ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳಚಿದ ಕಾವೇರಿ ಹೋರಾಟದ ಕೊಂಡಿ ಮಾಜಿ ಸಂಸದ ಜಿ. ಮಾದೇಗೌಡ ಜೀವನ ಚಿತ್ರಣ!

|
Google Oneindia Kannada News

ಬೆಂಗಳೂರು, ಜು. 18: ಕಾವೇರಿ ನದಿ ನೀರು ಹೋರಾಟದ ಕೊಂಡಿಯೊಂದು ಕಳಚಿದಂತಾಗಿದೆ. ರೈತಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದ ಮಾಜಿ ಸಂಸದ ಡಾ.ಜಿ. ಮಾದೇಗೌಡ ಅವರು ಮಂಡ್ಯದ ಭಾರತೀನಗರದ ಜಿ. ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಾವೇರಿ ಹೋರಾಟದಲ್ಲಿ ಯಾವಾಗಲೂ ಮುಂಚೂಣಿ ನಾಯಕರಾಗಿದ್ದ ಡಾ. ಜಿ. ಮಾದೇಗೌಡ ಅವರದ್ದು ಹೋರಾಟದ ಬದುಕು. ರೈತ ಕುಟುಂಬದಲ್ಲಿ ಹುಟ್ಟಿ, ರೈತರ ಬವಣೆಗಳನ್ನು ಬಾಲ್ಯದಿಂದಲೇ ಅನುಭವಿಸಿದ್ದು ಅವರ ಹೋರಾಟದ ಮನೋಭಾವನೆ ಹೆಚ್ಚಾಗಲು ಕಾರಣವಾಗಿತ್ತು. ಮಾಜಿ ಸಂಸದ ಜಿ. ಮಾದೇಗೌಡ ಅವರು ಸಲ್ಲಿಸಿರುವ ಸಾಮಾಜಿಕ ಸೇವೆ ಹತ್ತು ಹಲವು. ರೈತ ಕುಟುಂಬದಲ್ಲಿ ಹುಟ್ಟಿದ ಅವರು, ರೈತರ ಕಷ್ಟ-ಸುಖಗಳನ್ನು ಅರಿತವರು. ಜೊತೆಗೆ ಆರೋಗ್ಯ, ಶಿಕ್ಷಣ, ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆ ಅವಿಸ್ಮರಣೀಯ.

ಹಿರಿಯ ಜೀವಿ ಜಿ.ಮಾದೇಗೌಡರ ನಿಧನಕ್ಕೆ ಮುಖಂಡರಿಂದ ಸಂತಾಪಹಿರಿಯ ಜೀವಿ ಜಿ.ಮಾದೇಗೌಡರ ನಿಧನಕ್ಕೆ ಮುಖಂಡರಿಂದ ಸಂತಾಪ

ಡಾ. ಜಿ. ಮಾದೇಗೌಡ ಅವರು ಕಾವೇರಿ ನದಿ ನೀರು ಹೋರಾಟದಿಂದ ಗುರುತಿಸಿಕೊಂಡಿದ್ದರೂ ರಾಜಕೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದರು. ರಾಜಕೀಯದಲ್ಲಿದ್ದರೂ ಅಜಾತಶತೃವಾಗಿದ್ದರು. ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವುದೇ ಅವರ ರಾಜಕೀಯ ಜೀವನದ ಪ್ರಭಾವ ತೋರಿಸುತ್ತದೆ. ಹೀಗಿದ್ದ ನಮ್ಮ ಮಾದೇಗೌಡರ ಜೀವನದ ಸಂಪೂರ್ಣ ಚಿತ್ರಣವನ್ನು ಶಬ್ದಗಳಲ್ಲಿ ಹಿಡಿದಿಡುವುದು ಅಸಾಧ್ಯ, ಆದರೂ ಅಂತಹ ಒಂದು ಸಣ್ಣ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ!

ಗುರುದೇವರಹಳ್ಳಿಯಲ್ಲಿ ಜನನ

ಗುರುದೇವರಹಳ್ಳಿಯಲ್ಲಿ ಜನನ

ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಹೋಬಳಿಯ ಗುರುದೇವರಹಳ್ಳಿ ಎಂಬ ಸಣ್ಣ ಗ್ರಾಮದ ಪುಟ್ಟೇಗೌಡ-ಕಾಳಮ್ಮ ಅವರ ಆರು ಮಕ್ಕಳಲ್ಲಿ ಕೊನೆಯವರಾಗಿ 1928ರ ಜು. 14ರಂದು ಜಿ. ಮಾದೇಗೌಡ ಜನಿಸಿದರು. ಎತ್ತರದ ನಿಲುವು, ಮಾತು ಕಡಿಮೆ, ಹಿಡಿದ ಕೆಲಸ ಮುಗಿಯುವವರೆಗೂ ಬಿಡದ ಛಲ, ನೇರ ನಡವಳಿಕೆ, ತಮಗೆ ಅನ್ನಿಸಿದ್ದನ್ನು ಯಾವ ಮುಲಾಜಿಗೂ ಒಳಗಾಗದೆ ಹೇಳುವ ಎದೆಗಾರಿಕೆ‌, ಇವು ಡಾ. ಜಿ. ಮಾದೇಗೌಡರನ್ನು ಹತ್ತಿರದಿಂದ ನೋಡಿದವರು ಹೇಳುವ ಮಾತುಗಳು.

ಮಂಡ್ಯ ಮಣ್ಣಿನ ಹಮ್ಮಿಲ್ಲದ ಗುಣ ಸ್ವಭಾವ. ಕಳಕಳಿ ಜೀವ-ಜೀವನ ನಡೆಸಿದರು. ರೈತರು, ಕಾರ್ಮಿಕರು, ಜ್ಞಾನಿಗಳ ಬಗ್ಗೆ ಅಪಾರ ಪ್ರೀತಿ, ಕೆಲಸ ಕದಿಯುವವರನ್ನು ಕಂಡರೆ ಅಷ್ಟೇ ಸಿಡುಕು, ಮೂಗಿನ ತುದಿಯಲ್ಲೇ ಕೋಪ ಈ ಎಲ್ಲಾ ಗುಣಗಳನ್ನು ಒಂದುಗೂಡಿಸಿದರೆ ಬರುವ ವ್ಯಕ್ತಿತ್ವವೇ ಜಿ. ಮಾದೇಗೌಡರದು ಎನ್ನುತ್ತಾರೆ ಅವರೊಂದಿಗೆ ಒಡನಾಟ ಹೊಂದಿದವರು.

ಬಾಲ್ಯದ ಜೀವನ-ಶಿಕ್ಷಣ

ಬಾಲ್ಯದ ಜೀವನ-ಶಿಕ್ಷಣ

ಜಿ. ಮಾದೇಗೌಡ ಅವರ ಹುಟ್ಟೂರು ಗುರುದೇವರಹಳ್ಳಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲವಿರಲಿಲ್ಲ. ಆದ್ದರಿಂದ ಅವರ ತಾಯಿಯ ತವರೂರು ಮಂಡ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ನಂತರ ಬೆಂಗಳೂರಿಗೆ ತೆರಳಿ ವಕೀಲ ಪದವಿಯನ್ನು ಪಡೆದರು. ವಕೀಲ ಪದವಿ ಪಡೆದರೂ ವಕೀಲರಾದರೂ ಅಲ್ಲಿ ಸ್ಥಿರವಾಗಿ ನಿಲ್ಲಲಿಲ್ಲ. ವಕೀಲಿ ವೃತ್ತಿಗಿಂತ ಜನಸೇವೆ ಮಾಡುವ ಇಚ್ಛೆಯಿಂದ ಬೆಂಗಳೂರಿನಿಂದ ಮಂಡ್ಯದತ್ತ ಮಾದೇಗೌಡರು ಮುಖಮಾಡಿದರು. ಹೀಗಾಗಿ ಮುಂದಿನ ಮಾದೇಗೌಡರು ನಡೆಸಿದ್ದು, ಹೋರಾಟದ ಬದುಕು.

ಮಾದೇಗೌಡರ ಕಾವೇರಿ 'ಹಿತರಕ್ಷಣೆ'

ಮಾದೇಗೌಡರ ಕಾವೇರಿ 'ಹಿತರಕ್ಷಣೆ'

ದಕ್ಷಿಣ ಕರ್ನಾಟಕದ ರೈತರ ಜೀವನದಿ ಕಾವೇರಿ ನೀರಿನ ಹಕ್ಕಿಗಾಗಿ ಸತತ ಹೋರಾಟ ನಡೆಸಿದ್ದರಿಂದ ಜಿ. ಮಾದೇಗೌಡ ಅವರನ್ನು 'ಕಾವೇರಿ ವರ ಪುತ್ರ' ಎಂದೇ ಮಂಡ್ಯ ಭಾಗದಲ್ಲಿ ಜನರು ಗುರುತಿಸುತ್ತಾರೆ. ಮಂಡ್ಯ ಜಿಲ್ಲೆಯ ರೈತರ ಹಿತರಕ್ಷಣಗಾಗಿ ಕಾವೇರಿ ಹಿತರಕ್ಷಣಾ ಸಮಿತಿಯ ಸ್ಥಾಪಿಸಿ, ಸಮಿತಿ ಅಧ್ಯಕ್ಷ ಜಿ. ಮಾದೇಗೌಡರು ಶಕ್ತಿಯಾಗಿ ಹೋರಾಟ ಮಾಡಿದ್ದರು.

ಕಾವೇರಿ ನದಿ ನೀರಿನ ಹಕ್ಕಿನ ಪ್ರಮುಖ ಪಾತ್ರ ವಹಿಸಿದ್ದ ಗೌಡರು, ರೈತರ ಪ್ರಮುಖ ಬೆಳೆಯಾದ ಕಬ್ಬಿಗೆ ಸೂಕ್ತ ಬೆಲೆ ಕೊಡಿಸಲು ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಭಾರತೀನಗರದಲ್ಲಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಆ ಭಾಗದ ರೈತರಿಗೆ ಕಣ್ಮಣಿಯಾಗಿದ್ದರು.

ರಾಜಕೀಯವಾಗಿ

ರಾಜಕೀಯವಾಗಿ "ಅಜಾತಶತೃ"

ಬೆಂಗಳೂರು ತೊರೆದು ಮಂಡ್ಯಕ್ಕೆ ಆಗಮಿಸಿದ ಮಾದೇಗೌಡರು, 1959ರಲ್ಲಿ ತಾಲೂಕು ಬೋರ್ಡ್ ಚುನಾವಣೆಯ ಮೂಲಕ ರಾಜಕೀಯ ಪ್ರವೇಶಿಸುವಂತಾಯ್ತು. ಆಗ ಮಂಡ್ಯ ಮತ್ತು ಮದ್ದೂರಿನ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಕೆ.ವಿ. ಶಂಕರಗೌಡ ಮತ್ತು ಎಚ್.ಕೆ. ವೀರಣ್ಣಗೌಡ ಅವರು ಕಾಂಗ್ರೆಸ್ ಪಕ್ಷದಲ್ಲಿ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದ ಮಾದೇಗೌಡರನ್ನು ಕರೆದು, ತಾಲೂಕು ಬೋರ್ಡ್ ಚುನಾವಣೆಗೆ ನಿಲ್ಲಿಸಿದರು.

ತಾಲೂಕು ಬೋರ್ಡ್ ಚುನಾವಣೆಯಲ್ಲಿ ಮಾದೇಗೌಡರದ್ದು ಅಭೂತಪೂರ್ವ ಗೆಲವು. ಅವರ ರಾಜಕೀಯ ಜೀವನವನ್ನೇ ಬದಲಿಸಿದ ಅಸಾಮಾನ್ಯವಾದ ಗೆಲುವದು. ಆ ಗೆಲವು ಅವರ ಮುಂದಿನ ರಾಜಕೀಯ ಜೀವನಕ್ಕೆ ನಾಂದಿಯಾಯಿತು. ರಾಜಕೀಯ ಅಜಾತಶತೃ ಮಾದೇಗೌಡರ ಮುಂದಿನ ಮೂರು ದಶಕಗಳ ಕಾಲದ ಬದುಕು ಗೆಲುವಿನಿಂದ ಕೂಡಿದ ಜೀವನ.

ಸಣ್ಣ ವಯಸ್ಸಿಗೆ ಶಾಸಕರಾಗಿ ಆಯ್ಕೆ!

ಸಣ್ಣ ವಯಸ್ಸಿಗೆ ಶಾಸಕರಾಗಿ ಆಯ್ಕೆ!

ಡಾ. ಜಿ. ಮಾದೇಗೌಡ ಅವರು 1962ರಿಂದ ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಿರುಗಾವಲು ಕ್ಷೇತ್ರ ಮಳವಳ್ಳಿ ಕ್ಷೇತ್ರದೊಂದಿಗೆ ಸೇರಿಕೊಂಡ ನಂತರ ಮಂಡ್ಯಕ್ಕೆ ಬಂದರು. 1989, 1995ರಲ್ಲಿ 2 ಬಾರಿ ಲೋಕಸಭಾ ಸದಸ್ಯರಾಗಿದ್ದರು. 1980-83ರವರೆಗೆ ದಿ. ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾಗಿದ್ದರು.

1962ರಲ್ಲಿ ವಿಧಾನಸಭಾ ಚುನಾವಣೆ ಎದುರಾದಾಗ ಆಗ ಮಳವಳ್ಳಿ ಕ್ಷೇತ್ರದ ಶಾಸಕರಾಗಿದ್ದ ಹಿಟ್ಟನಹಳ್ಳಿ ಕೊಪ್ಪಲಿನ ಎಚ್.ವಿ. ವೀರೇಗೌಡರು ತಮ್ಮ ಸ್ಥಾನ ಬಿಟ್ಟುಕೊಟ್ಟರು. ಅದೇ ಸ್ಥಾನಕ್ಕೆ ಮಾದೇಗೌಡ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆಗ ಮಾದೇಗೌಡರಿಗೆ ಕೇವಲ 32 ವರ್ಷ.

ಮಳವಳ್ಳಿ, ಕಿರುಗಾವಲು ಕ್ಷೇತ್ರದ ಕೇಂದ್ರವಾದ ಕುಗ್ರಾಮ ಕಾಳಮುದ್ದನದೊಡ್ಡಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ಒಂದೊಂದೇ ಜನಪರ ಕೆಲಸಗಳನ್ನು ಮಾಡ ತೊಡಗಿದರು. ಕೃಷಿ ಕ್ಷೇತ್ರ, ಆರ್ಥಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರಗಳ ಬಗ್ಗೆ ಗೌಡರು ಕೈಗೊಂಡ ಪ್ರಗತಿಪರ ಕೆಲಸಗಳು ಜನಮೆಚ್ಚುಗೆ ಗಳಿಸಿದ್ದವು. ಇದಕ್ಕೆ ಅವರು ಮತ್ತೆ ಮತ್ತೆ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿದ್ದುದು ಅದಕ್ಕೆ ಸಾಕ್ಷಿ.

ಸತತ 6 ಬಾರಿ ಶಾಸಕರಾಗಿ ಆಯ್ಕೆ

ಸತತ 6 ಬಾರಿ ಶಾಸಕರಾಗಿ ಆಯ್ಕೆ

ಚುನಾವಣಾ ಸಮಯದಲ್ಲಿ ಜನರೇ ಚುನಾವಣಾ ಖರ್ಚಿಗೆ ಹಣಕೊಟ್ಟು ಮತಗಳನ್ನು ಕೊಡುತ್ತಿದ್ದರು. ಹೀಗಾಗಿ 1962 ರಿಂದ 1989ರ ವರೆಗೆ ಮಾದೇಗೌಡರು ಸತತವಾಗಿ 6 ಬಾರಿ ಕಿರುಗಾವಲು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇದು ಯಾವುದೇ ರಾಜಕಾರಣಿಗಳ ಬದುಕಿನಲ್ಲಿ ಮಹತ್ವದ ದಾಖಲೆಯೂ ಹೌದು. ಜನ ಅವರನ್ನು ಸೋಲಿಲ್ಲದ ಸರದಾರ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಆರ್. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾದೇಗೌಡರು ಅರಣ್ಯ ಮತ್ತು ಗಣಿ ಅಭಿವೃದ್ಧಿ ಮಂತ್ರಿಗಳಾಗಿ ಗಮನಾರ್ಹ ಸೇವೆ ಸಲ್ಲಿಸಿದರು.

1989ರಲ್ಲಿ ಗೌಡರ ರಾಜಕೀಯ ಕಿರುಗಾವಲು ಕ್ಷೇತ್ರದಿಂದ ಮಂಡ್ಯ ಜಿಲ್ಲೆಗೆ ವಿಸ್ತರಿಸಿ ಸಂಸದರಾಗಿ ಆಯ್ಕೆಯಾದರು. ಮತ್ತೆ 1991ರಲ್ಲಿ ನಡೆದ ಮರು ಚುನಾವಣೆಯಲ್ಲೂ ಜನತೆ ಗೌಡರನ್ನು ಸಂಸದರಾಗಿ ಆಯ್ಕೆ ಮಾಡಿದರು. ಹೀಗೆ ಮೂರು ದಶಕಗಳ ಕಾಲ ಜನ ಗೌಡರಿಗೆ ಮತ ನೀಡಿ ಗೆಲ್ಲಿಸಿದರು. ಪ್ರತಿಯಾಗಿ ಮಾದೇಗೌಡರು ತಮ್ಮ ಕ್ಷೇತ್ರದ ಜಿಲ್ಲೆಯ ಜನತೆಗೆ ಶಾಲೆ, ಕಾಲೇಜು, ಕಾರ್ಖಾನೆ, ಆಸ್ಪತ್ರೆ, ದೇವಸ್ಥಾನ ಹೀಗೆ ಜನರ ಇಹ ಮತ್ತು ಪರಕ್ಕೆ ಬೇಕಾದುದನ್ನೆಲ್ಲ ಕೊಟ್ಟು ಜನರ ಋಣ ತೀರಿಸಿದ್ದಾರೆ.

ಪ್ರೌಢಶಾಲೆಯೂ ಇರದಿದ್ದ ಊರಿಗೆ ಈಗ...

ಪ್ರೌಢಶಾಲೆಯೂ ಇರದಿದ್ದ ಊರಿಗೆ ಈಗ...

1962 ರಲ್ಲಿ ಕೆ.ಎಂ. ದೊಡ್ಡಿಯಲ್ಲಿ ಕಾಲೇಜಿರಲಿ ಒಂದು ಪ್ರೌಢಶಾಲೆಯೂ ಇರಲಿಲ್ಲ. ಬೃಹತ್ ಕಾರ್ಖಾನೆಯ ಮಾತಿರಲಿ, ಒಂದು ಒಳ್ಳೆಯ ರಸ್ತೆಯೂ ಇರಲಿಲ್ಲ. ಮಾದೇಗೌಡರ ಸತತ ಪ್ರಯತ್ನಗಳಿಂದ ಈಗ ಶ್ರೀ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ, ಭಾರತೀ ವಿದ್ಯಾ ಸಂಸ್ಥೆ, ನಾಲ್ಕು ಬ್ಯಾಂಕ್‌ಗಳು, ವಿಶಾಲವಾದ ರಸ್ತೆಗಳು, ಸುತ್ತಮುತ್ತಲಿನ ಹಳ್ಳಿಗಳಿಗೆ ಸಂಪರ್ಕ ರಸ್ತೆಗಳ ನಿರ್ಮಾಣವಾಗಿವೆ. ಹಳ್ಳಗಳಿಗೆ ಈಗ ಸೇತುವೆಗಳನ್ನು ಕಟ್ಟಲಾಗಿದೆ. ಜೊತೆಗೆ ಸಾಹಿತ್ಯ ಸೇವೆಯನ್ನೂ ಮಾದೇಗೌಡರು ಮಾಡಿದ್ದಾರೆ

ಜಿ. ಮಾದೇಗೌಡರು 1993 ರಲ್ಲಿ ಸಂಸದರಾಗಿದ್ದರು. ಪ್ರೊ. ಜಿ.ಟಿ. ವೀರಪ್ಪ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾಗ ಮಂಡ್ಯದಲ್ಲಿ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಸಾಹಿತಿ ಚದುರಂಗ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹೀಗಾಗಿ ಸಾಮಾಜಿಕ-ರಾಜಕೀಯ ಕ್ಷೇತ್ರಗಳೊಂದಿಗೆ ಸಾಹಿತ್ಯ ಕ್ಷೇತ್ರಕ್ಕೂ ಅವರ ಸೇವೆ ಅನನ್ಯ.

55 ದಿನಗಳ ಅಹಿಂಸಾತ್ಮಕ 'ಕಾವೇರಿ' ಹೋರಾಟ

55 ದಿನಗಳ ಅಹಿಂಸಾತ್ಮಕ 'ಕಾವೇರಿ' ಹೋರಾಟ

ಕಾವೇರಿ ನದಿ ದಕ್ಷಿಣ ಕರ್ನಾಟಕ ಅದರಲ್ಲೂ ಮಂಡ್ಯ ಜಿಲ್ಲೆಯ ಉಸಿರು. ಜಿಲ್ಲೆಯ ಬಹುಭಾಗ ಹಸಿರಾಗಿರುವುದೇ ಕಾವೇರಿ ನದಿ ನೀರಿನಿಂದ. ಆದರೆ, ಸುಪ್ರೀಂಕೋರ್ಟ್‌ನ ತೀರ್ಮಾನದಿಂದ ಕಾವೇರಿ ನೀರು ಮಂಡ್ಯ ಜನತೆಗೆ ತಪ್ಪಿ ಹೋಗುವ ಸಾಧ್ಯತೆಯ ಸುಳಿವು ಸಿಕ್ಕಿತ್ತು. ಆಗ ಕಾವೇರಿ ನೀರಿನ ಹಕ್ಕಿಗಾಗಿ ಮಂಡ್ಯ ಜಿಲ್ಲೆಯ ರೈತರು ಬೀದಿಗೆ ಬಂದರು.

ಹೀಗೆ ಹೋರಾಟ ಆರಂಭಿಸಿದ ರೈತರು ತಮ್ಮ ಹೋರಾಟಕ್ಕೆ ಅವರು ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಜಿ. ಮಾದೇಗೌಡ ಅವರನ್ನು. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಮಾದೇಗೌಡರು, ಕಾವೇರಿ ಹೋರಾಟಕ್ಕೆ ಜನಗಳನ್ನು ಸಜ್ಜುಗೊಳಿಸುವ, ಸರ್ವ ಪಕ್ಷಗಳ ನಾಯಕರನ್ನು ಕಾವೇರಿ ಹೋರಾಟಕ್ಕೆ ಒಂದುಗೂಡಿಸುವ ಕೆಲಸವನ್ನು ಮಾಡಿದರು. ಹೀಗಾಗಿ ಅವರ ಮಾರ್ಗದರ್ಶನದಲ್ಲಿ 55 ದಿನಗಳ ಕಾಲ ರೈತರು ಪ್ರಚಂಡ ಅಹಿಂಸಾತ್ಮಕ ಪ್ರತಿಭಟನೆಯನ್ನು ಮಾಡಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

ಎಸ್‌.ಎಂ. ಕೃಷ್ಣ ಪಾದಯಾತ್ರೆ!

ಎಸ್‌.ಎಂ. ಕೃಷ್ಣ ಪಾದಯಾತ್ರೆ!

ಡಾ. ಜಿ. ಮಾದೇಗೌಡ ಅವರ ನೇತೃತ್ವದಲ್ಲಿ ಜಿಲ್ಲೆಯ ರೈತರು ಸ್ವಯಂ ಸ್ಫೂರ್ತಿಯಿಂದ ಬೀದಿಗಿಳಿದು ಹೋರಾಟ ಆರಂಭಿಸಿದರು. ಆದಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದರು. ಮಾದೇಗೌಡರ ಹೋರಾಟದಿಂದ ರಾಜ್ಯ ಸರ್ಕಾರ ಅಧಿರಗೊಂಡಿತು. ಸುಪ್ರೀಂಕೋರ್ಟ್ ಕೊಟ್ಟಿದ್ದ ತೀರ್ಪು ಒಂದೆಡೆ, ಉಗ್ರತೆ ಪಡೆದುಕೊಂಡಿದ್ದ ರೈತರ ಹೋರಾಟ ಮತ್ತೊಂದೆಡೆ. ಜೊತೆಗೆ ಮಾದೇಗೌಗೌಡರು ರೈತರ ಹಿತರಕ್ಷಣೆಗೆ ತಮ್ಮ ಪಕ್ಷದ ಮುಖಂಡರನ್ನೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಹೀಗಾಗಿ ಆಗ ಮುಖ್ಯಮಂತ್ರಿಗಳಾಗಿದ್ದ ಎಸ್. ಎಂ. ಕೃಷ್ಣ ಅವರು ಪಾದಯಾತ್ರೆಯಲ್ಲಿ ಮಂಡ್ಯಕ್ಕೆ ಬಂದು ತಮಿಳುನಾಡಿಗೆ ನೀರು ಬಿಡುವುದಿಲ್ಲವೆಂದು ಭರವಸೆ ಕೊಟ್ಟರು. ಆದರೆ, ಮರುದಿನ ರಾತ್ರಿಯೇ ನೀರು ಬಿಟ್ಟಿದ್ದ ಆರೋಪ ಎದುರಾಗಿತ್ತು. ಈಗಾಗಿ ರೈತರೊಂದಿಗೆ ಮಾದೇಗೌಡ ಅವರು ಆಮರಣಾಂತ ಉಪವಾಸ ಆರಂಭಿಸಿದ್ದರು. "ಮಂಡ್ಯ ರೈತರು ಇಲಿ ಮರಿಗಳಲ್ಲ, ಅವರು ಸಿಂಹದ ಮರಿಗಳು, ರೈತ ವಿರೋಧಿ ಸರ್ಕಾರವನ್ನು ಮಟ್ಟ ಹಾಕುತ್ತಾರೆ" ಎಂದು ಮಾದೇಗೌಡರು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಮತ್ತೊಮ್ಮೆ ಗುಡುಗಿದ್ದರು.

ಆಗ ಬಂಧನಕ್ಕೊಳಗಾದ ಅವರನ್ನು ಜಾಮೀನಿನ ಮೇಲೆ ಬಿಡಿಸಲು ಮಂಡ್ಯದ ವಕೀಲರು ಮುಂದಾದಾಗ, "ನಾನು ರೈತರ ಜೊತೆ ಜೈಲಿನಲ್ಲೇ ಇರುತ್ತೇನೆ. ಜಾಮೀನು ಬೇಡ" ಎಂದು ನಿರಾಕರಿಸಿದ್ದರು. ಹೀಗೆ ಜಿ. ಮಾದೇಗೌಡ ಅವರು, ತಮ್ಮ ಜೀವಿತದ ಕೊನೆಯವರೆಗೂ ರೈತರು-ನೀರಿಗಾಗಿ ಹೋರಾಟ ಮಾಡುತ್ತಲೇ ಇದ್ದರು. ಅಂತಹ ಹೋರಾಟ ಕೊಂಡಿ ಈಗ ಕಳಚಿದಂತಾದಾಗಿದೆ.

ಮೈಸೂರು ವಿವಿಯ ಗೌರವ ಡಾಕ್ಟರೇಟ್

ಮೈಸೂರು ವಿವಿಯ ಗೌರವ ಡಾಕ್ಟರೇಟ್

ಮಾಜಿ ಸಂಸದ, ಮಾಜಿ ಸಚಿವ ಜಿ. ಮಾದೇಗೌಡ ಅವರು ಕೆ.ವಿ. ಶಂಕರಗೌಡರ ನಂತರ ಮಂಡ್ಯ ಜಿಲ್ಲೆಯನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದರು. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ಮಹಾನುಭಾವರಲ್ಲಿ ಮಾದೇಗೌಡರದ್ದು ಎದ್ದು ಕಾಣುವ ವ್ಯಕ್ತಿತ್ವ. ಜಿ. ಮಾದೇಗೌಡ ಅವರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಆರೋಗ್ಯ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸಾಧನೆಗಾಗಿ ಮೈಸೂರು ವಿಶ್ವವಿದ್ಯಾನಿಲಯವು 2012ರ ಜನವರಿಯಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

English summary
Cauvery fighter G Madegowda biography, family and timeline of his life events, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X