ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ವರದಿ: ಚಾಮರಾಜನಗರ ಜಿಲ್ಲೆಯ ಭೂರಮೆಯ ನೋಟ, ಕಣ್ಣಿಗೆ ರಸದೂಟ!

|
Google Oneindia Kannada News

ಚಾಮರಾಜನಗರ, ಡಿಸೆಂಬರ್ 14: ಸಾಮಾನ್ಯವಾಗಿ ಈ ಸಮಯದಲ್ಲಿ ಮಳೆ ಮರೆಯಾಗಿ ಬಿಸಿಲು ಕಾಣಿಸಿಕೊಂಡು ಕಾವು ಹೆಚ್ಚಾಗಿ ನಿಸರ್ಗದಲ್ಲಿ ಒಂದಿಷ್ಟು ಬದಲಾವಣೆ ಕಾಣಿಸಿಕೊಳ್ಳುವುದರೊಂದಿಗೆ ಕುರುಚಲು ಕಾಡುಗಳು ಒಣಗಿ ಹಸಿರು ಮರೆಯಾಗುತ್ತಿತ್ತು. ಆದರೆ ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ಚಾಮರಾಜನಗರ ಜಿಲ್ಲೆಯಾದ್ಯಂತ ಕೆರೆ- ಕಟ್ಟೆಗಳು ತುಂಬಿ, ಅರಣ್ಯಗಳು ಹಸಿರಾಗಿ ಕಂಗೊಳಿಸುತ್ತಿದ್ದು, ನಿಸರ್ಗದ ನೋಟ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ.

ಬಹುಶಃ ಎಲ್ಲವೂ ಸರಿಯಾಗಿದ್ದು, ಕೊರೊನಾ ಬಾರದೆ ಹೋಗಿದಿದ್ದರೆ ಈ ಸುಂದರ ದೃಶ್ಯಗಳನ್ನು ನೋಡಲು ಪ್ರವಾಸಿಗರು ಜಿಲ್ಲೆಗೆ ಮುಗಿ ಬೀಳುತ್ತಿದ್ದರಲ್ಲದೆ, ಪ್ರವಾಸೋದ್ಯಮ ಗರಿಗೆದರಿ ಬೊಕ್ಕಸಕ್ಕೂ ಆದಾಯ ಬರುತ್ತಿತ್ತೇನೋ? ಆದರೆ ಈ ಬಾರಿ ಜಿಲ್ಲೆಯಲ್ಲಿ ಕಂಡು ಬರುತ್ತಿರುವ ನಿಸರ್ಗದ ಸುಂದರ ದೃಶ್ಯಗಳನ್ನು ವೀಕ್ಷಿಸಲು ಪ್ರವಾಸಿಗರೇ ಇಲ್ಲದಂತಾಗಿದೆ.

ಮಳೆಯಿಂದ ತುಂಬಿದ ಕೆರೆಕಟ್ಟೆಗಳು

ಮಳೆಯಿಂದ ತುಂಬಿದ ಕೆರೆಕಟ್ಟೆಗಳು

ರೈತರ ಹೊಲಗದ್ದೆಗಳಿಂದ ಆರಂಭವಾಗಿ ಅಭಯಾರಣ್ಯಗಳ ತನಕ ಕಣ್ಣು ಹಾಯಿಸಿದೆಡೆ ಹಸಿರಿನ ನೋಟ ಲಭ್ಯವಾಗುತ್ತಿದೆ. ಜೋಳ, ಸೂರ್ಯಕಾಂತಿ, ಅಲಸಂದೆ, ತೊಗರಿ, ದವಸ- ಧಾನ್ಯ ಬೆಳೆಗಳು ಮಳೆಯ ಕಾರಣ ರೈತರ ಕೈಹಿಡಿಯಲಿಲ್ಲ. ಆದರೂ ಹಿಂದಿನ ಬರಗಾಲದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿರುವ ರೈತರು ಈ ಬಾರಿ ಅಕಾಲಿಕ ಮಳೆ ಸುರಿದು ನಷ್ಟವಾದರೂ, ತುಂಬಿದ ಕೆರೆ ಕಟ್ಟೆಗಳನ್ನು ನೋಡಿ ಸಂತಸಪಡುತ್ತಾ ಮುಂದಿನ ದಿನಗಳಲ್ಲಿ ಅಂತರ್ಜಲಕ್ಕೆ ಸಮಸ್ಯೆಯಾಗದೆ, ಬೆಳೆಗಳನ್ನು ಬೆಳೆಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ಈ ಹಿಂದೆ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಮಲೆಮಹದೇಶ್ವರ ಬೆಟ್ಟ, ಹೊಗೆನಕಲ್, ಶಿವನಸಮುದ್ರ ಸೇರಿದಂತೆ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಮುಗಿ ಬೀಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಸಾಗುವಾಗ ಸಮೀಪದ ಹೊಲಗದ್ದೆಗಳ ಚೆಲುವನ್ನು ನೋಡುತ್ತಿದ್ದ ಕೆಲವರು ರೈತರು ಬೆಳೆದ ಸೂರ್ಯಕಾಂತಿ, ಸೇವಂತಿಗೆ, ಚೆಂಡು ಹೂ ಬೆಳೆಗಳ ನಡುವೆ ನಿಂತು ಒಂದಷ್ಟು ಫೋಟೋಗಳನ್ನು ತೆಗೆದುಕೊಂಡು ಹೋಗುತ್ತಿದ್ದರು.

 ಪ್ರವಾಸಿಗರ ಖುಷಿಗೆ ತಣ್ಣೀರೆರಚಿದ ಕೊರೊನಾ

ಪ್ರವಾಸಿಗರ ಖುಷಿಗೆ ತಣ್ಣೀರೆರಚಿದ ಕೊರೊನಾ

ಕೆಲವು ರೈತರು ತಾವು ಬೆಳೆದ ಸೂರ್ಯಕಾಂತಿ ಹೂವಿನ ನಡುವೆ ಸೆಲ್ಪಿ ತೆಗೆದುಕೊಳ್ಳಲು ಪ್ರವಾಸಿಗರಿಗೆ ಶುಲ್ಕ ವಿಧಿಸಿ ಒಂದಷ್ಟು ಸಂಪಾದನೆ ಮಾಡಿಕೊಳ್ಳುತ್ತಿದ್ದರು. ದೂರದಿಂದ ಬರುವ ಪ್ರವಾಸಿಗರು ರೈತರು ಕೇಳುವ ಹಣ ನೀಡಿ ತಮ್ಮ ಮತ್ತು ತಮ್ಮ ಕುಟುಂಬಗಳ ಒಂದಷ್ಟು ಫೋಟೋಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಜತೆಗೆ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿ ಪಡುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿ ಸೃಷ್ಟಿಸಿದ ಅನಾಹುತ ಎಲ್ಲದಕ್ಕೂ ತಣ್ಣೀರು ಎರೆಚಿದೆ.

 ಕೇರಳ, ಊಟಿ ಭಾಗದಿಂದ ಆಗಮಿಸುವ ಪ್ರವಾಸಿಗರು

ಕೇರಳ, ಊಟಿ ಭಾಗದಿಂದ ಆಗಮಿಸುವ ಪ್ರವಾಸಿಗರು

ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುವ ರೈತರು ಮೈಸೂರು ಕಡೆಯಿಂದ ಊಟಿ, ತಮಿಳುನಾಡು, ಕೇರಳ ಕಡೆಗೆ ತೆರಳುವ ಮತ್ತು ತಮಿಳುನಾಡು, ಕೇರಳ, ಊಟಿ ಭಾಗದಿಂದ ಆಗಮಿಸುವ ಪ್ರವಾಸಿಗರು ಚಾಮರಾಜನಗರ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದರು. ಈ ವೇಳೆ ಮಾರ್ಗದ ನಡುವೆ ಇರುವ ನಮ್ಮ ಜಮೀನುಗಳಲ್ಲಿ ಬೆಳೆದು ಹೂ ಬಿಟ್ಟು ನಿಂತ ಸೂರ್ಯಕಾಂತಿ, ಸೇರಿದಂತೆ ಇತರೆ ಬೆಳೆಗಳನ್ನು ನೋಡಿ ಆನಂದಿಸುತ್ತಿದ್ದರು. ಚಲನಚಿತ್ರ, ಧಾರವಾಹಿಗಳ ಚಿತ್ರೀಕರಣಗಳನ್ನು ಕೂಡ ಮಾಡುತ್ತಿದ್ದರು. ಕೆಲವರು ಕುಟುಂಬ ಸಮೇತ ಫೋಟೋಗಳನ್ನು ತೆಗೆಸಿಕೊಂಡರೆ, ನವ ಜೋಡಿಗಳು ಫ್ರೀ ವೆಡ್ಡಿಂಗ್ ಶೂಟ್‌ಗೆ ಇಲ್ಲಿಗೆ ಬರುತ್ತಿದ್ದರು. ಇದರಿಂದ ಒಂದಷ್ಟು ಆದಾಯವೂ ಬರುತ್ತಿತ್ತು.

 ಆ ಕಲ್ಪನೆ ರೈತರಿಗೆ ಆದಾಯ ತಂದಿತ್ತು

ಆ ಕಲ್ಪನೆ ರೈತರಿಗೆ ಆದಾಯ ತಂದಿತ್ತು

ಹಾಗೆ ನೋಡಿದರೆ ರೈತರ ಬೆಳೆಗಳ ನಡುವೆ ಫೋಟೋ ತೆಗೆದುಕೊಳ್ಳುವ ಕಲ್ಪನೆ ಮೂಡಿದ್ದು ಇತ್ತೀಚೆಗಿನ ವರ್ಷಗಳಲ್ಲಿ. ಅದು ಅಂಡ್ರಾಯ್ಡ್ ಮೊಬೈಲ್‌ಗಳು ಬಂದ ಬಳಿಕ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹಾಕುವ ಟ್ರೆಂಡ್ ಶುರುವಾದ ಬಳಿಕ ದಾರಿಯಲ್ಲಿ ಸಾಗುವವರೆಲ್ಲ ರೈತರ ಜಮೀನಿಗೆ ಲಗ್ಗೆಯಿಡಲು ಆರಂಭಿಸಿದರು. ಕೆಲವರು ಎಲ್ಲೆಂದರಲ್ಲಿ ರೈತರ ಬೆಳೆಗಳನ್ನು ತುಳಿದು ನಾಶ ಮಾಡಲಾರಂಭಿಸಿದರು. ಮೊದಲೆಲ್ಲ ತಮ್ಮ ಜಮೀನಿಗೆ ಉಚಿತ ಪ್ರವೇಶ ನೀಡಿದ ರೈತರು, ಜನ ಲಗ್ಗೆಯಿಡುವುದನ್ನು ಕಂಡು, ಜತೆಗೆ ಬೆಳೆಗಳನ್ನು ಹಾಳು ಮಾಡುತ್ತಿದ್ದುದನ್ನು ನೋಡಿ, ತಮ್ಮ ಹೊಲ ಗದ್ದೆಗಳಲ್ಲಿ ಬೆಳೆದ ಫಸಲಿನ ನಡುವೆ ಸೆಲ್ಫಿ ತೆಗೆಸಿಕೊಳ್ಳಲು ನಿರ್ದಿಷ್ಟ ಶುಲ್ಕ ವಿಧಿಸಲಾರಂಭಿಸಿದರು.

 ನಿಸರ್ಗದ ಸೌಂದರ್ಯಕ್ಕೆ ಮಾರುಹೋದ ಜನ

ನಿಸರ್ಗದ ಸೌಂದರ್ಯಕ್ಕೆ ಮಾರುಹೋದ ಜನ

ನಿಸರ್ಗದ ಸೌಂದರ್ಯಕ್ಕೆ ಮಾರುಹೋದ ಜನ ಹಣ ನೀಡಿ ಜಮೀನಿನಲ್ಲಿ ಫೋಟೋ ತೆಗೆಸಿಕೊಳ್ಳಲು ಆರಂಭಿಸಿದರು. ಇದರಿಂದ ರೈತರಿಗೆ ಒಂದಷ್ಟು ಆದಾಯವೂ ಬರಲಾರಂಭಿಸಿತು. ಆದರೆ ಕೊರೊನಾ ಲಾಕ್‌ಡೌನ್ ಬಳಿಕ ಪ್ರವಾಸಿಗರಿಲ್ಲದ ಕಾರಣ ಎಲ್ಲವೂ ನೆಲಕಚ್ಚಿದೆ. ಕೊರೊನಾ ಸೋಂಕು ಕಡಿಮೆಯಾಗಿ ಅಂತರ್‌ರಾಜ್ಯಗಳ ನಡುವೆ ಓಡಾಟ ಶುರುವಾಗಿ ಎಲ್ಲವೂ ಸರಿಹೋಯಿತು, ಇನ್ಮೇಲೆ ನಿಧಾನವಾಗಿ ಎಲ್ಲವೂ ಚೇತರಿಸಿಕೊಳ್ಳುತ್ತದೆ ಎನ್ನುವಾಗಲೇ ಓಮಿಕ್ರಾನ್ ಸದ್ದು ಮಾಡಲಾರಂಭಿಸಿದೆ. ಪರಿಣಾಮ ಮತ್ತೆ ಪ್ರವಾಸೋದ್ಯಮಕ್ಕೆ ಮತ್ತೆ ಹೊಡೆತ ಬೀಳುವ ಭಯ ಕಾಡಲಾರಂಭಿಸಿದೆ.

 ನೋವು ಮರೆಸುವ ಭೂರಮೆ ನೋಟ

ನೋವು ಮರೆಸುವ ಭೂರಮೆ ನೋಟ

ಅದು ಏನೇ ಇರಲಿ, ಒಟ್ಟಾರೆಯಾಗಿ ಹೇಳಬೇಕೆಂದರೆ ಕೆರೆಕಟ್ಟೆಗಳು ಭರ್ತಿಯಾಗಿ, ಅರಣ್ಯಗಳು ಹಸಿರಿನಿಂದ ಕಂಗೊಳಿಸುತ್ತಾ ನಿಸರ್ಗ ಪ್ರೇಮಿಗಳ ಕಣ್ಣನ್ನು ತಂಪು ಮಾಡಿದೆ. ಅಭಯಾರಣ್ಯಗಳ ನಡುವೆ ಹಸಿರು ತಾಂಡವಾಡುತ್ತಿದ್ದು, ಪ್ರಾಣಿ, ಪಕ್ಷಿಗಳು ಖುಷಿಯಾಗಿ ನಲಿದಾಡುತ್ತಿವೆ. ಭೂರಮೆಯ ಸುಂದರ ನೋಟ ಎಲ್ಲ ನೋವುಗಳನ್ನು ಮರೆಸುತ್ತಿದೆ.

Recommended Video

ಮಠಕ್ಕೇ ಹೋಗಿ ಮೊಟ್ಟೆ ತಿಂತೀವಿ ಅಂದಿದ್ದ ಹುಡುಗಿ ಈಗ ಹೇಳಿದ್ದೇನು? | Oneindia Kannada

English summary
Chamarajanagar district tourist places attracting tourists this year; after ponds filled with water and The forests are lush with green everywhere due to rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X