ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌಹಾರ್ದತೆ ಹಾಗೂ ಐಕ್ಯತೆಗಾಗಿ - ಬಹುತ್ವ ಕರ್ನಾಟಕ ವೇದಿಕೆ ಅಸ್ತಿತ್ವಕ್ಕೆ (ಭಾಗ 1)

|
Google Oneindia Kannada News

ಕರ್ನಾಟಕ ರಾಜ್ಯದಾದ್ಯಂತ ಕೋಮು ದ್ವೇಷ ಹಾಗೂ ಒಡೆದು ಆಳುವ ನೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನ್ಯಾಯ, ಸೌಹಾರ್ದತೆ ಮತ್ತು ಐಕ್ಯತೆಗಾಗಿ ಸಮಾನ ಮನಸ್ಕ ಸಂಘಟನೆಗಳು ಒಂದಾಗಿವೆ. "ಬಹುತ್ವ ಕರ್ನಾಟಕ ವೇದಿಕೆ" ಬ್ಯಾನರಡಿ ಬೆಂಗಳೂರಿನಲ್ಲಿ ಸಮಾಲೋಚನಾ ಸಭೆ ಏರ್ಪಡಿಸಲಾಗಿತ್ತು. ಇಡೀ ದಿವಸ ಆಯೋಜಿಸಲಾಗಿರುವ ಈ ಸಭೆಯಲ್ಲಿ ಮೊದಲ ಅರ್ಧ ದಿನದಲ್ಲಿ ಕೇಳಿಬಂದ ಬಹು ಮುಖ್ಯ ಹಾಗೂ ಆತಂಕಕಾರಿ ಅಂಶಗಳು ಇಲ್ಲಿವೆ.

ಗದಗ ಜಿಲ್ಲೆಯ ಪ್ರತಿನಿಧಿಯೊಬ್ಬರು ಮಾತನಾಡಿ, ''ಸುಮಾರು 200 ರಿಂದ 300 ವರ್ಷಗಳ ಹಳೆಯದಾದ ದರ್ಗಾ ಒಂದರ ಬಗ್ಗೆ ಹಿಂದುತ್ವ ಪ್ರತಿಪಾದಕರು ತಕರಾರು ತೆಗೆದು ಅಲ್ಲಿ ಮೊದಲೇ ದೇವಸ್ಥಾನ ಇದ್ದುದಾಗಿ ಪ್ರತಿಪಾದಿಸುತ್ತಿದ್ದರು, ಅದಕ್ಕೆ ತಕ್ಕುದಾದ ದಾಖಲೆಗಳನ್ನು ಒದಗಿಸಿ ಎಂದು ಖಡಕ್ ಆಗಿ ಕೇಳಿದಾಗ ಸುಮ್ಮನಾದರು,'' ಎಂದರು.

ಬಿಜಾಪುರದ ಪ್ರತಿನಿಧಿ "ತಾವು ಹಿಂದೂ ಮತ್ತು ಮುಸ್ಲಿಂ ಹಬ್ಬಗಳನ್ನು ಕೂಡಿ ಮಾಡುವುದಾಗಿ, ಅದರಿಂದ ನಮ್ಮಲ್ಲಿ ಅನ್ಯೋನ್ಯತೆ ಇದೆ, ಹೆಚ್ಚಿನ ಸಂಘರ್ಷಗಳಿಲ್ಲ,'' ಎಂದು ಹೇಳಿದರು. ರಾಯಚೂರಿನ ಪ್ರತಿನಿಧಿ, ನಾವು ಭಾರತೀಯ ಜನತಾ ಪಕ್ಷ ಹಾಗೂ ಆರ್ ಎಸ್ ಎಸ್ ನ ಅಜೆಂಡಾ ಬಯಲಿಗೆಳೆಯಬೇಕು, ಅವರು ತರಲೆತ್ನಿಸುತ್ತಿರುವುದು ಆರ್ಥಿಕ ನೀತಿಗಳನ್ನೇ ಹೊರತು ಬೇರೇನೂ ಅಲ್ಲ, ಅದನ್ನು ಎಲ್ಲರಿಗೆ ತಿಳಿಸುವ ಕೆಲಸ ಮಾಡಬೇಕೆಂದರು.

 Bahutva Karnataka Vedike launched for Cordiality and Solidarity

ಕಲ್ಬುರ್ಗಿ ಪ್ರತಿನಿಧಿ ಬಹಳ ಸೂಕ್ಷ್ಮ ವಿಷಯವನ್ನು ಬಯಲು ಮಾಡಿದರು. ಕಲ್ಬುರ್ಗಿ ನಗರಕ್ಕೆ 12 ಕಿಲೋಮೀಟರ್ ದೂರದಲ್ಲಿರುವ ಸಾವಳಿಗೆ ಶಿವಲಿಂಗ ರಥೋತ್ಸವ ನಡೆಯುವಾಗ ಅದಕ್ಕೆ ಚಾಲನೆ ನೀಡುವುದು ಹಸಿರು ಶಾಲನ್ನು ಬೀಸುವ ಮೂಲಕ, ಅದು ಬಹಳ ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿ, ಆದರೆ ಇತ್ತೀಚೆಗೆ ಕೆಲವು ಯುವಕರು ರಥೋತ್ಸವದ ಚಾಲನೆಗೆ ಕೇಸರಿ ಶಾಲು ಬಳಸಬೇಕೆಂದು ಪಟ್ಟು ಹಿಡಿದಿದ್ದರು, ಇದನ್ನು ತಿಳಿದ ಸ್ಥಳಿಯ ಅನೇಕ ಸಂಘಟನೆಗಳು ಆ ಯುವಕರಿಗೆ ಪರಂಪರೆಯ ವಿಷಯ ತಿಳಿಸಿ ಹಸಿರು ಶಾಲನ್ನೇ ಬಳಸುವ ಮುಖೇನ "ಕೇಸರಿ"ಯ ಹುನ್ನಾರಕ್ಕೆ ತಡೆಯೊಡ್ಡಿದ್ದಾರೆ.

ಕೊಪ್ಪಳ ದ ಪ್ರತಿನಿಧಿ ಮಾತನಾಡುತ್ತಾ, ಅಸ್ಪೃಶ್ಯತೆ ಹಾಗೂ ಕೋಮುವಾದಕ್ಕೆ ಕೊಪ್ಪಳ ಹೆಸರುವಾಸಿ ಎಂದರಲ್ಲದೆ ಅಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದನ್ನು ವಿವರಿಸಿದರು, ಮಾದಿಗ ಜನಾಂಗದ ಹುಡುಗನೊಬ್ಬ ಕುರುಬರ ಹುಡುಗಿಯನ್ನು ಮೋಹಿಸಿದ್ದಕ್ಕೆ ಇಬ್ಬರನ್ನೂ ಕೊಂದು ಹಾಕಿದರಂತೆ, ಆ ವಿಷಯ ಸುದ್ಧಿಯೂ ಆಗದೆ ಹೋಯಿತಂತೆ. ಗಂಗಾವತಿಯಲ್ಲಿ ಈ ಮೊದಲು ಎಲ್ಲಾ ಧರ್ಮೀಯರು ಸೇರಿ ಈದ್ ಮಿಲಾದ್ ಆಚರಿಸುತ್ತಿದ್ದರಂತೆ, ಈಗ ಪರಿಸ್ಥಿತಿ ಹಾಗಿಲ್ಲ, ಕೋಮುಗಲಬೆಗಳು ನಡೆಯುತ್ತಿವೆ ಎಂದು ವಿಷಾದಿಸಿದರು.

ದಕ್ಷಿಣ ಕನ್ನಡದ ಪ್ರತಿನಿಧಿ ತನ್ನ ಜಿಲ್ಲೆಯನ್ನು "ಸಂಘ ಪರಿವಾರದ ಪ್ರಯೋಗಶಾಲೆ" ಎಂದು ಬಣ್ಣಿಸಿದರು. ಮುಂದುವರೆದು ಮಾತನಾಡಿದ ಅವರು ಲಿಂಚಿಂಗ್ ಮತ್ತು ಲವ್ ಜಿಹಾದ್ ಇಲ್ಲಿಂದಲೇ ಆರಂಭವಾಗಿದ್ದು, ದ್ವೇಷ ಬಿತ್ತುವ ವಿಚಾರಗಳು ಮತ್ತು ನರೇಷನ್ಸ್ ಹಿಂದೂ ಸಮಾಜೋತ್ಸವದ ಮುಖೇನ ನಡೆಯುತ್ತವೆ. ಜಗದೀಶ್ ಕಾರಂತ್ ಯುವಕರನ್ನು ಗುರಿಯಾಗಿಸಿ ಸಾರ್ವಜನಿಕ ಸಭೆಗಳಲ್ಲಿ ಮೈಕಿನಲ್ಲಿ ಮಾತನಾಡುತ್ತಾರೆ. ಮೋದಿ ಬ್ರಿಗೇಡ್ ಹೆಸರಿನ ವಾಟ್ಸಪ್ ಗ್ರೂಪ್ ಗಳಿವೆ. ಪ್ರತಿ ಬೂತ್ ಮಟ್ಟದಲ್ಲಿ ಈ ಗುಂಪುಗಳಲ್ಲಿ ಹಿಂದುತ್ವದ ವಿಷಯಗಳನ್ನು ಬಿತ್ತಲಾಗುತ್ತದೆ. ಒಬ್ಬ ಕಾರ್ಯಕರ್ತ ಒಂದು ದಿನಕ್ಕೆ ಹತ್ತು ಮನೆಗಳನ್ನು ಭೇಟಿ ಮಾಡಬಹುದು ಆದರೆ ಒಬ್ಬ ಕಾರ್ಯಕರ್ತ ಎರಡು ವಾಟ್ಸಪ್ ಗ್ರೂಪ್ ಗಳನ್ನು ಮಾಡಿಕೊಂಡು ಸುಮಾರು ಐದು ನೂರು ಜನರನ್ನು ಮುಟ್ಟುವ ಕೆಲಸ ಮಾಡುತ್ತಿದ್ದಾರೆ.

 Bahutva Karnataka Vedike launched for Cordiality and Solidarity

ಇತ್ತೀಚೆಗೆ "ತ್ರಿಶೂಲ ದೀಕ್ಷೆ" ಹೆಸರಿನ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು, ಆ ಕಾರ್ಯಕ್ರಮ ಮುಗಿದು ಒಂದೆರಡು ವಾರದಲ್ಲಿ ಐದಾರು ನೈತಿಕ ಪೊಲೀಸ್ ಗಿರಿಗಳು ನಡೆದಿವೆ ಅದೇ ರೀತಿ ತ್ರಿಶೂಲ ಇರಿತವೂ ನಡೆದು ಹೋಯಿತು. ಈ ಸಂಘಟನೆಗೆ ಎಲ್ಲ ಕಡೆ ಮಾಹಿತಿದಾರರಿದ್ದಾರೆ. ಆಟೋ ಡ್ರೈವರ್, ಬೀಚ್, ಟೋಲ್ ಹೀಗೆ ಎಲ್ಲ ಕಡೆಯೂ ಮಾಹಿತಿದಾರರನ್ನಿಟ್ಟುಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಕೆಲವು ಸಾರಿ ತಾವೇ ಅಹಿತಕರ ಘಟನೆಗಳನ್ನು ಸೃಷ್ಠಿಸಿ ಅದನ್ನು ಮುಸಲ್ಮಾನ್ ಜನಾಂಗದ ಮೇಲೆ ಹಾಕುವ ಕೆಲಸ ಮಾಡುತ್ತಾರೆ ಎಂದರು. ಅಲ್ಲದೆ ಸ್ಥಳೀಯ ಮಾಧ್ಯಮಗಳೂ ಏಕಪಕ್ಷೀಯವಾಗಿವೆ ಎಂದರು.

ಹೊಸಪೇಟೆಯ ಪ್ರತಿನಿಧಿ ಮಾತನಾಡಿ, ನಾನು ಖಂಡಿತವಾಗಿಯೂ ಹಿಂದೂ ಎಂದು ಗುರುತಿಸಿಕೊಳ್ಳಲಾರೆ, ಮಾನವತಾವಾದವನ್ನು ಪ್ರತಿಪಾದಿಸುವ ನಾವೆಲ್ಲಾ ಒಂದು ವಿಭಿನ್ನ ಅಸ್ಮಿತೆಯನ್ನು ಕಂಡುಕೊಳ್ಳಬೇಕು ಅದಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಿದರೂ ಸೈ ಎಂದರು. ಅಲ್ಲದೆ ಆಂತರಿಕ ಭಿನ್ನಾಭಿಪ್ರಾಯಗಳ ಬಗ್ಗೆ ಮಾತನಾಡುತ್ತಾ ಒಬ್ಬ ದಲಿತನ ನೋವಿಗೆ ಯಾವ ಮೌಲ್ವಿಯೂ ಬೀದಿಗೆ ಬರುವುದಿಲ್ಲ, ಅಂತೆಯೇ ಒಬ್ಬ ಮೌಲ್ವಿಯ ನೋವಿಗೆ ದಲಿತ ಕ್ರಿಶ್ಚಿಯನ್‌ಗಳು ಬೀದಿಗೆ ಬರುವುದಿಲ್ಲ, ಮೊದಲಿಗೆ ನಮ್ಮಲ್ಲಿ ಕೋಆರ್ಡಿನೇಷನ್ ಬೇಕಿದೆ ಎಂದರು. ಜೊತೆಗೆ ಪರ್ಯಾಯ ಮಾಧ್ಯಮವೂ ನಮ್ಮ ಇಂದಿನ ಅಗತ್ಯವೆಂದರು. ಗ್ರಂಥಾಲಯಗಳಲ್ಲಿ ಆರ್ ಎಸ್ ಎಸ್ ನ ಪುಸ್ತಕಗಳು ಬರುತ್ತಿವೆ, ಈಗಾಗಲೇ ಸುಮಾರು 1700 ಕೋಟಿ ರೂಪಾಯಿಯಷ್ಟು ಮೌಲ್ಯದ ಪುಸ್ತಕಗಳು ಖರೀದಿಯಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಬೆಂಗಳೂರಿನ ಸಂಘಟನೆಯೊಂದರ ಪ್ರತಿನಿಧಿ ಮಾತನಾಡಿ, ಬಿಜಾಪುರಕ್ಕೆ ತಾವು ಸತ್ಯಶೋಧನಾ ವರದಿಗಾಗಿ ಹೋಗಿದ್ದ ವಿಷಯವನ್ನು ಬಹಿರಂಗಪಡಿಸಿದರು. ಇಬ್ಬರು ದಲಿತ ಹೆಣ್ಣುಮಕ್ಕಳನ್ನು ಮುಸ್ಲಿಂ ಹುಡುಗರು ಅತ್ಯಾಚಾರ ಮಾಡಿ ಬಾವಿಗೆ ಎಸೆದಿದ್ದಾರೆ ಆ ಬಗ್ಗೆ ಸುದ್ದಿಯಾಗಿಲ್ಲ ಅದೇ ರೀತಿ ಮಾದಿಗ ಸಮುದಾಯದ ಹುಡುಗ ಮುಸ್ಲಿಂ ಸಮುದಾಯದ ಹುಡುಗಿಯನ್ನು ಮೋಹಿಸಿದ್ದಕ್ಕೆ ಅವರಿಬ್ಬರನ್ನೂ ಹೊಡೆದು ಕೊಂದಿರುವುದಾಗಿ ಅದು ಸುದ್ದಿಯೇ ಆಗದಿದ್ದು ದುರಂತವೆಂದರು, ಹಿಂದುತ್ವದ ಬಗ್ಗೆ ಮಾತನಾಡಿ ಇವರು ಮಹಿಳೆಯರನ್ನು ಧರ್ಮಗಳನ್ನು ದಲಿತರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಚಿಕ್ಕಬಳ್ಳಾಪುರದ ಪ್ರತಿನಿಧಿ ಮಾತನಾಡುತ್ತಾ, ನಮ್ಮ ಜಿಲ್ಲೆಯಲ್ಲಿ ಕೈವಾರ ತಾತಯ್ಯ, ವೇಮನ, ವೀರಭ್ರಮೇಂದ್ರಯ್ಯನವರು ಸಾರಿದ ಸಮಾನತೆಯೆ ತತ್ವ ಇದೆ. ನಮ್ಮಲ್ಲಿ ಸೌಹಾರ್ದತೆ ಇದೆ, ಕಳೆದ ಇಪ್ಪತ್ತು ವರ್ಷಗಳಲ್ಲಿ ನಾವಂತೂ ಆರ್ ಎಸ್ ಎಸ್ ಚಟುವಟಿಕೆಗಳನ್ನು ನೋಡಿರಲಿಲ್ಲ, ಆದರೀಗ ಹಳ್ಳಿ ಹಳ್ಳಿಗಳಲ್ಲೂ ಮಕ್ಕಳು ಯುವಕರನ್ನು ಆರ್ ಎಸ್ ಎಸ್ ತನ್ನತ್ತ ಸೆಳೆಯುತ್ತಿದೆ. ದೇವಸ್ಥಾನಕ್ಕೆ ಕರೆದುಕೊಂಡುಹೋಗಿ ದೀಪ ಹಚ್ಚಿಸುವ ಮುಖೇನ ಅವರನ್ನು ಒಳಗೊಳ್ಳುತ್ತಿದ್ದಾರೆ. ಹಿಂದಿನಿಂದ ನಮ್ಮ ಭಾಗದ ಭಜನಾ ಮಂಡಳಿಗಳಲ್ಲಿ ತಾತಯ್ಯ ವೇಮನ ಅವರ ಸಿದ್ಧಾಂತಗಳು ಬಹುತ್ವದ ಸಮಾನತೆಯ ತತ್ವಗಳನ್ನು ಹಾಡಿಕೊಂಡು ಬರಲಾಗಿತ್ತು, ಇದೀಗ ಆರ್ ಎಸ್ ಎಸ್ ಈ ಭಜನಾ ಮಂಡಳಿಗಳನ್ನೂ ಗುರಿಯಾಗಿಸಿಕೊಂಡು ಅವರ ತತ್ವಗಳನ್ನು ಭಜನೆಯ ಮುಖೇನ ಬಿತ್ತರಿಸುತ್ತಿದ್ದಾರೆ.

ಕೈವಾರ ತಾತಯ್ಯ ದತ್ತಿಯ ಅಧ್ಯಕ್ಷರಾದ ಜಯರಾಮ್ (ಎಂ ಎ ಸ್ ರಾಮಯ್ಯ ಅವರ ಪುತ್ರ) ರಾಮ ಭಜನೆಗಳನ್ನು ಆಯೋಜಿಸುತ್ತಾರೆ, ಅಷ್ಟೇ ಅಲ್ಲದೆ ರಾಮ ಭಜನೆ ಮಾಡಿದ್ದಕ್ಕೆ ಮಳೆ ಬೆಳೆ ಆಗ್ತಿದೆ ಎಂಬ ಸ್ಟೇಟ್ಮೆಂಟ್ ಕೂಡಾ ಕೊಡುತ್ತಾರೆ ಎಂದು ಬೇಸರದಿಂದ ನುಡಿದರು, ಚಿಕ್ಕಬಳ್ಳಾಪುರದ ಮತ್ತೊಬ್ಬ ಪ್ರತಿನಿಧಿ ಮಾತನಾಡಿ ಇತ್ತೀಚೆಗೆ ನಮ್ಮ ಜಿಲ್ಲೆಯಲ್ಲಿ ಆರು ಚರ್ಚ್ ಗಳನ್ನು ಕೆಡವಿದ್ದಾರೆ, ಸರ್ಕಾರಿ ಶಾಲೆಗಳಲ್ಲಿ ಗಣಪನ ಮೂರ್ತಿ ಹಾಗೂ ಸರಸ್ವತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದು ತಿಳಿಸಿದರು. ಮುಂದುವರೆದು ಮಾತನಾಡಿದ ಅವರು ತಾಯಂದಿರಿಂದ ಮನುವಾದಕ್ಕೆ ಬ್ರೇಕ್ ಹಾಕುವ ಕೆಲಸ ಸಾಧ್ಯವೆಂದರು. ಪುಟ್ಟ ಮಕ್ಕಳಿಗೆ ಸ್ನಾನ ಮಾಡಿಸುವಾಗ, ಕೊನೆಯ ಚೊಂಬು ನೀರು ಹುಯ್ಯುವಾಗ ಇದು ಚಾಮಿ ನೀರು, "ಚಾಮಿ ಮುಕ್ಕೋ" ಎಂದು ಮಕ್ಕಳನ್ನು ಕೈಜೋಡಿಸಲು ಪ್ರೇರೇಪಿಸಲಾಗುತ್ತದೆ, ಏನೂ ಅರಿಯದ ಎಳವೆಯಲ್ಲೇ ನಾವು ಮನುವಾದವನ್ನು ಬಿತ್ತುತ್ತಿದ್ದೇವೆ, ಅದನ್ನು ಮೊದಲು ತಾಯಂದಿರು ನಿಲ್ಲಿಸಬೇಕೆಂದರು.

 Bahutva Karnataka Vedike launched for Cordiality and Solidarity

Recommended Video

ಕೃಷಿ ಕಾಯ್ದೆ ರದ್ದತಿ ಮಸೂದೆ ಮಂಡಿಸಲು ಸರ್ಕಾರದ ಸಿದ್ಧತೆ ಹೇಗಿದೆ? | Oneindia Kannada

ತುಮಕೂರಿನ ಪ್ರತಿನಿಧಿ ಮಾತನಾಡಿ, ಬಕ್ರೀದ್ ದಿನದಂದು ಮುಸಲ್ಮಾನ್ ಹುಡುಗರು ವೀಲಿಂಗ್ ಮಾಡಿದ ನೆಪವೊಡ್ಡಿ, ದನದ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳನ್ನು ಮುಚ್ಚಿಸುವ ಕೆಲಸ ಮಾಡಿದ್ದಾರೆ. ಬಂದ್ ಮಾಡಲು ಶುಕ್ರವಾರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ, ಮೆರವಣಿಗೆ ನಮಾಜ್ ಸಮಯದಲ್ಲಿ ಮಸೀದಿಗಳ ಮುಂದೆಯೇ ಹೋಗುವಂತೆ ಏರ್ಪಾಟು ಮಾಡಿಕೊಳ್ಳುತ್ತಾರೆ. ಅಲ್ಲದೆ ಹಂದಿ ಜೋಗಿಯಂಥ ಸಮುದಾಯಗಳನ್ನೂ ಸಂಘಪರಿವಾರ ಮುಟ್ಟಿದೆ. " ವರಹಾ ಪಡೆ" ಹೆಸರಿನಲ್ಲಿ ನಮ್ಮ ಬಂಧುಗಳಾದ ಹಂದಿಜೋಗಿ ಜನಾಂಗ ಇದೀಗ ಸಂಘ ಪರಿವಾರದ ತೆಕ್ಕೆಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಭೆಯ ಮಧ್ಯ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು ಸಂದೇಶ ಓದಲಾಯಿತು. ಸ್ವಾಮೀಜಿ ಶಾಂತಿ ಸೌಹಾರ್ಧ ಸಾಮರಸ್ಯದ ಚರ್ಚೆ ಕ್ರಿಯಾತ್ಮಕ ರೂಪ ಪಡೆಯಲಿ ಎಂದು ಆಶಿಸಿದ್ದಾರೆ. ಸಮಾಲೋಚನಾ ಸಭೆ ಸಂಘಟಕರಲ್ಲೊಬ್ಬರು ನಾವಿನ್ನೂ ಕ್ರಿಯೆ - ಪ್ರತಿಕ್ರಿಯೆಯಲ್ಲಿಯೇ ಇದ್ದೇವೆ. ಧರ್ಮ ಬಂದಾಗ ಅಲ್ಲಿ ಲಾಜಿಕ್ ಇರೋದಿಲ್ಲ. ವೈಜ್ಞಾನಿಕ ಚಿಂತನೆ ಮರೆಯಾಗುತ್ತೆ. ಎಮೋಷನ್ಸ್ ಇರುತ್ತೆ ಅಷ್ಟೇ ಎಂದರು. ಐಡೆಂಟಿಟಿ ಕ್ರೈಸಿಸ್ ಹಾಗೂ ಐಡೆಂಟಿಟಿ ಪಾಲಿಟಿಕ್ಸ್ ಬಗ್ಗೆ ಮಾತನಾಡಿದ ಅವರು ಸಮಾನ ಮನಸ್ಕ ಸಂಘಟನೆಗಳಾಲ್ಲಿ " ಕಲೆಕ್ಟೀವ್ ಕಾನ್ಷಿಯಸ್ ನೆಸ್" ಕೊರತೆ ಇದೆ ಎಂದರು. ದ್ವೇಷ ಎನ್ನುವುದು ಸಾಂಸ್ಥಿಕರೂಪ ಪಡೆದುಕೊಂಡಿದೆ. It has become Institutional ಎಂದರು. ನಾವೀಗ ಧರ್ಮ ಮತ್ತು ರಾಷ್ಟ್ರೀಯತೆ ನಡುವಿನ ವ್ಯತ್ಯಾಸವನ್ನು ಅರಿತು ಜನರ ನಡುವೆ ಹೋಗಬೇಕಿದೆ ಎಂದರು.

English summary
Bahutva Karnataka Vedike launched for Cordiality and Solidarity. Here are the highlights of Bengaluru Meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X