ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟಿಷರ ಮಿಷನರಿ ಸಂಚಿನ ವಿರುದ್ಧ ನಿಂತ ಬಿರಸಾ ಮುಂಡ

|
Google Oneindia Kannada News

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆದಿವಾಸಿ ಮತ್ತು ಬುಡಕಟ್ಟು ಜನರ ಪಾತ್ರ ಬಹಳ ಇದೆ. ಮೇಘಾಲಯದ ತಿರೋಗ್ ಸಿಂಗ್, ಒಡಿಶಾದ ವೀರ್ ಸುರೇಂದರ್ ಸಾಯ್, ಆಂಧ್ರದ ಅಲ್ಲೂರಿ ಸೀತಾರಾಮರಾಜು, ಛತ್ತೀಸ್‌ಗಡದ ಗುಂದಾ ಧುರ್, ನಾರಾಯಣ್ ಸಿಂಗ್, ಅಸ್ಸಾಮ್‌ನ ಮಾಲತಿ ಮೇಮ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಗುಜರಾತ್‌ನ ವೇದಚ್ಚಿ ಆಂದೋಲನ ಬಹಳ ಖ್ಯಾತವಾಗಿದೆ. ಜಾರ್ಖಂಡ್‌ನಲ್ಲಂತೂ ಅನೇಕ ಆದಿವಾಸಿಗಳು ಬ್ರಿಟಿಷರ ವಿರುದ್ಧ ಹೋರಾಟಗಳನ್ನು ಮಾಡಿದ್ದಾರೆ. ಅವರ ಸಾಲಿನಲ್ಲಿ ಪ್ರಮುಖವಾಗಿ ನಿಲ್ಲುವುದು ಬಿರಸಾ ಮುಂಡಾ.

Freedom Struggle- ಬ್ರಿಟಿಷರ ಟ್ರಕ್‌ಗೆ ಎದೆಕೊಟ್ಟು ನಿಂತ ಕಾರ್ಮಿಕ ಬಾಬು ಗೇನು ಬಲಿದಾನದ ಕಥೆFreedom Struggle- ಬ್ರಿಟಿಷರ ಟ್ರಕ್‌ಗೆ ಎದೆಕೊಟ್ಟು ನಿಂತ ಕಾರ್ಮಿಕ ಬಾಬು ಗೇನು ಬಲಿದಾನದ ಕಥೆ

ಜಾರ್ಖಂಡ್‌ನ ಛೋಟನಾಗಪುರ್‌ನಲ್ಲಿರುವ ಮುಂಡಾ ಬುಡಕಟ್ಟು ಸಮುದಾಯಕ್ಕೆ ಸೇರಿದ ಬಿರಸಾ ಮುಂಡಾ 19ನೇ ಶತಮಾನದ ಅಂತ್ಯದಲ್ಲಿ ಬದುಕಿದ್ದವರು. ಬ್ರಿಟಿಷರ ವಿರುದ್ಧ ಹೋರಾಡುತ್ತಾ, ತಮ್ಮ ಬುಡಕಟ್ಟು ಸಮುದಾಯಗಳ ಪಾಲಿಗೆ ಆರಾಧ್ಯ ದೈವ ಸ್ವರೂಪವೇ ಆಗಿ ಹೋಗಿದ್ದ ಬಿರಸಾ ಮುಂಡಾ ದಂತಕಥೆಯೇ ಆಗಿಹೋಗಿದ್ದಾರೆ.

1875ರಲ್ಲಿ ಹುಟ್ಟಿ 25 ವರ್ಷಗಳ ಕಾಲ ಬದುಕಿದ್ದ ಬಿರಸಾ ಮುಂಡ ತಮ್ಮ ಕಿರಿ ವಯಸ್ಸಿನಲ್ಲೇ ದೊಡ್ಡ ಹೋರಾಟ ಮಾಡಿದವರು. ಆಗಿನ ಬೆಂಗಾಲ್ ಪ್ರೆಸಿಡೆನ್ಸಿಯಲ್ಲಿ ಮುಂಡಾ ಬುಡಕಟ್ಟು ಸಮುದಾಯದ ಜನರ ದೊಡ್ಡ ಆಂದೋಲನ ಕಟ್ಟಿದವರು. ಅದರಲ್ಲೂ ಕ್ರೈಸ್ತ ಮಿಷನರಿ ಚಟುವಟಿಕೆ ವಿರುದ್ಧ ಅವರು ಟೊಂಕ ಕಟ್ಟಿ ನಿಂತವರು. ಅವರೇಕೆ ಮಿಷನರಿ ವಿರುದ್ಧ ಹೋರಾಡಿದ್ದು? ಇಲ್ಲಿದೆ ಇಂಟರೆಸ್ಟಿಂಗ್ ಸಂಗತಿ.

ಕ್ರೈಸ್ತರಾಗಿದ್ದ ಬಿರಸಾ

ಕ್ರೈಸ್ತರಾಗಿದ್ದ ಬಿರಸಾ

ಬಿರಸಾ ಮುಂಡಾ ಈಗಿನ ಜಾರ್ಖಂಡ್ ರಾಜ್ಯದ ಖುಂಟಿ ಜಿಲ್ಲೆಯಲ್ಲಿರುವ ಉಲಿಹಟು ಎಂಬ ಗ್ರಾಮದಲ್ಲಿ ಬಿರಸಾ ಮುಂಡಾ 1875 ನವೆಂಬರ್ 15ರಂದು ಹುಟ್ಟಿದರು. ಮುಂಡಾ ಬುಡಕಟ್ಟು ಸಮುದಾಯದವರು. ಅವರು ಗುರುವಾರ ಹುಟ್ಟಿದ್ದರಿಂದ ಬಿರಸಾ ಎಂದು ಹೆಸರಿಡಲಾಯಿತು ಎಂದು ಹೇಳುತ್ತಾರೆ. ಈಗಲೂ ಕೂಡ ಉಲಿಹಟು ಗ್ರಾಮದಲ್ಲಿ ಬಿರಸಾ ಮುಂಡಾ ಕುಟುಂಬಕ್ಕೆ ಸೇರಿದ ಮನೆ ಇದೆ.

ಬಿರಸಾ ಮುಂಡಾ ಇದ್ದ ಸ್ಥಳದ ಸುತ್ತಮುತ್ತಲೂ ಆಗ ಕ್ರೈಸ್ತ ಮಿಷನರಿಗಳು ಬಹಳ ಇದ್ದರು. ಆ ಪ್ರದೇಶದ ಬಹಳ ಮಂದಿಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಬಡವರಾಗಿದ್ದ ಬಿರಸಾ ಮುಂಡಾರನ್ನು ಜರ್ಮನ್ ಮಿಷನರಿ ಶಾಲೆಗೆ ಸೇರಿಸಲಾಯಿತು. ಆದರೆ ಅಲ್ಲಿ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಹೇಳಲಾಯಿತು. ಓದುವ ಆಸೆಗೆ ಬಿದ್ದು ಬಿರಸಾ ಕ್ರೈಸ್ತ ಧರ್ಮವಪ್ಪಿದರು.

ಬಿರಸಾ ಮುಂಡಾ ಹೆಸರು ಬಿಸ್ರಾ ಡೇವಿಡ್ ಎಂದು ಬದಲಾಯಿತು. ನಂತರದ ದಿನಗಳಲ್ಲಿ ಅದು ಬಿಸ್ರಾ ಡೌಡ್ ಎಂದಾಯಿತು.

ಕ್ರೈಸ್ತ ಧರ್ಮ ತಿರಸ್ಕರಿಸಿದ ಮುಂಡಾ

ಕ್ರೈಸ್ತ ಧರ್ಮ ತಿರಸ್ಕರಿಸಿದ ಮುಂಡಾ

ಆಗ ಸ್ವಾತಂತ್ರ್ಯ ಹೋರಾಟದ ಬಿಸಿ ಹೆಚ್ಚುತ್ತಿದ್ದ ಕಾಲ. ಬಿರಸಾ ಮುಂಡಾ ಕುಟುಂಬದವರು ಸ್ವಾತಂತ್ರ್ಯ ಹೋರಾಟಕ್ಕೆ ಕೈ ಜೋಡಿಸುವ ಉದ್ದೇಶದಿಂದ ಜರ್ಮನ್ ಮಿಷನರಿ ಶಾಲೆಯಿಂದ ಬಿರಸಾರನ್ನು ಬಿಡಿಸಿದರು. ನಂತರ ಕುಟುಂಬದವರೆಲ್ಲರೂ ಕ್ರೈಸ್ತ ಧರ್ಮ ತ್ಯಜಿಸಿ ಮತ್ತೆ ಬುಡಕಟ್ಟು ಧರ್ಮಕ್ಕೆ ಮರಳುತ್ತಾರೆ.

ಬಿರ್ಸಾ ಮುಂಡಾ ತನ್ನದೇ ಒಂದು ಮತ ಸ್ಥಾಪಿಸುತ್ತಾರೆ. ಬಿರ್ಸಾಯತ್ ಎನ್ನುವ ಈ ಮತದ ಮೂಲಕ ಆದಿವಾಸಿಗಳನ್ನು ಒಗ್ಗೂಡಿಸತೊಡುತ್ತಾರೆ. ತಮ್ಮ ಮೂಲ ಬುಡಕಟ್ಟು ಸಂಸ್ಕೃತಿ, ಧರ್ಮವನ್ನು ಮತ್ತೆ ಅಳವಡಿಸಿಕೊಳ್ಳುವಂತೆ ಅವರು ಬೋಧಿಸುತ್ತಾರೆ. ಅಲ್ಲಿನ ಜನರ ಪಾಲಿಗೆ ಬಿರಸಾ ಮುಂಡಾ ಪವಾಡ ಪುರುಷ ಎನಿಸುತ್ತಾರೆ.

ಕ್ರೈಸ್ತ ಧರ್ಮ ತ್ಯಜಿಸುವಂತೆ ತಮ್ಮ ಬುಡಕಟ್ಟು ಜನರಿಗೆ ಬಿರ್ಸಾ ಕರೆ ಕೊಡುತ್ತಾರೆ. 1890ರ ದಶಕದಲ್ಲಿ ಬ್ರಿಟಿಷರು ಆದಿವಾಸಿಗಳ ಅರಣ್ಯ ಪ್ರದೇಶದಲ್ಲಿ ಜಾರಿಗೆ ತಂದಿದ್ದ ಜೀತ ವ್ಯವಸ್ಥೆಯನ್ನು ಅಂತ್ಯಗೊಳಿಸುತ್ತಾರೆ.

ಬ್ರಿಟಿಷರು ಕ್ರೈಸ್ತ ಮಿಷನರಿಗಳನ್ನು ಬಳಸಿ ಬುಡಕಟ್ಟು ಜನರನ್ನು ಮತಾಂತರ ಮಾಡುತ್ತಿರುವುದು ಬಿರಸಾ ಮುಂಡಾಗೆ ಬಹಳ ಬೇಗ ಅರಿಗೆ ಬರುತ್ತದೆ. ಇವರ ನಾಯಕತ್ವದಲ್ಲಿ ಮುಂಡಾ, ಓರಾವೋನ್ ಬುಡಕಟ್ಟು ಸಮುದಾಯಗಳ ಜನರು ಕ್ರಿಶ್ಚಿಯನ್ ಮಿಷನರಿಗಳ ಕಾರ್ಯಗಳನ್ನು ಪ್ರಶ್ನಿಸತೊಡಗಿದರು.

ಆದಿವಾಸಿಗಳ ಮೇಲೆ ತೆರಿಗೆ ಹೇರುತ್ತಿದ್ದುದು ಮತ್ತು ಮತಾಂತರ ಮಾಡುತ್ತಿದ್ದುದು ಬಿರಸಾ ಮುಂಡಾರನ್ನು ಆಕ್ರೋಶಗೊಳಿಸುತ್ದೆ. ಈ ಚಟುವಟಿಕೆ ವಿರುದ್ಧ ವಿವಿಧ ಆದಿವಾಸಿ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ ದೊಡ್ಡ ಆಂದೋಲನ ಕಟ್ಟುತ್ತಾರೆ.

ಇನ್ನೊಂದೆಡೆ ಬಿರಸಾಯತ್ ಎಂಬ ತನ್ನದೇ ಮತವನ್ನು ಸ್ಥಾಪಿಸಿ ಆದಿವಾಸಿಗಳನ್ನು ಆ ಮತಕ್ಕೆ ಸೇರಿಸುತ್ತಾರೆ.

ಬ್ರಿಟಿಷರ ವಿರುದ್ಧ ಗೆರಿಲ್ಲಾ ದಾಳಿ

ಬ್ರಿಟಿಷರ ವಿರುದ್ಧ ಗೆರಿಲ್ಲಾ ದಾಳಿ

ಬಿರ್ಸಾ ಮುಂಡಾ ಕೇವಲ ಮತಾಂತರ ವಿರುದ್ಧ ಸಿಡಿದು ನಿಲ್ಲಲಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಲು ಗೆರಿಲ್ಲಾ ಸೇನೆಯನ್ನು ಕಟ್ಟುತ್ತಾರೆ. ಆದಿವಾಸಿಗಳೇ ಇದ್ದ ತಮ್ಮ ಸೇನೆಯ ಮೂಲಕ ಬ್ರಿಟಿಷ್ ಆಡಳಿತದ ವಿರುದ್ಧ ನಿರಂತರ ದಾಳಿಗಳನ್ನು ಮಾಡುತ್ತಾರೆ.

"ಅಬುವಾ ರಾಜ್ ಸೆಟರ್ ಜಾನಾ, ಮಹಾರಾಣಿ ರಾಜ್ ತುಂಟು ಜಾನಾ" ಎಂಬುದು ಬಿರ್ಸಾ ಮುಂಡಾ ಘೋಷವಾಕ್ಯವಾಗಿತ್ತು. ಅದರರ್ಥ, ಮೊದಲು ರಾಣಿ ಆಳ್ವಿಕೆ ನಿಲ್ಲಲಿ, ನಮ್ಮ ಆಳ್ವಿಕೆ ಬರಲಿ ಎಂದಾಗುತ್ತದೆ.

ಬಿರಸಾ ನೇತೃತ್ವದಲ್ಲಿ ರಚನೆಯಾದ ಪುಟ್ಟ ಸೇನೆಯು ಪೊಲೀಸ್ ಠಾಣೆಗಳ ಮೇಲೆ ದಾಳಿ ಆಡುತ್ತದೆ. ಬ್ರಿಟಿಷರ ಪರ ಇದ್ದ ವ್ಯಾಪಾರಿಗಳ ಮನೆಗಳನ್ನು ಧ್ವಂಸ ಮಾಡುತ್ತಾರೆ.

ಜೈಲಿನಲ್ಲಿ ಬಿರ್ಸಾ ಸಾವು

ಜೈಲಿನಲ್ಲಿ ಬಿರ್ಸಾ ಸಾವು

ಬಿರ್ಸಾ ಮುಂಡಾ ನೇತೃತ್ವದಲ್ಲಿ ಎದ್ದ ದಂಗೆಯನ್ನು ಅಡಗಿಸಲು ಬ್ರಿಟಿಷರು ಆಗಿನ ಕಾಲಕ್ಕೆ ೫೦೦ ಬಹುಮಾನ ಘೋಷಿಸುತ್ತಾರೆ. 150 ಮಂದಿ ಇದ್ದ ಸೇನೆಯನ್ನು ಬ್ರಿಟಿಷರು ನಿಯೋಜಿಸುತ್ತಾರೆ. ಈ ಸೇನೆ ಬುಡಕಟ್ಟು ಜನರನ್ನು ಹಿಂಸಿಸುತ್ತದೆ. ಹಲವರನ್ನು ಕೊಲ್ಲುತ್ತದೆ. ಕೆಲ ವರ್ಷಗಳ ಬಳಿಕ ಬ್ರಿಟಿಷರು ಬಿರ್ಸಾ ಮುಂಡಾರನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ.

1900, ಜೂನ್ 9ರಂದು ಬಿರಸಾ ಮುಂಡಾ ಜೈಲಿನಲ್ಲೇ ಸಾವನ್ನಪ್ಪುತ್ತಾರೆ. ಅವರ ಸಾವಿನ ಬಳಿಕ ಆದಿವಾಸಿಗಳ ಆಂದೋಲನ ಕ್ರಮೇಣ ನಶಿಸಿಹೋಗುತ್ತದೆ.

ಬಿರ್ಸಾ ಮುಂಡಾಗೆ ಗೌರವ: ಭಾರತದ ಸಂಸತ್‌ನಲ್ಲಿ ಇರುವ ಗಣ್ಯರ ಫೋಟೋಗಳಲ್ಲಿ ಬಿರಸಾ ಅವರದ್ದೂ ಇದೆ. ಜಾರ್ಖಂಡ್‌ನಲ್ಲಿ ಅವರ 150 ಎತ್ತರದ ವಿಗ್ರಹ ಸ್ಥಾಪಿಸಲಾಗುತ್ತಿದೆ. ಇವರ ಜೀವನ ಕಥೆ ಆಧಾರಿತ ಸಿನಿಮಾ, ಕಾದಂಬರಿಗಳು ಬಿಡುಗಡೆಯಾಗಿವೆ. 2004ರಲ್ಲಿ 'ಉಲಗುಲನ್- ಏಕ್ ಕ್ರಾಂತಿ' ಎಂಬ ಸಿನಿಮಾ ಬಿಡುಗಡೆಯಾಗಿತ್ತು. 2008ರಲ್ಲಿ 'ಗಾಂಧಿ ಸೇ ಪೆಹ್ಲೆ ಗಾಂಧಿ' ಎಂಬ ಸಿನಿಮಾವನ್ನೂ ಮಾಡಲಾಗಿದೆ.

ಮಹಾಶ್ವೇತಾ ದೇವಿ ಎಂಬುವರು 'ಅರಣ್ಯೇರ್ ಅಧಿಕಾರ್' ಎಂಬ ಕಾದಂಬರಿ ಬರೆದಿದ್ದಾರೆ. ಈ ಬಂಗಾಳಿ ಪುಸ್ತಕಕ್ಕೆ 1979ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ.

(ಒನ್ಇಂಡಿಯಾ ಸುದ್ದಿ)

English summary
Birsa Munda the tribal leader of Jharkhand who lived in 19th century had become legend in his community. He mobilesd his own small army against British.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X