ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್, ಏನಿದರ ವಿಶೇಷತೆ?

|
Google Oneindia Kannada News

ಚೆನ್ನೈ, ಜುಲೈ 21: ಚೆಸ್ ಕ್ರೀಡೆಯ ಹಬ್ಬವೆಂದು ಪರಿಗಣಿಸಲಾದ ಚೆಸ್ ಒಲಿಂಪಿಯಾಡ್ ಈ ಬಾರಿ ಭಾರತದಲ್ಲಿ ನಡೆಯುತ್ತಿದೆ. ಇದು 44ನೇ ಚೆಸ್ ಒಲಿಂಪಿಯಾಡ್ ಆಗಿದ್ದು ಚೆನ್ನೈನಲ್ಲಿ ಜುಲೈ 28ರಿಂದ ಆಗಸ್ಟ್ 10ರವರೆಗೆ ನಡೆಯಲಿದೆ.

ಚೆನ್ನೈ ಹೊರವಲಯದ ಮಹಾಬಲಿಪುರಂನಲ್ಲಿರುವ ಶೆರಟಾನ್‌ನ ಫೋರ್ ಪಾಯಿಂಟ್ಸ್ ಹೋಟೆಲ್‌ನಲ್ಲಿ ಈ ಚೆಸ್ ಮಹಾಕೂಟ ನಡೆಯಲಿದೆ. 43ನೇ ಚೆಸ್ ಒಲಿಂಪಿಯಾಡ್ ಜಾರ್ಜಿಯಾದ ಬಟುಮಿಯಲ್ಲಿ ನಡೆದಿತ್ತು. 2020ರಲ್ಲಿ 44ನೇ ಒಲಿಂಪಿಯಾಡ್ ನಡೆಯಬೇಕಿತ್ತು. ಕೋವಿಡ್ ಕಾರಣಕ್ಕೆ ಮುಂದೂಡಲಾಯಿತು.

ವಿಶ್ವ ಚೆಸ್ ದಿನ 2022: ಇತಿಹಾಸ, ಮಹತ್ವ ಮತ್ತು ಆಟದ ಬಗ್ಗೆ ಉಲ್ಲೇಖಗಳುವಿಶ್ವ ಚೆಸ್ ದಿನ 2022: ಇತಿಹಾಸ, ಮಹತ್ವ ಮತ್ತು ಆಟದ ಬಗ್ಗೆ ಉಲ್ಲೇಖಗಳು

ಅದಕ್ಕೆ ಪರ್ಯಾಯವಾಗಿ 2020 ಮತ್ತು 2021ರಲ್ಲಿ ಆನ್‌ಲೈನ್ ಚೆಸ್ ಒಲಿಂಪಿಯಾಡ್ ನಡೆಸಲಾಯಿತು. ಆದರೆ, ಅದು ಅಧಿಕೃತ ಒಲಿಂಪಿಯಾಡ್ ಕೂಟಗಳಾಗಿರಲಿಲ್ಲ. ಈಗ ಚೆನ್ನೈನಲ್ಲಿ ನಡೆಯಲಿರುವುದು 44ನೇ ಚೆಸ್ ಒಲಿಂಪಿಯಾಡ್ ಆಗಿದೆ.

ಭಾರತದಲ್ಲಿ ಚೆಸ್ ಒಲಿಂಪಿಯಾಡ್ ನಡೆಯುತ್ತಿರುವುದು ಇದೇ ಮೊದಲು ಎಂಬುದು ವಿಶೇಷ. ಹಾಗೆಯೇ, ಒಲಿಂಪಿಯಾಡ್ ಇತಿಹಾಸದಲ್ಲೇ ಈ ಟೂರ್ನಿ ಅತಿ ದೊಡ್ಡದೂ ಆಗಿದೆ. ಇಂಥ ಹಲವು ವಿಶೇಷತೆಗಳು ಈ 44ನೇ ಚೆಸ್ ಒಲಿಂಪಿಯಾಡ್‌ನಲ್ಲಿವೆ. ಕಳೆದ ವರ್ಷ ನಡೆದ ಆನ್‌ಲೈನ್ ಒಲಿಂಪಿಯಾಡ್‌ನಲ್ಲಿ ಭಾರತ ಮತ್ತು ರಷ್ಯಾ ಜಂಟಿ ಚಾಂಪಿಯನ್ ಎನಿಸಿದ್ದವು. ಅದು ಬಿಟ್ಟರೆ ಅಧಿಕೃತ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಗೆದ್ದದ್ದೇ ಇಲ್ಲ. ಈಗ ಆ ಒಂದು ಅವಕಾಶ ಸಿಕ್ಕಿದೆ.

ಚೆಸ್ ಒಲಿಂಪಿಯಾಡ್ ಇತಿಹಾಸ

ಚೆಸ್ ಒಲಿಂಪಿಯಾಡ್ ಇತಿಹಾಸ

ಮೊದಲ ಚೆಸ್ ಒಲಿಂಪಿಯಾಡ್ ನಡೆದದ್ದು 1927ರಲ್ಲಿ ಬ್ರಿಟನ್‌ನ ಲಂಡನ್ ನಗರಿಯಲ್ಲಿ. ಅದಕ್ಕೆ ಮುನ್ನ ಎರಡು ಬಾರಿ ಅನಧಿಕೃತವಾಗಿ ಚೆಸ್ ಒಲಿಂಪಿಯಾಡ್ ಟೂರ್ನಿಗಳನ್ನು ನಡೆಸಲಾಗಿತ್ತು.

1924ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚೆಸ್ ಕ್ರೀಡೆಯನ್ನು ಸೇರಿಸಬೇಕೆಂಬ ಪ್ರಯತ್ನ ನಡೆದಿತ್ತು. ಆದರೆ, ಅದು ಕೈಗೂಡಲಿಲ್ಲ. ಅದೇ ನಗರದಲ್ಲಿ ಒಲಿಂಪಿಕ್ಸ್ ಟೂರ್ನಿಯ ವೇಳೆಯಲ್ಲಿ ಪರ್ಯಾಯವಾಗಿ ಚೆಸ್ ಒಲಿಂಪಿಯಾಡ್ ನಡೆಸಲಾಯಿತು. ಆ ವರ್ಷವೇ ಚೆಸ್‌ನ ಅಂತಾರಾಷ್ಟ್ರೀಯ ಸಂಸ್ಥೆ ಫೈಡ್ ಅಸ್ತಿತ್ವಕ್ಕೆ ಬಂದಿತು.

1926ರಲ್ಲಿ ಹಂಗರಿಯಲ್ಲಿ ಫೈಡ್ ಶೃಂಗಸಭೆ ನಡೆದಾಗ, ಅದರ ಭಾಗವಾಗಿ ಚೆಸ್ ಒಲಿಂಪಿಯಾಡ್ ಆಯೋಜಿಸಲಾಗಿತ್ತು. 1924 ಮತ್ತು 1926ರಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ಗಳು ಅಧಿಕೃತವೆಂದು ಪರಿಗಣಿಸಲಾಗಲಿಲ್ಲ. 1927ರಲ್ಲಿ ಅಧಿಕೃತವಾಗಿ ಮೊದಲ ಚೆಸ್ ಒಲಿಂಪಿಯಾಡ್ ನಡೆದದ್ದು.

ಎರಡು ವರ್ಷಕ್ಕೊಮ್ಮೆ ನಡೆಯುವ ಟೂರ್ನಿ

ಎರಡು ವರ್ಷಕ್ಕೊಮ್ಮೆ ನಡೆಯುವ ಟೂರ್ನಿ

ಚೆಸ್ ಒಲಿಂಪಿಯಾಡ್ ಇತಿಹಾಸದ ಆರಂಭದಲ್ಲಿ ನಿಗದಿತ ರೀತಿಯಲ್ಲಿ ಟೂರ್ನಿ ನಡೆಯುತ್ತಿರಲಿಲ್ಲ. ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಹೀಗೆ ನಡೆಯುತ್ತಿತ್ತು. 1950ರಿಂದ ದ್ವೈವಾರ್ಷಿಕವಾಗಿ ಟೂರ್ನಿ ಆಯೋಜನೆಯಾಗುತ್ತಾ ಬಂದಿದೆ. ಇದೂವರೆಗೂ ಸುಮಾರು 30 ದೇಶಗಳಲ್ಲಿ ಈ ಟೂರ್ನಿ ನಡೆದಿದೆ.

44ನೇ ಚೆಸ್ ಒಲಿಂಪಿಯಾಡ್ ರಷ್ಯಾದಲ್ಲಿ ನಡೆಯಬೇಕಿತ್ತು. ಕೋವಿಡ್ ಕಾರಣಕ್ಕೆ 2020ರಲ್ಲಿ ನಡೆಯಬೇಕಿದ್ದ ಈ ಟೂರ್ನಿ ಮುಂದೂಡಲಾಗಿತ್ತು. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ಹಿನ್ನೆಲೆಯಲ್ಲಿ ಚೆಸ್ ಒಲಿಂಪಿಯಾಡ್ ಸ್ಥಳವನ್ನು ಬದಲಿಸಿ, ಭಾರತದಲ್ಲಿ ನಡೆಸಲು ನಿರ್ಧರಿಸಲಾಯಿತು. 45ನೇ ಚೆಸ್ ಒಲಿಂಪಿಯಾಡ್ ಹಂಗರಿಯಲ್ಲಿ ನಡೆಯಲಿದೆ.

187 ದೇಶಗಳು ಭಾಗಿ

187 ದೇಶಗಳು ಭಾಗಿ

ಚೆಸ್ ಒಲಿಂಪಿಯಾಡ್ ಟೂರ್ನಿ ಇತಿಹಾಸದಲ್ಲಿ 44ನೇ ಚೆಸ್ ಒಲಿಂಪಿಯಾಡ್ ಅತಿದೊಡ್ಡ ಟೂರ್ನಿಯಾಗಿದೆ. 2018ರಲ್ಲಿ ಜಾರ್ಜಿಯಾದ ಬಟುಮಿಯಲ್ಲಿ ನಡೆದ ಒಲಿಂಪಿಯಾಡ್‌ನಲ್ಲಿ 179 ದೇಶಗಳಿಂದ 334 ತಂಡಗಳು ಪಾಲ್ಗೊಂಡಿದ್ದವು. ಅದು ದಾಖಲೆಯಾಗಿತ್ತು. ಈಗ 187 ದೇಶಗಳು ಭಾರತದಲ್ಲಿ ನಡೆಯಲಿರುವ ಚೆಸ್ ಒಲಿಂಪಿಯಾಡ್‌ನಲ್ಲಿ ಪಾಲ್ಗೊಳ್ಳುತ್ತಿವೆ.

ಓಪನ್ ಸೆಕ್ಷನ್‌ನಲ್ಲಿ 189 ತಂಡಗಳು ಹಾಗೂ ಮಹಿಳಾ ಸೆಕ್ಷನ್‌ನಲ್ಲಿ 154 ತಂಡಗಳು ಪಂದ್ಯಾವಳಿಯಲ್ಲಿ ಸೆಣಸಲಿವೆ. 187 ದೇಶಗಳು ಪಾಲ್ಗೊಳ್ಳುವುದೆಂದರೆ ಸಾಮಾನ್ಯವಲ್ಲ. ಫೈಡ್‌ನಲ್ಲಿ ನೊಂದಣಿಯಾದ ಸಂಸ್ಥೆಗಳು ಮಾತ್ರ ಚೆಸ್ ಒಲಿಂಪಿಯಾಡ್‌ಗೆ ತಂಡಗಳನ್ನು ಕಳುಹಿಸಬಹುದು. 200 ದೇಶಗಳ ಚೆಸ್ ಸಂಸ್ಥೆಗಳು ಫೈಡ್‌ನಲ್ಲಿ ನೊಂದಾವಣಿಯಾಗಿವೆ. ಈ 200 ದೇಶಗಳಲ್ಲಿ 187 ದೇಶಗಳು ಚೆನ್ನೈ ಚೆಸ್ ಒಲಿಂಪಿಯಾಡ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.

ಭಾರತಕ್ಕೆ ಹೆಚ್ಚುವರಿ ತಂಡದ ಅವಕಾಶ

ಭಾರತಕ್ಕೆ ಹೆಚ್ಚುವರಿ ತಂಡದ ಅವಕಾಶ

ಚೆನ್ನೈ ಒಂದು ರೀತಿಯಲ್ಲಿ ಭಾರತದ ಚೆಸ್ ರಾಜಧಾನಿ. ಸಹಜವಾಗಿಯೇ ಭಾರತದಲ್ಲಿ ಚೆಸ್ ಒಲಿಂಪಿಯಾಡ್ ಸ್ಥಳವಾಗಿ ಚೆನ್ನೈ ಅನ್ನೇ ಆಯ್ದುಕೊಳ್ಳಲಾಗಿದೆ. ಪ್ರತಿಯೊಂದು ದೇಶಗಳೂ ಒಂದು ವಿಬಾಗದಲ್ಲಿ ಒಂದು ತಂಡವನ್ನು ಮಾತ್ರ ಕಣಕ್ಕಿಳಿಸಬಹುದು. ಒಂದು ಓಪನ್ ವಿಭಾಗ, ಮತ್ತೊಂದು ಮಹಿಳಾ ವಿಭಾಗ. ಭಾರತ ಆತಿಥೇಯ ದೇಶವಾದ್ದರಿಂದ ಎರಡು ತಂಡಗಳನ್ನು ಸ್ಪರ್ಧೆಗೆ ಒಡ್ಡಬಹುದು. ಅಂದರೆ ಭಾರತ ಈ ಬಾರಿ ನಾಲ್ಕು ತಂಡಗಳನ್ನು ಕಣಕ್ಕಿಳಿಸಿದೆ.

ಓಪನ್ ವಿಭಾಗದಲ್ಲಿ ಮಹಿಳೆಯರನ್ನು ಒಳಗೊಂಡಂತೆ ಯಾವುದೇ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಬಹುದು. ಮಹಿಳಾ ವಿಭಾಗದಲ್ಲಿ ಮಹಿಳಾ ಆಟಗಾರರನ್ನು ಮಾತ್ರ ಆಡಿಸಬೇಕು. ಒಂದು ವೇಳೆ ಒಂದು ವಿಭಾಗದಲ್ಲಿ ತಂಡಗಳ ಪ್ರಮಾಣ ಸಮಸಂಖ್ಯೆಯಲ್ಲಿ ಇಲ್ಲದೇ ಹೋದರೆ ಅದನ್ನು ಸರಿದೂಗಿಸಲು ಆತಿಥೇಯ ದೇಶವಾಗಿ ಭಾರತ ಮೂರನೇ ತಂಡವನ್ನೂ ಕಣಕ್ಕಿಳಿಸಬಹುದು. ಓಪನ್ ಸೆಕ್ಷನ್‌ನಲ್ಲಿ 189 ತಂಡಗಳು ಇದೂವರೆಗೂ ನೊಂದಾವಣಿಯಾಗಿರುವುದರಿಂದ ಒಂದು ಹೆಚ್ಚುವರಿ ತಂಡವನ್ನು ಭಾರತ ಅಖಾಡಕ್ಕೆ ಇಳಿಸಬಹುದು. ಒಟ್ಟಿನಲ್ಲಿ ಭಾರತಕ್ಕೆ ಒಟ್ಟು ಆರು ತಂಡಗಳನ್ನು ಆಡಿಸುವ ಅವಕಾಶ ಇದೆ.

ಭಾರತದಿಂದ ತಂಡಗಳು

ಭಾರತದಿಂದ ತಂಡಗಳು

ಮುಕ್ತ ವಿಭಾಗದ ಮೊದಲ ತಂಡ: ವಿದಿತ್ ಗುಜರಾತಿ, ಪಿ ಹರಿಕೃಷ್ಣ, ಅರ್ಜುನ್ ಎರಿಗೇಸಿ, ಎಸ್.ಎಲ್. ನಾರಾಯಣನ್, ಕೆ ಶಶಿಕಿರಣ್.

ಮುಕ್ತ ವಿಭಾಗದ ಎರಡನೇ ತಂಡ: ನಿಹಾಲ್ ಸರಿನ್, ಆರ್ ಪ್ರಗ್ನಾನಂದ, ಡಿ. ಗುಕೇಶ್, ಬಿ ಅಧಿಬನ್, ರೌನಕ್ ಸಾಧ್ವಾನಿ.

ಮಹಿಳಾ ವಿಭಾಗದ ಮೊದಲ ತಂಡ: ಕೊನೇರು ಹಂಪಿ, ಡಿ. ಹಾರಿಕಾ, ಆರ್ ವೈಶಾಲಿ, ತಾನಿಯಾ ಸಚ್‌ದೇವ್ ಮತ್ತು ಭಕ್ತಿ ಕುಲಕರ್ಣಿ

ಮಹಿಳಾ ವಿಭಾಗದ ಎರಡನೇ ತಂಡ: ವಂಟಿಕಾ ಅಗರ್ವಾಲ್ ಸೌಮ್ಯಾ ಸ್ವಾಮಿನಾಥನ್, ಮೇರಿ ಆನ್ ಗೋಮ್ಸ್, ಪದ್ಮಿನಿ ರಾವುತ್, ದಿವ್ಯಾ ದೇಶಮುಖ್.

ಭಾರತದ ಅತ್ಯಂತ ಜನಪ್ರಿಯ ಚೆಸ್ ಆಟಗಾರ ಎನಿಸಿದ ವಿಶ್ವನಾಥನ್ ಆನಂದ್ ಈ ಬಾರಿಯ ಒಲಿಂಪಿಯಾಡ್‌ನಲ್ಲಿ ಸ್ಪರ್ಧಿಸುತ್ತಿಲ್ಲ. ಆದರೆ, ತಂಡದ ಆಟಗಾರರಿಗೆ ಮೆಂಟರ್ ಆಗಿ ಕಾರ್ಯ ವಹಿಸಲಿದ್ದಾರೆ. ವಿಶ್ವದ ನಂಬರ್ ಒನ್ ಆಟಗಾರೆನಿಸಿರುವ ಮ್ಯಾಗ್ನಸ್ ಕಾರ್ಲ್ಸನ್ ಕೂಡ ಈ ಒಲಿಂಪಿಯಾಡ್‌ನಲ್ಲಿ ಪಾಲ್ಗೊಳ್ಳುತ್ತಾರಾ ಎನ್ನುವ ಅನುಮಾನವಿದೆ. ವಿಶ್ವ ಚೆಸ್ ಚಾಂಪಿಯನ್‌ಶಿಪ್ ಅನ್ನೇ ಅವರು ಬೋರಿಂಗ್ ಎಂದು ಹೇಳಿ ಕೈಬಿಟ್ಟಿದ್ದಾರೆ. ಈಗ ಒಲಿಂಪಿಯಾಡ್‌ನಲ್ಲಿ ಆಡುತ್ತಾರಾ ಗೊತ್ತಿಲ್ಲ.

(ಒನ್ಇಂಡಿಯಾ ಸುದ್ದಿ)

English summary
India is hosting 44th Chess Olympiad from July 28 to August 10, with Mahabalipuram as the venue. This is the biggest Chess olympiad and the first for India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X