುವ ಅವರು, ಮಂಡ್ಯ ಲೋಕಸಭಾ ಕ್ಷೇತ್ರವು ಇಡೀ ದೇಶದ ಜನರನ್ನು ಸೆಳೆಯುವ ಮೂಲಕ ಚುನಾವಣೆಯಲ್ಲಿ ಬಹಳ ಸುದ್ದಿ ಮಾಡಿತ್ತು. ಅಲ್ಲಿ ಎರಡು ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಪುತ್ರ ನಿಖಿಲ್ ಸ್ಪರ್ಧಿಸಿದ್ದರು. ಆದರೆ ಒಬ್ಬ ಹೆಣ್ಣು ಮಗಳು ನಿಖಿಲ್ ವಿರುದ್ಧ ಜಯ ಗಳಿಸಿರುವುದು ಸರ್ಕಾರದ ಸೋಲು ಎಂದು ಟೀಕಿಸಿದರಲ್ಲದೆ, ಸುಮಲತಾ ಅವರಿಗೆ ಬೆಂಬಲ ನೀಡಿದ ಎಲ್ಲ ಪಕ್ಷದ ಮುಖಂಡರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಎಂ.ಲಿಂಗಪ್ಪ ಅವರ ಈ ಮಾತುಗಳು ಅ ಪಕ್ಶದಲ್ಲಿ ಎಲ್ಲವೂ ಸರಿಯಿಲ್ಲ. ಅತೃಪ್ತಿ, ಅಸಮಾಧಾನ ಒಳಗೊಳಗೆ ಹೊಗೆಯಾಡುತ್ತಿದೆ ಎಂಬುದನ್ನು ತೋರಿಸುತ್ತಿದೆ. ಇದೆಲ್ಲವೂ ಎಲ್ಲಿಗೆ ಬಂದು ನಿಲ್ಲುತ್ತದೆಯೋ ಗೊತ್ತಿಲ್ಲ. ಆದರೆ ಬಲಿ ಪಶುಗಳಾಗುತ್ತಿರುವುದು ಮಾತ್ರ ರಾಜ್ಯದ ಜನತೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.

English summary
After miserable defeat in lok sabha elections by Congress, Karnataka leaders express their displeasure over coalition with JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X