• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಿಂಗಾಯತ ಸಮುದಾಯದ ಭವಿಷ್ಯದ ನಾಯಕ ಬಿವೈ ವಿಜಯೇಂದ್ರ?

By ಆರ್ ಟಿ ವಿಠ್ಠಲಮೂರ್ತಿ
|

ತಮ್ಮ ಸರ್ಕಾರವನ್ನು ಅಸ್ತಿರಗೊಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತವರ ಮಗ ವಿಜಯೇಂದ್ರ ಐಟಿ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಡಿದ ಆರೋಪ, ಹೊಸ ಲಿಂಗಾಯತ ನಾಯಕನ ಸೃಷ್ಟಿಗೆ ವೇದಿಕೆ ಅಣಿಯಾಗುತ್ತಿದೆ ಎಂಬ ಸಂದೇಶವನ್ನು ರವಾನಿಸಿದೆ.

ಅಂದ ಹಾಗೆ ಕೇಂದ್ರ ಸರ್ಕಾರ ತನ್ನ ಸ್ವಾಮ್ಯದಲ್ಲಿರುವ ಸಿಬಿಐ, ಐಟಿ, ಇಡಿಯಂತಹ ಸಂಸ್ಥೆಗಳನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಇಂದು ನಿನ್ನೆಯದೇನಲ್ಲ. ಹಿಂದೆ ಯುಪಿಎ ಮೈತ್ರಿಕೂಟ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಇದೇ ಬಿಜೆಪಿ ನಾಯಕರು ಸಿಬಿಐ ಎಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂದು ದೂರುತ್ತಿದ್ದರು.

ವಿಜಯೇಂದ್ರ ಸ್ಪರ್ಧೆ : 'ಐತಿಹಾಸಿಕ' ನಿರ್ಧಾರ ಪ್ರಕಟಿಸಿದ ಪ್ರಕಾಶ್ ಜಾವಡೇಕರ್!

ಈಗ ಆ ರೀತಿ ದೂರುವ ಸರದಿ ಬಿಜೆಪಿ ವಿರೋಧಿ ಪಕ್ಷಗಳದು. ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ, ಈ ಅರೋಪ ಮಾಡುವಾಗ ನನಗೆ ನಿರ್ದಿಷ್ಟ ಮಾಹಿತಿ ಇಲ್ಲದೆ ನಾನು ಆರೋಪ ಮಾಡುವುದಿಲ್ಲ ಎನ್ನುತ್ತಿರುವುದನ್ನು ಸುಲಭವಾಗಿ ನಿರಾಕರಿಸಲಾಗದು.

ಮುಖ್ಯಮಂತ್ರಿ ಕುಮಾರಸ್ವಾಮಿ ಇವತ್ತೇನು ಆರೋಪ ಮಾಡುತ್ತಿದ್ದಾರೋ? ಅದೇ ರೀತಿ ಈ ಹಿಂದೆ ಅಸ್ತಿತ್ವದಲ್ಲಿದ್ದ ಸಿದ್ದರಾಮಯ್ಯ ಸರ್ಕಾರದ ಪ್ರಮುಖರು ಕೂಡಾ ಆರೋಪ ಮಾಡುತ್ತಿದ್ದರು. ಹೀಗಾಗಿ ಇಂತಹ ಆರೋಪ-ಪ್ರತ್ಯಾರೋಪಗಳ ವಿಷಯ ಮುಂದೆಯೂ ನಡೆಯುವಂತದ್ದೇ.

ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಿರುವುದೆಂದರೆ ಯಡಿಯೂರಪ್ಪ ಅವರ ಉತ್ತರಾಧಿಕಾರಿ ಯಾರು? ಅನ್ನುವ ಪ್ರಶ್ನೆಗೆ ಕುಮಾರಸ್ವಾಮಿ ಉತ್ತರ ನೀಡಿರುವುದು ಮತ್ತು ಲಿಂಗಾಯತ ನಾಯಕತ್ವ ಎಂಬ ಕಿರೀಟಕ್ಕಾಗಿ ವಿಜಯೇಂದ್ರ ಮೇಲೆದ್ದು ನಿಂತು ತಲೆ ಒಡ್ಡಿದ್ದಾರೆ ಎಂಬುದು.

ಸರ್ಕಾರ ಬೀಳಿಸಲು ಬಿಎಸ್‌ವೈ ಭಾರಿ ತಂತ್ರ: ಎಚ್‌ಡಿಕೆಗೆ ಸಿಕ್ಕಿದೆ ಮಾಹಿತಿ

ಕೆಲ ಕಾಲದ ಹಿಂದೆ ಯಡಿಯೂರಪ್ಪ ಅವರ ರಾಜಕೀಯ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆ ಬಂದಾಗ ಬಿಜೆಪಿಯಲ್ಲೇ ಗೊಂದಲದ ಮಾತುಗಳು ಏಳುತ್ತಿದ್ದವು. ಮತ್ತು ಇಂತಹ ಗೊಂದಲಗಳು ಯಡಿಯೂರಪ್ಪ ಅವರನ್ನು ಪದೇ ಪದೇ ದುರ್ಬಲಗೊಳ್ಳುವಂತೆ ಮಾಡುತ್ತಿದ್ದವು.

ಭವಿಷ್ಯದ ಲಿಂಗಾಯತ ನಾಯಕರಾಗಿ ವಿಜಯೇಂದ್ರ

ಭವಿಷ್ಯದ ಲಿಂಗಾಯತ ನಾಯಕರಾಗಿ ವಿಜಯೇಂದ್ರ

ಆದರೆ ಕಳೆದ ಚುನಾವಣೆಯ ಸಂದರ್ಭದಿಂದ ಇಂತಹ ಪ್ರಶ್ನೆಗಳ ಸದ್ದು ಕಡಿಮೆಯಾಗಿದೆ. ಯಾಕೆಂದರೆ ನೋಡ ನೋಡುತ್ತಿದ್ದಂತೆಯೇ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರು ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅಣಿಯಾದರು. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಅವರ ವಿರುದ್ದ ಹೋರಾಡಲು ಅವರು ಸಜ್ಜಾದಾಗ ರಾಜಕೀಯ ವಲಯಗಳು ಅಚ್ಚರಿಯಿಂದ ನೋಡಿದ್ದವು.

ಗಮನಿಸಬೇಕಾದ ಸಂಗತಿ ಎಂದರೆ, ಲಿಂಗಾಯತ ಸಮುದಾಯದ ಬಹುತೇಕರು ವಿಜಯೇಂದ್ರ ಅವರ ಸ್ಪರ್ಧೆಯನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ತಮ್ಮ ಸಮುದಾಯಕ್ಕೆ ವಿಜಯೇಂದ್ರ ಅವರಂತಹ ನಾಯಕ ಬೇಕು ಅನ್ನತೊಡಗಿದರು.

ಅದರೆ ವಿಜಯೇಂದ್ರ ಏಕಾಏಕಿಯಾಗಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿದರು. ಹೀಗವರು ಹಿಂದಕ್ಕೆ ಸರಿಯಲು ಬಿಜೆಪಿಯ ಕೇಂದ್ರ ನಾಯಕರೇ ಕಾರಣ ಎಂಬ ಮಾತುಗಳು ಕೇಳಿ ಬಂದವಾದರೂ, ವಾಸ್ತವವಾಗಿ ವಿಜಯೇಂದ್ರ ಸ್ಪರ್ಧಿಸದಂತೆ ನೋಡಿಕೊಂಡಿದ್ದು ಎರಡು ಸಮುದಾಯಗಳ ಪ್ರಮುಖ ಮಠಾಧಿಪತಿಗಳು. ಅವರು ಯಾವ ಕಾರಣಕ್ಕಾಗಿ ಈ ಕೆಲಸ ಮಾಡಿದರು? ಎಂಬುದು ಕೂಡಾ ಒಂದು ಇಂಟರೆಸ್ಟಿಂಗ್ ಬೆಳವಣಿಗೆ. ಆದರೆ ಒಂದಂತೂ ಸ್ಪಷ್ಟ. ಅದೆಂದರೆ, ಈ ಬೆಳವಣಿಗೆಯ ನಂತರ ವಿಜಯೇಂದ್ರ ಭವಿಷ್ಯದ ಲಿಂಗಾಯತ ನಾಯಕರಾಗಿ ಚಿಗುರುತ್ತಿದ್ದಾರೆ.

ರಾಮಕೃಷ್ಣ ಹೆಗಡೆ ವರ್ಸಸ್ ವೀರೇಂದ್ರ ಪಾಟೀಲ

ರಾಮಕೃಷ್ಣ ಹೆಗಡೆ ವರ್ಸಸ್ ವೀರೇಂದ್ರ ಪಾಟೀಲ

ಹಾಗೆ ನೋಡಿದರೆ ಕರ್ನಾಟಕದಲ್ಲಿ ಮೊದಲು ಲಿಂಗಾಯತ ನಾಯಕತ್ವದ ಕಿರೀಟ ಹೊತ್ತವರು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ. ತದ ನಂತರದ ದಿನಗಳಲ್ಲಿ ಈ ಕಿರೀಟ ಕಾಲಾನುಕಾಲಕ್ಕೆ ಅವರ ಶಿಷ್ಯರಾದ, ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಹಾಗೂ ವೀರೇಂದ್ರ ಪಾಟೀಲ ಅವರ ನೆತ್ತಿಯ ಮೇಲೆ ಕೂರುತ್ತಿತ್ತು.

ರಾಮಕೃಷ್ಣ ಹೆಗಡೆ ಬ್ರಾಹ್ಮಣ ಸಮುದಾಯದವರಾದರೂ ನಿಜಲಿಂಗಪ್ಪ ಅವರ ಶಿಷ್ಯರಾದುದರಿಂದ ಅವರು ಲಿಂಗಾಯತ ಸಮುದಾಯದ ಅಪ್ಯಾಯಮಾನ ನಾಯಕರಾಗಿ ಬೆಳೆದಿದ್ದು ಅಸಹಜವೇನಲ್ಲ. ಒಂದು ವೇಳೆ ಜನತಾ ಪರಿವಾರದಲ್ಲಿ ಒಡಕು ಕಾಣಿಸಿಕೊಳ್ಳದೆ ಹೋಗಿದ್ದರೆ ಹೆಗಡೆ ಬಿಜೆಪಿಯ ಜತೆ ಕೈ ಜೋಡಿಸುವ ಪರಿಸ್ಥಿತಿ ಬರುತ್ತಿರಲಿಲ್ಲ.

ಹಾಗೆಯೇ ಯಡಿಯೂರಪ್ಪ ಕೂಡಾ ಲಿಂಗಾಯತ ನಾಯಕರಾಗಿ ಎಮರ್ಜ್ ಆಗುವ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ. ಆದರೆ ದೇವೇಗೌಡರು ಪ್ರಧಾನಿಯಾದ ನಂತರ ಹೆಗಡೆ ಅವರು ಪದೇ ಪದೇ ಮಾಡಿದ ಟೀಕೆ, ದೇವೇಗೌಡರಿಗೆ ದೇಶವಾಳಲು ಅಗತ್ಯವಾದ ಶಕ್ತಿ ಇಲ್ಲ ಎಂಬಂತಹ ವ್ಯಾಖ್ಯೆಗಳು ಸಹಜವಾಗಿಯೇ ಗೌಡರನ್ನು ಕೆರಳಿಸಿದವು.

ಕೆಟ್ಟತನ ಹಾಗೂ ಒಳ್ಳೆಯತನದ ನಡುವೆ ವಿವೇಕ ಎಂಬ ಶ್ರೀಕೃಷ್ಣ!

ಹೆಗಡೆ ಬೀಳಿಗೆ ಕಾರಣರಾದವರು ಪಟೇಲ

ಹೆಗಡೆ ಬೀಳಿಗೆ ಕಾರಣರಾದವರು ಪಟೇಲ

ಮುಂದೆ ಇದನ್ನೇ ಮುಖ್ಯವಾಗಿಟ್ಟುಕೊಂಡು ರಾಮಕೃಷ್ಣ ಹೆಗಡೆ ಅವರನ್ನು ಜನತಾದಳದಿಂದ ಉಚ್ಚಾಟಿಸುವ ಕೆಲಸ ನಡೆಯಿತು. ಯಾವಾಗ ಈ ಕೆಲಸವಾಯಿತೋ? ಇದಾದ ನಂತರ ರಾಮಕೃಷ್ಣ ಹೆಗಡೆ ಅವರು ನವ ನಿರ್ಮಾಣ ವೇದಿಕೆ ಕಟ್ಟಿದರು. ಆನಂತರದ ದಿನಗಳಲ್ಲಿ ಲೋಕಶಕ್ತಿ ಪಕ್ಷವನ್ನು ಕಟ್ಟಿ 1998ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜತೆ ಕೈ ಜೋಡಿಸಿದರು.

ಪರಿಣಾಮವಾಗಿ ಆ ಸಂದರ್ಭದಲ್ಲಿ ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-ಲೋಕಶಕ್ತಿ ಮೈತ್ರಿಕೂಟ ಹದಿನಾರು ಸ್ಥಾನಗಳನ್ನು ಗೆದ್ದುಕೊಂಡಿತು. ಹೆಗಡೆ ಅವರು ವಾಜಪೇಯಿ ನೇತೃತ್ವದ ಎನ್.ಡಿ.ಎ ಸರ್ಕಾರದಲ್ಲಿ ಮಂತ್ರಿಯೂ ಆದರು.

ಮುಂದೆ 1999ರ ವೇಳೆಗೆ ಲೋಕಶಕ್ತಿ ಸಂಯುಕ್ತ ಜನತಾದಳದಲ್ಲಿ ಲೀನವಾಯಿತು. ಆ ಚುನಾವಣೆಯ ನಂತರ ರಾಮಕೃಷ್ಣ ಹೆಗಡೆ ಕೇಂದ್ರ ಮಂತ್ರಿಯಾಗಲಿಲ್ಲ. ಅದಕ್ಕೆ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರು ಕಾರಣ ಎಂಬುದು ತುಂಬ ಜನರಿಗೆ ಗೊತ್ತಿಲ್ಲ.

ಫರ್ನಾಂಡಿಸ್ ಕಿವಿಯೂದಿದ್ದ ಪಟೇಲರು

ಫರ್ನಾಂಡಿಸ್ ಕಿವಿಯೂದಿದ್ದ ಪಟೇಲರು

ಜನತಾದಳವನ್ನು ಒಡೆದು ಎರಡು ಹೋಳಾಗುವಂತೆ ಮಾಡಿದ ಹೆಗಡೆ ರಾಜಕೀಯವಾಗಿ ತಮ್ಮನ್ನು ಮುಗಿಸಿದರು ಎಂಬ ಸಿಟ್ಟು ಪಟೇಲರಿಗಿತ್ತು. ಅದೇ ಕಾಲಕ್ಕೆ ಬಿಹಾರದಲ್ಲಿ ಜಾರ್ಜ್ ಫರ್ನಾಂಡೀಸ್ ನೇತೃತ್ವದ ಪಕ್ಷ ಪ್ರಬಲವಾಗಿತ್ತು. ಮತ್ತು ಕೇಂದ್ರ ಮಂತ್ರಿಮಂಡಲದಲ್ಲಿ ತಮ್ಮ ಪಕ್ಷದ ಕೋಟಾ ತುಂಬಿಸುವಾಗ ಕರ್ನಾಟಕದಿಂದ ಯಾರನ್ನು ತೆಗೆದುಕೊಳ್ಳಬೇಕು? ಅಂತ ಇದೇ ಜಾರ್ಜ್ ಫರ್ನಾಂಡೀಸ್ ಅವರು ಪಟೇಲರನ್ನು ಕೇಳಿದರು.

ಆ ಹೊತ್ತಿಗೆ ಸರಿಯಾಗಿ ಪಟೇಲರಿಗೂ ಹೆಗಡೆ ಅವರ ಮೇಲೆ ಸಿಟ್ಟಿತ್ತು. ಹೀಗಾಗಿ, ರೀ ಜಾರ್ಜ್, ಕರ್ನಾಟಕದಿಂದ ಶ್ರೀನಿವಾಸ್ ಪ್ರಸಾದ್ ಅವರನ್ನು ಮಂತ್ರಿ ಮಾಡಿ. ಹೆಗಡೆ ಅವರನ್ನು ಮಂತ್ರಿ ಮಾಡಿಸುವ ಹೊಣೆ ಹೊರಬೇಡಿ ಎಂದು ಬಿಟ್ಟರು. ಅಲ್ಲಿಗೆ ರಾಮಕೃಷ್ಣ ಹೆಗಡೆ ಅವರ ರಾಜಕೀಯ ಭವಿಷ್ಯ ಕುಸಿದು ಹೋಯಿತು.

ಅಷ್ಟೇ ಅಲ್ಲ, ಎರಡು ವರ್ಷಗಳಲ್ಲಿ ಅವರೇ ತೀರಿಕೊಂಡರು. ಅಲ್ಲಿಗೆ ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ ನಿಧನದಿಂದ ತೆರವಾದ ಲಿಂಗಾಯತ ನಾಯಕತ್ವದ ಕಿರೀಟವನ್ನು ಯಾರು ಹೊರಬೇಕು? ಅನ್ನುವ ಪ್ರಶ್ನೆ ಶುರುವಾಯಿತು.

ಸಖತ್ ಎನ್‌ಕ್ಯಾಶ್ ಮಾಡಿಕೊಂಡವರು ಬಿಎಸ್ವೈ

ಸಖತ್ ಎನ್‌ಕ್ಯಾಶ್ ಮಾಡಿಕೊಂಡವರು ಬಿಎಸ್ವೈ

ಇದನ್ನು ಸಖತ್ತಾಗಿ ಎನ್ ಕ್ಯಾಶ್ ಮಾಡಿಕೊಂಡವರು ಯಡಿಯೂರಪ್ಪ. ಬೇಕಿದ್ದರೆ ಗಮನಿಸಿ. 2004ರ ವಿಧಾನಸಭಾ ಚುನಾವಣೆ ನಡೆಯುವವರೆಗೆ ಕರ್ನಾಟಕದ ರಾಜಕಾರಣದಲ್ಲಿ ಯಡಿಯೂರಪ್ಪ ಎಂದರೆ ರೈತ ನಾಯಕ ಎಂಬ ಮಾತೇ ಗಟ್ಟಿಯಾಗಿ ಕೇಳುತ್ತಿತ್ತು.

ಆದರೆ 2004ರ ವಿಧಾನಸಭಾ ಚುನಾವಣೆಯ ನಂತರ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಕೊಡಲೂ ಅನಂತಕುಮಾರ್ ಅಡ್ಡಿ ಮಾಡಿದಾಗ ಸಿಟ್ಟಿಗೆದ್ದ ಯಡಿಯೂರಪ್ಪ ತಮ್ಮ ಹುಟ್ಟುಹಬ್ಬದ ಹೆಸರಿನಲ್ಲಿ ಬೆಂಗಳೂರಿನ ಜಕ್ಕರಾಯನ ಕೆರೆ ಮೈದಾನದಲ್ಲಿ ದೊಡ್ಡ ಸಮಾರಂಭ ಮಾಡಿದರು.

ಆ ಸಮಾರಂಭದಲ್ಲಿ ಭಾಗವಹಿಸಿದ ಪ್ರಮುಖ ಲಿಂಗಾಯತ ಮಠಾಧಿಪತಿಗಳು, ತಮ್ಮ ಸಮುದಾಯಕ್ಕೆ ಅನ್ಯಾಯವಾದರೆ ಯಾವ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂಬ ಸಂದೇಶ ಬಿಜೆಪಿ ಹೈಕಮಾಂಡ್ ಗೆ ರವಾನೆಯಾಗುವಂತೆ ಮಾಡಿದರು. ಪರಿಣಾಮವಾಗಿ ಯಡಿಯೂರಪ್ಪ ಇಲ್ಲಿಗೆ, ಅನಂತಕುಮಾರ್ ದಿಲ್ಲಿಗೆ ಎಂಬ ಸೂತ್ರ ಕಮಲ ಪಾಳೆಯದ ವರಿಷ್ಠರಿಂದ ರೂಪುಗೊಂಡಿತು.

'ಶ್ರಾವಣ ಮಾಸದ ಕಡೆ ಸೋಮವಾರ ಯಡಿಯೂರಪ್ಪ ಪ್ರಮಾಣ ವಚನ'

ಯುದ್ಧದಲ್ಲಿ ಗೆದ್ದವರು ಒನ್ಸ್ ಅಗೇನ್ ಯಡಿಯೂರಪ್ಪ

ಯುದ್ಧದಲ್ಲಿ ಗೆದ್ದವರು ಒನ್ಸ್ ಅಗೇನ್ ಯಡಿಯೂರಪ್ಪ

ಇದಾದ ನಂತರ ಲಿಂಗಾಯತ ನಾಯಕತ್ವದ ವಿಷಯದಲ್ಲಿ ಯಡಿಯೂರಪ್ಪ ನಡೆದಿದ್ದೇ ಹಾದಿ ಎನ್ನುವಂತಾಯಿತು. ಮುಂದೆ ಇದಕ್ಕೆ ಕೊಂಚ ಮಟ್ಟಿನ ಘಾಸಿ ಕೊಡಲು ಹೊರಟವರು ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನೀರಾವರಿ ಮಂತ್ರಿಯಾಗಿದ್ದ ಎಂ.ಬಿ.ಪಾಟೀಲರು.

ಮುಂದಿನ ದಿನಗಳಲ್ಲಿ ತಾವು ಮುಖ್ಯಮಂತ್ರಿ ಹುದ್ದೆಗೇರಬೇಕೆಂದರೆ ಸಮುದಾಯದ ನಾಯಕರಾಗಿ ಬೆಳೆಯಲೇಬೇಕು ಎಂದು ಎಂ.ಬಿ.ಪಾಟೀಲರು ಹೊರಟರು. ಉತ್ತರ ಕರ್ನಾಟಕದಾದ್ಯಂತ ಹಗಲು ರಾತ್ರಿ ಅಸಂಖ್ಯ ಸಮಾವೇಶಗಳನ್ನು ಮಾಡಿದರು. ಭಾರೀ ಜನಮನ್ನಣೆಯನ್ನೂ ಗಳಿಸಿದರು. ಆದರೆ ದುರಾದೃಷ್ಟವಶಾತ್ ಎಂಬಿ ಪಾಟೀಲ ಅವರ ಪ್ರಯತ್ನ ಯಶಸ್ವಿಯಾಗಲಿಲ್ಲ.

ಬದಲಿಗೆ ಯಡಿಯೂರಪ್ಪ ಅವರೇ ಪ್ರಬಲ ಲಿಂಗಾಯತ ನಾಯಕ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಉತ್ತರ ಕರ್ನಾಟಕ ಮತ್ತು ಕೇಂದ್ರ ಕರ್ನಾಟಕದಲ್ಲಿ ಲಿಂಗಾಯತರು ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿಗೇ ಮತ ಹಾಕಿದರು. ಪಾಟೀಲರನ್ನು ಹೊರತುಪಡಿಸಿದರೆ, ಅವರು ಆರಂಭಿಸಿದ್ದ ಲಿಂಗಾಯತ ಚಳವಳಿಯಲ್ಲಿ ಭಾಗವಹಿಸಿದ ಎಲ್ಲ ನಾಯಕರೂ ಮಣ್ಣುಮುಕ್ಕಿದರು.

ಅತಂತ್ರ ವಿಧಾನಸಭೆ: ಕಾಂಗ್ರೆಸ್‌ಗೆ ಮುಳುವಾದ ಅಂಶಗಳೇನು?

ಪ್ರಬಲವಾಗಿ ಬೆಳೆಯುತ್ತಿರುವ ವಿಜಯೇಂದ್ರ

ಪ್ರಬಲವಾಗಿ ಬೆಳೆಯುತ್ತಿರುವ ವಿಜಯೇಂದ್ರ

ಆದರೆ ಇದು ಇವತ್ತಿನ ಸ್ಥಿತಿ. ಆದರೆ ಮುಂದಿನ ದಿನಗಳಲ್ಲಿ? ಹಾಗೆಂಬ ಪ್ರಶ್ನೆ ಬಂದಾಗ ಸಹಜವಾಗಿಯೇ ಲಿಂಗಾಯತ ಸಮುದಾಯ ತನ್ನ ಭವಿಷ್ಯದ ನಾಯಕ ಯಾರು? ಎಂಬ ಹುಡುಕಾಟದಲ್ಲಿತ್ತು. ಇದಕ್ಕೆ ಪೂರಕವಾಗಿ ಹಲವರು ದಿಲ್ಲಿಗೆ ಹೋಗಿ ಅನಂತಕುಮಾರ್ ಅವರಿಗೆ ದುಂಬಾಲು ಬೀಳುತ್ತಿದ್ದರು.

ರಾಮಕೃಷ್ಣ ಹೆಗಡೆ ಅವರ ನಂತರ ಯಾವ ಬ್ರಾಹ್ಮಣ ನಾಯಕರೂ ಲಿಂಗಾಯತ ಸಮುದಾಯದ ಶಕ್ತಿ ಕೇಂದ್ರದಂತಾಗಲಿಲ್ಲ. ನಿಮಗೆ ಆ ಶಕ್ತಿಯಿದೆ ಬನ್ನಿ ಎಂದು ಪದೇ ಪದೇ ಹೇಳತೊಡಗಿದರು. ಯಾವಾಗ ಇದು ಗೊತ್ತಾಯಿತೋ? ಆನಂತರದ ದಿನಗಳಲ್ಲಿ ಯಡಿಯೂರಪ್ಪ ತಮ್ಮ ಉತ್ತರಾಧಿಕಾರಿಯ ಪಟ್ಟಕ್ಕೆ ವಿಜಯೇಂದ್ರ ಅವರನ್ನು ತಂದಿದ್ದಾರೆ.

ನೋಡ ನೋಡುತ್ತಿದ್ದಂತೆಯೇ ಅವರು ಲಿಂಗಾಯತ ಸಮುದಾಯದ ಕಣ್ಮಣಿಯಾಗುತ್ತಿರುವುದೂ ನಿಜ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ತಮ್ಮ ಸರ್ಕಾರವನ್ನು ದುರ್ಬಲಗೊಳಿಸಲು ಯಡಿಯೂರಪ್ಪ ಐಟಿ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ ಎಂದು ಹೇಳುವಾಗ ವಿಜಯೇಂದ್ರ ಅವರ ಹೆಸರನ್ನು ಬಳಸಿದ್ದೂ ಇದಕ್ಕೆ ಸಾಕ್ಷಿ.

English summary
BY Vijayendra, son of former chief minister of Karnataka BS Yeddyurappa, emerges as strong Lingayat leader in Karnataka, as BSY is becoming older. Political analysis by R T Vittal Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X