ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಟ್ಟತನ ಹಾಗೂ ಒಳ್ಳೆಯತನದ ನಡುವೆ ವಿವೇಕ ಎಂಬ ಶ್ರೀಕೃಷ್ಣ!

By ಆರ್.ಟಿ. ವಿಠ್ಢಲಮೂರ್ತಿ
|
Google Oneindia Kannada News

ಅವತ್ತು ವೀರೇಂದ್ರ ಪಾಟೀಲ್ ಮಾತನಾಡುವ ಮೂಡ್ ನಲ್ಲಿದ್ದರು. ಹಾಗೆ ನೋಡಿದರೆ ಇಷ್ಟು ವರ್ಷಗಳಲ್ಲಿ ನಾನು ನೋಡಿದ ಸರಳ ರಾಜಕಾರಣಿಗಳ ಪೈಕಿ ವೀರೇಂದ್ರ ಪಾಟೀಲ್ ಕೂಡಾ ಅಗ್ರಪಂಕ್ತಿಯಲ್ಲಿ ನಿಲ್ಲುವವರು.

ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಮೇಲಿಂದ ಮೇಲೆ ಹತ್ತಿರದಿಂದ ನೋಡುವ ಅವಕಾಶ ನನಗೆ ಲಭ್ಯವಾಗುತ್ತಿತ್ತು. ಅವರದು ಒಂಥರಾ ಮಗುವಿನ ಸ್ವಭಾವ. ಆ ಸಂದರ್ಭದಲ್ಲಿ ಅವರಿಗೆ ತುಂಬ ಆತ್ಮೀಯರಾಗಿದ್ದವರ ಪೈಕಿ, ಈಗ ಸಿದ್ದರಾಮಯ್ಯ ಅವರ ಜತೆಗಿರುವ ಸಿ.ಎಂ.ಇಬ್ರಾಹಿಂ ಮುಖ್ಯರಾದವರು.

ಎಲ್ಲ ಪಕ್ಷಗಳ ಆತ್ಮವಿಶ್ವಾಸ ನೋಡಿದರೆ ನೆನಪಾಗುವುದೇ ಎಬಿಸಿಡಿ!ಎಲ್ಲ ಪಕ್ಷಗಳ ಆತ್ಮವಿಶ್ವಾಸ ನೋಡಿದರೆ ನೆನಪಾಗುವುದೇ ಎಬಿಸಿಡಿ!

ಅವತ್ತು ಸಂದರ್ಶನಕ್ಕೆ ಅಂತ ಅವರ ಸರ್ಕಾರಿ ಬಂಗಲೆ ಕಾವೇರಿಗೆ, ಹೋದಾಗ ಅವರ ಪತ್ನಿ ರೊಟ್ಟಿ ಮಾಡಿದ್ದರು. ಜೋಳದ ರೊಟ್ಟಿ, ಝುನಕಾ, ಪುಂಡೀಕಾಯಿ ಪಲ್ಯ, ಉಚ್ಚೆಳ್ಳು ಚಟ್ನಿಪುಡಿ, ಮೊಸರು ಹೀಗೆ. ಈ ರೀತಿ ತಿಂಡಿ ತಿನ್ನುವಾಗ ರಾಜಕೀಯ ಸಂದರ್ಶನ ಮಾಡಲು ಸಾಧ್ಯವಾಗದಿದ್ದರೂ, ಆತ್ಮೀಯತೆಯಿಂದ ನಮ್ಮೆದುರಿಗಿರುವವರು ಮಾತನಾಡುವಂತೆ ನೋಡಿಕೊಳ್ಳಬೇಕು. ದೊಡ್ಡವರು ಅನ್ನಿಸಿಕೊಂಡವರು ಮಾತನಾಡಿದಾಗ ಮಾಧ್ಯಮಗಳಿಗಲ್ಲದಿದ್ದರೂ, ವೈಯಕ್ತಿಕವಾಗಿ ನಮ್ಮ ಬದುಕಿಗೆ ಅಗತ್ಯವಾದಂತಹ ಟಿಪ್ಸ್ ಗಳು ಸಿಗುತ್ತವೆ.

50 not out : Veerendra Patil Vs Ramakrishna Hegde

ಅಂದ ಹಾಗೆ, ಅವತ್ತಿಗಾಗಲೇ ರಾಮಕೃಷ್ಣ ಹೆಗಡೆ ಅವರ ಟೆಲಿಫೋನ್ ಟ್ಯಾಪಿಂಗ್ ವಿಷಯದಲ್ಲಿ ದೊಡ್ಡ ರಾದ್ದಾಂತವೇ ನಡೆದಿತ್ತು. ರಣಾಂಗಣದಲ್ಲಿ ಮುಖಾಮುಖಿಯಾಗುವ ಇಬ್ಬರು ವೀರ ಸೇನಾನಿಗಳು ಹೇಗೆ ಹೋರಾಡುತ್ತಾರೋ? ತಮ್ಮ ತಮ್ಮ ಬತ್ತಳಿಕೆಯಲ್ಲಿರುವ ಅಸ್ತ್ರಗಳನ್ನು ಹೇಗೆ ಪ್ರಯೋಗಿಸುತ್ತಾರೋ? ನಾನು ನೋಡಿಲ್ಲ. ಆದರೆ ಕಾರ್ಗಿಲ್ ನಲ್ಲಿ ಭಾರತ-ಪಾಕಿಸ್ತಾನದ ನಡುವೆ ಘನಘೋರ ಯುದ್ಧವಾದಾಗ ನೋಡಿದ್ದೇನೆ. ಯೋಧರ ಶವಗಳನ್ನು ಹೊತ್ತು ದ್ರಾಸ್ ನಿಂದ ಟ್ರಕ್ಕುಗಳು ಕೆಳಗಿಳಿಯುತ್ತಿರುವುದನ್ನು ನೋಡಿ ಕಣ್ಣೀರು ಹಾಕಿದ್ದೇನೆ.

ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!

ಹೇಳಲು ಹೋದರೆ ಅವತ್ತು ಟೊಲೋಲಿಂಗ್ ಪರ್ವತವನ್ನು ಉಗ್ರಗಾಮಿಗಳು ಮತ್ತು ಪಾಕ್ ಸೈನಿಕರ ಹಿಡಿತದಿಂದ ತಪ್ಪಿಸಿ, ಅಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ನೆಟ್ಟ ಭಾರತೀಯ ಸೈನಿಕರ ಕಷ್ಟಗಳನ್ನು, ಆ ಕಷ್ಟಗಳ ನಡುವೆಯೇ ಅವರು ಸಂಭ್ರಮ ಆಚರಿಸುವುದನ್ನು ನೋಡಿ ಮಕ್ಕಳಂತೆ ಖುಷಿ ಪಟ್ಟಿದ್ದೇನೆ. ಆದರೆ ಆ ಯುದ್ಧದಲ್ಲೂ ಇಬ್ಬರು ಸೇನಾನಿಗಳು ಮುಖಾಮುಖಿಯಾದದ್ದನ್ನು ನಾನು ನೋಡಿಲ್ಲ. ಈಗಿನ ಯುದ್ಧಗಳ ಸ್ವರೂಪವೇ ಬೇರೆ. ಅತಿರಥ-ಮಹಾರಥರೆನ್ನಿಸಿಕೊಂಡವರು ಹಾಗೆ ಎದುರಾ ಬದುರಾಗಿ ನಿಂತು ಹೋರಾಡಲು ಸಾಧ್ಯವಿಲ್ಲ.

ಹೋಲಿಸಿದರೆ ಹಿಂದಿನ ಯುದ್ಧಗಳ ಹಾಗೂ ಈಗಿನ ಯುದ್ಧಗಳ ತಂತ್ರ ಬದಲಾಗಿದೆ. ಕಾಲಕಾಲಕ್ಕೆ ಅವು ಬದಲಾಗುತ್ತಲೂ ಇರುತ್ತವೆ. ಅದೇನೇ ಇರಲಿ, ಅವತ್ತು ಭಾರತ-ಪಾಕಿಸ್ತಾನದ ನಡುವೆ ಯುದ್ದವಾದಾಗ ಶ್ರೀನಗರ, ಉಡಿ, ಲಾಲ್ ಪುಲ್, ಪಂದ್ರಾಸ್, ದ್ರಾಸ್‌ನಂತಹ ರಕ್ತ ಸಿಕ್ತ ಪ್ರದೇಶಗಳಿಗೆ ಹೋದಾಗ ಆದ ಅನುಭವದ ಬಗ್ಗೆ ಹೇಳಲು ಹೋದರೆ ಅದೇ ಒಂದು ದೊಡ್ಡ ಕತೆ.

50 not out : Veerendra Patil Vs Ramakrishna Hegde

ಆದರೆ ಅದಕ್ಕೂ ಬಹಳ ವರ್ಷಗಳ ಮುನ್ನ, ಅಂದರೆ 1990ರಲ್ಲಿ ಇದೇ ವಿಧಾನಸಭೆಯಲ್ಲಿ ರಾಮಕೃಷ್ಣ ಹೆಗಡೆ ಹಾಗೂ ವೀರೇಂದ್ರ ಪಾಟೀಲ್ ಪರಸ್ಪರ ಮುಖಾಮುಖಿಯಾಗಿ ಟೆಲಿಫೋನ್ ಕದ್ದಾಲಿಕೆಯ ಕುರಿತು ನಡೆಸಿದ ಚರ್ಚೆಯಿದೆಯಲ್ಲ? ಅಂತಹ ಅಮೋಘ ಚರ್ಚೆಗಳನ್ನು ನಾನು ಕೇಳಿದ್ದು ಕಡಿಮೆ. ದಿನಗಟ್ಟಲೆ ನಡೆದ ಆ ಚರ್ಚೆಯ ಸಂದರ್ಭದಲ್ಲಿ ಉಭಯ ನಾಯಕರು, ತಮ್ಮ ತಮ್ಮ ಬತ್ತಳಿಕೆಯಿಂದ ತೆಗೆತೆಗೆದು ಒಬ್ಬರು, ಮತ್ತೊಬ್ಬರ ಮೇಲೆ ಪ್ರಯೋಗಿಸುತ್ತಿದ್ದ ಬಾಣಗಳು ಅತ್ಯುಚ್ಚ ಮಟ್ಟದವದ್ದಾಗಿದ್ದವು. ಒಂದೇ ಒಂದು ಕೆಟ್ಟ ಪದವಿಲ್ಲ. ಒಂದೇ ಒಂದು ದ್ವೇಷದ ಪದವಿಲ್ಲ. ರಿಯಲಿ ಇಟ್ ಈಸ್ ಯಮ್ಮಿ.

ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ಸಿಎಂ ಪಟ್ಟ ತಪ್ಪಿದ್ದೇಕೆ? ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ಸಿಎಂ ಪಟ್ಟ ತಪ್ಪಿದ್ದೇಕೆ?

ಫೈನಲಿ, ರಾಮಕೃಷ್ಣ ಹೆಗಡೆಯಂತಹ ಅತಿರಥ ರಾಜಕಾರಣಿಯ ಮುಂದೆ ವೀರೇಂದ್ರ ಪಾಟೀಲರ ಬತ್ತಳಿಕೆಯಲ್ಲಿದ್ದ ದಾಖಲೆಗಳು ಗೆದ್ದವು. ಹಾಗಂತ ನನಗನ್ನಿಸಿತು. ಮತ್ತು ಆ ಚರ್ಚೆಯ ನಂತರದ ದಿನಗಳಲ್ಲೇ ವೀರೇಂದ್ರ ಪಾಟೀಲರ ಸಂದರ್ಶನ ಮಾಡುವ ಅವಕಾಶ ನನಗೆ ದಕ್ಕಿತು.

ಅಂದ ಹಾಗೆ ಅವತ್ತು ಮನೆಗೆ ಹೋದಾಗ, ತಿಂಡಿ ತಿನ್ನುತ್ತಾ ಮಾತನಾಡೋಣ ಎಂದರು ವೀರೇಂದ್ರ ಪಾಟೀಲ್. ಆದರೆ ತಿಂಡಿ ತಿನ್ನುತ್ತಾ ನಾನು ಬರೆದುಕೊಳ್ಳುವುದು ಹೇಗೆ? ಅಂತ ಪೇಚಾಡಿದೆ. ನನ್ನ ಪೇಚಾಟ ನೋಡಿದ ವೀರೇಂದ್ರ ಪಾಟೀಲ್, ಹೌದಲ್ಲ, ವಿಠ್ಠಲಮೂರ್ತಿ, ತಿಂಡಿ ತಿನ್ನುತ್ತಾ ಸಂದರ್ಶನ ಮಾಡುವುದು ಹೇಗೆ? ತಿಂಡಿ ತಿಂದ ನಂತರವೇ ಸಂದರ್ಶನ ಮಾಡೋಣ. ಮೊದಲು ತಿಂಡಿ ತಿಂದು ಬಿಡೋಣ ಎಂದರು.

50 not out : Veerendra Patil Vs Ramakrishna Hegde

ಸರಿ, ಇಬ್ಬರೂ ತಿಂಡಿಗೆ ಕುಳಿತೆವು. ನಾನು ಔಪಚಾರಿಕವಾಗಿ ಟೆಲಿಫೋನ್ ಟ್ಯಾಪಿಂಗ್ ಪ್ರಕರಣದ ವಿಷಯ ಪ್ರಸ್ತಾಪಿಸಿದೆ. ಇಟ್ ಈಸ್ ಏ ಫ್ಯಾಕ್ಟ್ ವಿಠ್ಠಲಮೂರ್ತಿ. ಹಲವು ಸಲ ಟೆಲಿಫೋನ್ ಟ್ಯಾಪಿಂಗ್ ಮಾಡಬೇಕಾಗುತ್ತದೆ. ಆದರೆ ಯಾರ ದೂರವಾಣಿಯನ್ನು ಕದ್ದಾಲಿಸಬೇಕು ಎಂಬುದಕ್ಕೆ ಒಂದು ನಿಯಮ ಅಂತಿರುತ್ತದೆ ಎಂದರು ವೀರೇಂದ್ರ ಪಾಟೀಲ್.
ನಾನು ಮಾತನಾಡಲಿಲ್ಲ. ಬದಲಿಗೆ ಅವರೇ ಮಾತನಾಡುತ್ತಾ ಹೋದರು. ಇದನ್ನು ಆಫ್ ದಿ ರೆಕಾರ್ಡ್ ಅಂತ ಹೇಳುತ್ತೇನೆ ವಿಠ್ಠಲಮೂರ್ತಿ. ಅಂದ ಹಾಗೆ ಹೆಗಡೆ ನನ್ನ ಆತ್ಮೀಯ ಗೆಳೆಯರು. ನೋ ಡೌಟ್. ಆದರೆ ಸತ್ಯ ಮಾತನಾಡುವಾಗ ನನ್ನ ಬಳಿ ಇರುವ ದಾಖಲೆಗಳೇನಿವೆಯೋ? ಅದನ್ನೇ ಬಿಚ್ಚಿಟ್ಟಿದ್ದೇನೆ ಎಂದರು.

ಇದರರ್ಥ, ಹೆಗಡೆ ಒಬ್ಬರೇ ದೂರವಾಣಿ ಕದ್ದಾಲಿಸಿದ ಸಿಎಂ ಅಂತ ನನಗನ್ನಿಸುವುದಿಲ್ಲ. ಆದರೆ ಅವರ ಕುರಿತು ಯಾವ ದೂರು ಕೇಳಿ ಬಂದಿದೆಯೋ? ಅದಕ್ಕೆ ಪೂರಕವಾದ ಸಾಕ್ಷ್ಯಗಳಿವೆ. ರಾಷ್ಟ್ರಮಟ್ಟದ ನಾಯಕರಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ತಮ್ಮ ದಾರಿಗೆ ಯಾರೂ ಅಡ್ಡ ಬರಬಾರದು ಎಂಬುದು ಅವರ ಬಯಕೆಯಾಗಿರಬಹುದು. ಅದಕ್ಕಾಗಿ ಹಿರಿಯ ನಾಯಕರ ದೂರವಾಣಿ ಕರೆಯನ್ನು ಕದ್ದಾಲಿಸಿರಬಹುದು. ಹಾಗೆಂದ ಮಾತ್ರಕ್ಕೆ ಹೆಗಡೆ ಅವರನ್ನು ಸಾರಾಸಗಟಾಗಿ ನಿರಾಕರಿಸಲು ಸಾಧ್ಯವಿಲ್ಲ ವಿಠ್ಠಲಮೂರ್ತಿ ಎಂದರು.

ನಾನು ಅವಾಕ್ಕಾದೆ. ಎರಡೇ ದಿನಗಳ ಹಿಂದೆ ವಿಧಾನಸಭೆಯಲ್ಲಿ ಇದೇ ವೀರೇಂದ್ರ ಪಾಟೀಲ್ ಹಾಗೂ ಹೆಗಡೆಯವರ ನಡುವೆ ಭಾರೀ ಸಂಘರ್ಷವೇ ನಡೆದಿತ್ತು. ನೀವು ರಾಜೀವ್ ಗಾಂಧಿಯವರ ಮನ ಒಲಿಸಲು ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದೀರಿ ಎಂದು ಹೆಗಡೆ ಹೇಳಿದರೆ, ನನ್ನಬಳಿ ಇರುವ ದಾಖಲೆಗಳ ಆಧಾರದ ಮೇಲೆ ನಾನು ಮಾತನಾಡುತ್ತಿದ್ದೇನೆ. ಯಾರನ್ನೂ ಮೆಚ್ಚಿಸಲು ನಾನು ಮಾತನಾಡುವುದಿಲ್ಲ. ಇಷ್ಟು ವರ್ಷ ನನ್ನನ್ನು ನೋಡಿದ್ದೀರಿ. ಇದು ನಿಮಗೂ ಗೊತ್ತಿರಬಹುದು ಎಂದು ಪಾಟೀಲ್ ತಿರುಗುಬಾಣ ಬಿಟ್ಟಿದ್ದರು.

ಹೀಗೆ ಕಚ್ಚಾಡಿದರೂ ರಾಮಕೃಷ್ಣ ಹೆಗಡೆ ಅವರ ಬಗ್ಗೆ ವೀರೇಂದ್ರ ಪಾಟೀಲರಿಗೆ ಅಪಾರ ಗೌರವ ಇತ್ತು. ಅವರ ಮಾತಿನಲ್ಲಿ ಅದು ವ್ಯಕ್ತವಾಗುತ್ತಿತ್ತು. ನಾನು ಕುತೂಹಲದಿಂದ ಹೇಳಿದೆ. ಸಾರ್, ಅಸೆಂಬ್ಲಿಯಲ್ಲಿ ನೀವು ಹಾಗೂ ಹೆಗಡೆಯವರು ಮಾತನಾಡುತ್ತಿದ್ದ ರೀತಿ ನೋಡಿ ಇಬ್ಬರ ನಡುವೆ ದ್ವೇಷದ ಜ್ವಾಲಾಮುಖಿಯೇ ಇದೆ ಅನ್ನಿಸಿತ್ತು. ವೀರೇಂದ್ರ ಪಾಟೀಲ್ ಅರೆಕ್ಷಣ ಮೌನವಾದರು. ಹಾಗೆಯೇ ಮೊಸರು ಬೆರೆಸಿದ ಉಚ್ಚೆಳ್ಳು ಚಟ್ನಿಯನ್ನು ರೊಟ್ಟಿಗೆ ತಗಲಿಸಿಕೊಂಡು ಬಾಯಿಗಿಟ್ಟುಕೊಂಡು ಜಗಿಯುತ್ತಾ ಹೇಳಿದರು. ವಿಠ್ಠಲಮೂರ್ತಿ, ನಿಮಗೊಂದು ಮಾತು ಹೇಳುತ್ತೇನೆ. ತಪ್ಪು ತಿಳಿದುಕೊಳ್ಳುವುದಿಲ್ಲ ತಾನೇ? ಇವರೇನೋ ಫಿಲಾಸಫಿ ಹೇಳುತ್ತಾರೆ ಅಂದುಕೊಳ್ಳುವುದಿಲ್ಲ ತಾನೇ? ಅಂದರು.

ಇಲ್ಲ ಸಾರ್ ಹೇಳಿ ಎಂದೆ. ವಿಠ್ಠಲಮೂರ್ತಿ, ಈ ಮಹಾಭಾರತ ನಡೆಯಿತು ಅನ್ನುತ್ತಾರಲ್ಲ? ಅದು ನಡೆದಿರುವುದು ಅಸಂಭವವಲ್ಲ. ಈಗ ನಾವು ಓದುತ್ತಿರುವ ಮಹಾಭಾರತಕ್ಕೆ ಹಲ ಮಂದಿ ವಿದ್ವಾಂಸರು ಮತ್ತಷ್ಟು ಹೊಳಪು ನೀಡಿರಬಹುದು. ಆದರೆ ನನಗನ್ನಿಸುವ ಪ್ರಕಾರ, ಮನುಷ್ಯನ ಮನಸ್ಸೇ ಒಂದು ಮಹಾಭಾರತ ಎಂದರು ವೀರೇಂದ್ರ ಪಾಟೀಲ್.
ನಾನು ಕುತೂಹಲದಿಂದ ಅವರನ್ನೇ ನೋಡುತ್ತಾ ಕುಳಿತೆ. ಅವರು ಹೇಳುತ್ತಾ ಹೋದರು. ವಿಠ್ಠಲಮೂರ್ತಿ, ಮಹಾಭಾರತದಲ್ಲಿ ಪಾಂಡವರು ಒಳ್ಳೆಯತನದ ಸಂಕೇತ. ಕೌರವರು ಕೆಟ್ಟತನದ ಸಂಕೇತ. ಈ ಒಳ್ಳೆಯತನ ಮತ್ತು ಕೆಟ್ಟತನ ಎರಡೂ ನಮ್ಮ ಮನಸ್ಸಿನಲ್ಲೇ ಇರುತ್ತದೆ.

ಒಬ್ಬ ವ್ಯಕ್ತಿ ನಿಮಗೆ ಸರ್ವ ಶ್ರೇಷ್ಠ ಅನ್ನಿಸಬಹುದು. ಅದರರ್ಥ, ಆತ ಕೆಟ್ಟದನ್ನೇ ಯೋಚಿಸಿರುವುದಿಲ್ಲ ಎಂದಲ್ಲ. ಆದರೆ ಪ್ರತಿ ಮನುಷ್ಯನ ಮನಸ್ಸಿನಲ್ಲಿ ಒಳ್ಳೆಯತನ ಹಾಗೂ ಕೆಟ್ಟತನದ ನಡುವೆ ಹೊಯ್ದಾಟ ನಡೆದೇ ಇರುತ್ತದೆ. ಕೆಟ್ಟದನ್ನುಯೋಚಿಸದೆ ಇರುವವನು ಮನುಷ್ಯನೇ ಅಲ್ಲ ಎಂದರು ವೀರೇಂದ್ರ ಪಾಟೀಲ್.

ನನಗೆ ಅರೆಕ್ಷಣ ಮೈ ಜುಂ ಅಂತು. ಕೆಟ್ಟದನ್ನುಯೋಚಿಸದವನು ಮನುಷ್ಯನೇ ಅಲ್ಲ ಎಂಬುದು ಸಣ್ಣ ಮಾತಲ್ಲ. ಅದರಲ್ಲೂ ಎರಡೆರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾದ ವೀರೇಂದ್ರ ಪಾಟೀಲರಂತಹ ಸಜ್ಜನ ನಾಯಕನ ಬಾಯಲ್ಲಿ ಬರುತ್ತಿರುವ ಮಾತದು.

ನಾನು ಮೂಕನಾಗಿ ಕೇಳುತ್ತಾ ಕುಳಿತೆ. ಯಥಾ ಪ್ರಕಾರ, ಅವರು ಮೊಸರು ಕಲಸಿದ ಉಚ್ಚೆಳ್ಳು ಚಟ್ನಿಯನ್ನುರೊಟ್ಟಿಗೆ ಸವರಿಕೊಂಡು ತಿನ್ನುತ್ತಾ ಹೇಳಿದರು: ನಾವು ಬದುಕಿನಲ್ಲಿ ಕೆಟ್ಟದನ್ನು ಯೋಚಿಸುತ್ತೇವೆ. ಅದು ಕೂಡಾ ನಿರಂತರ ಪ್ರಕ್ರಿಯೆ. ಒಂದು ಕಾಲಘಟ್ಟದಲ್ಲಿ ನಾನು ಕೆಟ್ಟದನ್ನೇ ಯೋಚಿಸುತ್ತಿದ್ದೆ. ಆನಂತರದ ಕಾಲಘಟ್ಟದಲ್ಲಿ ಒಳ್ಳೆಯದನ್ನೇ ಯೋಚಿಸಲು ಶುರು ಮಾಡಿದೆ ಎಂಬುದು ಸುಳ್ಳು. ಮನುಷ್ಯನ ಮನಸ್ಸಿನಲ್ಲಿ ಏಕ ಕಾಲದಲ್ಲಿ ಪಾಂಡವರು, ಕೌರವರ ಉಪಸ್ಥಿತಿ ಇರಲೇಬೇಕು.

ಆದರೆ ಮನಸ್ಸಿನಲ್ಲಿರುವ ಈ ಕೆಟ್ಟತನ ಹಾಗೂ ಒಳ್ಳೆಯತನದ ನಡುವೆ ವಿವೇಕ ಎಂಬ ಶ್ರೀಕೃಷ್ಣನ ಉಪಸ್ಥಿತಿ ಲಭ್ಯವಾಗುವಂತೆ ಮಾಡಿಕೊಂಡರೆ ನೀವು ಬಚಾವ್. ಯಾಕೆಂದರೆ ಆಗ ನಿಮ್ಮಲ್ಲಿ ಒಳ್ಳೆಯತನದ ಷೇರು ಜಾಸ್ತಿಯಾಗುತ್ತದೆ. ಇದು ಫಿಫ್ಟಿ ಒನ್ ಪರ್ಸೆಂಟಿಗಿಂತ ಕಡಿಮೆಯಾಗದಂತೆ ನೋಡಿಕೊಂಡರೆ ನೀವು ಒಳ್ಳೆಯತನದ ಬೌಂಡರಿಯೊಳಗಿದ್ದೀರಿ ಅಂತ ಅರ್ಥ.

ಹಾಗೊಂದು ವೇಳೆ ಕೆಟ್ಟತನದ ಷೇರು ಐವತ್ತೊಂದು ಪರ್ಸೆಂಟು ತಲುಪಿದರೆ ನೀವು ಕೆಟ್ಟವರು ಅಂತ ಅರ್ಥ. ಆದ್ದರಿಂದ ಪಾಂಡವರನ್ನು ರೂಪಿಸುವವರು ನೀವೇ. ಕೌರವರನ್ನು ರೂಪಿಸಿಕೊಳ್ಳುವವರೂ ನೀವೇ. ಹೀಗಾಗಿ ಪದೇ ಪದೇ ವಿವೇಕ ಎಂಬ ಶ್ರೀಕೃಷ್ಣನನ್ನು ಮುಂದಿಟ್ಟುಕೊಳ್ಳಿ. ಮನಸ್ಸೆಂಬ ರಥ ಮುನ್ನುಗ್ಗಲು ಕಾರಣವಾಗುವ ಲಗಾಮು ಆತನ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಿ.

ಹೀಗಾಗಿಯೇ ಯೋಚಿಸುತ್ತಾ ಹೋದರೆ ನನಗೆ ಮಹಾಭಾರತ ಎಂದರೆ ಮಹಾಕಾವ್ಯ ಮಾತ್ರವಲ್ಲ. ಪ್ರತಿಯೊಬ್ಬ ಮನುಷ್ಯ ಕೂಡಾ ಅದರ ಪ್ರತಿಬಿಂಬ ಅನ್ನಿಸುತ್ತದೆ. ಆ ದೃಷ್ಟಿಯಿಂದ ನೋಡಿದರೆ ಹೆಗಡೆ ಕೂಡಾ ಒಳ್ಳೆಯತನದ ಷೇರು ಹೆಚ್ಚಿದ್ದ ಮನುಷ್ಯ. ಹೀಗಾಗಿ ಕೆಲ ಘಟನೆಗಳ ಆಧಾರದ ಮೇಲೆ ಅವರನ್ನು ಸಾರಾಸಗಟಾಗಿ ಅಳೆಯಬಾರದು. ಅಲ್ಲವೇ? ಅಂತ ಪ್ರಶ್ನಿಸಿದ ವೀರೇಂದ್ರ ಪಾಟೀಲ್, ಇದರಲ್ಲಿ ಏನಾದರೂ ತಪ್ಪಿದೆಯೇ? ಎಂದು ಕೇಳಿದರು.

ಅಷ್ಟು ದೊಡ್ಡ ಮನುಷ್ಯ. ಮನಸ್ಸನ್ನೇ ಮಹಾಭಾರತ ಅಂತ ಹೇಳಿ ಅನೂಹ್ಯವಾದ ಘಟ್ಟವೊಂದಕ್ಕೆ ಕರೆದೊಯ್ದ ನಾಯಕ ಫೈನಲಿ, ಇದರಲ್ಲಿ ಏನಾದರೂ ತಪ್ಪಿದೆಯೇ? ಎಂದು ಕೇಳಿದರೆ ನಾನೇನು ಹೇಳಲಿ? ಆ ಕ್ಷಣಕ್ಕೆ ನಾನು ಮೂಕನೇ ಆಗಿ ಹೋದೆ.

ನನ್ನ ಸ್ಥಿತಿ ಕಂಡು ವೀರೇಂದ್ರ ಪಾಟೀಲರು ಅಮಾಯಕ ನಗೆ ನಗುತ್ತಾ, ವಯಸ್ಸಾದವನು ಏನೇನೋ ಹೇಳುತ್ತಾನೆ ಅಂದುಕೊಳ್ಳಬೇಡಿ. ಬನ್ನಿ, ಅರಾಮಾಗಿ ಕೂತು ಮಾತನಾಡೋಣ. ನಿಮ್ಮ ಪ್ರಶ್ನೆಗಳೇನಿವೆ ಕೇಳಿ ಎಂದರು. ಅಂದ ಹಾಗೆ ಅವತ್ತು ಸಂದರ್ಶನವೇನೋ ಮುಗಿಯಿತು. ಅದು ವರ್ತಮಾನಕ್ಕೆ ಸಂಬಂಧಿಸಿದ್ದು, ಆದರೆ ಅದಕ್ಕೂ ಮುನ್ನ ಅವರಾಡಿದ ಮಾತು, ಮನುಷ್ಯ ಭವಿಷ್ಯದಲ್ಲಿ ಹೇಗೆ ನಡೆಯಬೇಕು? ಎಂಬುದನ್ನು ಧ್ವನಿಸಿತ್ತು.

ಅಂದ ಹಾಗೆ ಇಪ್ಪತ್ತೈದು ವರ್ಷಗಳ ಹಿಂದೆ ಅವರಾಡಿದ ಮಾತುಗಳು ಇವತ್ತೂ ನನ್ನನ್ನು ಕಾಡುತ್ತವೆ.

English summary
50 not out by R T Vittal Murthy. When Veerendra Patil was chief minister he had a debate on allegation of phone tapping by Ramakrishna Hegde. In an interview, Patil says there is good and bad in everyone, but wisdom should prevail, like Krishna did in Mahabharata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X