ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲವೂ ಬದಲಾಯ್ತು! ಕೊಡಗಿನ ಜನರ ಮಳೆಯ ಆ ಸಂಭ್ರಮವೂ ಮರೆಯಾಯ್ತು!

By ಕೊಡಗು ಪ್ರತಿನಿಧಿ
|
Google Oneindia Kannada News

ಕೊಡಗಿನಲ್ಲಿ ಮಳೆ ಸುರಿಯುತ್ತಿದೆ ಈಗ ಸುರಿಯುತ್ತಿರುವ ಮಳೆ ಅಂತಿಂಥ ಮಳೆಯಲ್ಲ ಅದು ಮಹಾಮಳೆ. ಹಿಂದಿನ ಮಳೆಗಾಲಗಳಿಗೆ ಹೋಲಿಸಿದರೆ ಅವತ್ತು ಮಳೆ ಎಂದರೆ ಸಂಭ್ರಮಿಸುತ್ತಿದ್ದರು. ಆದರೆ ಈಗ ಮಳೆ ಸುರಿದಾಗಲೆಲ್ಲಾ ಎದೆ ಢವಢವ ಎನ್ನುತ್ತಿದೆ.

ಈಗಾಗಲೇ ಬಹಳಷ್ಟು ಮಳೆ ಸುರಿದಿದೆ. ಈ ನಡುವೆ ಜುಲೈ 17ರಿಂದ ಕಕ್ಕಡ(ಆಟಿ) ಮಾಸ ಶುರುವಾಗಲಿದ್ದು, ಆಗಸ್ಟ್ 16ರವರೆಗೆ ಒಂದು ತಿಂಗಳು ಕಾಲ ಇರಲಿದೆ. ಈ ಅವಧಿಯಲ್ಲಿ ಭಾರಿ ಮಳೆ ಸುರಿಯುವುದು ವಾಡಿಕೆ. ಆದ್ದರಿಂದ ಮುಂದಿನ ಮಳೆಯ ಆ ದಿನಗಳು ಹೇಗಿರಲಿದೆಯೋ ಎಂಬ ಆತಂಕವೂ ಕಾಡದಿರದು.

ಕೊಡಗು: ಜಲಪ್ರಳಯದ ಆ ದಿನ ನೆನೆದರೆ ಜನ ಬೆಚ್ಚಿ ಬೀಳ್ತಾರೆ!ಕೊಡಗು: ಜಲಪ್ರಳಯದ ಆ ದಿನ ನೆನೆದರೆ ಜನ ಬೆಚ್ಚಿ ಬೀಳ್ತಾರೆ!

ಹಾಗೆ ನೋಡಿದರೆ ಕೊಡಗಿನಲ್ಲಿ ಹಿಂದೆಯೂ ಮಳೆ ಬರುತ್ತಿತ್ತು. ಆಗ ಪ್ರವಾಹ ಏರ್ಪಡುತ್ತಿತ್ತಾದರೂ ಈಗಿನಷ್ಟು ಅನಾಹುತಗಳು ಸಂಭವಿಸುತ್ತಿರಲಿಲ್ಲ. ಅವತ್ತಿನ ಕಾಲದಲ್ಲಿ ವಾರಗಟ್ಟಲೆ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದರೂ ಈಗಿನಷ್ಟು ಭಯಾನಕ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದದ್ದು ಅಪರೂಪವೇ. ಮುಂಗಾರು ಆರಂಭದಲ್ಲಿ ಅಬ್ಬರಿಸುತ್ತಿತ್ತು. ಈ ವೇಳೆ ಭೂಮಿ ತೇವವಾಗಿ ನೀರಿನ ಸೆಲೆಗಳಲ್ಲಿ ನೀರು ಉಕ್ಕಿ ಹರಿಯುತ್ತಿತ್ತು ನಂತರ ಜುಲೈ ಆಗಸ್ಟ್ ತಿಂಗಳಲ್ಲಿ ಮಳೆ ಬಿಡುವು ನೀಡದೆ ಸುರಿಯುತ್ತಿತ್ತಾದರೂ ಸಣ್ಣಪುಟ್ಟ ಅನಾಹುತಗಳನ್ನು ಹೊರತು ಪಡಿಸಿದರೆ ಅಷ್ಟಾಗಿ ಭಯ ಪಡುವ ಪ್ರಮೇಯ ಬರುತ್ತಿರಲಿಲ್ಲ.

ಮೂರ್ನಾಲ್ಕು ದಶಕಗಳ ಹಿಂದೆ ಕೊಡಗಿನ ಚಿತ್ರಣ ಹೀಗಿರಲಿಲ್ಲ. ಧಾರಾಕಾರ ಮಳೆ ಸುರಿಯುತ್ತಿದ್ದ ಕಾರಣ ದಟ್ಟವಾದ ಅರಣ್ಯಪ್ರದೇಶವನ್ನು ಹೆಚ್ಚಾಗಿ ಹೊಂದಲಾಗಿತ್ತು. ಈ ವಾತಾವರಣಕ್ಕೆ ಅನುಕೂಲವಾಗುವಂತೆ ಹೆಚ್ಚಿನ ಪ್ರದೇಶಗಳಲ್ಲಿ ಗದ್ದೆಗಳಿದ್ದವು. ಭತ್ತ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಅದನ್ನು ಹೊರತುಪಡಿಸಿದರೆ ದಟ್ಟ ಅರಣ್ಯಗಳ ನಡುವೆ ಏಲಕ್ಕಿಯನ್ನು ಬೆಳೆಯಲಾಗುತ್ತಿತ್ತು.

 ಭತ್ತ, ಏಲಕ್ಕೆ ಪ್ರಮುಖ ಬೆಳೆಯಾಗಿದ್ದವು

ಭತ್ತ, ಏಲಕ್ಕೆ ಪ್ರಮುಖ ಬೆಳೆಯಾಗಿದ್ದವು

ಎಲ್ಲಿ ನೋಡಿದರಲ್ಲಿ ಏಲಕ್ಕಿ ತೋಟಗಳಿದ್ದವು. ದಟ್ಟವಾದ ಕಾಡಿನ ಮಧ್ಯೆ ಏಲಕ್ಕಿ ಬೆಳೆಯಲಾಗುತ್ತಿತ್ತು. ಮುಂಗಾರು ಆರಂಭವಾಗುತ್ತಿದ್ದಂತೆಯೇ ಏಲಕ್ಕಿ ತೋಟದಲ್ಲಿ ಗಿಡನೆಡುವುದು ಕಾಡು ಕಡಿಯುವುದು ಹೀಗೆ ಕೆಲಸಗಳನ್ನು ಮಾಡುತ್ತಿದ್ದರು. ಏಲಕ್ಕಿ ಗಿಡಗಳು ನೀರಿನಾಶ್ರಯದ ಪ್ರದೇಶದಲ್ಲಿ ಹುಲುಸಾಗಿ ಬೆಳೆದು ಫಸಲು ನೀಡುತ್ತಿದ್ದವು. ಇದರ ನಡುವೆ ಮಳೆಗಾಲದಲ್ಲಿ ಹೆಚ್ಚಿನವರು ಗದ್ದೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆಗಸ್ಟ್ ವೇಳೆಗೆ ಗದ್ದೆಯಲ್ಲಿ ನಾಟಿ ಮಾಡಿ ಬಳಿಕ ಏಲಕ್ಕಿ ತೋಟಗಳತ್ತ ಮುಖ ಮಾಡುತ್ತಿದ್ದರು. ಆಗ ಕಾಫಿ ತೋಟಗಳು ಹೆಚ್ಚಾಗಿ ಇರಲಿಲ್ಲ. ಏಲಕ್ಕಿ ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಯಾಗಿತ್ತು.

ಭತ್ತವನ್ನು ಧಾನ್ಯ ಲಕ್ಷ್ಮಿ ಎಂದು ನಂಬಿದ್ದ ಜನ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದರು. ಗದ್ದೆ ಕೆಲಸದ ನಡುವೆ ಹೊರ ಪ್ರಪಂಚವನ್ನೇ ಮರೆತು ಬಿಡುತ್ತಿದ್ದರು. ಇಲ್ಲಿನವರಿಗೆ ಜುಲೈ 17ರಿಂದ ಆರಂಭವಾಗಿ ಆಗಸ್ಟ್ 16ರವರೆಗಿನ ಕಕ್ಕಡ(ಆಟಿ) ಒಂದು ತಿಂಗಳ ಅವಧಿ ಬಿಡುವಿಲ್ಲದ ದುಡಿಮೆಯ ಕಾಲವಾಗಿತ್ತು. ಈ ವೇಳೆ ಶುಭ ಕಾರ್ಯಗಳಿಗೆ ವಿರಾಮ ನೀಡಲಾಗುತ್ತಿತ್ತು. ಜತೆಗೆ ಮಳೆಯ ಆರ್ಭಟವೂ ಹೆಚ್ಚಾಗಿರುತ್ತಿತ್ತು.

ಕರಾವಳಿಯಲ್ಲಿ ಕಡಲ ಅಬ್ಬರ: ನೋಡನೋಡುತ್ತಿದ್ದಂತೆಯೇ ಕಡಲ ಪಾಲಾದ ಮನೆ-ರಸ್ತೆ!ಕರಾವಳಿಯಲ್ಲಿ ಕಡಲ ಅಬ್ಬರ: ನೋಡನೋಡುತ್ತಿದ್ದಂತೆಯೇ ಕಡಲ ಪಾಲಾದ ಮನೆ-ರಸ್ತೆ!

 ಕೃಷಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುತ್ತಿದ್ದ ರೈತಾಪಿ ಕುಟುಂಬ

ಕೃಷಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುತ್ತಿದ್ದ ರೈತಾಪಿ ಕುಟುಂಬ

ಮುಂಜಾನೆ ಐದು ಗಂಟೆಯಿಂದಲೇ ಉಳುಮೆ ಮಾಡುವುದರೊಂದಿಗೆ ಗದ್ದೆಗೆ ಇಳಿದರೆ ಮತ್ತೆ ಆತ ಮನೆಯತ್ತ ಮುಖ ಮಾಡುತ್ತಿದ್ದದ್ದು ಸಂಜೆಯೇ. ಈ ಸಮಯದಲ್ಲಿ ಸುರಿಯುವ ಮಳೆ. ಕೊರೆಯುವ ಚಳಿ. ಎಲ್ಲವನ್ನು ಸಹಿಸಿಕೊಂಡು ನೀರು ತುಂಬಿದ ಕೆಸರು ಗದ್ದೆಯಲ್ಲಿ ಮೈಬಗ್ಗಿಸಿ ದುಡಿಯುವುದು ಅನಿವಾರ್ಯವಾಗಿತ್ತು.

ನೀರಿನ ಅನುಕೂಲವಿದ್ದ ಪ್ರದೇಶಗಳಲ್ಲಿ ಭತ್ತದ ಗದ್ದೆಯನ್ನು ಹಿಂದಿನವರು ನಿರ್ಮಿಸಿದ್ದರು. ಕೂಡು ಆಳುಗಳಾಗಿ ಒಬ್ಬರಿಗೆ ಮತ್ತೊಬ್ಬರು ಸಹಕರಿಸುತ್ತಾ ಭತ್ತದ ನಾಟಿ ಕೆಲಸವನ್ನು ಮುಗಿಸುತ್ತಿದ್ದರು. ಶ್ರೀಮಂತರು ಮಾತ್ರ ಆಳುಗಳನ್ನಿಟ್ಟು ಕೆಲಸ ಮಾಡಿಸುತ್ತಿದ್ದರು. ಉಳಿದಂತೆ ಸಣ್ಣಪುಟ್ಟ ರೈತರು ಕೂಡು ಆಳುಗಳಾಗಿ ಕೆಲಸ ಮಾಡುತ್ತಾ ಮುಂದುವರೆಯುತ್ತಿದ್ದರಿಂದ ಜತೆಗೆ ಮನೆಯಲ್ಲಿ ಹೆಚ್ಚಿನ ಜನರಿದ್ದುದರಿಂದ ಅವರೆಲ್ಲರೂ ಕೃಷಿ ಕೆಲಸವನ್ನು ಚಿಕ್ಕಂದಿನಿಂದಲೇ ಕಲಿತುಕೊಳ್ಳುತ್ತಿದ್ದರಿಂದ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ. ಜತೆಗೆ ಭತ್ತದ ಕೃಷಿಯನ್ನು ಎಲ್ಲರೂ ಒಟ್ಟಾಗಿ ಸಂತೋಷದಿಂದ ಸಂಭ್ರಮದಿಂದ ಮಾಡುತ್ತಿದ್ದರು.

 ಬೇಸಿಗೆಯಲ್ಲೇ ಮಳೆಗಾಲಕ್ಕೆ ಸಕಲ ಸಿದ್ದತೆ

ಬೇಸಿಗೆಯಲ್ಲೇ ಮಳೆಗಾಲಕ್ಕೆ ಸಕಲ ಸಿದ್ದತೆ

ಕಕ್ಕಡದಲ್ಲಿ ಹೆಚ್ಚಿನವರು ತಮ್ಮ ಸುತ್ತಮುತ್ತ ಸಿಗುವ ಏಡಿ, ಅಣಬೆ, ಬಿದಿರು ಕಣಿಲೆ, ಮರದಲ್ಲಿ ಬೆಳೆಯುವ ಕೆಸದ ಪತ್ರೊಡೆ, ನಾಟಿಕೋಳಿ ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಇವುಗಳಲ್ಲಿ ಉಷ್ಣಾಂಶವನ್ನು ಹೆಚ್ಚಿಸುವ ಶಕ್ತಿಯಿತ್ತು. ಇನ್ನು ಕಕ್ಕಡ(ಆಟಿ)18 (ಆಗಸ್ಟ್ 3) ನೇ ದಿನ ಕಾಡಿನಲ್ಲಿ ಸಿಗುವ ಆಟಿ ಸೊಪ್ಪಿನ ಪಾಯಸ ಸೇವಿಸುತ್ತಿದ್ದರು. ಮಳೆಗಾಲವೆಂದರೆ ಅದೊಂದು ಯುದ್ಧದಂತೆ ಭಾಸವಾಗುತ್ತಿತ್ತು. ಹೀಗಾಗಿ ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಬೇಸಿಗೆಯಲ್ಲಿಯೇ ಮಾಡಿಕೊಳ್ಳುವುದು ಹಿಂದಿನಿಂದಲೂ ನಡೆದು ಬಂದಿತ್ತು.

ಮಳೆಗಾಲ ಕಳೆಯುವ ತನಕ ಬೇಕಾಗುವಷ್ಟು ಸೌದೆ, ಅಕ್ಕಿ, ದಿನಸಿ ಪದಾರ್ಥಗಳು, ಕಾಳು ಕಡ್ಡಿಗಳು, ಸೌತೆಕಾಯಿ, ಗೆಣಸು, ಹಲಸಿ ಹಪ್ಪಳ, ಬೀಜ ಹೀಗೆ ತಮ್ಮ ಸುತ್ತಮುತ್ತ ದೊರೆಯುವ ಹಾಗೂ ತಾವೇ ಬೆಳೆಸಿದ ತರಕಾರಿ ಇನ್ನಿತರ ಪದಾರ್ಥಗಳನ್ನು ಸಂಗ್ರಹಿಸಿಡುತ್ತಿದ್ದರು. ಇದರಿಂದಾಗಿ ಮಳೆ ತಿಂಗಳಾನುಗಟ್ಟಲೆ ಸುರಿದರೂ ಅದನ್ನು ಎದುರಿಸುವಷ್ಟು ಸಾಮರ್ಥ್ಯವಿರುತ್ತಿತ್ತು.

 ಮಕ್ಕಳೂ ಕೂಡ ಮಳೆಗೆ ಎದುರದ ಕಾಲ ಅದು

ಮಕ್ಕಳೂ ಕೂಡ ಮಳೆಗೆ ಎದುರದ ಕಾಲ ಅದು

ಜೂನ್‌ನಿಂದಲೇ ಮಳೆ ಆರಂಭವಾಗುತ್ತಿತ್ತು. ಆಗಲೇ ಗದ್ದೆಯಲ್ಲಿ ಭತ್ತದ ಕೃಷಿ ಕಾರ್ಯವೂ ಆರಂಭ. ಮಕ್ಕಳು ಶಾಲೆಗೆ ತೆರಳುವ ಮುನ್ನ ತಮ್ಮ ಗದ್ದೆಯಲ್ಲಿ ಕೆಲಸ ಮಾಡಿ ಹೊರಡುತ್ತಿದ್ದರು. ಶಾಲೆಗಳಿಗೆ ಸುಮಾರು ನಾಲ್ಕೈದು ಕಿ.ಮೀ. ದೂರದ ಡಾಂಬರು ಇಲ್ಲದ, ಕೆಸರು ತುಂಬಿದ ಮಣ್ಣು ರಸ್ತೆಯಲ್ಲಿ ತೆರಳುತ್ತಿದ್ದರು. ಶಾಲೆಯನ್ನು ತಲುಪುವ ವೇಳೆ ಛತ್ರಿ ಇದ್ದರೂ ಬಟ್ಟೆಗಳೆಲ್ಲ ಒದ್ದೆಯಾಗಿ ಬಿಡುತ್ತಿತ್ತು. ಪುಸ್ತಕದ ಚೀಲವನ್ನು ಮಾತ್ರ ತಬ್ಬಿಕೊಂಡು ಜೋಪಾನ ಮಾಡುತ್ತಿದ್ದರು. ಕೆಲವೊಮ್ಮೆ ಮಳೆಗೆ ಪುಸ್ತಕಗಳು ಒದ್ದೆಯಾಗಿ ಬಿಡುತ್ತಿದ್ದವು.

ಮಕ್ಕಳು ಕೂಡ ಮಳೆಗೆ ಹೆದರಿ ಮನೆಯೊಳಗೆ ಕೂರುವ ಜಾಯಮಾನದವರಾಗಿರಲಿಲ್ಲ. ಸುರಿಯುವ ಮಳೆಗೆ ಗೋಲಿ, ಬುಗುರಿ ಆಟವಾಡುತ್ತಿದ್ದರು. ಅಷ್ಟೇ ಅಲ್ಲ ಬಿದಿರು ಮೆಳೆಗಳ ನಡುವೆ ಮೂಡಿ ಬರುವ ಕಣಿಲೆ ಕತ್ತರಿಸುವುದು ಅಣಬೆ ಹುಡುಕುವುದು, ಹೊಳೆ, ತೋಡುಗಳ ಬದಿಯಲ್ಲಿ ಏಡಿ, ಮೀನು ಹಿಡಿಯುವುದನ್ನು ಮಾಡುತ್ತಿದ್ದರು.

 ಮಳೆ ಎಂದರೆ ಭಯ ಎನ್ನುವಂತೆ ಮಾಡಿದೆ 2018ರ ಪ್ರವಾಹ

ಮಳೆ ಎಂದರೆ ಭಯ ಎನ್ನುವಂತೆ ಮಾಡಿದೆ 2018ರ ಪ್ರವಾಹ

ಕಾಲ ಬದಲಾದಂತೆಲ್ಲ ಎಲ್ಲವೂ ಬದಲಾವಣೆಯಾಗಿದೆ. ಒಂದಷ್ಟು ಸಂಪ್ರದಾಯಗಳನ್ನು ಜನ ಉಳಿಸಿಕೊಂಡು ಬಂದಿರಬಹುದು. ಆದರೆ ಇವತ್ತು ಒಂದಷ್ಟು ಬದಲಾವಣೆಯಾಗಿದೆ. ಏಲಕ್ಕಿ ತೋಟ ಕಾಫಿತೋಟವಾಗಿ ಮಾರ್ಪಟ್ಟಿದೆ. ಗದ್ದೆಗಳು ಕಾಫಿ ತೋಟವಾಗಿಯೂ ನಿವೇಶನಗಳಾಗಿಯೂ, ಇನ್ನಿತರ ಕೃಷಿಗಳಿಗೆ ಮಾರ್ಪಾಡಾಗಿದೆ. ಮಳೆಯೂ ಕೂಡ ಹಿಂದಿನಂತೆ ಜಿಟಿ ಜಿಟಿಯಾಗಿ ಸುರಿಯದೆ ಒಮ್ಮೆಲೆ ಧಾರಾಕಾರವಾಗಿ ಸುರಿದು ಅನಾಹುತಗಳನ್ನು ಸೃಷ್ಠಿಮಾಡುತ್ತಿದೆ. ಹೀಗಾಗಿ ಆಗಿನ ಮಳೆಗಾಲವನ್ನು ಜನ ಸಂಭ್ರಮಿಸುತ್ತಿದ್ದರೆ ಈಗ ಜನ ಭಯಪಡುವಂತಾಗಿದೆ.

English summary
Kodagu people presently did not celebrate the rainy season compared to previous seasons. after the 2018 flood, people across the district worried about rain,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X