ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಚುನಾವಣೆ: ನಿತೀಶ್ ಹಣೆಬರಹ ಬದಲಿಸಬಹುದಾದ ಐದು ಅಂಶಗಳಿವು

|
Google Oneindia Kannada News

ಪಟ್ನಾ, ಆಗಸ್ಟ್ 13: ಕೊರೊನಾ ವೈರಸ್ ಭೀತಿಯ ನಡುವೆಯೇ ಚುನಾವಣೆಯ ಕದನಗಳೂ ಶುರುವಾಗಲಿವೆ. ಬಿಹಾರ ವಿಧಾನಸಭೆಯ ಅವಧಿ ನವೆಂಬರ್ 29ಕ್ಕೆ ಅಂತ್ಯಗೊಳ್ಳಲಿದೆ. ನಿಗದಿತ ಸಮಯದಲ್ಲಿ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಒಂದು ವೇಳೆ ಚುನಾವಣೆ ನಡೆಸಲು ಸಾಧ್ಯವಾಗದೆ ಹೋದರೆ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ಆಡಳಿತ ಅಂತ್ಯಗೊಂಡು, ರಾಷ್ಟ್ರಪತಿ ಆಳ್ವಿಕೆ ನಡೆಯಲಿದೆ.

ರಾಜ್ಯದಲ್ಲಿ ಚುನಾವಣೆ ನಡೆಸುವ ವಿಚಾರವಾಗಿ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಂದ ಸಲಹೆಗಳನ್ನು ಕೇಳಿದೆ. ಈ ಮುಂಚೆ ಸಲಹೆಗಳನ್ನು ನೀಡಲು ಜುಲೈ 31ರವರೆಗೆ ಗಡುವು ನೀಡಲಾಗಿತ್ತು. ಬಳಿಕ ಅದನ್ನು ಆಗಸ್ಟ್ 11ಕ್ಕೆ ವಿಸ್ತರಿಸಲಾಗಿತ್ತು.

ಅಡೆತಡೆಗಳಿದ್ದರೂ ಈ ವರ್ಷವೇ ಬಿಹಾರ ವಿಧಾನಸಭೆ ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆದರೆ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಬಿಹಾರದಲ್ಲಿ ಕೊರೊನಾ ವೈರಸ್ ಭೀತಿ ತೀವ್ರಗೊಳ್ಳುವ ಅಪಾಯವಿದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಮುಂದೆ ಓದಿ...

ನಿತೀಶ್-ತೇಜಸ್ವಿ ಪೈಪೋಟಿ

ನಿತೀಶ್-ತೇಜಸ್ವಿ ಪೈಪೋಟಿ

ಮುಂಬರುವ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಸತತ ನಾಲ್ಕನೆಯ ಅವಧಿಯಲ್ಲಿ ಗದ್ದುಗೆಗೆ ಏರಲು ನಿತೀಶ್ ಕುಮಾರ್ ಸಿದ್ಧತೆ ನಡೆಸಿದ್ದಾರೆ. ಅವರ ನಾಗಾಲೋಟಕ್ಕೆ ಕಡಿವಾಣ ಹಾಕಲು ಆರ್‌ಜೆಡಿ ಮುಖಂಡ ಲಾಲು ಪ್ರಸಾದ್ ಮಗ ತೇಜಸ್ವಿ ಯಾದವ್ ತುದಿಗಾಲಲ್ಲಿ ನಿಂತಿದ್ದಾರೆ. 1990ರ ದಶಕದ ಮಧ್ಯಭಾಗದಲ್ಲಿ ಬೇರ್ಪಡುವವರೆಗೂ ನಿತೀಶ್ ಮತ್ತು ಲಾಲು ರಾಜಕೀಯ ಪಾಲುದಾರರಾಗಿದ್ದರು. 2015ರ ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಅವರು ಮತ್ತೆ ಒಂದುಗೂಡಿದ್ದರು. 2017ರಲ್ಲಿ ನಿತೀಶ್ ಕುಮಾರ್ ಈ ಮಹಾಮೈತ್ರಿಕೂಟದಿಂದ ಹೊರಬಂದು ಎನ್‌ಡಿಎ ಜತೆ ಸೇರಿಕೊಂಡಿದ್ದರು.

ನಿತೀಶ್ ಮುಂದೆ ಸವಾಲುಗಳು

ನಿತೀಶ್ ಮುಂದೆ ಸವಾಲುಗಳು

2000ನೇ ಇಸವಿಯಲ್ಲಿ ಎಂಟು ದಿನ ಅಧಿಕಾರದಲ್ಲಿ ಕುಳಿತಿದ್ದು ಸೇರಿದಂತೆ ಈಗಾಗಲೇ ಒಟ್ಟು ಆರು ಬಾರಿ ಮುಖ್ಯಮಂತ್ರಿ ಸ್ಥಾನದಲ್ಲಿ ಅವರು ಕುಳಿತಿದ್ದಾರೆ. ಆರ್‌ಜೆಡಿ ಜತೆಗೆ ಕಾಂಗ್ರೆಸ್ ಕೂಡ ನಿತೀಶ್ ವಿರುದ್ಧದ ಸಮರದಲ್ಲಿ ಭಾಗಿಯಾಗಿದೆ. ಕಳೆದ ಚುನಾವಣೆಯಲ್ಲಿ ಮಹಾಮೈತ್ರಿಕೂಟದಲ್ಲಿ ಸೇರಿಕೊಂಡು ಅಧಿಕಾರ ಅನುಭವಿಸುತ್ತಲೇ ಕೈಕೊಟ್ಟು ಬಿಜೆಪಿ ಜತೆಗೂಡಿದ್ದ ನಿತೀಶ್ ಕುಮಾರ್ ಅವರಿಗೆ ಪಾಠ ಕಲಿಸಲು ವಿರೋಧಪಕ್ಷಗಳು ಹವಣಿಸುತ್ತಿವೆ. ಇದರ ಜತೆಗೆ ನಿತೀಶ್ ಕುಮಾರ್ ಚುನಾವಣೆಯಲ್ಲಿ ಐದು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದ್ದಾರೆ.

ಏರುತ್ತಿರುವ ಕೊರೊನಾ ವೈರಸ್ ಪ್ರಮಾಣ

ಏರುತ್ತಿರುವ ಕೊರೊನಾ ವೈರಸ್ ಪ್ರಮಾಣ

ದೇಶದ ಕೊರೊನಾ ವೈರಸ್ ಸೋಂಕಿನ ಹಾಟ್‌ಸ್ಪಾಟ್‌ಗಳಲ್ಲಿ ಬಿಹಾರವೂ ಒಂದು. ದಾಖಲಾದ ಸಂಖ್ಯೆಗಳ ಆಧಾರದಲ್ಲಿ ಬಿಹಾರ ಅತಿಹೆಚ್ಚು ರೋಗಿಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಇನ್ನೂ ಸಮರ್ಪಕವಾಗಿ ಪರೀಕ್ಷೆ ನಡೆಯುತ್ತಿಲ್ಲ. ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ವಾಸ್ತವವಾಗಿ ಇನ್ನೂ ಹೆಚ್ಚಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿಯೇ ಅತಿ ಕಡಿಮೆ ಪ್ರಮಾಣದ ಪರೀಕ್ಷೆ ನಡೆಯುತ್ತಿರುವುದು ಬಿಹಾರದಲ್ಲಿ. ಹತ್ತು ಲಕ್ಷ ಜನರಿಗೆ 7,917 ಪರೀಕ್ಷೆಗಳು ನಡೆಯುತ್ತಿವೆ. ದೇಶದ ಸರಾಸರಿ ಪರೀಕ್ಷೆ ಪ್ರಮಾಣ 18,086 ಇದೆ. ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನಿತೀಶ್ ಕುಮಾರ್ ವಿಫಲರಾಗಿದ್ದಾರೆ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.

ಪ್ರವಾಹದ ಅಬ್ಬರ

ಪ್ರವಾಹದ ಅಬ್ಬರ

ಬಿಹಾರದ ಬಹುತೇಕ ಭಾಗಗಳು ಪ್ರವಾಹದಲ್ಲಿ ಸಿಲುಕಿದೆ. ಇವುಗಳಲ್ಲಿ ಕೋವಿಡ್ 19 ತೀವ್ರವಾಗಿರುವ ಪ್ರದೇಶಗಳೂ ಸೇರಿವೆ. ಪ್ರವಾಹ ಪರಿಸ್ಥಿತಿ ಬಿಹಾರಕ್ಕೆ ಹೊಸತಲ್ಲ. ಆದರೆ ಲಾಲು-ರಾಬ್ರಿ ದೇವಿ ಅವರ 15 ವರ್ಷದ ಆಡಳಿತಕ್ಕೆ ಹೋಲಿಸಿದಾಗ ನಿತೀಶ್ ಅವರ 15 ವರ್ಷದ ಆಡಳಿತದಲ್ಲಿ ಏನೂ ಬದಲಾಗಿಲ್ಲ. ರಾಜ್ಯದ 16 ಜಿಲ್ಲೆಗಳಲ್ಲಿನ 1,232 ಪಂಚಾಯತಿಗಳಲ್ಲಿ ಈ ವರ್ಷ ಅತಿವೃಷ್ಟ ಅನಾಹುತ ಸೃಷ್ಟಿಸಿದೆ.ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ. ಪ್ರವಾಹ ಪರಿಸ್ಥಿತಿ ನಿರ್ವಹಣೆ ಅವರ ಮುಂದಿನ ಬಹುದೊಡ್ಡ ಸವಾಲುಗಳಲ್ಲಿ ಒಂದು.

ವಲಸಿಗರ ಸಂಕಷ್ಟ

ವಲಸಿಗರ ಸಂಕಷ್ಟ

ಹೊರ ರಾಜ್ಯಗಳಿಗೆ ಜನರು ವಲಸೆ ಹೋಗುವುದು ಬಿಹಾರದ ಸುದೀರ್ಘ ಕಾಲದ ಸಮಸ್ಯೆಗಳಲ್ಲಿ ಒಂದು. ಇಲ್ಲಿನ ಬಹುತೇಕ ಕಾರ್ಮಿಕ ಸಂಪನ್ಮೂಲ ದೇಶದ ವಿವಿಧ ಭಾಗಗಳ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿವೆ. ಲಡಾಕ್‌ನಿಂದ ಕೇರಳದವರೆಗೆ, ಮಣಿಪುರದಿಂದ ಗುಜರಾತ್ ವರೆಗೂ ಬಿಹಾರ ಮೂಲದ ಕಾರ್ಮಿಕರಿದ್ದಾರೆ. ರಾಜ್ಯದಲ್ಲಿನ ಆರ್ಥಿಕ ಅಭಿವೃದ್ಧಿಗಳ ಕೊರತೆ ಈ ವಲಸೆಗೆ ಕಾರಣ ಎಂಬ ಆರೋಪವಿದೆ.

ಕೊರೊನಾ ವೈರಸ್ ಲಾಕ್‌ಡೌನ್ ಘೋಷಣೆಯಾದಾಗ ಬಿಹಾರದ ಕಾರ್ಮಿಕರೇ ಹೆಚ್ಚು ಬವಣೆ ಅನುಭವಿಸಿದ್ದರು. ಬೇರೆ ಬೇರೆ ರಾಜ್ಯಗಳಲ್ಲಿದ್ದ ಅವರು ಕೆಲಸವಿಲ್ಲದೆ, ಅತ್ತ ತಾಯ್ನಾಡಿಗೂ ಮರಳು ಆಗದೆ ಪರದಾಡಿದ್ದರು. ಹಾಗೂ ಹೀಗೂ ಬಿಹಾರಕ್ಕೆ ಮರಳಲು ಯಶಸ್ವಿಯಾದ ಕಾರ್ಮಿಕರು, ರಾಜ್ಯದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುವಂತೆ ಬೇಡಿಕೆ ಇರಿಸುತ್ತಿದ್ದಾರೆ.

ಬದಲಾಗದ ಕಾನೂನು ಮತ್ತು ಸುವ್ಯವಸ್ಥೆ

ಬದಲಾಗದ ಕಾನೂನು ಮತ್ತು ಸುವ್ಯವಸ್ಥೆ

ಅಪರಾಧ ಪ್ರಕರಣಗಳು ಮಿತಿಮೀರುವ ವರದಿಗಳು ಬಿಹಾರದಲ್ಲಿ ಪ್ರಕಟವಾಗುತ್ತಲೇ ಇವೆ. ಕಾನೂನು ಮತ್ತು ಸುವ್ಯವಸ್ಥೆ ನಿರಂತರವಾಗಿ ಚರ್ಚೆಗೆ ಒಳಗಾಗುತ್ತಿದೆ. ಪಟ್ನಾ ಸೇರಿದಂತೆ ಹಲವೆಡೆ ಹಾಡಹಗಲೇ ಬ್ಯಾಂಕ್‌ಗಳ ಲೂಟಿ ನಡೆದಿವೆ. ಆಭರಣ ಮಳಿಗೆಗಳು, ಗ್ಯಾಸ್ ಏಜೆನ್ಸಿಗಳು ದರೋಡೆಕೋರರ ದಾಳಿಗಳಿಗೆ ತುತ್ತಾಗಿವೆ. ಹೆದ್ದಾರಿಗಳಲ್ಲಿ ಹಗಲಿನ ವೇಳೆಯೇ ಬೈಕ್, ಕಾರುಗಳ ಕಳ್ಳತನ ರಾಜಾರೋಷವಾಗಿ ನಡೆಯುತ್ತಿವೆ. 2005ರಿಂದಲೂ ಬಿಹಾರದ ಚುನಾವಣೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಗಂಭೀರ ವಿಷಯವಾಗಿ ಪರಿಗಣನೆಯಾಗಿದೆ. ಆದರೆ ಅವುಗಳಲ್ಲಿ ಯಾವ ಸುಧಾರಣೆಯೂ ಆಗಿಲ್ಲ.

ನಿರುದ್ಯೋಗದ ಸಮಸ್ಯೆ

ನಿರುದ್ಯೋಗದ ಸಮಸ್ಯೆ

ಭಾರತೀಯ ಆರ್ಥಕತೆಯ ನಿಗಾ ಕೇಂದ್ರ (ಸಿಎಂಐಇ) ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 2019ರ ಜೂನ್ ಅಂತ್ಯಕ್ಕೆ ಹೋಲಿಸಿದರೆ ಬಿಹಾರದಲ್ಲಿ ರಾಷ್ಟ್ರೀಯ ನಿರುದ್ಯೋಗ ಪ್ರಮಾಣ ಎರಡು ಪಟ್ಟು ಹೆಚ್ಚಿದೆ. ಕೊರೊನಾ ವೈರಸ್ ಲಾಕ್ ಡೌನ್ ಸಮಯದಲ್ಲಿ ನಿರುದ್ಯೋಗದ ಮಟ್ಟ ಮತ್ತಷ್ಟು ಹೆಚ್ಚಾಗಿದೆ. ದೇಶದ ಇತರೆಡೆಗಳಂತೆ ಬಿಹಾರದಲ್ಲಿಯೂ ಉದ್ಯಮಗಳು ಸ್ಥಗಿತಗೊಂಡಿದ್ದವು. ಲಕ್ಷಾಂತರ ವಲಸಿಗರು ಕೆಲಸ ಕಳೆದುಕೊಂಡು ರಾಜ್ಯಕ್ಕೆ ವಾಪಸಾಗಿದ್ದಾರೆ. ಮತ್ತೊಂದು ವರದಿಯ ಪ್ರಕಾರ 2020ರ ಏಪ್ರಿಲ್‌ನಲ್ಲಿ ನಿರುದ್ಯೋಗಿಗಳ ಪ್ರಮಾಣ ಶೇ 31.2ರಷ್ಟು ಹೆಚ್ಚಾಗಿದೆ.

ಈಗ ಕೆಲಸ ಕಳೆದುಕೊಂಡು ನಗರಗಳಿಂದ ಮರಳಿರುವ ವಲಸಿಗರು ಆ ರಾಜ್ಯಗಳಿಗೆ ವಾಪಸ್ ಹೋಗಲು ಬಯಸುತ್ತಿಲ್ಲ. ನಮ್ಮ ರಾಜ್ಯದಲ್ಲಿಯೂ ಅದೇ ರೀತಿಯ ಕೆಲಸ ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ಬಿಹಾರದಲ್ಲಿ ಕೈಗಾರಿಕಾ ಉದ್ಯೋಗ ತೀರಾ ಕಡಿಮೆ ಪ್ರಮಾಣದಲ್ಲಿದೆ. ಈಗ ಹಳ್ಳಿಗಳು ಹಾಗೂ ಪಟ್ಟಣಗಳಲ್ಲಿರುವ ವಲಸಿಗರನ್ನು ಸಂಪರ್ಕಿಸಲು ಆರಂಭಿಸಿರುವ ರಾಜ್ಯ ಸರ್ಕಾರ, ಅವರಿಗೆ ಹಣಕಾಸಿನ ಸಹಾಯ ಮತ್ತು ಅವರ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ನೀಡುವುದಾಗಿ ಭರವಸೆ ನೀಡುತ್ತಿದೆ. ಆದರೆ ಅನೇಕ ಪ್ರಕರಣಗಳಲ್ಲಿ, ಮರಳಿ ಬಂದ ವಲಸಿಗರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಒಪ್ಪುತ್ತಿಲ್ಲ. ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಸಾಧ್ಯವಾಗುವಷ್ಟು ವೇತನದ ಕೆಲಸ ನೀಡಿ ಎಂದು ಬೇಡಿಕೆ ಇರಿಸುತ್ತಿದ್ದಾರೆ.

ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನಡೆಸಲು ಉದ್ದೇಶಿಸಿರುವ ಚುನಾವಣೆ ಕುತೂಹಲ ಕೆರಳಿಸಿದೆ. ಬಿಜೆಪಿ-ಜೆಡಿಯು-ಎಲ್‌ಜೆಪಿ ಮೈತ್ರಿಕೂಟ ಜನರ ಪ್ರಶ್ನೆಗಳನ್ನು ಯಾವ ರೀತಿ ಎದುರಿಸಿ ಚುನಾವಣೆಯ ಅಖಾಡಕ್ಕೆ ಇಳಿಯಲಿದೆ ನೋಡಬೇಕು.

English summary
Bihar Chief Minister Nitish Kumar may face five major issues in the upcoming assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X