ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಟ್ಟಾದ ಸಿದ್ದರಾಮಯ್ಯ ಬಿಜೆಪಿಯ ಕೇಂದ್ರ ನಾಯಕರಿಗೆ 'ಡೀಲ್'!?

By ಆರ್.ಟಿ.ವಿಠ್ಠಲಮೂರ್ತಿ
|
Google Oneindia Kannada News

Recommended Video

ಸಿದ್ದರಾಮಯ್ಯನವರಿಗೆ ಕೇಂದ್ರ ಬಿಜೆಪಿ ನಾಯಕರು ಕೊಟ್ರಾ ಡೀಲ್ | Oneindia Kannada

ದಿನ ಕಳೆದಂತೆಲ್ಲ ಪ್ರಕ್ಷುಬ್ಧರಾಗಿರುವಂತೆ ಕಾಣುತ್ತಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಈಗ ಬಿಜೆಪಿಯ ಜತೆ ಒಳಗಿಂದೊಳಗೆ ಸಖ್ಯ ಸಾಧಿಸಿದ್ದಾರೆಯೇ? ಇದರ ಫಲವಾಗಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಉರುಳುತ್ತದೆಯೇ?

ಹಾಗೆಂಬುದೊಂದು ಪ್ರಶ್ನೆ ದಿಲ್ಲಿಯ ರಾಜಕೀಯ ಪಡಸಾಲೆಯಿಂದಲೇ ಕೇಳಿ ಬರುತ್ತಿದೆ.

ಅಂದ ಹಾಗೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ತೊಡೆ ತಟ್ಟಿದವರು ಸಿದ್ದರಾಮಯ್ಯ. ಕೇಂದ್ರ ಸರಕಾರದ ಆರ್ಥಿಕ ನೀತಿಗಳಿಂದ ಬಡ, ಕೆಳ ಮಧ್ಯಮ ವರ್ಗ ಕಂಗಾಲಾಗಿದೆ ಎಂಬ ಕಾರಣಕ್ಕಾಗಿ ಅವರು ಕರ್ನಾಟಕದಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದರು. ಈ ಕಾರ್ಯಕ್ರಮಗಳು ತಮ್ಮ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವಂತೆ ಮಾಡುತ್ತದೆ ಎಂದು ನಂಬಿದ್ದರು.

ಕಾಂಗ್ರೆಸ್ ಮಡಿಲಲ್ಲಿರುವ ಟೈಮ್ ಬಾಂಬ್ ಸ್ಫೋಟವಾದರೆ...! ಕಾಂಗ್ರೆಸ್ ಮಡಿಲಲ್ಲಿರುವ ಟೈಮ್ ಬಾಂಬ್ ಸ್ಫೋಟವಾದರೆ...!

ಆದರೆ, ಅವರ ನಂಬಿಕೆ ಸುಳ್ಳಾಯಿತು.ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಅವರು ಅಹಿಂದ ಸಮುದಾಯದ ನಾಯಕರು ಎಂದು ಪ್ರತಿಬಿಂಬಿತರಾದರೂ ದಲಿತ ಸಮುದಾಯವು ಕೈ ಪಾಳಯದ ಜತೆ ಕೈ ಜೋಡಿಸಲಿಲ್ಲ.

ದಲಿತ ಸಿಎಂ ವಿವಾದ ಆ ವರ್ಗದ ಬಲಗೈ ಸಮುದಾಯ ಸಿದ್ದರಾಮಯ್ಯ ಅವರ ವಿರುದ್ಧ ತಿರುಗಿ ಬೀಳುವಂತೆ ಮಾಡಿದರೆ, ಒಳಮೀಸಲಾತಿ ಕಲ್ಪಿಸಿಕೊಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡದ ಸಿದ್ದರಾಮಯ್ಯ ಸರಕಾರದ ವಿರುದ್ಧ ಎಡಗೈ ಸಮುದಾಯ ತಿರುಗಿ ಬಿತ್ತು.

ಸಮ್ಮಿಶ್ರ ಸರಕಾರ ತಮ್ಮ ಮಾತು ಕೇಳಬೇಕು ಎಂಬ ಭಾವನೆ

ಸಮ್ಮಿಶ್ರ ಸರಕಾರ ತಮ್ಮ ಮಾತು ಕೇಳಬೇಕು ಎಂಬ ಭಾವನೆ

ಮೂಲತಃ ಎಡಗೈ ಸಮುದಾಯ 2004 ರ ಚುನಾವಣೆಯ ಸಂದರ್ಭದಿಂದಲೇ ಬಿಜೆಪಿ ಜತೆಗಿದೆ. ಇದಕ್ಕೆ ಕಾರಣ, ಕಾಂಗ್ರೆಸ್ ಪಕ್ಷ ಒಳಮೀಸಲಾತಿಯ ಪರವಾಗಿಲ್ಲ ಎಂಬ ಸಿಟ್ಟು.ಇದೇ ಕಾರಣಕ್ಕಾಗಿ ಕರ್ನಾಟಕದ ನೆಲೆಯಲ್ಲಿ ಅದು ಕಾಂಗ್ರೆಸ್ ವಿರುದ್ಧ ಬಿಜೆಪಿಯೇ ಪ್ರಬಲ ಶಕ್ತಿ ಎಂಬ ತೀರ್ಮಾನಕ್ಕೆ ಬಂದು ಅದರ ಜತೆ ಹೋಯಿತು. ಆದರೆ ಒಳಮೀಸಲಾತಿಯನ್ನು ಕಲ್ಪಿಸಿದರೆ ಬಲಗೈ ಸಮುದಾಯ ತಮ್ಮ ವಿರುದ್ಧ ತಿರುಗಿ ಬೀಳಬಹುದು ಎಂದು ಸಿದ್ದರಾಮಯ್ಯ ಅದರ ಗೋಜಿಗೇ ಹೋಗಲಿಲ್ಲ. ಹೀಗಾಗಿ ವಿವಿಧ ಕಾರಣಗಳಿಗಾಗಿ ದಲಿತ ಮತಗಳು ಕೈ ಪಾಳಯದ ವಿರುದ್ಧ ತಿರುಗಿ ಬಿದ್ದವು.

ಅದೇನೇ ಇರಲಿ, ಕಾಂಗ್ರೆಸ್ ಪಕ್ಷ ಸ್ವಯಂಬಲದ ಮೇಲೆ ಗೆಲ್ಲಲು ಶಕ್ತವಾಗದೆ ಹೋದರೂ ಇವತ್ತು ಎಪ್ಪತ್ತೊಂಬತ್ತು ಸೀಟುಗಳನ್ನು ಹೊಂದಿದ್ದರೆ ಅದರಲ್ಲಿ ಸಿದ್ದರಾಮಯ್ಯ ಅವರ ಪಾಲೂ ದೊಡ್ಡದು. ಇದೇ ಕಾರಣಕ್ಕಾಗಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ತಮ್ಮ ಮಾತು ಕೇಳಬೇಕು ಎಂದು ಸಿದ್ದರಾಮಯ್ಯ ಬಾವಿಸುತ್ತಾರೆ. ಆದರೆ ಸರಕಾರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಅಥವಾ ಅದನ್ನು ಉಳಿಸಿಕೊಳ್ಳುವ ಅನಿವಾರ್ಯ ಕಾಂಗ್ರೆಸ್ ಪಕ್ಷದ್ದು ಎಂಬುದು ಗೊತ್ತಿರುವುದರಿಂದ ಕುಮಾರಸ್ವಾಮಿ ಅವರಾಗಲೀ, ದೇವೇಗೌಡರಾಗಲೀ ಸಿದ್ದರಾಮಯ್ಯ ಅವರ ಮಾತಿಗೆ ಹೆಚ್ಚು ಮನ್ನಣೆ ನೀಡುವುದಿಲ್ಲ.

ಭಿನ್ನಮತದ ಜ್ವಾಲೆ ಉರಿಯಲು ಕಾರಣವಾಗುವುದೆ ಸಂಪುಟ ರಚನೆ? ಭಿನ್ನಮತದ ಜ್ವಾಲೆ ಉರಿಯಲು ಕಾರಣವಾಗುವುದೆ ಸಂಪುಟ ರಚನೆ?

ಸಿದ್ದು ಹಾಗೂ ಗೌಡರ ಕುಟುಂಬದ ಮಧ್ಯೆ ದೊಡ್ಡ ಕಂದರ

ಸಿದ್ದು ಹಾಗೂ ಗೌಡರ ಕುಟುಂಬದ ಮಧ್ಯೆ ದೊಡ್ಡ ಕಂದರ

ಈಗಾಗಲೇ ತಾವು ಬಜೆಟ್ ಮಂಡನೆ ಮಾಡಿರುವುದರಿಂದ ಮತ್ತೊಂದು ಬಜೆಟ್ ನ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರೆ, ಚುನಾವಣೆ ಪ್ರಣಾಳಿಕೆಯಲ್ಲಿ ತಾವು ನೀಡಿದ ಭರವಸೆಗಳೂ ಇವೆಯಲ್ಲ? ಅವನ್ನು ಬಜೆಟ್ ನಲ್ಲಿ ಸೇರಿಸಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಇದು ಮೇಲ್ನೋಟದ ವಿಷಯವಾದರೂ ಆಳದಲ್ಲಿ ಮತ್ತೊಂದು ಸಂಗತಿ ಸಿದ್ದರಾಮಯ್ಯ ಹಾಗೂ ದೇವೇಗೌಡರ ಕುಟುಂಬದ ನಡುವೆ ಬೃಹತ್ ಕಂದರವನ್ನು ಸೃಷ್ಟಿಸಿದೆ.

2013 ರ ವಿಧಾನಸಭಾ ಚುನಾವಣೆಯಂತೆಯೇ 2018 ರ ವಿಧಾನಸಭಾ ಚುನಾವಣೆಯಲ್ಲಿಯೂ ದಲಿತ ನಾಯಕ ಪರಮೇಶ್ವರ್ ಅವರು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸೋಲಬೇಕು. ಹಾಗೆ ಸೋಲುವ ಮೂಲಕ ಮತ್ತೆಂದು ದಲಿತ ಸಿಎಂ ವಿವಾದ ಕೇಳಬಾರದು ಎಂಬ ಲೆಕ್ಕಾಚಾರ ಸಿದ್ದರಾಮಯ್ಯ ಅವರ ಗುಂಪಿಗಿತ್ತು.

ಆದರೆ, ಈ ಬಾರಿ ವಿಷಯವನ್ನು ಮೊದಲೇ ಅರಿತಿದ್ದ ಪರಮೇಶ್ವರ್ ಚುನಾವಣೆಗೂ ಮುಂಚೆ ದೇವೇಗೌಡರನ್ನು ಸಂಪರ್ಕಿಸಿ, ಅವರ ಬೆಂಬಲ ಕೋರಿದ್ದರು. ದೇವೇಗೌಡರಿಗೆ ಕೂಡಾ ಸಿದ್ದರಾಮಯ್ಯ ಅವರ ಎದುರಾಳಿ ಪರಮೇಶ್ವರ್ ಅವರು ಗೆಲ್ಲುವುದು ಬೇಕಿತ್ತು. ಹೀಗಾಗಿ ಅವರು ನಿರ್ದಿಷ್ಟ ಮತಗಳ ಮೇಲೆ ಪ್ರಭಾವ ಬೀರಿದರು. ಅದೇ ಕಾಲಕ್ಕೆ ಒಳಮೀಸಲಾತಿ ವಿಷಯದಲ್ಲಿ ಸಿದ್ದರಾಮಯ್ಯ ಆಸಕ್ತಿ ತೋರಿಸಿಲ್ಲ ಎಂಬ ಕಾರಣಕ್ಕಾಗಿ ಎಡಗೈ ಸಮುದಾಯದವರಿಗೂ ಅಸಮಾಧಾನವಿತ್ತು. ಹೀಗೆ 2013 ರ ಚುನಾವಣೆಯಲ್ಲಿ ಪರಮೇಶ್ವರ್ ಅವರು ಸೋಲಲು ಯಾವ್ಯಾವ ಅಂಶಗಳು ಕಾರಣವಾಗಿದ್ದವೋ, ಅವೇ ಅಂಶಗಳು ಈ ಬಾರಿ ಪರಮೇಶ್ವರ್ ಅವರಿಗೆ ಪೂರಕವಾದವು. ಸಾಲದೆಂಬಂತೆ ಪ್ರಬಲ ಒಕ್ಕಲಿಗ ಸಮುದಾಯದ ಗಣನೀಯ ಮತಗಳೂ ಲಭ್ಯವಾಗಿ ಅವರು ಗೆಲುವು ಸಾಧಿಸುವಂತಾಯಿತು.

ತಮಗೆ ಆಗದವರ ಸರಕಾರ ಸಹಿಸಲು ಸಾಧ್ಯವಾಗ್ತಿಲ್ಲ

ತಮಗೆ ಆಗದವರ ಸರಕಾರ ಸಹಿಸಲು ಸಾಧ್ಯವಾಗ್ತಿಲ್ಲ

ಅದೇ ಕಾಲಕ್ಕೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಒಕ್ಕಲಿಗ, ಲಿಂಗಾಯತ ಮತಗಳ ಜತೆ ದಲಿತ ಮತಗಳೂ ಸಿದ್ದರಾಮಯ್ಯ ಅವರ ವಿರುದ್ಧ ತಿರುಗಿ ಬಿದ್ದವು. ಇದರಲ್ಲಿ ಪರಮೇಶ್ವರ್ ಅವರದೇ ಸಂಪೂರ್ಣ ಪಾತ್ರವಿಲ್ಲದಿದ್ದರೂ ಪಾತ್ರವಿದ್ದುದು ನಿಜ. ಈಗ ರಚನೆಯಾಗಿರುವ ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿ ಸಿಎಂ, ಪರಮೇಶ್ವರ್ ಡಿಸಿಎಂ. ಹೀಗೆ ತಮಗೆ ಆಗದವರ ನೇತೃತ್ವದಲ್ಲಿ ಸರಕಾರ ರಚನೆಯಾಗಿರುವುದನ್ನು ಜೀರ್ಣಿಸಿಕೊಳ್ಳಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಅವರ ಈ ಮನಸ್ಥಿತಿ ಗೊತ್ತಿರುವುದರಿಂದಲೇ ಬಿಜೆಪಿಯ ಕೇಂದ್ರ ನಾಯಕರು ಮೂರನೇ ವ್ಯಕ್ತಿಯೊಬ್ಬರ ಮೂಲಕ ಸಂಪರ್ಕಿಸಿದ್ದಾರೆ. ನೀವು ನಿಮ್ಮಿಚ್ಚೆಯಂತೆ ಈ ಸರಕಾರವನ್ನು ಬಗ್ಗಿಸಲು ಸಾಧ್ಯವಾದರೆ ಅಲ್ಲೇ ಇರಿ, ಆದರೆ ನೀವು ಅಂದುಕೊಂಡಂತೆ ಈ ಸರಕಾರ ನಡೆಯದಿದ್ದರೆ ಮತ್ತು ನಿಮ್ಮ ನಿಲವುಗಳ ವಿರುದ್ಧವೇ ನಿಲ್ಲತೊಡಗಿದರೆ ನಮ್ಮ ಜತೆ ಕೈ ಜೋಡಿಸಿ ಎಂಬುದು ಬಿಜೆಪಿ ವರಿಷ್ಠರು ಸಿದ್ದರಾಮಯ್ಯ ಅವರಿಗೆ ರವಾನಿಸಿರುವ ಸಂದೇಶ.

ಸರಕಾರ ರಚಿಸುವ ಇರಾದೆ ಇಲ್ಲ

ಸರಕಾರ ರಚಿಸುವ ಇರಾದೆ ಇಲ್ಲ

ಗಮನಿಸಬೇಕಾದ ಸಂಗತಿ ಎಂದರೆ ಸಮ್ಮಿಶ್ರ ಸರಕಾರವನ್ನು ಕೆಳಗುರುಳಿಸಿ, ಬಿಜೆಪಿ ಸರಕಾರವನ್ನು ಅಸ್ತಿತ್ವಕ್ಕೆ ತರಬೇಕು ಎಂಬುದೇನೂ ಬಿಜೆಪಿ ಹೈಕಮಾಂಡ್ ಮನಸ್ಸಿನಲ್ಲಿಲ್ಲ. ಬದಲಿಗೆ ಸ್ವಲ್ಪ ದಿನಗಳ ಮಟ್ಟಿಗೆ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು, ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರುವುದು ಅದರ ಯೋಚನೆ. ಮುಂದೇನು ಮಾಡಬೇಕು ಅನ್ನುವುದು ಆಮೇಲಿನ ವಿಷಯ. ಆದರೆ ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಬೀಳಬೇಕು ಎಂಬುದು ಅದರ ಯೋಚನೆ. ಅದಕ್ಕೆ ಕಾರಣ ಸ್ಪಷ್ಟ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೋರಾಡಲು ಕಾಂಗ್ರೆಸ್ ಕೈಗೆ ಮಹತ್ವದ ರಾಜ್ಯಗಳ್ಯಾವುವೂ ಶಕ್ತಿಗಳಾಗಿ ಸಿಗಬಾರದು ಎಂಬುದು ಅದರ ಯೋಚನೆ.

ಇದೇ ಕಾರಣಕ್ಕಾಗಿ ಬಿಜೆಪಿ ಹೈಕಮಾಂಡ್ ವರಿಷ್ಠರು ಸಿದ್ದರಾಮಯ್ಯ ಅವರ ಜತೆ ಸಂಪರ್ಕದಲ್ಲಿದ್ದಾರೆ. ನಮ್ಮ ಉದ್ದೇಶಕ್ಕೆ ಪೂರಕವಾಗಿ ನಡೆದರೆ ನೀವು ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿಯಾಗಬಹುದು. ಇಲ್ಲವೇ ಯಾವುದಾದರೂ ರಾಜ್ಯದ ರಾಜ್ಯಪಾಲರಾಗಬಹುದು. ಅದೇ ಕಾಲಕ್ಕೆ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಏನೇ ಮಾಡಿದರೂ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬರಲು ಸಾಧ್ಯವಿಲ್ಲ. ಬಿಜೆಪಿಗೆ ಈಗಿರುವ ಸೀಟುಗಳು ಕಡಿಮೆಯಾದರೂ ಎನ್.ಡಿ.ಎ ಮೈತ್ರಿಕೂಟದ ಬೆಂಬಲದಿಂದ ಅದು ಅಧಿಕಾರಕ್ಕೇರುವುದು ಗ್ಯಾರಂಟಿ ಮತ್ತು ಮೋದಿಯವರೇ ಪ್ರಧಾನಿಯಾಗುವುದೂ ಗ್ಯಾರಂಟಿ ಎಂಬುದು ಅದರ ವಾದ.

ಕುಮಾರಸ್ವಾಮಿ ನೇತೃತ್ವದ ಸರಕಾರ ಪರಮಶತ್ರು

ಕುಮಾರಸ್ವಾಮಿ ನೇತೃತ್ವದ ಸರಕಾರ ಪರಮಶತ್ರು

ಸಹಜವಾಗಿಯೇ ಈ ವಾದ ಸಿದ್ದರಾಮಯ್ಯ ಅವರಿಗೆ ಒಂದು ಮಟ್ಟದಲ್ಲಿ ನಿಜ ಅನ್ನಿಸತೊಡಗಿದೆ. ಮೋದಿಯವರನ್ನು ಇಡೀ ದೇಶವೇ ಅಚ್ಚರಿಯಿಂದ ಗಮನಿಸುವ ಲೆವೆಲ್ಲಿನಲ್ಲಿ ಹೋರಾಡಿದ್ದ ಸಿದ್ಧರಾಮಯ್ಯ ಮುಂದಿನ ದಿನಗಳಲ್ಲಿ ಬಿಜೆಪಿಯ ಜತೆ ಕೈ ಜೋಡಿಸಬಹುದೇ ಎಂಬ ಪ್ರಶ್ನೆ ಹಲವರನ್ನು ಕಾಡಬಹುದು. ಆದರೆ 2004 ರಲ್ಲಿ ಕರ್ನಾಟಕ ಅತಂತ್ರ ಫಲಿತಾಂಶ ಕಂಡಾಗ ಕಾಂಗ್ರೆಸ್-ಜೆಡಿಎಸ್ ಕೈ ಜೋಡಿಸಿದವಲ್ಲ, ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಪದವಿ ಕಾಂಗ್ರೆಸ್ ಪಾಲಿಗೆ ಎಂದಾದಾಗ ಇದೇ ಸಿದ್ದರಾಮಯ್ಯ ಕೆರಳಿ ಕೆಂಡವಾಗಿದ್ದರು.

ಅಷ್ಟೇ ಅಲ್ಲ, ಹಿರಿಯ ನಾಯಕ ಪಿ.ಜಿ.ಆರ್.ಸಿಂಧ್ಯಾ ಹಾಗೂ ಎಂ.ಪಿ.ಪ್ರಕಾಶ್ ಅವರ ಸಮ್ಮುಖದಲ್ಲಿ ಆಕ್ರೋಶ ಕಾರಿ, ನನಗೆ ಬೇಕೆಂದೇ ದೇವೇಗೌಡರು ಮುಖ್ಯಮಂತ್ರಿ ಹುದ್ದೆ ತಪ್ಪಿಸುತ್ತಿದ್ದಾರೆ. ನಾವು ಬಿಜೆಪಿಯ ಜತೆ ಕೈ ಜೋಡಿಸುವುದು ಒಳ್ಳೆಯದು ಎಂದು ಹೇಳಿದ್ದರು. ಬಲ್ಲವರಿಗೆ ಇದು ವಿಶೇಷ ಸಂಗತಿಯಾಗಿಯೂ ಕಾಣುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅವರಿಗೆ ತಮ್ಮ ಪರಮ ಶತ್ರುವಿನಂತೆ ಕಾಣುತ್ತಿದೆ. ಹೀಗಾಗಿ ಇದ್ದಕ್ಕಿದ್ದಂತೆ ಅವರು ತಮ್ಮ ಬಲ ಪ್ರದರ್ಶನಕ್ಕೆ ಇಳಿದಿದ್ದಾರೆ. ಈ ಪ್ರದರ್ಶನ ಕಾಂಗ್ರೆಸ್ ಪಕ್ಷವನ್ನು ಬೆದರಿಸುವಲ್ಲಿ ಸಫಲವಾಗುತ್ತದೋ ಅಥವಾ ಬಿಜೆಪಿಯ ಜತೆ ಕೈ ಜೋಡಿಸಲು ದಾರಿ ಮಾಡಿಕೊಡುತ್ತದೋ ಎಂಬುದನ್ನು ಕಾದು ನೋಡಬೇಕು.

English summary
When former CM Siddaramaiah openly express his displeasure, BJP high command contacted him with a person and tried to collapse coalition government in Karnataka. What is the plan of BJP. Here is analysis by political analyst R.T.Vittalamurthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X