ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡಿನಲ್ಲಿ ಶ್ರದ್ಧಾ ಭಕ್ತಿಯ ಭೂಮಿ ಹುಣ್ಣಿಮೆ; ಹೇಗಿರುತ್ತೆ ಸಿದ್ಧತೆ? ಆಚರಣೆ ವಿಧಾನವೇನು?

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 20: ಮಲೆನಾಡಿನ ರೈತರು ಶ್ರದ್ಧಾ ಭಕ್ತಿಯಿಂದ ಭೂಮಿ ಹುಣ್ಣಿಮೆ (ಶೀಗಿ ಹುಣ್ಣಿಮೆ) ಯನ್ನು ಬುಧವಾರ (ಅಕ್ಟೋಬರ್ 20) ದಂದು ಆಚರಿಸಿದರು. ಹೊಲದಲ್ಲಿ ಬೆಳೆದು ನಿಂತ ಫಸಲಿಗೆ ಪೂಜೆ ಸಲ್ಲಿಸಿ, ಉತ್ತಮ ಬೆಳೆಗಾಗಿ ಪ್ರಾರ್ಥಿಸಿದರು. ಮಲೆನಾಡು ಭಾಗದ ರೈತರು ಆಚರಿಸುವ ಶೀಗಿ ಹುಣ್ಣಿಮೆ ಅಥವಾ ಭೂಮಿ ಹುಣ್ಣಿಮೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ.

ತುಂಬು ಗರ್ಭಿಣಿಗೆ ಸೀಮಂತ ಶಾಸ್ತ್ರ ಮಾಡುವಂತೆ ಭೂಮಿ ತಾಯಿಗೆ ಪೂಜೆ ಸಲ್ಲಿಸಲಾಗುತ್ತದೆ. ವಿಶೇಷ ಖಾದ್ಯಗಳನ್ನು ತಯಾರಿಸಿ, ಭೂ ಮಣ್ಣಿ ಬುಟ್ಟಿಗಳಲ್ಲಿ ಕೊಂಡೊಯ್ದು ಎಡೆ ಇಡಲಾಗುತ್ತದೆ. ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಹಬ್ಬದ ಅಡುಗೆಯನ್ನು ಎಲ್ಲೆಡೆ ಬೀರಲಾಗುತ್ತದೆ.

ಮನೆಯವರೆಲ್ಲ ಹೊಲದಲ್ಲೇ ಕುಳಿತು ಊಟ ಮಾಡಿ ಮನೆಗೆ ಮರಳುತ್ತಾರೆ. ಅನ್ನದಾತರು ಶ್ರದ್ಧಾ ಭಕ್ತಿಯಿಂದ ಈ ಪೂಜೆ ಸಲ್ಲಿಸುತ್ತಾರೆ. ಭೂಮಿ ತಾಯಿಗೆ ವಿಶೇಷ ಗೌರವ ಸಲ್ಲಿಸುವ ಆಚರಣೆ ಇದಾಗಿದೆ. ಇದಕ್ಕಾಗಿ ಒಂದು ವಾರದ ಸಿದ್ಧತೆಯೂ ಇರಲಿದೆ.

 ಭೂಮಣ್ಣಿ ಬುಟ್ಟಿ ತಯಾರಿ

ಭೂಮಣ್ಣಿ ಬುಟ್ಟಿ ತಯಾರಿ

ಭೂಮಿ ಹುಣ್ಣಿಮೆಯಲ್ಲಿ ಭೂಮಣ್ಣಿ ಬುಟ್ಟಿಗೆ ವಿಶೇಷ ಸ್ಥಾನ. ಬುಟ್ಟಿಗೆ ಸಗಣಿ, ಕೆಮ್ಮಣ್ಣು ಹಚ್ಚಲಾಗುತ್ತದೆ. ಅದರ ಮೇಲೆ ಅಕ್ಕಿ ಹಿಟ್ಟಿನಲ್ಲಿ ಹಸೆ ಚಿತ್ತಾರಗಳನ್ನು ಬಿಡಿಸಲಾಗುತ್ತದೆ. ಒಂದು ದೊಡ್ಡ ಬುಟ್ಟಿ, ಮತ್ತೊಂದು ಚಿಕ್ಕ ಬುಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಎರಡು ಬುಟ್ಟಿಗಳಿಗೆ ಮಹಿಳೆಯರು ಅಲಂಕಾರ ಮಾಡುತ್ತಾರೆ. ದಸರಾ ಹಬ್ಬ ಮುಗಿಯುತ್ತಿದ್ದಂತೆ ಭೂಮಣ್ಣಿ ಬುಟ್ಟಿ ಸಿದ್ಧತಾ ಕಾರ್ಯ ಶುರುವಾಗಲಿದೆ.

 ಇಡೀ ರಾತ್ರಿ ಅಡುಗೆ ಸಂಭ್ರಮ

ಇಡೀ ರಾತ್ರಿ ಅಡುಗೆ ಸಂಭ್ರಮ

ಭೂಮಿ ಹುಣ್ಣಿಮೆ ಪೂಜೆ ಹಿನ್ನೆಲೆ ಮಹಿಳೆಯರು ರಾತ್ರಿ ಪೂರ್ತಿ ಅಡುಗೆ ಮಾಡುತ್ತಾರೆ. ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ. ಹಲವು ತರಕಾರಿಗಳು, ಸೊಪ್ಪುಗಳನ್ನು ಹಾಕಿ ಬೇಯಿಸಿ ಹಚ್ಚಂಬಲಿ ತಯಾರಿ ಮಾಡುತ್ತಾರೆ. ಹಚ್ಚಂಬಲಿಯನ್ನು ಬುಟ್ಟಿಯಲ್ಲಿ ಇರಿಸಿಕೊಂಡು, ಪೂಜೆಯಾದ ಬಳಿಕ ಗದ್ದೆಯ ತುಂಬೆಲ್ಲ ಬೀರಲಾಗುತ್ತದೆ. ‘ಹಚ್ಚಂಬಲಿ.. ಹಾಲಂಬಲಿ.. ಗುಡ್ಡದ ಮೇಲಿನ ನೂರೊಂದು ಕುಡಿ ಭೂ ತಾಯಿ ಬಂದು ಉಂಡೋಗಲಿ' ಎಂದು ಹಾಡುತ್ತ ಹಚ್ಚಂಬಲಿಯನ್ನು ಬೀರಲಾಯಿತು.

 ಫಸಲಿಗೆ ತಾಳಿ ಕಟ್ಟುತ್ತಾರೆ

ಫಸಲಿಗೆ ತಾಳಿ ಕಟ್ಟುತ್ತಾರೆ

ಬೆಳೆದು ನಿಂತ ಫಸಲಿಗೆ ಒಂದು ಕಡೆಯಲ್ಲಿ ಪುಟ್ಟ ಮಂಟಪ ನಿರ್ಮಿಸಿ, ಹೂವು ಕಟ್ಟಿ, ಬಾಳೆಗೊನೆಯನ್ನು ನಿಲ್ಲಿಸಿ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಫಸಲಿಗೆ ತಾಳಿಯನ್ನು ಕಟ್ಟಕಲಾಗುತ್ತದೆ. ಕೆಲವು ಕಡೆ ಮಹಿಳೆಯರು ತಮ್ಮದೇ ತಾಳಿಯನ್ನು ತೆಗೆದು ಭೂಮಿ ತಾಯಿಗೆ ಕಟ್ಟುತ್ತಾರೆ. ಉಳಿದ ಕಡೆಯಲ್ಲಿ ದೇವರ ಮನೆಯಲ್ಲಿರಿಸಿದ ತಾಳಿಯನ್ನು ಫಸಲಿಗೆ ಕಟ್ಟಲಾಗುತ್ತದೆ.

 ಕಾಗೆ, ಇಲಿಗಳಿಗೆ ಎಡೆ

ಕಾಗೆ, ಇಲಿಗಳಿಗೆ ಎಡೆ

ಭೂಮಿ ಹುಣ್ಣಿಮೆಯಂದು ರೈತರು ಕಾಗೆಗಳು, ಇಲಿಗಳಿಗೆ ಎಡೆ ಇಡುತ್ತಾರೆ. ನಿಧನರಾದ ಕುಟುಂಬದ ಹಿರಿಯರಿಗೆ ಎಡೆ ಅರ್ಪಿಸಲಾಗುತ್ತದೆ. ಅದಕ್ಕಾಗಿ ಕಾಗೆಗಳಿಗೆ ಒಂದೆಡೆ ಎಡೆ ಇಡಲಾಗುತ್ತದೆ. ಇನ್ನು ಬೆಳೆ ಹಾನಿ ಮಾಡುವ ಇಲಿಗಳಿಗೂ ಎಡೆಯಲ್ಲಿ ಪಾಲು ಕೊಡಲಾಗುತ್ತದೆ. ತಮ್ಮ ಬೆಳೆಗಳನ್ನು ಹಾನಿ ಮಾಡಬೇಡ ಎಂದು ಪ್ರಾರ್ಥಿಸಿ ರೈತರು ಇಲಿಗಳಿಗೆ ಎಡೆ ಅರ್ಪಿಸುತ್ತಾರೆ.

ಪೂಜೆಗೆ ತಂದ ಕಡಬನ್ನು ಗದ್ದೆಯ ಒಂದು ಭಾಗದಲ್ಲಿ ಹೂಳಲಾಗುತ್ತದೆ. ಭತ್ತದ ಕೊಯ್ಲಿನ ಸಂದರ್ಭ ಈ ಕಡಬನ್ನು ಹೊರಗೆ ತೆಗೆಯುತ್ತಾರೆ. ಆ ದಿನ ಅಡುಗೆ ವೇಳೆ ಆ ಕಡಬು ಹಾಕಲಾಗುತ್ತದೆ. ಕೊಯ್ಲಿಗೆ ಬಂದವರಿಗೆಲ್ಲ ಪ್ರಸಾದದ ರೀತಿಯಲ್ಲಿ ಕೊಡಲಾಗುತ್ತದೆ.

 ಒಗ್ಗೂಡಿ ಊಟ ಮಾಡುತ್ತಾರೆ

ಒಗ್ಗೂಡಿ ಊಟ ಮಾಡುತ್ತಾರೆ

ಭೂಮಿ (ಶೀಗಿ) ಹುಣ್ಣೆಮೆಯನ್ನು ರೈತ ಕುಟುಂಬಗಳು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ದೂರದೂರುಗಳಲ್ಲಿ ಇರುವ ಕುಟುಂಬದ ಸದಸ್ಯರು ಪೂಜೆಗಾಗಿ ಊರಿಗೆ ಮರಳುತ್ತಾರೆ. ಎಲ್ಲರೂ ಒಗ್ಗೂಡಿ ಹೊಲಗಳಿಗೆ ತೆರಳಿ ಪೂಜೆ ಸಲ್ಲಿಸಿ, ಒಟ್ಟಿ ಕುಳಿತು ಹೊಲದಲ್ಲಿ ಊಟ ಮಾಡುತ್ತಾರೆ. ಉತ್ತಮ ಬೆಳೆ ನೀಡುವಂತೆ ಎಲ್ಲರೂ ಭೂಮಿ ತಾಯಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಕೃಷಿ ಚಟುವಟಿಕೆ ಮತ್ತು ನಿಸರ್ಗಕ್ಕೆ ಪೂಜನೀಯ ಸ್ಥಾನ ನೀಡಿ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಆಧುನಿಕತೆಯ ಅಬ್ಬರದ ನಡುವೆಯು, ಭೂಮಿ ಪೂಜೆ ಸಂಪ್ರದಾಯ ಮುಂದುವರೆಯುತ್ತಿದೆ. ಹೆಚ್ಚು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ.

 ಶುಭಾಶಯ ತಿಳಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಶುಭಾಶಯ ತಿಳಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಸರ್ವರಿಗೂ ಶೀಗಿ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು. ಅನ್ನದಾತನ ಸಂಭ್ರಮದ ದಿನವಾದ ಇಂದು ಸಮಸ್ತ ರೈತರ ಬಾಳು ಸುಖ, ಶಾಂತಿ ಹಾಗೂ ಸಮೃದ್ಧಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

Recommended Video

ಧೋನಿ ತಂಡಕ್ಕೆ ವಾಪಸ್ ಬಂದಿರೋದಕ್ಕೆ KL ರಾಹುಲ್ ಹಾಕೊಂಡಿರೋ ಸ್ಕೆಚ್ ಏನು? | Oneindia Kannada

English summary
Karnataka farmers specially malnad region performed worships for their land as a ritual of Bhoomi Hunnime Pooja today. Read on to know Bhoomi Hunnime History, Rituals and Significance in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X