• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರಿಗೆ ಭೇಟಿ ನೀಡಿದರೆ ರೇಷ್ಮೆ ಸೀರೆ ಖರೀದಿಸಲು ಮರೆಯದಿರಿ...

|

ಮೈಸೂರು, ಸೆಪ್ಟೆಂಬರ್ 20: ಮೈಸೂರು ಸಿಲ್ಕ್ ಎಂದರೆ ಸಾಕು ಎಲ್ಲ ಹೆಂಗಳೆಯರು ಅದರತ್ತ ಕುತೂಹಲದ ನೋಟ ಬೀರುತ್ತಾರೆ. ಅಷ್ಟೇ ಅಲ್ಲದೆ, ತಮ್ಮ ಬದುಕಿನ ಅವಧಿಯಲ್ಲಿ ಒಮ್ಮೆಯಾದರೂ ಈ ಸೀರೆಯನ್ನುಡಬೇಕೆಂದು ಬಯಸುತ್ತಾರೆ. ಹೀಗಾಗಿಯೇ ಮೈಸೂರ್ ಸಿಲ್ಕ್ ಸೀರೆ ಕೇವಲ ಮೈಸೂರು ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಗಮನ ಸೆಳೆಯುತ್ತಿದೆ.

ದೂರದಿಂದ ಪ್ರವಾಸಕ್ಕಾಗಿ ಬರುವ ಬಹಳಷ್ಟು ಪ್ರವಾಸಿಗರು ಮೈಸೂರ್ ಸಿಲ್ಕ್ ಸೀರೆಯ ಮಹತ್ವವನ್ನು ಅರಿತು ಅದನ್ನು ಖರೀದಿಸಿ ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಇಂತಹ ಮಹತ್ವ ಹೊಂದಿರುವ ರೇಷ್ಮೆ ಸೀರೆ ತಯಾರಿಕೆಯನ್ನು ಮೈಸೂರಿನಲ್ಲಿ ಆರಂಭಿಸಿದ್ದು ಕೂಡಾ ಒಂದು ಆಕಸ್ಮಿಕ ಸಂದರ್ಭದಿಂದ ಎಂದರೆ ತಪ್ಪಾಗಲಾರದು.

ಮೈಸೂರು ಸಿಲ್ಕ್ ಸೀರೆ ಹಿಂದಿದೆ ಕುತೂಹಲಕಾರಿ ಕಥೆ

1912ರಲ್ಲಿ ಬ್ರಿಟನ್ನಲ್ಲಿ ನಡೆದ ರಾಣಿ ವಿಕ್ಟೋರಿಯಾ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವಕ್ಕೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ತೆರಳಿದ್ದರು. ಆಗ ಅಲ್ಲಿನ ರಾಜ ಮನೆತನದವರು ಧರಿಸಿದ್ದ ಯಂತ್ರ ನಿರ್ಮಿತ ರೇಷ್ಮೆ ವಸ್ತ್ರಗಳು ಅವರ ಗಮನಸೆಳೆಯಿತು.

23 ವಿದ್ಯುತ್ ಮಗ್ಗಗಳನ್ನು ಮೈಸೂರಿಗೆ ತರಿಸಿದ ಒಡೆಯರು

23 ವಿದ್ಯುತ್ ಮಗ್ಗಗಳನ್ನು ಮೈಸೂರಿಗೆ ತರಿಸಿದ ಒಡೆಯರು

ಇದನ್ನು ಮೈಸೂರಿನಲ್ಲೇ ಏಕೆ ತಯಾರಿಸಬಾರದು ಎಂದು ಆಲೋಚಿಸಿದ ಅವರು ಆ ಕುರಿತಂತೆ ಮಾಹಿತಿ ಪಡೆದು, ಸ್ವಿಟ್ಜರ್ಲ್ಯಾಂಡ್ ನಿಂದ 23 ವಿದ್ಯುತ್ ಮಗ್ಗಗಳನ್ನು ಮೈಸೂರಿಗೆ ತರಿಸಿಕೊಂಡು, ರೇಷ್ಮೆ ಸೀರೆ ತಯಾರಿಸುವ ಕಾರ್ಖಾನೆಗೆ ಚಾಲನೆ ನೀಡಿದರು.

ಅವತ್ತಿನಿಂದ ಇವತ್ತಿನವರೆಗೂ ಮೈಸೂರು ಮಾನಂದವಾಡಿ ರಸ್ತೆಯಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ ಕಾರ್ಖಾನೆ ಹಲವು ರೀತಿಯ ರೇಷ್ಮೆ ಸೀರೆಗಳನ್ನು ತಯಾರು ಮಾಡುತ್ತಾ ತನ್ನದೇ ಆದ ಹೆಸರನ್ನು ಉಳಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಶೇಕಡ ನೂರರಷ್ಟು ಉತ್ತಮ ರೇಷ್ಮೆ ಮತ್ತು ಚಿನ್ನದ ಜರಿ ಮಿಶ್ರಣದಿಂದ ಸೀರೆ ತಯಾರಾಗುತ್ತಿರುವುದಾಗಿದೆ.

ಭಾರತದ ಮೊದಲ ರೇಷ್ಮೆ ಉತ್ಪಾದನಾ ಘಟಕ ಮೈಸೂರು

ಭಾರತದ ಮೊದಲ ರೇಷ್ಮೆ ಉತ್ಪಾದನಾ ಘಟಕ ಮೈಸೂರು

ಭಾರತದ ಮೊದಲ ರೇಷ್ಮೆ ಉತ್ಪಾದನಾ ಘಟಕವಾದ ಮೈಸೂರು ಸಿಲ್ಕ್ ನೇಯ್ಗೆ ಕಾರ್ಖಾನೆ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಶನ್ ಆಗಿ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ.

ಹಾಗೆ ನೋಡಿದರೆ ಮೈಸೂರು ರಾಜ್ಯದಲ್ಲಿ ರೇಷ್ಮೆಯನ್ನು ಟಿಪ್ಪು ಸುಲ್ತಾನ್ ಪರಿಚಯಿಸಿದರೂ ಅದಕ್ಕೊಂದು ಉದ್ಯಮದ ಮಾನ್ಯತೆ ನೀಡಿ ಜಗದ್ವಿಖ್ಯಾತವಾಗುವಂತೆ ಮಾಡಿದವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ಕೊಡುಗೆಯನ್ನು ನಾವು ಮರೆಯುವಂತಿಲ್ಲ.

ಶುಭ ಸಮಾರಂಭಗಳಲ್ಲಿ ಮೈಸೂರು ಸಿಲ್ಕ್ ಸೀರೆಗೆ ಪ್ರಾಮುಖ್ಯತೆ

ಶುಭ ಸಮಾರಂಭಗಳಲ್ಲಿ ಮೈಸೂರು ಸಿಲ್ಕ್ ಸೀರೆಗೆ ಪ್ರಾಮುಖ್ಯತೆ

ಇವತ್ತಿಗೂ ಮದುವೆ ಇನ್ನಿತರ ಯಾವುದೇ ಶುಭ ಸಮಾರಂಭಗಳಲ್ಲಿ ಮೈಸೂರು ಸಿಲ್ಕ್ ಸೀರೆಯನ್ನುಟ್ಟು ಭಾಗವಹಿಸುವುದೇ ಮಹಿಳೆಯರಿಗೆ ಎಲ್ಲಿಲ್ಲದ ಸಂಭ್ರಮವಾಗಿದ್ದು, ಸಂಸ್ಕೃತಿಯ ಪ್ರತೀಕವಾಗಿದೆ ಎಂದರೂ ತಪ್ಪಾಗಲಾರದು.

ಸರ್ಕಾರಿ ಅಧೀನದಲ್ಲಿರುವ ಕಾರ್ಖಾನೆ (ಕೆಎಸ್ಐಸಿ)ಯಲ್ಲಿ ಪೈಪೋಟಿಗೆ ತಕ್ಕಂತೆ ವಿವಿಧ ಸೀರೆಗಳನ್ನು ತಯಾರಿಸಲಾಗುತ್ತಿದೆ. ಶುದ್ಧ ಚಿನ್ನದ ಜರಿಯೊಂದಿಗೆ ಪರಿಪೂರ್ಣ ಶುದ್ಧ ರೇಷ್ಮೆಯ ಸೀರೆ ತಯಾರಿಸುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ. ಇವತ್ತು ರೇಷ್ಮೆ ನೂಲು ತೆಗೆಯುವುದರಿಂದ ಆರಂಭವಾಗಿ ವಿವಿಧ ಬಣ್ಣಗಳಲ್ಲಿ ಹಾಗೂ ವಿನ್ಯಾಸಗಳಲ್ಲಿ ಶುದ್ಧ ರೇಷ್ಮೆ ಸೀರೆಗಳನ್ನು ತಯಾರಿಸಲಾಗುತ್ತಿದೆ.

300ಕ್ಕೂ ಹೆಚ್ಚು ವರ್ಣರಂಜಿತ ಮಾದರಿಯ ಸೀರೆ ತಯಾರು

300ಕ್ಕೂ ಹೆಚ್ಚು ವರ್ಣರಂಜಿತ ಮಾದರಿಯ ಸೀರೆ ತಯಾರು

ಮೈಸೂರು ಸಿಲ್ಕ್ ಸೀರೆಯು ಹಲವು ರೀತಿಯ ವಿಶೇಷತೆಗಳನ್ನು ಹೊಂದಿದೆ. ಈ ಸೀರೆಯ ಜರಿ ಮಾಸದೆ, ಹೊಚ್ಚ ಹೊಸದಂತೆ ಕಾಣುವುದು ವಿಶೇಷವಾಗಿದ್ದು, ಇಲ್ಲಿ ಕುಸುರಿ ವಿನ್ಯಾಸ ಸೀರೆ, ದೊಡ್ಡ ಬುಟ್ಟಾ ಪಲ್ಲು ಸೀರೆ, ಶ್ರೀಮಂತ ಪಲ್ಲು ಸೀರೆ, ಜವಾರ್ ಅಂಚಿನ ಸೀರೆ, ಸಣ್ಣ ಮಾವಿನ ಸೀರೆ, ಜರಿ ಪ್ರಿಂಟೆಡ್ ಸೀರೆ, ಟಿಶ್ಯೂ ಸೀರೆ ಸಾಂಪ್ರದಾಯಿಕ ಜರಿ ಸೀರೆ ಹೀಗೆ 115 ಬಗೆಯ 300ಕ್ಕೂ ಹೆಚ್ಚು ವರ್ಣರಂಜಿತ ಮಾದರಿಯ ಸೀರೆಗಳು ಇಲ್ಲಿ ತಯಾರಾಗುತ್ತಿರುವುದು ಪ್ರಮುಖವಾಗಿದೆ.

ಪ್ರವಾಸಿಗರಿಗೆ ಅನುಕೂಲವಾಗುವಂತೆ ಕೆಎಸ್ಐಸಿಯು ಮೈಸೂರಿನ ಪ್ರಮುಖ ಸ್ಥಳಗಳಾದ ಜೆ.ಎಲ್.ಬಿ ರಸ್ತೆ ಹಾಗೂ ಮೃಗಾಲಯದ ಬಳಿ ಮಾರಾಟದ ಮಳಿಗೆ ತೆರೆದಿದೆ. ಇದಲ್ಲದೆ ನೇರವಾಗಿ ಮಾನಂದವಾಡಿ ರಸ್ತೆಯಲ್ಲಿರುವ ಕಾರ್ಖಾನೆಗೆ ತೆರಳಿ ತಮಗೊಪ್ಪುವ ರೇಷ್ಮೆ ಸೀರೆಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ.

English summary
Many tourists coming from afar, realize the importance of Mysuru silk saree and buy it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X