• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮುಂಡಿಬೆಟ್ಟದ ಚಾಮುಂಡೇಶ್ವರಿಗೆ ಪ್ರತಿನಿತ್ಯ ಪೊಲೀಸ್ ಸೆಲ್ಯೂಟ್!

By ಬಿಎಂ ಲವಕುಮಾರ್
|
Google Oneindia Kannada News

ಮೈಸೂರಿನ ಅಧಿದೇವತೆ, ಮೈಸೂರು ಮಹಾರಾಜರ ಕುಲದೇವತೆ ಚಾಮುಂಡಿಬೆಟ್ಟದಲ್ಲಿ ನೆಲೆನಿಂತ ಚಾಮುಂಡೇಶ್ವರಿಗೂ ನಂಟಿದೆ. ಮೈಸೂರಿನ ಅದ್ಧೂರಿ ದಸರಾ ಆರಂಭವಾಗುವುದೇ ಚಾಮುಂಡಿಬೆಟ್ಟದಿಂದ ಎನ್ನುವುದು ವಿಶೇಷ. ಆದರೆ ಇದೆಲ್ಲದರ ನಡುವೆ ಬೇರೆಲ್ಲೂ ನಡೆಯದ ಅಪರೂಪದ ಆಚರಣೆಯೊಂದು ಇಲ್ಲಿ ನಡೆಯುತ್ತದೆ. ಅದುವೇ ಪೊಲೀಸ್ ಸೆಲ್ಯೂಟ್.

ದಸರಾ ಸಂದರ್ಭದಲ್ಲಿ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಅಗ್ರಪೂಜೆಯ ಬಳಿಕ ಉತ್ಸವ ಮೂರ್ತಿಗೆ ಪುಷ್ಪಾರ್ಚನೆಯೊಂದಿಗೆ ಮೈಸೂರು ದಸರಾಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗುತ್ತದೆ. ಇನ್ನು ಸ್ಥಳ ಪುರಾಣದ ಬಗೆಗಿನ ಕಥೆಯನ್ನು ಆದರಿಸಿ ಹೇಳುವುದಾದರೆ, ಯಾವ ಗಂಡಸಿಂದಾಗಲಿ, ಯಾವ ಪ್ರಾಣಿಯಿಂದಾಗಲಿ ತನಗೆ ಮರಣ ಬಾರದಂತೆ ಸಾಕ್ಷಾತ್ ಪರಶಿವನಿಂದಲೇ ವರಪಡೆದಿದ್ದ ಮಹಿಷಾಸುರ ಜನರಿಗೆ ಹಾಗೂ ಋಷಿ ಮುನಿಗಳಿಗೆ ಆಗಾಗ್ಗೆ ಕಿರುಕುಳ ನೀಡುತ್ತಾ ಯಜ್ಞಯಾಗಾದಿಗಳಿಗೆ ಅಡ್ಡಿಪಡಿಸುತ್ತಿದ್ದನು. ಈ ವೇಳೆ ಅವರೆಲ್ಲರೂ ದುಷ್ಟ ರಾಕ್ಷಸ ಮಹಿಷಾಸುರನಿಂದ ತಮ್ಮನ್ನು ಪಾರು ಮಾಡುವಂತೆ ಶಿವನ ಮೂಲಕ ಪಾರ್ವತಿಗೆ ಮೊರೆಹೋದರು.

ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮುವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಈ ವೇಳೆ ಚಾಮುಂಡೇಶ್ವರಿ ತನ್ನ ಹದಿನೆಂಟು ಕರಗಳಲ್ಲೂ ಎಲ್ಲಾ ದೇವತೆಗಳಿಂದ ಪಡೆದ ಹದಿನೆಂಟು ಆಯುಧಗಳನ್ನು ಹಿಡಿದು ಕಮಲ, ಅಕ್ಷರಮಾಲೆ, ಬಾಣ, ಖಡ್ಗ, ವಜ್ರ, ಗದೆ, ತ್ರಿಶೂಲ, ಚಕ್ರ, ಪರಶು, ಘಂಟೆ, ಪಾಶ, ಶಕ್ತಿ, ದಂಡ, ಚರ್ಮ, ಧನಸ್ಸು, ಪಾನಪಾತ್ರೆ, ಕಮಂಡಲಗಳೊಡನೆ ದಿವ್ಯಾಭರಣಗಳಿಂದ ಅಲಂಕೃತಳಾಗಿ ಹಿಮವಂತ ನೀಡಿದ ಸಿಂಹವನ್ನೇರಿ ಉಗ್ರಸ್ವರೂಪಿಣಿಯಾಗಿ ಬಂದು ಲೋಕಕಂಟಕನಾಗಿದ್ದ ದುಷ್ಟ ಮಹಿಷಾಸುರವನ್ನು ಸಂಹಾರ ಮಾಡಿ ಆ ಕ್ಷಣದಿಂದ ಮಹಿಷಾಸುರ ಮರ್ಧಿನಿಯಾಗಿ ಶ್ರೀ ಚಾಮುಂಡೇಶ್ವರಿಯು ಮಹಿಷ ಮಂಡಲದ ಮಹಾಬಲಬೆಟ್ಟದಲ್ಲಿ ನೆಲೆಸಿದಳು ಎನ್ನಲಾಗಿದೆ. ದುಷ್ಟ ರಾಕ್ಷಸನನ್ನು ಸಂಹರಿಸಿ ವಿಜಯ ಪಡೆದ ದಿನವೇ ವಿಜಯದಶಮಿಯಾಯಿತು.

ಯದುವಂಶರ ಕುಲದೇವತೆ

ಯದುವಂಶರ ಕುಲದೇವತೆ

ಯದುವಂಶಸ್ಥರಾದ ಮೈಸೂರು ಮಹಾರಾಜರು ತಮ್ಮ ಕುಲದೇವತೆಯಾಗಿ ಚಾಮುಂಡೇಶ್ವರಿಯನ್ನು ಸ್ವೀಕರಿಸಿದ ಕಾರಣದಿಂದಾಗಿ ಚಾಮುಂಡಿಬೆಟ್ಟ ಮತ್ತು ಅಮ್ಮನವರ ದೇಗುಲ ಬಹುಬೇಗ ಪ್ರವರ್ಧಮಾನಕ್ಕೆ ಬಂದು ಅತ್ಯಂತ ವೈಭವವನ್ನು ಪಡೆಯುವಂತಾಯಿತು. ಚಾಮುಂಡೇಶ್ವರಿ ದೇವಸ್ಥಾನ ಚೌಕಾಕೃತಿಯಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು ದೇಗುಲದ ಹೆಬ್ಬಾಗಿಲು, ಪ್ರವೇಶದ್ವಾರ, ನವರಂಗ, ಒಳಾಂಗಣ, ಗರ್ಭಗುಡಿ ಮತ್ತು ಪ್ರಕಾರಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಸುಂದರವಾದ ಗಗನಚುಂಬಿ ಗೋಪುರ ಮತ್ತು ಗರ್ಭಗುಡಿಯ ಮೇಲೆ ವಿಮಾನ ಶಿಖರಗಳಿವೆ.

ಗೋಪುರದ ಮೇಲೆ ಏಳು ಚಿನ್ನದ ಕಳಶ

ಗೋಪುರದ ಮೇಲೆ ಏಳು ಚಿನ್ನದ ಕಳಶ

ಇದು ಏಳು ಅಂತಸ್ತುಗಳುಳ್ಳ ಗೋಪುರವಾಗಿದ್ದು 19ನೇ ಶತಮಾನದಲ್ಲಿ ಪಿರಮಿಡ್ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು ಗೋಪುರದ ಮೇಲೆ ಏಳು ಚಿನ್ನದ ಕಳಶಗಳಿವೆ. 1827ರಲ್ಲಿ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಸಾವಿರ ವರ್ಷಕ್ಕೂ ಹಿಂದಿನ ಇತಿಹಾಸವುಳ್ಳ ಈ ದೇವಸ್ಥಾನವನ್ನು ಆಸಕ್ತಿಯಿಂದ ಜೀರ್ಣೋದ್ಧಾರ ಮಾಡಿ ಮಹಾದ್ವಾರದ ಮೇಲೆ ಈ ಬೃಹತ್ ಗೋಪುರಗಳನ್ನು ಕಟ್ಟಿಸಿದ್ದಾರೆ. ಅಲ್ಲದೆ ಸಿಂಹವಾಹಿನಿಯಾದ ಚಾಮುಂಡಿ ತಾಯಿಗೆ ಚೆಂದದ ಸಿಂಹವಾಹನವೊಂದನ್ನು ಮರದಲ್ಲಿ ನಿರ್ಮಿಸಿ ಕೊಡುಗೆಯಾಗಿ ನೀಡಿದ್ದಾರೆ. ಈ ಸಿಂಹವಾಹನವನ್ನು ಅಂದಿನಿಂದ ಇಂದಿನತನಕವೂ ಚಾಮುಂಡೇಶ್ವರಿ ರಥೋತ್ಸವ ಸಂದರ್ಭದಲ್ಲಿ ಬಳಸಲಾಗುತ್ತಿದೆ.

ಪ್ರತಿದಿನ ಪೊಲೀಸರಿಂದ ವಂದನೆ

ಪ್ರತಿದಿನ ಪೊಲೀಸರಿಂದ ವಂದನೆ

ಇದೆಲ್ಲದರ ನಡುವೆ ಚಾಮುಂಡೇಶ್ವರಿಗೆ ಪ್ರತಿದಿನವೂ ಪೊಲೀಸರಿಂದ ವಂದನೆ ಸಲ್ಲಿಸುವ ಪದ್ಧತಿಯಿದೆ. ಇದೊಂದು ಅಪರೂಪದ ಸಂಪ್ರದಾಯ ಎಂದರೆ ತಪ್ಪಾಗಲಾರದು. ಮೈಸೂರು ಮಹಾರಾಜರ ಕಾಲದಲ್ಲಿ ಆರಂಭಗೊಂಡ ಈ ಪದ್ಧತಿ ಇಂದಿಗೂ ಮುಂದುವರೆದಿದೆ. ಈ ಹಿಂದೆ ರಾಜರೊಂದಿಗೆ ಬರುತ್ತಿದ್ದ ಸಿಪಾಯಿಗಳು ಪೂಜೆಯ ಸಮಯದಲ್ಲಿ ತಾಯಿ ಚಾಮುಂಡೇಶ್ವರಿಗೆ ಬಂದೂಕು ಹಿಡಿದು ಸೆಲ್ಯೂಟ್ ಮಾಡಿ ತಮ್ಮ ವಂದನೆಯನ್ನು ಸಲ್ಲಿಸುತ್ತಿದ್ದರು. ಆದರೆ ಸ್ವಾತಂತ್ರ್ಯ ಬಂದ ಬಳಿಕ ಇದೀಗ ಪೊಲೀಸರು ಮಾಡುತ್ತಿದ್ದಾರೆ.

ಅಪರೂಪದ ಸಂಪ್ರದಾಯ

ಅಪರೂಪದ ಸಂಪ್ರದಾಯ

ಸದ್ಯ ಮೈಸೂರು ನಗರದ ಕೆ.ಆರ್.ಠಾಣೆಯ ಪೊಲೀಸ್ ಸಿಬ್ಬಂದಿ ದೇವಾಲಯದ ಒಳ ಆವರಣಕ್ಕೆ ಆಗಮಿಸಿ ಬಂದೂಕು ಹಿಡಿದು ವಂದನೆ ಸಲ್ಲಿಸುತ್ತಾರೆ. ದೇವಾಲಯದಲ್ಲಿ ಬೆಳಗ್ಗೆ 9.30 ಹಾಗೂ ರಾತ್ರಿ 8.30ಕ್ಕೆ ಮಹಾ ಮಂಗಳಾರತಿ ಮಾಡುವ ವೇಳೆ ಪೊಲೀಸರು ಚಾಮುಂಡೇಶ್ವರಿಗೆ ವಂದನೆ ಸಲ್ಲಿಸುತ್ತಿದ್ದಾರೆ. ಚಾಮುಂಡಿಬೆಟ್ಟದಲ್ಲಿ ಇಂತಹದೊಂದು ಅಪರೂಪದ ಸಂಪ್ರದಾಯ ನಡೆಯುತ್ತಾ ಬಂದಿದೆ ಎಂಬುದೇ ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ದೇಶದಲ್ಲಿಯೇ ಅಪರೂಪದ ಸಂಪ್ರದಾಯ ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ಆಚರಣೆಯಲ್ಲಿದೆ ಎನ್ನುವುದೇ ವಿಶೇಷವಾಗಿದೆ.

ಪ್ರತಿದಿನ ವಿಶಿಷ್ಟ ಅಲಂಕಾರದೊಂದಿಗೆ ವಿಶೇಷ ಪೂಜೆ

ಪ್ರತಿದಿನ ವಿಶಿಷ್ಟ ಅಲಂಕಾರದೊಂದಿಗೆ ವಿಶೇಷ ಪೂಜೆ

ಇನ್ನು ಮೈಸೂರು ದಸರಾಕ್ಕೆ ನವರಾತ್ರಿ ಆರಂಭದ ದಿನ ಚಾಲನೆ ನೀಡಿದ ಬಳಿಕ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪ್ರತಿದಿನವೂ ವಿಶಿಷ್ಟ ಅಲಂಕಾರದೊಂದಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಮೊದಲ ದಿನ ಸೆಪ್ಟೆಂಬರ್ 26 ಬ್ರಾಹ್ಮಿ ಅಲಂಕಾರ, ಸೆ.27ರಂದು ಮಹೇಶ್ವರಿ ಅಲಂಕಾರ, ಸೆ.28ರಂದು ಕೌಮಾರಿ ಅಲಂಕಾರ, ಸೆ.29ರಂದು ವೈಷ್ಣವಿ ಅಲಂಕಾರ, ಸೆ.30ರಂದು ವಾರಾಹಿ ಅಲಂಕಾರ, ಅ.1ರಂದು ಇಂದ್ರಾಣಿ ಅಲಂಕಾರ, ಅ.2ರಂದು ಸರಸ್ವತಿ ಅಲಂಕಾರ, ಅ.3ರ ದುರ್ಗಾ ಅಲಂಕಾರ, ಅ.4ರಂದು ವಿಶೇಷ ಮಹಾಲಕ್ಷ್ಮೀ ಅಲಂಕಾರ, ಅ.5ರ ವಿಜಯದಶಮಿ ದಿನದಂದು ಅಶ್ವಾರೋಹಣ ಅಲಂಕಾರ ಮಾಡಲಾಗುತ್ತದೆ. ಇದೇ ದಿನ ಅರಮನೆಗೆ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಪೂಜೆ ಸಲ್ಲಿಸಿ, ಚಿನ್ನದ ಅಂಬಾರಿ ಮೇಲೆರಿಸಿ ಜಂಬೂಸವಾರಿಯ ದಿನ ಪುಷ್ಪಾರ್ಚನೆ ಮಾಡಲಾಗುತ್ತದೆ.

ವಿಜಯದಶಮಿ ದಿನ ಅಭಿಮನ್ಯು ಹೊರುವ ಚಿನ್ನದ ಅಂಬಾರಿಯಲ್ಲಿ ವೀರಾಜಮಾನಳಾಗುವ ತಾಯಿ ಚಾಮುಂಡೇಶ್ವರಿ ಜಂಬೂಸವಾರಿಯಲ್ಲಿ ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗಲಿದ್ದಾಳೆ. ಈ ಸುಂದರ ಕ್ಷಣಗಳಿಗಾಗಿ ಕಾಯುವ ಲಕ್ಷಾಂತರ ಜನ ಕಣ್ತುಂಬಿಕೊಂಡು ಪಾವನರಾಗಲಿದ್ದಾರೆ.

English summary
Police personnel offers Gard of Honour is offered to goddess Chamundeshwari by the Police department in Mysuru during Dasara Mahotsav The police pay respects at 9.30 am and 8.30 pm, during mahamangalarathi, every day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X