• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಳೆ ಟಿವೀಲಿ ಮಾಲಾಶ್ರೀ ಪಿಚ್ಚರ್... ಶಾಲೆಗೆ ಗ್ಯಾರಂಟಿ ಚಕ್ಕರ್!

|

'ನಾಳೆ ಮಧ್ಯಾಹ್ನ ಟಿವೀಲಿ ಮಾಲಾಶ್ರೀ ಪಿಚ್ಚರ್(ಪಿಕ್ಚರ್, ಮೂವಿ) ಇದ್ದಡ...' ಕಾಲುದಾರಿಯಲ್ಲಿ ಒಬ್ಬರ ಹಿಂದೊಬ್ಬರು ಶಾಲೆಗೆ ಹೋಗುತ್ತಿದ್ದಾಗ ಸ್ನೇಹಿತೆಯೊಬ್ಬಳು ಉಲಿದ ಆ ಮಾತು ಕೇಳಿ ಎಲ್ಲರೂ ತಂತಮ್ಮ ಜಾಗದಲ್ಲೇ ನಿಂತುಬಿಟ್ಟೆವು. ಒಂದುಕ್ಷಣ ಮೌನ... ಮರು ಕ್ಷಣ... "ಶಾಲೆಗೆ ಚಕ್ಕರ್.. ಪಿಚ್ಚರ್ ಗೆ ಹಾಜರ್..." ಎಂಬ ಒಕ್ಕೊರಲ ಧ್ವನಿ ಎಲ್ಲರ ಬಾಯಿಂದಲೂ ಸುಪ್ರಭಾತದಂತೆ ಮೊಳಗಿ ಕಾಲುದಾರಿಯನ್ನು ದಾಟಿ ಬಲಬದಿಯ ತೋಟ, ಎಡಬದಿಯ ಬೆಟ್ಟ ಗುಡ್ಡಗಳ ಸಂದು-ಗೊಂದುಗಳಲ್ಲಿ ಪ್ರತಿಧ್ವನಿಸಿತ್ತು!

'ಯಾವ್ ಪಿಚ್ಚರ್ರೆ?' ಒಂದಿಬ್ಬರು ಒಟ್ಟಿಗೇ ಪ್ರಶ್ನೆ ಇತ್ತೆವು. 'ಮಾಲಾಶ್ರೀ ಮಾಮಾಶ್ರೀ...' ಅಂದ್ಲು ಸ್ನೇಹಿತೆ. ಆಗ ಮತ್ತೊಮ್ಮೆ 'ಹೋ' ಅನ್ನೋ ಸದ್ದು. ಒಟ್ಟಿನಲ್ಲಿ ನಾಳೆ ಮಧ್ಯಾಹ್ನ ಶಾಲೆಗೆ ಚಕ್ಕರ್ ಅನ್ನೋದಂತೂ ಆವತ್ತೇ ನಿರ್ಧಾರವಾಗಿತ್ತು!

ಚೇಳಿನ ಬಾಲಕ್ಕೆ ದಾರ ಕಟ್ಟುವವರ್ಯಾರು? ಬಾಲ್ಯದ ಆಟ ಆ ಹುಡುಗಾಟ..!

ಮರುದಿನ ಮಾಲಾಶ್ರೀ ಸಿನೆಮಾ ಇರುವುದರಿಂದ ಅದಾಗಲೇ ಕೆಲವರಿಗೆ ಶಾಲೆ ಮುಗಿಯುವ ಹೊತ್ತಿಗೆ ಸಣ್ಣಗೆ ಕೆಮ್ಮು, ನೆಗಡಿ, ಕಾಲುನೋವಿನಂಥ 'ಶಾಲೆಗೆ ರಜೆ ಹಾಕಲೇಬೇಕಾಗಬಹುದಾದ' ಖಾಯಿಲೆಗಳು ಶುರುವಾಗಿದ್ದವು!

'ಯಾಕ್ರೋ...? ಹಿನ್ಗಾರ್(ನಮ್ಮೂರ ಹೆಸರು-ಇಲ್ಲಿನ ಜನ ಹೆಚ್ಚಾಗಿ ಹೈನುಗಾರಿಕೆಯನ್ನೇ ನಂಬಿಕೊಂಡಿದ್ದರಿಂದ ಹೈನುಗಾರಿಕೆಯೇ ಜನರ ಆಡುಮಾತಲ್ಲಿ ಹಿನ್ಗಾರ್ ಆಗಿ ಕ್ರಮೇಣ ಬದಲಾಗಿದೆ) ಮಕ್ಳಿಗೆ ಒಟ್ಟೊಟ್ಟಿಗೆ ಕೆಮ್ಮು ಶುರುವಾಗಿದೆ!" ಅಂತ ಟೀಚರ್ ಕೇಳಿದ ಮೇಲಂತೂ ಮತ್ತಷ್ಟು ಸಮಾಧಾನವಾಗಿತ್ತು.

ಮಧ್ಯಾಹ್ನ ಹುಷಾರು ತಪ್ಪೋದು ಮೊದಲೇ ಗೊತ್ತಿತ್ತು!

ಮಧ್ಯಾಹ್ನ ಹುಷಾರು ತಪ್ಪೋದು ಮೊದಲೇ ಗೊತ್ತಿತ್ತು!

ಮರುದಿನ ಬೆಳಗ್ಗೆ ಶಾಲೆಗೆ ಬಂದು, ಮಧ್ಯಾಹ್ನ ಊಟಕ್ಕೆಂದೇ ಕಾದಿದ್ದು ಮನೆಗೆ ಓಟಕ್ಕಿತ್ತಿದ್ದಾಯ್ತು! ಮಧ್ಯಾಹ್ನ ಹುಷಾರು ತಪ್ಪೋದು ಮೊದಲೇ ಗೊತ್ತಿದ್ದರಿಂದ ಅಂದು ಯಾರೂ ಲಂಚ್ ಬಾಕ್ಸ್ ಸಹ ಕೊಂಡೊಯ್ದಿರಲಿಲ್ಲ ಅನ್ನೋದು ಬೇರೆ ಮಾತು! ಶಾಲೆಯಿಂದ ನೂರು ಮಾರು ದೂರದಲ್ಲಿ ಅಕ್ಕೋರ(ಟೀಚರ್) ಮನೆ. ಅವರೇನಾದರೂ ಕಂಡ್ರೆ ಅಷ್ಟೇ ಕತೆ! ಆದ್ರಿಂದ ಶಾಲೆಯ ಹಿಂಬದಿ ಬೆಟ್ಟ ಹತ್ತಿ, ಯಾವ್ಯಾವುದೋ ಕಾಡು ದಾರಿ ಹುಡುಕಿಕೊಂಡು ಮನೆ ಸೇರಿದೆವು!

ಮನೇಲಿ ಕಾಯುತ್ತಿದ್ದ ಬಿಸಿ ಬಿಸಿ ಊಟವನ್ನು ಮನಸಾರೆ ಮುಗಿಸಿ, 'ಕೆಳಗಿನ ಮನೆ'ಗೆ(ಸಾಲು ಮನೆಯಲ್ಲಿ ಕೊನೆಯ ಮನೆ) ತೆರಳಿದ್ದಾಯ್ತು. ಇಡೀ ಊರಿಗೆ ಟಿವಿ ಇದ್ದಿದ್ದು 'ಕೆಳಗಿನ ಮನೆ'ಯಲ್ಲಿ ಮಾತ್ರ! ಬರೋಬ್ಬರಿ ಎರಡೂವರೆ ತಾಸಿನ ಸಿನಿಮಾ ಮುಗಿಯುವವರೆಗೂ ಎಲ್ಲೂ ಕದಲದೆ ನೋಡಿದೆವು. 'ಮಾಮಾಶ್ರೀ...' ಅಂತ ಸೊಸೆ ಮಾಲಾಶ್ರೀ, ಮಾವ ಮುಖ್ಯಮಂತ್ರಿ ಚಂದ್ರುಗೆ ಸವಾಲು ಹಾಕೋ ರೀತಿಯಂತೂ ಮೂರ್ನಾಲ್ಕು ದಿನ ನಮ್ಮೆಲ್ಲರ ಕನಸಿನಲ್ಲೂ ಬರುತ್ತಿತ್ತು.

ಬಾಲ್ಯದ ನೆನಪು : ಹಿಂಗಿದ್ರು ನೋಡ್ರಿ ಧಾರವಾಡದಾಗ ನಮ್ಮ ನದಾಫ್ ಮಾಸ್ತರು!

ಮಾಲಾಶ್ರೀ ಮೂವಿ ಬಂದ್ರೆ ಸಾಮೂಹಿಕ ಅನಾರೋಗ್ಯ!

ಮಾಲಾಶ್ರೀ ಮೂವಿ ಬಂದ್ರೆ ಸಾಮೂಹಿಕ ಅನಾರೋಗ್ಯ!

ಹೀಗೆ ಮಾಲಾಶ್ರೀ ಸಿನೆಮಾ ಬಂದಾಗಲೆಲ್ಲ ನಮ್ಮೂರ ಮಕ್ಕಳಿಗೆ ಸಾಮೂಹಿಕವಾಗಿ ಅನಾರೋಗ್ಯವಾಗೋದು ಮಾಮೂಲಾಗಿತ್ತು! ಮಾಲಾಶ್ರಿಯ ಪೊಲೀಸ್ ಪಾತ್ರದ ಚಿತ್ರಗಳು ಬಂದರಂತೂ ಆ ಪಿಕ್ಚರ್ ಮುಗಿದ ಮೇಲೆ, ನಾವೂ ಕಳ್ಳ-ಪೊಲೀಸ್ ಆಡದೆ ಮಲಗುತ್ತಿರಲಿಲ್ಲ! ಶಿರಸಿ ಜಾತ್ರೆಯದೋ, ಸಿದ್ದಾಪುರದ ಬಸವಣ್ಣನ ಜಾತ್ರೆಯದೋ, ಬಿಳಗಿ ಜಾತ್ರೆಯದೋ ಕನ್ನಡಕ ಹಾಕಿಕೊಂಡು, ಅಪ್ಪನ ಹಾಳೆ ಟೊಪ್ಪಿ ಹಾಕಿಕೊಂಡು, ಶಾಲೆಗೆ ಬುಧವಾರ ಮತ್ತು ಶನಿವಾರ ಧರಿಸಿಕೊಂಡು ಹೋಗಬೇಕಿದ್ದ ಬಿಳಿಯ ಶೂ ಹಾಕಿಕೊಂಡು ನಾವೆಲ್ಲ ಪೊಲೀಸ್ ಆಗಿಬಿಡುತ್ತಿದ್ದೆವು! ಮಾಲಾಶ್ರೀಯವರನ್ನು ಆವಾಹನೆ ಮಾಡಿಕೊಳ್ಳುತ್ತಿದ್ದೆವು! ಅದು ಮಾಲಾಶ್ರಿ ಸಿನಿಮಾದ ಮಹಿಮೆ!

ಬಾಲ್ಯದ ನೆನಪು: ಹೊರಗೆ ಮಳೆ, ಒಳಗೆ ಆಹಾ! ಪತ್ರೊಡೆ, ಕಳಲೆ

ರಜೆ ಚೀಟಿ ರೆಡಿ ಮಾಡೋಕೆ 'ವಿಶೇಷ ಅಧಿವೇಶನ!'

ರಜೆ ಚೀಟಿ ರೆಡಿ ಮಾಡೋಕೆ 'ವಿಶೇಷ ಅಧಿವೇಶನ!'

ಅವೆಲ್ಲ ಇರ್ಲಿ, ಇವತ್ತು ಚಕ್ಕರ್ ಹಾಕಿದ್ದಾಯ್ತು! ನಾಳೆ ಶಾಲೆಗೆ ರಜೆ ಚೀಟಿ ತಗೊಂಡು ಹೋಗ್ಬೇಕಲ್ಲ! ಆಗ ಶುರುವಾಗಿದ್ದು ಪಜೀತಿ. ನಾವೆಲ್ಲ ಹುಡುಗರು ಆಗಾಗ ಮೀಟಿಂಗ್ ಗೆ ಸೇರುತ್ತಿದ್ದ ಜಾಗದಲ್ಲಿ ಅಂದೂ ಸೇರಿದೆವು. ಸ್ವಲ್ಪ ಮಹತ್ವದ 'ಅಧಿವೇಶನ' ಆಗಿದ್ದರಿಂದ ದೊಡ್ಡವರ್ಯಾರೂ ಆ ಕಡೆ ಸುಳಿಯದ ಸಮಯ ನೋಡಿ ಈ ಮೀಟಿಂಗ್ ಅರೆಂಜ್ ಆಗಿತ್ತು! ಶಾಲೆಗೆ ರಜೆ ಚೀಟಿ ರೆಡಿ ಮಾಡುವ ಸೆಶನ್ ಅದು! ರಜೆಯ ಕಾರಣವನ್ನು ಒಂದಿಬ್ಬರು ಸೇಮ್ ಬರೆದುಬಿಟ್ರೆ ಟೀಚರ್ ಗೆ ಡೌಟ್ ಬರುತ್ತಲ್ಲ, ಆದ್ರಿಂದ ಯಾರ್ಯಾರು ಏನೇನು ಬರ್ಯೋದು ಅನ್ನೋದನ್ನು ಚರ್ಚಿಸುವುದಕ್ಕೆ ಶುರುಮಾಡಿದೆವು. 'ಒಬ್ಬರಿಗೆ ವಿಪರೀತ ತಲೆ ನೋವು, ಇನ್ನೊಬ್ಬರಿಗೆ ಕೆಮ್ಮು-ಕೆಮ್ಮು, ಮತ್ತೊಬ್ಬನಿಗೆ ಕೈ ನೋವು....' ರಿಪೀಟ್ ಆಗಬಾರದಲ್ಲ ಅನ್ನೋ ಕಾರಣಕ್ಕೆ ಒಬ್ಬರು ಬಲಗಾಲು ನೋವು ಅಂತ ಬರೆದರೆ ಇನ್ನೊಬ್ಬರು ಎಡಗಾಲು ನೋವು ಎಂದು ಬರೆದಿದ್ದೆವು! ನಾವೆಷ್ಟು ಮೂರ್ಖರಾಗಿದ್ದೆವು ಅನ್ನೋದನ್ನು ಈಗ ನೆನೆದರೆ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತೆ!

ಸ್ವಾತಂತ್ರ್ಯ ದಿನಾಚರಣೆ : ಮಳೆಯ ಹಾಡು, ಅರ್ಧ ಭಾಷಣ, ಲಾಡು!

ಆ ಅವಮಾನ ಮರ್ಯೋದು ಹೇಗೆ!?

ಆ ಅವಮಾನ ಮರ್ಯೋದು ಹೇಗೆ!?

ಇಷ್ಟೆಲ್ಲ ಆಗಿ ಮರುದಿನ ಎಲ್ಲರೂ ತಂತಮ್ಮ ಜೇಬಿನಲ್ಲಿ ರಜೆ ಚೀಟಿಯನ್ನು ಜೋಪಾನವಾಗಿ ಇರಿಸಿಕೊಂಡು ಶಾಲೆಗೆ ಹೋದೆವು. ಆಗಷ್ಟೇ ಪ್ರಾರ್ಥನೆ ಮುಗಿದಿತ್ತೇನೋ! 'ನಿನ್ನೆ ಹಿನ್ಗಾರ್ ಮಕ್ಕಳಿಗೆಲ್ಲರಿಗೂ ಒಟ್ಟಿಗೇ ಹುಷಾರು ತಪ್ಪಿತ್ತು, ಯಾಕೋ..?! ಅಂದ್ರು ಟೀಚರ್ ವ್ಯಂಗ್ಯದ ಧಾಟೀಲಿ. ನಾವೆಲ್ಲ ಮುಖ ಮುಖ ನೋಡಿಕೊಳಲ್ಳುತ್ತಿದ್ದಂತೆಯೇ ಟೀಚರ್ ತಮ್ಮ ಮಾತನ್ನು ಹಾಗೇ ಮುಂದುವರಿಸಿ, 'ಬಹುಶಃ ಟಿವೀಲಿ ಮಾಲಾಶ್ರೀ ಸಿನೆಮಾ ಬಂದಿತ್ತು ಅನ್ಸುತ್ತೆ' ಅಂತ ಜೋರಾಗಿ ಕೂಗಿ ಹೇಳ್ಬಿಡೋದಾ..?! ಇಡೀ ಶಾಲೆಗೆ ಶಾಲೆಯೇ ನಮ್ಮನ್ನ ನೋಡಿ ಬಿದ್ದು ಬಿದ್ದು ನಕ್ಕಿತ್ತು!

ಮಲೆನಾಡಿನ ಬಾಲ್ಯ ಅಡಕೆ ಹಾಳೆಯ ದೋಣಿಯಂತೆ ಮುಳುಗುವುದೇ ಇಲ್ಲ!

ಕೈ ಮೇಲೆ ಛಳ್ಳಂತ ಬಿತ್ತೊಂದು ಏಟು!

ಕೈ ಮೇಲೆ ಛಳ್ಳಂತ ಬಿತ್ತೊಂದು ಏಟು!

ನಿನ್ನೆಯ 'ಅಧಿವೇಶನ'ದಲ್ಲಿ ಅಷ್ಟೆಲ್ಲ ಶ್ರಮ ಹಾಕಿ ಬರೆದ 15-20 ಪತ್ರಗಳು ಜೇಬಿನಲ್ಲೇ ನಗುತ್ತಿದ್ದವು... ಕ್ಲಾಸಿಗೆ ಹೋಗುವ ಮುನ್ನ ಎಲ್ಲರಿಗೂ ಕೈಮೇಲೊಂದು ಛಳ್ಳಂಥ ರುಚಿ ರುಚಿಯಾದ ಏಟೂ ಬಿತ್ತು(ಹೀಗೆ ಏಟು ಬೀಳೋದೇನು ಹೊಸತಾಗಿರಲಿಲ್ಲ)! ಕೈಯೆಲ್ಲ ಕೆಂಪಾಗಿಸಿದ ಆ ಏಟಿನ ನೋವಿನಲ್ಲೂ 'ಅರೆ, ಮಾಲಾಶ್ರೀ ಮೇಲಿನ ನಮ್ಮ ಅಭಿಮಾನ ಟೀಚರ್ರಿಗೂ ಗೊತ್ತಲ್ಲ ಅಂತ' ಖುಷಿ ಪಟ್ಟಿದ್ದೆವು! ಆದರೆ ನಾವೆಲ್ಲ ಮಾಲಾಶ್ರೀ ಪಿಚ್ಚರ್ರಿಗಾಗೇ ರಜಾ ಹಾಕಿದ್ವಿ ಅಂತ ಟೀಚರ್ ಗೆ ಹೇಗೆ ಗೊತ್ತಾಯ್ತು ಅನ್ನೋ ನಿಗೂಢ ರಹಸ್ಯವನ್ನು ಮಾತ್ರ ಇಂದಿಗೂ ಭೇದಿಸಲಾಗಲೇ ಇಲ್ಲ!

ಈಗಲೂ ಮಾಲಾಶ್ರೀ ಅಭಿನಯದ ಯಾವುದಾದರೂ ಚಿತ್ರ ಟಿವಿಯಲ್ಲಿ ಬಂದರೆ ಅದೇ ಬಾಲ್ಯದ ದಿನಗಳು ಕಣ್ಮುಂದೆ ಬರುತ್ತೆ... ಊರಿಗೆಲ್ಲ ಇದ್ದ ಒಂದೇ ಟಿವಿಯಲ್ಲಿ ನಾವೆಲ್ಲ ಒಟ್ಟೊಟ್ಟಾಗಿ ಆ ಸಿನಿಮಾಗಳನ್ನು ನೋಡುತ್ತಿದ್ದ ಕ್ಷಣ ಕಾಡುತ್ತೆ... ಬೆತ್ತದ ನೆನಪೂ! ಆ ತುಂಟಾಟ, ಹುಡುಗಾಟ, ಮತ್ತು ಮಗುವಿನಂಥ ಮುಗ್ಧ ಮನಸ್ಸು ಎಂದಿಗೂ ನಮ್ಮಲ್ಲಿ ಹಾಗೇ ಇದ್ದುಬಿಡಲಿ ಎಂದು ಮನ ಹಾರೈಸುತ್ತೆ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In our childhood days, we used to bunk school when Kannada actress Malashri's movies were telecasting in TV. Here is a story on childhood memories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more