• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಖ್ಖರ ಪವಿತ್ರ ತಾಣ ಹೇಮಕುಂಡ್ ಸಾಹಿಬ್ ಸುತ್ತಾ ರೋಚಕ ಚಾರಣ

By ಸೌಮ್ಯ ಬೀನಾ, ಸಾಗರ
|

ಜಿಟಿ ಜಿಟಿ ಮಳೆ, ಹಿಮಾಲಯದ ಶೃಂಗಗಳಿಂದ ಬೀಸುವ ಶೀತಗಾಳಿ, ಹಾದಿಯ ಅಕ್ಕಪಕ್ಕದಲ್ಲೆಲ್ಲ ಮಳೆಯಲ್ಲಿ ತೋಯ್ದು ತೆಪ್ಪೆಯಾದ ಹಸಿರು ಗಿಡ ಮರಗಳು, ಸೂರ್ಯನ ಪ್ರಕಾಶಕ್ಕೆ, ಹವಳಗಳಂತೆ ಹೊಳೆವ ಹೂವಿನ ಮೇಲಿನ ಮಳೆ ಹನಿಗಳು, ಕಣ್ಣೆತ್ತಿ ನೋಡಿದಷ್ಟೂ ಪರ್ವತಾವಳಿ, ಕ್ಪಣ ಕ್ಷಣಕ್ಕೂ ಸುತ್ತಲಿನ ನಿಸರ್ಗವನ್ನು ಮಾಂತ್ರಿಕವಾಗಿ ಬದಲಾಯಿಸುವ ಇಬ್ಬನಿ, ಮಂಜು ಮತ್ತು ಮೋಡಗಳ ಆಟ, ದೊಡ್ಡ ದೊಡ್ಡ ಪರ್ವತಗಳನ್ನು ಹಾದು, ಬೆಳ್ಳಗೆ ಹಾಸಿ ಬಂದು ನಿಂತಿರುವ ಹಿಮನದಿ, ಆ ಬ್ರಹತ್ ಹಿಮನದಿಗಳ ಪಕ್ಕದಲ್ಲೇ, ಮೈಯ ಕೊರೆಯುವ ಚಳಿಯಲ್ಲಿ ನಮ್ಮ ನಡಿಗೆ.. ಅಬ್ಬಾಬ್ಬಾ..ಅನುಭವಿಸಿಯೇ ತೀರಬೇಕು ಆ ರಮ್ಯತೆಯನ್ನು!

ಹೀಗೊಂದು ರೋಚಕ ಚಾರಣದ ಅನುಭವವನ್ನು ಕಳೆದ ಅಗಸ್ಟ್ ತಿಂಗಳಿನಲ್ಲಿ ಉತ್ತರಾಂಚಲ(ಉತ್ತರಾಖಂಡ)ದ 'ಹೇಮಕುಂಡ್ ಸಾಹಿಬ್' ಗೆ ಭೇಟಿ ನೀಡುವ ಸಂದರ್ಭದಲ್ಲಿ ನಾವು ಪಡೆದೆವು ಎಂದು ಚಮೋಲಿ ಜಿಲ್ಲೆಯ ಹಿಮಾಲಯ ತಪ್ಪಲಿನ ಈ ಪವಿತ್ರ ತಾಣದಲ್ಲಿ ಯಶಸ್ವಿಯಾಗಿ ಚಾರಣ ಪೂರೈಸಿ ಬಂದಿರುವ ಸಾಗರದ ಸೌಮ್ಯ ಬೀನಾ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಪ್ರವಾಸಕ್ಕೆ ಹೊರಟ್ರಾ? ನಿಲ್ಲಿ, ಈ ಲೇಖನವನ್ನು ಓದುತ್ತಾ ಮುಂದೆ ಸಾಗಿ

'ಹೇಮಕುಂಡ್ ಸಾಹಿಬ್' -ಸ್ಥಳ ಇತಿಹಾಸ: ಸಂಸ್ಕೃತದಲ್ಲಿ 'ಹೇಮ್' ಎಂದರೆ ಹಿಮ ಮತ್ತು 'ಕುಂಡ್' ಎಂದರೆ ಬಟ್ಟಲು. ಹೌದು, ಹೇಮಕುಂಡ್ ಸಾಹಿಬ್ ಒಂದು ಹಿಮದ ಬೋಗುಣಿಯಲ್ಲಿರುವ ಗುರುದ್ವಾರ. ಈಗಿನ ಹೇಮಕುಂಡ್ ಸಾಹಿಬ್ ಗುರುದ್ವಾರವಿರುವ ಸ್ಥಳದಲ್ಲಿ, ಹಿಂದಿನಿಂದಲೂ ರಾಮನ ತಮ್ಮ ಲಕ್ಷ್ಮಣ ತನ್ನ ಹಿಂದಿನ ಜನ್ಮದವತಾರದಲ್ಲಿ ದೈವಕೃಪೆಗಾಗಿ ಕುಳಿತು ತಪಸ್ಸು ಮಾಡಿದ್ದನು ಎಂಬ ಪ್ರತೀತಿಯಿಂದ ಜೋಷಿಮಠದ ಸ್ಥಳೀಯರು ಬಂದು ಪೂಜಿಸುತ್ತಿದ್ದರು ಹಾಗೂ ಈ ಸ್ಥಳವನ್ನು 'ಲೋಕ್ಪಾಲ್' (ಲೋಕಪಾಲ - ಲಕ್ಷ್ಮಣ) ಎಂದೂ ಕೂಡ ಕರೆಯಲಾಗುತ್ತದೆ ಎಂದು ತಿಳಿದುಬಂದಿದೆ.

ಹಿಂದೂಗಳು ಮತ್ತು ಸಿಖ್ಖರು ಸಮಾನವಾಗಿ ಪೂಜಿಸುವ ಕೇಂದ್ರ

ಹಿಂದೂಗಳು ಮತ್ತು ಸಿಖ್ಖರು ಸಮಾನವಾಗಿ ಪೂಜಿಸುವ ಕೇಂದ್ರ

ಹೆಚ್ಚಾಗಿ ಹಿಮಾವೃತ್ತಗೊಂಡು ಹೆಚ್ಚೇನೂ ಹೊರಪ್ರಪಂಚದ ಬೆಳಕಿಗೆ ಬಂದಿರದ ಈ ಸ್ಥಳದಲ್ಲಿ, ಸಿಖ್ಖರ ಗುರು, ಗೋಬಿಂದ್ ಸಿಂಗ್ ಅವರು ತಮ್ಮ ಹಿಂದಿನ ಒಂದು ಅವತಾರದಲ್ಲಿ ತಪಸ್ಸು ಮಾಡಿ ಇಲ್ಲಿಯೇ ಮೋಕ್ಷ ಪಡೆದರೆಂಬ ನಂಬಿಕೆಗಳಿವೆ. ಇಲ್ಲಿನ ಹೇಮಕುಂಡ್ ಸರೋವರ, ಸಪ್ತಋಷಿ ಶಿಖರಗಳಿಂದ ಹಿಮನದಿಗಳು ಹರಿದುಬಂದು ಮಾರ್ಪಾಟುಗೊಂಡಿರುವ ಒಂದು ದೊಡ್ಡ ಸರೋವರ. ಈ ಪವಿತ್ರ-ಅದಮ್ಯ ಶಕ್ತಿಸ್ಥಳವನ್ನು, ಅನೇಕ ದಶಮಾನಗಳ ಹಿಂದೆ, ಸಂತ ಸೋಹಾನ ಸಿಂಗ್ ರವರು ಗುರುತಿಸಿ, 1936 ರಲ್ಲಿ ಇಲ್ಲಿ ಗುರುದ್ವಾರವೊಂದನ್ನು ನಿರ್ಮಾಣ ಮಾಡಿ, 'ಹೇಮಕುಂಡ್ ಸಾಹಿಬ್' ಎಂಬ ಹೆಸರಿನಲ್ಲಿ, ಹೊರಜಗತ್ತಿಗೆ ಪರಿಚಯಿಸಿದರು ಎಂಬ ಐತಿಹಾಸಿಕ ಕಥೆಯಿದೆ. ಗುರುದ್ವಾರದ ಜೊತೆ ಜೊತೆಯಲ್ಲೇ ಪುಟ್ಟದೊಂದು ಲಕ್ಷಣ ಮಂದಿರವಿದೆ. ಇದೇ ಕಾರಣದಿಂದಾಗಿ ಈ ಸ್ಥಳವನ್ನು ಹಿಂದೂಗಳು ಮತ್ತು ಸಿಖ್ಖರು ಸಮಾನವಾಗಿ ಆದರಿಸುತ್ತಾರೆ.

'ಹೇಮಕುಂಡ್ ಸಾಹಿಬ್' ಗುರುದ್ವಾರದ ಪ್ರಾಮುಖ್ಯತೆ

'ಹೇಮಕುಂಡ್ ಸಾಹಿಬ್' ಗುರುದ್ವಾರದ ಪ್ರಾಮುಖ್ಯತೆ

ಪ್ರಪಂಚದ ಎರಡನೇ ಅತೀ ಎತ್ತರದ ಸ್ಥಳದಲ್ಲಿರುವ ಸಿಖ್ಖರ ಗುರುದ್ವಾರ ಎಂದೇ ಖ್ಯಾತಿ ಪಡೆದಿರುವ ಹೇಮಕುಂಡ್ ಸಾಹಿಬ್ ಅಥವಾ ಹೇಮಕುಂಟ್ ಇರುವುದು ಉತ್ತರಾಖಂಡ್ ಚಮೋಲಿ ಜಿಲ್ಲೆಯ ಘಡ್ವಾಲ್ ಊರಿನ ಮೇಲ್ತಟ್ಟಿನಲ್ಲಿ. ಸಮುದ್ರ ಮಟ್ಟಕ್ಕಿಂತ 4632 ಮೀ. ಎತ್ತರದಲ್ಲಿರುವ ಈ ಸ್ಥಳ ಕೇವಲ ತನ್ನ ಆಧ್ಯಾತ್ಮಿಕ ಪ್ರಾಮುಖ್ಯತೆಗೊಂದೇ ಅಲ್ಲದೇ, ಯಾತ್ರಾ ಮಾರ್ಗದ ಸುತ್ತಮುತ್ತಲಿನ ಅಲೌಕಿಕ ನಿಸರ್ಗ ಸೌಂದರ್ಯದಿಂದಾಗಿ, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿ

ವರ್ಷದ 7 ತಿಂಗಳು ಹಿಮಾವೃತವಾಗಿರುವ ಸ್ಥಳ

ವರ್ಷದ 7 ತಿಂಗಳು ಹಿಮಾವೃತವಾಗಿರುವ ಸ್ಥಳ

ವರ್ಷದ 7 ತಿಂಗಳುಗಳು ಸಂಪೂರ್ಣ ಹಿಮದಿಂದ ಆವೃತ್ತಗೊಳ್ಳುವ ಈ ಸ್ಥಳ, ಜೂನ್ ನಿಂದ ಅಕ್ಟೋಬರ್ ವರೆಗಿನ ಸಮಯದಲ್ಲಿ ಮಾತ್ರ ಯಾತ್ರೆಗೆ ತೆರೆದಿರುತ್ತದೆ. ಸಹಸ್ರ ಸಂಖ್ಯೆಯಲ್ಲಿ, ಹಿರಿಯರು-ಕಿರಿಯರು ಎಂಬ ವಯಸ್ಸಿನ ಮಿತಿಯಿಲ್ಲದೆ, ಪ್ರತಿವರ್ಷವೂ ಸಂಸಾರ ಸಮೇತವಾಗಿ ಈ ಗುರುದ್ವಾರಕ್ಕೆ ಭೇಟಿ ನೀಡುವವರು ಒಂದು ಕಡೆಯಾದರೆ, ಜೀವನದಲ್ಲಿ ಒಮ್ಮೆಯಾದರೂ ನೋಡಬೇಕೆಂಬ ಮಹದಾಸೆಯಿಂದ ನೂರಾರು ಮೈಲಿ ದೂರದಿಂದ ಹರಕೆ ಹೊತ್ತು ಬರುವ ಭಕ್ತಾದಿಗಳು ಇನ್ನೊಂದು ಕಡೆ.

 ಪ್ರತಿದಿನ ನೂರಾರು ಚಾರಣಿಗರು ಇಲ್ಲಿಗೆ ಬರುತ್ತಾರೆ

ಪ್ರತಿದಿನ ನೂರಾರು ಚಾರಣಿಗರು ಇಲ್ಲಿಗೆ ಬರುತ್ತಾರೆ

ಜೊತೆಗೆ, ಇಲ್ಲಿಯೇ ಇರುವ ಭುಂದರ್ ಗಂಗಾ ಕಣಿವೆಯ 'ವ್ಯಾಲಿ ಆಫ್ ಫ್ಲವರ್ಸ್' ಮತ್ತು 'ಹೇಮಕುಂಡ್ ಸಾಹಿಬ್' ಈ ಎರಡು ಗಮ್ಯಸ್ಥಾನಗಳ ರುದ್ರ ರಮಣೀಯ ಪ್ರಾಕೃತಿಕ ಸೌಂದರ್ಯವನ್ನು ಸವಿಯಲೆಂದೇ ಪ್ರತಿದಿನ ನೂರಾರು ಚಾರಣಿಗರು ಇಲ್ಲಿಗೆ ಬರುತ್ತಾರೆ. ಥರಗುಟ್ಟುವ ಚಳಿ ಮತ್ತು ಭೂಕುಸಿತ, ಕಲ್ಲು ಬಂಡೆಗಳ ಉರುಳುವಿಕೆಯ ಅಸ್ಥಿರ ಹಾದಿಯಿದ್ದರೂ ಕೂಡ ವರ್ಷಕ್ಕೆ ಸರಿಸುಮಾರು 1.5 ಲಕ್ಷದಿಂದ 2 ಲಕ್ಷ ಜನರು 'ಹೇಮಕುಂಡ ಸಾಹಿಬ್' ಗೆ ಭೇಟಿ ನೀಡುತ್ತಾರೆಂದು ಎಂಬ ಮಾಹಿತಿಯಿದೆ.

ಜೀವ ಬಾಯಿಗೆ ಬಂದಂಥ ಹಿಮಾಚಲ ಪ್ರದೇಶದ ಹಮ್ತಾ ಪಾಸ್ ಟ್ರೆಕಿಂಗ್ ಅನುಭವ

ಗುರುದ್ವಾರದ ಒಳಗೆ ಹೋಗುವ ಮುನ್ನ

ಗುರುದ್ವಾರದ ಒಳಗೆ ಹೋಗುವ ಮುನ್ನ

ಗುರುದ್ವಾರದ ಒಳಗೆ ಹೋಗುವ ಮುನ್ನ ಅನೇಕ ಭಕ್ತರು ಇಲ್ಲಿನ ಪವಿತ್ರ ಹೇಮಕುಂಡ್ ಸರೋವರ ಅಥವಾ ಲೋಕಪಾಲ ಸರೋವರದಲ್ಲಿ ಮುಳುಗೆದ್ದು ತೀರ್ಥ ಸ್ನಾನ, ತೀರ್ಥ ಪ್ರೋಕ್ಷಣ್ಯ ಮಾಡಿಕೊಂಡು ಪುನೀತರಾಗುತ್ತಾರೆ. ಇಲ್ಲಿನ ತೀರ್ಥ ಸ್ನಾನ ಮಾಡಿದರೆ, ಕಷ್ಟ ಕಾರ್ಪಣ್ಯಗಳು ರೋಗ ರುಜಿನಗಳು ತೊಲಗಿ ಹೋಗುತ್ತವೆ ಎಂಬ ನಂಬಿಕೆ ಇದೆ.

ಆದರೆ ಸರೋವರದ ನೀರು ಎಷ್ಟರ ಮಟ್ಟಿಗೆ ಕೊರೆಯುತ್ತಿರುತ್ತದೆಯೆಂದರೆ, ಇಂತಹ ಹಿಮಗಟ್ಟಿದ ನೀರಿನಿಂದ ಆಚೆ ಬಂದು, ಅಂಗಾಂಗಗಳ ಚಲನವಲನವೇ ಇಲ್ಲದಂತಾಗಿದೆ ಜಡಗಟ್ಟಿಸಿ ಬಿಡುತ್ತದೆ. ಈ ಸರೋವರದ ನೀರಿನಲ್ಲಿ ಸ್ಪಷ್ಟವಾಗಿ ಪ್ರತಿಫಲಿತವಾಗುವ ಸುತ್ತುವರೆದ ಶಿಖರಗಳನ್ನು ನೋಡಲು ಎರಡು ಕಣ್ಣುಗಳು ಸಾಲವು. ಗುರುದ್ವಾರವು, ದರ್ಬಾರ್ ಸಾಹಿಬ್ ಮತ್ತು ಲಂಗಾರ್ ಹಾಲ್ ಅನ್ನು ಒಳಗೊಂಡಿದೆ. ಒಳಗೆ ದರ್ಶನಕ್ಕೆ ಹೋಗುವವರು ಕಡ್ಡಾಯವಾಗಿ ತಲೆಯ ಮೇಲೆ ಬಟ್ಟೆಯನ್ನು ಹಾಕಿಕೊಂಡಿರಬೇಕು.

ತಲೆಯ ಮೇಲೆ ಬಟ್ಟೆ ಹಾಕಿ ಗುರುದ್ವಾರ ಪ್ರವೇಶಿಸಿ

ತಲೆಯ ಮೇಲೆ ಬಟ್ಟೆ ಹಾಕಿ ಗುರುದ್ವಾರ ಪ್ರವೇಶಿಸಿ

ಇಲ್ಲದಿದ್ದ ಪಕ್ಷದಲ್ಲಿ ಅಲ್ಲಿಯೇ ಗುರುದ್ವಾರದ ಎದುರಿಗೆ ಬಟ್ಟೆಯನ್ನು ಇಟ್ಟಿರುತ್ತಾರೆ. ಒಳಗೆ ಹೋಗಿ ಬರಲು ಬಳಸಿ ಮತ್ತೆ ಅಲ್ಲಿಯೇ ಇಟ್ಟು ಬರುವುದು ಅಲ್ಲಿನ ರೂಢಿ. ಲಂಗಾರ್ ಹಾಳ್ ಅಥವಾ ಊಟದ ಮನೆಯಲ್ಲಿ ನೀಡುವ ಪ್ರಸಾದ ಅತ್ಯಂತ ಶುಚಿ ರುಚಿಯಾಗಿದೆ. ಸಿಹಿಯಾದ ತುಪ್ಪದಲ್ಲೇ ಮುಳುಗಿಸಿ ಮಾಡಿದ ಹಲ್ವಾ, ಬಿಸಿ ಬಿಸಿ ರುಚಿ ರುಚಿ ಕಿಚಡಿ, ಮತ್ತು ಬಿಸಿ ಬಿಸಿ ಕುಡಿದಷ್ಟೂ ಮತ್ತೆ ಮತ್ತೆ ಬೇಕೆನಿಸುವ ಗಿಡಮೂಲಿಕೆಯುಕ್ತ ಚಹಾ.. ಜನ ವಸತಿ ಇರದಂತಹ ಇಷ್ಟು ಎತ್ತರ ಸ್ಟಳಕ್ಕೆ ಪ್ರತಿಯೊಂದು ವಸ್ತುವನ್ನು ತಂದು ಪ್ರಸಾದ ಮಾಡಿ , ಯಾತ್ರಾ ಸೀಸನ್ನಿನಲ್ಲಿ ಪ್ರತಿನಿತ್ಯ ಬರುವ ನೂರಾರು ಭಕ್ತರಿಗೆ ನಿರ್ಬಂಧವಿಲ್ಲದೆ ಬೇಕಾದಷ್ಟು ನೀಡುವ ಇಲ್ಲಿನ ದಾಸೋಹ ಆಕರ್ಷಣೀಯವೆನಿಸುತ್ತದೆ.

ಸಂಕ್ರಾಂತಿ ವಿಶೇಷ: ಮನಕ್ಕೆ ಮುದ ನೀಡುವ ಮಂಡಲ ಕಲೆ ಸುತ್ತಾ

ಹೇಮಕುಂಡಕ್ಕೆ ಹೋಗುವ ಹಾದಿ

ಹೇಮಕುಂಡಕ್ಕೆ ಹೋಗುವ ಹಾದಿ

ಹೇಮಕುಂಡ್ ಸಾಹಿಬ್ ದರ್ಶನಕ್ಕೆ, ಗುರುದ್ವಾರದ ವರೆಗೆ ವಾಹನದ ಮೂಲಕ ಸಾಗಲು ಸಾಧ್ಯವಿಲ್ಲ. ಗೋವಿಂದ್ಘಾಟ್ ನಂತರದ ಊರು ಪುಲ್ನ ದಿಂದ ಪ್ರಾರಂಭಿಸಿ, ಕಾಲ್ನಡಿಗೆಯಲ್ಲಿ ಸಾಗಬೇಕು. ಮೊದಲ ದಿನ ಘಾನ್ಘ್ರೀಯ ಎಂಬ ಊರಿನವರೆಗೆ 11 ಕಿ.ಮೀ ಗಳ ಒಂದು ದಿನದ ನೆಡಿಗೆ ಮತ್ತು ಎರಡನೇ ದಿನ ಘಾನ್ಗ್ರೀಯ ದಿಂದ ಹೇಮಕುಂಡ್ ಸಾಹಿಬ್ ವರೆಗೆ ಅರ್ಧ ದಿನದ 6 ಕಿ.ಮೀ ನೆಡಿಗೆ, ಒಟ್ಟು 16 ಕಿ.ಮೀ ಗಳ ಪ್ರಯಾಸಕರ ಚಾರಣ ಹಾದಿ. ನಡಿಗೆ ಸಾಧ್ಯವಿಲ್ಲದವರಿಗೆ ಪರ್ಯಾಯ ವ್ಯವಸ್ಥೆಗಳಿವೆ. ವಾತಾವರಣ ಅನುಕೂಲಕರವಾಗಿದ್ದರೆ, ಜೋಷಿಮಠ ದಿಂದ ಘಾನ್ಗ್ರಿಯ ವರೆಗೆ ಹೆಲಿಕಾಪ್ಟರ್ ಮೂಲಕ ವೈಮಾನಿಕ ಪ್ರಯಾಣ ಬೆಳೆಸಬಹುದು. ಇಲ್ಲವಾದಲ್ಲಿ ಮ್ಯೂಲ್ ಅಥವಾ ಹೆಸರಗತ್ತೆಯ ಸವಾರಿ ಲಭ್ಯವಿದೆ. ಜೊತೆಗೆ, ತಮ್ಮ ಬೆನ್ನಿನ ಬುಟ್ಟಿಯಲ್ಲಿ ಪ್ರವಾಸಿಗರನ್ನು ಮತ್ತು ಅವರ ಬ್ಯಾಗುಗಳನ್ನು ಹೊತ್ತುಕೊಂಡು ಹೋಗುವ ಪೋರ್ಟರ್ಸ್ ಅಥವಾ ಮಾಲಿಗಳು ಕೂಡ ಸಿಗುತ್ತಾರೆ.

ಇಬ್ಬನಿಯ ಸೌಂದರ್ಯ ಅಸೀಮವಾಗಿರುತ್ತದೆ

ಇಬ್ಬನಿಯ ಸೌಂದರ್ಯ ಅಸೀಮವಾಗಿರುತ್ತದೆ

ಚಾರಣ ನಡೆಸುತ್ತ ಮೇಲೇರಿದಂತೆ ಆವೃತ್ತಗೊಳ್ಳುವ ಇಬ್ಬನಿಯ ಸೌಂದರ್ಯ ಅಸೀಮವಾಗಿರುತ್ತದೆ. ಆಗಸದೆತ್ತರಕ್ಕೆ ಚಿಮ್ಮಿ ನಿಂತ ಹಸಿರು ಪೈನ್, ಓಕ್ ಮರಗಳು, ವೈವಿಧ್ಯಮಯ ಹೂಗಳು, ಸಮೃದ್ಧ ಸಸ್ಯರಾಶಿ, ಪಕ್ಕದಲ್ಲಿ ಕಣಿವೆಯಿಂದಿಳಿದು ರಭಸದಲ್ಲಿ ತನ್ನ ಪಥದಲ್ಲಿ ಸಾಗುವ ಪುಷ್ಪವತಿ ನದಿ, ಹಿಮಾಲಯದ ಶ್ರೇಣಿಗಳು, ಹಿಮ ಕರಗಿ ನೀರಾಗಿ ಹರಿದು ಉಂಟಾದ ಪುಟ್ಟ ಪುಟ್ಟ ಜಲಪಾತಗಳು ಕಾಣಸಿಗುತ್ತವೆ, ಇಂತಹ ಪ್ರಕೃತಿ ಮಡಿಲಲ್ಲಿ ಯಾತ್ರೆ ಮಾಡುವುದೇ ಒಂದು ಪುಣ್ಯ.

ಮೈನವಿರೇಳಿಸುವ ಝೆರ್ಮಾಟ್ ಹಿಮನದಿಗಳ ಮೇಲೆ ಚಾರಣ

ಗುರು ಸಾಹೇಬನ ನೆನೆದು 'ಬೋಲೇ ಸೊ ನಿಹಾಲ್ - ಸತ್ ಸ್ರೀ ಅಕಾಲ್'

ಗುರು ಸಾಹೇಬನ ನೆನೆದು 'ಬೋಲೇ ಸೊ ನಿಹಾಲ್ - ಸತ್ ಸ್ರೀ ಅಕಾಲ್'

ಚಾರಣದ ಹಾದಿಯುದ್ದಕ್ಕೂ ಶ್ರದ್ಧೆಯಿಂದ ಗುರು ಸಾಹೇಬನನ್ನು ನೆನೆಯುತ್ತಾ, ಯಾತ್ರಾರ್ಥಿಗಳ 'ಬೋಲೇ ಸೊ ನಿಹಾಲ್ - ಸತ್ ಸ್ರೀ ಅಕಾಲ್' ಎಂಬ ಜಯಘೋಷ ಇತರ ಚಾರಣಿಗರು ಮತ್ತು ಯಾತ್ರಾರ್ಥಿಗಳಿಗೆ ಹುಮ್ಮಸ್ಸನ್ನು ಹೆಚ್ಚಿಸುತ್ತದೆ. ಪ್ರಮುಖ ಪ್ರವಾಸೀ ತಾಣವಾದ್ದರಿಂದ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿ, ಚಾರಣ ಹಾದಿಗೆ ಅಡಚಣೆಯಾಗುವ ಮ್ಯೂಲ್ ತ್ಯಾಜ್ಯ, ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುವ ಕಸಗಳು ಇತ್ಯಾದಿ ತ್ಯಾಜ್ಯವಸ್ತುಗಳ ನಿರ್ವಹಣೆಯನ್ನು, ಸ್ವಚ್ಛತಾಕಾರ್ಮಿಕರು ಅತ್ಯಂತ ಸಮಗ್ರವಾಗಿ ನಿರ್ವಹಿಸಿವುದು ಪ್ರಶಂಸನೀಯವೆನಿಸುವ ವಿಷಯ. ಘಾನ್ಗ್ರಿಯದಲ್ಲಿ ಸಾಕಷ್ಟು ಶೆರ್ಡ್ ಟೆಂಟ್ ಗಳು, ಖಾಸಗೀ ಹೋಟೆಲು ಲಾಡ್ಜುಗಳ ವಸತಿ ವ್ಯವಸ್ಥೆ ಇದೆ. ಉತ್ತಮ ಊಟ ತಿಂಡಿಗಳು ದೊರೆಯುತ್ತವೆ. ಇಲ್ಲಿರುವ ಸಿಖ್ಖರ ಗುರುದ್ವಾರ ಹೇಮಕುಂಡ್ ಸಾಹಿಬ್ ಗೆ ಬರುವ ಯಾತ್ರಾರ್ಥಿಗಳಿಗೆ ವಸತಿ - ಪ್ರಸಾದವನ್ನು ನೀಡುವ ವ್ಯವಸ್ಥೆ ಹೊಂದಿದೆ.

ಘಾನ್ಗ್ರಿಯ ದಿಂದ ಹೇಮಕುಂಡಕ್ಕೆ ಚಾರಣ

ಘಾನ್ಗ್ರಿಯ ದಿಂದ ಹೇಮಕುಂಡಕ್ಕೆ ಚಾರಣ

ಘಾನ್ಗ್ರಿಯ ದಿಂದ ಹೇಮಕುಂಡಕ್ಕೆ ಚಾರಣ ಬೆಳಗಿನ ಜಾವ ತುಸು ಬೇಗನೆ ಪ್ರಾರಂಭಿಸಬೇಕಾಗುತ್ತದೆ. ಏಕೆಂದರೆ ಹೇಮಕುಂಡದಲ್ಲಿ ಜನವಸತಿ ವ್ಯವಸ್ಥೆಯಿರುವುದಿಲ್ಲ. ಮಳೆ-ಚಳಿ ಹೆಚ್ಚಿದ್ದಾಗ, ಮಧ್ಯಾಹ್ನದ ನಂತರದಲ್ಲಿ ಹಿಮ ಪಾತವಾಗುವ ಸಂಭವವಿರುವುದರಿಂದ, ಹೇಮಕುಂಡ್ ದರ್ಶನ ಮುಗಿಸಿ ಎಲ್ಲರೂ ಮಧ್ಯಾಹ್ನ 1 ಗಂಟೆಯಷ್ಟರಲ್ಲಿ ಕೆಳಗೆ ಇಳಿಯಲು ಪ್ರಾರಂಭಿಸಬೇಕು. ಇಲ್ಲಿನ ಹಾದಿಗಳು ತುಸು ಕಠಿಣವಾಗಿದ್ದು, ಚಾರಣ ನಡೆಸಲು ಅಶಕ್ತವೆನಿಸುವವರಿಗೆ ಮ್ಯೂಲ್ ಮತ್ತು ಪೋರ್ಟರ್ಸ್ಗಳ ಲಭ್ಯತೆ ಇದೆ.

ಕಿಲಿಮಂಜಾರೋ ಚಾರಣದ ಅಪರೂಪದ ಅನುಭೂತಿ

ಇಲ್ಲಿ ವೈವಿಧ್ಯಮಯ ಹೂಗಳಿಗೆ ಲೆಕ್ಕವಿಲ್ಲ

ಇಲ್ಲಿ ವೈವಿಧ್ಯಮಯ ಹೂಗಳಿಗೆ ಲೆಕ್ಕವಿಲ್ಲ

ಮಳೆಗಾಲದ ಸಮಯದಲ್ಲೇ ಹೋದರೆ, ಕುಸಿದ ತಾಪಮಾನದಿಂದಾಗಿ ಪದರ ಪದರವಾಗಿ ಮಂಜು ಬಿದ್ದು ಸಂಗ್ರಹವಾಗಿ, ಸುಣ್ಣದ ಬಂಡೆಯಂತೆ ಕಾಣುವ ಬೃಹತ್ ಗಾತ್ರದ ಹಿಮನದಿಗಳು ಚಾರಣದ ಹಾದಿಯಲ್ಲಿ ಕಾಣಬಹುದು. ಇನ್ನು ನೋಡಬಹುದಾದಂತಹ ವೈವಿಧ್ಯಮಯ ಹೂಗಳಿಗೆ ಲೆಕ್ಕವಿಲ್ಲ..ಅದೃಷ್ಟವಿದ್ದರೆ, ಉತ್ತರಾಖಂಡ ರಾಜ್ಯದ ಹೂವೆಂದೇ ಪ್ರಸಿದ್ಧವಾದ 'ಬ್ರಹ್ಮ ಕಮಲ' ಕೂಡ ಕೆಲವು ಸ್ಥಳಗಳಲ್ಲಿ ಕಾಣಸಿಗುತ್ತವೆ. ಮೇಲಕ್ಕೆ ಏರಿದಂತೆಯೂ ಪ್ರಕೃತಿಯ ಚೆಲುವು ರುದ್ರ ರಮಣೀಯವೆನಿಸುತ್ತದೆ.

ಯಾತ್ರಿಗಳಿಗೆ ಉಚಿತವಾಗಿ ವಸತಿ ಮತ್ತು ಆಹಾರ

ಯಾತ್ರಿಗಳಿಗೆ ಉಚಿತವಾಗಿ ವಸತಿ ಮತ್ತು ಆಹಾರ

ಇನ್ನೊಂದು ವಿಶೇಷ ಸಂಗತಿಯೆಂದರೆ, ದೇಶದ ನಾನಾ ಕಡೆಯಿಂದ ತೀರ್ಥಯಾತ್ರೆಗೆಂದು ಬರುವ ಭಕ್ತಾದಿಗಳ ಕುರಿತು ಇಲ್ಲಿನ ಸ್ಥಳೀಯರಿಗೆ ಹೆಚ್ಚಿನ ಗೌರವವಿದೆ. ಉತ್ತರಾಖಂಡದ ಸಾಕಷ್ಟು ಊರುಗಳಲ್ಲಿ,ಅನೇಕ ಸಮಾಜ ಸೇವಕರು, ಸಂಘ ಸಂಸ್ಥೆಗಳು, ರಾಷ್ಟ್ರೀಯ ಹೆದ್ದಾರಿಯ ಬದಿಗಿನ ಕೆಲವು ಅಂಗಡಿ ಮಾಲೀಕರು, ಹೀಗೆ ಬರುವ ಸಿಖ್ಖರು ಮತ್ತು ಪಂಜಾಬಿ ಯಾತ್ರಿಗಳಿಗೆ ಉಚಿತವಾಗಿ ವಸತಿ ಮತ್ತು ಆಹಾರ-ಪಾನೀಯಗಳನ್ನು ನೀಡಿ, ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಕುರಿತು ಕೇಳಿ ಆಶ್ಚರ್ಯವಾಯಿತು. ಹೇಮಕುಂಡ್ ಚಾರಣದ ಹಾದಿಯಲ್ಲೂ ಕೂಡ ಎತ್ತರದ ಸ್ಥಳಗಳಲ್ಲಿ ಕೆಲವು ಅಂಗಡಿಯವರು, ಹಿರಿಯ ಯಾತ್ರಾರ್ಥಿಗಳಿಗೆ, ಅಂಗವಿಕಲರಿಗೆ, ಕೊರೆವ ಚಳಿಗೆ ಉಚಿತವಾಗಿ ಚಹಾ ನೀಡುವುದು ನೋಡಿ ಸಂತಸವಾಯಿತು.

ಮೌಂಟ್ ಎವರೆಸ್ಟ್ ಮೊದಲ ಮಹಿಳೆ ಜಂಕೋ ತಾಬಿ ಸ್ಮರಿಸಿದ ಗೂಗಲ್

ಯಾತ್ರಿ, ಚಾರಣಿಗರಲ್ಲಿ ವಿನಂತಿ

ಯಾತ್ರಿ, ಚಾರಣಿಗರಲ್ಲಿ ವಿನಂತಿ

ನಾನು ಜೀವನದಲ್ಲಿ ಮೊದಲ ಬಾರಿಗೆ ಅಷ್ಟು ಸಮೀಪದಿಂದ ಹಿಮನದಿಗಳನ್ನು ಕಣ್ಣಾರೆ ನೋಡುತ್ತಿದ್ದರಿಂದ ಅಕ್ಷರಶಃ ಮೂಕಳಾಗಿ ಹೋಗಿದ್ದೆ. ಈ ವಿಹಂಗಮ ನೋಟವನ್ನು ನೋಡಿ ಸಂತೋಷ ಪಟ್ಟ ಮರುಕ್ಷಣಕ್ಕೆ, ಮಾನವ ಪ್ರಕೃತಿಗೆ ಕೊಡುಗೆಯಾಗಿ ನೀಡುತ್ತಿರುವ ಮಾಲಿನ್ಯ ಮತ್ತು ಹೆಚ್ಚಿನ ಇಂಗಾಲದ ಪ್ರಮಾಣದಿಂದಾಗಿ ಏರುತ್ತಿರುವ ಜಾಗತಿಕ ತಾಪಮಾನ ಇಂತಹ ಸಾವಿರಾರು ಹಿಮನದಿಗಳ ಸೃಷ್ಟಿಯನ್ನು ಕುಂಠಿತಗೊಳಿಸಿದೆ ಎಂಬ ಆತಂಕವೂ ಮನದಲ್ಲಿ ಮೂಡಿತು. ಸ್ವಚ್ಛತೆಯ ಮನ್ನಣೆ ಕೇವಲ ಪ್ರವಾಸೋದ್ಯಮ ಇಲಾಖೆಯವರೊಬ್ಬರ ಜವಾಬ್ದಾರಿ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಪರಿಸ್ಥಿತಿಯೇ ಬೇರೆ.

ಪ್ಲಾಸ್ಟಿಕ್ ಮಾಲಿನ್ಯ ಇಲ್ಲೂ ಆವರಿಸಿದೆ

ಪ್ಲಾಸ್ಟಿಕ್ ಮಾಲಿನ್ಯ ಇಲ್ಲೂ ಆವರಿಸಿದೆ

ಸಾವಿರಾರು ಅಡಿಗಳಷ್ಟು ಎತ್ತರದ ಸ್ಥಳದಿಂದ ಹಿಮ ಕರಗಿ ಹರಿದು ಬರುವ ನೀರಿನ ತೊರೆಗಳಲ್ಲೂ ಕೂಡ, ಪ್ರವಾಸಿಗರು ಎತ್ತೆಸೆದ ಪ್ಲಾಸ್ಟಿಕ್ ಮಾಲಿನ್ಯವನ್ನು ಕಂಡಾಗ, ಧಾರ್ಮಿಕ ನಂಬಿಕೆಗಳೆಡೆಗೆ ಇರುವ ನಮ್ಮ ಶ್ರದ್ಧಾಭಕ್ತಿಗಳು, ನಾವೇ ಒಂದು ಭಾಗವಾಗಿರುವ ಈ ಪ್ರಕೃತಿಯ ಕಾಪಾಡಿಕೊಳ್ಳುವ ವಿಷಯದಲ್ಲಿ ಏಕೆ ಇಲ್ಲವಾಗಿದೆ ಎಂಬ ಬೇಸರ ಕಾಡುವುದು ಸುಳ್ಳಲ್ಲ. ಕೇವಲ ಪ್ರಕೃತಿಯ ಕಂಡು ಮನಸ್ಸು ಪ್ರಫುಲ್ಲಗೊಳಿಸಿಕೊಂಡು ಮನೆಗೆ ಮರಳದೇ ಒಬ್ಬ ಜವಾಬ್ಧಾರಿಯುತ ಪ್ರವಾಸಿಗನಾಗಿ, ಭೂಮಿಯ ಮೇಲಿನ ಜವಾಬ್ಧಾರಿಯುತ ಜೀವಿಯಾಗಿ, ಎಲ್ಲವೂ ಸರ್ವನಾಶವಾಗುವ ಮುಂಚೆ, ಕಸಗಳನ್ನು ಎಲ್ಲೆಂದರಲ್ಲಿ ಎಸೆಯದೆ, ಮರಗಿಡಗಳನ್ನು ಉಳಿಸಿಕೊಂಡು ಮಾಲಿನ್ಯವನ್ನು ಕಡಿಮೆ ಮಾಡಿ, ಇಂಗಾಲದ ಪ್ರಮಾಣ ಕಡಿಮೆಗೊಳಿಸಿ, ಭೂಮಂಡಲದ ಸಮತೋಲನ ಕಾಪಾಡಿಕೊಳ್ಳುವ ಕರ್ತವ್ಯ ನಮ್ಮ ಮೇಲಿದೆ.

ಬಾಲ್ಯದ ನೆನಪು: ಸಂಕದ ಪಕ್ಕ ಸಿಕ್ಕ ಬಳ್ಳಿಯಿಂದ ಮಕ್ಕಳ ಸ್ಲಾಯ್ಮ್ ಆಟ

English summary
A Himalayan Trekking Travelogue To Hemkund Sahib by Soumya Beena Sagara. Hemkund Sahib(4,633 m) is a Sikh place of worship and pilgrimage site in Chamoli district, Uttarakhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X