• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈತ್ರಿಯಲ್ಲಿ ಕಾಂಗ್ರೆಸ್ಸನ್ನು ನಂಬುವಂತೆಯೇ ಇಲ್ಲ, ಕಾರಣಗಳು ಇಲ್ಲಿವೆ

By ಆರ್ ಟಿ ವಿಠ್ಠಲಮೂರ್ತಿ
|

ಕರ್ನಾಟಕದಲ್ಲಿರುವ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳುತ್ತದೆ ಎಂಬ ಕಾತರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಕಮಲ ಪಾಳೆಯದ ಹೈಕಮಾಂಡ್ ತಮ್ಮದೇ ನೆಲೆಯ ಲೆಕ್ಕಾಚಾರ ಶುರು ಹಚ್ಚಿಕೊಂಡಿರುವುದು ಗಮನಾರ್ಹವಾಗಿದೆ.

ಬುಧವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಾಡಿದ ಮಾತುಗಳು ಇದಕ್ಕೆ ಮುಖ್ಯ ಕಾರಣ. ಕಾಂಗ್ರೆಸ್ ಪಕ್ಷ ತಮಗೆ ನೀಡುತ್ತಿರುವ ಕಿರುಕುಳ ಇದೇ ರೀತಿ ಮುಂದುವರಿದರೆ ಅದರ ಜತೆಗಿನ ಸಂಬಂಧವನ್ನು ಕಡಿದುಕೊಳ್ಳಲು ಸಿದ್ಧ ಎಂದು ಈ ನಾಯಕರಿಬ್ಬರೂ ಸಮಾವೇಶದಲ್ಲಿ ಬಾಂಬ್ ಸಿಡಿಸಿದರು.

ಹೀಗಾಗಿ, ಈ ಸರ್ಕಾರ ಉರುಳಿದರೆ ತಾವು ಮುಖ್ಯಮಂತ್ರಿಯಾಗಬಹುದು ಎಂದು ಯಡಿಯೂರಪ್ಪ ಭಾವಿಸಿದ್ದರೆ, ಬಿಜೆಪಿ ಹೈಕಮಾಂಡ್ ಗೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಯೋಗಿಸಲು ತನಗೆ ಪ್ರಬಲ ಅಸ್ತ್ರ ಸಿಕ್ಕಂತಾಗುತ್ತದೆ ಎಂಬ ನಿರೀಕ್ಷೆ ಹೆಚ್ಚಿದೆ.

'ಪ್ರಿಯಾಂಕಾರನ್ನು ಅಜ್ಜಿಗೆ ಹೋಲಿಸಿದರೆ, ರಾಹುಲ್ ರನ್ನು ತಾತನಿಗೆ ಹೋಲಿಸಬೇಕು'!

ಹೀಗೆ ಯಡಿಯೂರಪ್ಪ ಅವರು, ಸರ್ಕಾರ ಉರುಳಿದರೆ ಕಾಂಗ್ರೆಸ್ ಪಕ್ಷದ ವತಿಯಿಂದ ತಮ್ಮ ಕಡೆ ಯಾವ್ಯಾವ ಶಾಸಕರು ಬರಬಹುದು ಎಂಬ ಲೆಕ್ಕಾಚಾರದಲ್ಲಿ ಮಗ್ನರಾಗಿದ್ದರೆ, ಬಿಜೆಪಿ ಹೈಕಮಾಂಡ್ ತನ್ನ ಕೈಗೆ ಸಿಗುವ ಅಸ್ತ್ರವನ್ನು ಕಾಂಗ್ರೆಸ್ ವಿರುದ್ಧ ಹೇಗೆಲ್ಲ ಪ್ರಯೋಗಿಸಬಹುದು? ಅಂತ ಲೆಕ್ಕ ಹಾಕುತ್ತಿದೆ.

ಸಿದ್ದು ಬೆಂಬಲಿಗರು ಬಿಜೆಪಿಯನ್ನು ಬೆಂಬಲಿಸುತ್ತಾರಾ?

ಸಿದ್ದು ಬೆಂಬಲಿಗರು ಬಿಜೆಪಿಯನ್ನು ಬೆಂಬಲಿಸುತ್ತಾರಾ?

ಗಮನಿಸಬೇಕಾದ ಸಂಗತಿ ಎಂದರೆ, ಇವತ್ತು ಆಪರೇಷನ್ ಕಮಲ ಕಾರ್ಯಾಚರಣೆಯ ನಡುವೆ ಬಿಜೆಪಿ ಪಾಳೆಯದಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುತೇಕ ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು. ಹೀಗಾಗಿ ಅವರು ಸರ್ಕಾರ ಉರುಳಿದ ನಂತರ ಬಿಜೆಪಿ ಜತೆ ಕೈಗೂಡಿಸುತ್ತಾರೆಯೇ? ಎಂಬ ವಿಷಯದಲ್ಲಿ ಅನುಮಾನಗಳಿವೆ.

ಫೆ 6ರಿಂದ 'ಕನ್ನಡ'ದಲ್ಲಿ ಹೊಸ ಪತ್ರಿಕೆ ಆರಂಭ: ಕೃಪೆ, ಕಾಂಗ್ರೆಸ್

ಹೀಗಾಗಿ ಸರ್ಕಾರಕ್ಕೆ ಹೆಚ್ಚು ಕಡಿಮೆಯಾದರೆ ಯಡಿಯೂರಪ್ಪ ಅವರ ಆಸೆ ಈಡೇರುವುದು ಕಷ್ಟ. ಆದರೆ ಬಿಜೆಪಿ ಹೈಕಮಾಂಡ್ ಕೈಗೆ ಮಾತ್ರ ನಿಶ್ಚಿತವಾಗಿ ಪ್ರಬಲ ಅಸ್ತ್ರ ಸಿಕ್ಕಂತಾಗುತ್ತದೆ. ಮತ್ತು ಅದನ್ನು ನಿಶ್ಚಿತವಾಗಿಯೂ ಅದು ಬತ್ತಳಿಕೆಯಲ್ಲಿಟ್ಟುಕೊಳ್ಳುತ್ತದೆ. ಕಾಂಗ್ರೆಸ್ ವಿರುದ್ಧವೇ ಪ್ರಯೋಗಿಸುತ್ತದೆ.

ಪ್ರಾದೇಶಿಕ ಶಕ್ತಿ ಸಹಿಸಿಕೊಳ್ಳದ ಕಾಂಗ್ರೆಸ್

ಪ್ರಾದೇಶಿಕ ಶಕ್ತಿ ಸಹಿಸಿಕೊಳ್ಳದ ಕಾಂಗ್ರೆಸ್

ಅಂದ ಹಾಗೆ, ಸರ್ಕಾರ ಉರುಳಿದರೆ ಕೇಳಿ ಬರುವ ಬಹು ದೊಡ್ಡ ಕೂಗೆಂದರೆ, ಕಾಂಗ್ರೆಸ್ ಪಕ್ಷ ಯಾವತ್ತೂ ಪ್ರಾದೇಶಿಕ ಶಕ್ತಿಗಳನ್ನು ಸಹಿಸಿಕೊಂಡಿಲ್ಲ ಎಂಬುದು. ತುರ್ತು ಪರಿಸ್ಥಿತಿಯ ನಂತರ ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಕೇಂದ್ರ ಸರ್ಕಾರವನ್ನು ದುರ್ಬಲಗೊಳಿಸಿದ್ದೇ ಕಾಂಗ್ರೆಸ್ ಪಕ್ಷ.

ಮೊರಾರ್ಜಿ ದೇಸಾಯಿ ಅವರ ವಿರುದ್ಧ ಅವತ್ತು ದೇಶದ ಪ್ರಬಲ ರೈತ ನಾಯಕ ಅನ್ನಿಸಿಕೊಂಡಿದ್ದ ಚೌಧರಿ ಚರಣ್ ಸಿಂಗ್ ಅವರನ್ನು ಎತ್ತಿ ಕಟ್ಟಿದ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾದರು. ಮೊರಾರ್ಜಿ ಸರ್ಕಾರ ಉರುಳುವಂತೆ ಮಾಡಿದರು.

ಹೀಗೆ ಮೊರಾರ್ಜಿ ದೇಸಾಯಿ ಸರ್ಕಾರವನ್ನು ಉರುಳಿಸಿದ ಇಂದಿರಾ ಗಾಂಧಿ ತದ ನಂತರ ಚೌಧರಿ ಚರಣ್ ಸಿಂಗ್ ಅವರನ್ನು ಪ್ರಧಾನಿ ಪಟ್ಟದ ಮೇಲೆ ಕೆಲ ದಿನಗಳ ಮಟ್ಟಿಗೆ ಕೂರಿಸಿದರೂ, ನಂತರ ಬೆಂಬಲ ನೀಡದೆ ಅವರು ನೆಲಕ್ಕುರುಳುವಂತೆ ಮಾಡಿದರು.

ಮುಸ್ಲಿಂ ಮತಗಳ ಮೇಲೆ ಹಾಕಲು ಲಗ್ಗೆ, ಮಮತಾ ನೆತ್ತಿಯ ಮೇಲೆ ಜೆಡಿಎಸ್ ಪುಗ್ಗೆ

ಕಾಂಗ್ರೆಸ್ ಬಗ್ಗೆ ಅನುಮಾನದ ಬೀಜ

ಕಾಂಗ್ರೆಸ್ ಬಗ್ಗೆ ಅನುಮಾನದ ಬೀಜ

ದೇಶದ ಪ್ರಾದೇಶಿಕ ಪಕ್ಷಗಳ ತಲೆಯಲ್ಲಿ ಕಾಂಗ್ರೆಸ್ ಬಗ್ಗೆ ಅನುಮಾನದ ಬೀಜ ಮೊಳೆತಿದ್ದೇ ಆ ಸಂದರ್ಭದಲ್ಲಿ. ಆದರೆ ಈ ಅನುಮಾನದ ಬೀಜ ದೊಡ್ಡ ಹೆಮ್ಮರವೇನೂ ಆಗಿರಲಿಲ್ಲ. ಆದರೆ ಮುಂದೆ ವಿ.ಪಿ. ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಬಿದ್ದ ನಂತರ ಚಂದ್ರಶೇಖರ್ ನೇತೃತ್ವದಲ್ಲಿ ಪ್ರಾದೇಶಿಕ ಶಕ್ತಿಗಳು ಅಧಿಕಾರಕ್ಕೆ ಬಂದವಲ್ಲ? ಹಾಗೆ ಅದು ಅಸ್ತಿತ್ವಕ್ಕೆ ಬರಲು ಕಾರಣರಾದವರು ಮಾಜಿ ಪ್ರಧಾನಿ, ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ. ಆ ಹೊತ್ತಿಗಾಗಲೇ ಭಾರತ ಆರ್ಥಿಕವಾಗಿ ಕಂಗೆಟ್ಟು ಹೋಗಿತ್ತು. ಅದನ್ನು ಸುಧಾರಿಸಲು ಚಂದ್ರಶೇಖರ್ ಹರಸಾಹಸ ನಡೆಸುತ್ತಿದ್ದರೆ ಮತ್ತೊಂದು ಕಡೆಯಿಂದ ಅನಗತ್ಯ ನೆಪ ಒಡ್ಡಿ ಅವರ ನೇತೃತ್ವದ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಕಾಂಗ್ರೆಸ್ ಹಿಂಪಡೆಯಿತು.

ಆಗ ಪ್ರಾದೇಶಿಕ ಶಕ್ತಿಗಳ ಮನಸ್ಸಿನಲ್ಲಿ ಬಿತ್ತನೆಯಾಗಿದ್ದ ಅನುಮಾನದ ಬೀಜ ಮೊಳಕೆಯೊಡೆಯಲು ಆರಂಭಿಸಿತು. ಹೀಗೆ ಮೊಳಕೆಯೊಡೆದ ಸಸಿ ಒಣಗಿ ಹೋಗುವ ಮುನ್ನವೇ 1996ರಲ್ಲಿ ದೇಶದಲ್ಲಿ ಅತಂತ್ರ ಸಂಸತ್ ನಿರ್ಮಾಣವಾಯಿತು.

ಒಂದು ವೇಳೆ ಸಮ್ಮಿಶ್ರ ಸರಕಾರ ಬಿದ್ದರೆ ಶ್ರೇಯಸ್ಸು ಯಾರಿಗೆ ಸಲ್ಲಬೇಕು?

ಪ್ರಧಾನಿ ಹುದ್ದೆಗೇರಬೇಕಿದ್ದ ಜ್ಯೋತಿ ಬಸು

ಪ್ರಧಾನಿ ಹುದ್ದೆಗೇರಬೇಕಿದ್ದ ಜ್ಯೋತಿ ಬಸು

ಆ ಸಂದರ್ಭದಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೇ ಹೋದಾಗ ಜನತಾ ಪರಿವಾರಕ್ಕೆ ಬೆಂಬಲ ನೀಡಲು ಕಾಂಗ್ರೆಸ್ ನಿರ್ಧರಿಸಿತು. ವಾಸ್ತವವಾಗಿ ಆಗ ಪ್ರಧಾನಿ ಹುದ್ದೆಗೇರಬೇಕಿದ್ದವರು ಪಶ್ಚಿಮ ಬಂಗಾಳದ ಕಮ್ಯೂನಿಸ್ಟ್ ನಾಯಕ ಜ್ಯೋತಿ ಬಸು.

ಆದರೆ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವಾಗದೆ ಹೋದರೆ ಪಕ್ಷದಿಂದ ಯಾರೂ ಪ್ರಧಾನಿಯಾಗುವುದು ಬೇಡ ಎಂದು ಕಮ್ಯೂನಿಸ್ಟ್ ಪಕ್ಷದ ಪಾಲಿಟ್ ಬ್ಯೂರೋ ತೀರ್ಮಾನಿಸಿತು. ಆಗ ನಡೆದ ಒಂದು ಘಟನೆ ತುಂಬ ಜನರಿಗೆ ಗೊತ್ತಿಲ್ಲ.

ಯಾವಾಗ ತಮ್ಮನ್ನು ಪ್ರಧಾನಿ ಹುದ್ದೆಯ ಮೇಲೆ ಕೂರಿಸಲು ಕಮ್ಯೂನಿಸ್ಟ್ ಪಕ್ಷದ ಪಾಲಿಟ್ ಬ್ಯೂರೋ ಒಪ್ಪಲಿಲ್ಲವೋ? ಆಗ ಖುದ್ದು ಜ್ಯೋತಿ ಬಸು ಅವರು ಹರಕಿಶನ್ ಸಿಂಗ್ ಸುರ್ಜಿತ್ ಅವರೊಂದಿಗೆ ಸೇರಿ ದೇವೇಗೌಡರ ಜತೆ ಚರ್ಚಿಸಿದರು.

ದೇವೇಗೌಡರಿಗೆ ಒಲಿದುಬಂದ ಅದೃಷ್ಟ

ದೇವೇಗೌಡರಿಗೆ ಒಲಿದುಬಂದ ಅದೃಷ್ಟ

ಆಗ ದೇವೇಗೌಡ ಕರ್ನಾಟಕದ ಮುಖ್ಯಮಂತ್ರಿ. ಇಲ್ಲಿಂದ ಹದಿನಾರು ಸೀಟುಗಳನ್ನು ಅವರು ಲೋಕಸಭೆಗೆ ಗೆಲ್ಲಿಸಿಕೊಂಡು ಹೋಗಿದ್ದರು. ಹೀಗಾಗಿ ಅವರು ಕೂಡಾ ಜನತಾ ಪರಿವಾರದಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದರು.

ಹೀಗಾಗಿ ಅವರನ್ನು ಭೇಟಿ ಮಾಡಿದ ಜ್ಯೋತಿ ಬಸು ಒಂದು ಮಾತು ಹೇಳಿದರು, ದೇವೇಗೌಡರೇ ನೀವೇ ಪ್ರಧಾನಿ ಹುದ್ದೆಯ ಮೇಲೆ ಕೂರಬೇಕು. ಯಾಕೆಂದರೆ, ಈ ದೇಶದ ರೈತನ ಕಣ್ಣಿಗೆ, ಸಾಮಾನ್ಯರ ಕಣ್ಣಿಗೆ ಭರವಸೆ ಮೂಡಿಸುವಂತಿರುವುದು ನೀವೊಬ್ಬರೇ. ನಿಮ್ಮ ಸರಳ ಉಡುಗೆ, ಸರಳ ನಡವಳಿಕೆಯನ್ನು ನೋಡಿದ ಕೂಡಲೇ ಅವರಿಗೆ, ಇವರೇ ನಮ್ಮವರು ಅಂತ ಅನ್ನಿಸುತ್ತದೆ. ಹೀಗಾಗಿ ಯಾವ ಕಾರಣಕ್ಕೂ ಪ್ರಧಾನಿ ಪಟ್ಟವನ್ನು ಒಲ್ಲೆ ಎನ್ನಬೇಡಿ ಎಂದರು.

ವಾಸ್ತವವಾಗಿ ಅವತ್ತು ಆಂಧ್ರದ ಚಂದ್ರಬಾಬು ನಾಯ್ಡು, ಉತ್ತರ ಪ್ರದೇಶದ ಮುಲಾಯಂಸಿಂಗ್ ಯಾದವ್, ಬಿಹಾರದ ಲಾಲೂ ಪ್ರಸಾದ್ ಯಾದವ್ ಹೆಸರು ಕೂಡಾ ಪ್ರಧಾನಿ ಹುದ್ದೆಗೆ ಕೇಳಿ ಬಂತಾದರೂ, ಅವರ್ಯಾರೂ ತಮ್ಮ ರಾಜ್ಯವನ್ನು ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಬರಲು ಒಪ್ಪಲಿಲ್ಲ.

ಗೌಡರನ್ನು ಕೆಳಗಿಳಿಸಲು ಕಾರಣವಾಗಿದ್ದು ಕೇಸರಿ

ಗೌಡರನ್ನು ಕೆಳಗಿಳಿಸಲು ಕಾರಣವಾಗಿದ್ದು ಕೇಸರಿ

ಹೀಗಾಗಿ ದೇವೇಗೌಡ ನಿರಾಯಾಸವಾಗಿ ಪ್ರಧಾನಿ ಹುದ್ದೆಯ ಮೇಲೆ ಕೂರಲು ಸಾಧ್ಯವಾಯಿತು. ಆದರೆ ಅವರನ್ನು ಕೂಡಾ ಕಾಂಗ್ರೆಸ್ ಪಕ್ಷ ಬಹುಕಾಲ ಬೆಂಬಲಿಸಲಿಲ್ಲ. ಕಾರಣ ಕೇಳಿದರೆ, ಅವತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿ ಅವರದು ಒಂದೇ ಮಾತು. ಕಾಂಗ್ರೆಸ್ ಪಕ್ಷವನ್ನು ಒಡೆಯಲು ದೇವೇಗೌಡರು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅವರು ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಬಾರದು ಎಂಬುದು ಈ ಮಾತು.

ಅದು ಹೇಗೆ ಹೇಳುತ್ತೀರಿ? ಅಂದರೆ ಸೀತಾರಾಂ ಕೇಸರಿ ಕಾರಣವನ್ನೇನೂ ನೀಡಲಿಲ್ಲ. ಆದರೆ ದಿಲ್ಲಿಯ ರಾಜಕೀಯ ಮೊಗಸಾಲೆಯಲ್ಲಿ ಒಂದು ಕತೆ ಹರಡಿಕೊಂಡಿತು. ಸೀತಾರಾಂ ಕೇಸರಿ ಅವರಿಗೆ ಆತ್ಮೀಯರಾಗಿದ್ದವರೊಬ್ಬರು ನಿಗೂಢವಾಗಿ ತೀರಿಕೊಂಡರು. ಹೀಗಾಗಿ ಈ ಪ್ರಕರಣದಲ್ಲಿ ಸೀತಾರಾಂ ಕೇಸರಿ ಅವರನ್ನು ಸಿಗಿಸಿದರೆ ಸಹಜವಾಗಿಯೇ ಕಾಂಗ್ರೆಸ್ ದುರ್ಬಲವಾಗುತ್ತದೆ. ಆ ಮೂಲಕ ಪ್ರಾದೇಶಿಕ ಶಕ್ತಿಗಳ ಬಲ ಹೆಚ್ಚುತ್ತದೆ ಎಂದು ದೇವೇಗೌಡರು ಲೆಕ್ಕ ಹಾಕಿದ್ದರು.

ಹೀಗಾಗಿಯೇ ಪ್ರಕರಣವನ್ನು ಸಿಬಿಐಗೆ ವಹಿಸಲು ಅವರು ಸಿದ್ಧತೆ ಮಾಡಿಕೊಂಡಿದ್ದು ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಅವರಿಗೆ ಗೊತ್ತಾಯಿತು. ಹೀಗಾಗಿ ಅವರು ದೇವೇಗೌಡರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಪಟ್ಟು ಹಿಡಿದರು ಎಂಬುದು ಈ ಕತೆ.

ಗುಜ್ರಾಲ್ ಹೀಗೆ ಬಂದರು ಹಾಗೆ ಹೋದರು

ಗುಜ್ರಾಲ್ ಹೀಗೆ ಬಂದರು ಹಾಗೆ ಹೋದರು

ಈ ಕತೆಗೆ ಇವತ್ತಿಗೂ ವಾರಸುದಾರರು ಯಾರು? ಅನ್ನುವುದು ಗೊತ್ತಿಲ್ಲ. ಏನೇ ಹೇಳಿದರೂ ಅದು ತನಗೆ ಪರ್ಯಾಯವಾಗಿ ಜನತಾ ಪರಿವಾರ ಬೆಳೆಯಬೇಕು ಎಂದು ಬಯಸುವುದಿಲ್ಲ ಅಂತಲೇ ರಾಷ್ಟ್ರ ಮಟ್ಟದಲ್ಲಿ ಪ್ರಚಾರವಾಯಿತು. ಅದೊಂದು ಕಡೆ ಇರಲಿ, ಒಟ್ಟಿನಲ್ಲಿ ಈ ಬೆಳವಣಿಗೆಯ ನಂತರ ದೇವೇಗೌಡರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಅವರ ಜಾಗಕ್ಕೆ ಇಂದ್ರಕುಮಾರ್ ಗುಜ್ರಾಲ್ ಬಂದರು.

ಇಂದ್ರಕುಮಾರ್ ಗುಜ್ರಾಲ್ ಪ್ರಧಾನಿಯಾದ ಕೆಲವೇ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಂದು ತಕರಾರು ಎತ್ತಿತು. ಸರ್ಕಾರದಲ್ಲಿರುವ ಡಿಎಂಕೆ ಮೂಲತ: ಎಲ್.ಟಿ.ಟಿ.ಇ ಉಗ್ರಗಾಮಿ ಸಂಘಟನೆಯ ಪರವಾದ ಅನುಕಂಪ ಹೊಂದಿದೆ. ಆದರೆ ಇದೇ ಎಲ್.ಟಿ.ಟಿ.ಇ ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿಯವರ ಹತ್ಯೆಗೆ ಮೂಲ ಕಾರಣ. ಹೀಗಿರುವಾಗ ಡಿಎಂಕೆ ಸಚಿವರು ಐ.ಕೆ.ಗುಜ್ರಾಲ್ ಸಂಪುಟದಲ್ಲಿ ಇರುವುದನ್ನು ಕಾಂಗ್ರೆಸ್ ಬಯಸುವುದಿಲ್ಲ ಎಂದು ಕೈ ಪಾಳೆಯ ವಾದ ಮಾಡಿತು.

ಯಾವಾಗ ಅದರ ತಕರಾರು ಹೆಚ್ಚಾಯಿತೋ? ಆಗ ಜನತಾ ಪರಿವಾರದ ನಾಯಕರು ಸಭೆ ಸೇರಿ, ಹೇಗಿದ್ದರೂ ಪ್ರಾದೇಶಿಕ ಶಕ್ತಿಗಳು ಬಲಿಷ್ಠವಾಗುವುದನ್ನು ಕಾಂಗ್ರೆಸ್ ಸಹಿಸಿಕೊಳ್ಳುವುದಿಲ್ಲ. ಹೀಗಾಗಿ ಡಿಎಂಕೆ ಸಚಿವರನ್ನು ಸಂಪುಟದಿಂದ ಕೈ ಬಿಟ್ಟರೂ ಅದು ಸುಮ್ಮನಿರುವುದಿಲ್ಲ. ಆದ್ದರಿಂದ ಸರ್ಕಾರ ಹೋದರೆ ಹೋಗಲಿ ಎಂದು ತೀರ್ಮಾನಿಸಿದರು.

ಕಾಂಗ್ರೆಸ್ಸಿನಲ್ಲಿ ಇದೆ ನಾಯಕತ್ವದ ಕೊರತೆ

ಕಾಂಗ್ರೆಸ್ಸಿನಲ್ಲಿ ಇದೆ ನಾಯಕತ್ವದ ಕೊರತೆ

ಈ ಬೆಳವಣಿಗೆಯ ನಂತರ ದೇಶ 1998ರಲ್ಲಿ ಮತ್ತೊಮ್ಮೆ ಲೋಕಸಭೆ ಚುನಾವಣೆಯನ್ನು ಎದುರಿಸಬೇಕಾಯಿತು. ಆದರೆ ಅವತ್ತಿನ ಅನುಭವ ಕಾಂಗ್ರೆಸ್ ಬಗ್ಗೆ ಪ್ರಾದೇಶಿಕ ಶಕ್ತಿಗಳು ಶಾಶ್ವತವಾಗಿ ಅನುಮಾನ ಇಟ್ಟುಕೊಳ್ಳಲು ಕಾರಣವಾಗಿದ್ದಂತೂ ನಿಜ.

ಮುಂದೆ 2004ರಲ್ಲಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ಕೂಡಾ ತನ್ನ ಶಕ್ತಿಯನ್ನು ಪ್ರಾದೇಶಿಕ ಶಕ್ತಿಗಳನ್ನು ದುರ್ಬಲಗೊಳಿಸಲು ಬಳಸಿಕೊಂಡಿತು. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದಿಂದ ಹಿಡಿದು, ಕರ್ನಾಟಕದ ಜೆಡಿಎಸ್ ತನಕ ಹಲವು ಪ್ರಾದೇಶಿಕ ಶಕ್ತಿಗಳಿಗೆ ಇದರ ಅನುಭವವಾಯಿತು.

ಹೀಗಾಗಿ ಇವತ್ತು ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ದುರ್ಬಲವಾದರೂ ಅದನ್ನು ಪರಿಪೂರ್ಣವಾಗಿ ಎನ್ ಕ್ಯಾಶ್ ಮಾಡಿಕೊಳ್ಳುವುದು ಕಾಂಗ್ರೆಸ್ ಗೆ ಕಷ್ಟ. ಮೊದಲನೆಯದಾಗಿ ಅಲ್ಲಿ ಸಮರ್ಥ ನಾಯಕತ್ವದ ಕೊರತೆ ಇದೆ. ಎರಡನೆಯದಾಗಿ ಪ್ರಾದೇಶಿಕ ಶಕ್ತಿಗಳಲ್ಲಿ ಬಿಜೆಪಿ ವಿರೋಧಿ ಮತಗಳನ್ನು ಸೆಳೆಯುವ ಶಕ್ತಿ ಒಂದು ಮಟ್ಟದಲ್ಲಾದರೂ ಇದೆ.

ರಾಹುಲ್ ಕನಸಿಗೆ ಮೋದಿ ಕಲ್ಲು ಹಾಕುವರೆ?

ರಾಹುಲ್ ಕನಸಿಗೆ ಮೋದಿ ಕಲ್ಲು ಹಾಕುವರೆ?

ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುವ ಕನಸು ಕಾಂಗ್ರೆಸ್ ಪಕ್ಷದಲ್ಲಿಲ್ಲ. ಆದರೆ ತೃತೀಯ ಶಕ್ತಿಯ ಬೆಂಬಲದೊಂದಿಗೆ ಅಧಿಕಾರದಲ್ಲಿ ಪಾಲುದಾರನಾಗಬೇಕು ಎಂಬ ಇಚ್ಛೆಯೇ ಅದರ ಸದ್ಯದ ಕನಸು. ಈ ಕನಸಿಗೆ ಕಲ್ಲು ಹಾಕುವುದೇ ಮೋದಿ ನೇತೃತ್ವದ ಬಿಜೆಪಿಯ ಗುರಿ.

ಈ ಗುರಿಯನ್ನು ಈಡೇರಿಸಿಕೊಳ್ಳಲು ಕರ್ನಾಟಕದ ಬೆಳವಣಿಗೆ ತಮಗೆ ಅನುಕೂಲ ಕಲ್ಪಿಸಿಕೊಡಲಿದೆ ಎಂದು ಮೋದಿ ಗ್ಯಾಂಗು ಭಾವಿಸಿದೆ. ಅದರ ಭಾವನೆಯಂತೆ ಕುಮಾರಸ್ವಾಮಿ ಸರ್ಕಾರ ಬಿದ್ದರೆ ಸಹಜವಾಗಿಯೇ ಅದು ಕಾಂಗ್ರೆಸ್ ಪಕ್ಷದ ಮುಖಕ್ಕೆ ಅಂಟಿಕೊಂಡಿರುವ ಮಸಿಯನ್ನು ಪೂರ್ತಿ ಮುಖಕ್ಕೆ ಸವರಲು ಹೊರಡುತ್ತದೆ. ಹಾಗಾಗುತ್ತದಾ? ಅನ್ನುವುದೇ ಸದ್ಯದ ಕುತೂಹಲ.

English summary
Congress has history of dumping regional parties. It has done in many cased from Morarji Desai to Deve Gowda. Now, in Karnataka Congress has aligned with JDS and history may repeat here also. Political analysis by R T Vittal Murthy. Will BJP take advantage of weakness of Congress in Lok Sabha Elections 2019?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X