ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆಯಲ್ಲಿ ಕಾಡುವ ಕಾಮಾಲೆಯತ್ತ ಜಾಗ್ರತೆ ಇರಲಿ!

|
Google Oneindia Kannada News

ಈಗಾಗಲೇ ಒಂದೆಡರಡು ಮಳೆ ಸುರಿದಿದ್ದರೂ ಬಿಸಿಲಿನ ಬೇಗೆ ಮಾತ್ರ ಕಡಿಮೆಯಾಗಿಲ್ಲ. ಮಳೆ ಬಂದು ಹೋದ ಬಳಿಕವೇ ಕೆಲವೊಮ್ಮೆ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಬೇಸಿಗೆಯ ಕೊನೆಯ ದಿನಗಳಲ್ಲಿ ಕೆಲವೊಂದು ಕಾರಣಗಳಿಂದ ಕಾಯಿಲೆಗಳು ಕೂಡ ನಮಗೆ ಗೊತ್ತಿಲ್ಲದಂತೆ ಹರಡಿಕೊಂಡು ಬಿಡುತ್ತವೆ. ಹೀಗೆ ಕಾಡುವ ರೋಗದಲ್ಲಿ ಕಾಮಾಲೆಯೂ ಒಂದಾಗಿದೆ.

ಕಾಮಾಲೆ ರೋಗವು ನಿಧಾನವಾಗಿ ಉಲ್ಭಣಗೊಳ್ಳುವುದರಿಂದ ಆರಂಭದಲ್ಲಿ ಯಾವುದೇ ಸೂಚನೆಗಳು ಕಾಣುವುದಿಲ್ಲ. ಇದನ್ನು ದೂರ ಮಾಡಬೇಕಾದರೆ ಮೊದಲಿಗೆ ನಾವು ಜಾಗೃತರಾಗಬೇಕು. ಮೊದಲಿಗೆ ನಾವು ಮಾಡಬಹುದಾದ ಕೆಲಸ ಏನೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ತೆರೆದಿಟ್ಟ ಪಾನೀಯ ಹಾಗೂ ಹಣ್ಣು ಹಂಪಲು, ತರಕಾರಿಗಳತ್ತ ಗಮನಹರಿಸುವುದು, ಕೊಳೆತ ಆಹಾರ, ಮೀನು, ಮಾಂಸ, ಐಸ್‌ಕ್ರೀಂ, ಶೀತಲೀಕರಿಸಿದ ಆಹಾರ ಇತ್ಯಾದಿಗಳತ್ತಲೂ ಗಮನಹರಿಸುವುದು. ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆಯಲ್ಲಿ ಸೂಪರ್ ಕ್ಲೋರಿನೇಶನ್ ಆಗುತ್ತಿದೆಯಾ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು.

Summer Health Tips: ಬೇಸಿಗೆಯಲ್ಲಿ ನೀರಿನಿಂದಲೂ ರೋಗಗಳು ಕಾಡಬಹುದು!Summer Health Tips: ಬೇಸಿಗೆಯಲ್ಲಿ ನೀರಿನಿಂದಲೂ ರೋಗಗಳು ಕಾಡಬಹುದು!

 ಕುಡಿಯುವ ನೀರಿನತ್ತ ಎಚ್ಚರಿಕೆ ಇರಲಿ

ಕುಡಿಯುವ ನೀರಿನತ್ತ ಎಚ್ಚರಿಕೆ ಇರಲಿ

ಕೆಲವೊಮ್ಮೆ ನೀರಿನಿಂದಲೇ ಈ ರೋಗ ಹರಡುವುದರಿಂದ ನೀರು ಶುದ್ಧವಾಗಿದೆಯಾ? ನೀರು ಸರಬರಾಜಾಗುವ ಪೈಪ್‌ಗಳು ಸೇರಿದಂತೆ ಎಲ್ಲವೂ ಸ್ವಚ್ಛವಾಗಿದೆಯಾ? ಕಲುಷಿತ ನೀರು ಸೇರ್ಪಡೆಯಾಗುತ್ತಿದೆಯಾ ಎಂಬುದರ ಬಗ್ಗೆಯೂ ಗಮನಹರಿಸಬೇಕಾಗುತ್ತದೆ. ಇಲ್ಲಿ ನಾವು ಸ್ವಲ್ಪ ಎಡವಿದರೂ ಕಾಮಾಲೆ ರೋಗಕ್ಕೆ ಆಹ್ವಾನ ನೀಡಿದಂತೆಯೇ. ಇಷ್ಟಕ್ಕೂ ಕಾಮಾಲೆ ರೋಗ ಬೇಸಿಗೆಯಲ್ಲಿಯೇ ಏಕೆ ಹೆಚ್ಚಾಗಿ ಬಾಧಿಸುತ್ತದೆ ಎಂಬುದನ್ನು ನೋಡಿದ್ದೇ ಆದರೆ ಅದಕ್ಕೆ ಹಲವಾರು ಕಾರಣಗಳು ಕಾಣ ಸಿಗುತ್ತವೆ.

ಮೊದಲಿಗೆ ವೈಯಕ್ತಿಕ ನೈರ್ಮಲ್ಯ ಪಾಲನೆ ಮಾಡದಿರುವುದು, ಮಲ ಮೂತ್ರ ವಿಸರ್ಜನೆಗೆ ಹೋಗಿ ಬಂದ ನಂತರ ಸಾಬೂನಿನಿಂದ ಕೈಕಾಲು ತೊಳೆಯದಿರುವುದು, ಆಹಾರ ಪಾನೀಯ ಸ್ವೀಕರಿಸುವ ಮೊದಲು ಕೈಕಾಲು ಮುಖ ತೊಳೆಯದೆ ಇರುವುದು, ಶುದ್ಧೀಕರಿಸಿದ ಸಿರೆಂಜ್ ಸೂಜಿ ಬಳಸದೆ ಇರುವುದು. ಸಾರ್ವಜನಿಕ ನೈರ್ಮಲ್ಯ ವ್ಯವಸ್ಥೆ ಪಾಲನೆ. ಮನೆಗಳಲ್ಲಿ, ಊಟ ಉಪಹಾರ ಮಂದಿರಗಳಲ್ಲಿ ಚೆನ್ನಾಗಿ ಕುದಿಸಿ ಆರಿಸಿದ ನೀರನ್ನೇ ಉಪಯೋಗಿಸದೆ ಇರುವುದು ಹೀಗೆ ದೊಡ್ಡ ಪಟ್ಟಿಯೇ ಬೆಳೆಯುತ್ತಾ ಹೋಗುತ್ತದೆ. ಇದೆಲ್ಲವನ್ನು ಶಿಸ್ತುಬದ್ಧವಾಗಿ ಮಾಡುವುದನ್ನು ನಾವು ಕಲಿಯಬೇಕಾಗಿದೆ.

 ಕಾಮಾಲೆ ಬರುವುದು ಹೇಗೆ?

ಕಾಮಾಲೆ ಬರುವುದು ಹೇಗೆ?

ಇನ್ನು ಕಾಮಾಲೆ ರೋಗ ಹೇಗೆ ಬರುತ್ತದೆ ಎಂಬುದನ್ನು ವೈದ್ಯರೇ ಹೇಳಿದಂತೆ ಹೇಳುವುದಾದರೆ, ಯಕೃತಿನ (ಲಿವರ್) ಸೋಂಕಿನಿಂದ ಬರುತ್ತದೆಯಂತೆ. ರೋಗದ ಸೋಂಕಿಗೆ ಹಲವಾರು ವೈರಾಣುಗಳು ಕಾರಣವಾಗಿದ್ದು, ಆ ಪೈಕಿ ಸೌಮ್ಯ ಸ್ವರೂಪದ ಎ ವೈರಾಣುವಿನಿಂದ ಹಿಡಿದು ತೀವ್ರ ಸ್ವರೂಪದ ಬಿ ವೈರಾಣು ಹಾಗೂ ಸಿ, ಡಿ, ಇ ಮತ್ತು ಜಿ ವೈರಾಣುವಿನಿಂದ ರೋಗಕ್ಕೆ ತುತ್ತಾಗಬಹುದು. ಕಾಮಾಲೆ ರೋಗವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜನಸಾಂದ್ರತೆ ಜಾಸ್ತಿ ಇರುವಲ್ಲಿ ಮತ್ತು ವೈಯಕ್ತಿಕ ಹಾಗೂ ಪರಿಸರ ನೈರ್ಮಲ್ಯ ಕೊರತೆ ಇರುವ ಕಡೆ ಸಾಂಕ್ರಾಮಿಕ ರೋಗವಾಗಿ ಕಾಣಿಸಿಕೊಳ್ಳಬಹುದಾಗಿದೆ.

ಬಹಳಷ್ಟು ಜನಕ್ಕೆ ಕಾಮಾಲೆ ರೋಗದ ಚಿಹ್ನೆಗಳು ಗೊತ್ತಾಗುವುದಿಲ್ಲ. ಹೀಗಾಗಿ ಅವರು ಯಾವುದೋ ಒಂದು ಮಾತ್ರೆ ಸೇವಿಸಿ ತೆಪ್ಪಗಾಗುತ್ತಾರೆ. ಉಲ್ಬಣಗೊಂಡಾಗ ಆಸ್ಪತ್ರೆಗೆ ತೆರಳುತ್ತಾರೆ. ಆದ್ದರಿಂದ ಮೊದಲಿಗೆ ರೋಗದ ಲಕ್ಷಣಗಳನ್ನು ತಿಳಿದುಕೊಂಡರೆ ಬಹುಬೇಗ ಚಿಕಿತ್ಸೆ ಪಡೆದು ವಾಸಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಜ್ವರ, ಚಳಿ, ತಲೆನೋವು, ಆಯಾಸ, ದೇಹ ಪೂರ್ಣ ನಿಶ್ಯಕ್ತಿ, ಕೀಲು ನೋವು ಇದರ ಜೊತೆಗೆ ವಾಕರಿಕೆ, ವಾಂತಿ, ಹಸಿವು ಇಲ್ಲದಿರುವುದು, ಹಳದಿ ಬಣ್ಣದ ಮೂತ್ರ ಹೋಗುವುದು. ಕಣ್ಣು, ಚರ್ಮ, ಉಗುರುಗಳು ಹಳದಿಯಾಗಿರುವುದು ಕಂಡು ಬರುತ್ತದೆ. ಇದಿಷ್ಟನ್ನು ಗಮನಿಸಿದರೆ ಅದು ಕಾಮಾಲೆ ರೋಗ ಎಂಬುದು ಸುಲಭವಾಗಿ ಗೊತ್ತಾಗಿ ಬಿಡುತ್ತದೆ.

ರೋಗ ಹರಡಲು ವಯಸ್ಸಿನ ತಾರತಮ್ಯವಿಲ್ಲ

ರೋಗ ಹರಡಲು ವಯಸ್ಸಿನ ತಾರತಮ್ಯವಿಲ್ಲ

ಈ ರೋಗ ಹರಡಲು ವಯಸ್ಸಿನ ಮತ್ತು ಲಿಂಗ ತಾರತಮ್ಯವಿಲ್ಲ. ಆದರೆ ಹೆಚ್ಚಾಗಿ ಮಕ್ಕಳು ಹಾಗೂ ವಯಸ್ಕರಲ್ಲಿ ಕಂಡು ಬರುತ್ತದೆ. ಈ ರೋಗದಿಂದ ನರಳುತ್ತಿರುವ ರೋಗಿಗಳು ಕಾಮಾಲೆ ರೋಗ ಲಕ್ಷಣಗಳು ಕಂಡುಬರುವ ಎರಡು ವಾರ ಮೊದಲು, ಕಂಡು ಬಂದ ಒಂದು ವಾರದವರೆಗೂ ರೋಗಾಣುವನ್ನು ಮಲದ ಮೂಲಕ ಹೊರಹಾಕುತ್ತಾರೆ. ಇಂತಹ ರೋಗಿಗಳ ಮಲವು ಕುಡಿಯುವ ನೀರು, ತಿನ್ನುವ ಆಹಾರವನ್ನು ಕಲುಷಿತಗೊಳಿಸಿದರೆ ಇಂತಹ ಆಹಾರವನ್ನು ಸೇವಿಸಿದ ಈ ರೋಗದ ವಿರುದ್ದ ನಿರೋಧಕ ಶಕ್ತಿ ಇಲ್ಲದ ವ್ಯಕ್ತಿಗಳಿಗೆ ಸಾಮಾನ್ಯವಾಗಿ 25 ರಿಂದ 35 ದಿನಗಳ ನಂತರ ರೋಗ ಲಕ್ಷಣಗಳು ಕಂಡು ಬರಬಹುದು. ಅಪರೂಪದಲ್ಲಿ ಕೆಲವೊಮ್ಮೆ ರಕ್ತದ ಮೂಲಕವೂ ಈ ಕಾಮಾಲೆ ರೋಗವು ಹರಡಬಲ್ಲದು. ಒಮ್ಮೆ ಈ ರೋಗದಿಂದ ನರಳಿದವರು ಶೇ.95ರಷ್ಟು ನಿರೋಧಕ ಶಕ್ತಿಯನ್ನು ಪಡೆಯುತ್ತಾರೆ. ಶೇ.5 ರಷ್ಟು ಜನರು ಮತ್ತೆ ಈ ರೋಗಕ್ಕೆ ತುತ್ತಾಗಬಹುದಂತೆ.

 ಕಾಯಿಲೆ ಬರದಂತೆ ಎಚ್ಚರ ವಹಿಸುವುದು ಅಗತ್ಯ

ಕಾಯಿಲೆ ಬರದಂತೆ ಎಚ್ಚರ ವಹಿಸುವುದು ಅಗತ್ಯ

ಕಾಮಾಲೆ ರೋಗಕ್ಕೆ ತುತ್ತಾದ ರೋಗಿಗಳು ತಜ್ಞ ವೈದ್ಯರಿಂದ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದು ವೈದ್ಯರ ಸಲಹೆ ಸೂಚನೆಯನ್ನು ಪಾಲಿಸುವುದು ಅಗತ್ಯ. ರೋಗಿಗಳನ್ನು ಪ್ರತ್ಯೇಕವಾಗಿಸುವುದು ಹಾಗೂ ಉಪಯೋಗಿಸುವ ಪಾತ್ರೆ ಬಟ್ಟೆ ಬರೆಗಳನ್ನು ಕ್ರಿಮಿ ನಾಶಕದಿಂದ ಶುದ್ದೀಕರಿಸುವುದು, ಮಲ ಮೂತ್ರವನ್ನು ಕ್ರಿಮಿನಾಶಕ ಹಾಕಿ ವಿಲೇವಾರಿ ಮಾಡುವುದು. ಸುರಕ್ಷಿತ ನೀರಿನ ಸರಬರಾಜು, ಆಹಾರ ಮತ್ತು ಪ್ರತಿಯೊಬ್ಬರೂ ಶೌಚಾಲಯ ವ್ಯವಸ್ಥೆ ಬಳಸುವುದು ಬಹು ಅಗತ್ಯವಾಗಿದೆ. ಕಾಯಿಲೆ ಬಂದ ಬಳಿಕ ಚಿಕಿತ್ಸೆ ಪಡೆದು ವಾಸಿ ಮಾಡಿಕೊಳ್ಳುವುದಕ್ಕಿಂತ ಕಾಯಿಲೆ ಬರದಂತೆ ಎಚ್ಚರ ವಹಿಸುವುದು ಅಗತ್ಯ. ಹಾಗಾಗಿ ಬೇಸಿಗೆಯ ದಿನಗಳಲ್ಲಿ ನಾವು ಬಲು ಎಚ್ಚರಿಕೆಯಿಂದ ಇರುವುದು ತುಂಬಾ ಅಗತ್ಯ ಎನ್ನುವುದನ್ನು ಮರೆಯಬಾರದು.

Recommended Video

ಮ್ಯಾಚ್ ಫೈನಿಷರ್ ಅಂಥ ಮತ್ತೆ ಸಾಬೀತು ಪಡಿಸಿದ ಮಹಿ | Oneindia Kannada

English summary
In the last days of the summer, for some reason, diseases are spreading without our knowledge. Yellow fever is one of the most common diseases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X