ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿ ಲೇಡಿ ಇನ್ ಕಾಟನ್ ಸ್ಯಾರಿ: ಸೋನಿಯಾ ಗಾಂಧಿ ನಿಜಕ್ಕೂ ಯಾರು?

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಅದು ಮೇ 18, 2004.
ಬಿಳಿ ಬಣ್ಣದ ಅಂಬಾಸಡರ್ ಕಾರ್ ನಲ್ಲಿ ಪಾರ್ಲಿಮೆಂಟ್ ಅಂಗಳಕ್ಕೆ ಬಂದಿಳಿದ ಸೋನಿಯಾ ಗಾಂಧಿ ಗುಲಾಬಿ ಬಣ್ಣದ ಬಾರ್ಡರ್ ಹೊಂದಿದ್ದ ಬಿಳಿ ಬಣ್ಣದ ಕಾಟನ್‌ ಸೀರೆ ಉಟ್ಟಿದ್ದರು. ಕಾರಿಂದ ಇಳಿದು ನಾಲ್ಕು ಹೆಜ್ಜೆ ನಡೆದು ಬರುತ್ತಿದ್ದಂತೆ ಮಾಧ್ಯಮಗಳ ಮೈಕ್ ಗಳ ಸಾಲು ಅವರಿಗೆ ಎದುರಾದವು. ಎಡಕ್ಕೆ ಬಂದು ನಿಂತರು ಮನಮೋಹನ್ ಸಿಂಗ್.

ಮೇಡಂ ಜೀ..ಮೇಡಂ ಜೀ ಎಂದು ಪತ್ರಕರ್ತರು ಕೂಗುತ್ತಿದ್ದಂತೆ, "ಯಸ್‌...ಯಸ್‌..." ಎಂದು ಮಾತು ಶುರು ಮಾಡಿದರು ಅವತ್ತಿಗೆ 57 ವರ್ಷದ ಸೋನಿಯಾ ಗಾಂಧಿ. "ನಾನು ಪ್ರಧಾನಿ ಮಂತ್ರಿ ಹುದ್ದೆಯ ಆಕಾಂಕ್ಷಿ ಅಲ್ಲ..." ಎಂದು ಯಾರೂ ನಿರೀಕ್ಷೆಯೇ ಮಾಡದಿದ್ದ ಹೇಳಿಕೆಯೊಂದು ಹಾಗೆ ಹೊರಗೆ ಬಿದ್ದಿತ್ತು.

ಸೋನಿಯಾ ಗಾಂಧಿ ಮತ್ತೆ ಅಧ್ಯಕ್ಷೆ: ಆಯ್ಕೆಗೆ ಕಾರಣವೇನು? ಸೋನಿಯಾ ಗಾಂಧಿ ಮತ್ತೆ ಅಧ್ಯಕ್ಷೆ: ಆಯ್ಕೆಗೆ ಕಾರಣವೇನು?

ಈ ಘಟನೆ ನಡೆಯುವುದಕ್ಕೆ ಕೇವಲ 6 ವರ್ಷಗಳ ಹಿಂದಷ್ಟೆ ಭಾರತದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್‌ನ ಅಧ್ಯಕ್ಷೆಯಾಗಿ ಇಟಲಿ ಮೂಲದ ಸೋನಿಯಾ ಗಾಂಧಿ ಹೊಣೆಗಾರಿಕೆ ಹೊತ್ತುಕೊಂಡಿದ್ದರು. ಇನ್ನೇನು ಪುರಾತನ ಪಕ್ಷ ಒಗ್ಗಟ್ಟಿನ ನಾಯಕತ್ವ ಇಲ್ಲದೆ ನಿರ್ನಾಮವಾಗುತ್ತದೆ ಎಂಬ ವಿಶ್ಲೇಷಣೆಗಳಿದ್ದ ಸಮಯದಲ್ಲಿ ಸೋನಿಯಾ ಒಲ್ಲದ ಮನಸ್ಸಿನಿಂದಲೇ ವಹಿಸಿಕೊಂಡ ಜವಾಬ್ದಾರಿ ಇದಾಗಿತ್ತು.

Congress Interim President Sonia Gandhi; New Responsibility At The Age of 72

ಮಧ್ಯಪ್ರದೇಶ ಚುನಾವಣೆಯಿಂದ ಹಿಡಿದು 2004ರಲ್ಲಿ ನಡೆದ ಲೋಕಸಭಾ ಚುನಾವಣೆವರೆಗೆ ಕಾಂಗ್ರೆಸ್ ಪಕ್ಷವನ್ನು ಅವರು ಮುನ್ನಡೆಸಿದ್ದರು. ಅವರ ನೇತೃತ್ವದ ಕಾಂಗ್ರೆಸ್ ಹಾಗೂ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಹಂತಕ್ಕೆ ಕೊಂಡೊಯ್ದಿದ್ದರು. ಸಹಜವಾಗಿಯೇ ಸೋನಿಯಾ ಗಾಂಧಿ ಭಾರತದ ಪ್ರಧಾನಿ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಕಾರಣಕ್ಕೆ ಮಾಧ್ಯಮಗಳು ಮೇಡಂ ಜೀ...ಮೇಡಂ ಜೀ ಎಂದು ಸೋನಿಯಾ ಪ್ರತಿಕ್ರಿಯೆಗೆ ಕಾತರವಾಗಿದ್ದವು.

ಉತ್ತರಾಧಿಕಾರಿ ಆಯ್ಕೆ ವಿಫಲ, ಸೋನಿಯಾಗೆ ಮತ್ತೆ ಸಾರಥ್ಯ! ಉತ್ತರಾಧಿಕಾರಿ ಆಯ್ಕೆ ವಿಫಲ, ಸೋನಿಯಾಗೆ ಮತ್ತೆ ಸಾರಥ್ಯ!

ಸೋನಿಯಾ ಲಾವೋ ದೇಶ್ ಬಚಾವೋ:
'ಸೋನಿಯಾ ಲಾವೋ... ದೇಶ್ ಬಚಾವೋ' ಎಂಬ ಘೋಷಣೆ ಅವತ್ತು ಇಡೀ ದೇಶಾದ್ಯಂತ ಕೇಳಿತ್ತು. ದಿಲ್ಲಿಯ ಕಾಂಗ್ರೆಸ್ ಕಚೇರಿ ಎದುರಿಗೆ ನಡೆದ ಪ್ರತಿಭಟನೆಯಲ್ಲಿ ವ್ಯಕ್ತಿಯೊಬ್ಬ ತಲೆಗೆ ಪಿಸ್ತೂಲು ಹಿಡಿದುಕೊಂಡು ಗುಂಡು ಹೊಡೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ಇನ್ನೊಂದು ಹಿರಿಯ ಜೀವ ಮರ ಏರಿ ಕುಳಿತು, ''ಸೋನಿಯಾ ಪ್ರಧಾನಿಯಾಗಲಿ," ಎಂದು ಘೋಷಣೆ ಕೂಗಲು ಶುರು ಮಾಡಿತ್ತು.

ಸೋನಿಯಾ ಗಾಂಧಿ ಸಂಸತ್‌ಗೆ ಬಂದಾಗ ಕಾಂಗ್ರೆಸ್‌ನಿಂದ ಆಯ್ಕೆಯಾದ ಎಂಪಿಗಳು, 'ನೀವೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಬೇಕು' ಎಂದು ದುಂಬಾಲು ಬಿದ್ದಿದ್ದರು.

Congress Interim President Sonia Gandhi; New Responsibility At The Age of 72

ಅವತ್ತಿಗೆ ಇವೆಲ್ಲವನ್ನೂ ವರದಿ ಮಾಡಿದ ಅಮೆರಿಕಾ ಮೂಲಕ ಸುದ್ದಿಸಂಸ್ಥೆ ಎಪಿ, ಪಕ್ಕದ ಪಾಕಿಸ್ತಾನದಲ್ಲೂ ಜನರ ಪ್ರತಿಕ್ರಿಯೆ ಪಡೆದುಕೊಂಡಿತ್ತು. "ವ್ಯಕ್ತಿಗಳು ಬದಲಾದರೆ ವ್ಯವಸ್ಥೆ ಬದಲಾಗುವುದಿಲ್ಲ. ಆದರೂ ವಾಜಪೇಯಿ ಕಾಲದಲ್ಲಿ ಸಂಬಂಧ ಬೆಸೆಯುವ ಕೆಲಸ ಶುರುವಾಗಿದೆ. ಅದನ್ನು ಸೋನಿಯಾ ಅಥವಾ ಇನ್ಯಾರೇ ಪ್ರಧಾನಿಯಾದರೂ ಮುಂದುವರಿಸಬೇಕು,'' ಎಂದು ಪಾಕ್‌ ಪ್ರಜೆಯೊಬ್ಬರು ಹೇಳಿಕೆ ನೀಡಿದ್ದರು.

ಹಳೆ ಕಟ್ಟಡ ಕಾಂಗ್ರೆಸ್ ಗೆ ಹೊಸ ಎಂಜಿನಿಯರ್ ರಾಹುಲ್ ಗಾಂಧಿ ಹಳೆ ಕಟ್ಟಡ ಕಾಂಗ್ರೆಸ್ ಗೆ ಹೊಸ ಎಂಜಿನಿಯರ್ ರಾಹುಲ್ ಗಾಂಧಿ

ಪ್ರಧಾನಿ ಹುದ್ದೆ ಧಿಕ್ಕರಿಸಿದ್ದ ಸೋನಿಯಾ:
ಒಂದು ಕಡೆ ಕಾಂಗ್ರೆಸ್ 'ಸೋನಿಯಾ ಲಾವೋ, ದೇಶ್ ಬಚಾವೋ' ಎಂದು ಘೋಷಣೆ ಕೂಗುತ್ತಿತ್ತು. ಬಿಜೆಪಿ ಬೇರೆಯದೇ ಅಜೆಂಡಾ ಮುಂದಿಟ್ಟಿತ್ತು. ಭಾರತೀಯ ಸಂಜಾತೆಯಲ್ಲದ ಸೋನಿಯಾ ಗಾಂಧಿ ಪ್ರಧಾನಿಯಾಗಬಾರದು ಎಂದು ಒತ್ತಾಯಿಸಿತ್ತು. ಸುಷ್ಮಾ ಸ್ವರಾಜ್, 'ತಲೆ ಬೋಳಿಸಿಕೊಳ್ಳುತ್ತೇನೆ' ಎಂಬ ಹೇಳಿಕೆ ನೀಡಿದ ಸಂದರ್ಭ ಇದು.

ಹೀಗೆ ಪರ- ವಿರೋಧದ ನಡುವೆಯೇ ಸೋನಿಯಾ ಮಾತ್ರ ಪ್ರಧಾನಿ ಹುದ್ದೆಯ ಆಕಾಂಕ್ಷಿ ನಾನಲ್ಲ ಎನ್ನುವ ಮೂಲಕ ಪರಂಪರಾಗತವಾಗಿ ಗಾಂಧಿ ಕುಟುಂಬದವರನ್ನೇ ಕಾಣುತ್ತ ಬಂದ ಕುರ್ಚಿಯನ್ನು ಧಿಕ್ಕರಿಸಿದ್ದರು. 'ಭಾರತದ ಮುಂದಿನ ಪ್ರಧಾನಿ ಎಂದೇ ಬಿಂಬಿತರಾಗಿದ್ದ ಸೋನಿಯಾ ಗಾಂಧಿ ವಿನಯಪೂರ್ವಕವಾಗಿ ಹುದ್ದೆ ಧಿಕ್ಕರಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ' ಎಂದು ಅವತ್ತಿನ ವರದಿಯನ್ನು ಆರಂಭಿಸಿತ್ತು 'ದಿ ಗಾರ್ಡಿಯನ್'.

Congress Interim President Sonia Gandhi; New Responsibility At The Age of 72

ಇವೆಲ್ಲವೂ ನಡೆದು ಇವತ್ತಿಗೆ ಸುಮಾರು 15 ವರ್ಷಗಳು ಕಳೆದು ಹೋಗಿವೆ. ಸೋನಿಯಾ ಗಾಂಧಿ ಯಾರು ಎಂದು ಸುಮ್ಮನೆ ಹುಡುಕಿದರೆ ಅವರ ಬದುಕಿನ ಕುರಿತು ಬಂದ ಹಲವು ಪುಸ್ತಕಗಳಲ್ಲಿ ದೊಡ್ಡ ಪ್ರಮಾಣದ ಮಾಹಿತಿ ಗುಚ್ಛವೇ ಸಿಗುತ್ತದೆ. ಎಲ್ಲಾ ಜನಪ್ರಿಯ ರಾಜಕಾರಣಿಗಳಂತೆ ಸೋನಿಯಾ ಗಾಂಧಿ ಅವರ ಬದುಕಿನ ಖಾಸಗಿ ವಿಚಾರಗಳು, ರಾಜಕೀಯ ಬದುಕಿನ ಹಾದಿಗಳನ್ನು ದಾಖಲಿಸಲಾಗಿದೆ.

ಆದರೆ, ದೇಶ ನಡೆಸುವ ಅಧಿಕಾರವನ್ನು ತ್ಯಾಗ ಮಾಡಿದ ಇದೊಂದು ಅಧ್ಯಾಯ ಮಾತ್ರ ಉಳಿದ ಎಲ್ಲಾ ರಾಜಕಾರಣಿಗಳಿಂದ ಭಿನ್ನವಾಗಿ ಸೋನಿಯಾ ಗಾಂಧಿ ಬದುಕಿನಲ್ಲಿ ಮಾತ್ರವೇ ಸಿಗುತ್ತದೆ.

ಆಸ್ತಿಯ ಮೌಲ್ಯ 20 ಕೋಟಿ ದಾಟುವುದಿಲ್ಲ:
ಇವತ್ತಿಗೆ ಸೋನಿಯಾ ಗಾಂಧಿ ಎಂದು ಸುಮ್ಮನೆ ಗೂಗಲ್ ಮಾಡಿದರೆ, 'ಸೋನಿಯಾ ಗಾಂಧಿ ದೇಶದ 4ನೇ ಶ್ರೀಮಂತ ಮಹಿಳೆ' ಎಂಬ ಕೀ ವರ್ಡ್‌ ತಾನೇತಾನಾಗಿ ಎದುರಿಗೆ ಬರುತ್ತದೆ. ಅವತ್ತು ಅಳಿವಿನಂಚಿನಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಕೈಗೆತ್ತಿಕೊಂಡು, ಅಧಿಕಾರದ ಹೊಸ್ತಿಲಿಗೆ ತಂದು ನಿಲ್ಲಿಸಿ, ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿ, ಹೊರಗೇ ಉಳಿದುಕೊಂಡ ಸೋನಿಯಾ ಸುತ್ತ ನಡೆದುಕೊಂಡ ಬಂದ ಅಪಪ್ರಚಾರಗಳ ಫಲ ಇದು.

Congress Interim President Sonia Gandhi; New Responsibility At The Age of 72

ಸೋನಿಯಾ ಗಾಂಧಿ ಆಸ್ತಿ ವಿಚಾರದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಜಾಯಮಾನದ ವ್ಯಕ್ತಿತ್ವ ಅಲ್ಲ. ಅವರೇ ಘೋಷಿಸಿಕೊಂಡ ಪ್ರಕಾರ, ಸೋನಿಯಾ ಬಳಿ ಇರುವ ಆಸ್ತಿಯ ಮೌಲ್ಯ 20 ಕೋಟಿ ದಾಟುವುದಿಲ್ಲ. ಹೀಗಿರುವಾಗ ಆಕೆ ಹೇಗೆ ದೇಶದ ಶ್ರೀಮಂತ ಮಹಿಳೆಯಾಗುತ್ತಾಳೆ?

ಈ ವಿಚಾರವನ್ನು ಇಟ್ಟುಕೊಂಡು ವರದಿ ಮಾಡಿದ್ದ ಕನ್ನಡ ನ್ಯೂಸ್‌ ಪೋರ್ಟಲ್ ಒಂದರಲ್ಲಿ ಮೊದಲ ಐದಾರು ಪ್ಯಾರಗಳ ತುಂಬ ಸೋನಿಯಾ ಶ್ರೀಮಂತೆ ಎಂದು ಬರೆಯಲಾಗಿತ್ತು. ಕೊನೆಯ ವಾಕ್ಯದಲ್ಲಿ ಮಾತ್ರವೇ, 'ತನಿಖೆಯ ನಂತರ ಇದು ಸುಳ್ಳು ಎಂದು ಗೊತ್ತಾಗಿದೆ' ಎಂದು ಸೇರಿಸಲಾಗಿತ್ತು. ಸಾಲದ್ದಕ್ಕೆ ಇದನ್ನು 'ವೈರಲ್ ಚೆಕ್' ಎಂದೂ ಕರೆದುಕೊಳ್ಳಲಾಗಿತ್ತು.

ಎಲ್ಲಿಂದಲೋ ಬಂದವರು; ಭಾರತೀಯತೆಯನ್ನು ಕಂಡುಕೊಂಡರು:
ಸೋನಿಯಾ ಗಾಂಧಿ ಇಟಲಿ ಮೂಲದ ಕುಟುಂಬದಲ್ಲಿ ಹುಟ್ಟಿದವರು. ಇಂಗ್ಲೆಂಡ್‌ಗೆ ಬಂದಾಗ ಓದಲು ಬಂದಿದ್ದ ಅವತ್ತಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ಮಗ ರಾಜೀವ್‌ ಗಾಂಧಿಗೆ ಪರಿಚಯವಾದರು. ಹದಿಹರೆಯವರ ನಡುವೆ ಅಂತಸ್ತು ಮೀರಿದ ಸ್ನೇಹ ಪ್ರೀತಿಯಾಗಿ ಬದಲಾಯಿತು. ವಿಷಯ ಇಂದಿರಾ ಗಾಂಧಿಗೆ ಗೊತ್ತಾದಾಗ ತಮ್ಮ ಭಾವಿ ಸೊಸೆಯನ್ನು ಹೈಕಮಿಷನರ್ ಕಚೇರಿಯಲ್ಲಿಯೇ ಭೇಟಿಯಾದರು.

Congress Interim President Sonia Gandhi; New Responsibility At The Age of 72

ಮುಂದಿನ 2 ವರ್ಷಗಳ ನಂತರ ಸೋನಿಯಾ- ರಾಜೀವ್ ಗಾಂಧಿ ಮದುವೆ ನಡೆಯಿತು. ಅವತ್ತಿಗೆ ಹಿಂದಿ ಇರಲಿ, ಸರಿಯಾದ ಇಂಗ್ಲಿಷ್ ಕೂಡ ಸೋನಿಯಾ ಮಾತನಾಡುತ್ತಿರಲಿಲ್ಲ. ಇಂದಿರಾ ಗಾಂಧಿ ಅವರು ಸೊಸೆಯ ಜತೆ ಫ್ರೆಂಚ್‌ನಲ್ಲಿಯೇ ಮಾತುಕತೆ ನಡೆಸುತ್ತಿದ್ದರು ಎನ್ನುತ್ತದೆ ಅವರ ಕುರಿತಾಗಿ ಬಂದ 'ರೆಡ್ ಸ್ಯಾರಿ' ಅನ್ನುವ ಪುಸ್ತಕ.

ಇಂತಹ ಸೋನಿಯಾ ಮುಂದೆ ಹಿಂದಿ ಕಲಿಯುತ್ತಾರೆ. ರಾಜಕಾರಣದಿಂದ ದೂರವೇ ಉಳಿಯುತ್ತಾರೆ. ಇಂದಿರಾ ಬದುಕಿರುವಾಗಲೇ ಸಂಜಯ್‌ ಗಾಂಧಿ ಅಕಾಲಿಕ ಸಾವಾಗುತ್ತದೆ. ಅತ್ತೆ ಇಂದಿರಾ ಕೊಲೆಯಾಗುತ್ತದೆ. ಸಿಖ್‌ ನರಮೇಧ ನಡೆಯುತ್ತದೆ. ಮುಂದೆ ರಾಜೀವ್ ಗಾಂಧಿ ಪೈಲಟ್ ಕೆಲಸ ಬಿಟ್ಟು ಕಾಂಗ್ರೆಸ್ ಹೊಣೆಗಾರಿಕೆ ವಹಿಸಿಕೊಳ್ಳುತ್ತಾರೆ. ಪ್ರಧಾನಿ ಆಗುತ್ತಾರೆ. ಈ ಸಮಯದಲ್ಲಿ ಗಂಡ ಲೋಕಸಭಾ ಕ್ಷೇತ್ರದಲ್ಲಿ 'ಚಾರಿಟಿ' ಮಾದರಿಯ ಕೆಲಸ ಮಾಡಿಕೊಂಡು ತೆರೆಮರೆಯಲ್ಲೇ ಉಳಿಯುತ್ತಾರೆ ಸೋನಿಯಾ.

ಎಲ್ಲೋ ಕೆಲವು ಕಡೆ ಗಂಡನ ಜತೆ ವಿದೇಶ ಪ್ರವಾಸಗಳನ್ನು ಈ ಸಮಯದಲ್ಲಿ ಕೈಗೊಂಡಿದ್ದು ಬಿಟ್ಟರೆ ಸೋನಿಯಾ 'ಟಿಪಿಕಲ್ ಇಂಡಿಯನ್ ಹೌಸ್‌ ವೈಫ್' ಆಗಿ ಮಾರ್ಪಾಡಾಗುತ್ತಾರೆ. ಇಂತಹ ಸಮಯದಲ್ಲೇ ಗಂಡ ರಾಜೀವ್‌ ಗಾಂಧಿ ಹತ್ಯೆಯ ಭೀಕರವಾದ ಸುದ್ದಿ ಬರುತ್ತದೆ. ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ರಾಜೀವ್ ಗಾಂಧಿ 1991ರ ಮೇ ತಿಂಗಳಿನಲ್ಲಿ ಎಲ್‌ಟಿಟಿಇ ಆತ್ಮಾಹುತಿ ಬಾಂಬ್ ದಾಳಿಗೆ ಬಲಿಯಾಗುತ್ತಾರೆ.

ಸಾಲು ಸಾವುಗಳಿಂದಾಗಿ ಅಮ್ಮನ ಭವಿಷ್ಯದ ಬಗ್ಗೆ ಭಯ:
ಇದಾದ ನಂತರವೂ ಸುಮಾರು 8 ವರ್ಷಗಳ ಕಾಲ ಸೋನಿಯಾ ರಾಜಕೀಯದಿಂದ ದೂರವೇ ಉಳಿಯುತ್ತಾರೆ. ಆದರೆ 1998ರ ಸುಮಾರಿಗೆ ಪಕ್ಷದ ನಾಯಕರ ಒತ್ತಾಯದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹೊಣೆಗಾರಿಕೆಯನ್ನು ಕೈಗೆತ್ತಿಕೊಳ್ಳುತ್ತಾರೆ. ಮುಂದಿನ 6 ವರ್ಷಗಳ ಅಂತರದಲ್ಲಿ ಕೇಂದ್ರದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೂ ತರುತ್ತಾರೆ. ಪ್ರಧಾನಿ ಹುದ್ದೆಯ ಅಗತ್ಯವಿಲ್ಲ ಎಂದೂ ತಿಳಿಸುತ್ತಾರೆ.

ಈ ಸಮಯದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸೋಮನಾಥ ಚಟರ್ಜಿ, "ಬಹುಶಃ ಇದು ಆಕೆಯ ಮನೆಯಲ್ಲಿ ನಡೆದ ಖಾಸಗಿ ನಿರ್ಧಾರದ ಫಲ. ಆಕೆಯ (ಸೋನಿಯಾ) ಮಕ್ಕಳು ಪ್ರಧಾನಿಯಾಗಲು ಒಪ್ಪುತ್ತಿಲ್ಲ ಅಂತ ಕಾಣುತ್ತೆ. ಅವರಿಗೆ ಸಾಲು ಸಾಲು ಸಾವುಗಳಿಂದಾಗಿ ಅಮ್ಮನ ಭವಿಷ್ಯದ ಬಗ್ಗೆ ಭಯ ಇದ್ದ ಹಾಗಿದೆ,'' ಎಂದಿದ್ದರು.

ಭಾರತದ ರಾಜಕಾರಣದಲ್ಲಿ ಹಲವು ವರ್ಷಗಳ ಕಾಲ ಅಧಿಕಾರ ಕೇಂದ್ರವನ್ನು ಮುನ್ನಡೆಸಿಕೊಂಡು ಬಂದಿದ್ದ ಕುಟುಂಬದಲ್ಲಿ ಅಧಿಕಾರದ ಕಡೆಗೆ ಇದ್ದಿರಬಹುದಾದ ಭಯ ಮತ್ತು ವೈರಾಗ್ಯದ ಸಂಕೇತ ಇದಾ? ಕೇಳಲು ಸೋಮನಾಥ ಚಟರ್ಜಿ ಇಂದು ಬದುಕಿಲ್ಲ.

ನಾನು ನಿಮಗಿಂತ ಹೆಚ್ಚು ಭಾರತೀಯಳು:
"ನಾನು ನಿಮಗಿಂತ ಹೆಚ್ಚು ಭಾರತೀಯಳು,'' ಎಂದು ಸೋನಿಯಾ ಗಾಂಧಿ ಖುದ್ದಾಗಿ ಹಲವು ಬಾರಿ ಹೇಳಿದ್ದಾರೆ. ಕರ್ನಾಟಕ ವಿಧಾನಸಭೆಯ ಕಳೆದ ಚುನಾವಣೆ ಸಮಯದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ರಾಹುಲ್ ಗಾಂಧಿ ಬಾಯಲ್ಲೂ ಕೂಡ ಅಮ್ಮನ ಕುರಿತು ಇದೇ ಮಾತುಗಳು ಹೊರಬಿದ್ದಿದ್ದವು.

ಇವತ್ತಿಗೆ ಸೋನಿಯಾ ವಯಸ್ಸು 72 ವರ್ಷ. ಕೇವಲ 20 ತಿಂಗಳ ಹಿಂದಷ್ಟೆ ಮಗನ ಹೆಗಲಿಗೆ ಪಕ್ಷದ ಹೊಣೆಗಾರಿಕೆ ವರ್ಗಾಯಿಸಿದ್ದ ಸೋನಿಯಾ ಅನಾರೋಗ್ಯದ ಹಿನ್ನೆಲೆಯಲ್ಲಿ ವಿದೇಶದಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಇವತ್ತು ಮತ್ತೆ ಪಕ್ಷದ ಬಿಕ್ಕಟ್ಟಿನ ದಿನಗಳಲ್ಲಿ ಮಧ್ಯಂತರ ಅಧ್ಯಕ್ಷೆಯಾಗಿದ್ದಾರೆ. ಬೇರೆ ಆಯ್ಕೆಗಳು ಕಾಣದಿದ್ದರೆ ಅವರೇ ಅಧ್ಯಕ್ಷೆಯಾಗಿ ಮುಂದಿವರಿಯುವ ಸಾಧ್ಯತೆಯೂ ಇದೆ.

ತಳಮಟ್ಟಕ್ಕಿಳಿದು ಪಕ್ಷವನ್ನು ಅಧಿಕಾರಕ್ಕೆ ತಂದ ಸೋನಿಯಾ ಗಾಂಧಿ ಅವರ ಗತಕಾಲದ ದಿನಗಳು ಮರುಕಳಿಸುತ್ತವೆ ಎಂಬುದನ್ನು ನಿರೀಕ್ಷಿಸುವುದು ಕಷ್ಟ ಇದೆ. ಆದರೆ ಆಧುನಿಕ ಕಾಲಘಟ್ಟದಲ್ಲಿ ಬಿಕ್ಕಟ್ಟು ಬಂದಾಗಲೆಲ್ಲಾ ಕಾಂಗ್ರೆಸ್‌ಗೆ ನೆರವಾದವರು ಸೋನಿಯಾ ಗಾಂಧಿ. ಅವತ್ತು, 'ಸೋನಿಯಾ ಲಾವೋ, ದೇಶ್ ಬಚಾವೋ' ಎಂಬುದು ದೇಶದ ಜನರ ಘೋಷಣೆಯಾಗಿತ್ತು. ಇವತ್ತು 'ಸೋನಿಯಾ ಲಾವೋ; ಕಾಂಗ್ರೆಸ್ ಬಚಾವೋ' ಎಂಬುದು ಕಾಂಗ್ರೆಸ್ ನಾಯಕರ ಒಕ್ಕೊರಲಿನ ದನಿಯಾಗಿದೆ. ಇದರ ಪರಿಣಾಮ ಏನು ಎಂಬುದನ್ನು ಕಾಲ ಮಾತ್ರವೇ ಹೇಳಬೇಕಿದೆ.

English summary
Sonia Gandhi again took over responsibility as Congress party interim president. Here is the brief profile of her, along with political career.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X