• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
LIVE

Biden Inauguration live updates: ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡನ್ ಪ್ರಮಾಣವಚನ ಸ್ವೀಕಾರ

|

ವಾಷಿಂಗ್ಟನ್, ಜನವರಿ 20: ಅಮೆರಿಕ ಇಂದು ಹೊಸ ಬದಲಾವಣೆಗೆ ಕಾಲಿಡುತ್ತಿದೆ. ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷರಾಗಿ ನಾಲ್ಕು ವರ್ಷ ಆಡಳಿತ ನಡೆಸಿದ್ದ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಇಂದಿಗೆ ಅಧಿಕೃತವಾಗಿ ಅಂತ್ಯಗೊಳ್ಳುತ್ತಿದೆ. ಜೋ ಬೈಡನ್ ನೇತೃತ್ವದಲ್ಲಿ ಡೆಮಾಕ್ರಟಿಕ್ ಪಕ್ಷ ಪುನಃ ಆಡಳಿತದ ಚುಕ್ಕಾಣಿ ಹಿಡಿಯುತ್ತಿದೆ.

ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಭಾರತ ಮೂಲದ ಅಮೆರಿಕನ್ ಕಮಲಾ ಹ್ಯಾರಿಸ್ ಅವರು 49ನೇ ಉಪಾಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಏರುತ್ತಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಕಮಲಾ ಅವರದ್ದಾಗುತ್ತಿದೆ.

ಅಮೆರಿಕ ಅಧ್ಯಕ್ಷೀಯ ಇತಿಹಾಸದಲ್ಲಿಯೇ ಈ ರೀತಿಯ ಅಧಿಕಾರ ಬದಲಾವಣೆ ನಡೆದಿರಲಿಲ್ಲ. ತನ್ನ ಸೋಲನ್ನು ಒಪ್ಪಿಕೊಳ್ಳದ ಡೊನಾಲ್ಡ್ ಟ್ರಂಪ್, ಕಾನೂನು ಹೋರಾಟ, ಆರೋಪ, ಬೆದರಿಕೆಯ ತಂತ್ರಗಳನ್ನು ನಡೆಸಿಯೂ ಅದರಲ್ಲಿ ವಿಫಲರಾಗಿದ್ದರು. ಕೊನೆಯ ಪ್ರಯತ್ನವೆಂಬಂತೆ ಬೆಂಬಲಿಗರು ಸಂಸತ್ ಕಟ್ಟಡದ ಮೇಲೆ ದಾಳಿ ನಡೆಸಿ ಹಿಂಸಾಚಾರ ನಡೆಸಲು ಸಹ ಅವಕಾಶ ನೀಡಿದ್ದರು. ಇದೆಲ್ಲವೂ ವ್ಯರ್ಥವಾಗಿದ್ದು, ಕೊನೆಗೂ ಅನಿವಾರ್ಯವಾಗಿ ಅಧಿಕಾರ ಹಸ್ತಾಂತರ ನಡೆಸಲು ಮುಂದಾಗಿದ್ದಾರೆ.

US President Joe Bidens Inauguration 2021 LIVE Updates, Highlights in Kannada

ಆದರೆ, ಕೊನೆಯ ಹಂತದಲ್ಲಿ ಯಾವುದೇ ಘಟನೆಗಳು ನಡೆಯಬಹುದು ಎಂದು ಉದ್ಘಾಟನಾ ದಿನವಾದ ಬುಧವಾರ ಸಂಸತ್ತು, ಕಾರ್ಯಕ್ರಮದ ಸ್ಥಳ, ಸಂಸದರ ನಿವಾಸಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಇಡೀ ಜಗತ್ತಿನ ಗಮನ ಸೆಳೆದಿರುವ ಜೋ ಬೈಡನ್-ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ಹೇಗಿರಲಿದೆ? ಅದು ಹೇಗೆ ಜರುಗಲಿದೆ ಎಂಬ ನೇರ ಪ್ರಸಾರದ ಮಾಹಿತಿ ಇಲ್ಲಿ ಲಭ್ಯ.

Newest First Oldest First
12:50 AM, 21 Jan
ಸೇವೆ ಸಲ್ಲಿಸಲು ಸಿದ್ಧ ಎಂದು ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಮಲಾ ಹ್ಯಾರಿಸ್ ಮೊದಲ ಟ್ವೀಟ್ ಮಾಡಿದ್ದಾರೆ.
12:12 AM, 21 Jan
ಅಮೆರಿಕದ ನೂತನ ಅಧ್ಯಕ್ಷ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ರಾಹುಲ್ ಗಾಂಧಿ ಅಭಿನಂದಿಸಿದ್ದಾರೆ. ಪ್ರಜಾಪ್ರಭುತ್ವದ ಹೊಸ ಅಧ್ಯಾಯಕ್ಕಾಗಿ ಅಮೆರಿಕಕ್ಕೆ ಅಭಿನಂದನೆಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
11:44 PM, 20 Jan
ಕಮಲಾ ಹ್ಯಾರಿಸ್ ಅವರ ತಾಯಿಯ ಮೂಲ ಊರಾದ ತಮಿಳುನಾಡಿನ ತುಳಸೇಂದ್ರಪುರಂ ಗ್ರಾಮದಲ್ಲಿ ಕಮಲಾ ಹ್ಯಾರಿಸ್ ಪದಗ್ರಹಣಕ್ಕೂ ಮುನ್ನ ದೀಪಗಳನ್ನು ಹಚ್ಚಿ ಸಂಭ್ರಮಿಸಲಾಯಿತು.
11:34 PM, 20 Jan
ಅಮೆರಿಕದ ಮೊದಲ ರಾಷ್ಟ್ರೀಯ ಯುವ ಕವಿ ಅಮಂಡಾ ಗೋರ್ಮನ್ ಮಾತನಾಡಿ, ನಾವು ಭವಿಷ್ಯದ ಕಡೆಗೆ ನಮ್ಮ ಕಣ್ಣು ನೆಟ್ಟಿದ್ದರೆ, ಇತಿಹಾಸ ತನ್ನ ಕಣ್ಣನ್ನು ನಮ್ಮ ಕಡೆಗೆ ಇರಿಸಿರುತ್ತದೆ. ನಾವು ಸದುದ್ದೇಶದಿಂದ ಒಕ್ಕೂಟವನ್ನು ರಚಿಸಲು ಒಂದಾಗಿದ್ದೇವೆ ಎಂದರು.
11:12 PM, 20 Jan
ರಾಜಕೀಯ ತೀವ್ರಗಾಮಿತನ ಮತ್ತು ಆಂತರಿಕ ಉಗ್ರವಾದವನ್ನು ಸೋಲಿಸುವುದಾಗಿ ಬೈಡನ್ ಪ್ರತಿಜ್ಞೆ ಮಾಡಿದರು. ಅಮೆರಿಕದ ಜನತೆ ರಾಜಕೀಯ ತೀವ್ರಗಾಮಿತನ, ಬಿಳಿವರ್ಣದ ಶ್ರೇಷ್ಠತೆಯ ವ್ಯಸನ, ಆಂತರಿಕ ಭಯೋತ್ಪಾದನೆಗಳ ಹೆಚ್ಚಳವನ್ನು ಎದುರಿಸುತ್ತಿದ್ದಾರೆ. ಅದನ್ನು ನಾವು ಎದುರಿಸಬೇಕು. ನಾವು ಸೋಲಿಸುತ್ತೇವೆ ಎಂದರು.
11:10 PM, 20 Jan
ನಮ್ಮನ್ನು ವಿಭಜಿಸುವ ಶಕ್ತಿಗಳು ಪ್ರಬಲವಾಗಿವೆ ಮತ್ತು ಅವು ನಿಜ ಎನ್ನುವುದು ನನಗೆ ಗೊತ್ತು. ಆದರೆ ಅವು ಹೊಸದಲ್ಲ ಎಂದೂ ನನಗೆ ತಿಳಿದಿದೆ. ಜನಾಂಗೀಯ ನಿಂದನೆ, ಸ್ಥಳೀಯತೆ, ಭಯ, ಅಪನಗದೀಕರಣದಂತಹ ಸಮಾನ ಮತ್ತು ಕೆಟ್ಟ ವಾಸ್ತವಗಳು ನಮ್ಮನ್ನು ಹರಿದು ಹಂಚಿಹಾಕಿದೆ. ಇದರ ನಡುವೆ ಅಮೆರಿಕದ ಇತಿಹಾಸ ಸತತವಾಗಿ ಹೆಣಗಾಡಿದೆ ಎಂದರು.
11:04 PM, 20 Jan
ಉಪಾಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಿದ ಕಮಲಾ ಹ್ಯಾರಿಸ್ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ತಿಳಿಸಿದ್ದಾರೆ. ಭಾರತ-ಅಮೆರಿಕ ಸಂಬಂಧವನ್ನು ವೃದ್ಧಿಸುವ ಸಲುವಾಗಿ ಅವರೊಂದಿಗೆ ಮಾತುಕತೆ ನಡೆಸಲು ಕಾದಿರುವುದಾಗಿ ಮತ್ತು ಭಾರತ-ಅಮೆರಿಕ ಸಹಭಾಗಿತ್ವವು ನಮ್ಮ ಗ್ರಹಕ್ಕೆ ಪ್ರಯೋಜನಾಕಾರಿ ಎಂದು ತಿಳಿಸಿದ್ದಾರೆ.
10:59 PM, 20 Jan
'ನಾನು ನನ್ನ ಮಾತು ನೀಡುತ್ತೇನೆ. ನಾನು ಎಂದಿಗೂ ನಿಮ್ಮೊಂದಿಗೆ ಇರುತ್ತೇನೆ. ಅಧಿಕಾರದಿಂದ ಯೋಚಿಸುವುದಿಲ್ಲ. ಆದರೆ ಸಾಧ್ಯತೆಗಳ ಬಗ್ಗೆ ಆಲೋಚಿಸುತ್ತೇನೆ. ನಮ್ಮ ಪಡೆಗಳನ್ನು ದೇವರು ಕಾಪಾಡಲಿ' ಎಂದು ಬೈಡನ್ ಹೇಳಿದ್ದಾರೆ.
10:58 PM, 20 Jan
ಅಧ್ಯಕ್ಷನಾಗಿ ನನ್ನ ಮೊದಲ ನಡೆಯೇನೆಂದರೆ ಈ ಪಿಡುಗಿನ ಕಾರಣದಿಂದ ಜೀವ ಕಳೆದುಕೊಂಡ ಜನರಿಗಾಗಿ ಒಂದು ಕ್ಷಣ ಮೌನಾಚರಣೆಯ ಗೌರವ ಸಲ್ಲಿಸುವಲ್ಲಿ ನನ್ನೊಂದಿಗೆ ಸೇರಿಕೊಳ್ಳುವಂತೆ ಕೋರುವುದಾಗಿದೆ- ಬೈಡನ್
10:51 PM, 20 Jan
ಅಮೆರಿಕ ಪರೀಕ್ಷೆಗೆ ಒಳಪಟ್ಟಿದೆ ಮತ್ತು ನಾವು ದೃಢವಾಗಿ ಬಂದಿದ್ದೇವೆ. ನಮ್ಮ ಮೈತ್ರಿಕೂಟಗಳನ್ನು ದುರಸ್ತಿಪಡಿಸುತ್ತೇವೆ. ನಮ್ಮ ಉದಾಹರಣೆಗಳ ಶಕ್ತಿಯಿಂದ ಮುನ್ನಡೆಯಲಿದ್ದೇವೆ ಎಂದು ತಮ್ಮ ವಿದೇಶಿ ಮಿತ್ರರಿಗೆ ಬೈಡನ್ ಸಂದೇಶ ರವಾನಿಸಿದ್ದಾರೆ.
10:44 PM, 20 Jan
ನಮಗೆ ಬೆಂಬಲ ನೀಡದ ಎಲ್ಲರಿಗೂ ಇದು, ಕೇಳಿಸಿಕೊಳ್ಳಿ. ನೀವು ಈಗಲೂ ಒಪ್ಪದೆ ಹೋದರೂ ಪರವಾಗಿಲ್ಲ. ಇದೇ ಪ್ರಜಾಪ್ರಭುತ್ವ. ಆದರೆ ಅಸಮ್ಮತಿ ಎನ್ನುವುದು ಬೇರ್ಪಡುವಿಕೆಗೆ ಕಾರಣವಾಗಬಾರದು ಎಂದು ಬೈಡನ್ ಹೇಳಿದ್ದಾರೆ.
10:37 PM, 20 Jan
ಏಕತೆಯ ಸಂದೇಶವನ್ನು ಪುನರುಚ್ಚರಿಸಿದ ಬೈಡನ್, ಈ ಚಳಿಗಾಲದ ಗಂಡಾಂತರವನ್ನು ಎದುರಿಸಲು ತಮ್ಮ ಸರ್ಕಾರ ಸಾಕಷ್ಟು ಕೆಲಸ ಮಾಡಬೇಕಿದೆ. ಅಮೆರಿಕವನ್ನು ಸೇರಿಸುವುದು ಮತ್ತು ದೇಶವನ್ನಾಗಿ ಒಂದುಗೂಡಿಸುವುದು ತಮ್ಮ ಮೂಲ ಬಯಕೆಯಾಗಿದೆ. ಈ ಕಾರಣಕ್ಕಾಗಿ ನನ್ನ ಜತೆಗೂಡುವಂತೆ ಪ್ರತಿ ಅಮೆರಿಕನ್ನರಿಗೂ ಕೋರುತ್ತೇನೆ ಎಂದರು.
10:29 PM, 20 Jan
ಇದು ಅಮೆರಿಕನ್ನರ ದಿನ. ಇದು ಪ್ರಜಾಪ್ರಭುತ್ವದ ದಿನ. ಇಂದು ಈ ದಿಗ್ವಿಜಯವನ್ನು ಅಭ್ಯರ್ಥಿಯಾಗಿ ಅಲ್ಲ, ಆದರೆ ಪ್ರಜಾಪ್ರಭುತ್ವವಾಗಿ ಸಂಭ್ರಮಿಸುತ್ತಿದ್ದೇವೆ. ಈ ಸಮಯದಲ್ಲಿ ಪ್ರಜಾಪ್ರಭುತ್ವ ಗೆದ್ದಿದೆ- ಬೈಡನ್
10:28 PM, 20 Jan
ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಜೋ ಬೈಡನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ. ಭಾರತ ಮತ್ತು ಅಮೆರಿಕ ಕಾರ್ಯತಂತ್ರ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಅವರೊಂದಿಗೆ ಕೆಲಸ ಮಾಡಲು ಬಯಸಿರುವುದಾಗಿ ಅವರು ಹೇಳಿದ್ದಾರೆ.
10:21 PM, 20 Jan
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಜೋ ಬೈಡನ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಇದರೊಂದಿಗೆ ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡನ್ ಅಧಿಕಾರ ಸ್ವೀಕರಿಸಿದ್ದಾರೆ.
10:20 PM, 20 Jan
ಜೋ ಬೈಡನ್ ಪ್ರಮಾಣವಚನ ಸ್ವೀಕಾರ ಸಮಯ ಆರಂಭ.
10:18 PM, 20 Jan
ಖ್ಯಾತ ಗಾಯಕಿ ಜೆನಿಫರ್ ಲೋಪೆಜ್ 'ದಿಸ್ ಲ್ಯಾಂಡ್ ಈಸ್ ಯುವರ್ ಲ್ಯಾಂಡ್' ಎಂಬ ಜನಪ್ರಿಯ ಗೀತೆ ಹಾಡಿದರು.
10:13 PM, 20 Jan
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೋನಿಯಾ ಸೊಟೊಮೇಯರ್ ಅವರು ಅಮೆರಿಕದ ಮೊದಲ ಕಪ್ಪುವರ್ಣದ ಉಪಾಧ್ಯಕ್ಷೆಗೆ ಪ್ರಮಾಣವಚನ ಬೋಧಿಸಿದರು.
10:11 PM, 20 Jan
ಅಮೆರಿಕ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕಾರ ಆರಂಭವಾಗಿದೆ.
10:08 PM, 20 Jan
ಬೈಡನ್ ಪ್ರಮಾಣವಚನ ಸ್ವೀಕಾರದಲ್ಲಿ ಖ್ಯಾತ ಗಾಯಕಿ ಲೇಡಿ ಗಾಗಾ ರಾಷ್ಟ್ರ ಗೀತೆ ಹಾಡಿದರು.
10:05 PM, 20 Jan
ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರು ಕೆಲವೇ ಕ್ಷಣಗಳಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
10:03 PM, 20 Jan
ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಅವರು ಫ್ಲೋರಿಡಾದ ಪಾಮ್ ಬೀಚ್‌ಗೆ ಬಂದಿಳಿದಿದ್ದಾರೆ.
9:48 PM, 20 Jan
ಇಂದು ನಾನು ಇಲ್ಲಿ ಇರಲು, ನನಗಿಂತಲೂ ಮುಂಚೆ ಬಂದ ಮಹಿಳೆಯರು ಕಾರಣ ಎಂದು ತಮ್ಮನ್ನು ಬೆಳೆಸಿದ ತಾಯಿ, ಅಮೆರಿಕ ಇತಿಹಾಸದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಕಮಲಾ ಹ್ಯಾರಿಸ್ ನೆನಪಿಸಿಕೊಂಡಿದ್ದಾರೆ.
9:45 PM, 20 Jan
ಅಮೆರಿಕದಲ್ಲಿ ಹೊಸ ದಿನ ಎಂದು ಪ್ರಮಾಣವಚನಕ್ಕೂ ಮುನ್ನ ಜೋ ಬೈಡನ್ ಟ್ವೀಟ್ ಮಾಡಿದ್ದಾರೆ.
9:44 PM, 20 Jan
'ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಲು ಸಂತಸವಾಗುತ್ತಿದೆ' ಎಂದು ಜೋ ಬೈಡನ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿರುವ ಅಮೆರಿಕದಲ್ಲಿನ ಭಾರತದ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಹೇಳಿದ್ದಾರೆ.
9:29 PM, 20 Jan
ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಜೋ ಬೈಡನ್ ಅವರು ಪತ್ನಿ ಜಿಲ್ ಬೈಡನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
9:03 PM, 20 Jan
ಎರಡು ಬೈಬಲ್‌ಗಳನ್ನು ಬಳಸಿ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಒಂದು ಬೈಬಲ್ ತಮ್ಮ ಹಾಗೂ ಸಹೋದರಿ ಮಾಯಾ ಅವರಿಗೆ ಎರಡನೆಯ ತಾಯಿಯಂತೆ ಇದ್ದ ರೆಜಿನಾ ಶೆಲ್ಟನ್ ಅವರಿಗೆ ಸೇರಿದ್ದಾಗಿದೆ.
8:18 PM, 20 Jan
ಬೈಡನ್ ಅವರ ಪ್ರಮಾಣವಚನ ಸ್ವೀಕಾರ ನಡೆಯುವ ಸಂದರ್ಭದಲ್ಲಿ ಟ್ರಂಪ್ ಅವರು ಫ್ಲೋರಿಡಾದ ತಮ್ಮ ಮಾರ್-ಎ-ಲಾಗೋ ರೆಸಾರ್ಟ್‌ನಲ್ಲಿ ಸಮಯ ಕಳೆಯಲಿದ್ದಾರೆ. ಅಮೆರಿಕದ ಸುಮಾರು 150 ವರ್ಷಗಳ ಅಧ್ಯಕ್ಷೀಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ತಮ್ಮ ಉತ್ತರಾಧಿಕಾರಿಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರಾಗುತ್ತಿರುವ ಮೊದಲ ಅಧ್ಯಕ್ಷ ಎಂದೆನಿಸಿದ್ದಾರೆ.
7:58 PM, 20 Jan
ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಿಂದ ನಿರ್ಗಮಿಸುವ ಮುನ್ನ ಬೈಡನ್ ಅವರಿಗೆ ಪತ್ರವೊಂದನ್ನು ಉಳಿಸಿ ಹೋಗಿದ್ದಾರೆ. ಆದರೆ ಆ ಪತ್ರದಲ್ಲಿ ಏನಿದೆ ಎನ್ನುವುದು ಬಹಿರಂಗವಾಗಿಲ್ಲ.
7:41 PM, 20 Jan
ಅಮೆರಿಕದ ನಿರ್ಗಮಿತ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಬೈಡನ್ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪೆನ್ಸ್ ಅವರು ಡೊನಾಲ್ಡ್ ಟ್ರಂಪ್ ಬೀಳ್ಕೊಡುಗೆ ಸಮಾರಂಭಕ್ಕೆ ಗೈರು ಹಾಜರಾಗಿದ್ದರು.
READ MORE

English summary
US Presidential Inauguration 2021 Live Updates in Kannada: Check out the live updates, breaking news, photos and videos on Joe Biden inauguration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X