ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊಗೋಯಿಗೆ ಕಪ್ಪು ಚುಕ್ಕೆಯಾಗಿ ಉಳಿದ ಲೈಂಗಿಕ ಕಿರುಕುಳ ಕೇಸ್

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಸುಪ್ರೀಂಕೋರ್ಟ್‌ನ ಮಾಜಿ ಉದ್ಯೋಗಿಯೊಬ್ಬರು ಅಂದಿನ ಮುಖ್ಯ ನ್ಯಾಯಮೂರ್ತಿ ವಿರುದ್ಧವೇ ಲೈಂಗಿಕ ಕಿರುಕುಳದ ಆರೋಪ ಮಾಡಿದಾಗ, ಇಡೀ ದೇಶ, ನ್ಯಾಯಾಂಗ ವ್ಯವಸ್ಥೆಯೇ ಒಮ್ಮೆ ಅತ್ತ ತಿರುಗಿ ನೋಡಿತ್ತು. ಆದರೆ ಇಂದಿಗೂ ನ್ಯಾಯ ಎಲ್ಲಿದೆ? ಅಣ್ಣಾ ಎಲ್ಲಿದ್ದಿಯೋ ನ್ಯಾಯ? ಎಂದು ಆ ಸಂತ್ರಸ್ತೆ ಕೇಳುತ್ತಿದ್ದಾಳೆ. ಇಂದು ರಂಜನ್ ಗೊಗಾಯ್ ಸಿಜೆಐ ಆಗಿ ಉಳಿದಿಲ್ಲ. ಬಗೆ ಹರಿಯದೆ ಉಳಿದ ಪ್ರಮುಖ ಕೇಸ್ ಗಳಲ್ಲಿ ತೀರ್ಪು ನೀಡಿದ ಗೊಗಾಯ್ ಅವರು ಆ ಮಹಿಳೆಯೆ ಏಕೆ ನ್ಯಾಯ ದೊರಕಿಸಿಕೊಡಲಿಲ್ಲ? ಎಂಬ ಪ್ರಶ್ನೆ ಉಳಿದಿದೆ. ಗೋಗಾಯ್ ಅವರ ವೃತ್ತಿ ಬದುಕಿನ ಅಧ್ಯಾಯದಲ್ಲಿ ಈ ಪ್ರಕರಣ ಕಪ್ಪುಚುಕ್ಕೆಯಾಗಿದೆ.

ಸಿಜೆಐ ಗೃಹ ಕಚೇರಿಯಲ್ಲೇ ಲೈಂಗಿಕ ದೌರ್ಜನ್ಯ ಆರೋಪ; ಬೆಚ್ಚಿ ಬೀಳಿಸುವ ಕೇಸ್‌ ಡೀಟೆಲ್ಸ್‌ ಇಲ್ಲಿದೆ. ವ್ಯವಸ್ಥೆಯಲ್ಲಿ ಅಂತಿಮವಾಗಿ ನ್ಯಾಯಾಲಯದಲ್ಲಾದರೂ ನ್ಯಾಯ ಸಿಗುತ್ತದೆ ಎಂಬ ಗಟ್ಟಿ ನಂಬಿಕೆ ಇದೆ. ಆದರೆ ಇಂತಹದೊಂದು ವಿಶ್ವಾಸಕ್ಕೇ ಹೊಡೆತ ಕೊಟ್ಟ ಪ್ರಕರಣದ ಪೂರ್ಣ ಮಾಹಿತಿ ಬೆಚ್ಚಿ ಬೀಳಿಸುವಂತಿದೆ. ; "ಸಿಜೆಐ (ರಂಜನ್‌ ಗೊಗೋಯಿ) ಅವರ ಲೈಂಗಿಕ ಬೇಡಿಕೆಗಳನ್ನು ಪ್ರತಿರೋಧಿಸಿದ್ದಕ್ಕಾಗಿ ಮತ್ತು ನಿರಾಕರಿಸಿದ್ದಕ್ಕಾಗಿ ನನ್ನನ್ನು ಹಿಂಸಿಸಲಾಗಿದೆ," ಹೀಗಂಥ ತಮ್ಮ ಅಫಿಡವಿಟ್‌ ಬರೆಯುತ್ತಾರೆ ಸುಪ್ರೀಂಕೋರ್ಟ್‌ನ ಮಾಜಿ ಉದ್ಯೋಗಿಯೊಬ್ಬರು.

ಹಲವು ತಿಂಗಳ ಹಿಂದೆ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ವಿರುದ್ಧ #ಮೀಟೂ ಹೆಸರಿನಲ್ಲಿ ಬಹುದೊಡ್ಡ ಅಭಿಯಾನ ನಡೆದಿತ್ತು. ಇದೀಗ ಅದೇ ಸರಣಿಯಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ (ಸಿಜೆಐ)ಗಳ ವಿರುದ್ಧವೇ ಮೀಟೂ - ಅಥವಾ ಅದಕ್ಕಿಂತ ಹೆಚ್ಚಿನ - ಆರೋಪ ಕೇಳಿ ಬಂದಿದೆ.

ಬಹುಶಃ ಇದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಬಹುದೊಡ್ಡ ಮೀಟೂ ಆರೋಪ. ಜತೆಗೆ ದೇಶದ ನ್ಯಾಯಾಂಗ ಇತಿಹಾಸದಲ್ಲಿ ಕೇಳಿ ಬಂದ ಅತ್ಯಂತ ಗಂಭೀರ ಆರೋಪವೂ ಹೌದು.

ಮಾಹಿತಿ ಕೃಪೆ: ದಿ ಕ್ಯಾರವಾನ್

ರಂಜನ್ ಕಿರುಕುಳ ನೀಡಿದ್ದಾರೆ ಎಂದು ನೇರವಾಗಿ ಆರೋಪ

ರಂಜನ್ ಕಿರುಕುಳ ನೀಡಿದ್ದಾರೆ ಎಂದು ನೇರವಾಗಿ ಆರೋಪ

ನ್ಯಾಯಾಲಯದ ಮಾಜಿ ಉದ್ಯೋಗಿ ತಾನು ಬರೆದ ಅಫಿಡವಿಟ್‌ ಪ್ರತಿಗಳನ್ನು ಸುಪ್ರೀಂ ಕೋರ್ಟ್‌ನ 22 ನ್ಯಾಯಮೂರ್ತಿಗಳ ನಿವಾಸಕ್ಕೆ ತಲುಪಿಸಿದ್ದರು. ಇದರಲ್ಲಿ ಆಕೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್‌ ಗೊಗೋಯಿ ತಮಗೆ ಲೈಂಗಿಕ ಶೋ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಷಣೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ. ಜತೆಗೆ ಗೊಗೋಯಿ ನೀಡಿದ್ದಾರೆ ಎನ್ನಲಾದ ಎರಡು ಲೈಂಗಿಕ ಕಿರುಕುಳದ ಘಟನೆಗಳನ್ನು ಸಾಕ್ಷಿ ಸಮೇತ ವಿವರಿಸಿದ್ದಾರೆ. 2018ರ ಅಕ್ಟೋಬರ್‌ನಲ್ಲಿ ಗೊಗೋಯಿ ಸಿಜೆಐ ಆಗಿ ನೇಮಕಗೊಂಡ ಕೆಲವೇ ದಿನಗಳ ಬಳಿಕ ನಡೆದ ಘಟನೆಗಳು ಇವಾಗಿತ್ತು.

ಮುಖ್ಯ ನ್ಯಾಯಮೂರ್ತಿಗಳ ಲೈಂಗಿಕ ಬೇಡಿಕೆಯನ್ನು ನಿರಾಕರಿಸಿದ್ದಕ್ಕಾಗಿ ಕೆಲಸ ಕಳೆದುಕೊಳ್ಳುವುದು, ಬಂಧನ, ಪೊಲೀಸರಿಂದ ಹಿಂಸೆಯಂಥ ನಿರಂತರ ಕಿರುಕುಳದ ಘಟನೆಗಳನ್ನು ನನ್ನ ಕುಟುಂಬ ಅನುಭವಿಸಬೇಕಾಯಿತು ಎಂಬುದಾಗಿ ಆಕೆ ದೂರಿದ್ದಾರೆ.

"ಸಿಜೆಐ ತಮ್ಮ ಸ್ಥಾನವನ್ನು, ಕಚೇರಿ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಮತ್ತು ಪೋಲಿಸರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ನಾನು ಹೇಳುತ್ತೇನೆ," ಎನ್ನುವ ಆಕೆ ತಮ್ಮ ಅಫಿಡವಿಟ್‌ ಜತೆಗೆ ಕೆಲವು ಘಟನೆಗಳ ವಿಡಿಯೋ ಸಾಕ್ಷ್ಯಗಳನ್ನೂ ಒದಗಿಸಿದ್ದರು.

ವಿಡಿಯೋ ಸಾಕ್ಷ್ಯದಲ್ಲಿ ಏನಿದೆ?

ವಿಡಿಯೋ ಸಾಕ್ಷ್ಯದಲ್ಲಿ ಏನಿದೆ?

ಒಂದು ವಿಡಿಯೋದಲ್ಲಿ ದೆಹಲಿ ಪೊಲೀಸರು ಆಕೆಯನ್ನು ಇದೇ ಜನವರಿಯಲ್ಲಿ ಗೊಗೋಯಿ ನಿವಾಸಕ್ಕೆ ಕರೆದುಕೊಂಡ ಹೋದ ದೃಶ್ಯಗಳಿವೆ. ಈ ಸಂದರ್ಭದಲ್ಲಿ ಗೊಗೋಯಿ ಪತ್ನಿಯಲ್ಲಿ ಕ್ಷಮೆ ಕೇಳುವಂತೆ ಮಹಿಳಾ ಉದ್ಯೋಗಿಗೆ ಸೂಚಿಸಲಾಗಿತ್ತು. ಇನ್ನೊಂದು ವಿಡಿಯೋದ ಪ್ರಕಾರ ಈ ಬೆಳವಣಿಗೆಯನ್ನು 2019ರ ಜನವರಿ 11ರಂದೇ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಮತ್ತು ದೆಹಲಿ ಪೊಲೀಸ್‌ ಆಯುಕ್ತ ಅಮೂಲ್ಯ ಪಟ್ನಾಯಕ್‌ ಗಮನಕ್ಕೆ ತರಲಾಗಿತ್ತು ಎಂದು ತಿಳಿದು ಬರುತ್ತದೆ.

ತಾವು ಮುಖ್ಯ ನ್ಯಾಯಮೂರ್ತಿ ಹುದ್ದೆಗೇರುವ ಮೊದಲು ಸಿಜೆಐ ರಂಜನ್‌ ಗೊಗೋಯಿ ಸುಪ್ರೀಂ ಕೋರ್ಟ್‌ ಮಾಜಿ ಉದ್ಯೋಗಿಯ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಬಗ್ಗೆ ವಿಶೇಷ ಆಸಕ್ತಿ ತಾಳಿದ್ದರು. ತೀಸ್‌ ಜನವರಿ ಮಾರ್ಗ್‌ನಲ್ಲಿದ್ದ ಗೃಹ ಕಚೇರಿಗೆ ಆಕೆಯನ್ನು ತಾವೇ ವರ್ಗ ಮಾಡಿಸಿಕೊಂಡಿದ್ದರು. ಅಲ್ಲಿ ಆಕೆಗೆ ತೀರಾ ಸಮೀಪದಲ್ಲಿ ಕುಳಿತು ಕೆಲಸ ಮಾಡುವಂತೆ ಹೇಳಲಾಗಿತ್ತು. ಎರಡು ಬೇರೆ ಬೇರೆ ಸಂದರ್ಭಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳು ಆಕೆಯ ವಿರೋಧದ ನಡುವೆಯೂ ಆಕೆಯನ್ನು ಸ್ಪರ್ಶಿಸಿದ್ದರು.

ಬೇರೆ ಬೇರೆ ವಿಭಾಗಗಳಿಗೆ ವರ್ಗಾವಣೆ ಶಿಕ್ಷೆ

ಬೇರೆ ಬೇರೆ ವಿಭಾಗಗಳಿಗೆ ವರ್ಗಾವಣೆ ಶಿಕ್ಷೆ

ಒಂದು ಘಟನೆಯಲ್ಲಿ, "ನಾನು ಅವರನ್ನು ನಾನು ನನ್ನ ಕೈಗಳ ಮೂಲಕ ದೂರ ತಳ್ಳಬೇಕಾಯಿತು," ಎಂದಾಕೆ ತನ್ನ ಅಫಿಡವಿಟ್‌ನಲ್ಲಿ ಬರೆದಿದ್ದಾರೆ. ಈ ಘಟನೆ ನಂತರ ಇದರ ಬಗ್ಗೆ ಎಲ್ಲೂ ಬಾಯಿ ಬಿಡದಂತೆ ಆಕೆಗೆ ಸಿಜೆಐ ಸೂಚಿಸಿದ್ದರಂತೆ. ಜತೆಗೆ ಒಂದೊಮ್ಮೆ ಹೇಳಿದರೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆಯನ್ನೂ ಒಡ್ಡಿದ್ದರಂತೆ.

ಇದೆಲ್ಲ ನಡೆದು ನಾಲ್ಕು ವಾರಗಳಲ್ಲಿ ಈಕೆಯನ್ನು ಮೂರು ಬಾರಿ ಸುಪ್ರೀಂ ಕೋರ್ಟ್‌ನ ಬೇರೆ ಬೇರೆ ವಿಭಾಗಗಳಿಗೆ ವರ್ಗ ಮಾಡಲಾಯಿತು. ಇವುಗಳ ಬಗ್ಗೆ ಆಕೆ ಅಸಮಧಾನ ತೋಡಿಕೊಂಡಾಗ ನವೆಂಬರ್‌ ಅಂತ್ಯದ ವೇಳೆಗೆ ಶಿಸ್ತು ಕ್ರಮದ ಪ್ರಕ್ರಿಯೆಗಳನ್ನು ಆರಂಭಿಸಲಾಯಿತು. ಇದನ್ನು ಸಹೋದ್ಯೋಗಿ ಬಳಿ ಪ್ರಶ್ನೆ ಮಾಡಿದ್ದಕ್ಕೆ ತೀವ್ರ ಒತ್ತಡವನ್ನು ಹೇರಲಾಯಿತು. ಇದರ ಜತೆಗೆ ಶನಿವಾರ ರಜೆ ಪಡೆದುಕೊಂಡಿದ್ದಕ್ಕೆ ಅವಿಧೇಯತೆ ಎಂಬ ಪಟ್ಟ ಕಟ್ಟಲಾಯಿತು. ಕೊನೆಗೆ 2018ರ ಡಿಸೆಂಬರ್‌ 21ರಂದು ಆಕೆಯನ್ನು ಸುಪ್ರೀಂ ಕೋರ್ಟ್‌ನಿಂದ ವಜಾ ಮಾಡಲಾಯಿತು. ಆಕೆಯ ಜತೆಗೆ ದೆಹಲಿ ಪೊಲೀಸ್‌ ಇಲಾಖೆಯಲ್ಲಿ ಪತಿ ಹಾಗೂ ಪತಿಯ ಸಹೋದರರನ್ನೂ ಕೆಲಸದಿಂದ ತೆಗೆದು ಹಾಕಲಾಯಿತು.

ಮಹಿಳೆ ಮೇಲೆ ವಂಚನೆಯ ದೂರು

ಮಹಿಳೆ ಮೇಲೆ ವಂಚನೆಯ ದೂರು

ಇದೆಲ್ಲಾ ಮುಗಿದ ಬಳಿಕ ಮಾರ್ಚ್‌ನಲ್ಲಿ ಹರ್ಯಾಣ ಝಜ್ಜಾರ್‌ ನಿವಾಸಿ ನವೀನ್‌ ಕುಮಾರ್‌ ಎಂಬಾತ ದೆಹಲಿಯ ತಿಲಕ್‌ ಮಾರ್ಗ್‌ ಪೊಲೀಸ್‌ ಠಾಣೆಯಲ್ಲಿ ಇದೇ ಮಹಿಳೆ ಮೇಲೆ ವಂಚನೆಯ ದೂರು ನೀಡಿದ್ದರು. ಅದರಲ್ಲವರು ಸುಪ್ರೀಂ ಕೋರ್ಟ್‌ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಆಕೆ ನನ್ನ ಬಳಿಯಲ್ಲಿ 50,000 ರೂಪಾಯಿ ಲಂಚ ಪಡೆದಿದ್ದಾರೆ ಎಂದು ದೂರಿದ್ದರು.

ಈ ಎಫ್‌ಐಆರ್‌ ದಾಖಲಾದ ಐದು ದಿನಗಳ ನಂತರ ಮಾರ್ಚ್‌ 8ರಂದು ತಿಲಕ್‌ ಮಾರ್ಗ್‌ ಪೊಲೀಸ್‌ ಠಾಣೆಯಿಂದ ಪೊಲೀಸರು ಆಕೆ ಉಳಿದುಕೊಂಡಿದ್ದ ರಾಜಸ್ಥಾನದಲ್ಲಿರುವ ಪತಿಯ ಪೂರ್ವಜರ ಮನೆಗೆ ಬಂದಿದ್ದರು.

ಮರು ದಿನ ತನ್ನ ಕುಟುಂಬಸ್ಥರ ಜತೆ ಪೊಲೀಸ್‌ ಠಾಣೆಗೆ ಹೋದರೆ ಆಕೆಯನ್ನು ಕ್ರೂರವಾಗಿ ನಡೆಸಿಕೊಳ್ಳಲಾಯಿತು. ಠಾಣೆ ಮುಖ್ಯಸ್ಥರು ಒಂದು ಪೂರ ರಾತ್ರಿ ಆಕೆಯನ್ನು ಕೈಕಾಲು ಸಮೇತ ಬೆಂಚೊಂದಕ್ಕೆ ಕಟ್ಟಿ ಹಾಕಿದ್ದರು. ಜತೆಗೆ ತುಳಿದು, ಕೀಳ ಪದಗಳಿಂದ ನಿಂದಿಸಲಾಯಿತು. ಅಲ್ಲಿಂದ ನ್ಯಾಯಾಲಯಕ್ಕೆ ಹಾಜರುಪಡಿಸಿ ಒಂದು ದಿನದ ಮಟ್ಟಿಗೆ ತಿಹಾರ್‌ ಜೈಲಿಗೆ ಅಟ್ಟಲಾಯಿತು. ಕೊನೆಗೆ ಮಾರ್ಚ್‌ 12ರಂದು ಜಾಮೀನು ಪಡೆದು ಆಕೆ ಜೈಲಿನಿಂದ ಹೊರ ಬಂದರು. ಆ ಪ್ರಕರಣದ ವಿಚಾರಣೆ ಪಟಿಯಾಲ ಕೋರ್ಟ್‌ನಲ್ಲಿ ನಡೆಯಿತು. ನಂತರ ಸೆಪ್ಟೆಂಬರ್ ತಿಂಗಳಿನಲ್ಲಿ ದೆಹಲಿ ನ್ಯಾಯಾಲಯವು ನಂತರ ಕೇಸ್ ಕ್ಲೋಸ್ ಮಾಡಿದೆ.

ರಂಜನ್ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ

ರಂಜನ್ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ

ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಸಿಜೆಐಯಾಗಿದ್ದಾಗ ರಂಜನ್ ಕಡೆಯಿಂದ ಯಾವುದೇ ಉತ್ತರ ಬಂದಿರಲಿಲ್ಲ. ಬದಲಿಗೆ ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿ ಪ್ರತಿಕ್ರಿಯೆ ನೀಡಿ, ಆರೋಪ "ಸಂಪೂರ್ಣ ಶುದ್ಧ ಸುಳ್ಳು ಮತ್ತು ಅಶ್ಲೀಲ ಮತ್ತು ಸಂಪೂರ್ಣವಾಗಿ ತಳ್ಳಿ ಹಾಕಲಾಗಿದೆ," ಎಂದಿದ್ದಾರೆ. ಬದಲಿಗೆ ಮಾಜಿ ಉದ್ಯೋಗಿ ವಿರುದ್ಧ ಮಾರ್ಚ್‌ನಲ್ಲಿ ದಾಖಲಾದ ಕ್ರಿಮಿನಲ್‌ ಕೇಸ್‌ ಮತ್ತು 2011ರಲ್ಲಿ ಪಕ್ಕದ ಮನೆಯವರೊಬ್ಬರು ದಾಖಲಿಸಿದ ಪ್ರಕರಣವನ್ನು ಉಲ್ಲೇಖಿಸಲಾಗಿದೆ.

2011ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಾಜಿ ಉದ್ಯೋಗಿಯ ತಂದೆ ಮತ್ತು ಪಕ್ಕದ ಮನೆಯವರು ಜಗಳ ಮಾಡಿಕೊಂಡಿದ್ದರು. ಇಬ್ಬರಿಗೂ ವಿದ್ಯುತ್‌ ಕಾಮಗಾರಿಯೊಂದು ಮುಗಿಸಬೇಕಾಗಿತ್ತು. ಇದರಲ್ಲಿ ಯಾರದ್ದು ಮೊದಲ ನಡೆಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಈ ಜಗಳ ಹತ್ತಿಕೊಂಡಿತ್ತು. ಮುಂದೆ ಇವರಿಬ್ಬರು ಜಗಳವನ್ನು ತಮ್ಮ ತಮ್ಮಲ್ಲೇ ಬಗೆಹರಿಸಿಕೊಂಡಿದ್ದರಿಂದ ದೆಹಲಿ ಹೈಕೋರ್ಟ್‌ 2016ರ ಸೆಪ್ಟೆಂಬರ್‌ ಈ ಪ್ರಕರಣವನ್ನು ಕೈ ಬಿಟ್ಟಿತು.

ಹೀಗಿರುವಾಗ ಈ ಪ್ರಕರಣಗಳನ್ನು "ನನಗೆ ಮತ್ತು ನನ್ನ ಕುಟುಂಬವರಿಗೆ ಕಿರುಕುಳ ನೀಡಲು, ಭಯ ಬಿತ್ತಲು," ಇದೀಗ ಪ್ರಸ್ತಾಪಿಸಲಾಗುತ್ತಿದೆ ಎಂಬುದಾಗಿ ಮಾಜಿ ಉದ್ಯೋಗಿ ದೂರಿದ್ದಾರೆ. ಜತೆಗೆ ಇದು "ಸುಳ್ಳು, ದುರುದ್ದೇಶಪೂರಿತ," ಎಂದವರು ಕಿಡಿಕಾರಿದ್ದಾರೆ.

ನಡೆದ ಘಟನೆಗಳನ್ನೆಲ್ಲಾ ಮೆಲುಕು ಹಾಕಿರುವ ಅವರು, "ಈಗ ನನ್ನ ಜೀವನಕ್ಕೆ ಒಂದು ಸನ್ನಿಹಿತವಾದ ಅಪಾಯವಿದೆ, ನನ್ನ ಕುಟುಂಬ ಮತ್ತು ನನ್ನನ್ನು ನಾನು ರಕ್ಷಿಸಿಕೊಳ್ಳಲು ಸಲುವಾಗಿ ನಾನು ಸಂಪೂರ್ಣ ಸತ್ಯವನ್ನು ಮಾತನಾಡಲೇಬೇಕಾಗಿದೆ," ಎಂದಾಕೆ ತಿಳಿಸಿದ್ದಾರೆ.

ನ್ಯಾಯಮೂರ್ತಿಗಳ ಜತೆಗಿನ ಆಕೆಯ ಸಂಪರ್ಕ ಹೇಗಾಯ್ತು?

ನ್ಯಾಯಮೂರ್ತಿಗಳ ಜತೆಗಿನ ಆಕೆಯ ಸಂಪರ್ಕ ಹೇಗಾಯ್ತು?

ಈಕೆ 2014ರ ಮೇನಲ್ಲಿ ಸುಪ್ರೀಂ ಕೋರ್ಟ್‌ಗೆ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಗ್ರಂಥಾಲಯದಲ್ಲಿ ಟೈಪಿಂಗ್‌ ಮಾಡುವುದು ಮತ್ತು ಡಾಕ್ಯುಮೆಂಟೇಷನ್‌ ಕೆಲಸವನ್ನು ಆಕೆಗೆ ನೀಡಲಾಗಿತ್ತು. ಇದರ ಜತೆಗೆ ಬೇರೆ ಬೇರೆ ಕೋರ್ಟ್‌ ರೂಂಗಳಿಗೆ ಬೇಕಾದ ಪುಸ್ತಕ ಮತ್ತು ಆದೇಶಗಳನ್ನು ಲೈಬ್ರರಿಯಿಂದ ನೀಡುವ ಕೆಲಸವೂ ಆಕೆಯದಾಗಿತ್ತು.

ಉಳಿದವರಿಗಿಂತ ಆಕೆ ಸ್ವಲ್ಪ ವೇಗ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದರು. ಹೀಗಾಗಿ ಬಲು ಬೇಗ ನ್ಯಾಯಮೂರ್ತಿಗಳ ಕೋರ್ಟ್‌ನಲ್ಲಿ ಆಕೆಗೆ ಹುದ್ದೆಯೊಂದನ್ನು ನೀಡಲಾಯಿತು. ಇಲ್ಲಿ ಆಕೆ 2015ನೇ ವರ್ಷದಲ್ಲಿ 8 ರಿಂದ 10 ತಿಂಗಳು ಕೆಲಸ ಮಾಡಿದರು. ಸರ್ವೋಚ್ಛ ನ್ಯಾಯಾಲಯದ ವಾರ್ಷಿಕ ಗೌಪ್ಯ ವರದಿಗಳ ಪ್ರಕಾರ 2014-15 ಮತ್ತು 2015-16ರ ಆಕೆಯ ಕೆಲಸ ಉತ್ತಮ ಮತ್ತು ಅತ್ಯುತ್ತಮವಾಗಿದೆ ಎಂದು ಷರಾ ಬರೆಯಲಾಗಿದೆ.

ಮುಂದೆ 2016ರ ಅಕ್ಟೋಬರ್‌ನಲ್ಲಿ ಆಕೆಯನ್ನು ರಂಜನ್‌ ಗೊಗೋಯಿ ಕೋರ್ಟ್‌ಗೆ ವರ್ಗ ಮಾಡಲಾಯಿತು. ಇದೇ ಅವಧಿಯಲ್ಲಿ ಆಕೆ ಕಾನೂನು ಪದವಿಯನ್ನು ಓದುತ್ತಿದ್ದರು. 2018ರ ಆರಂಭದಲ್ಲಿ ಆಕೆ ಎಲ್‌ಎಲ್‌ಬಿ ಪರೀಕ್ಷೆಗೆಂದು ರಜೆ ಹಾಕಿದ್ದರು. ಆಕೆ ಮರಳಿ ಬಂದಾಗ 'ಗೋಗೋಯಿ ನಿಮ್ಮ ಬಗ್ಗೆ ವಿಚಾರಿಸಿದ್ದಾರೆ,' ಎಂಬುದಾಗಿ ಕೋರ್ಟ್‌ ಮಾಸ್ಟರ್‌ ಆಕೆಗೆ ಬಂದು ತಿಳಿಸಿದ್ದರು. ಅಲ್ಲಿಂದ ನ್ಯಾಯಮೂರ್ತಿಗಳ ಜತೆಗಿನ ಆಕೆಯ ಸಂಪರ್ಕ ಆರಂಭವಾಯಿತು.

ಅಫಿಡವಿಟ್‌ನಲ್ಲಿಗೋಗಾಯ್ ಬಗ್ಗೆ ಹೊಗಳಿಕೆಯೂ ಇದೆ

ಅಫಿಡವಿಟ್‌ನಲ್ಲಿಗೋಗಾಯ್ ಬಗ್ಗೆ ಹೊಗಳಿಕೆಯೂ ಇದೆ

ಈ ಸಂದರ್ಭದಲ್ಲಿ ಆಕೆಯ ಕೆಲಸವನ್ನು ಹೊಗಳುವ, ಭವಿಷ್ಯದ ಕನಸುಗಳನ್ನು ತಿಳಿದುಕೊಳ್ಳುವ, ಕುಟುಂಬದ ಬಗ್ಗೆ ವಿಚಾರಿಸುವ ಆಸಕ್ತಿಯನ್ನು ಗೊಗೋಯಿ ತೋರಿಸಿದ್ದರು. "ನ್ಯಾಯಮೂರ್ತಿ ಗೊಗೋಯಿ ನನ್ನ ಬಳಿಯಲ್ಲಿ ಹೀಗೆ ಧನಾತ್ಮಕವಾಗಿ ಮಾತನಾಡುವಾಗ ನನಗೆ ಹೆಮ್ಮೆಯಾಗುತ್ತಿತ್ತು ಮತ್ತು ಖುಷಿಯಾಗಿತ್ತು," ಎಂದು ತಮ್ಮ ಅಫಿಡವಿಟ್‌ನಲ್ಲಿ ಆಕೆ ಬರೆದುಕೊಂಡಿದ್ದಾರೆ.

"ನಾನು ನೀಡುವ ಕೆಲಸ ಭವಿಷ್ಯದಲ್ಲಿ ನಿನಗೆ ನೆರವಾಗುತ್ತದೆ," ಎಂದು ರಂಜನ್‌ ಗೊಗೋಯಿ ಹೇಳುತ್ತಿದ್ದುದನ್ನು ಆಕೆ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ನಾನು ಉತ್ತಮ ವಿದ್ಯಾರ್ಥಿಯಾಗಿದ್ದರಿಂದ, ಇನ್ನೂ ಹೆಚ್ಚು ಕಲಿಯಲು ಇಚ್ಛಿಸಿದ್ದರಿಂದ, ನಾನು ಜೀವನದಲ್ಲಿ ಮುಂದುವರಿಯಬೇಕು ಎಂದುಕೊಂಡಿದ್ದರಿಂದ ಈ ಅವಕಾಶದ ಬಗ್ಗೆ ಉತ್ಸುಕಳಾಗಿದ್ದೆ ಎನ್ನುತ್ತಾರೆ ಅವರು.

ಇದಾದ ಬಳಿಕ ನ್ಯಾಯಮೂರ್ತಿಗಳ ಸಿಬ್ಬಂದಿಯಿಂದ, ಒಮ್ಮೊಮ್ಮೆ ಸ್ವತಃ ಸಿಜೆಐರಿಂದ ಕರೆಗಳು ಬರಲು ಆರಂಭವಾಯಿತು. ಸಂಶೋಧನೆಗೆ ಸಹಾಯ ಮಾಡುವಂತೆ, ಆದೇಶ ಪ್ರತಿ, ಪುಸ್ತಕಗಳನ್ನು ತಂದು ಕೊಡುವಂತೆ ಅವರು ಕೇಳಿಕೊಳ್ಳುತ್ತಿದ್ದರು. ಕೆಲವನ್ನು ಅವರ ಕೊಠಡಿಗೆ ತಂದು ಕೊಡುವಂತೆ ಹೇಳುತ್ತಿದ್ದರು. ತೀರಾ ಗೌಪ್ಯವಾದ ಕೆಲಸವನ್ನು ಅವರು ಆಕೆಗೆ ನೀಡುತ್ತಿದ್ದರು. ಕೆಲವೇ ಜನರಿಗೆ ಮಾತ್ರ ನೀಡಿರುವ ನನ್ನ ಖಾಸಗಿ ಸಂಪರ್ಕ ಸಂಖ್ಯೆಯನ್ನು ನೀಡುತ್ತಿರುವುದಾಗಿ ಹೇಳಿದ ಅವರು ಫೋನ್‌ ನಂಬರ್‌ ಮತ್ತು ವಾಟ್ಸಪ್‌ ಸಂಖ್ಯೆ ನೀಡಿದ್ದರು. ಕೆಲವೊಮ್ಮೆ ಗೌಪ್ಯ ವಿಚಾರಗಳನ್ನು ಹಂಚಿಕೊಳ್ಳಬೇಕಿರುವುದರಿಂದ ಕುಟುಂಬ ಸದಸ್ಯರ ಮುಂದೆ ನನ್ನ ಫೋನ್‌ ಕರೆ ಸ್ವೀಕರಿಸಬಾರದು ಎಂಬುದಾಗಿ ಅವರು ನಿರ್ದೇಶಿಸಿದ್ದರು.

ಹೀಗೆ ಮಾತುಕತೆ ಬೆಳೆಯುತ್ತಾ ಹೋಗಿ ಕೋರ್ಟ್‌ ಸಮಯ ಅಲ್ಲದಿದ್ದಾಗ, ಸಂಜೆ ಕೋರ್ಟ್‌ ಮುಗಿದ ಮೇಲೆಯೂ ಆಕೆಯನ್ನು ಗೊಗೋಯಿ ಕೆಲಸಕ್ಕಾಗಿ ಕರೆಸಿಕೊಳ್ಳುತ್ತಿದ್ದರಂತೆ. ಈ ವೇಳೆಯೆಲ್ಲಾ ಆಕೆಯ ಕೆಲಸದ ಬಗ್ಗೆ, ವಿದ್ಯಾಭ್ಯಾಸದ ಪ್ರಗತಿ, ಮನೆಯ ಬಗೆಗೆಲ್ಲಾ ಕೇಳಿ ವಿಚಾರಿಸುತ್ತಿದ್ದರಂತೆ.

ಕಾಲ್‌ ಡೀಟೆಲ್ಸ್‌ನ್ನು ದಿನವೂ ಡಿಲೀಟ್‌

ಕಾಲ್‌ ಡೀಟೆಲ್ಸ್‌ನ್ನು ದಿನವೂ ಡಿಲೀಟ್‌

ಮೊದಲು ಆಕೆ ಅವರ ಗೃಹ ಕಚೇರಿಯಲ್ಲಿ ಬೆಳಿಗ್ಗೆ 8 ರಿಂದ 9 ಗಂಟೆವರೆಗೆ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಆಕೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ಎಂದು ಕೆಲಸ ನಿಗದಿಯಾಗಿತ್ತು. ಆದರೆ ಬರ ಬರುತ್ತಾ ಆಕೆಗೆ ಗೊಗೋಯಿ ಬೇಗ ಬರಲು ಹೇಳುತ್ತಿದ್ದರು. ಆಕೆ ಬೇಗ ಬರಲು ಆರಂಭಿಸುತ್ತಿದ್ದಂತೆ ಗೊಗೋಯಿ ಕಚೇರಿಯಲ್ಲಿದ್ದ ಇತರ ಇಬ್ಬರು ಸಿಬ್ಬಂದಿಗಳು ತಡವಾಗಿ ಬರುತ್ತಿದ್ದರು. ಅಂದರೆ ಅಲ್ಲಿ ಗೊಗೋಯಿ ಬಿಟ್ಟರೆ ಇರುತ್ತಿದ್ದುದು ಆಕೆ ಮಾತ್ರ.

ಗೊಗೋಯಿ ಆಕೆಯನ್ನು ದಿನಕ್ಕೆ ಕನಿಷ್ಟವೆಂದರೂ 3-4 ಸಲ ತಮ್ಮ ಕಚೇರಿಗೆ ಕರೆಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಗೊಗೋಯಿ ಹೆಚ್ಚು ಸಲುಗೆಯಿಂದ ಮಾತುಕತೆ ನಡೆಸಲು ಆರಂಭಿಸಿದರು. ಚಾಟಿಂಗ್‌ಗಳನ್ನು, ಕಾಲ್‌ ಡೀಟೆಲ್ಸ್‌ನ್ನು ದಿನವೂ ಡಿಲೀಟ್‌ ಮಾಡುವಂತೆ ಆಕೆಗೆ ಸೂಚಿಸಿದ್ದರು.

ದಿನ ಕಳೆದಂತೆ ಸಲುಗೆ ಮತ್ತಷ್ಟು ಹೆಚ್ಚಾಯಿತು. ಹೆಚ್ಚೆಚ್ಚು ಹೊಗಳುತ್ತಿದ್ದರು. ಒಂದು ಸಂದರ್ಭದಲ್ಲಿ ಗೊಗೋಯಿ ನನಗೆ ಮೂರು ಆಸ್ತಿಗಳಿವೆ ಒಂದು ಹೆಂಡತಿ, ಇನ್ನೊಂದು ಮಗಳು ಮತ್ತೊಂದು ನೀನು ಎಂದಿದ್ದರಂತೆ. ಮುಂದೆ ಅಕ್ಟೋಬರ್‌ 3ನೇ ತಾರೀಕು ಅವರು ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಮಾರಂಭಕ್ಕೆ ಆಕೆ ತನ್ನ ಗಂಡನ ಜತೆ ಸಾಕ್ಷಿಯಾಗಿದ್ದರು.

ಕುಟುಂಬದ ಬಗ್ಗೆ ವಿಚಾರಿಸುತ್ತಿದ್ದ ವೇಳೆ ಆಕೆ ತನ್ನ ಗಂಡನ ವಿಶೇಷ ಚೇತನ ಸಹೋದರ ಉದ್ಯೋಗಕ್ಕಾಗಿ ಪರದಾಡುತ್ತಿದ್ದಾನೆ ಎಂಬುದನ್ನು ಗೊಗೋಯಿಗೆ ಸಹಜವಾಗಿ ಹೇಳಿದ್ದರು. ಈ ಸಂದರ್ಭದಲ್ಲಿ ತಮ್ಮ ವಿಶೇಷಾಧಿಕಾರ ಬಳಸಿದ ಮುಖ್ಯ ನ್ಯಾಯಮೂರ್ತಿಗಳು ಅವರನ್ನು ಅಕ್ಟೋಬರ್‌ 8ರಂದು ಸುಪ್ರೀಂ ಕೋರ್ಟ್‌ನ ಸೇವಕರಾಗಿ ನೇಮಿಸಿಕೊಂಡರು.

"ವೈದ್ಯಕೀಯ ಪರೀಕ್ಷೆಯಲ್ಲಿ ಆತ ಈ ಹುದ್ದೆಗೆ ಸೂಕ್ತವಾದವನಲ್ಲ. ಹೀಗಿದ್ದರೂ ನಾನು ಆತನನ್ನು ನೇಮಿಸಿಕೊಂಡೆ," ಎಂಬುದಾಗಿ ಮರುದಿನ ಗೊಗೋಯಿ ಆಕೆಗೆ ಹೇಳಿದರು. ಇದರಿಂದ ಸಹೋದರಿಗೆ ಉದ್ಯೋಗ ಕೊಡಿಸಿದ ಸಿಜಿಐ ಬಗ್ಗೆ ಆಕೆ ಧನ್ಯತೆ ವ್ಯಕ್ತಪಡಿಸಿದ್ದರು.

"ಆ ದಿನ ನವರಾತ್ರಿಯಾಗಿದ್ದರಿಂದ ನಾನು ಕೇಸರಿ ಕುರ್ತಾ ಮತ್ತು ದುಪ್ಪಟ್ಟಾ ಹಾಕಿಕೊಂಡಿದ್ದೆ," ಎಂದು ಅಂದು ನಡೆದಿದ್ದನ್ನು ನೆನಪಿಸಿಕೊಳ್ಳುವ ಆಕೆ, "ಸಿಜೆಐ ನನ್ನ ಬಟ್ಟೆ ನೋಡಿ, 'ನೀನು ಇವತ್ತು ತುಂಬಾ ಚಂದ ಕಾಣಿಸ್ತಿದ್ದೀಯಾ,' ಎಂದು ಹೇಳಿದರು." ನಂತರ ತಮ್ಮ ಕುರ್ಚಿ ಪಕ್ಕದಲ್ಲಿ ಬಂದು ನಿಲ್ಲುವಂತೆ ಸೂಚಿಸಿದರು. "ನಾನು ಹೋಗಿ ನಿಲ್ಲುತ್ತಿದ್ದಂತೆ, 'ನೀನು ನನಗೇನು ಕೊಡುತ್ತೀಯಾ?' ಎಂದು ಪ್ರಶ್ನಿಸಿದರು."

ಕೈಯನ್ನು ಸವರುತ್ತಾ ಹೋದರು...

ಕೈಯನ್ನು ಸವರುತ್ತಾ ಹೋದರು...

"ಮುಖ್ಯ ನ್ಯಾಯಮೂರ್ತಿಗಳು ನಂತರ ತಲೆಯ ಹಿಂಬಾಗದಿಂದ ಆರಂಭಿಸಿ ಕೆಳಗಿನವರೆಗೆ ಕೈಯನ್ನು ಸವರುತ್ತಾ ಹೋದರು..." ಎಂದು ತಮ್ಮ ಮಾತು ಮುಂದುವರಿಸುವ ಆಕೆ, "ನನ್ನ ದೇಹ ದೃಢವಾಯಿತು ಮತ್ತು ಕಂಪಿಸಲು ಆರಂಭಿಸಿತು," ಎಂಬುದಾಗಿ ಅಫಿಡವಿಟ್‌ನಲ್ಲಿ ಬರೆದುಕೊಂಡಿದ್ದಾರೆ. ಬಹುಶಃ ಇದು ಗೊಗೋಯಿಗೆ ಅರ್ಥವಾಯಿತು ಎಂದು ಕಾಣುತ್ತದೆ. ಅವರು ಸಣ್ಣ ಮಕ್ಕಳಿಗೆ ಮಾಡಿದಂತೆ ಕೆನ್ನೆಯನ್ನು ಒಮ್ಮೆ ಹಿಡಿದು ಎಳೆದರು. "ನಾನು ನನ್ನ ಮಗಳ ಜತೆಗೂ ಹೀಗೆಯೇ ಇರುತ್ತೇನೆ," ಎಂದು ಹೇಳಿದರು. ನಂತರ ಅವರು ನಾನು ಏನು ಕೊಡಬೇಕೆಂದಿದ್ದೇನೆ ಎಂಬುದನ್ನು ಬರೆದು ತನಗೆ ತೋರಿಸುವಂತೆ ಹೇಳಿದರು ಎಂಬುದಾಗಿ ಅಂದು ನಡೆದ ಘಟನೆಯನ್ನು ಎಳೆ ಎಳೆಯಾಗಿ ಪತ್ರದಲ್ಲಿ ವಿವರಿಸುತ್ತಾರೆ.

ಆದರೆ 'ಏನೋ ತಪ್ಪಾಗಿದೆ' ಎಂದು ಆಕೆ ನಡೆದಿದ್ದನ್ನು ಮರೆತು ಅಂದು ಸಾಮಾನ್ಯ ದಿನದಂತೆ ಕೆಲಸದಲ್ಲಿ ತೊಡಗಿಸಿಕೊಂಡರು. "ಬಹುಶಃ ತಪ್ಪು ನಂದೇ ಇರಬಹುದು ಎಂದು ನಾನು ಅಂದುಕೊಂಡೆ."

ಮರುದಿನ ಗೊಗೋಯಿ ಮತ್ತೆ ತಮ್ಮ ಗೃಹ ಕಚೇರಿಗೆ ಆಕೆಯನ್ನು ಕರೆಸಿಕೊಂಡರು. ಆಕೆ ಎಂದಿನಂತೆ ನೋಟ್‌ಪ್ಯಾಡ್‌ ಮತ್ತು ಪೆನ್ಸಿಲ್‌ ಹಿಡಿದು ಬಾಗಿಲ ಬಳಿಯಲ್ಲಿ ನಿಂತರೆ, ಕರೆದು ಎದುರುಗಡೆ ಕುಳಿತುಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಮತ್ತೆ ಭಾಮೈದನ ಉದ್ಯೋಗದ ವಿಚಾರ ಪ್ರಸ್ತಾಪಿಸಿ ಪುನಃ 'ನೀನು ನನಗೇನು ಕೊಡುತ್ತೀಯಾ?' ಎಂದು ಪ್ರಶ್ನಿಸಿದರು.

ಈ ಬಾರಿ ಆಕೆ ಸಿದ್ಧವಾಗಿದ್ದರು. ಆಕೆ ತಾನು ಬರೆದ ನೋಟ್‌ಪ್ಯಾಡ್‌ನ್ನು ಸಿಜೆಐ ಮುಂದೆ ಇಟ್ಟರು. ಅದರಲ್ಲಾಕೆ, ಅವರ ಸಹಾಯ ಮತ್ತು ಬೆಂಬಲಕ್ಕೆ ಆಕೆ ಮತ್ತು ಆಕೆಯ ಕುಟುಂಬಸ್ಥರು ಎಷ್ಟು ಪುಣ್ಯವಂತರು ಎಂಬುದಾಗಿ ಬರೆದಿದ್ದರಂತೆ.

"ಇದನ್ನು ಓದಿ ತಮ್ಮ ಕುರ್ಚಿಯಿಂದ ಮೇಲೆದ್ದ ಗೊಗೋಯಿ ಆಕೆಯ ಎಡಭಾಗಕ್ಕೆ ಬಂದು ನಿಂತರು. ಶಿಷ್ಟಾಚಾರದಂತೆ ಆಕೆಯೂ ಕುರ್ಚಿಯಿಂದ ಮೇಲೆದ್ದು ನಿಂತರು. ಈಗ ಆಕೆಯ ಕೈಯಲ್ಲಿದ್ದ ನೋಟ್‌ ಪ್ಯಾಡ್‌ ತೆಗೆದುಕೊಂಡು ಟೇಬಲ್‌ ಮೇಲಿಟ್ಟ ಗೊಗೋಯಿ ಆಕೆಯ ಕೈನ್ನು ಹಿಡಿದುಕೊಂಡು ಎಷ್ಟು ನುಣುಪಾಗಿದೆ ಎಂಬ ಮಾತು ಆರಂಭಿಸಿದರು. ನಂತರ ನನ್ನ ಕೆನ್ನೆಗೆ ಚಿವುಟಿದರು."

ಬಿಟ್ಟು ಬಿಡಲು ಸಿದ್ದವಿರಲಿಲ್ಲ

ಬಿಟ್ಟು ಬಿಡಲು ಸಿದ್ದವಿರಲಿಲ್ಲ

ಮುಂದುವರಿದು "ಅವರು ನನ್ನನ್ನು ಸೊಂಟದ ಸುತ್ತಲೂ ಹಿಡಿದುಕೊಂಡು ನನ್ನನ್ನು ಅಪ್ಪಿಕೊಂಡರು. ತಮ್ಮ ದೇಹವನ್ನು ನನ್ನ ದೇಹಕ್ಕೆ ಒತ್ತುತ್ತಾ ತಮ್ಮ ಕೈಯಿಂದ ನನ್ನ ದೇಹವನ್ನು ಪೂರ್ತಿ ಸ್ಪರ್ಷಿಸತೊಡಗಿದರು. ಆದರೆ ಮುಂದುವರಿಯಲು ನಾನು ಬಿಡಲಿಲ್ಲ. ನನ್ನನ್ನು ಹಿಡಿದುಕೋ ಎಂದು ಅವರು ಹೇಳಿದರು. ನಾನು ದೃಢವಾಗುತ್ತಿದ್ದುದರಿಂದ ದೇಹವನ್ನು ದೂರಕ್ಕೆ ಎಳೆದುಕೊಳ್ಳುತ್ತಿದ್ದರೂ ಅವರು ಬಿಟ್ಟು ಬಿಡಲು ಸಿದ್ದವಿರಲಿಲ್ಲ," ಎನ್ನುವ ಆಕೆ, "ಕೊನೆಗೆ ನಾನು ಬಲವಂತವಾಗಿ ನನ್ನ ಕೈಯಿಂದ ಅವರನ್ನು ದೂರ ತಳ್ಳಬೇಕಾಯಿತು," ಎನ್ನುತ್ತಾರೆ.

ಆಕೆ ದೂರ ಸರಿಯುತ್ತಿದ್ದಂತೆ ಸಿಜೆಐ ತಮ್ಮ ತಲೆಯನ್ನು ಬೀರೊಂದಕ್ಕೆ ಚಚ್ಚಿಕೊಂಡರು ಎಂಬುದಾಗಿ ಆಕೆ ತನ್ನ ಅಫಿಡವಿಟ್‌ನಲ್ಲಿ ಬರೆದಿದ್ದಾರೆ.

ಇದಾದ ನಂತರ ಆಘಾತದಲ್ಲಿ ಆಕೆ ನ್ಯಾಯಮೂರ್ತಿಗಳ ಕೊಠಡಿಯಿಂದ ಹೊರ ಬಂದರು. "ಅಲ್ಲಿಂದ ನಂತರ ಇಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದು ನನಗೆ ಮನವರಿಕೆಯಾಯಿತು. ಇದಾದ ಕೆಲವು ದಿನಗಳ ನಂತರ ಅವರು ನನ್ನನ್ನು ಮತ್ತೆ ತಮ್ಮ ಕಚೇರಿಗೆ ಕರೆಸಿಕೊಂಡರು," ಎಂಬುದಾಗಿ ಅಫಿಡವಿಟ್‌ ಹೇಳುತ್ತದೆ.

ಈ ಬಾರಿ ಅವರು, "ಇಲ್ಲಿ ನಡೆದಿದ್ದನ್ನು ಯಾರ ಬಳಿಯಲ್ಲೂ ಹೇಳಬೇಡ," ಎಂಬುದಾಗಿ ಆಕೆಗೆ ಹೇಳಿದರಂತೆ. ಅಷ್ಟೇ ಅಲ್ಲ ವಿನಂತಿಯಿಂದ ಬೆದರಿಕೆಗೆ ಹೊರಳಿದ ಅವರು, "ಒಂದೊಮ್ಮೆ ಹೇಳಿದರೆ ನೀನು ಮತ್ತ ನಿನ್ನ ಕುಟುಂಬ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ," ಎಂಬ ಎಚ್ಚರಿಕೆಯನ್ನು ನೀಡಿದರಂತೆ. "ಹತಾಶೆ ಮತ್ತು ಭಯಗೊಂದಿದ್ದ ನಾನು ಅವರು ಬೇಡಿಕೆಗಳಿಗೆ ಒಪ್ಪಿಕೊಂಡೆ. ನಂತರ ಅವರು ಪತ್ರವೊಂದನ್ನು ಬರೆಯಲು ಹೇಳಿದರು ಅದರಲ್ಲಿ ಅವರು, 'ನಾನು ನಿಮ್ಮ ಚಾರಿತ್ರ್ಯಕ್ಕೆ ಹಾನಿ ಮಾಡುವುದಿಲ್ಲ. ನೀವು ನನ್ನನ್ನು ಹಿಡಿದುಕೊಳ್ಳಬಹುದೇ?' ಎಂದು ಬರೆಯಲು ಹೇಳಿದರು. ಈ ಮೂಲಕ ನಾನೇ ಹಿಡಿದುಕೊಳ್ಳಲು ಹೋಗಿದ್ದೆ ಎಂಬುದಾಗಿ ಅವರು ಬರೆಯಲು ಹೇಳಿದರು," ಎನ್ನುತ್ತಾರೆ ಸುಪ್ರೀಂ ಕೋರ್ಟ್‌ನ ಮಾಜಿ ಉದ್ಯೋಗಿ. ಇದು ತಪ್ಪು ಎನ್ನುತ್ತಾರೆ ಅವರು. "ಆದರೂ ಭಯ ಮತ್ತು ಆಘಾತದಿಂದ ಅವರು ಹೇಳಿದಂತೆಯೇ ನಾನು ಬರೆದೆ," ಎಂದು ಅವರು ವಿವರಿಸುತ್ತಾರೆ.

ನಂತರ ಅವರ ವರ್ತನೆ ಸಂಪೂರ್ಣ ಬದಲಾಯಿತು

ನಂತರ ಅವರ ವರ್ತನೆ ಸಂಪೂರ್ಣ ಬದಲಾಯಿತು

ಆದರೆ ಯಾವತ್ತೂ ಫೋನ್‌ ಎತ್ತುತ್ತಿದ್ದ, ವಾಟ್ಸಾಪ್‌ ಮಾಡುತ್ತಿದ್ದ ಗೊಗೋಯ್ ಅಂದು ಮಾತ್ರ ಫೋನ್‌ ಎತ್ತಿಕೊಳ್ಳಲಿಲ್ಲ. ನಂತರ ಗೊಗೋಯಿ ಆಪ್ತ ಕಾರ್ಯದರ್ಶಿಗೆ ಆಕೆ ಪತ್ರವೊಂದನ್ನು ಬರೆದರು.

ಅಕ್ಟೋಬರ್‌ 12ನೇ ತಾರೀಖು ಗೊಗೋಯಿ ಕಚೇರಿಗೆ ಹೋದಾಗ ಅವರ ವರ್ತನೆ ಪೂರ್ತಿ ಬದಲಾಗಿತ್ತು. ತಮ್ಮ ಚೇಂಬರ್‌ಗೆ ಕರೆಯುವಾಗ ಜತೆಯಲ್ಲಿ ಇನ್ನೊಬ್ಬರು ಇರುವಂತೆ ನೋಡಿಕೊಂಡಿದ್ದರು. ಜತೆಗೆ ಕೊಠಡಿಯ ಬಾಗಿಲು ತೆರೆದಿರುವಂತೆ ಖಾತರಿಪಡಿಸಿಕೊಂಡಿದ್ದರು. ಒಟ್ಟಾರೆ ನನ್ನದಲ್ಲ ಆಕೆಯದೇ ನಡವಳಿಕೆ ಸರಿ ಇಲ್ಲ ಎಂಬುದನ್ನು ಬಹಿರಂಗವಾಗಿ ತೋರಿಸಿಕೊಳ್ಳಲು ಅವರು ಯತ್ನಿಸಿದ್ದರು.

ಆಕೆ ಇದರಿಂದ ತುಂಬಾ ಮುಜುಗರಕ್ಕೆ ಒಳಗಾಗಿ ದಿಕ್ಕು ತೋಚದಾದರು. ಅವರ ನಡವಳಿಕೆಯಲ್ಲಾದ ವ್ಯತ್ಯಾಸವನ್ನು ಪತಿ ಗುರುತಿಸಿದರಾದರೂ ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಅವರು ನಿರ್ಧರಿಸಿದ್ದರು. ಆದರೆ ಅಲ್ಲಿಂದ ನಂತರ ಅವರ ಬದುಕಿನಲ್ಲಿ ಭಾರಿ ಬದಲಾವಣೆಗಳು ನಡೆದವು. "ನನ್ನನ್ನು ಸಂತ್ರಸ್ತಳನ್ನಾಗಿಸುವ, ನನಗೆ ಕಿರುಕುಳ ನೀಡುವ ಪ್ರಕ್ರಿಯೆ ಆರಂಭವಾಯಿತು," ಎಂದು ಅಫಿಡವಿಟ್ ವಿವರಿಸುತ್ತದೆ.

ಇಂದು ಅಸಹಾಯಕರಾಗಿ ಪ್ರಶ್ನಿಸಿದ್ದಾರೆ.

ಇಂದು ಅಸಹಾಯಕರಾಗಿ ಪ್ರಶ್ನಿಸಿದ್ದಾರೆ.

ಜನವರಿ 10ರಂದು ತಿಲಕ್‌ ಮಾರ್ಕ್‌ ಪೊಲೀಸ್‌ ಠಾಣಾಧಿಕಾರಿ ನರೇಶ್‌ ಸೋಲಂಕಿ ಗಂಡನನ್ನು ಕರೆಸಿಕೊಂಡು ಗೋಗೋಯಿ ಬಳಿ ಕರೆದುಕೊಂಡು ಹೋಗಿ ಹೆಂಡತಿಯಿಂದ ಕ್ಷಮೆ ಕೇಳಿಸುವಂತೆ ಸೂಚಿಸಿದರು.

ಮಿ. ಗೊಗೋಯಿ ನನಗೆ 'ನಿನ್ನ ಮೂಗನ್ನು ನೆಲಕ್ಕೆ ಉಜ್ಜಿ ಇಲ್ಲಿಂದ ಜಾಗ ಖಾಲಿ ಮಾಡು' ಎಂದರು. ಆ ಸಮಯದಲ್ಲಿ ನನಗೆ ಬೇಕಾಗಿದ್ದ ಒಂದೇ ವಿಷಯವೆಂದರೆ ನನ್ನನ್ನು ಮತ್ತು ನನ್ನ ಕುಟುಂಬವನ್ನು ಉಳಿಸಿಕೊಳ್ಳಬೇಕಾಗಿತ್ತು. ನಾನು ಗೊಗೋಯಿ ಕಾಲಿಗೆ ಬಿದ್ದೆ ಮತ್ತು ಅವರ ಪಾದಕ್ಕೆ ಮೂಗನ್ನು ಉಜ್ಜಿದೆ. ಮತ್ತು ತಪ್ಪಾಯ್ತು ಎಂದು ಹೇಳಿ ಅಲ್ಲಿಂದ ಬಂದೆ."

ಜತೆಗೆ ಯಾರಿಗೂ ಈ ಬಗ್ಗೆ ಹೇಳಬಾರದು ಎಂದ ಸೋಲಂಕಿ, "ನೀವು ಹೇಳಿದರೂ ಯಾರೂ ಕೇಳುವುದಿಲ್ಲ. ಇಲ್ಲಿ (ಪ್ರಕರಣದಲ್ಲಿ)ರುವುದು ಮುಖ್ಯ ನ್ಯಾಯಮೂರ್ತಿಗಳು," ಎಂದಿದ್ದಾರೆ.

ಇದೆಲ್ಲಾ ನಡೆದ ಬಳಿಕ ಎರಡು ತಿಂಗಳು ಕಳೆಯಿತು. "ಈ ಅವಧಿಯಲ್ಲಿ ನಾನು ತೀವ್ರ ಖಿನ್ನತೆಯಲ್ಲಿದ್ದೆ. ಈ ಸಂದರ್ಭದಲ್ಲಿ ನನ್ನ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಗಾಸಿಪ್‌ಗಳು ಹರಿದಾಡುತ್ತಿದ್ದವು. ಸಿಜೆಐ ನಿರ್ದೇಶನದಂತೆ ನಾನು ಮೌನವಾಗಿದ್ದರೂ ನನಗೆ ಯಾಕೆ ಹೀಗೆ ತೊಂದರೆ ಕೊಡಲಾಯಿತು ಎಂದು ಆಕೆ ಇಂದು ಅಸಹಾಯಕರಾಗಿ ಪ್ರಶ್ನಿಸಿದ್ದಾರೆ.

English summary
A former employee of the Supreme Court of India accused the chief justice of India, Ranjan Gogoi, of sexual harassment and persecution. Not likely to get justice, says woman complainant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X