ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಲಾಪ: ಪ್ರತಾಪನ ಡ್ರೋನ್ ಮತ್ತು ಡಾ ಕಜೆ ಕೊರೋನಾ ಔಷಧ

By Dr. ದಯಾನಂದ ಲಿಂಗೇಗೌಡ, ರೇಡಿಯೊಲೊಜಿಸ್ಟ್
|
Google Oneindia Kannada News

ಇಂದಿನ ದಿನಮಾನಗಳಲ್ಲಿ ಎಲ್ಲ ಮಾಧ್ಯಮ ಮತ್ತು ಜಾಲತಾಣಗಳಲ್ಲಿ ಅತ್ಯಂತ ಚರ್ಚಿಸಿದ ವಿಷಯಗಳೆಂದರೆ ಪ್ರತಾಪನ ಡ್ರೋನ್ ಮತ್ತು ಡಾಕ್ಟರ್ ಗಿರಿಧರ ಕಜೆ ಅವರ ಕೊರೋನಾ ಔಷಧ.

Recommended Video

8 ದಿನ ದಾವಣಗೆರೆಯ ಸ್ಟಾರ್ ಹೋಟೆಲ್ ನಲ್ಲಿ ಇದ್ದ ಡ್ರೋನ್ ಪ್ರತಾಪ್.

ಡಾ ಗಿರಿಧರ ಕಜೆಯವರು "ನಾನು ಕರೋನದ ವಿರುದ್ಧ ಒಂದು ಆಯುರ್ವೇದಿಕ್ ಔಷಧಿಯನ್ನು ಕಂಡುಹಿಡಿದಿದ್ದೇನೆ. ಅದನ್ನು ಆಧುನಿಕ ವೈದ್ಯಕೀಯ ಶಾಸ್ತ್ರದ ಕ್ಲಿನಿಕಲ್ ನಿಯಮಗಳ ಪ್ರಕಾರ ಹತ್ತು ರೋಗಿಗಳ ಮೇಲೆ ಸಂಶೋಧನೆಗೆ ಒಳಪಡಿಸಿದ್ದೇನೆ. ಎಲ್ಲಾ ರೋಗಿಗಳೂ ನನ್ನ ಔಷಧಿಯಿಂದ ಗುಣಮುಖರಾಗಿದ್ದಾರೆ" ಎಂದು ಪತ್ರಿಕಾ ಹೇಳಿಕೆ ನೀಡಿದ್ದರು.

ಕೊರೊನಾ 'ದುರ್ಬಲ' ವೈರಸ್: ಯಶಸ್ವಿ ಕ್ಲಿನಿಕಲ್ ಟ್ರಯಲ್ ನಡೆಸಿದ ಡಾ.ಗಿರಿಧರ ಕಜೆ ಸಂದರ್ಶನಕೊರೊನಾ 'ದುರ್ಬಲ' ವೈರಸ್: ಯಶಸ್ವಿ ಕ್ಲಿನಿಕಲ್ ಟ್ರಯಲ್ ನಡೆಸಿದ ಡಾ.ಗಿರಿಧರ ಕಜೆ ಸಂದರ್ಶನ

'ಈ ಔಷಧವನ್ನು ಬಿಡುಗಡೆ ಮಾಡಲು ಸರ್ಕಾರದ ಅನುಮತಿ ಕೇಳಿದ್ದೇನೆ ಮತ್ತು ಔಷಧ ಪೇಟೆಂಟನ್ನು ಉಚಿತವಾಗಿ ಸರ್ಕಾರಕ್ಕೆ ವರ್ಗಾಯಿಸಲು ಸಿದ್ಧನಿದ್ದೇನೆ' ಎಂಬ ಈ ಭಾವನಾತ್ಮಕ ವಿಷಯವನ್ನು ಕೂಡ ಹೇಳಿದ್ದರು. ಹಲವು ಪತ್ರಿಕೆಗಳು ಕೂಡ ಡಾಕ್ಟರ ಕಜೆ ಯವರ ಟ್ರಯಲ್ ನ ಸಿ ಟಿ ಆರ್ ಐ ನಂಬರ್ ಕೂಡ ತಮಗೆ ದೊರಕಿದೆ ಅದನ್ನು ನಾವು ಪರಿಶೀಲಿಸಿದ್ದೇವೆ ಎಂದು ವರದಿ ಮಾಡಿಕೊಂಡಿದ್ದವು.

ಈ ವಿಷಯವನ್ನು ಕೇಳಿದ ಸಾರ್ವಜನಿಕರಿಗೆ ಒಂದು ರೀತಿಯ ರೋಮಾಂಚನ ಉಂಟಾಗಿತ್ತು.ಒಂದು ಕಡೆ ಸ್ವದೇಶೀ ಔಷಧ , ಇನ್ನೊಂದುಕಡೆ ನಮ್ಮ ರಾಜ್ಯದ ವೈದ್ಯರು. ಅದೂ ಅಲ್ಲದೆ ಕೇವಲ ಕೆಲವು ರೂಪಾಯಿಗಳಲ್ಲಿ ಕೊರೋನಾ ರೋಗ ಗುಣಪಡಿಸಬಹುದು ಎಂದು ಸಾರ್ವಜನಿಕರಿಗೆ ಸಂತೋಷ ಉಂಟಾಗಿತ್ತು. ಸಾರ್ವಜನಿಕರಲ್ಲಿ ಮತ್ತು ಜಾಲತಾಣಗಳಲ್ಲಿ ಡಾ ಗಿರಿಧರ ಕಜೆರವರು ಹೀರೋ ಆಗಿದ್ದರು.

ಆರ್ಯುವೇದಿಕ್ ಔಷಧಗೆ ಅನುಮತಿ ಸಿಗುತ್ತಿಲ್ಲ?

ಆರ್ಯುವೇದಿಕ್ ಔಷಧಗೆ ಅನುಮತಿ ಸಿಗುತ್ತಿಲ್ಲ?

ಬಕ ಪಕ್ಷಿಯ ಹಾಗೆ ಕಾಯುತ್ತಿದ್ದ ಸಾರ್ವಜನಿಕರಿಗೆ, ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ. ಔಷಧ ಯಶಸ್ವಿ ಪ್ರಯೋಗ ಎಂದು ಘೋಷಣೆಯಾದರೂ, ಔಷಧಿ ಸಾರ್ವಜನಿಕರಿಗೆ ಲಭ್ಯವಾಗಲಿಲ್ಲ. ಇದಕ್ಕೆ ಪತ್ರಿಕಾ ವಿವರಣೆ ನೀಡಿದ ಡಾ ಗಿರಿಧರ ಕಜೆ ಯವರು 'ಸರ್ಕಾರದ ಅನುಮತಿ ಸಿಗುತ್ತಿಲ್ಲ, ಆದ್ದರಿಂದ ಸಾರ್ವಜನಿಕರಿಗೆ ಔಷಧ ನೀಡಲು ಸಾಧ್ಯವಿಲ್ಲ' ಎಂದು ಸರ್ಕಾರದ ಮೇಲೆ ಬೆರಳು ತೋರಿಸಿ ಸುಮ್ಮನಾದರು. ' ಆಧುನಿಕ ವೈದ್ಯಪದ್ಧತಿಯ ಕಂಪನಿಯವರ ಲಾಬಿ ಒತ್ತಡದಿಂದ ಡಾಕ್ಟರ್ ಗಿರಿಧರ ಕಡೆಯವರ ಆರ್ಯುವೇದಿಕ್ ಔಷಧಗೆ ಅನುಮತಿ ಸಿಗುತ್ತಿಲ್ಲ ' ಎಂಬ ಪತ್ರಿಕಾವರದಿಗಳು ಪ್ರಕಟವಾದವು.

ಇದು ಒಂದು ರೀತಿಯ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಜಾಲತಾಣದಲ್ಲಿ ಔಷಧ ಬಿಡುಗಡೆಗೆ ಅಂತರ್ಜಾಲ ಆಂದೋಲನಗಳು ನಡೆದವು. ವ್ಯಾಪಕವಾಗಿ ಡಾಕ್ಟರ್ ಗಿರಿಧರ ಕಜೆಯವರ ಔಷಧಕ್ಕೆ ಅನುಮತಿ ನೀಡದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಕೆಲವು ಹಿರಿಯ ನಾಯಕ ನಟರುಗಳು ಮತ್ತು ರಾಜಕಾರಣಿಗಳು ತಾವು ಗಿರಿಧರ ಕಜೆ ಅವರ ಔಷಧ ಸೇವನೆಯಿಂದ ಕೋರೋನಾ ಮುಕ್ತವಾಗಿದ್ದೇವೆ ಎಂಬ ಹೇಳಿಕೆಗಳು ಕೂಡ ಸಾರ್ವಜನಿಕರಿಗೆ ಆಕ್ರೋಶ ಮುಗಿಲು ಮುಟ್ಟುವಂತೆ ಮಾಡಿದವು .

ಅದೇನಾಯಿತೋ ಏನೋ, ಡಾಕ್ಟರ್ ಗಿರಿಧರ ಕಜೆಯವರೂ ಕೂಡ ಮೌನ ವಹಿಸುವ ಮೂಲಕ, ತಮ್ಮ ಮೇಲೆ ಔಷಧವನ್ನು ಬಿಡುಗಡೆ ಮಾಡದಿರಲು ಒತ್ತಡವಿದೆ ಎಂಬ ಹಾಗೆಯೇ ನಡೆದುಕೊಂಡಿದ್ದರು.

ಜಾಲತಾಣದಲ್ಲಿ ಜಾಹಿರಾತುಗಳು ಮೂಡಿಬಂದವು

ಜಾಲತಾಣದಲ್ಲಿ ಜಾಹಿರಾತುಗಳು ಮೂಡಿಬಂದವು

ಜನರ ಆಕ್ರೋಶವನ್ನು ಮತವಾಗಿ ಪರಿವರ್ತಿಸಿಕೊಳ್ಳಲು ಕೆಲವು ರಾಜಕಾರಣಿಗಳು ಕೂಡ ಮುಂದಾದರು. 'ಔಷಧಿಗೆ ಪರವಾನಗಿ ಸಿಗದಿದ್ದರೆ ಏನಂತೆ. ನಮ್ಮ ಕ್ಷೇತ್ರದಲ್ಲಿ ಎಲ್ಲ ಮತದಾರರಿಗೂ ಔಷಧವನ್ನು ಉಚಿತವಾಗಿ ನೀಡಲಾಗುತ್ತದೆ ನೀಡಲಾಗುತ್ತದೆ' ಎಂದು ಹೇಳುವ ಮೂಲಕ , ಕಾನೂನು ಬಾಹಿರವಾಗಿಯಾದರೂ ಸರಿ, ಈ ಔಷಧ ಸಾರ್ವಜನಿಕರಿಗೆ ತಲುಪಿಸುತ್ತೇವೆ ಎನ್ನುವ ಮೂಲಕ ಜನಪ್ರಿಯತೆ ಗಳಿಸಿದರು. ಜಾಲತಾಣದಲ್ಲಿ 'ಕಜೆಯವರ ಔಷಧ ಬೇಕಾದರೆ 150 ರು ಕಳುಹಿಸಿ ' ಎಂಬ ಜಾಹಿರಾತುಗಳು ಮೂಡಿಬಂದವು.

ಕನ್ನಡದ ಒಬ್ಬ ಸಂಗೀತ ನಿರ್ದೇಶಕರು ವಿಡಿಯೋ ಸಂದೇಶದಲ್ಲಿ ತಮ್ಮ ಆಕ್ರೋಶವನ್ನು ಕೂಡ ವ್ಯಕ್ತಪಡಿಸಿದ್ದರು. ಅದರಲ್ಲಿ 'ಸಾವಿರಾರು ರೂಪಾಯಿ ಆಧುನಿಕ ವೈದ್ಯಪದ್ಧತಿಯ ಬಯೋಕಾನ್ ಔಷಧವನ್ನು ರಾಜಕಾರಣಿಗಳು ಹಣವನ್ನು ಪಡೆದುಕೊಂಡು ಅನುಮತಿ ನೀಡಿದ್ದಾರೆ. ಆದರೆ ಯಾವುದೇ ಹಣ ಬಲವಿಲ್ಲದ ಡಾ ಗಿರಿಧರ ಕಜೆ ಯವರು, ಕೇವಲ 150 ರೂ ಗೆ , ಯಾವುದೇ ಅಡ್ಡಪರಿಣಾಮಗಳಿಲ್ಲದ ಔಷಧ ಕೊಡುತ್ತೇನೆ ಎಂದು ಹೇಳಿದರೂ, ಬಿಡುಗಡೆ ಮಾಡಲು ರಾಜಕಾರಣಿಗಳು ನಿರಾಕರಿಸುತ್ತಿದ್ದಾರೆ. ಇದು 'ಭ್ರಷ್ಟಾಚಾರ ಪರಾಕಾಷ್ಠೆ' ಹೇಳಿಕೊಟ್ಟಿದ್ದು ಬಹಳ ಸ್ವಾರಸ್ಯಕರವಾಗಿತ್ತು.

ಕೊರೊನಾವನ್ನು ಆಯುರ್ವೇದದ ಮೂಲಕ ಗುಣಪಡಿಸಬಲ್ಲೆ: ಖ್ಯಾತ ಆಯುರ್ವೇದ ತಜ್ಞ, ಡಾ.ಕಜೆಕೊರೊನಾವನ್ನು ಆಯುರ್ವೇದದ ಮೂಲಕ ಗುಣಪಡಿಸಬಲ್ಲೆ: ಖ್ಯಾತ ಆಯುರ್ವೇದ ತಜ್ಞ, ಡಾ.ಕಜೆ

ಇವೆಲ್ಲದರ ಪರಿಣಾಮವಾಗಿ, ಆಧುನಿಕ ವೈದ್ಯಪದ್ಧತಿಯ ಕಂಪನಿಯ ಲಾಬಿಯಿಂದ, ಆಯುರ್ವೇದಿಕ್ ಔಷಧವನ್ನು ಬಿಡುಗಡೆ ಮಾಡಲು ಮುಂದಾಗುತ್ತಿಲ್ಲ ಎಂಬ ಭಾವನೆ ಸಾರ್ವಜನಿಕರಲ್ಲಿ ಉಂಟು ಮಾಡುವಂತೆ ಮಾಡಿತು . ಇದಕ್ಕೆ ರಾಷ್ಟ್ರೀಯತೆ, ಸ್ವದೇಶಿ, ಆಯುರ್ವೇದ ವೈದ್ಯಪದ್ಧತಿಯ ಮೇಲಿನ ಜನರ ಆಸ್ಥೆ ಎಲ್ಲ ಬೆರೆತು, ಸರ್ಕಾರದ ವಿರುದ್ಧ ಕ್ರಾಂತಿ ಉಂಟಾಗುತ್ತಿದೆಯೇನೋ ಎಂಬ ಭಾವನೆ ಸೃಷ್ಟಿಯಾಗಿತ್ತು.

ಕಥೆಯ ಇನ್ನೊಂದು ಮುಖಕ್ಕೆ ಬರೋಣ

ಕಥೆಯ ಇನ್ನೊಂದು ಮುಖಕ್ಕೆ ಬರೋಣ

ನೀವು ಇದುವರೆಗೆ ಕೇಳಿದ್ದು ಕಥೆಯ ಒಂದು ಮುಖ. ಈಗ ಕಥೆಯ ಇನ್ನೊಂದು ಮುಖಕ್ಕೆ ಬರೋಣ. ಯಾವುದಾದರೂ ಒಂದು ಔಷಧಿ ಕಂಡು ಹಿಡಿದಾಗ ಸಾಮಾನ್ಯವಾಗಿ ಅದನ್ನು ಮಾನವರಲ್ಲಿ ಪ್ರಯೋಗಿಸಲು ಕನಿಷ್ಠ ಮೂರು ಹಂತದ ಸಂಶೋಧನೆ ನೆಡೆಯುತ್ತದೆ. ಈ ಪ್ರಯೋಗ ನಡೆಸುವ ಮೊದಲು' ಇಂತಹ ಪ್ರಯೋಗವನ್ನು ನಾವು ಮಾಡುತ್ತಿದ್ದೇವೆ' ಎಂದು ಸಿಟಿಆರ್ ಐ (ಕ್ಲಿನಿಕಲ್ ಟ್ರೈಯಲ್ ರೆಜಿಸ್ಟ್ರಿ ) ನಮೂದಿಸಿಕೊಳ್ಳಬೇಕು.

ಇಲ್ಲಿ ನೀವು ಗಮನಿಸಬೇಕಾದ ಅಂಶ ಏನೆಂದರೆ ಸಿಟಿಆರ್ ಐ, ರಿಜಿಸ್ಟ್ರಿ ಮಾತ್ರ. ಇದು ಇಂತಹ ಪ್ರಯೋಗ ನೆಡೆದಿದೆ ಎಂದು ಮಾತ್ರ ತಿಳಿಸುತ್ತದೆಯೇ ಹೊರತು, ಪ್ರಯೋಗ ಯಶಸ್ವಿಯಾಗಿದೆಯೋ ಅಥವಾ ಸರಿಯಾಗಿ ನೆಡೆದಿದೆಯೋ ಎಂಬ ಯಾವುದೇ ಒಂದು ಮಾಹಿತಿಯನ್ನು ಕೊಡುವುದಿಲ್ಲ. ಅದು ಈ ಪ್ರಯೋಗವನ್ನು ನಡೆದಿದೆ ಎಂಬುದು ದಾಖಲಾತಿ ಮಾತ್ರ.

ಮಾಧ್ಯಮದರು ಹಳ್ಳಕ್ಕೆ ಬಿದ್ದಿದ್ದು ಮಾತ್ರ ಸತ್ಯ

ಮಾಧ್ಯಮದರು ಹಳ್ಳಕ್ಕೆ ಬಿದ್ದಿದ್ದು ಮಾತ್ರ ಸತ್ಯ

ಈ ದಾಖಲಾತಿ ನಂಬರನ್ನೇ ಮಾಧ್ಯಮಗಳು ಯಶಸ್ವಿ ಪ್ರಯೋಗವೆಂಬಂತೆ ಬಿಂಬಿಸಿದ್ದು , ಡಾ ಗಿರಿಧರ ಕಜೆಯವರ ತಂತ್ರವೋ ಏನೋ ಗೊತ್ತಿಲ್ಲ. ಆದರೆ ಮಾಧ್ಯಮದರು ಹಳ್ಳಕ್ಕೆ ಬಿದ್ದಿದ್ದು ಮಾತ್ರ ಸತ್ಯ. ಸೂಕ್ತ ದಾಖಲೆಗಳಿಲ್ಲದೆ ಮಾಧ್ಯಮದ ಮುಂದೆ , ಪ್ರಯೋಗ ಯಶಸ್ವಿ ಎಂದು ಘೋಷಿಸಿಕೊಂಡಿದ್ದಕ್ಕೆ ಪ್ರಯೋಗ ನಡೆದ ಬೆಂಗಳೂರು ಮೆಡಿಕಲ್ ಕಾಲೇಜಿನ ಎಥಿಕ್ಸ್ ಕಮಿಟಿ ಡಾ ಗಿರಿಧರ್ ಕಜೆರವರಿಗೆ ನೋಟೀಸ್ ಕೊಟ್ಟ ಬಗ್ಗೆ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಡಾ ಕಜೆಯವರು ನನಗೆ ನೋಟೀಸ್ ತಲುಪಿಲ್ಲ ಎಂದು ಹೇಳಿಕೊಂಡಿದ್ದಾರೆಯೇ ಹೊರತು, ಇದುವರೆಗೆ ಸಂಬಂಧಪಟ್ಟ ಇಲಾಖೆಯಿಂದ ಪತ್ರಮುಖೇನ ದೃಢೀಕರಿಸಿಲ್ಲ

ಕೋವಿಡ್‌ಗೆ ಔಷಧ; ಡಾ. ಗಿರಿಧರ ಕಜೆಗೆ ನೋಟಿಸ್ಕೋವಿಡ್‌ಗೆ ಔಷಧ; ಡಾ. ಗಿರಿಧರ ಕಜೆಗೆ ನೋಟಿಸ್

ಒಂದು ವೇಳೆ ಡಾಕ್ಟರ್ ಗಿರಿಧರ ಕಜೆಯವರ ಔಷಧ ಸಂಶೋಧನೆ ಯಶಸ್ವಿಯಾಗಿದೆ ಎಂದೇ ಇಟ್ಟುಕೊಳ್ಳೋಣ. ಸಾಮಾನ್ಯವಾಗಿ ಈ ರೀತಿಯ ಔಷಧ ಪ್ರಯೋಗ ಯಶಸ್ವಿಯಾದರೆ ಮುಂದಿನ ಹೆಜ್ಜೆಯಾಗಿ ಆ ಪ್ರಯೋಗದ ವಿವರಗಳನ್ನು ಐಸಿಎಂಆರ್ ಸಂಸ್ಥೆಗೆ ಕೊಡಬೇಕು ಮತ್ತು ಅದರಿಂದ ಪ್ರಯೋಗದ ಸರಿಯೋ ಇಲ್ಲವೋ ಎಂಬುದು ತಜ್ಞರಿಂದ ವಿಮರ್ಶೆಯಾಗಿ ಅನುಮೋದನೆ ಪಡೆದುಕೊಳ್ಳಬೇಕು.

ಆಯುರ್ವೇದ ತಜ್ಞರ ವಿಮರ್ಶೆಗೆ ಒಳಪಡಬೇಕಿತ್ತು

ಆಯುರ್ವೇದ ತಜ್ಞರ ವಿಮರ್ಶೆಗೆ ಒಳಪಡಬೇಕಿತ್ತು

ಅನುಮೋದನೆ ಸಿಕ್ಕ ನಂತರ ಅವರು ಆಯುಷ್ ಮಂತ್ರಾಲಯದಲ್ಲಿ ಔಷಧ ಬಿಡುಗಡೆಗೆ ಅರ್ಜಿಯನ್ನು ಸಲ್ಲಿಸಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದರಲ್ಲಿ ಸರ್ಕಾರದ ಯಾವ ಪಾತ್ರವೂ ಇಲ್ಲ. ಇವೆಲ್ಲವೂ ಆಯಾ ವಿಷಯದ ತಜ್ಞರು ಮತ್ತು ಅಧಿಕಾರಿಗಳ ಮಟ್ಟದಲ್ಲಿ ನಡೆಯುವ ವಿಚಾರ. ಇದು ತಜ್ಞರ ಕೆಲಸ. ಅದು ಅಲ್ಲದೆ ಔಷಧಗಳ ಗಂಧ ಗಾಳಿಯು ಗೊತ್ತಿಲ್ಲದ ಮಂತ್ರಿಗಳು ಅಥವಾ ಮುಖ್ಯಮಂತ್ರಿಗಳು ಶಿಫಾರಸ್ಸಿನ ಮೇಲೆ ಯಾವ ಔಷಧಗಳು ಕೂಡ ಬಿಡುಗಡೆಯಾಗುವುದಿಲ್ಲ.

ಬರಿ ಶಿಫಾರಿಸ್ಸಿನ ಮೇಲೆ, ಔಷಧ ಮಾರುಕಟ್ಟೆಗೆ ಬರುವಂತೆ ಆಗಿದ್ದರೆ ಪ್ರತಿಯೊಬ್ಬ ರಾಜಕಾರಣಿಯೂ , ಒಂದು ಔಷಧ ಕಂಪನಿಯ ಮಾಲೀಕರಾಗುತ್ತಿದ್ದರು. ಔಷಧ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿದ್ದೇನೆ ಎಂದು ಹೇಳಿಕೊಳ್ಳುವ ಡಾ ಗಿರಿಧರ ಕಜೆ ಯವರು, ಈ ಮುಂದಿನ ಹಂತದ ಔಷಧ ಬಿಡುಗಡೆಯ ಪ್ರಕ್ರಿಯೆಯನ್ನು ಮಾಡಿದಂತೆ ತೋರುತ್ತಿಲ್ಲ. ತಮ್ಮ ಸಂಶೋಧನೆಯ ಲೇಖನಗಳನ್ನು ಎಲ್ಲಿಯೂ ಪ್ರಕಟಿಸಿಲ್ಲ. ಅದನ್ನಾದರೂ ಪ್ರಕಟಿಸಿದ್ದರೆ, ಅದು ಆಯುರ್ವೇದ ತಜ್ಞರ ವಿಮರ್ಶೆಗೆ ಒಳಪಟ್ಟು ಸತ್ಯಾಂಶ ತಿಳಿಯಬಹುದಿತ್ತು.

ಪ್ರಯೋಗದ ವಿವರಗಳನ್ನು ಐಸಿಎಂಆರ್ ಗೆ ನೀಡಿಲ್ಲ

ಪ್ರಯೋಗದ ವಿವರಗಳನ್ನು ಐಸಿಎಂಆರ್ ಗೆ ನೀಡಿಲ್ಲ

ತಮ್ಮ ಲೇಖನವನ್ನೂ ಪ್ರಕಟಿಸದೇ ಅಥವಾ ತಮ್ಮ ಪ್ರಯೋಗದ ವಿವರಗಳನ್ನು ಐ ಸಿ ಎಮ್ ಆರ್'ಗೆ ಸಹ ನೀಡದೆ ಅಥವಾ ಆಯುಷ್ ಮಂತ್ರಾಲಯಕ್ಕೆ ಕೂಡ ಇದರ ಬಗ್ಗೆ ಮಾಹಿತಿ ನೀಡದೆ, ಔಷಧಿಗೆ ಅನುಮತಿ ದೊರಕಿಲ್ಲ ಎಂದು ಪತ್ರಿಕೆಗಳ ಮುಂದೆ ಕಣ್ಣೀರಿಡುತ್ತಿರುವ ಡಾಕ್ಟರ್ ಕಜೆಯವರ ನಡೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಫೇಸ್ ಬುಕ್ ಲೈವ್ ನಲ್ಲಿ ಬಂದಿದ್ದ ಡಾ ಗಿರಿಧರ್ ಕಜೆಯವರು ಔಷಧ ನೆಗಡಿ ಕೆಮ್ಮುಗಳಿಗೆ ಉಪಯೋಗಿಸುವ ಹಳೆಯ ಔಷಧವಾಗಿದ್ದು ಇದಕ್ಕೆ , ರೋಗ ನಿರೋಧಕ ಔಷಧೀಯ ಪರವಾನಗಿ ಇದೆ ಎಂದು ಹೇಳಿದ್ದಾರೆ. ಆದರೆ ಇದು ಕೊರೋನಾ ರೋಗಕ್ಕೆ ಮದ್ದು ಎಂದು ಪ್ರಚಾರ ಕೊಡುತ್ತಿರುವುದು ಏಕೆ ಎಂದು ಅವರೇ ಉತ್ತರಿಸಬೇಕು.

ಹೆಣ್ಣು ಹಸುವಿನ ಕೆಚ್ಚಲಿಗೂ, ಎತ್ತಿನ ಅಂಗಕ್ಕೂ ವ್ಯತ್ಯಾಸ

ಹೆಣ್ಣು ಹಸುವಿನ ಕೆಚ್ಚಲಿಗೂ, ಎತ್ತಿನ ಅಂಗಕ್ಕೂ ವ್ಯತ್ಯಾಸ

ಔಷಧ ಬಿಡುಗಡೆಗೆ ಎಡತಾಗಬೇಕಾಗಿದ್ದ ಐ ಸಿ ಎಮ್ ಆರ್ ಅಥವಾ ಆಯುಷ್ ಮಂತ್ರಾಲಯವನ್ನು ಬಿಟ್ಟು, ಅವರು ಸರ್ಕಾರದ ಮಂತ್ರಿಗಳ ಮುಂದೆ ಕುಳಿತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಹಸು ಹಾಲು ಕೊಡುತ್ತಿಲ್ಲ ಎಂದು ದೂರುತ್ತಿರುವ ಡಾ ಗಿರಿಧರ ಕಜೆಯವರು ಕೂತಿರುವುದು, ಗಂಡು ಎತ್ತಿನ ಕಾಲಬಳಿ ಎಂದು ಇದು ಸಾರ್ವಜನಿಕರಿಗೆ ತಿಳಿಯುತ್ತಿಲ್ಲ. ಹೆಣ್ಣು ಹಸುವಿನ ಕೆಚ್ಚಲಿಗೂ, ಗಂಡು ಎತ್ತಿನ ಅಂಗ ಕ್ಕೂ ವ್ಯತ್ಯಾಸ ಡಾ ಗಿರಿಧರ ಕಜೆಯವರಿಗೆ ಇಲ್ಲ ಎಂದರೆ ಒಪ್ಪುವುದು ಸ್ವಲ್ಪ ಕಷ್ಟ.

ಡಾಕ್ಟರ್ ಗಿರಿಧರ ಕಜೆಯವರು ತಮ್ಮ ಸಂಶೋಧನೆ ನಿಜವಾಗಲೂ ಯಶಸ್ವಿಯಾಗಿದ್ದರೆ ಅವರು ಸಂಬಂಧಪಟ್ಟ ಇಲಾಖೆಯಲ್ಲಿ ಅನುಮತಿ ಪಡೆಯುವುದನ್ನು ಬಿಟ್ಟು ,ಸಂಬಂಧವಿಲ್ಲದ ಸರ್ಕಾರದ ಮುಂದೆ ಕುಳಿತಿರುವುದು, ಡಾಕ್ಟರ್ ಗಿರಿಧರ ಕಜೆಯವರ ಉದ್ದೇಶದ ಮೇಲೆ ಸಂಶಯ ಮೂಡುವಂತೆ ಮಾಡಿರುವುದು ಸುಳ್ಳಲ್ಲ. ಹಾಗೆ ನೋಡಿದರೆ ಪತಂಜಲಿಯ ರಾಮದೇವ್ ರವರು ಡಾಕ್ಟರ್ ಕಜೆಯವರಿಗಿಂತ ಅವರಿಗಿಂತ ಉತ್ತಮ ವ್ಯಕ್ತಿಯಾಗಿ ಕಾಣುತ್ತಾರೆ.

ಕೊರೊನಿಲ್ ಪತಾಂಜಲಿ ಔಷಧ ಬಿಡುಗಡೆ

ಕೊರೊನಿಲ್ ಪತಾಂಜಲಿ ಔಷಧ ಬಿಡುಗಡೆ

ಕೊರೊನಿಲ್ ಪತಾಂಜಲಿ ಔಷಧ ಬಿಡುಗಡೆ ಮಾಡುವಾಗ , ಇದು ಕೋರೋನಾ ಔಷಧಿ ಎಂದು ವ್ಯಾಪಕ ಪ್ರಚಾರವನ್ನು ನೀಡಿದ್ದರೂ ಕೂಡ, ಕೊನೆಗೆ ಇದೊಂದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಔಷಧ ಅಷ್ಟೇ ಎಂದು ಪರವಾನಿಗೆ ಪಡೆದುಕೊಂಡು, ಕಾನೂನಾತ್ಮಕವಾಗಿ ತಮ್ಮ ಔಷಧವನ್ನು ಬಿಡುಗಡೆ ಮಾಡಿದ್ದರು.

ಆದರೆ ಡಾಕ್ಟರ್ ಕಜೆಯವರು, ಇದು ಕೋರೋನಾ ಔಷಧಿ ಎಂದು ವಾದಿಸುತ್ತಲೇ, ಪರವಾನಗಿ ಪ್ರಕ್ರಿಯೆಯಲ್ಲಿ ಭಾಗವಹಿಸದೇ, ಸರ್ಕಾರ ಮೇಲೆ ತಪ್ಪು ಅಭಿಪ್ರಾಯ ಮೂಡುವಂತೆ ನಡೆದುಕೊಳ್ಳುತ್ತಿದ್ದಾರೆ. ಹಾಗೇನಾದರೂ ಮುಂದೊಂದು ದಿನ ಔಷಧಕ್ಕೆ ಇದು ಕೊರೋನಾ ಔಷಧಿ (ರೋಗನಿರೋಧಕ ಶಕ್ತಿ ಔಷಧಿಯಲ್ಲ) ಎಂದು ಮಾನ್ಯತೆ ಸಿಕ್ಕರೆ ನಾನು ಖಂಡಿತ ಕ್ಷಮೆ ಕೋರಲು ಸಿದ್ಧನಿದ್ದೇನೆ. ಆದರೆ ಅಂತಹ ಪರಿಸ್ಥಿತಿ ಬರುವ ಯಾವ ಲಕ್ಷಣಗಳು ಕಾಣುತ್ತಿಲ್ಲ.

ಕಜೆ ಸಂಪೂರ್ಣ ಆಯುರ್ವೇದವನ್ನು ಪ್ರತಿನಿಧಿಸುವುದಿಲ್ಲ

ಕಜೆ ಸಂಪೂರ್ಣ ಆಯುರ್ವೇದವನ್ನು ಪ್ರತಿನಿಧಿಸುವುದಿಲ್ಲ

ಡಾ ಕಜೆಯವರು ಒಬ್ಬ ಆಯುರ್ವೇದ ವೈದ್ಯರು ಮಾತ್ರ. ಅವರು ಸಂಪೂರ್ಣ ಆಯುರ್ವೇದದ ಪ್ರತೀಕವೇನು ಅಲ್ಲ ಅಥವಾ ಸಂಪೂರ್ಣ ಆಯುರ್ವೇದವನ್ನು ಪ್ರತಿನಿಧಿಸುವುದಿಲ್ಲ. ಅವರ ಔಷಧಕ್ಕೆ ಮಾನ್ಯತೆ ಸಿಗಲಿಲ್ಲವೆಂದರೆ ಇಡೀ ಆಯುರ್ವೇದಕ್ಕೆ ಮಾನ್ಯತೆ ಸಿಗಲಿಲ್ಲ ಎನ್ನುವುದು ತಪ್ಪು. ಅದೇ ರೀತಿ ರಾಷ್ಟ್ರೀಯವಾದವನ್ನು ಮತ್ತು ಆಯುರ್ವೇದ ವಿಜ್ಞಾನ ವನ್ನಾಗಲಿ, ಒಬ್ಬ ವ್ಯಕ್ತಿಯ ಸಂಶೋಧನೆಯೊಂದಿಗೆ ತಳುಕು ಹಾಕುವುದು ಕೂಡ ಸರಿಯಲ್ಲ.

ಡಾ ಗಿರಿಧರ ಕಜೆ ಅವರ ಸಂಶೋಧನೆ ಬಗ್ಗೆ ಸಂಶಯ ವ್ಯಕ್ತಪಡಿಸಿದರೆ , ಅದು ಆಯುರ್ವೇದ ವಿಜ್ಞಾನವನ್ನು ಟೀಕಿಸಿದಂತೆ ಆಗುವುದಿಲ್ಲ. ಅದೂ ಅಲ್ಲದೆ ಕೊರೋನಾ ಲಸಿಕೆಗೆ , ಹಗಲು ರಾತ್ರಿ ಹೆಣಗಾಡುತ್ತಿರುವ ಐ ಸಿ ಎಮ್ ಆರ್ , ಯಾರಾದರೂ ಇದಕ್ಕೆ ಔಷಧ ಕಂಡು ಹಿಡಿದ್ದೇವೆ ಎಂದರೆ ಸಂತೋಷಪಡುವರೇ ಹೊರತು ಕರುಬುವ ಮೂರ್ಖರಲ್ಲ. ಕೊರೋನಾ ಕಾರಣದಿಂದ ಸರ್ಕಾರ ಹಿಂದೆ ಕಂಡಿಲ್ಲಷ್ಟು ನಷ್ಟದಲ್ಲಿದೆ.

ನಿಜವಾಗಲೂ ಅದಕ್ಕೆ ಯಾರಾದರೂ ಔಷಧ ಕೊಟ್ಟರೆ, ಹೆಚ್ಚು ಲಾಭವಾಗುವುದು ಸರ್ಕಾರಕ್ಕೆ. ಹೆಂಡ ಮಾರಿ ಬೊಕ್ಕಸ ತುಂಬಿಕೊಳ್ಳುವುದಕ್ಕಿಂತ, ಔಷಧ ಮಾರಿ ಬೊಕ್ಕಸ ತುಂಬಿಕೊಳ್ಳುವುದು ಉತ್ತಮ ಎಂಬುದು ಎಲ್ಲಾ ಸರ್ಕಾರಗಳಿಗೂ ಗೊತ್ತಿರುವ ವಿಷಯವೇ. ಇವೆಲ್ಲವನ್ನೂ ನೋಡಿದಾಗ ಲಾಬಿ ಮಾಡುತ್ತಿರುವವರು ಯಾರು ಎಂಬ ಅನುಮಾನ ಮೂಡುತ್ತದೆ.

ಎರಡು ಪ್ರಕರಣಕ್ಕೂ ಬಹಳಷ್ಟು ಸಾಮ್ಯತೆ

ಎರಡು ಪ್ರಕರಣಕ್ಕೂ ಬಹಳಷ್ಟು ಸಾಮ್ಯತೆ

ಪ್ರತಾಪ್ ಡ್ರೋನ್ ಪ್ರಕರಣಕ್ಕೂ, ಡಾಕ್ಟರ ಕಜೆ ಯವರ ಕೊರೋನಾ ಔಷಧಿ ಪ್ರಕರಣಕ್ಕೂ ಬಹಳಷ್ಟು ಸಾಮ್ಯತೆಯನ್ನು ಗಮನಿಸಬಹುದು. ಎರಡೂ ಪ್ರಕರಣಗಳಲ್ಲಿ ಪ್ರತಾಪ್ ಆಗಲಿ ಅಥವಾ ಡಾ ಗಿರಿಧರ ಕಜೆಯವರಾಗಲಿ , ತಮ್ಮ ಸಂಶೋಧನೆ ಮಾನ್ಯತೆ ಪಡೆಯಲು ಸಂಬಂಧ ಪಟ್ಟ ಇಲಾಖೆ ಅಥವಾ ತಜ್ಞರನ್ನಾಗಲಿ ಸಂಪರ್ಕಿಸಿಲ್ಲ. ತಮ್ಮ ಸಂಶೋಧನೆ ಬಗ್ಗೆ ಪ್ರಬಂಧಗಳನ್ನೂ ಪ್ರಕಟಿಸಿಲ್ಲ. ತಮ್ಮ ಸಂಶೋಧನೆಯ ಪೇಟೆಂಟ್ ಪಡೆದುಕೊಳ್ಳಲು ಸಂಬಂಧಪಟ್ಟ ಇಲಾಖೆಗಳಾಗಲೀ , ಸಂಬಂಧಪಟ್ಟ ವಿಭಾಗಕ್ಕಾಗಲೀ ಅರ್ಜಿ ಸಲ್ಲಿಸಿಲ್ಲ ಎಂಬುದನ್ನು ನಾವು ಇಲ್ಲಿ ಗಮನಿಸಿಕೊಳ್ಳಬೇಕು.

ಅಶೋಕ ನಗರ ಪೊಲೀಸರ ವಶಕ್ಕೆ ಡ್ರೋನ್ ಪ್ರತಾಪ್ಅಶೋಕ ನಗರ ಪೊಲೀಸರ ವಶಕ್ಕೆ ಡ್ರೋನ್ ಪ್ರತಾಪ್

ಇಬ್ಬರೂ ತಮ್ಮ ವಾದ-ಪ್ರತಿವಾದಗಳನ್ನು ಅನನುಭವಿ ಮಾಧ್ಯಮದವರ ಮುಂದೆ , ಸಾರ್ವಜನಿಕರ ಮುಂದೆ ಮಾಡುತ್ತಿದ್ದಾರೆಯೇ ಹೊರತು , ಯಾವುದೇ ಪೂರಕ ದಾಖಲೆಗಳನ್ನು ನೀಡಿಲ್ಲ ಎಂಬುದನ್ನು ಕೂಡಾ ಇಲ್ಲಿ ಗಮನಿಸಬೇಕು. ಪ್ರತಾಪ್ ದಾಖಲೆಗಿಲ್ಲದೆ ತಾನು ಭಾರತವನ್ನು ಪ್ರತಿನಿಧಿಸಿದ್ದೇನೆ ಎನ್ನುತ್ತಾನೆ. ಡಾ ಗಿರಿಧರ್ ಕಜೆಯವರು ಯಾವುದೇ ದಾಖಲೆಯನ್ನು ಪ್ರಕಟಿಸದೆ, ಆಯುರ್ವೇದವನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದೇನೆ ಎನ್ನುತ್ತಾರೆ. ಇವರುಗಳು ಮಾಡಿದ ಸಾಧನೆ ಹಾಗೂ ಸಾಧನೆಯ ವಿವರ ಇವರಿಗೆ ಮಾತ್ರ ಗೊತ್ತು.

ಸಾರ್ವಜನಿಕ ಸಮೂಹಸನ್ನಿ ಸೃಷ್ಟಿಸುವ ಕೆಲಸ

ಸಾರ್ವಜನಿಕ ಸಮೂಹಸನ್ನಿ ಸೃಷ್ಟಿಸುವ ಕೆಲಸ

ಇದುವರೆಗೆ ಯಾವುದೇ ಸಂಬಂಧಪಟ್ಟ ಸಂಸ್ಥೆಯಿಂದ ಅಧಿಕೃತ ಮುದ್ರೆ ಬಿದ್ದಿಲ್ಲ. ಇಲ್ಲಿ ಒಂದು ಸಾರ್ವಜನಿಕ ಸಮೂಹಸನ್ನಿ ಸೃಷ್ಟಿಸುವ ಕೆಲಸವಾಗುತ್ತಿದೆ ಎಂಬ ಸಾಮಾನ್ಯ ಅಂಶವನ್ನು ಗಮನಿಸಬೇಕಾಗುತ್ತದೆ. ಪ್ರತಾಪ್ ರವರು ಬಡತನ ಮತ್ತು ಸಾಧನೆಯೊಂದಿಗೆ ತಮ್ಮ ಹೆಸರನ್ನು ತಳಕು ಹಾಕಿ ಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ, ಡಾಕ್ಟರ್ ಕಜೆಯವರು , ಆಯುರ್ವೇದ ಮತ್ತು ರಾಷ್ಟ್ರೀಯವಾದಿಗಳ ಪ್ರತೀಕವೆಂಬಂತೆ ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಕ್ಯಾಚ್ ಮಿ ಇಫ್ ಯು ಕ್ಯಾನ್: ಡ್ರೋನ್ ಪ್ರತಾಪ್ ಸೈಕೋ ಅನಾಲಿಸಿಸ್!ಕ್ಯಾಚ್ ಮಿ ಇಫ್ ಯು ಕ್ಯಾನ್: ಡ್ರೋನ್ ಪ್ರತಾಪ್ ಸೈಕೋ ಅನಾಲಿಸಿಸ್!

ಪ್ರತಾಪನ ಪ್ರಕರಣ ನಮ್ಮ ಕಣ್ಣಮುಂದಿದೆ. ಅವನಿಗೆ ಸರಿಯಾದ ಸಮಯದಲ್ಲಿ ದಾಖಲಾತಿಯನ್ನು ಬೇಡಿದ್ದರೆ, ಪ್ರಕರಣ ಇಲ್ಲಿಯವರೆಗೆ ಮುಂದುವರಿಯುತ್ತಲೇ ಇರಲಿಲ್ಲ. ಅದೇ ರೀತಿ ಡಾ ಗಿರಿಧರ ಕಜೆ ಯವರನ್ನು, ಅವರ ಸಂಶೋಧನೆಯ ಬಗ್ಗೆ ಲೇಖನ ಪ್ರಕಟಿಸಿ ಎಂದು ಕೇಳಿದರೆ ತಪ್ಪಾಗುವುದಿಲ್ಲ.

ರೋಗಿಯ ರೋಗ ನಿರೋಧಕ ಶಕ್ತಿಯಿಂದಲೇ ಗುಣ

ರೋಗಿಯ ರೋಗ ನಿರೋಧಕ ಶಕ್ತಿಯಿಂದಲೇ ಗುಣ

ಪ್ರತಾಪನ ದೆಸೆಯಿಂದಾಗಿ, ಡ್ರೋನ್ ಬಗ್ಗೆ ನಿಜವಾಗಲೂ ಸಾಧನೆ ಮಾಡಿರುವ ಮಕ್ಕಳು, ಹೇಳಿಕೊಳ್ಳಲು ಮುಂದೆಬರುತ್ತಿಲ್ಲ. ಸಂಪೂರ್ಣ ಆಯುರ್ವೇದದೊಂದಿಗೆ ಡಾ ಗಿರಿಧರ ಕಜೆ ಯವರ ವಿಷಯ ತಳಕು ಹಾಕಿಕೊಳ್ಳುವುದರಿಂದ, ಡಾ ಗಿರಿಧರ ಕಜೆಯವರ ಸಂಶಯಾಸ್ಪದ ನಡೆಗಳಿಂದ ಸಂಪೂರ್ಣ ಆಯುರ್ವೇದದ ಮೇಲೆ ಅನುಮಾನ ಮೂಡುವಂತೆ ಮಾಡುತ್ತದೆ. ಇದರ ಬಗ್ಗೆ ಆಯುರ್ವೇದ ತಜ್ಞರೇ ಪರಿಶೀಲನೆ ನಡೆಸಿ, ಡಾ ಗಿರಿಧರ ಕಜೆಯವರದ್ದು ಕೊರೋನಾ ಔಷಧಿಯೋ , ಅಥವಾ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಯೋ ಎಂದು ಸಾರ್ವಜನಿಕ ಮಾಹಿತಿ ನೀಡಬೇಕು.

ಕೊರೋನಾ ಒಂದು ವಿಚಿತ್ರ ರೋಗ. ಇದಕ್ಕೆ ಔಷಧಿ ಇಲ್ಲ. ಆದರೆ ಇದು ಗುಣವಾಗುವುದಕ್ಕೆ ಔಷಧಿ ಅನಿವಾರ್ಯವಲ್ಲ. ಏನೇ ಆಗಲಿ, ಇದುವರೆಗೆ ಕೋಟ್ಯಾಂತರ ರೋಗಿಗಳು ಆಧುನಿಕ ವೈದ್ಯಪದ್ಧತಿಯವರ ಬಳಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರೂ, ಇದುವರೆಗೂ ಎಲ್ಲಾ ಆಧುನಿಕ ವೈದ್ಯಪದ್ಧತಿಯ ವೈದ್ಯರು. ರೋಗಿಯ ರೋಗ ನಿರೋಧಕ ಶಕ್ತಿಯಿಂದಲೇ ಕೊರೋನಾ ಗುಣವಾಯಿತು ಎಂದೇ ಹೇಳುತ್ತಿದ್ದಾರೆ. ಕೇವಲ ಹತ್ತು ಮಂದಿ ಗುಣವಾಗಿದ್ದಕ್ಕೆ, ತಮ್ಮ ಔಷಧಿಯಿಂದಲೇ ರೋಗ ಗುಣವಾಯಿತು ಎಂದು ಹೇಳಿಕೊಳ್ಳುತ್ತಿರುವ ಡಾ ಗಿರಿಧರ ಕಜೆಯವರ ಧೈರ್ಯ ಮೆಚ್ಚಲೇ ಬೇಕು.

ಕೊನೆಮಾತು: ಮೋಸ ಮಾಡಿಸಿಕೊಳ್ಳುವವರು ಇರುವವರೆಗೂ ಮೋಸಮಾಡುವವರು ಇರುತ್ತಾರೆ.

English summary
Analogy of Drone Pratap and Dr Giridhar Kaje Social status mania or Mass Delirium state created by duo should be stopped by Dr. Dayananda lingegowda, Neuro interventional radiologist working at kolkata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X