ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಪೆಯ ಕಡಲಾಳದಲ್ಲಿ ಸುವರ್ಣ ತ್ರಿಭುಜ ನಾಪತ್ತೆಯಾಗಿ ಇಂದಿಗೆ ಮೂರು ವರ್ಷಗಳು!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಡಿಸೆಂಬರ್ 18: ಸುವರ್ಣ ತ್ರಿಭುಜ, ಈ ಹೆಸರು ಕೇಳಿದರೆ ಸಾಕು ಉಡುಪಿಯ ಮಲ್ಪೆ ಬಂದರು ಬೆಚ್ಚಿ ಬೀಳುತ್ತದೆ. ಉದರ ಪೊರೆಯುವ ಕಡಲು ತನ್ನವರನ್ನು ಅಪೋಷನ ಪಡೆದ ದುಃಖ ಉಮ್ಮಳಿಸುತ್ತದೆ. ಮಲ್ಪೆಯ ಬಂದರಿನಿಂದ ಕಡಲಿನತ್ತ ಸಾಗಿದ ಸುವರ್ಣ ತ್ರಿಭುಜ ನಾಪತ್ತೆಯಾಗಿ ಮೂರು ವರ್ಷಗಳೇ ಕಳೆದಿದೆ. ಕಡಲೊಡಲಲ್ಲಿ ಕಣ್ಮರೆಯಾದ ಸುವರ್ಣ ತ್ರಿಭುಜ, ಮತ್ತೆ ಕಡಲತಡಿಗೆ ಬಾರದೆ ನೀರಿನಲ್ಲೇ ಅವಿತು ಹೋಗಿದೆ.

ಅರಬ್ಬೀ ಸಮುದ್ರದಲ್ಲಿ ನಡೆಯಬಾರದ ದುರಂತ ನಡೆದು, ತಮ್ಮವರನ್ನು ಕಳೆದುಕೊಂಡ ಬೋಟ್‌ನ ಹೆಸರೇ ಸುವರ್ಣ ತ್ರಿಭುಜ. ಈ ಅವಘಡ ಸಂಭವಿಸಿ, ಮೂರು ವರ್ಷಗಳೇ ಕಳೆದರೂ, ಏಳು ಮೀನುಗಾರರು ಏನಾದರು ಅನ್ನುವುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಇದರ ಜೊತೆಗೆ ಕೇಂದ್ರದ ಬಿಡಿಗಾಸಿನ ಪರಿಹಾರ ಸಿಕ್ಕಿಲ್ಲ ಅನ್ನೋದು ಕಣ್ಣಿಗೆ ಕಾಣುವ ಸತ್ಯವಾಗಿದೆ.

 ಕಡಲಿನ ಒಡಲಲ್ಲಿ ಅದೆಷ್ಟೋ ನಿಗೂಢತೆಗಳು

ಕಡಲಿನ ಒಡಲಲ್ಲಿ ಅದೆಷ್ಟೋ ನಿಗೂಢತೆಗಳು

ವಿರಮಿಸದೇ ಇರುವ ಸಮುದ್ರದ ಅಲೆ, ನೀಲಿ ಜಲ ರಾಶಿ, ಬೋರ್ಗರೆಯುವ ಅರಬ್ಬೀ ಕಡಲು, ದಡದಲ್ಲಿ ನಿಂತು ನೋಡಿದರೆ ನಯನ ಮನೋಹರವಾಗಿ, ಕಡಲ ಅಲೆಯೊಳು ಸೇರಿದರೆ ರೌದ್ರಭಯಂಕರವಾಗಿಯೂ ಕಾಣುವ ಈ ಸ್ವಚ್ಛಂದ ಕಡಲು ತನ್ನ ಒಡಲಲ್ಲಿ ಅದೆಷ್ಟೋ ನಿಗೂಢತೆಗಳು ಉಳಿಸಿಕೊಂಡಿದೆ, ಉಳಿಸಿಕೊಳ್ಳುತ್ತಲೇ ಇದೆ.

ಅಂತಹ ನಿಗೂಢತೆಯಲ್ಲಿ ಸುವರ್ಣ ತ್ರಿಭುಜ ಕೂಡ ಒಂದು. ಅದು 2018ರ ಡಿಸೆಂಬರ್ 13. ಮೀನುಗಾರರ ಮನಸ್ಸಿನಲ್ಲಿ ಅಚ್ಚಳಿಯದೇ ನೆನಪಾಗುವ, ಈಗಲೂ ಘಾಸಿಗೊಳಿಸುತ್ತಿರುವ ಕರಾಳ ದಿನ. ಹೌದು. ಡಿಸೆಂಬರ್ 13ರಂದು ಕಡಲಿಗೆ ಮುಖ ಮಾಡಿ, ಜೀವನ ಬಂಡಿ ಸಾಗುದಕ್ಕಾಗಿ, ಹಡಗೆಂಬ ಬಂಡಿ ಏರಿದವರು ಇಂದಿಗೂ ವಾಪಸ್ ದಡ ಸೇರಿಲ್ಲ.

 ಡಿ.13ಕ್ಕೆ ದಡದಿಂದ ಕಡಲಿಗಿಳಿದ ಬೋಟ್

ಡಿ.13ಕ್ಕೆ ದಡದಿಂದ ಕಡಲಿಗಿಳಿದ ಬೋಟ್

ಡಿ.13ಕ್ಕೆ ದಡದಿಂದ ಕಡಲಿಗಿಳಿದರೂ, ನಂತರ ಡಿಸೆಂಬರ್ 17ರಂದು ಬೋಟ್‌ ನಾಪತ್ತೆಯಾದ ಬಗ್ಗೆ ಸುದ್ದಿ ಹರಿದಾಡತೊಡಗಿತ್ತು. ಉಡುಪಿಯ ತೊಟ್ಟಂನ ಚಂದ್ರಶೇಖರ ಕೋಟ್ಯಾನ್‌ಗೆ ಸೇರಿದ ಸುವರ್ಣ ತ್ರಿಭುಜ ಬೋಟ್‌ ಇದಾಗಿತ್ತು. ಆಳ ಸಮುದ್ರದಲ್ಲಿ ಮುಳುಗಿ ಚಂದ್ರಶೇಖರ ಕೋಟ್ಯಾನ್ ಸಹಿತ ಏಳು ಮಂದಿ ನಾಪತ್ತೆಯಾಗಿದ್ದರು.

ಅಂದಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮುತುವರ್ಜಿಯಿಂದ ಬೋಟ್‌ ಕಾಣೆಯಾದ ತಾಣದಲ್ಲಿ ಮುಳುಗು ತಜ್ಞರ ಮೂಲಕ ಶೋಧ ನಡೆಸಿ ಮುಳುಗಡೆಯಾಗಿದ್ದು ಹೌದು ಎಂಬುದನ್ನು ಖಚಿತ ಪಡಿಸಿಕೊಳ್ಳಲಾಯಿತು. ಆದರೆ ಆ ಬೋಟ್‌ನ ಆಸುಪಾಸಿನಲ್ಲಿ ಒಬ್ಬ ವ್ಯಕ್ತಿಯ ಕುರುಹೂ ಪತ್ತೆಯಾಗಲೇ ಇಲ್ಲ.

 ರಾಜ್ಯ ಸರಕಾರ ತಾತ್ಕಾಲಿಕ ಪರಿಹಾರ ಘೋಷಣೆ ಮಾಡಿತ್ತು

ರಾಜ್ಯ ಸರಕಾರ ತಾತ್ಕಾಲಿಕ ಪರಿಹಾರ ಘೋಷಣೆ ಮಾಡಿತ್ತು

ಈ ದುರ್ಘಟನೆ ಬಳಿಕ ಮೀನುಗಾರರ ಕುಟುಂಬಗಳಿಗೆ ರಾಜ್ಯ ಸರಕಾರ ತಾತ್ಕಾಲಿಕ ಪರಿಹಾರ ಘೋಷಣೆ ಮಾಡಿತ್ತು. ಆದರೆ ಕೇಂದ್ರದ ಪರಿಹಾರ ಇವತ್ತು ಬರಬಹುದು, ನಾಳೆ ಬರಬಹುದು ಎಂದು ನಿರೀಕ್ಷಿಸಿದ್ದೇ ಬಂತು. ಮೂರು ವರ್ಷ ಕಳೆದರೂ ಚಿಕ್ಕಾಸಿನ ಪರಿಹಾರವೂ ಕುಟುಂಬಕ್ಕೆ ಸಿಗಲಿಲ್ಲ. ಜನ ಬೋಟ್ ಹಾಗಾಯಿತಂತೆ, ಹೀಗಾಯಿತಂತೆ ಎಂದು ಇಂದಿಗೂ ಊಹೆಗೆ ತಕ್ಕಂತೆ ಜನ ಮಾತಾಡಿಕೊಳ್ಳುತ್ತಿದ್ದಾರೆ.

ಈ ಬೋಟ್ ಹೇಗೆ ಮುಳುಗಡೆ ಆಯ್ತು? ಮುಳುಗಡೆ ಆಗಿದ್ದರೆ ಮೀನುಗಾರರ ಶವ ಎಲ್ಲಿಗೆ ಹೋಯಿತು? ಈ ಬಗ್ಗೆ ಅತಿ ಸಣ್ಣ ಕುರುಹು ಸಹ ಈವರೆಗೆ ಸಿಗಲೇ ಇಲ್ಲ. ಇತ್ತ ಕುಟುಂಬದವರು ತಮ್ಮ‌ ಮನೆಯವರಿಗಾಗಿ ಕಾದರು, ಕೊನೆಗೆ ಶವವಾದರೂ ಹುಡುಕಿ ಕೊಡಿ ಎಂದು ಗೋಗರೆದರು.

 ಮೂರು ವರ್ಷಗಳ ಬಳಿಕವೂ ಯಕ್ಷ ಪ್ರಶ್ನೆಯಾಗಿದೆ

ಮೂರು ವರ್ಷಗಳ ಬಳಿಕವೂ ಯಕ್ಷ ಪ್ರಶ್ನೆಯಾಗಿದೆ

ಮಲ್ಪೆ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದು ಆಯ್ತು. ತಿಂಗಳು, ವರ್ಷ ಕಳೆಯುತ್ತಾ ಈಗ ಮೂರು ವರ್ಷಗಳ ಬಳಿಕವೂ ಬೋಟ್ ನಾಪತ್ತೆ ಪ್ರಕರಣ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಬೋಟ್‌ ಅನ್ನು ಗುರುತಿಸಿದ್ದು ಬಿಟ್ಟರೆ, ಯಾಕೆ ಅದು ಮುಳುಗಿತು ಎಂಬ ವಿಚಾರ ನಿಗೂಢವಾಗಿಯೇ ಉಳಿದಿದೆ. ಕುಟುಂಬದವರು ಮೃತರ ದೃಢೀಕರಣ ಪತ್ರ ಮತ್ತು ಪರಿಹಾರ ಧನ ನೀಡಿ ಎಂದು ಎಷ್ಟೇ ಮನವಿ ಮಾಡಿದರೂ, ಪರಿಹಾರದ ಹಣವೂ ಇನ್ನೂ ಕೈಸೇರಿಲ್ಲ.

ಅಂದಹಾಗೆ, ಈ ಸುವರ್ಣ ತ್ರಿಭುಜ 1.10 ಕೋಟಿ ರೂ. ಮೌಲ್ಯ ಹೊಂದಿದ್ದು, ವಿಮೆ ಮೂಲಕ 40 ಲಕ್ಷ ರೂಪಾಯಿ ಮಾತ್ರ ಲಭಿಸಿದೆ. ಅತ್ತ ಬೋಟೂ ಇಲ್ಲ, ಇತ್ತ ಮೀನುಗಾರರೂ ಇಲ್ಲ. ಒಟ್ಟಿನಲ್ಲಿ ಅರಬ್ಬೀ ಸಮುದ್ರದಲ್ಲಿ ನಡೆದ ಈ ದುರಂತ ಮಾತ್ರ ಮೀನುಗಾರ ಸಮುದಾಯಕ್ಕೆ ಬಹುದೊಡ್ಡ ವಿಸ್ಮಯವಾಗಿಯೂ, ಕಹಿ ನೆನಪಾಗಿಯೂ ಉಳಿದಿದೆ.

English summary
3 Years to Fishing boat Suvarna Tribuja and 7 Fishermen missing at Malpe beach of Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X