ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೇಳಿನ ಬಾಲಕ್ಕೆ ದಾರ ಕಟ್ಟುವವರ್ಯಾರು? ಬಾಲ್ಯದ ಆಟ ಆ ಹುಡುಗಾಟ..!

|
Google Oneindia Kannada News

ಬಾಲ್ಯ ಪ್ರತಿಯೊಬ್ಬರ ಬದುಕಿನ ಸುವರ್ಣಯುಗ. ನೆನೆದಷ್ಟೂ ನಗುವುಕ್ಕಿಸುವ, ಮೊಗೆದಷ್ಟೂ ಬೊಗಸೆ ತುಂಬುವ ನೆನಪಿನ ಖನಿ. ಆ ಸುಂದರ ಬಾಲ್ಯದ ನೆನಪುಗಳನ್ನು ಮರುಕಳಿಸುವ ಪುಟ್ಟ ಪ್ರಯತ್ನವನ್ನು 'ಒನ್ಇಂಡಿಯಾ ಕನ್ನಡ' ಮಾಡುತ್ತಿದೆ. ಇಂದಿನಿಂದ ಪ್ರತಿ ವಾರವೂ ಪ್ರಕಟವಾಗುವ 'ಬಾಲ್ಯದ ನೆನಪು' ಅಂಕಣದ ಮೊದಲ ಲೇಖನ ಇಲ್ಲಿದೆ. ಈ ಅಂಕಣಕ್ಕೆ ನೀವೂ ಲೇಖನ ಬರೆಯಬಹುದು, ಮರೆಯಲಾಗದ ತುಂಟ ಬಾಲ್ಯದ ಸುಂದರ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.

****

'ಯೇ, ನಿನ್ ಕಾಲಿನ ಹತ್ರ ಕಮ್ಚೋಳಿದ್ದು ನೋಡು...' ಗೆಳತಿಯರ ಆ ಮಾತು ಕಿವಿಗೆ ಬಿತ್ತೋ ಇಲ್ಲವೋ ನಾನಂತೂ ಆಗಲೇ ಮೂರು ಮಾರು ಓಡಿ ಗಡ ಗಡ ನಡುಗುತ್ತ ನಿಂತಿದ್ದೆ! ಮುಂದೆರಡು ಕೊಂಬಿರುವ ಕಪ್ಪು ನೀಲಿ ಬಣ್ಣದ ಚೇಳಿಗೆ(ವೃಶ್ಚಿಕ) ನಮ್ಮೂರು ಕಡೆ ಆಡು ಭಾಷೇಲಿ 'ಕಮ್ಚೋಳು' (ಕೊಂಬಿರುವ ಚೇಳು ಎಂಬುದೇ ಆಡು ಮಾತಿನಲ್ಲಿ ಕಮ್ಚೋಳು ಎಂದಾಗಿರಬಹುದು)ಎಂದೇ ಕರೆಯೋದು.

ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ!ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ!

ಈ ಚೇಳು ಭಯಂಕರ ವಿಷವಂತೆ. ಚಿಕ್ಕ ಮಕ್ಕಳಿಗೆಲ್ಲ ಕಚ್ಚಿದರೆ ಮೈ ನೀಲಿ ಆಗಿ ಸತ್ತೇ ಹೋಗ್ತಾರೆ ಅಂತೆಲ್ಲ ಹೇಳೋದು ಕೇಳಿದ್ವಿ. ಈಗ ಮೂರು ಮಾರು ಹಾರಿ ಓಡಿ ಬರುವಾಗಲೂ ತಲೆಯಲ್ಲಿ ಆ ಎಲ್ಲಾ ಯೋಚನೆಗಳು ಬಂದು ಈ 'ಕಮ್ಚೋಳು' ಅನ್ನೋ ಪ್ರಭೇದ ಜಗತ್ತಿನಿಂದಲೇ ನಾಶವಾಗಿಬಿಡಲಿ ಅಂತ ದೇವರಿಗೆ ಒಂದು ಸಣ್ಣ ಪ್ರಾರ್ಥನೆಯೂ ಸಂದಿತ್ತು ಆಗಲೇ!

Childhood is a golden era of everyones life

ಇಷ್ಟೆಲ್ಲ ಆದರೂ ಆ ಚೇಳು ಮಾತ್ರ ಒಂದಡಿ ಕದಲಲಿಲ್ಲ! ಗೆಳತಿಯರ ಗುಂಪಲ್ಲಿದ್ದ ತುಂಟಿಯೊಬ್ಬಳು ಪುಟ್ಟ ಕಲ್ಲನ್ನು ತೆಗೆದು ಆ ಚೇಳಿನ ಮೇಲೆ ಎಸೆದಾಗಲೂ ಅದು ಕೊಂಚವೇ ಅಲ್ಲಾಡಿತಷ್ಟೇ! ಪಾಪ(ಆಗ ಈ ಶಬ್ದ ಅಪ್ಪಿತಪ್ಪಿಯೂ ಬಾಯಲ್ಲಿ ಬಂದಿರಲಿಲ್ಲ ಅನ್ನೋದು ಬೇರೆ ಮಾತು!) ಅದಕ್ಕೆಲ್ಲೋ ಗಾಯವಾಗಿದ್ದಿರಬೇಕು. ನನ್ನ ಕಾಲಿಗೆ ತಾಕಿದರೂ ಅದು ಕಚ್ಚುವ ಯೋಚನೆಯಲ್ಲೇನೂ ಇದ್ದಂತೆ ಕಾಣಲಿಲ್ಲ. ಈ ಚೇಳು ಗಾಯಗೊಂಡಿದೆ ಅಂತ ಯಾವಾಗ ಗೊತ್ತಾಯ್ತೋ ಆಗ ಶುರುವಾಯ್ತು ನಮ್ಮ ಪೌರುಷ!

ಕಳೆದುಹೋದ ಬಾಲ್ಯ ಮರಳಿದರೆ ಎಷ್ಟು ಚೆನ್ನǃǃǃಕಳೆದುಹೋದ ಬಾಲ್ಯ ಮರಳಿದರೆ ಎಷ್ಟು ಚೆನ್ನǃǃǃ

ನಮ್ಮೂರಲ್ಲೆಲ್ಲ ಕೋತಿಗಳ ಕಾಟ ಜಾಸ್ತಿ. ಅದಕ್ಕೆಂದೇ ಮಂಗಗಳು ತೋಟಕ್ಕೆ ಬಾರದಂತೆ ಕಾಯಲು ಕೋವಿ ಹಿಡಿದ ವ್ಯಕ್ತಿಯೊಬ್ಬ ತೋಟದ ಬಳಿ ಸದಾ ಗಸ್ತು ಹೊಡೆಯುತ್ತಿರುತ್ತಾನೆ! ಅಕಸ್ಮಾತ್ ಯಾವುದಾದರೂ ಕೋತಿ ಆತನ ಕೋವಿಗೆ ಸಿಕ್ಕಿ ಸತ್ತರೆ, ಬೇರೆ ಮಂಗಗಳಿಗೆ ಭಯವಾಗಲಿ ಅಂತ ಸತ್ತ ಮಂಗದ ದೇಹವನ್ನು ಮರದ ಟೊಂಗೆಯೊಂದಕ್ಕೆ ಕಟ್ಟಿ ಹಾಕಿರುತ್ತಾರೆ. ಅದನ್ನು ನೋಡಿ ಉಳಿದ ಮಂಗಗಳು ತೋಟಕ್ಕೆ ಬಾರದಿರಲಿ ಅಂತ! ಈ ಚೇಳಿನ ಕತೆಗೂ, ಕೋತಿ ಕತೆಗೂ ಎಲ್ಲಿಯ ಲಿಂಕು ಅಂದ್ರಾ? ಖಂಡಿತ ಇದೆ, ಕೇಳಿ!

Childhood is a golden era of everyones life

ನಾವು ಶಾಲೆಗೆ ಹೋಗುವ ರಸ್ತೆಯಲ್ಲಿ ಬೇರೆ ಚೇಳುಗಳು ಬಾರದೆ ಇರಬೇಕು ಅಂದ್ರೆ ಅವಕ್ಕೆ ಭಯ ಮೂಡಬೇಕು! ಆದ್ದರಿಂದ ಈ ಗಾಯಗೊಂಡ ಚೇಳನ್ನು ಮರದ ಟೊಂಗೆಯೊಂದಕ್ಕೆ ಕಟ್ಟಿ ನೇತುಹಾಕಬೇಕು ಅನ್ನೋ 'ಶತಮಾನದ ಐಡಿಯಾ' ವನ್ನು ಗೆಳತಿಯೊಬ್ಬಳು ಕೊಟ್ಟಳು. ಆಕೆಯ 'ಮಹಾನ್ ಬುದ್ಧಿಶಕ್ತಿ' ಕಂಡು ನಾವೆಲ್ಲ ಅಹುದಹುದೆನ್ನುತ್ತ ತಲೆಯಲ್ಲಾಡಿಸಿ, ಆ ಸಾಹಸಕ್ಕೆ ಕೈ ಹಾಕಿದ್ದೆವು. ಆದರೆ ಪ್ರಶ್ನೆ ಬಂದಿದ್ದೇ ಆಗ... ಚೇಳನ್ನು ಮರಕ್ಕೆ ಕಟ್ಟೋಕೆ ಆ ಚೇಳಿನ ಬಾಲಕ್ಕೆ ದಾರ ಕಟ್ಟಬೇಕಲ್ಲ! ಆ ಕೆಲಸ ಯಾರು ಮಾಡೋದು? ಬೆಕ್ಕಿನ ಕತ್ತಿನ ಗಂಟೆ ಕಟ್ಟೋರು ಯಾರು ಅನ್ನೋ ಹಾಗೆ, ಚೇಳಿನ ಬಾಲಕ್ಕೆ ದಾರ ಕಟ್ಟೋರು ಯಾರು ಅನ್ನೋ ಪ್ರಶ್ನೆ ಎದ್ದು ನಮ್ಮ ಮೀಟಿಂಗ್ ಅದೆಷ್ಟೋ ಕಾಲ ಮುಂದುವರಿದಿತ್ತು!

ಬಾಲ್ಯದ ನೆನಪಿನಾಳದಿಂದ ಒಂದು ಹನಿಬಾಲ್ಯದ ನೆನಪಿನಾಳದಿಂದ ಒಂದು ಹನಿ

ಅಂತೂ ಇಂತು ಗುಂಪಲ್ಲಿದ್ದ ಸಾಹಸಿ ಹುಡುಗನೊಬ್ಬ, ಜಾನ್ ಸೀನನ ಹಾಗೆಲ್ಲ ಪೋಸ್ ಕೊಡುತ್ತ ಮುಂದೆ ಬಂದ! ನೋಡು ನೋಡುತ್ತಿದ್ದಂತೆಯೇ ತೋಟದಲ್ಲಿ ಬಿದ್ದಿದ್ದ ಬಾಳೆಗಿಡದ ನಾರನ್ನು ತಂದು ಅದನ್ನು ಕುಣಿಕೆಯಂತೆಯೇ ಮಾಡಿ ಆ ಚೇಳಿನ ಬಾಲಕ್ಕೆ ಕಟ್ಟಿಯೇ ಬಿಟ್ಟ! ಅಷ್ಟೊತ್ತು ಸುಮ್ಮನಿದ್ದ ಚೇಳು ಆಗ ಕೊಂಬನ್ನೆಲ್ಲ ಅಲ್ಲಾಡಿಸುತ್ತ ವಿಚಿತ್ರವಾಗಿ ಆಡತೊಡಗಿತ್ತು. ಅದಕ್ಕೆಲ್ಲ ಕ್ಯಾರೇ ಅನ್ನದ ನಮ್ಮ ಜಾನ್ ಸೀನ ಅದನ್ನು ಹಾದಿಬದಿಯ ಮರವೊಂದರ ಟೊಂಗೆಗೆ ಕಟ್ಟಿದ! ಉಸ್ಸಪ್ಪಾ, ನಾಳೆಯಿಂದ ಈ ದಾರೀಲಿ ಚೇಳಿಲ್ಲ.. ಹುರ್ರೇ ಎನ್ನುತ್ತ ನಾವೆಲ್ಲ ಮನೆ ಸೇರಿದ್ದೆವು.

Childhood is a golden era of everyones life

ಪಾಪ, ಸುಮಾರು ಮೂರು ದಿನ ಆ ದಾರದಲ್ಲೇ ನೇತಾಡುತ್ತ ಆ ಚೇಳು ಬದುಕಿತ್ತು. ಚೇಳನ್ನು ಮರಕ್ಕೆ ಕಟ್ಟಿದ್ದನ್ನು ಕಂಡು ಭಯಗೊಂಡು ಆ ದಾರಿಯಲ್ಲಿ ಚೇಳು ಬರೋಲ್ಲ ಎಂದುಕೊಂಡಿದ್ದ ನಾವು ಅದೆಷ್ಟು ಮೂರ್ಖರಾಗಿದ್ದೆವು ಎಂಬುದನ್ನು ನೆನೆದರೆ ನಗು ಬರುತ್ತೆ!

ಮಲೆನಾಡಲ್ಲಿ ಜೋರು ಮಳೆಯಂತೆ... ನೆನಪಿನ ದೋಣಿ ತುಂಬ ಸಂಭ್ರಮದ ಸಂತೆ!ಮಲೆನಾಡಲ್ಲಿ ಜೋರು ಮಳೆಯಂತೆ... ನೆನಪಿನ ದೋಣಿ ತುಂಬ ಸಂಭ್ರಮದ ಸಂತೆ!

ಆ ತುಂಟತನದಲ್ಲಿ ಜೀವವೊಂದನ್ನು ತೆಗೆದೆವಲ್ಲ ಅಂತ ಈಗ ನೆನಪಾದರೆ ನಿಜಕ್ಕೂ ನೋವಾಗುತ್ತದೆ. ಹಾವಿರಲಿ, ಚೇಳಿರಲಿ ಯಾವುದೇ ಹುಳ ಹುಪ್ಪಟೆಯಿರಲಿ ತನಗೆ ಅಪಾಯ ಬಂದಾಗ ಮಾತ್ರವೇ ಸ್ವರಕ್ಷಣೆಗಾಗಿ ಮನುಷ್ಯರಿಕೆ ಕಚ್ಚುವುದು. ಆ ಸತ್ಯ ನಮಗೆ ಅರ್ಥವಾಗಿದ್ದು ಯಾವಾಗಲೋ..! ಈಗಲೂ ವೃಶ್ಚಿಕ ರಾಶಿಯ ಆ ಸಂಕೇತವನ್ನು ಕಂಡಾಗಲೆಲ್ಲ ಎಂಥದೋ ಪಾಪಪ್ರಜ್ಞೆ. ಆದರೆ ಬಾಲ್ಯದ ಆ ತುಂಟಾಟದ ಕ್ಷಣಗಳು ಕಣ್ಮುಂದೆ ಬಂದು ಕಣ್ಣು ತೋಯುತ್ತದೆ. ಇಂದಿನ ಮಕ್ಕಳು ಕಂಪ್ಯೂಟರ್, ವಿಡಿಯೋ ಗೇಮ್ ಪ್ರಪಂಚದಲ್ಲಿ ಬಾಲ್ಯವನ್ನು ಕಳೆವಾಗ ನೆನಪಿಸಿಕೊಂಡು ಖುಷಿಪಡುವುದಕ್ಕಾದರೂ ಆ ದೇವರು ನಮಗೊಂದು ಬಂಗಾರದಂಥ ಬಾಲ್ಯ ಕೊಟ್ಟಿದ್ದನಲ್ಲ ಎಂದು ಹೆಮ್ಮೆಯಾಗುತ್ತದೆ.

ಯಯಾತಿ ಅದ್ಯಾಕೆ ಯೌವನ ಬೇಕಂತ ಕೇಳಿದ್ನೋ, ನನ್ನಂಥವಳಾಗಿದ್ರೆ ಬಾಲ್ಯ ವಾಪಸ್ ಕೊಡು ಅಂತ ಕೇಳ್ತಿದ್ದೆ ಎಂದು ಮನಸ್ಸು ಹಲಬುತ್ತೆ. ಮರೆಯಲ್ಲೆ...

ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮಾಸಿಲ್ಲ... ಎಂಬ ಹಾಡೊಂದು ಮನಸ್ಸಿನ ತುಂಬ ಗಿರಕಿಹಾಕುತ್ತೆ!

English summary
Childhood imemories: One of the luckiest things that can happen to us in life is, to have a happy childhood. Childhood is a golden era of everybody's life. Here is a new column on childhood memories
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X