• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಮನಗರ: ನಾಲ್ಕು ವರ್ಷಗಳ ಬಳಿಕ ನಲ್ಲಿಗುಡ್ಡೆ ಕೆರೆಯಲ್ಲಿ ಜಲಸಂಚಲನ

|
Google Oneindia Kannada News

ರಾಮನಗರ, ಅಕ್ಟೋಬರ್ 23: ಹಿಂಗಾರು ಮಳೆಯ ಚಮತ್ಕಾರಕ್ಕೆ ಭರ್ತಿಯಾಗದೆ ಉಳಿದಿದ್ದ ಕೆರೆಗಳು ಭರ್ತಿಯಾಗಲಾರಂಭಿಸಿವೆ. ಇದೀಗ ರಾಮನಗರ ಜಿಲ್ಲೆಯ ಬಿಡದಿ ಪಟ್ಟಣದ ಹೊರವಲಯದಲ್ಲಿರುವ ನಲ್ಲಿಗುಡ್ಡೆ ಕೆರೆ ನಾಲ್ಕು ವರ್ಷಗಳ ಬಳಿಕ ಮತ್ತೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದ್ದು, ಈ ಸುಂದರ ದೃಶ್ಯ ಸುತ್ತಮುತ್ತಲ ಜನರನ್ನು ಆಕರ್ಷಿಸಲಾರಂಭಿಸಿದೆ.

ಕೆರೆ ತುಂಬಿ ದಂಡೆಯ ಮೇಲೆ ಜಲಧಾರೆಯಾಗಿ ಧುಮ್ಮಿಕ್ಕಿ ಹರಿದು ಹೋಗುತ್ತಿರುವ ನೀರ ಚೆಲುವಿಗೆ ಮರಳಾದ ನಿಸರ್ಗ ಪ್ರೇಮಿಗಳು ಇತ್ತ ದೌಡಾಯಿಸುತ್ತಿದ್ದಾರೆ. ಈ ಕೆರೆಯು ಬಿಡದಿ ಪಟ್ಟಣ ಹಾಗೂ ಈ ಭಾಗದ ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರಿನ ಆಸರೆಯಾಗಿದೆ. ಇರುವ ಕೆರೆಗಳ ಪೈಕಿ ಶುದ್ಧತೆಯನ್ನು ಕಾಪಾಡಿಕೊಂಡಿರುವ ಈ ಕೆರೆ, ಭರ್ತಿಯಾಗಿ ಚಂದ್ರಾಕಾರದಲ್ಲಿ ಹರಿದು ಹೋಗುತ್ತಿರುವ ದೃಶ್ಯ ಮನಮೋಹಕವಾಗಿದೆ.

 ಕೆರೆಯ ಚೆಲುವಿಗೆ ಮಾರುಹೋದ ಪ್ರವಾಸಿಗರು

ಕೆರೆಯ ಚೆಲುವಿಗೆ ಮಾರುಹೋದ ಪ್ರವಾಸಿಗರು

ಇನ್ನು ಕೆರೆ ಭರ್ತಿಯಾಗಿರುವ ಕುರಿತಂತೆ ನೋಡುವುದಾದರೆ 2004ರಲ್ಲಿ ಒಮ್ಮೆ ತುಂಬಿ ಕೋಡಿ ಹರಿದಿದ್ದು ಬಿಟ್ಟರೆ ಆ ನಂತರ ಭರ್ತಿಯಾಗಿರಲಿಲ್ಲ. ಆದರೆ 2017ರಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿದಿತ್ತು. ಆ ಬಾರಿ ಭರ್ತಿಯಾಗಿತ್ತು. ಆದಾದ ನಂತರ ನಾಲ್ಕು ವರ್ಷಕ್ಕೆ ಈ ಬಾರಿಯೇ ಭರ್ತಿಯಾಗಿರುವುದಾಗಿದೆ. ಹೀಗಾಗಿ ಗತ ವೈಭವ ಮರಳಿ ಬಂದಿದ್ದು, ಕೆರೆ ಭರ್ತಿಯಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಪ್ರವಾಸಿಗರು ಇತ್ತ ಮುಖ ಮಾಡಿದ್ದು, ಒಂದಷ್ಟು ಸಮಯವನ್ನು ಕೆರೆಯ ಚೆಲುವನ್ನು ಆಸ್ವಾದಿಸುತ್ತಾ ಕಳೆಯುತ್ತಿದ್ದಾರೆ.

 380 ಹೆಕ್ಟೇರ್ ಪ್ರದೇಶಕ್ಕೆ ನೀರಿನ ಸೌಲಭ್ಯ

380 ಹೆಕ್ಟೇರ್ ಪ್ರದೇಶಕ್ಕೆ ನೀರಿನ ಸೌಲಭ್ಯ

ನಲ್ಲಿಗುಡ್ಡೆ ಕೆರೆ ಭರ್ತಿಯಾದರೆ ಸುಮಾರು 380 ಹೆಕ್ಟೇರ್ ಪ್ರದೇಶಕ್ಕೆ ನೀರಿನ ಸೌಲಭ್ಯ ದೊರೆಯಲಿದೆ. ಕೆರೆಯು ಸುಮಾರು 216.45 ದಶಲಕ್ಷ ಘನ ಅಡಿಗಳಷ್ಟು(ಎಂಸಿಎಫ್‌ಸಿ) ಪ್ರಮಾಣದ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ತಗ್ಗು ಪ್ರದೇಶದಲ್ಲಿರುವ ಕಾರಣ ಸುತ್ತಲಿನ 67 ಕಿ.ಮೀ ವ್ಯಾಪ್ತಿಯಲ್ಲಿ ಮಳೆ ಬಂದರೆ ಅಲ್ಲಿನ ನೀರು ಹಳ್ಳ- ಕೊಳ್ಳಗಳ ಮೂಲಕ ಹರಿದು ಬರುತ್ತದೆ. ಕೆರೆಗೆ 25 ಅಡಿ ಎತ್ತರದ ಏರಿಯನ್ನು ಕಟ್ಟಿ ನೀರನ್ನು ಸಂಗ್ರಹಿಸಿಡಲಾಗುತ್ತಿದೆ. ಇಲ್ಲಿ ನೀರು ಸಂಗ್ರಹಣೆಯಾಗುವುದರಿಂದ ಬರೀ ನೀರು ಮಾತ್ರ ಸರಬರಾಜಾಗದೆ, ಸುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲವೂ ವೃದ್ಧಿಯಾಗಲಿದೆ.

 ಕೆರೆಯಲ್ಲಿ 25 ಅಡಿಯಷ್ಟು ನೀರು ಸಂಗ್ರಹ

ಕೆರೆಯಲ್ಲಿ 25 ಅಡಿಯಷ್ಟು ನೀರು ಸಂಗ್ರಹ

ಸದ್ಯ ಕೆರೆಯಲ್ಲಿ 25 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಒಳಹರಿವಿನಷ್ಟೇ ನೀರು ಕೋಡಿಯ ಮೂಲಕ ಹೊರ ಹೋಗುತ್ತಿದೆ. ಈ ನೀರು ಬಾನಂದೂರು, ಇಟ್ಟಮಡು ಗ್ರಾಮಗಳ ಮೂಲಕ ಸಾಗಿ ವೃಷಭಾವತಿ ನದಿ ಸೇರಿ ಬಳಿಕ ಕನಕಪುರದ ಸಮೀಪ ಅರ್ಕಾವತಿ ನದಿಯೊಂದಿಗೆ ಜತೆಯಾಗಿ ಮೇಕೆದಾಟು ಬಳಿ ಕಾವೇರಿ ನದಿಯಲ್ಲಿ ಸಂಗಮವಾಗುತ್ತದೆ.

ಈ ಕೆರೆಯನ್ನು ಕಳೆದ ಏಳೆಂಟು ವರ್ಷಗಳ ಹಿಂದೆ ಕೋಕಾ ಕೋಲ ಕಂಪನಿ ವತಿಯಿಂದ 55 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆಸಿ ಹೂಳು ತೆಗೆದು, ಏರಿಯನ್ನೂ ಎತ್ತರಿಸಲಾಗಿತ್ತು. 2017ರಲ್ಲಿ ಕೆರೆ ತುಂಬಿದರೂ ತೂಬು ದುಸ್ಥಿತಿಯಲ್ಲಿದ್ದ ಕಾರಣ ನೀರು ವ್ಯರ್ಥವಾಗಿ ನಾಲೆಯಲ್ಲಿ ಹರಿದು ಪೋಲಾಗಿತ್ತು. ಈಗಲೂ ಅದು ಮುಂದುವರೆದಿದ್ದು, ನೀರು ಪೋಲಾಗುವುದನ್ನು ತಡೆಯುಂತೆ ನಾಗರಿಕರು ಮನವಿ ಮಾಡಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಸಾಮಾಜಿಕಕ ಕಾರ್ಯಕರ್ತ ಮುತ್ತಣ್ಣ, ಹತ್ತಾರು ವರ್ಷಗಳಿಂದ ಖಾಲಿಯಾಗಿದ್ದ ಕೆರೆ- ಕಟ್ಟೆಗಳು ಇದೀಗ ಮಳೆರಾಯನ ಕೃಪೆಯಿಂದ ಭರ್ತಿಯಾಗಿವೆ. ಕೆರೆಗಳಲ್ಲಿರುವ ನೈಸರ್ಗಿಕ ನೀರನ್ನು ಸಂರಕ್ಷಿಸಲು ಜಿಲ್ಲಾ ಮತ್ತು ತಾಲೂಕು ಆಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

 ನೀರಿನ ಸಂರಕ್ಷಣೆಗೆ ಆದ್ಯತೆ ನೀಡಲಿ

ನೀರಿನ ಸಂರಕ್ಷಣೆಗೆ ಆದ್ಯತೆ ನೀಡಲಿ

2017ರಲ್ಲಿ ನಲ್ಲಿಗುಡ್ಡೆ ಕೆರೆ ತುಂಬಿದರೂ ಸಹ ಅಮೂಲ್ಯವಾದ ನೀರನ್ನು ಸಂರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಕೊಳವೆ ಬಾವಿಗಳಿಂದ ಪ್ಲೋರೈಡ್ ಸಹಿತ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಕೆರೆಯ ನೀರನ್ನು ಸಂರಕ್ಷಿಸಿ ಶುದ್ಧೀಕರಿಸಿ ಸರಬರಾಜು ಮಾಡುವುದರಿಂದ ಸುಮಾರು ಮೂರ್ನಾಲ್ಕು ವರ್ಷಗಳ ಕಾಲವಾದರೂ ಕುಡಿಯುವ ನೀರಿಗೆ ಅಭಾವ ಎದುರಾಗದಂತೆ ನೋಡಿಕೊಳ್ಳಬಹುದು ಎಂದು ಮುತ್ತಣ್ಣ ಅಭಿಪ್ರಾಯಪಟ್ಟಿದ್ದಾರೆ.

ಕೆರೆಯ ತೂಬಿನಿಂದ ನೀರು ಹಗಲು- ರಾತ್ರಿ ನಿರಂತರವಾಗಿ ಹರಿದು ಹೋಗುತ್ತಿದೆ. ನೀರಿನ ಹೊರ ಹರಿವು ನಿಲ್ಲಿಸಿದ್ದರೆ, ಇಷ್ಟರಲ್ಲಿ ಕೆರೆ ಕೋಡಿ ಬೀಳುವ ಹಂತಕ್ಕೆ ಬರುತ್ತಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ವ್ಯರ್ಥವಾಗಿ ಹರಿದು ಪೋಲಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ನೀರಿನ ಹೊರ ಹರಿವನ್ನು ನಿಲ್ಲಿಸಬೇಕು. ಹಾಗೂ ಕೋಡಿ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

English summary
After four years, in Bidadi outskirts of Ramanagara district Nalligudde Lake Filled again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X