ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ ಪಕ್ಷಗಳ ಆತ್ಮವಿಶ್ವಾಸ ನೋಡಿದರೆ ನೆನಪಾಗುವುದೇ ಎಬಿಸಿಡಿ!

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

ಕರ್ನಾಟಕದ ಮೂರು ಪ್ರಮುಖ ರಾಜಕೀಯ ಪಕ್ಷಗಳ ಆತ್ಮವಿಶ್ವಾಸವನ್ನು ನೋಡಿದವರಿಗೆ ಸಹಜವಾಗಿಯೇ ಎ.ಬಿ.ಸಿ.ಡಿ ನೆನಪಿಗೆ ಬರಬಹುದು. ಎ.ಬಿ.ಸಿ.ಡಿ ಅಂದರೆ ಎನಿ ಬಡಿ ಕ್ಯಾನ್ ಡ್ಯಾನ್ಸ್ ಅಂತ.

2004ರ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಆತ್ಮವಿಶ್ವಾಸದ ಕುರುಹು ಇರಲಿಲ್ಲವಾದರೂ ಎನಿ ಬಡಿ ಕ್ಯಾನ್ ಡ್ಯಾನ್ಸ್ ಎಂಬುದು ಸಾಬೀತಾಗಿತ್ತು.

ಆ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಪಕ್ಷ, ಸ್ವಯಂಬಲದ ಮೇಲೆ ಗೆಲ್ಲುವ ಆತ್ಮವಿಶ್ವಾಸ ಹೊಂದಿದ್ದರೆ, ಪ್ರತಿಪಕ್ಷ ಬಿಜೆಪಿ ಕೂಡಾ ಗೆದ್ದು ಅಧಿಕಾರ ಹಿಡಿಯುವ ವಿಶ್ವಾಸವನ್ನು ದೊಡ್ಡ ಮಟ್ಟದಲ್ಲೇ ತೋರಿಸಿತ್ತು.

ಜೆಡಿಎಸ್ ಬಲದಿಂದ ಎನ್ ಸಿಪಿಗೆ ಕರ್ನಾಟಕದಲ್ಲಿ ಗೆಲ್ಲುವ ವಿಶ್ವಾಸಜೆಡಿಎಸ್ ಬಲದಿಂದ ಎನ್ ಸಿಪಿಗೆ ಕರ್ನಾಟಕದಲ್ಲಿ ಗೆಲ್ಲುವ ವಿಶ್ವಾಸ

ಅವತ್ತು ಬಿಜೆಪಿ ಅಧ್ಯಕ್ಷರಾಗಿದ್ದವರು ಅನಂತಕುಮಾರ್. ಅದುವರೆಗೂ ದೊಡ್ಡ ಶಕ್ತಿಯನ್ನೇನೂ ಪ್ರದರ್ಶಿಸದೆ ಇದ್ದ ಬಿಜೆಪಿಯ ವೋಟ್ ಬ್ಯಾಂಕಿಗೆ ವಿವಿಧ ಮೂಲಗಳಿಂದ ಬಂಡವಾಳ ತಂದವರು ಅನಂತಕುಮಾರ್.

ಅವರು ಏಕಕಾಲಕ್ಕೆ ದಲಿತ ರಾಜಕಾರಣದ ಮರ್ಮವನ್ನು ಅರಿತು ಆ ಸಮುದಾಯದ ಎಡಗೈ ನಾಯಕರನ್ನು ಪಕ್ಷಕ್ಕೆ ಕರೆ ತಂದರು. ಬ್ಯಾಕ್ ವರ್ಡ್ ಕ್ಲಾಸ್ ಚಾಂಪಿಯನ್ ಅನ್ನಿಸಿಕೊಂಡ ಬಂಗಾರಪ್ಪ ಅವರು ಕಮಲ ಪಾಳೆಯದ ಕೈ ಹಿಡಿಯುವಂತೆ ನೋಡಿಕೊಂಡರು.
ಹೀಗೆ ಬಿಜೆಪಿಯ ವೋಟ್ ಬ್ಯಾಂಕ್ ಹಿಗ್ಗಿದ ಪರಿಣಾಮವಾಗಿ ಅದು ಕೂಡಾ ಪ್ರಬಲ ಶಕ್ತಿಯಾಗಿ ಮೇಲೆದ್ದು ನಿಂತಿತ್ತು.

ಬಿಎಸ್ಪಿ ನಂತರ ಎನ್ ಸಿಪಿ ಜತೆ ಜೆಡಿಎಸ್ ಮೈತ್ರಿಬಿಎಸ್ಪಿ ನಂತರ ಎನ್ ಸಿಪಿ ಜತೆ ಜೆಡಿಎಸ್ ಮೈತ್ರಿ

ಎಸ್.ಎಂ.ಕೃಷ್ಣ ಹಾಗೂ ಅನಂತಕುಮಾರ್ ನೇತೃತ್ವದ ಕಾಂಗ್ರೆಸ್ ಹಾಗೂ ಬಿಜೆಪಿಯ ಆತ್ಮವಿಶ್ವಾಸಗಳ ನಡುವೆ ಜೆಡಿಎಸ್ ಪಕ್ಷವನ್ನು ಯಾರೂ ಪರಿಗಣಿಸಲಿಲ್ಲ. ಆದರೆ ಅದಕ್ಕೂ ಆತ್ಮವಿಶ್ವಾಸವಿತ್ತು. ಆದರೆ ಈಗಿನಂತೆ ಅದು ತುಂಬ ಜನರ ಕಣ್ಣಿಗೆ ಕಾಣಲಿಲ್ಲ.
ಫಲಿತಾಂಶ ಬಂದಾಗ ಬಿಜೆಪಿ ಎಪ್ಪತ್ತೊಂಭತ್ತು ಸೀಟುಗಳೊಂದಿಗೆ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿತ್ತು. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅರವತ್ತೈದು ಸೀಟು ಗೆದ್ದಿತ್ತು. ಬಹುತೇಕ ಮಾಧ್ಯಮಗಳಲ್ಲಿ ಇತರರ ಪಟ್ಟಿ ಸೇರಿದ್ದ ಜೆಡಿಎಸ್, ಐವತ್ತೆಂಟು ಸ್ಥಾನಗಳನ್ನು ಗೆದ್ದು ನಗು ಬೀರಿತ್ತು.

ಅತಂತ್ರ ಸ್ಥಿತಿ ನಿರ್ಮಾಣದ ಕಾಲಘಟ್ಟ

ಅತಂತ್ರ ಸ್ಥಿತಿ ನಿರ್ಮಾಣದ ಕಾಲಘಟ್ಟ

ಯಾವಾಗ ಆತ್ಮವಿಶ್ವಾಸ ಎಂಬುದು ಎಲ್ಲ ಪಕ್ಷಗಳಲ್ಲೂ ಪ್ರಬಲವಾಗಿರುತ್ತದೋ? ಅದು ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಕಾಲಘಟ್ಟ. ಹಾಗನ್ನುವುದು ಮೊದಲು 2004ರಲ್ಲಿ ಸಾಬೀತಾಯಿತು.

ಮುಂದಿನದು ಇತಿಹಾಸ. ಜೆಡಿಎಸ್ ಜತೆ ಕೈಗೂಡಿಸಿ ಸಮ್ಮಿಶ್ರ ಸರ್ಕಾರ ರಚಿಸಲು ಬಿಜೆಪಿ ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಬದಲಿಗೆ ಕಮ್ಯೂನಿಸ್ಟರ ಆಸಕ್ತಿಯ ಪರಿಣಾಮವಾಗಿ ಕಾಂಗ್ರೆಸ್-ಜೆಡಿಎಸ್ ಪರಸ್ಪರ ಕೈಗೂಡಿಸುವಂತಾಯಿತು. 2004ರಲ್ಲಿ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದುದು ಹೀಗೆ.

ಶ್ರಮ ಹಾಕಿದರೆ ಮಾತ್ರ ಕಾಂಗ್ರೆಸ್ಸಿಗೆ ಗದ್ದುಗೆ

ಶ್ರಮ ಹಾಕಿದರೆ ಮಾತ್ರ ಕಾಂಗ್ರೆಸ್ಸಿಗೆ ಗದ್ದುಗೆ

ಈ ಬಾರಿಯೂ ಕರ್ನಾಟಕದ ರಾಜಕೀಯ ಪಕ್ಷಗಳಲ್ಲಿ ಆತ್ಮವಿಶ್ವಾಸ ಎಂಬುದು ಪರಾಕಾಷ್ಠೆಗೆ ತಲುಪಿದೆ. ಯಾವ ಪಕ್ಷಗಳ ನಾಯಕರನ್ನೇ ಆಂತರಂಗಿಕವಾಗಿ ಮಾತನಾಡಿಸಿ ನೋಡಿದರೆ ಈ ಆತ್ಮವಿಶ್ವಾಸದ ಲೆವೆಲ್ಲು ಅರ್ಥವಾಗಿಬಿಡುತ್ತದೆ.

ಸಿದ್ಧರಾಮಯ್ಯ ಕೂಡಾ ಹಲವು ಹಂತದ ಸರ್ವೇಗಳನ್ನು ಮಾಡಿಸಿದ್ದಾರೆ. ಅವರದೂ ಯಥಾ ಪ್ರಕಾರ ಎ.ಬಿ.ಸಿ.ಡಿ. ಅಂದರೆ ಗೆದ್ದೇ ಗೆಲ್ಲುತ್ತಾರೆ ಅನ್ನುವ ವಿಶ್ವಾಸ ಇರುವ ಕಾಂಗ್ರೆಸ್ ನ "ಎ" ಪಟ್ಟಿಯಲ್ಲಿ ಎಂಭತ್ತು, ಇನ್ನಷ್ಟು ಬಲ ತುಂಬಿದರೆ ಗೆಲ್ಲುತ್ತಾರೆ ಎಂಬ "ಬಿ" ಪಟ್ಟಿಯಲ್ಲಿ ಮೂವತ್ತು, ತುಂಬ ಶಕ್ತಿ ಹಾಕಿದರೆ ಗೆಲ್ಲಬಹುದು ಅನ್ನುವವರ ಪಟ್ಟಿಯಲ್ಲಿ ನಲವತ್ತು ಜನರಿದ್ದಾರೆ. ಫೈನಲಿ "ಡಿ" ಪಟ್ಟಿಯಲ್ಲಿ ಉಳಿದವರಿದ್ದಾರೆ.

ಹೀಗಾಗಿ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯುವ ಪರಿಸ್ಥಿತಿ ಇನ್ನೂ ಕಣ್ಣ ಮುಂದಿಲ್ಲವಾದರೂ ಸ್ವಲ್ಪ ಪರಿಶ್ರಮ ಹಾಕಿದರೆ ಸರ್ಕಾರ ರಚಿಸಲು ಅಗತ್ಯವಾದ ಮ್ಯಾಜಿಕ್ ನಂಬರ್ ಲಭ್ಯವಾಗುತ್ತದೆ ಎಂಬುದು ಸಿದ್ಧರಾಮಯ್ಯ ಅವರ ನಂಬಿಕೆ.

ಬಿಜೆಪಿ ಆತ್ಮವಿಶ್ವಾಸಕ್ಕೂ ಕೊರತೆಯೇನಿಲ್ಲ

ಬಿಜೆಪಿ ಆತ್ಮವಿಶ್ವಾಸಕ್ಕೂ ಕೊರತೆಯೇನಿಲ್ಲ

ಇದೇ ರೀತಿ ಬಿಜೆಪಿ ಒಳವಲಯಗಳಲ್ಲಿ ಪ್ರವೇಶಿಸಿ ಮಾತನಾಡಿದರೆ ಅಲ್ಲೂ ಆತ್ಮವಿಶ್ವಾಸಕ್ಕೆ ಯಾವುದೇ ಕೊರತೆಯಿಲ್ಲ. ಅವರ ಎಬಿಸಿಡಿ ಪಟ್ಟಿಯಲ್ಲೂ ಅನುಕ್ರಮವಾಗಿ ಎಂಭತ್ತೈದು, ಮೂವತ್ತೈದು, ಮೂವತ್ತು ಹಾಗೂ ಉಳಿದದ್ದು ಎಂಬ ವರ್ಗೀಕರಣ ಇದೆ.

ಮುಂದಿನ ದಿನಗಳಲ್ಲಿ ನಡೆಯುವ ಬೆಳವಣಿಗೆಗಳು ಸಹಜವಾಗಿಯೇ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ದುರ್ಬಲಗೊಳಿಸಲಿವೆ ಮತ್ತು ಅದರ ಲಾಭ ಬಿಜೆಪಿಗೆ ದಕ್ಕಲಿದೆ ಎನ್ನುತ್ತಾರೆ ಬಿಜೆಪಿ ನಾಯಕರು.

ಹೀಗಾದಾಗ ಬಿ ಪಟ್ಟಿಯಿಂದ ಮುಂದಿನ ಪಟ್ಟಿಗಳು ಸಹಜವಾಗಿಯೇ ಬಲ ಪಡೆಯುತ್ತಾ ಹೋಗುತ್ತವೆ. ಆದ್ದರಿಂದ ಮುಂದಿನ ಸಲ ಸರ್ಕಾರ ರಚಿಸುವುದು ನಾವೇ ಎಂಬ ಮಾತು ಅವರಿಂದ ಕೇಳಿ ಬರುತ್ತದೆ.

ಒಡೆದ ಮನೆಯಾಗಿರುವ ಜೆಡಿಎಸ್

ಒಡೆದ ಮನೆಯಾಗಿರುವ ಜೆಡಿಎಸ್

ಈ ಮಧ್ಯೆ ಕೆಲ ಕಾಲದ ಹಿಂದೆ ಜೆಡಿಎಸ್ ಎಲ್ಲಿದೆ? ಎಂಬ ಮಾತು 2004ರಲ್ಲಿ ಕೇಳಿ ಬಂದಂತೆ ಕೇಳಿ ಬರುತ್ತಿತ್ತು. ಜೆಡಿಎಸ್ ಈಗ ಒಡೆದ ಮನೆ. ಈಗಾಗಲೇ ಹಲ ಜೆಡಿಎಸ್ ಶಾಸಕರು ಕಾಂಗ್ರೆಸ್ ಹಾಗೂ ಬಿಜೆಪಿ ಕಡೆ ವಲಸೆ ಹೋಗಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ವಲಸೆ ಹೋಗುತ್ತಾರೆ. ಹೀಗಿರುವಾಗ ಆ ಪಕ್ಷ ಇಪ್ಪತ್ತೈದರ ಗಡಿ ದಾಟುವುದೂ ಕಷ್ಟ ಎಂದು ಪ್ರಮುಖವಾಗಿ ಸಿಎಂ ಸಿದ್ಧರಾಮಯ್ಯ ಗುಂಪಿನ ನಾಯಕರು ಮಾತನಾಡುತ್ತಿದ್ದರು.
ಜೆಡಿಎಸ್ ಗೆ ಈಗ ಬಂದಿದೆ ಆನೆ ಬಲ

ಜೆಡಿಎಸ್ ಗೆ ಈಗ ಬಂದಿದೆ ಆನೆ ಬಲ

ಆದರೆ ನೋಡ ನೋಡುತ್ತಿದ್ದಂತೆಯೇ ಜೆಡಿಎಸ್ ಬಲ ಹೆಚ್ಚತೊಡಗಿದೆ. ಕೆಲ ಕಾಲದ ಹಿಂದೆ ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರ ಜತೆ ಜೆಡಿಎಸ್ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿತು.

ಮಾಯಾವತಿ ಅವರ ನೇತೃತ್ವದ ಬಹುಜನ ಸಮಾಜ ಪಕ್ಷಕ್ಕೆ ಕರ್ನಾಟಕದಲ್ಲಿ ತನ್ನದೇ ಆದ ನೆಲೆ ಇದೆ. 2004ರಲ್ಲಿ ಕೃಷ್ಣ ಅವರ ಸರ್ಕಾರದ ಆತ್ಮವಿಶ್ವಾಸ ಮಗುಚಿ ಬೀಳಲು ಕಾರಣವಾದ ಶಕ್ತಿಗಳಲ್ಲಿ ಬಹುಜನ ಸಮಾಜ ಪಕ್ಷದ ಪಾತ್ರ ತುಂಬ ದೊಡ್ಡದು ಎಂಬುದನ್ನು ಮರೆಯಬಾರದು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಇದೇ ಕೆಲಸ ಮಾಡಿದರೆ, ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಅಂದ ಹಾಗೆ ಒಂದು ಕ್ಷೇತ್ರದ ಫಲಿತಾಂಶವನ್ನು ಕೆಲವೇ ಸಾವಿರ ಮತಗಳ ಅಂತರದಲ್ಲೂ ಬದಲಿಸಬಹುದು ಅನ್ನುವುದನ್ನೂ ಮರೆಯಬಾರದು.

ಜೆಡಿಎಸ್ ಪಕ್ಷಕ್ಕೆ ಸಿಕ್ಕಿಗೆ ಪವಾರ್ ಅವರ ಪವರ್

ಜೆಡಿಎಸ್ ಪಕ್ಷಕ್ಕೆ ಸಿಕ್ಕಿಗೆ ಪವಾರ್ ಅವರ ಪವರ್

ಇದೇ ರೀತಿ ನಂತರದ ದಿನಗಳಲ್ಲಿ ಜೆಡಿಎಸ್ ಸಾಧಿಸಿದ್ದು ಮಹಾರಾಷ್ಟ್ರದ ಶರದ್ ಪವಾರ್ ನೇತೃತ್ವದ ಎನ್.ಸಿ.ಪಿ ಪಕ್ಷದ ಸಾಂಗತ್ಯ. ವಿಶೇಷವಾಗಿ ಮುಂಬಯಿ-ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಎನ್.ಸಿ.ಪಿ ತಲೆ ಎತ್ತಿ ನಿಲ್ಲಬಲ್ಲದು. ಅಷ್ಟೇ ಯಾಕೆ? ಹಳೆ ಮೈಸೂರು ಭಾಗದ ಬಹುತೇಕ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಾದರೂ ಅದು ಮತದಾರರನ್ನು ಸೆಳೆದು ಜೆಡಿಎಸ್ ಗೆ ಬಲ ನೀಡಬಹುದು.

ಜೆಡಿಎಸ್ ನ ಮುಂದಿನ ಗುರಿ ಕಮ್ಯೂನಿಸ್ಟ್ ಪಕ್ಷ

ಜೆಡಿಎಸ್ ನ ಮುಂದಿನ ಗುರಿ ಕಮ್ಯೂನಿಸ್ಟ್ ಪಕ್ಷ

ಜೆಡಿಎಸ್ ನ ಮುಂದಿನ ಗುರಿ ಕಮ್ಯೂನಿಸ್ಟ್ ಪಕ್ಷ. ಕೇಂದ್ರದಲ್ಲಿ ಯುಪಿಎ ಸರ್ಕಾರದ ಅಂಗಪಕ್ಷವಾಗಿದ್ದ ಕಮ್ಯೂನಿಸ್ಟ್ ಪಕ್ಷ ಅಮೆರಿಕದೊಂದಿಗಿನ ಅಣುಬಂಧ ಒಪ್ಪಂದದ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರಕ್ಕೆ ಕೊಟ್ಟ ಬೆಂಬಲವನ್ನು ವಾಪಸ್ ಪಡೆದಿತ್ತು.

ಆನಂತರದ ದಿನಗಳಲ್ಲಿ ಅದು ಕಾಂಗ್ರೆಸ್ ಪಕ್ಷದೊಂದಿಗೆ ಹೇಳಿಕೊಳ್ಳುವಂತಹ ಸಂಬಂಧ ಇರಿಸಿಕೊಂಡಿಲ್ಲ. ಸನ್ನಿವೇಶ ಬಂದರೆ ಕಾಂಗ್ರೆಸ್ ಪಕ್ಷ ತನ್ನ ಜತೆಗಾರರನ್ನೇ ನುಂಗಲು ಯತ್ನಿಸುತ್ತದೆ ಎಂಬ ಸಿಟ್ಟು ಕಮ್ಯೂನಿಸ್ಟ್ ಪಕ್ಷಕ್ಕೂ ಇದೆ.

ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಇರುವುದೂ ಇದೇ ಸಿಟ್ಟು. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿದ ಒಂದು ಶಕ್ತಿ ರಾಜ್ಯದಲ್ಲಿ ತಲೆ ಎತ್ತುವಂತೆ ಮಾಡಲು ಅವರು ಶ್ರಮಿಸುತ್ತಿದ್ದಾರೆ.

ಅತಂತ್ರ ಸ್ಥಿತಿ ನಿರ್ಮಾಣವಾದರೆ ಲಾಭ ಜೆಡಿಎಸ್ಸಿಗೆ

ಅತಂತ್ರ ಸ್ಥಿತಿ ನಿರ್ಮಾಣವಾದರೆ ಲಾಭ ಜೆಡಿಎಸ್ಸಿಗೆ

ಪರಿಣಾಮವಾಗಿಯೇ ಜೆಡಿಎಸ್ ಕೂಡಾ ಆತ್ಮವಿಶ್ವಾಸದ ವಲಯವನ್ನು ಪ್ರವೇಶಿಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಂತೆ ಅದರ ಎ.ಬಿ.ಸಿ.ಡಿ ಗ್ರಾಫು ದೊಡ್ಡ ಮಟ್ಟದಲ್ಲಿಲ್ಲದಿದ್ದರೂ ಫೈನಲಿ, ಅತಂತ್ರ ವಿಧಾನಸಭೆ ನಿರ್ಮಾಣವಾಗಲು ಏನು ಮಾಡಬೇಕೋ? ಅಷ್ಟನ್ನು ಮಾಡಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ಅದಕ್ಕಿದೆ.

ಹೀಗೆ ಎಲ್ಲ ಪಕ್ಷಗಳ ಆತ್ಮವಿಶ್ವಾಸವನ್ನು ನೋಡಿದರೆ, ಎನಿ ಬಡಿ ಕ್ಯಾನ್ ಡ್ಯಾನ್ಸ್ ಅನ್ನುವ ಬಾವನೆ ಸಹಜವಾಗಿಯೇ ಮೂಡುತ್ತದೆ. ಹೀಗಾಗಿಯೇ ಮುಂದಿನ ವಿಧಾನಸಭಾ ಚುನಾವಣೆಯ ಫಲಿತಾಂಶ ಹೀಗೇ ಆಗುತ್ತದೆ ಎಂಬ ಮಾತು ಯಾರಿಂದಲೂ ಕೇಳಿ ಬರುತ್ತಿಲ್ಲ. ಇದೇ ಸದ್ಯದ ವಿಶೇಷ.

English summary
Battle for Karnataka Assembly Elections 2018 is hotting up. Congress, BJP, JDS are confident that they are going to form the government. But, this confidence may lead to hung assembly. Political analysis by R T Vittalmurthy for his Kannada column.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X